ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು

ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು

ಕವನ

 

ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು
 

ಅರಿತರೆ ಅರಿವಿತ್ತು.
ಅದ ತಿಳಿಯದೆ ಮರುಗಿತ್ತು
ಶತ ಶತಮಾನದ ಹಿಂದಿನ ಕೆಚ್ಚಿನ
ಬಲುಮೆಯ ಮರೆವಿತ್ತು
ಸೋಗಿನ ಮೋಜಿನ ದುರ್ವ್ಯಸನದಲಿ 
ಸಮಾಜ ಸಾಗಿತ್ತು ||

ಸಾರ್ಥಕ ಬಾಳಿನ
ನೀತಿ ರೀತಿಗಳು ನಗೆಗೀಡಾಗಿತ್ತು
ರೋಗ ರುಜಿನದ ಚೋರ ಕೋರಭಯ
ಬಿಡದಲೆ ಕಾಡಿತ್ತು ||
ದೇಶದೆಲ್ಲೆಡೆ ಲಂಚಗುಳಿತನ
ಅವ್ಯಾಹತವಿತ್ತು
ಧನಿಕರಿಗಷ್ಟೇ ಬದುಕುವ ಹಕ್ಕು
ಎನ್ನುವ ತೆರವಿತ್ತು   ||

ಶಾಂತಿಯ ಬೋಧಿಸಿ ಭ್ರಾಂತಿಯ ಹರಡುವ
ಕೆಲಸವು ಕೆಲವರದು
ವಂಚನೆ ಮಾನ್ಯತೆ ಗಳಿಸಿದ ಕಾಲದ
ಯಜಮಾನಿಕೆಯವರು ||
ಸಾಮರ್ಥ್ಯವ ತಾತ್ಸಾರದಿ ಕಾಣುವ
ಬಲು ಭೀಕರ ಕಾಲ
ಅಂತೂ ದಾಟುತ ಬಂದಿಹೆವಲ್ಲ
ಖಳ ರಾಕ್ಷಸ ಜಾಲ ||

ಕೋಮು ಗಲಾಟೆ ಕುದಿಯುತಲಿತ್ತು
ಪ್ರತಿಭೆ ಪಲಾಯನ ಮಾಡುತಲಿತ್ತು
ವಿಕೃತಿಯಾಳ್ವಿಕೆ  ನಡೆಸುತಲಿತ್ತು
ಸುಕೃತಿ ಎಂಬುದು ಒಳಗಡಗಿತ್ತು
ಅಜ್ಞಾನವೆ ಮೆರೆದಾಡುತಲಿತ್ತು
ವಿಜ್ಞಾನಕೆ ಬೆರಗಾಗುತಲಿತ್ತು ||
ಎಲ್ಲೋ ಕೆಲವರ ಸಾಹಸ ದುಡಿಮೆ
ಮಾದರಿಯಾಗಿತ್ತು |
ಆಶಾಕಿರಣದಂತೆ ಇತ್ತು ||

ಪ್ರಳಯದ ಭೀತಿಯ ನಡುವೆಯು ಮೂಕರ
ಜೀವನ ಸಾಗಿತ್ತು 

ಜೀವನ ತಿಳಿಸದೆ ದುಡಿಸಿತ್ತು ||
ಮುಳುಗಡೆಯಾಗದ ಆಸರೆಗಾಗಿ
ಹುಡುಕಾಡುತಲಿತ್ತು |
ಜನಮನ ಹುಡುಕಾಡುತಲಿತ್ತು  ||


                                               - ಸದಾನಂದ