ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧

ಚಿತ್ರ

ಅಂದು ಭಾನುವಾರ. ಬೆಂಗಳೂರಿಗನಾದ ಮೇಲೆ ನನಗೆ ಭಾನುವಾರ ಬೆಳಗಾಗುತ್ತಿದ್ದುದು ಎಂಟು ಒಂಬತ್ತು ಹತ್ತರ ಮೇಲೆಯೆ... ಆದರೆ ಅವತ್ತು ಬೆಳಗಿನ ಜಾವ ನಾಲ್ಕರ ಹೊತ್ತಿಗೆನೆ ನನ್ನ ಗೃತ್ಸಮದ (ನನ್ನ ಚಲಿಸುವ ದೂರವಾಣಿ ಅರ್ಥಾತ್ ಮೊಬೈಲ್ ಫೋನಿಗೆ ನಾನು ಇಟ್ಟಿರುವ ಹೆಸರು ) ಪರವಶನಾದೆನು ಅರಿಯುವ ಮುನ್ನವೇ ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ ಎಂದು ಸೋನು ನಿಗಮ್ ಕಂಠದಲ್ಲಿ ಹಾಡಲು ಶುರುಮಾಡಿತ್ತು. ಅದು ಶನಿವಾರ ದ್ವಾದಶಿಯಾದ್ದರಿಂದ ಬೆಳಗ್ಗೆ ಬೇಗ ಏಳಲು ಇಟ್ಟಿದ್ದ ಎಚ್ಚರಿಕೆಯ ಗಂಟೆ ಇರಬಹುದೆಂದು ಹಾಗೆ ಮಲಗಿದ್ದೆ. ಎರಡನೇ ಬಾರಿ ರಿಂಗಣಿಸಿದಾಗಲೂ ಛೇ ಇನ್ಮೇಲೆ ಈ ಎಚ್ಚರಿಕೆಯ ಗಂಟೆ ಇಟ್ಕೋಳ್ಳಲೇಬಾರದು ಅಂದ್ಕೊಂಡು ಪಕ್ಕಕ್ಕೆ ತಿರುಗಿ ಮುಸುಕೆಳೆದುಕೊಂಡೆ. ಆದರೂ ಅಷ್ಟರಲ್ಲಾಗಲೇ ನಿದ್ರಾಭಂಗವಾಗಿತ್ತು. ನನ್ನ ಬುದ್ದಿಗಿಷ್ಟು , ಯಾರಾದರೂ ಕರೆ ಮಾಡಿರಬಹುದಲ್ವಾ? ಅನ್ನುಕೊಳ್ಳುತ್ತಿರುವಾಗಲೇ ಶುಕ್ರವಾರ ರಾತ್ರಿ ಎಚ್ಚರಿಕೆ ಗಂಟೆಯ ನಾದವನ್ನು ಬದಲಿಸಿದ್ದಿದು ನೆನಪಿಗೆ ಬಂತು.

ಇಷ್ಟು ಬೆಳಗ್ಗೆ ಬೆಳಗ್ಗೆ ಯಾರಪ್ಪ ಕರೆ ಮಾಡಿರೋದು? ಮನೆ ಕೆಲಸ ಮಾಡದ್ದಿದ್ದರೆ ಶಾಲೆಯಲ್ಲಿ ಗುರುಗಳು ಏನು ಮಾಡುವರೋ ಎಂದು ಹೆದರುವ ಮಕ್ಕಳಂತೆ ಅವ್ಯಕ್ತವಾಗಿ ಭಯಪಟ್ಟೆ. ಹೊದಿಕೆಯನ್ನು ಪಕ್ಕಕ್ಕೆ ಸರಿಸಿ ದಡಾರನೆ ಎದ್ದು ಮೇಜಿನ ಮೇಲಿಟ್ಟಿದ್ದ ಗೃತ್ಸಮದನನ್ನು ತೆಗೆದುಕೊಂಡೆ. ಭಯ ಆದಾಗ ಭಗವಂತನ ನೆನಪಾಗುವುದು ನನಗೇನೋ ಸಹಜವಾದ ಲಕ್ಷಣ. ತಕ್ಷಣವೇ ಗೋಡೆಗೆ ನೇತು ಹಾಕಿದ್ದ ನರಸಿಂಹದೇವರ ಚಿತ್ರಪಟಕ್ಕೆ ಕೈ ಮುಗಿದು ಹಾಗೆಯೇ ಬಿಡಿಸಿ ಕರಾಗ್ರೆ ವಸತೆ ಲಕ್ಷ್ಮೀ ... ಪ್ರಭಾತೆ ಕರದರ್ಶನಂ ಎಂದು ಪಟಪಟನೆ ಹೇಳಿದೆ. ಗೃತ್ಸಮದನನ್ನು ಮೂರು ಬಾರಿ ಮುಟ್ಟಿದಾಗ ಕರೆ ಮಾಡಿದವರ ಪಟ್ಟಿ ತೋರಿಸಿದ. ಪಟ್ಟಿಯಲ್ಲಿದ್ದ ಮೊದಲ ಹೆಸರೇ ಬೃಂದಾ (ಅನ್ನೋನ್'s ಫ್ರೆಂಡ್) - (೩).

ಭಯಪಟ್ಟಿದ್ದು ವ್ಯರ್ಥವಾಯಿತೇ? ಎಂದುಕೊಳ್ಳುತ್ತಾ ಬೃಂದಾಳಿಗೆ ತಿರುಗಿ ಕರೆ ಮಾಡಲು ಗೃತ್ಸಮದನನ್ನು ಮುಟ್ಟುತ್ತಿದ್ದೆ. ಆಗಲೇ ಬೃಂದಾ ಮತ್ತೊಮ್ಮೆ ಕರೆ ಮಾಡಿದಳು. ತಕ್ಷಣವೇ ಕರೆ ಸ್ವೀಕರಿಸಿ ಹ.. ಅನ್ನುವಷ್ಟರಲ್ಲಿ ಬೃಂದಾ ಏ ಸರಿಯಾಗಿ ಎದ್ದಿದ್ಯ ತಾನೇ? ಎಚ್ಚರಿಕೆ ಇದ್ಯಾ? ನಾನ್ ಹೇಳೋದನ್ನ ಸರ್ಯಾಗಿ ಕೇಳುಸ್ಕೋ ................................... ಈ ಕ್ಷಣಾನೆ ಹೊರಡು. ನಾನು ರಾಜಾಜಿ ನಗರದ SJR ವಿಮೆನ್'s ಕಾಲೇಜ್ ಹತ್ರ ಕಾಯ್ತಿರ್ತೀನಿ ಅಂತ ಒಂದೇ ಉಸಿರಿಗೆ ಹೇಳಿ ನನ್ನ ಉತ್ತರಕ್ಕೂ ಕಾಯದೆ ದೂರವಾಣಿ ಸಂಪರ್ಕವನ್ನು ಕಡಿದಳು. ಎಂತ ಗ್ರಹಚಾರನಪ್ಪ ಇದು! ಕಣ್ಣಿಗೆ ನೀರು ಚುಮುಕಿಸಿಕೊಂಡು ಹಾಕಿದ್ದ ಬರ್ಮುಡಾ ಮೇಲೆಯೇ ಟಿ-ಶರ್ಟ್ ಧರಿಸಿ ಗೃತ್ಸಮದನ ಜೊತೆಗೆ ನೂರು ರೂ.ನ ಜೇಬಿಗಿಳಿಸಿ ಗಾಡಿ ಕೀಲಿಯನ್ನು ಹಿಡಿದು ಹೊರ ಬಂದೆ.

ಮನೆ ಬೀಗ ಹಾಕುವಾಗ ಸಂಯುಕ್ತ ರೂಮಿನ ದೀಪ ಉರಿಯುತ್ತಿದ್ದುದು ಗಮನಿಸಿದೆ. ಹಾಗಾಗಿ ಗೇಟನ್ನು ಸದ್ದುಮಾಡದೆ ತೆರೆದು ಗಾಡಿಯನ್ನು ಹೊರ ತಂದು ಮತ್ತೆ ಗೇಟನ್ನು ಸದ್ದುಮಾಡದೆ ಹಾಕಿದೆ. ಅಷ್ಟು ದೂರದ ವಾಸನೆಯನ್ನು ಆಘ್ರಾಣಿಸುವ ನಾಯಿ ಮೂಗಿನಂತೆ ನನ್ನ ಗಾಡಿಯ ಸದ್ದನ್ನು ಗ್ರಹಿಸುವ ಸಂಯುಕ್ತಳಿಗೆ ವಂಚಿಸಲು ಗಣೇಶ ಭವನದ ತನಕ ಗಾಡಿಯನ್ನು ಸದ್ದಿಲ್ಲದೇ ದೂಕೊಂಡುಹೋಗಲು ನಿರ್ಧರಿಸಿದೆ. ನಮ್ಮ ರಸ್ತೆಯ ಕೊನೆಯಲ್ಲಿ ಗಾಡಿಯನ್ನು ಎಡಬದಿಗೆ ತಿರುಗಿಸುವಾಗ ಸಂಯುಕ್ತ ಕಿಟಕಿಯ ಕರ್ಟನ್  ಸರಿಸಿದ್ದು ಕಂಡು ಜೋರಾಗಿ ತಳ್ಳಿದೆ. ಗಾಡಿ ಏರಿ ಅಕ್ಸಿಲರೆಟರ್ ತಿರುವಿ ಮುಖ್ಯರಸ್ತೆ ಸೇರುತ್ತಿದ್ದಂತೆ ಮನಸ್ಸು ನನ್ನ ಚಿತ್ತಕೋಶದಲ್ಲಿ ಎಲ್ಲೋ ಹುದುಗಿಹೋಗಿದ್ದನ್ನು ಕೆದುಕಲು ಶುರುಮಾಡಿತ್ತು.

                                            ************************************

ಅದು ೨೦೦೭ರ ಕಡೆಯ ದಿನಗಳು ಅಥವಾ ೨೦೦೮ರ ಆರಂಭದ ದಿನಗಳಿರಬಹುದು. ಸರಿಯಾಗಿ ನೆನಪಿಲ್ಲ. ಆರ್ಕುಟ್ ಜೀಟಾಕ್ ಗಳು ಜನಪ್ರಿಯತೆಯ ಉತ್ತುಂಗದಲ್ಲಿದ್ದ ದಿನಗಳವು. ಜಗತ್ತಿನ ಅತ್ಯಂತ ದೊಡ್ಡ ವಲಸೆ ಎಂದು ಬಣ್ಣಿಸಲಾಗುವ ಆರ್ಕುಟ್ ಟು ಫೇಸ್ ಬುಕ್  ವಲಸೆ ಆಗಿನ್ನು ಸಂಭವಿಸಿರಲ್ಲಿಲ್ಲ. ಆಗ ನನ್ನದು ಫೇಸ್ ಬುಕ್ ಖಾತೆ ಇದ್ದರೂ ನಾನು ಉಪಯೋಗಿಸುತ್ತಿದ್ದುದು ಆರ್ಕುಟ್ ಜೀಟಾಕ್ ಗಳನ್ನೇ.

ಹೀಗಿರುವಾಗ ಒಂದು ದಿನ ಆಫೀಸಿನಲ್ಲಿ ಅದಾಗ ತಾನೇ ಊಟ ಮುಗಿಸಿ ನನ್ನ ಕ್ಯೂಬಿನಲಿ ಕೂತು ನಿದ್ರಿಸಲು ತಯಾರಿ ನಡೆಸುತ್ತಿದ್ದೆ. ಆಗ ನಾನು ಪ್ರತಿದಿನ ಮಧ್ಯಾನ್ಹ  ಊಟವಾದ ಮೇಲೆ ೨೦-೩೦ ನಿಮಿಷ ನಿದ್ರಿಸುತ್ತಿದ್ದೆ. ಅಂದು ಮಲಗಬೇಕೆಂದು ತಲೆ ಕೆಳಗಿಡಬೇಕು ಅನ್ನುವಾಗ, ಯಾವುದೋ ಗೊತ್ತಿಲ್ಲದ ID ಯಿಂದ HI ! ಎಂಬ ಜೀಟಾಕಿನ ಸಂದೇಶ ಮಾನಿಟರಿನ ಬಲಭಾಗದ ಕೆಳತುದಿಯಿಂದ ತೂರಿ ಬಂತು. ಆ ID ಯನ್ನೇ ಕೆಲ ಮಿಲಿ ಸೆಕೆಂಡುಗಳು ಹುಬ್ಬುಗಂಟಿಕ್ಕಿ  ನೋಡಿದ ನಾನು ಕುತೂಹಲದಿಂದ  Hello! ಅಂತ ಟೈಪಿಸಿದವನು ಅದನ್ನು ಅಳಿಸಿ ಸಭ್ಯವಾಗಿ May I Know you ಅನ್ನುವ ಸಂದೇಶ ರವಾನಿಸಿದೆ.

ಗೊತ್ತಿಲ್ಲದ ID : I am your friend.

ನಾನು : Oh.. Nice. But your ID looks unfamiliar to me.

ಗೊತ್ತಿಲ್ಲದ ID : I have created this ID very recently. It will be very familiar to you from now on.

ನಾನು : Oho... So you have created this ID to play with :P

ಗೊತ್ತಿಲ್ಲದ ID : h.... no no.. not to play with anybody. previously i had yahoo mail ID so i have created this one.

ನಾನು : Oh.. then tell me your yahoo ID.

ಗೊತ್ತಿಲ್ಲದ ID : No.. i don't remember that now. I am your friend.

ನಾನು : i have many friends. tell me who are you?

ಗೊತ್ತಿಲ್ಲದ ID : I am your friend.

ನಾನು : Just get lost, i am blocking you right now.

ಗೊತ್ತಿಲ್ಲದ ID : hey hey wait.. don't block.

ನಾನು :You are blocked.

ಹಾಗೆ ಹೇಳಿದವನೇ ಆ ID ಯನ್ನು ಬ್ಲಾಕ್ ಮಾಡಿದೆ. ನನ್ನ ಮಧ್ಯಾನ್ಹದ ನಿದ್ದೆ ಹಾಳಾಗಿ ಹೋಗಿತ್ತು. ಅದು ಯಾರಿರಬಹುದೆಂಬ ಗುಂಗಿನಲ್ಲೇ ಉಳಿದ ಕೆಲಸಗಳನ್ನು ಮುಗಿಸಿ ಆಫೀಸಿನಿಂದ ಹೊರಟೆ. ಮನೆಗೆ ಬಂದಾಗ ರಾತ್ರಿ ಎಂಟಾಗಿತ್ತು. ಗೇಟ್ ತೆರೆದು ಗಾಡಿ ಒಳ ಹಾಕುತ್ತಿರುವಾಗ ಸಂಯುಕ್ತ ಓಯೇ ಎಂದಳು. ನಾನು ಎದುರು ಮನೆಯ ಮಹಡಿಯ ಕಡೆ ದಿಟ್ಟಿಸಿದೆ. ಬರಿ ಅನ್ನ ಮಾಡ್ಕೊಬೇಕಂತೆ, ಅಮ್ಮ ಬಿಸಿ ಬಿಸಿ ಮೆಂತ್ಯ ಬೇಳೆ  ಹುಳಿ ಮಾಡಿದಾರೆ ಕೊಡ್ತಾರಂತೆ, ಬಂದು ತೊಗೊಂಡು ಹೋಗಬೇಕಂತೆ, ಏ ಸೋಂಬೇರಿ, ನಾವೇ ಯಾರಾದ್ರು ತಂದು ಕೊಡಲಿ ಅಂತ ಕೂತಿರ್ಬೇಡ. ನಾನು ಬರೋ ಹಾಗಿಲ್ಲ, ಅಪ್ಪ ಊರಲ್ಲಿ ಇಲ್ಲ, ಅಮ್ಮಗೆ ಮೆಟ್ಟಿಲು ಇಳಿಯೋ ಕಷ್ಟ ಕೊಡಬೇಡ. ಕೇಳುಸ್ತಾ ಹೇಳಿದ್ದು ಅಂತ ಬಡಬಡಿಸುತ್ತಿದ್ದಳು. ನಾನು ಸರಿ ಅಂತ ತಲೆ ಆಡಿಸುತ್ತಾ.....

                                                 *****************************************

Rating
No votes yet

Comments