"ಸಿನೆಮಾ ''...ಮೂರನೇ ರೀಲಿನಲ್ಲಿ(ಕಥೆ) !

"ಸಿನೆಮಾ ''...ಮೂರನೇ ರೀಲಿನಲ್ಲಿ(ಕಥೆ) !

ಚಿತ್ರ

                        
 
     ಆ ತುದಿಯಿಂದ 'ಹಲೋ ನಾನು ಸದಾಶಿವ ಮಾತಾಡ್ತಾ ಇರೋದು' ಎಂದು ಕೇಳಿಬಂತು.


     ' ಹಾ ಹೇಳು ಸದಾಶಿವ ಗೊತ್ತಾತು, ಏನು ವಿಷಯ ' ಎಂದ ಮಾದೇವ.


     ' ಮತ್ತೇನು ಇಲ್ಲಪ ಬರೋ ಸೋಮಾರ ನಮ್ಮೂರಾಗ ಕನ್ನಡ ಸಂಘದ ವತಿಯಿಂದ ಕನ್ನಡ ಕಾರ್ಯಕ್ರಮ ಇಟಗೊಂಡೇವಿ, ನಿನ್ನ ಯುವ ಕವಿಗೋಷ್ಟಿಗೆ ಆಶಯ ಭಾಷಣಕ್ಕ ಹಾಕ್ಕೊಂಡಾರ ನೀನು ತಪ್ಪಸದ್ಹಾಂಗ ಬರಬೇಕು, ಅವರೂ ಆಮಂತ್ರಣ ಪತ್ರ ಕಳಸ್ಯಾರ ಒಂದೆರಡು ಮೂರು ದಿವಸ ಮೊದಲನ ಬಂದ ಬಿಡು ' ಎಂದು ಸದಾಶಿವ ಮಾತನಾಡಿದ.


     ಅದಕ್ಕೆ ಉತ್ತರವಾಗಿ ಮಾದೇವ ' ಇದ ಈಗ ನಿಮ್ಮೂರ ಕನ್ನಡ ಸಂಘದ ಆಮಂತ್ರಣ ಪತ್ರ ಬಂದದ ಅದನ್ನ ನೋಡಕೋತ ಕೂತಿದ್ದೆ, ಅದಿರಲಿ ಅಷ್ಟ ದಿವಸ ಮೊದಲ ಯಾಕ ಬರಬೇಕು ? ಭಾನುವಾರ ಸಾಯಂಕಾಲ ನಿಮ್ಮೂರಾಗ ಇರ್ತೇನಿ ಆತಲ್ಲ ' ಎಂದ.


     ' ಏ ಇಲ್ಲಿಲ್ಲ ನೀನು ಮದ್ಲನ ಬಂದ ಬಿಡು, ಎಷ್ಟೋ ವರ್ಷದ ಮ್ಯಾಲ ಅಪರೂಪಕ್ಕ ಬರ್ಲಿಕ್ಕೆ ಹತ್ತೀದಿ ತಪ್ಪಸಬ್ಯಾಡ ಮತ್ತ ' ಎಂದ ಸದಾಶಿವ.


      ' ಸದಾ ನೋಡು ನನ್ನ ನೀನು ಈ ಭಾಷಣ ಗೀಷಣ ಅಂತ ಇಕ್ಕಟ್ನ್ಯಾಗ ಸಿಗಿಸಿ ಬಿಟ್ಟಿ, ಇದೆಲ್ಲ ಬೇಕಾಗಿರ್ಲಿಲ್ಲ ನಾನು ಹಂಗ ಬಂದು ಕಾರ್ಯಕ್ರಮ ಅಟೆಂಡ್ ಮಾಡ್ತಿದ್ದೆ ' ಎಂದ ಮಾದೇವ.


     ' ಏ ನಿಂಗೊತ್ತಿಲ್ಲ ಸುಮ್ನಿರು, ಇಲ್ಲೆ ನಮ್ಮ ಕನ್ನಡ ಸಂಘದ ಅಧ್ಯಕ್ಷ ಅರ್ಕಸಾಲಿ ಯವರು ಅದಾರ ಅವರ ಜೋಡಿ ಮಾತಾಡು ಎಂದು ಫೋನನ್ನು ಅವರಿಗೆ ವರ್ಗಾಯಿಸಿದ.


     ಅವರು 'ಹಲೋ' ಎಂದರು.


     ಅದಕ್ಕೆ ಪ್ರತಿಯಾಗಿ ಮಾದೇವ ' ಹಲೋ ಸರ್ ನಾನು ಮಾದೇವ ಮಾತಾಡ್ತಾ ಇರೋದು '


     ' ಸರ್ ನೀವು ಫೋನ್ಯಗ ಸಿಕ್ಕದ್ದು ಭಾಳ ಸಂತೋಷ ಆತು, ತಪ್ಪದ ಕಾರ್ಯಕ್ರಮಕ್ಕ ಬಂದು ಯುವ ಕವಿ ಗೋಷ್ಟಿ ಕುರಿತು ಆಶಯ ಭಾಷಣ ಮಾಡಬೇಕು ' ಎಂದರು ಅರ್ಕಸಾಲಿ ಯವರು.


     ' ಅರ್ಕಸಾಲಿಯವರ ನೀವು ತಪ್ಪ ತಿಳಕೊಳ್ಳೋದುಲ್ಲ ಅಂದರ ಒಂದ ಮಾತು ಹೇಳ್ತೇನಿ ಈ ಆಶಯ ಭಾಷಣಕ್ಕ ಬೇರೇಯವರ್ನ ಹಾಕ್ಯೋರಿ ನಾನು ಹಂಗ ಬಂದು ಈ ಕಾರ್ಯಕ್ರಮಕ್ಕ ಹಾಜರಾಗತೀನಿ, ಈ ನೆವದಿಂದರ ದುರವಾಪುರಕ್ಕ ಬರೋಹಗ ಆತು ಸಂತೋಷ ' ಎಂದ ಮಾದೇವ.


     ' ಸದಾಶಿವ ನಿಮ್ಮ ಬಗ್ಗೆ ಎಲ್ಲ ಹೇಳ್ಯಾರ, ನೀವ ಆಶಯ ಭಾಷಣ ಮಾಡಬೆಕು, ಕಾಲಾವಕಾಶ ಕಡಿಮಿ ಅದ ಒಂದ ದಿನದಾಗ ಕಾರ್ಯಕ್ರಮ ಮುಗಸಬೇಕು, ನಿಮ್ಮ ಭಾಷಣದ ಅವಧಿ ಹದ್ನೈದು ನಿಮಿಷದ್ದು ' ಎಂದರು ಕನ್ನಡ ಸಂಘದ ಅಧ್ಯಕ್ಷರು.


      ಹ್ಞೂ ಗುಟ್ಟಿದ ಮಾದೇವ ಯೋಚನೆಗೆ ಬಿದ್ದ, ಹದಿನೈದು ನಿಮಿಷದ ಕಾಲಾವಧಿಯಲ್ಲಿ ಯುವ ಕವಿಗಳ ಕುರಿತು ಏನು ಮಾತಾಡುವುದು. ಕನ್ನಡದ ಕಾವ್ಯ ಮತ್ತು ಸಾಹಿತ್ಯ ಪರಂಪರೆ ಹುಟ್ಟಿ ಬೆಳೆದು ಬಂದ ಬಗೆಯೊಂದಿಗೆ ಕಾವ್ಯ ರಚನೆ ಕುರಿತಂತೆ ಯುವ ಕವಿಗಳು ಅನುಸರಿಸ ಬೇಕಾದ ಮಾರ್ಗ ಕುರಿತು ಸರಳವಾಗಿ ಹೇಳಬೇಕು ಎಂದು ನಿಶ್ಚಯಿಸಿದ. ಒಪ್ಪವಾಗಿ ಸೀಮಿತ ಕಾಲಾವಧಿಯಲ್ಲಿ ಮುಗಿಯುವಂತಹ ಭಾಷಣದ ಕರಡು ತಯಾರಿಸಿಕೊಂಡು ಶುಕ್ರವಾರ ಮುಂಜಾನೆ ದೂರ್ವಾಪುರಕ್ಕೆ ಪಯಣ ಬೆಳೆಸಿದ. ಜೋಗ ಸಿದ್ದಾಪುರ ಸಿರ್ಸಿ ಮಾರ್ಗವಾಗಿ ಪಯಣಿಸಿದ ಮಾದೇವ ಸೂಕ್ಷ್ಮವಾಗಿ ಪ್ರಕೃತಿ ಪರಿಸರವನ್ನು ಗಮನಿಸುತ್ತ ಸಾಗಿದ. ಎಲ್ಲಿಯೂ ಈಗಿನ ಸುಮಾರು ನಾಲ್ವತ್ತು ವರ್ಷಗಳ ಹಿಂದಿನ ಕಾಡುಗಳ ಸಾಂದ್ರತೆ ಈಗ ಇಲ್ಲ. ಕಾಡುಗಳ ದಟ್ಟಣೆಗು ಸಹ ಕ್ಷಯ ತಗುಲಿದೆ, ಇದೇ ವೇಗದಲ್ಲಿ ನಾವು ಸಾಗಿದರೆ ಇನ್ನೈವತ್ತು ವರ್ಷಗಳಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಗಳು ಸಹ ಬೋಳು ಗುಡ್ಡಬೆಟ್ಟಗಳಾಗುವು ದಿನಗಳು ದೂರವಿಲ್ಲ ಎನಿಸಿತು. ಇದನ್ನು ಯಾರು ಯಾರಿಗೆ ತಿಳಿ ಹೇಳಬೇಕು. ಕೇಳಿಸಿ ಕೊಳ್ಳುವ ತಾಳ್ಮೆ ವಿವೇಕಗಳು ಯಾರಿಗಿವೆ? ಸುಂದರ ಘಟ್ಟ ಪ್ರದೇಶದ ಹಸಿರು ಕಾನಿನ ಮಧ್ಯ ಸಾಗಿ ಬಂದ ಆತನಿಗೆ ಪಯಣ ಆಯಾಸವೆನಿಸಲಿಲ್ಲ. ಬಸ್ ನಿಲ್ದಾಣದಲ್ಲಿ ಇಳಿದ ಆತ ಊಟದ ಶಾಸ್ತ್ರ ಮುಗಿಸಿದ. ಮತ್ತೆ ದುರ್ವಾಪುರದೆಡೆಗೆ ಮಾದೇವನ ಪಯಣ ಸಾಗಿತು. ಸುತ್ತೆಲ್ಲ ಅವಲೋಕಿಸುತ್ತಿದ್ದ ಆತನಿಗೆ ತನ್ನ ಬಾಲ್ಯದ ದಿನಗಳ ದಟ್ಟ ಕಾಡುಗಳು ಮಾಯವಾಗಿ ಹೋಗಿವೆ ಎನಿಸಲು ಬಹಳ ಸಮಯ ಹಿಡಿಯಲಿಲ್ಲ.


     ದುರ್ವಾಪುರದ ಪ್ರದೇಶ ಹತ್ತಿರವಾಗುತ್ತ ಬಂತು. ಅಗಸ್ತ್ಯ ನದಿಗೆ ಕಟ್ಟಿದ ಸಣ್ಣ ಆಣೆಕಟ್ಟಿನಲ್ಲಿ ಅಲ್ಪಸ್ವಲ್ಪ ನೀರು ನಿಂತಿದ್ದು ದೊಡ್ಡ ಕೆರೆಯಂತೆ ಅದು ಕಾಣುತ್ತಿತ್ತು. ಅತ್ತಿಕೊಳ್ಳದ ಮಧ್ಯದ ಸಣ್ಣ ದೊಡ್ಡ ಗುಡ್ಡ ಬೆಟ್ಟಗಳ ಮರಗಳಲ್ಲಿ ವಿವಿಧ ಜಾತಿಯ ಪಕ್ಷಿಗಳ ಕಲರವ ಕೇಳಿ ಬರುತ್ತಿತ್ತು. ಆದರೆ ಅವುಗಳ ಸಂಖ್ಯೆಯಲ್ಲಿ ಸಹ ವಿಪರೀತ ಏರು ಪೇರು ಇತ್ತು. ಮೊದಲಿನ ಪಕ್ಷಿಗಳ ದಟ್ಟಣೆ ಈಗಿರಲಿಲ್ಲ. ಸ್ವಲ್ಪ ದೂರ ಸಾಗುತ್ತಿದ್ದಂತೆ ದೂರ್ವಾಪುರದ ಸರಹದ್ದಿನ ಪ್ರಾರಂಭವನ್ನು ತೋರಿಸುವ ಫಲಕವೊಂದನ್ನು ದೊಡ್ಡದಾಗಿ ಬರೆದು ನಿಲ್ಲಿಸಿದ್ದರು. ಸ್ವಾಭಾವಿಕ ಅರಣ್ಯ ಅಲ್ಲಿರಲೆ ಇಲ್ಲ. ಬರಿ ನೀಲಗಿರಿ ಅಕೇಸಿಯಾ ಮರಗಳ ಕ್ಷೀಣ ಪ್ಲಾಂಟೇಶನ್ಗಳು ಗೋಚರಿಸ ತೊಡಗಿದವು. ಅಗಸ್ತ್ಯ ನದಿಯ ದಂಡೆದಯ ಇಕ್ಕೆಲಗಳಲ್ಲಿ ಈ ಹಿಂದೆ ಬೆಳೆದಿರುತ್ತಿದ್ದ ದೂರ್ವ( ದರ್ಭೆ ) ಹುಲ್ಲುಗಳ ವಿಶಾಲ ಜಾಗ ಈಗ ಇರಲಿಲ್ಲ. ತಾನು ಯಾವುದೋ ಒಂದು ಅಪರಿಚಿತ ಸ್ಥಳಕ್ಕೆ ಹೋಗುತ್ತಿದ್ದೇನೆ ಎನ್ನುವಂತೆ ಆತನಿಗೆ ಭಾಸವಾಗ ತೊಡಗಿತು. ದೊಡ್ಡ ಫೂಲು ಬಂತು ಹಿಂದೊಮ್ಮೆ ಅಲ್ಲಿ ಹೆಬ್ಬಾವುಗಳನ್ನು ನೋಡಿದ ಜ್ಞಾಪಕ ಆತನಿಗೆ ಬಂತು. ಈಗ ಅಲ್ಲಿ ದಟ್ಟ ಕಾನನದ ಕುರುಹೆ ಇಲ್ಲ. ಸ್ವಲ್ಪ ಮುಂದೆ ಸಾಗಿದಂತೆ ಆತನಿಗೆ ಆ ರಾಜ್ಯ ಹೆದ್ದಾರಿಯ ಬಲ ಭಾಗದಲ್ಲಿ 'ಅಗಸ್ತ್ಯ ತಪೋ ಭೂಮಿಗೆ ದಾರಿ' ಎಂಬ ದೊಡ್ಡ ಫಲಕ ಗೋಚರಿಸಿತು. ಸುಮ್ಮನೆ ಆ ಕಡೆಗೆ ದೃಷ್ಟಿ ಹಾಯಿಸಿದ. ಅನತಿ ದೂರದಲ್ಲಿ ಕೋಟೆಯ ಹೆಬ್ಬಾಗಿಲಿನಂತಹ ಒಂದು ಮಹಾದ್ವಾರ ಅದರೊಳಗೆ ಕಾಣುವ ದೇಗುಲಗಳ ಎರಡು ಗೋಪುರಗಳು ಕಾಣುತ್ತಿದ್ಚವು. ಅನೇಕ ಬದಲಾವಣೆಗಳು ಆ ಪರಿಸರದಲ್ಲಿ ಆಗಿದ್ದವು. ತನ್ನ ನೆನಪಿನ ಲೋಕದಲ್ಲಿ ಸ್ಥಿರವಾಗಿ ನೆಲೆಗೊಂಡಿದ್ದ ದೂರ್ವಾಪುರ ಅದಾಗಿರಲಿಲ್ಲ. ಒಮ್ಮೆ ಊರಿಗೆ ಮರಳಿ ಬಿಡಲೆ ಎಂಬ ಭಾವವೊಂದು ಸುಳಿದು ಹೋಯಿತು. ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದಾಗಿದೆ ಅದಕ್ಕೆ ಗೈರು ಹಾಜರಾಗುವುದು ನಾಗರಿಕ ಲಕ್ಷಣವಲ್ಲ ವೆನಿಸಿ ಆ ಯೋಚನೆ ಕೈಬಿಟ್ಟ. ಮುಂದೆ ಕಾಲುಗಂಟೆಯಲ್ಲಿಯೆ ದುರ್ವಾಪುರದ ಬಸ್ ನಿಲ್ದಾಣ ಬಂತು. ಬಸ್ಸಿನಿಂದ ಕೆಳಗಿಳಿದು ನಿಲ್ದಾಣದೊಳಗಡೆ ಸಿಮೆಂಟ್ ಕಟ್ಟೆಯೊಂದರ ಮೇಲೆ ಕುಳಿತ. ಅಷ್ಟರಲ್ಲಿ ಸದಾಶಿವ ಅಲ್ಲಿಗೆ ಬಂದು ಮಾದೇವ ಯಾರೆಂದು ತಿಳಿಯದೆ ಕಟ್ಟೆಯ ಮೇಲೆ ಕುಳಿತ ಮಾದೇವನನ್ನು ವಿಚಾರಿಸಿ ಖಚಿತ ಪಡಿಸಿಕೊಂಡು ಬಸ್ ಸ್ಟ್ಯಾಂಡ್ ಹೋಟೆಲ್ಗೆ ಕರೆದೊಯ್ದು ಚಹಾಕ್ಕೆ ಆರ್ಡರ್ ಮಾಡಿದ.  ಚಹ ಕುಡಿದಾದ ನಂತರ ಇಬ್ಬರೂ ಹತ್ತು ನಿಮಿಷದ ಬಳಿಕ ನಿಧಾನಕ್ಕೆ ಬಸ್ ನಿಲ್ದಾಣದ ಹೊರಕ್ಕೆ ಬಂದರು. 


     ಹೊರಬಂದ ಮಾದೇವ ಒಮ್ಮೆ ಸುತ್ತಲೂ ದೃಷ್ಟಿ ಹರಿಸಿ ' ಊರು ಬಹಳ ಬದಲಾಗಿದೆ ' ಎಂದ.


     'ನೀನು ನಾಲ್ವತ್ತು ವರ್ಷದ ನಂತರ ಊರಿಗೆ ಬರ್ಲಿಕ್ಕೆ  ಹತ್ತೀದಿ ಊರು ಬದಲಾಗದ ಇರಾಕ ಸಾಧ್ಯ
ಐತೇನೋ 'ಎಂದ ಸದಾಶಿವ.



     ಸುತ್ತಲೂ ಗಮನಿಸುತ್ತ ಮಾದೇವ ಸಾಗಿದ. ಆ ಹೆದ್ದಾರಿಯ ಎಡ ಬಲಗಳಲ್ಲಿ ಗೂಡಂಗಡಿಗಳು ತಲೆ ಎತ್ತಿವೆ. ಅರಣ್ಯ ಇಲಾಖೆಯ ಕಛೇರಿ ಮತ್ತು ಸಿಬ್ಬಂದಿಯವರ ಗೃಹಗಳು ಅವಸಾನದ ಅಂಚಿಗೆ ಬಂದಿದ್ದು ಗೂಡಂಗಡಿಗಳ ಮಧ್ಯೆ ಹೂತು ಹೋಗಿವೆ. ಬಸ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ಕೆಂಪು ಹೆಂಚುಗಳನ್ನು ಹೊದಿಸಿದ್ದ ಧರ್ಮಶಾಲೆಯ ಒಂದು ಗೋಡೆಯ ಅವಶೇಷ ಮಾತ್ರ ಸಾರ್ವಜನಿಕರ ಮೂತ್ರ ವಿಸರ್ಜನೆಯ ತಾಣವಾಗಿ ನಿಂತಿದೆ. ತಾನು ಅದೇ ಧರ್ಮಶಾಲೆಯ ವಿಶಾಲ ಹಜಾರದಲ್ಲಿಯೆ ಅಲ್ಲವೆ ಆರು ಏಳನೆ ತರಗತಿಗಳಿಗೆ ಓದಿದ್ದು. ಏಳನೆ ತರಗತಿಗೆ ಓದುವಾಗ ಚನ್ನಪ್ಪ ಮಾಸ್ತರರ ಛಡಿ ಏಟಿಗೆ ಗಣಿತದ ಕ್ಲಾಸಿಗೆ ಹೆದರಿ ನಾಲ್ವತ್ತು ಹುಡುಗರ ಪೈಕಿ ಹದಿನೈದು ಜನ ಮಾತ್ರ ಉಳಿದದ್ದು. ಅವರ ಪೈಕಿ ಎಂಟು ಜನ ಮಾತ್ರ ಮುಲ್ಕಿ ಪರೀಕ್ಷೆಗೆ ಕಟ್ಟಿ ಐದು ಜನ ಮಾತ್ರ ಪಾಸಾದದ್ದು. ಹಾಗೆಯೆ ಆತನ ದೃಷ್ಟಿ ಅರಣ್ಯ ಇಲಾಖಾ ಕಛೇರಿಯ ಪಕ್ಕದ ಹಾಗೂ ಸರ್ಕಾರಿ ಪ್ರವಾಸಿ ಬಂಗಲೆಯ ಮುಂದಿನ ಬಯಲಲ್ಲಿಯೆ ಅಲ್ಲವೆ ತಾನು ಮೂರನೆ ತರಗತಿ ಓದುತ್ತಿದ್ದಾಗ ಬಂದಿದ್ದ ರಾಜಶ್ರೀ ಟೂರಿಂಗ್ ಟಾಕೀಸ್ ಟೆಂಟು ಹಾಕಿದ್ದು. ತಾನು ಅಜ್ಜಿಯ ಕಂಕುಳಲ್ಲಿ ಕುಳಿತು ಆದರ್ಶ ಸತಿ, ಸದಾರಮೆ ಮತ್ತು ಹರಿಭಕ್ತ ಮತ್ತು ರಿಯಾಯತಿ ದರದಲ್ಲಿ ಶಿವಶರಣೆ ನಂಬಿಯಕ್ಕ ಸಿನೆಮಾಗಳನ್ನು ನೋಡಿದ್ದು. ಮುರುಕು ಟೆಂಟಿನ ಬಿಳಿಯ ಪರದೆ ನಮ್ಮೆಲ್ಲರಿಗೆ ಅದ್ಭುತ ಮಾಯಾ ಪರದೆಯಾಗಿ ಕಾಡಿದ್ದು. ಆದರ್ಶಸತಿ ಸಿನೆಮಾದ ಸಮುದ್ರದ ಮಳಲ ದಂಡೆಯ ಮೇಲೆ ನಟ ನಾಗೇಂದ್ರರಾವ್ ಮರಳಲಿಂಗವನ್ನು ಸ್ಥಾಪಿಸಿ ' ಪಾಪಿಯ ಜೀವನ ಪಾವನ ಗೊಳಿಸುವ ಪರಶಿವ ಲಿಂಗ ನಮೋ, ಹರ ಹರ ಶಂಭೋ ಮಹಾದೇವ ' ಹಾಡು, ಅದೇ ರೀತಿ ಆ ಚಿತ್ರದ ಕಾರ್ಕೋಟಕ ವಿಷಧರ ನಾಗಗಳು ಮಾನಸ ಪಾತ್ರಧಾರಿಯೊಬ್ಬಳು ಕೈತಟ್ಟಿ ಕರೆಯುತ್ತಿದ್ದಂತೆ ಪ್ರತ್ಯಕ್ಷವಾಗಿ ಮಾಯವಾಗುವುದು, ಅದೇ ರೀತಿ ಇನ್ನೊಂದು ಹಾಡು ' ಪ್ರಭು ಪೊನ್ನಗರಾಯಾ ಪರಿ ಶರಣೋ ಪತಿ ಸೇವೆಯ ಸತಿಗುಳಿಸೊ ' ಎಂಬ ಸುಮಧುರ ಹಾಡುಗಳು ನಮ್ಮಂತಹ ಎಳೆಯ ಬಾಲಕರ ಮೇಲೆ ಮಾಡಿದ್ದ ಮೋಡಿ ಮಾತ್ರ ವರ್ಣಿಸಲಸದಳವಾದದ್ದು.


     ನಾವು ಶಾಲೆ ಬಿಟ್ಟೊಡನೆ ಟೆಂಟ್ನ ಯಾರೂ ಇಲ್ಲದ ಸಮಯದಲ್ಲಿ ಒಳಗೆ ಹೋಗಿ ಪರದೆಯ ಹಿಂದೆ ಗುಡ್ಡ ಬೆಟ್ಟ ಸಮುದ್ರದ ದಂಡೆ ನಾಗಗಳು ಕುದುರೆಗಳಿಗಾಗಿ ನೋಟ ಹರಿಸಿದ್ದು. ಟೆಂಟ್ ಹೋದ ನಂತರ ಅಲ್ಲಿ ವಾಲಿಬಾಲ್ ಗ್ರೌಂಡ್ ಮಾಡಿ ಊರಿನ ಯುವಕರು ವಾಲಿಬಾಲ್ ಆಟ ಆಡುತ್ತಿದ್ದುರು. ನಾವೆಲ್ಲ ಶಾಲೆ ಬಿಟ್ಟೊಡನೆ ಅಲ್ಲಿಗೆ ಹೋಗಿ ಗ್ರೌಂಡ್ನಿಂದ ಹೊರ ಹೋಗುವ ಬಾಲ್ಗಳಿಗಾಗಿ ಕಾದು ಅಂತಹ ಬಾಲ್ಗಳು ಬಂದಾಗ ಅವನ್ನು ಆದಷ್ಟು ದೂರ ಉರುಳಿಸಿ ಕೊಂಡು ಹೋಗಿ ಬಾಲ್ನ್ನು ಕಿಕ್ ಮಾಡಿಯೋ ಇಲ್ಲ ಸರ್ವಿಸ್ ಮಾಡಿಯೋ ಆಟಗಾರರಿಗೆ ತಲುಪಿಸುತ್ತಿದ್ದುದು ಅವರು ನಮಗೆ ಬೈಯ್ಯುತ್ತಿದ್ದುದು. ಈಗ ಅಲ್ಲಿ ಅವು ಯಾವುವೂ ಇಲ್ಲ ಅಲ್ಲಿ ಪೋಲೀಸ್ ಕ್ವಾರ್ಟರ್ಸಗಳು ತಲೆ ಎತ್ತಿವೆ. ನಾವು ಸೈಕಲ್ ಕಲಿತ ಬಯಲಿನಲ್ಲಿ ಈಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ತಲೆಎತ್ತಿ ನಿಂತಿದೆ. ಹಾಗೆಯೇ ಮುಂದೆ ಚಲಿಸಿ ಊರೊಳಗೆ ಸಾಗಿಬಂದ ಮಾದೇವನ ದೃಷ್ಟಿ ಹರಿದದ್ದು ಬಲಬದಿಯ ಪೋಲೀಸ್ ಠಾಣಾ ಕಟ್ಟಡದ ಮೇಲೆ. ಅಲ್ಲಿ ಮೊದಲು ಒಂದು ಕೆಂಪು ಹಂಚಿನ ಕಟ್ಟಡವಿತ್ತು. ಮಾದೇವನ ಸಹಪಾಠಿಗಳೆಲ್ಲ ಆ ಠಾಣೆಗೆ ಅಗಷ್ಟ್ ಹದಿನೈದರಂದು ಧ್ವಜಾರೋಹಣಕ್ಕಾಗಿ ಪ್ರಭಾತಫೇರಿಯಲ್ಲಿ ಹೋಗುತ್ತಿದ್ದುದು, ಅಲ್ಲಿ ತಮಗೆಲ್ಲ ಕೊಡುತ್ತಿದ್ದ ಮಂಡಕ್ಕಿ ಖಾರಾ ಬೂಂದಿ ಮಿಶ್ರಣ ಬಹಳ ಚೆನ್ನಾಗಿರುತ್ತಿತ್ತು. ಅದೊಂದು ದಿನ ಬಿಟ್ಟರೆ ತಾವಾರೂ ಬೇರೆ ದಿನಗಳಲ್ಲಿ ಅಲ್ಲಿಗೆ ಹೋಗುತ್ತಿರಲಿಲ್ಲ. ಅದರ ಪಕ್ಕದ ಕುಡಿಯುವ ನೀರಿನ ಹೊಂಡ ಈಗ ಮಹೆಳೆಯರು ಬಟ್ಟೆಯೊಗೆಯುವ ಕೆರೆಯಾಗಿ ಮಾರ್ಪಟ್ಟಿದೆ. ಕೆರೆಯ ಪಾವಟಿಗೆಗಳು ಮಾಯವಾಗಿವೆ. ದುರ್ವಾಪುರದ ರಸ್ತೆಗಳೆಲ್ಲ ಸಿಮೆಂಟ್ ರಸ್ತೆಗಳಾಗಿ ಮಾರ್ಪಟ್ಟಿದ್ದರೂ ಮೊದಲಿನಂತೆ ವಿಶಾಲವಾದ ರಸ್ತೆಗಳಿಲ್ಲ. ಚರಂಡಿಗಳೆಲ್ಲ ಪ್ಲಾಸ್ಟಿಕ್ ಮತ್ತು ಗುಟಕಾ ಸ್ಯಾಚೆಟ್ ಗಳಿಂದ ತುಂಬಿ ದುರ್ನಾತ ಹೊಡೆಯುತ್ತಿವೆ. ರಸ್ತೆಯ ಇಕ್ಕೆಲದ ಕೆಲವು ಮನೆಗಳು ಹೊಸ ರೂಪ ಪಡೆದಿದ್ದರೆ ಇನ್ನು ಕೆಲವು ಅವಸಾನದ ಅಂಚಿಗೆ ತಲುಪಿವೆ. ಈಗ ಕಾಲ ಚಕ್ರ ತಿರುಗಿದೆ, ಅಂದು ಮೇಲಿದ್ದವರು ಇಂದು ಕೆಳಗೆ ಬಂದಿದ್ದರೆ, ಕೆಳಗಿದ್ದವರು ಮೇಲೇರಿ ಮೀಸೆ ತಿರುವುತ್ತಿದ್ದಾರೆ. ಮೇಲ್ನೋಟಕ್ಕೆ ಹೊರಗೆ ಶಾಂತವಾಗಿದ್ದರೂ ಒಂದೊಂದು ಮನದೊಳಗೂ ಒಂದು ತರಹದ ಪ್ರಕ್ಷುಬ್ಧತೆಯಿದೆ, ಅವಕಾಶಕ್ಕಾಗಿ ಹೊಂಚುಗಳು ನಡೆದಿವೆ. ಅಧಿಕಾರ ವಿಕೇಂದ್ರಿಕರಣದ ಜೊತೆಗೆ ಭ್ರಷ್ಟಾಚಾರದ ವಿಕೇಂದ್ರಿಕರಣವೂ ಆಗಿದೆ ಎಂಬುದು ಸದಾಶಿವನ ಜೋತೆಗಿನ ಮಾತುಕತೆಯಿಂದ ಮಾದೇವನಿಗೆ ತಿಳಿದು ಬಂತು. ದೇಶದ ಎಲ್ಲ ಗ್ರಾಮಗಳಂತೆ ಈ ಗ್ರಾಮ ಸಹ ಇದೊಂದೆ ಬೇರೆ ರೀತಿಯಾಗಿರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮಾದೇವನ ಮನದ ಮೂಲೆಯೊಳಗೆ ಮೂಡಿ ಮರೆಯಾಯಿತು.


                                                                                            ( ಮುಂದುವರಿದುದು )
 

Rating
No votes yet

Comments

Submitted by swara kamath Mon, 12/10/2012 - 12:55

ಪಾಟೀಲ್ ಸರ್ ನಮಸ್ಕಾರಗಳು.
ನಿಮ್ಮ ಈ "ಸಿನೆಮಾ" ಮೂರನೆಯ ರೀಲಿನ ಕಥೆಯು ಸಹ ನನಗೆ ಬಾಲ್ಯ ಜೀವನ ನೆನಪಿಸುತ್ತದೆ. ನಾನು ಸಹ ನೀವು ಇಲ್ಲಿ ಹೆಸರಿಸಿದ ಹಳೆಯ ಚಿತ್ರ ಗಳನ್ನು ನಮ್ಮ ಊರಿನ ಟೆಂಟ ಸಿನೆಮಾಮಂದಿರದಲ್ಲಿ ನೋಡಿ ಆನಂದಿಸಿದ್ದೇನೆ. ಚಿತ್ರದ ಗೀತೆಗಳ ಸಾಲನ್ನು ಓದುತ್ತಿರುವಾಗ ದೃಶ್ಯಗಳು ಸಹ ಸಿನೆಮಾ ರೀಲಿನಂತೆ ಕಣ್ಮುಂದೆ ಓಡುತ್ತವೆ. ಅಂತು ಸಿನೆಮಾ ಇಲ್ಲಿಯವರೆಗೆ ಚನ್ನಾಗಿ ಸಾಗಿದೆ ಮುಂದಿನ ರೀಲಿನ ನಿರೀಕ್ಷೆಯಲ್ಲಿದ್ದೆನೆ.

Submitted by H A Patil Mon, 12/10/2012 - 13:42

In reply to by swara kamath

ರಮೇಶ ಕಾಮತರಿಗೆ ವಂದನೆಗಳು
' ಸಿನೆಮಾ ' ಕಥಾನಕದ ಮೂರನೆ ಭಾಗಕ್ಕೆ ತಾವು ಬರೆದ ಪ್ರತಿಕ್ರಿಯೆಯನ್ನು ಓದಿದೆ. ಆಗಿನ ಕಾಲದ ಅಗ್ಗದ ಮತ್ತು ನಮಗೆ ಬೇಕೆಂದಾಗ ದೊರಕ ಬಹುದಾಗಿದ್ದ ಮನರಂಜನಾ ಮಾಧ್ಯಮವೆಂದರೆ ಸಿನೆಮಾ ಆಗಿತ್ತು. ನಾಟಕ ಯಕ್ಷಗಾನಗಳೆಂದರೆ ಅವುಗಳನ್ನು ಒಂದು ಸೀಮಿತ ಸಂಧರ್ಭಗಳಲ್ಲಿ ಮಾತ್ರ ಅವಕಾಶವಿತ್ತು. ಹೀಗಾಗಿ ಟೆಂಟ್ ಸಿನೆಮಾ ಆಗಿನ ಕಾಲದ ಅನಿವಾರ್ಯ ಭಾಗವಾಗಿತ್ತು. ಈ ಕಂತಿನ ಮೆಚ್ಚುಗೆಗೆ ಧನ್ಯವಾದಗಳು.