೧೮. ಲಲಿತಾ ಸಹಸ್ರನಾಮ - ಷೋಡಶೀ ಮಂತ್ರದ ವಿವರಣೆ

೧೮. ಲಲಿತಾ ಸಹಸ್ರನಾಮ - ಷೋಡಶೀ ಮಂತ್ರದ ವಿವರಣೆ

ಮಹಾಷೋದಶೀ ಮಂತ್ರ

          ಎಲ್ಲಾ ಮಂತ್ರಗಳು ರಹಸ್ಯಾತ್ಮಕವಾಗಿರುತ್ತವೆ ಎನ್ನುವುದು ಪ್ರತೀತಿ ಮತ್ತು ಇದಕ್ಕೆ ಷೋಡಶೀ ಮಂತ್ರವು ಹೊರತಾಗಿಲ್ಲ. ಷೋಡಶೀ ಮಂತ್ರದ ಉಚ್ಛಾರಣೆಯು ಮುಕ್ತಿಗೆ ದಾರಿ ತೋರುತ್ತದೆ. ಈ ಮಂತ್ರವು ಯಾವುದೇ ವಿಧವಾದ ವಸ್ತುತಃ ಲಾಭವನ್ನು ಕೊಡುವುದಿಲ್ಲ ಆದರೆ ಅದು ನೇರವಾಗಿ ನಮ್ಮನ್ನು ಬ್ರಹ್ಮದ ಬಳಿಗೆ ಕೊಂಡೊಯ್ಯುತ್ತದೆ. ಸಾಮಾನ್ಯವಾಗಿ ಒಬ್ಬರಿಗೆ ಈ ಮಂತ್ರವನ್ನು ನೇರವಾಗಿ ಉಪದೇಶಿಸುವುದಿಲ್ಲ. ಗುರುವಾದವನು ಈ ಮಂತ್ರವನ್ನು ಸೂಕ್ತ ಸಮಯದಲ್ಲಿ ಶಿಷ್ಯನಾದವನಿಗೆ ಉಪದೇಶಿಸುತ್ತಾನೆ. ಸಾಮಾನ್ಯವಾಗಿ ಮೊದಲಿಗೆ ’ಬಾಲಾ’ ಮಂತ್ರದ ದೀಕ್ಷೆಯು ಕೊಡಮಾಡಲ್ಪಡುತ್ತದೆ; ಆಮೇಲೆ ಶಿಷ್ಯನ ಪುರೋಗತಿಯನ್ನು ಗಮನಿಸಿದ ನಂತರ ಅವನಿಗೆ ಪಂಚದಶಿಯು ಉಪದೇಶಿಸಲ್ಪಡುತ್ತದೆ. ಗುರುವಿಗೆ ತನ್ನ ಶಿಷ್ಯನಾದವನು ಮುಕ್ತಿಯನ್ನು ಹೊಂದಲು ಯೋಗ್ಯನೆನಿಸಿದರೆ ಆಗ ಅವನಿಗೆ ಷೋಡಶೀ ಮಂತ್ರದ ದೀಕ್ಷೆಯನ್ನು ಕೊಡುತ್ತಾನೆ. ಒಬ್ಬರು ೯,೦೦,೦೦೦ (ಒಂಭತ್ತು ಲಕ್ಷ) ಬಾರಿ ಈ ಮಂತ್ರವನ್ನು ಜಪಿಸಿ ತದನಂತರ ಪುರಶ್ಚರಣ ವಿಧಿಯನ್ನು ಕೈಗೊಂಡರೆ ಅವರಿಗೆ ’ಸಿದ್ಧಿ’ಯು ಲಭಿಸುತ್ತದೆ. ಪುರಶ್ಚರಣವನ್ನು ಕೇವಲ ಒಂದು ಲಕ್ಷ  (೧,೦೦,೦೦೦) ಬಾರಿ ಜಪಿಸಿದರೆ ಸಾಕು. ಆಗ ಮಾತ್ರವೇ ಮುಕ್ತಿಯು ಸಾಧ್ಯವಾಗುತ್ತದೆ. ಒಬ್ಬರ ಕರ್ಮದ ಆಧಾರದ ಮೇಲೆ ಅವನಿಗೆ ಷೋಡಶಿಯ ಉಪದೇಶವಾಗುವುದು ಅವಲಂಭಿತವಾಗಿರುತ್ತದೆ ಎನ್ನುತ್ತಾರೆ.

          ಷೋಡಶೀ ವಿದ್ಯೆಯನ್ನು ಬ್ರಹ್ಮ ವಿದ್ಯೆ ಅಥವಾ ಬ್ರಹ್ಮನ ಬಗ್ಗೆ ಅರಿವುಂಟುಮಾಡುವ ವಿದ್ಯೆ ಎನ್ನುತ್ತಾರೆ. ಬ್ರಹ್ಮವು ನಮಗೆ ಮಂತ್ರರೂಪದಲ್ಲಿ ಷೋಡಶೀ ವಿದ್ಯೆಯಲ್ಲಿ ವ್ಯಕ್ತವಾಗುತ್ತದೆ. ಷೋಡಶೀ ಮಂತ್ರವು ಬ್ರಹ್ಮದ ಇರುವಿಕೆಯನ್ನು ಮಂತ್ರಗಳ ಮೂಲಕ ವ್ಯಕ್ತಪಡಿಸುವುದರಿಂದ ಅದನ್ನು ಅತ್ಯಂತ ರಹಸ್ಯಾತ್ಮಕವಾದುದೆಂದು ಪರಿಗಣಿಸಲಾಗಿದೆ. ಆದರೆ ಇದರಲ್ಲಿ ಬಹು ಮುಖ್ಯವಾದ ರಹಸ್ಯವೇನೆಂದರೆ ಈ ಮಂತ್ರದಲ್ಲಿನ ಎರಡನೇ ಓಂ(ॐ)ಕಾರದ ಜಾಗದಲ್ಲಿ ಸಾಧಕನ ’ಸಾತ್ಮ ಬೀಜಾಕ್ಷರ’ವನ್ನು ಇರಿಸುವುದಾಗಿದೆ. ಇದರಲ್ಲಿ ಮೂರನೆಯ ರಹಸ್ಯಾತ್ಮಕ ಅಂಶವೆಂದರೆ ಅದು ಪರಾ, ಪರಾಪರ ಮತ್ತು ಅಪರಾ ಹಂತಗಳ (ಈ ಹಂತಗಳನ್ನು ನಾಮಗಳ ವಿಷಯವನ್ನು ಕುರಿತು ಚರ್ಚಿಸುವಾಗ ವಿಶದ ಪಡಿಸಲಾಗಿದೆ) ಕುರಿತು ಚರ್ಚಿಸುವ ’ಶ್ರೀ ಚಕ್ರ’ದ ಒಂಭತ್ತನೇ ಆವರಣವನ್ನು ಪೂಜಿಸುವುದಾಗಿದೆ. ಷೋಡಶೀ ಮಂತ್ರವನ್ನು ನಿತ್ಯವೂ ನಿಯಮಿತವಾಗಿ ಮಾನಸಿಕವಾಗಿ ಉಚ್ಛರಿಸುವುದರಿಂದ ತುರೀಯಾವಸ್ಥೆಯನ್ನು ಯಾವುದೇ ಸಂಕಷ್ಟವಿಲ್ಲದೇ ಹೊಂದಬಹುದು.

          (ತುರೀಯಾ ಮತ್ತು ತುರೀಯಾತೀತ - ತುರೀಯವು ಪ್ರಜ್ಞೆಯ ನಾಲ್ಕನೇ ಹಂತವಾಗಿದೆ, ಉಳಿದ ಮೂರು ಜಾಗ್ರತ್ (ಎಚ್ಚರ), ಸ್ವಪ್ನ (ಕನಸಿನ ಹಂತ) ಮತ್ತು ಸುಷುಪ್ತಿ (ದೀರ್ಘ ನಿದ್ರಾವಸ್ಥೆ) ಆಗಿವೆ. ತುರೀಯಾವಸ್ಥೆಯು ಈ ಮೂರೂ ಹಂತಗಳನ್ನು ಆವರಿಸಿ ಕಟ್ಟಿಹಾಕಿ ಅವನ್ನು ಹೊರಹಾಕುತ್ತದೆ. ತುರೀಯಾ ಹಂತದಲ್ಲಿ ಪ್ರಜ್ಞೆಯು ಪರಮಾನಂದ ಸ್ಥಿತಿಯ ಬಹು ಸಮೀಪದಲ್ಲಿರುತ್ತದೆ; ಇದನ್ನು ಪ್ರಯೋಗಗಳ ಮೂಲಕ ಮತ್ತು ಗಮನವಿಟ್ಟು ನೋಡುವುದರ ಮೂಲಕ ಖಚಿತ ಪಡಿಸಿಕೊಳ್ಳಲಾಗಿದೆ; ಕೇವಲ ತತ್ವದ ಆಧಾರದ ಮೇಲೆ ಅಲ್ಲ. ತುರೀಯಾತೀತ ಹಂತವು ತುರೀಯಾ ಅವಸ್ಥೆಯನ್ನು ಅಧಿಗಮಿಸಿದ ಪ್ರಜ್ಞಾ ಸ್ಥಿತಿಯಾಗಿದೆ. ಈ ಪರಮಾನಂದ ಪ್ರಜ್ಞೆಯ ಸ್ಥಿತಿಯಲ್ಲಿ, ಬ್ರಹ್ಮ ಸಾಕ್ಷಾತ್ಕಾರವಾಗಿ ಒಬ್ಬನಿಗೆ "ನಾನು ಅವನೇ" ಅಥವಾ "ಅಹಂ ಬ್ರಹ್ಮಾಸ್ಮಿ" ಎಂದು ಅನಿಸುತ್ತದೆ. ಅಂತಿಮ ಹಂತವಾದ ಬ್ರಹ್ಮದಲ್ಲಿ ಐಕ್ಯವಾಗುವುದನ್ನು ’ಕೈವಲ್ಯ’ವೆನ್ನುತ್ತಾರೆ ಆಗ ಆತ್ಮವು ರೂಪಾಂತರ ಹೊಂದುವುದರಿಂದ ಬಿಡುಗಡೆಯನ್ನು ಪಡೆಯುತ್ತದೆ.)

          ಪಂಚದಶೀ ಮಂತ್ರದ ಮೂಲಕ ಒಬ್ಬರು ಪ್ರಜ್ಞಾವಸ್ಥೆಯ ನಾಲ್ಕನೆಯ ಹಂತವಾದ ತುರೀಯಾವಸ್ಥೆಯನ್ನು ಅಧಿಗಮಿಸಬಹುದು. ಷೋಡಶೀ ಮಂತ್ರದ ಮೂಲಕ ಒಬ್ಬರು ಪ್ರಜ್ಞೆಯ ಐದನೇ ಹಂತವಾದ ತುರೀಯಾತೀತ ಸ್ಥಿತಿಗೆ ತಲುಪಿ ಪರಬ್ರಹ್ಮದಲ್ಲಿ ಐಕ್ಯರಾಗಬಹುದು. ಅದಕ್ಕಿಂತ ಮುಂದೆ ಮತ್ತೇನೂ ಇಲ್ಲ. ಒಬ್ಬರು ತುರೀಯಾವಸ್ಥೆಯನ್ನು ದಾಟಿ ಮುಂದೆ ಹೋದರೆ ಏನಾಗುತ್ತದೆ? ಆವಾಗ ನಾನು ಎನ್ನುವುದರ ಬದಲಾಗಿ ಆತ್ಮ ಎನ್ನುವುದು ಇರುತ್ತದೆ. ಈ ಸ್ಥಿತ್ಯಂತರವು ಅಥವಾ ಬದಲಾವಣೆಯು ಕಣ್ಣೆವೆಯಿಕ್ಕುವದರೊಳಗೆ ಅಥವಾ ಅದಕ್ಕೂ ಬಹಳ ಚಿಕ್ಕದಾದ ಅಲ್ಪ ಕಾಲದಲ್ಲಿ ಉಂಟಾಗುತ್ತದೆ ಮತ್ತು ಆಗ ಒಬ್ಬನಿಗೆ ಸಾವಿನ ಸಮೀಪದಂತಹ ಅನುಭವವಾಗುತ್ತದೆ. ಒಬ್ಬನು ಆ ಅಲ್ಪಕಾಲದ ಅನುಭವವಾದ ಮೇಲೆ ಅದೇ ವ್ಯಕ್ತಿಯಾಗಿ ಉಳಿಯುವುದಿಲ್ಲ.

          ಷೋಡಶೀ ಮಂತ್ರವು ಪಂಚದಶೀ ಮಂತ್ರಕ್ಕಿಂತ ಅನುಪಮವಾದುದು. ಷೋಡಶಾನ್ ಅಂದರೆ ಹದಿನಾರು ಮತ್ತು ಷೋಡಶಃ ಅಂದರೆ ಹದಿನಾರನೆಯದು. ಷೋಡಶೀ ಮಂತ್ರವು ಪಂಚದಶೀ ಮಂತ್ರಕ್ಕೆ ಮತ್ತೊಂದು ಬೀಜಾಕ್ಷರವನ್ನು ಸೇರಿಸುವುದರ ಮೂಲಕ ನಿಷ್ಪತ್ತಿಯಾಗುತ್ತದೆ. ಆದರೆ ವಾಸ್ತವವಾಗಿ ಷೋಡಶೀ ಮಂತ್ರವು ಇಪ್ಪತ್ತೆಂಟು ಬೀಜಾಕ್ಷರಗಳಿಂದ ಕೂಡಿದ್ದು ಈ ರೀತಿಯಾಗಿ ಸಿದ್ಧವಾಗುತ್ತದೆ. ಇಲ್ಲಿ ಮೊದಲನೇ ’ಓಂ’ಅನ್ನು ಹೊರತು ಪಡಿಸಿ ಮಂತ್ರದ ಉಗಮವಾಗುತ್ತದೆ ಏಕೆಂದರೆ ಎಲ್ಲಾ ಮಂತ್ರಗಳೂ ಸಾಮಾನ್ಯವಾಗಿ ’ಓಂ’ನಿಂದ ಪ್ರಾರಂಭವಾಗುತ್ತವೆ.

೧. ಓಂ ॐ

೨. ಶ್ರೀಂ ಹ್ರೀಂ ಕ್ಲೀಂ ಐಂ ಸೌಃ श्रीं ह्रीं क्लीं ऐं सौः (೫ ಬೀಜಾಕ್ಷರಗಳು)

೩. ಓಂ ಹ್ರೀಂ ಶ್ರೀಂ ॐ ह्रीं श्रीं (೩ ಬೀಜಾಕ್ಷರಗಳು)

೪. ಕ ಏ ಈ ಲ ಹ್ರೀಂ क ए ई ल ह्रीं (೫ ಬೀಜಾಕ್ಷರಗಳು)

೫. ಹ ಸ ಕ ಹ ಲ ಹ್ರೀಂ ह स क ह ल ह्रीं (೬ ಬೀಜಾಕ್ಷರಗಳು)

೬. ಸ ಕ ಲ ಹ್ರೀಂ स क ल ह्रीं (೪ ಬೀಜಾಕ್ಷರಗಳು)

೭. ಸೌಃ ಐಂ ಕ್ಲೀಂ ಹ್ರೀಂ ಶ್ರೀಂ सौः ऐं क्लीं ह्रीं श्रीं (೫ ಬೀಜಾಕ್ಷರಗಳು)

          ಈ ಮಂತ್ರವನ್ನು ಗಮನಿಸಿದರೆ ಇದರಲ್ಲಿನ ೪, ೫ ಮತ್ತು ೬ನೇ ಸಾಲುಗಳು ಪಂಚದಶೀ ಮಂತ್ರಗಳಾಗಿವೆ ಮತ್ತು ಪ್ರತಿಯೊಂದು ಸಾಲೂ ಪಂಚದಶಿಯ ಒಂದು ಕೂಟವನ್ನು ಪ್ರತಿನಿಧಿಸುತ್ತದೆ. ನೀವು ೨ನೇ ಮತ್ತು ೭ನೇ ಸಾಲುಗಳನ್ನು ಗಮನಿಸಿದರೆ, ಇದರಲ್ಲಿ ೨ನೇ ಸಾಲಿನಲ್ಲಿರುವ ಬೀಜಾಕ್ಷರಗಳು ನಿಮಗೆ ೭ನೇ ಸಾಲಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾಣಸಿಗುತ್ತವೆ. ಉದಾಹರಣೆಗೆ, ೨ನೇ ಸಾಲಿನ ಕಡೆಯ ಆಕ್ಷರವು ’ಸೌಃ’ ಆಗಿದ್ದರೆ ಇದನ್ನು ಏಳನೇ ಸಾಲಿನಲ್ಲಿ ಪ್ರಥಮ ಅಕ್ಷರವಾಗಿ ಇರಿಸಲಾಗಿದೆ. ಇದನ್ನು ಸಂಪುಟೀಕರಣ ಅಥವಾ ಮಂತ್ರದ ಕವಚೀಕರಣವೆನ್ನುತ್ತಾರೆ ಏಕೆಂದರೆ ಈ ರೀತಿ ಮಾಡುವುದರಿಂದ ಮಂತ್ರದ ಶಕ್ತಿಯು ಸಾಧಕನ ಬಳಿಯಲ್ಲಿಯೇ ಉಳಿಯುತ್ತದೆ.

          ಈ ಮಂತ್ರವನ್ನು ಇದರಲ್ಲಿರುವ ಹದಿನಾರು ಬೀಜಾಕ್ಷರಗಳಿಂದಾಗಿ ’ಷೋಡಶೀ’ ಎಂದಿದ್ದಾರೆ ಅಥವಾ ಈ ಮಂತ್ರದಲ್ಲಿ ಹದಿನಾರು ’ಕಲಾ’ಗಳಿವೆ ಅಂದರೆ ಹದಿನಾರು ಅಂಶ/ಭಾಗಗಳಿವೆ ಮತ್ತು ಒಂದೊಂದು ಭಾಗವು ಚಂದ್ರನ ಒಂದೊಂದು ಭಾಗವನ್ನು ಅಥವಾ ’ಕಲಾ’ವನ್ನು ಪ್ರತಿನಿಧಿಸುತ್ತದೆ. ಈ ಮಂತ್ರವನ್ನು ಲಕ್ಷ್ಮೀ ಬೀಜಾಕ್ಷರವಾದ ’ಶ್ರೀಮ್’ (श्रीं) ಅನ್ನು ’ಪಂಚದಶೀ ಮಂತ್ರ’ಕ್ಕೆ ಕಡೆಯಲ್ಲಿ ಸೇರಿಸುವುದರಿಂದ ಪಡೆಯಬಹುದಾಗಿದೆ. ಈ ಹದಿನಾರು ಬೀಜಾಕ್ಷರಗಳನ್ನು ಪಂಚದಶೀ ಮಂತ್ರದ ಒಂದೊಂದು ಕೂಟವನ್ನು ಒಂದೊಂದು ಬೀಜಾಕ್ಷರವಾಗಿ ಪರಿಗಣಿಸಿ ನಿಷ್ಪತ್ತಿಗೊಳಿಸಲಾಗಿದೆ. ಈ ವಿಧವಾಗಿ ಪಂಚದಶೀ ಮಂತ್ರದ ಒಂದೊಂದು ಕೂಟವನ್ನು ಪ್ರತಿನಿಧಿಸುವ ೪, ೫ ಮತ್ತು ೬ನೇ ಸಾಲುಗಳನ್ನು ಒಂದೊಂದು ಬೀಜಾಕ್ಷರವೆಂದು ಪರಿಗಣಿಸಿ ಮೂರು ಬೀಜಾಕ್ಷರಗಳನ್ನು ಪಡೆಯಲಾಗಿದೆ. ಈ ಹದಿನಾರು ಬೀಜಾಕ್ಷರಗಳನ್ನು ೫+೩+೧+೧+೧+೫ (೨ನೇ ಸಾಲಿನಿಂದ ೭ನೇ ಸಾಲಿನವರೆಗೆ) ಬೀಜಾಕ್ಷರಗಳನ್ನು ಕೂಡಿಸುವುದರ ಮೂಲಕ ಪಡೆಯಲಾಗಿದೆ. ಈ ಮಂತ್ರದಲ್ಲಿ ಎರಡು ’ಓಂ’ ಅಕ್ಷರಗಳಿವೆ; ಇದರಲ್ಲಿ ಮೊದಲನೇ ಸಾಲಿನ ’ಓಂ’ ಅಕ್ಷರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಮತ್ತು ೩ನೇ ಸಾಲಿನಲ್ಲಿರುವ ಎರಡನೇ ’ಓಂ’ ಅಕ್ಷರದ ಬದಲಾಗಿ  ಗುರುವು ನಿರ್ಧರಿಸುವ ಸಾಧಕನ ’ಆತ್ಮ ಬೀಜಾಕ್ಷರ’ವನ್ನು ಸೇರಿಸಲಾಗುವುದು. ಗುರುವೊಬ್ಬನಿಗೆ ಮಂತ್ರ ಮತ್ತು ಬೀಜಾಕ್ಷರಗಳ ಬಗ್ಗೆ ವಿಶೇಷವಾದ ಜ್ಞಾನವಿದ್ದರೆ ಅವನು ಈ ನಿರ್ಧಾರವನ್ನು ಕೈಗೊಳ್ಳಬಹುದು. ತಪ್ಪಾದ ಬೀಜಾಕ್ಷರವು ಸಾಧಕನನ್ನು ಸರ್ವನಾಶಗೊಳಿಸುತ್ತದೆ.

          ಷೋಡಶೀ ಮಂತ್ರವನ್ನು ಪ್ರತ್ಯೇಕವಾಗಿ ಮುಕ್ತಿ ಸಾಧನೆಗಾಗಿ ಮಾತ್ರವೇ ನಿಗಧಿ ಪಡಿಸಲಾಗಿದ್ದು, ಮುಕ್ತಿಯನ್ನು ಬಯಸುವವರು ಮಾತ್ರವೇ ಇದರ ಮಂತ್ರೋಪದೇಶವನ್ನು ಪಡೆಯಬೇಕು. ಷೋಡಶೀ ಮಂತ್ರವೇ ಎಲ್ಲಕ್ಕಿಂತ ಪರಮೋನ್ನತ ಮಂತ್ರವಾಗಿದ್ದು ಬೇರೆ ಯಾವುದೇ ಮಂತ್ರವು ಇದಕ್ಕೆ ಸರಿಸಾಟಿಯಾಗದು. ಈ ಮಂತ್ರೋಪದೇಶವನ್ನು ಪಡೆದವರು ತನ್ನ ಗುರುವನ್ನು ಹೊರತು ಪಡಿಸಿ ಬೇರೆ ಇನ್ನಾರಿಗೂ ದೀರ್ಘದಂಡ ಪ್ರಣಾಮವನ್ನು ಮಾಡಬಾರದು. ಶಕ್ತಿಯು ಹತ್ತು ವಿವಿಧ ರೂಪಗಳಲ್ಲಿ ಪೂಜಿಸಲ್ಪಡುತ್ತಾಳೆ ಮತ್ತು ಇದನ್ನು ’ದಶ ಮಹಾವಿದ್ಯಾ’ ಎನ್ನುತ್ತಾರೆ ಹಾಗು ಇದರಲ್ಲಿ ಷೋಡಶೀ ಕೂಡಾ ಒಂದಾಗಿದೆ. ಷೋಡಶೀ ವಿದ್ಯೆಯಲ್ಲಿ ಬಹಳಷ್ಟು ಆಚಾರಗಳನ್ನು ವಿಧಿಸಲಾಗಿದೆ.

          ಪ್ರತಿಯೊಂದು ಮಂತ್ರದಂತೆಯೇ ಷೋಡಶೀ ಮಂತ್ರಕ್ಕೆ ಕೂಡಾ ಶಾಪದಿಂದ ಮುಕ್ತಿಯನ್ನು ಕೊಡುವ ಮಂತ್ರವಿದ್ದು ಅದನ್ನು ಶಾಪ ವಿಮೋಚನಾ ಮಂತ್ರವೆನ್ನುತ್ತಾರೆ. ಈ ಮಂತ್ರವು ಎಲ್ಲಾ ಸಾಧಕರಿಗೆ ನೇರವಾಗಿ ಉಪದೇಶಿಸಲ್ಪಡುವುದಿಲ್ಲ. ಮಂತ್ರದ ಮೇಲಿನ ಶಾಪಗಳನ್ನು ತೆಗೆಯದಿದ್ದರೆ ಮಂತ್ರಗಳು ಫಲವನ್ನು ಕೊಡುವುದಿಲ್ಲ. ಷೋಡಶೀ ಮಂತ್ರದ ಶಾಪವಿಮೋಚನಾ ಮಂತ್ರವನ್ನು ಪ್ರಾಮಾಣಿಕ ಸಾಧಕರ ಉಪಯೋಗಕ್ಕಾಗಿ ಕೆಳಗೆ ಕೊಡಲಾಗಿದೆ. ಆದರೆ ಇದಕ್ಕೆ ಒಬ್ಬರು ತಮ್ಮ ಗುರುವಿನಿಂದ ಪೂರ್ವ ಅಪ್ಪಣೆಯನ್ನು ಹೊಂದಬೇಕು. ಮೂರು ಭಾಗಗಳಿಂದ ಕೂಡಿರುವ ಶಾಪ ವಿಮೋಚನಾ ಮಂತ್ರವನ್ನು, ಮಂತ್ರ ಜಪದ ಪ್ರಾರಂಭಕ್ಕೆ ಮುನ್ನ ಹೇಳಿಕೊಳ್ಳಬೇಕು. ಮೊದಲನೇ ಭಾಗವನ್ನು ಏಳು ಬಾರಿ ಹೇಳಿಕೊಳ್ಳಬೇಕು, ಎರಡನೇ ಭಾಗವನ್ನು ಮೂರು ಬಾರಿ ಮತ್ತು ಮೂರನೇ ಭಾಗವನ್ನು ಒಂದು ಬಾರಿ ಉಚ್ಛರಿಸಬೇಕು.

ಮೊದಲನೇ ಭಾಗ - ಇದನ್ನು ಏಳು ಬಾರಿ ಹೇಳಿಕೊಳ್ಳಬೇಕು

 ई ए क ल ह्रीं  ಈ ಏ ಕ ಲ ಹ್ರೀಂ

 ह स क ह ल ह्रीं  ಹ ಸ ಕ ಹ ಲ ಹ್ರೀಂ

 स क ल ह्रीं   ಸ ಕ ಲ ಹ್ರೀಂ

ಎರಡನೇ ಭಾಗ - ಇದನ್ನು ಮೂರು ಬಾರಿ ಹೇಳಿಕೊಳ್ಳಬೇಕು:

ह स क ह स क ह ल ह्रीं  ಹ ಸ ಕ ಹ ಸ ಕ ಹ ಲ ಹ್ರೀಂ

स क ल ह्रीं ಸ ಕ ಲ ಹ್ರೀಂ

ई ए क ल ह्रीं ಈ ಏ ಕ ಲ ಹ್ರೀಂ

ಮೂರನೇ ಭಾಗ - ಇದನ್ನು ಒಂದು ಬಾರಿ ಹೇಳಬೇಕು:

ह ल भ भ भ भ भ अ ಹ ಲ ಭ ಭ ಭ ಭ ಭ ಅ

******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ MAHĀṢODAŚĪ MANTRA महाषोदशी मन्त्र    http://www.manblunder.com/2012/04/mahasodasi-mantra-maha-shodashi-mantra.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
No votes yet

Comments

Submitted by nageshamysore Wed, 05/08/2013 - 03:04

ನಮಸ್ಕಾರ ಮಕರ ಶ್ರೀಧರರಿಗೆ
ಕೊನೆಯಲಿರುವ ಮಂತ್ರೋಚ್ಚಾರಣೆಯ ಅನುಕ್ರಮ ಹೇಗಿರಬೇಕು ಎಂಬುದರ ಕುರಿತು ವಿಧಿ, ವಿಧಾನವೇನಾದರೂ ಇದೆಯೆ? ಉದಾಹರಣೆಗೆ ಮೊದಲ ಭಾಗ ಏಳು ಬಾರಿ ಉಚ್ಚರಿಸುವುದಾದಲ್ಲಿ ಪ್ರತಿ ಸಾಲು ಏಳೇಳು ಬಾರಿ ಉಚ್ಚರಿಸಿ ಮುಂದಿನ ಸಾಲಿಗೆ ಹೊರಳಬೇಕೊ ಅಥವಾ ಮೂರು ಸಾಲೂ ಸೇರಿದ ಗುಂಪನ್ನು ಒಟ್ಟಾಗಿ ಉಚ್ಚರಿಸಿ ಏಳು ಬಾರಿ ಪಠಿಸಬೇಕೊ? - ನಾಗೇಶ ಮೈಸೂರು, ಸಿಂಗಾಪುರದಿಂದ

Submitted by makara Wed, 05/08/2013 - 08:18

In reply to by nageshamysore

ನಾಗೇಶ್ ಅವರೆ,
ನನಗೆ ತಿಳಿದ ಹಾಗೆ ಒಂದು ಭಾಗದಲ್ಲಿ ಇರುವ ಎಲ್ಲಾ ಸಾಲುಗಳನ್ನು ಒಮ್ಮೆ ಪೂರ್ತಿಗೊಳಿಸಿ ಅದನ್ನೇ ನಿಗದಿ ಪಡಿಸಿದಷ್ಟು ಬಾರಿ ಜಪಿಸ ಬೇಕು. ಇದರ ಬಗೆಗೆ ಮೂಲ ಲೇಖಕರ ಅಭಿಪ್ರಾಯವನ್ನು ಸಹ ಕೇಳುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Wed, 05/08/2013 - 22:31

In reply to by makara

ನಾಗೇಶ್ ಅವರೇ, ಈ ಲೇಖನದ‌ ಮೂಲ‌ ಲೇಖಕರಾದ‌ ಶ್ರೀಯುತ‌ ರವಿಯವರು ಸಹ‌ ನನ್ನ‌ ಅಭಿಪ್ರಾಯವನ್ನೇ ಅನುಮೋದಿಸಿರುತ್ತಾರೆ. ವ0ದನೆಗಳೊ0ದಿಗೆ, ಶ್ರೀಧರ್ ಬ0ಡ್ರಿ

Submitted by nageshamysore Sun, 02/09/2014 - 03:45

ಶ್ರೀಧರರೆ ೧೮. ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ :-
.
೧೮. ಲಲಿತಾ ಸಹಸ್ರನಾಮ - ಷೋಡಶೀ ಮಂತ್ರದ ವಿವರಣ
______________________________________
.
ಮಹಾಷೋಡಶೀ ಮಂತ್ರ
.
ಕರ್ಮಾಧಾರವಲಂಬಿತ ಮಂತ್ರೋಪದೇಶ, ಷೋಡಶೀ ರಹಸ್ಯಾತ್ಮಕ
ಗಮ್ಯವಲ್ಲ ಭೌತಿಕ ವಸ್ತು ಲಾಭ, ನೇರ ಮುಕ್ತಿ ಬ್ರಹ್ಮಸಾಧನೆಗೆ ಸಖ
ಸೂಕ್ತ ಸಮಯದಲಿ ಗುರುದೀಕ್ಷೆ, 'ಬಾಲಾ -ಪಂಚದಶೀ- ಷೋಡಶೀ'
ಯೋಗ್ಯರಿಗನುಗ್ರಹ ಕ್ರಮಬದ್ಧ, ಜಪನವಲಕ್ಷ ಪುರಶ್ಚರಣಲಕ್ಷ ಸಿದ್ಧಿ ||
.
ಷೋಡಶಿ ನಿತ್ಯೋಚ್ಛಾರ ಮನಸಾ, ನಿರಾಯಾಸ ತುರೀಯಾವಸ್ಥೆ
ಮಂತ್ರರೂಪದೆ ವ್ಯಕ್ತ ಬ್ರಹ್ಮ, ಬ್ರಹ್ಮವನರಿಸೆ ಬ್ರಹ್ಮ ವಿದ್ಯೆ ಮಾತೆ
ಬ್ರಹ್ಮದನಾವರಣ ರಹಸ್ಯಾತ್ಮಕ, ದ್ವಿತೀಯ'ಓಂ'ಕಾರದೆ ಸಾಧಕ
ಸಾತ್ಮ ಬೀಜಾಕ್ಷರ, ಪರ-ಪರಾಪರ-ಅಪರಾ ನವಾವರಣ ಪೂಜಕ ||
.
ಜಾಗ್ರತ್ ಸ್ವಪ್ನ ಸುಷುಪ್ತಿ ಪ್ರಜ್ಞಾ ಹಂತಗಳ ಮೀರಿಸಿ ತುರೀಯಾ     
ಪರಮಾನಂದ ಸ್ಥಿತಿಗ್ಹತ್ತಿರ, ಗಮನ-ಪ್ರಯೋಗ ಖಚಿತ ವಿಷಯ
ಬರಿ ತತ್ವಸಿದ್ದಾಂತವಲ್ಲ, ಅಧಿಗಮಿಸೆ ತುರೀಯಾತೀತ ಕರಗತ
"ಅಹಂ ಬ್ರಹ್ಮಾಸ್ಮಿ" ಸಾಕ್ಷಾತ್ಕಾರ ಬ್ರಹ್ಮೈಕ್ಯತೆ ಕೈವಲ್ಯ ವಿಮುಕ್ತ ||
.
ತುರೀಯಾವಸ್ಥೆಯನಧಿಗಮಿಸೆ ಬಳಕೆ ಪಂಚದಶೀ ಮಂತ್ರ
ತುರಿಯಾತೀತವ ತಲುಪಿಸಿ ಷೋಡಶೀ ಪರಬ್ರಹ್ಮದಿ ಐಕ್ಯ
ಅಧಿಗಮಿಸಲಿನ್ನೇನಿಲ್ಲದೆ, ನಾನೆನ್ನುವುದರಾ ಬದಲು ಆತ್ಮ
ಕಣ್ಣಿವೆಯಿಕ್ಕಿಗೆ ಬದಲೆ, ಸಾವನ್ಹೊಕ್ಕುಬಂದ ವ್ಯಕ್ತಿತ್ವಕೆ ಸಮ ||
.
ಅನುಪಮ ಷೋಡಶೀ ನಿಷ್ಪತ್ತಿ, ಪಂಚದಶೀ ಜತೆ ಸೇರೊಂದು ಬೀಜಾಕ್ಷರ
ವಾಸ್ತವ ದ್ವಾದಷಾಷ್ಟ ಅಕ್ಷರ ಗಣ, ಸಪ್ತ ಸಾಲಿನಲಡಕವಾಗಿ 'ಓಂ'ಕಾರ
ಪ್ರತಿಸಾಲಿನದೀ 'ಓಂ'ಕಾರ, ಉಗಮವಾಗದೆ ಸೇರಿಸಿದೇಕೈಕ ಬೀಜಾಕ್ಷರ
ಷೋಡಶಿ ನಡುವಣ ಸಾಲಲ್ಹುದುಗಿ ಪಂಚದಶೀ, ಪ್ರಬಲವಾಗಿಸುತ ಪೂರ ||
.
ಆರಂಭವಾಗಿ 'ಓಂ', ಶ್ರೀಂ-ಹ್ರೀಂ-ಕ್ಲೀಂ-ಐಂ-ಸೌಃ ಪಂಚಾಕ್ಷರಿ ದ್ವಿತೀಯ ಸಾಲು
ಓಂ-ಹ್ರೀಂ-ಶ್ರೀಂ ತೃತೀಯ, ಕ-ಏ-ಈ-ಲ-ಹ್ರೀಂ ಪಂಚ ಬೀಜ ಚತುರ್ಥ ಸಾಲು
ಹ-ಸ-ಕ-ಹ-ಲ-ಹ್ರೀಂ ಷಡಕ್ಷರಿ ಪಂಚಮ, ಸ-ಕ-ಲ-ಹ್ರೀಂ ಚತುರ್ಬೀಜಾ ಷಷ್ಠ
ಸೌಃ-ಐಂ-ಕ್ಲೀಂ-ಹ್ರೀಂ-ಶ್ರೀಂ ಪಂಚಾಕ್ಷರಿ ಸಪ್ತ, ಸಮಷ್ಟಿ ಬೀಜಾಕ್ಷರ ದ್ವಾದಶಾಷ್ಟಾ ||
.
ಷೋಡಶೀಯ ನಾಲ್ಕೈದಾರನೆ ಸಾಲುಗಳೆ ಪಂಚದಶೀ ಮಂತ್ರ
ಪ್ರತಿ ಸಾಲು ಪ್ರತಿನಿಧಿಸಿ ಪಂಚದಶಿಯೊಂದು ಕೂಟದ ಸೂತ್ರ
ಸಾಲೆರಡರ ಬೀಜಾಕ್ಷರ ತಿರುವು-ಮುರುವು ಸಾಲೇಳರ ಭಾಷ್ಯ
ಸಂಪುಟೀಕರಣ-ಕವಚೀಕರಣ, ಶಕ್ತಿಸಾಧಕನಲುಳಿಸೊ ರಹಸ್ಯ ||
.
ಹದಿನಾರು ಚಂದ್ರ 'ಕಲಾ' ಪ್ರತಿನಿಧಿ, ಸಮಗಣ ಬೀಜಾಕ್ಷರ ಷೋಡಶೀ
ಪಡೆಯಲು ಪಂಚದಶೀಯಂತಿಮದೆ ಲಕ್ಷ್ಮೀಬೀಜಾಕ್ಷರ 'ಶ್ರೀಂ' ಸೇರಿಸಿ
ಪ್ರತಿ ಪಂಚದಶೀ ಕೂಟ, ಬೀಜಾಕ್ಷರ ಮೂರಾಗಿ ಷೋಡಶಿಗೆ ಹದಿನಾರು
'ಓಂ' ತೃತೀಯವಷ್ಟೆ ಗಣನೆ, ಬದಲಿಸೆ ಸಾಧಕ 'ಆತ್ಮಬೀಜಾಕ್ಷರ' ಗುರು ||
.
ಸರಿ ಆತ್ಮ ಬೀಜಾಕ್ಷರ ಗುರುವಿನ ನಿರ್ಧಾರ, ಎಡವೆ ಸಾಧಕ ಸರ್ವನಾಶ
ಮುಕ್ತಿ ಸಾಧನೆಗಷ್ಟೇ ನಿಗದಿತವಿ ಷೋಡಶೀ, ಪರಿಗಣಿಸಿ ಮಂತ್ರೋಪದೇಶ
ಪರಮೋನ್ನತ ಮಂತ್ರ ಗುರುವಿಗಷ್ಟೆ ಧೀರ್ಘದಂಡ ಪ್ರಮಾಣ,ಆಚಾರವಿಧಿ
ಶಕ್ತಿಯ್ಹತ್ತು ರೂಪದಪೂಜೆ 'ದಶ ಮಹಾವಿದ್ಯಾ'ಯಲೊಂದೀ ಷೋಡಶಿನಿಧಿ ||
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು