೬. ಲಲಿತಾ ಸಹಸ್ರನಾಮದ ಪೂರ್ವಭಾಗ

೬. ಲಲಿತಾ ಸಹಸ್ರನಾಮದ ಪೂರ್ವಭಾಗ

         ಸಹಸ್ರವೆಂದರೆ ಸಾವಿರ ಮತ್ತು ನಾಮ ಎಂದರೆ ಹೆಸರು. ಲಲಿತಾ ಸಹಸ್ರನಾಮವೆಂದರೆ ಲಲಿತಾಂಬಿಕೆಯ ಒಂದು ಸಾವಿರ ನಾಮಗಳು. ಈ ಸಹಸ್ರನಾಮವು ವೇದವ್ಯಾಸ ಅಥವಾ ಹೆಚ್ಚು ಪ್ರಚಲಿತವಿರುವ ಮಹರ್ಷಿ ವ್ಯಾಸನಿಂದ ರಚಿಸಲ್ಪಟ್ಟ ಹದಿನೆಂಟು ಪುರಾಣಗಳಲ್ಲಿ ಒಂದಾಗಿರುವ ಬ್ರಹ್ಮಾಂಡಪುರಾಣದೊಳಗೆ ಉಲ್ಲೇಖಿತವಾಗಿದೆ. ವ್ಯಾಸನೆಂದರೆ ಸಂಯೋಜಿಸುವವನು ಅಥವಾ ಸಂಪಾದಕನೆಂದು ಅರ್ಥ. ಅವನು ಪರಾಶರ ಋಷಿ ಮತ್ತು ಸತ್ಯವತಿಯ ಮಗ ಹಾಗೂ ವಿಚಿತ್ರ ವೀರ್ಯ ಮತ್ತು ಭೀಷ್ಮ ಇವರ ಮಲಸಹೋದರ. ವ್ಯಾಸನು ಮಹಾವಿಷ್ಣುವಿನ ಅವತಾರವೆಂದು ಶ್ರೀಮದ್ ಭಾಗವತದ ೧.೩.೨೦ನೇ ಶ್ಲೋಕವು ತಿಳಿಸುತ್ತದೆ. ಏಳು ಪೂಜ್ಯರಾದ ಋಷಿಗಳಿದ್ದು ಅವರು ಸಪ್ತ ಋಷಿಗಳೆಂದು ಪ್ರಖ್ಯಾತರಾಗಿದ್ದಾರೆ; ಅವರೆಂದರೆ ಗೋತಮ, ಭರಧ್ವಾಜ, ವಿಶ್ವಾಮಿತ್ರ, ಜಮದಗ್ನಿ, ವಶಿಷ್ಠ, ಕಶ್ಯಪ ಮತ್ತು ಅತ್ರಿ (ಕೆಲವೊಂದು ಕಡೆ ಈ ಪಟ್ಟಿಯಲ್ಲಿ ಬೇರೆ ಋಷಿಗಳೂ ಸ್ಥಾನ ಪಡೆದಿದ್ದಾರೆ). ಈ ಸಹಸ್ರನಾಮವು ೧೮೩ ಶ್ಲೋಕಗಳನ್ನು ಒಳಗೊಂಡು ಬ್ರಹ್ಮಾಂಡ ಪುರಾಣದ ದ್ವಿತೀಯ ಭಾಗದಲ್ಲಿ ಸ್ಥಾನವನ್ನು ಗಳಿಸಿಕೊಂಡಿದೆ. ಈ ೧೮೩ ಶ್ಲೋಕಗಳು ೧೦೦೦ ನಾಮಗಳಾಗಿ ಪರಿವರ್ತಿತವಾಗಿವೆ. ಪುರಾಣಗಳನ್ನು ಕಥೆಯಂತೆ ಹೇಳುವುದರಿಂದ ಅವುಗಳನ್ನು ಓದುವುದು ಆಸಕ್ತಿಕರವಾಗಿರುತ್ತದೆ ಮತ್ತು ಅದರೊಂದಿಗೆ ವೇದಗಳಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳಬಹುದು. ಹಿಂದೂ ತತ್ವಶಾಸ್ತ್ರವು ಪ್ರಮುಖವಾಗಿ ನಾಲ್ಕು ವೇದಗಳ ಸುತ್ತಲೂ ಸುತ್ತುತ್ತದೆ. ವೇದಗಳನ್ನು ಅರ್ಥೈಸಿಕೊಳ್ಳುವುದು ಜನಸಾಮಾನ್ಯರಿಗೆ ಕಷ್ಟವಾಗಿರುವುದರಿಂದ ಅವುಗಳ ಸಾರವನ್ನು ಉಪನಿಷತ್ತುಗಳ ರೂಪದಲ್ಲಿ ಕೊಟ್ಟಿದ್ದಾರೆ. ಉಪನಿಷತ್ತುಗಳು ಪರಬ್ರಹ್ಮ ಮತ್ತು ದೇವರನ್ನು ವಿವರಿಸುವ ಪ್ರಯತ್ನವನ್ನು ಮಾಡುತ್ತವೆ. ಉಪನಿಷತ್ತುಗಳು ವೇದದಲ್ಲಿ ಉಲ್ಲೇಖವಾಗಿರುವ ಆದೇಶಾತ್ಮಕ ಹೇಳಿಕೆಗಳು ಅಥವಾ ಅಲ್ಲಗಳೆಯುವ ಹೇಳಿಕೆಗಳ ಮೂಲಕವಷ್ಟೇ ಪರಬ್ರಹ್ಮವನ್ನು ವಿವರಿಸುವ ಪ್ರಯತ್ನವನ್ನು ಮಾಡುತ್ತವೆ ಇಲ್ಲದಿದ್ದರೆ ಬ್ರಹ್ಮವನ್ನು ವಿವರಿಸುವ ಎಲ್ಲಾ ಪ್ರಯತ್ನಗಳು ಕೇವಲ ಬೌದ್ಧಿಕ ಕಸರತ್ತಾಗುತ್ತದೆಯಷ್ಟೆ. ಉಪನಿಷತ್ತುಗಳಲ್ಲಿ ಹೇಳಲ್ಪಟ್ಟಿರುವ ಪರಬ್ರಹ್ಮನು ನಿರಾಕಾರನಾಗಿದ್ದು ದಿವ್ಯವಾದ ಶಕ್ತಿಯನ್ನು ಹೊಂದಿದವನಾಗಿದ್ದು ಸಾಮಾನ್ಯ ಮನುಷ್ಯನ ಗ್ರಹಿಕೆಗೆ ಅತೀತನಾಗಿದ್ದಾನೆ. ಆತ್ಮ ಸಾಕ್ಷಾತ್ಕಾರ ತತ್ವದ ಸುತ್ತಲೂ ಈ ಉಪನಿಷತ್ತುಗಳ ಸಾರವು ಸುತ್ತುತ್ತದೆ. ಆತ್ಮಸಾಕ್ಷಾತ್ಕಾರವು ಆಧ್ಯಾತ್ಮಿಕ ಅನ್ವೇಷಣೆಯ ತರ್ಕಬದ್ಧ ನಿರ್ಣಾಯಕ ಹಂತ. ಅದೇ ಬ್ರಹ್ಮನನ್ನು ಅರಿತುಕೊಳ್ಳುವಲ್ಲಿ ಅಂತಿಮ ಹಂತ. ಆಧುನಿಕ ಯುಗದಲ್ಲಿ ಆತ್ಮಸಾಕ್ಷಾತ್ಕಾರವನ್ನು ದೈವ ಸಾಕ್ಷಾತ್ಕಾರ ಅಥವಾ ಕೃಷ್ಣ ಪ್ರಜ್ಞೆಯೆಂದಿದ್ದಾರೆ.

          ಸಹಸ್ರನಾಮವು ವ್ಯಾಸ ವಿರಚಿತ ಬ್ರಹ್ಮಾಂಡಪುರಾಣದಲ್ಲಿ ಸ್ಥಾನವನ್ನು ಪಡೆದಿದ್ದರೂ ಕೂಡಾ ಅದು ಮೂಲತಃ ಲಲಿತಾಂಬಿಕೆಯ ಸಮ್ಮುಖದಲ್ಲಿ ಎಂಟು ’ವಾಚ್ ದೇವಿ’ಗಳು ಅಥವಾ ’ವಾಗ್ದೇವಿ’ಗಳಿಂದ ರಚಿಸಲ್ಪಟ್ಟಿತು (ವಾಚ್ ಎಂದರೆ ಮಾತು, ಧ್ವನಿ, ಭಾಷೆ ಎನ್ನುವ ಅರ್ಥಗಳಿವೆ). ಈ ಸಹಸ್ರನಾಮವು ಜಗದೀಶ್ವರಿಯಾಗಿರುವ ಮತ್ತು ಜಗನ್ಮಾತೆಯೆಂದು ಪ್ರೀತಿಯಿಂದ ಕರೆಯಲ್ಪಡುವ ಲಲಿತಾಂಬಿಕೆಯ ಆದೇಶದ ಮೇರೆಗೆ ಅವಳನ್ನು ಸ್ತುತಿಸಲು ಈ ಸಹಸ್ರನಾಮವು ವಾಗ್ದೇವಿಗಳಿಂದ ರಚಿತವಾಗಿ ಉಚ್ಛರಿಸಲ್ಪಟ್ಟಿತು. ಈ ಎಂಟು ವಾಗ್ದೇವಿಗಳ ಹೆಸರುಗಳು ಈ ರೀತಿ ಇವೆ: ವಾಶಿನಿ, ಕಾಮೇಶ್ವರಿ (ಶಿವನ ಅರ್ಧಾಂಗಿಯಾದ ಕಾಮೇಶ್ವರಿ ಅಲ್ಲ ಎನ್ನುವುದನ್ನು ಗಮನಿಸಿ), ಮೋಧಿನಿ, ವಿಮಲಾ, ಅರುಣಾ, ಜೈನೀ, ಸರ್ವೇಶ್ವರೀ, ಮತ್ತು ಕೌಲಿನೀ. ಶ್ರೀ ಚಕ್ರದ ಏಳನೆಯ ಆವರಣದಲ್ಲಿ (ಕವಚ ಅಥವಾ ಹೊದಿಕೆಯೆಂದೂ ಕೂಡಾ ಆವರಣವನ್ನು ಅರ್ಥೈಸಬಹುದು) ಈ ವಾಗ್ದೇವಿಗಳು ನೆಲಸಿರುತ್ತಾರೆ (ಇವರ ಬಗ್ಗೆ ಹೆಚ್ಚಿನ ವಿವರಣೆಯನ್ನು ನಾಮಾವಳಿ ೯೯೬ರ ಚರ್ಚೆಯಲ್ಲಿ ನೋಡೋಣ) ಮತ್ತು ಇವರ ಮಧ್ಯದಲ್ಲಿ ಲಲಿತಾಂಬಿಕೆಯು ನಿವಸಿಸುತ್ತಾಳೆ. ಶ್ರೀ ಚಕ್ರಕ್ಕೆ ಒಂಭತ್ತು ಆವರಣಗಳಿರುತ್ತವೆ ಮತ್ತು ಅದರ ಪೂಜೆಯನ್ನು ’ನವಾವರಣ ಪೂಜೆ’ಯೆಂದು ಕರೆಯಲಾಗಿದೆ. ಲಲಿತಾಂಬಿಕೆಯು ಈ ವಾಗ್ದೇವಿಗಳಿಗೆ ವಾಚನದ (ಮಾತಿನ) ಕಲೆಯನ್ನು ಪ್ರಸಾದಿಸಿ ಅದನ್ನು ಅವಳ ಭಕ್ತರಿಗೆ ಹಸ್ತಾಂತರಿಸುವಂತೆ ಮಾಡಿದ್ದಾಳೆ. ಸ್ವಯಂ ಲಲಿತಾಂಬಿಕೆಯು ವಾಗ್ದೇವಿಗಳನ್ನು ಅವಳ ಸನಿಹಕ್ಕೆ ಕರೆಸಿಕೊಂಡು ಯಾವ ಸ್ತೋತ್ರಗಳ ವಾಚನದಿಂದ ತನ್ನ ಕೃಪೆಗೆ ಪಾತ್ರರಾಗಬಹುದೋ ಅಂತಹ ಶ್ಲೋಕಗಳನ್ನು ರಚಿಸುವಂತೆ ಅವರಿಗೆ ಆದೇಶಿಸಿದಳು. ಈ ಸ್ತೋತ್ರಗಳು ಲಲಿತಾಂಬಿಕೆಯ ರಾಜಸಭೆಯಲ್ಲಿ ಅಲ್ಲಾಗಲೇ ಆಸೀನರಾಗಿದ್ದ ಸಕಲ ದೇವ-ದೇವತೆಗಳ ಸಮ್ಮುಖದಲ್ಲಿ  ವಾಗ್ದೇವಿಗಳಿಂದ ನುತಿಸಲ್ಪಟ್ಟಿತು.

          ಪೂರ್ವಭಾಗವು ಅಗಸ್ತ್ಯನು ಹಯಗ್ರೀವನನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಮೊದಲಾಗುತ್ತದೆ. ಅಗಸ್ತ್ಯನು ಪುರಾತನ ಕಾಲದ ಮಹಾನ್ ಋಷಿಯಾಗಿದ್ದು ಕುಬ್ಜ ಆಕಾರವನ್ನು ಹೊಂದಿದವನಾಗಿದ್ದ. ಅಮೃತ ತತ್ವ ಸಿದ್ಧಾಂತದ ಪ್ರಕಾರ ಅಗಸ್ತ್ಯನು ಇಂದು ಕೂಡಾ ಜೀವಂತವಾಗಿದ್ದಾನೆಂದು ನಂಬಲಾಗಿದೆ. ಅಗಸ್ತ್ಯನೆಂದರೆ ಪರ್ವತಗಳನ್ನು ಘನವಾಗಿಸಿದವನು ಅಥವಾ ಗಟ್ಟಿಗೊಳಿಸಿದವನು ಎಂದು ಅರ್ಥ. ಪರ್ವತನಾದ ವಿಂಧ್ಯನು ನಿರಂತರವಾಗಿ ಬೆಳೆಯುತ್ತಲೇ ಇದ್ದನಂತೆ, ಆಗ ಅವನ ಬೆಳವಣಿಗೆಯನ್ನು ಅಗಸ್ತ್ಯನು ಕುಂಠಿತಗೊಳಿಸಿದನಂತೆ. ಅಗಸ್ತ್ಯನು ಮಡಕೆಯೊಂದರಲ್ಲಿ ಜನ್ಮ ತೆಳೆದನೆಂದೂ ಕೂಡಾ ಹೇಳುತ್ತಾರೆ. ಅಗಸ್ತ್ಯನು ಹನ್ನೆರಡು ಪ್ರಸಿದ್ಧ ’ಶ್ರೀ ವಿದ್ಯಾ’ ಆರಾಧಕರಲ್ಲೊಬ್ಬನು. ಹಯಗ್ರೀವನು ಕುದುರೆಯ ಮುಖವುಳ್ಳವನಾಗಿದ್ದು ಮಹಾವಿಷ್ಣುವಿನ ಅವತಾರಗಳಲ್ಲೊಂದು. ಹಯಗ್ರೀವನು ತನ್ನ ಅತ್ಯುನ್ನತ ಜ್ಞಾನ ಮತ್ತು ಶಾಸ್ತ್ರ ನಿಯಮಗಳಿಗೆ (ಧಾರ್ಮಿಕ ಕಟ್ಟಳೆಗಳಿಗೆ) ಪ್ರಸಿದ್ಧನಾಗಿದ್ದಾನೆ.     

         ಬೃಹದಾರಣ್ಯಕ ಉಪನಿಷತ್ತಿನ (೨ನೇ ಭಾಗದ ೪ನೇ ಪರಿಚ್ಛೇದದಲ್ಲಿ) ಕುದುರೆಯ ಶಿರವನ್ನು ಹೊಂದಿದ ವಿದ್ವಾಂಸನೊಬ್ಬನ ಕಥೆಯೊಂದಿದೆ. ಅಥರ್ವಣ ವೇದದಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಹೊಂದಿದ್ದ ದಧ್ಯಕನೆಂಬ ಋಷಿಯೊಬ್ಬನು ದೇವೇಂದ್ರನಿಗೆ ಮಧುವಿದ್ಯೆಯನ್ನು ಹೇಳಿಕೊಟ್ಟನಂತೆ. ಇಂದ್ರನು ಈ ಮಧುವಿದ್ಯೆಯನ್ನು ತನಗೆ ಕಲಿಸಿದ ಮೇಲೆ ಅದನ್ನು ಬೇರೆ ಯಾರಿಗೂ ಹೇಳಿಕೊಡಬಾರದೆಂದು ದಧ್ಯಕನಿಗೆ ಆದೇಶಿಸಿದನಂತೆ. ಹಾಗೊಂದು ವೇಳೆ ಅವನು ಹಾಗೆ ಮಾಡಿದ್ದೇ ಆದರೆ ಅವನ ಶಿರವನ್ನು ತುಂಡರಿಸುವುದಾಗಿ ಇಂದ್ರನು ದಧ್ಯಕನನ್ನು ಎಚ್ಚರಿಸುತ್ತಾನೆ. ಅದೇಕೋ ಅಶ್ವಿನೀ ದೇವತೆಗಳಿಗೆ ಈ ಮಧು ವಿದ್ಯೆಯನ್ನು ಕಲಿಯಬೇಕೆಂಬ ಬಯಕೆಯುಂಟಾಯಿತು. ಅವರು ದಧ್ಯಕನಿಗೆ ಮೊದಲು ಅವನ ತಲೆಯ ಜಾಗದಲ್ಲಿ ಕುದುರೆಯ ಶಿರವನ್ನು ಇರಿಸುವುದಾಗಿ ಹೇಳುತ್ತಾರೆ ಮತ್ತು ಅದರ ಮೂಲಕ ಅವರಿಗೆ ಮಧುವಿದ್ಯೆಯನ್ನು ಕಲಿಸಿಕೊಡಲು ಹೇಳುತ್ತಾರೆ. ಒಮ್ಮೆ ಅದನ್ನು ಕಲಿತುಕೊಂಡ ಮೇಲೆ ಇಂದ್ರನು ದಧ್ಯಕನ ತಲೆಯನ್ನೇನಾದರೂ ಕತ್ತರಿಸಿದರೆ ಆಗ ಅವನು ಕುದುರೆಯ ತಲೆಯನ್ನು ಮಾತ್ರ ಕಳೆದುಕೊಳ್ಳುತ್ತಾನೆ; ಒಂದು ವೇಳೆ ಹಾಗಾದರೆ ಅಶ್ವಿನೀ ದೇವತೆಗಳು ಅವನ ನಿಜವಾದ ತಲೆಯನ್ನು ಮತ್ತೆ ಜೋಡಿಸುವುದಾಗಿ ತಿಳಿಸುತ್ತಾರೆ. ಈ ಯೋಜನೆಯಂತೆಯೇ ಅಶ್ವಿನೀ ದೇವತೆಗಳು ದಧ್ಯಕನಿಂದ ಮಧುವಿದ್ಯೆಯನ್ನು ಕಲಿತುಕೊಂಡರಂತೆ. ಬೃಹದಾರಣ್ಯಕ ಉಪನಿಷತ್ತಿನ (೫ನೇ ಭಾಗದ ೫ನೇ ಅಧ್ಯಾಯದ ೧೬ನೇ ಪರಿಚ್ಛೇದವು) ಪ್ರಯದೀಮುವಾಚ ಎಂದು ಕೊನೆಗೊಳ್ಳುತ್ತದೆ. ಇದರಲ್ಲಿ ಕಾಮಕಲಾ ಬೀಜ ’ಞ್’ ಎನ್ನುವುದನ್ನು ಗುಪ್ತವಾಗಿರಿಸಿಲಾಗಿದೆ. ’ಕಾಮಕಲಾ’ದ ಬಗ್ಗೆ ಲಲಿತಾ ಸಹಸ್ರನಾಮದ ನಾಮಾವಳಿ ೩೨೨ರ ಚರ್ಚೆಯಲ್ಲಿ ನೋಡಬಹುದು. ಈ ’ಞ್’ ಅನ್ನು ’ಶ್ರೀ ವಿದ್ಯಾ’ ಉಪಾಸನೆಯಲ್ಲಿ ಬಹಳ ಮಹತ್ವದ್ದಾಗಿ ಪರಿಗಣಿಸಲಾಗಿದೆ. ಆದರೆ ಈ ಮಧುವಿದ್ಯೆಯನ್ನು ಕಲಿಸಿಕೊಟ್ಟ ಋಷಿಯು ವಿಷ್ಣುವಿನ ಅವತಾರವಲ್ಲ. ಆದರೆ ವಿಷ್ಣುವಿನ ಅವತಾರವಾದ ಹಯಗ್ರೀವನು ಲಲಿತಾ ಸಹಸ್ರನಾಮದ ಮೂಲಕ ಅಗಸ್ತ್ಯನಿಗೆ ಶ್ರೀ ವಿದ್ಯಾ ಆರಾಧನೆಯ ದೀಕ್ಷೆಯನ್ನು ಕೊಟ್ಟನು.

        ದೇವೀ ಭಾಗವತದ ಮೊದಲನೇ ಭಾಗದ ಐದನೇ ಅಧ್ಯಾಯದಲ್ಲಿ ಈ ಕೆಳಗಿನ ಕತೆಯನ್ನು ನೋಡಬಹುದು. ರಾಕ್ಷಸರೊಂದಿಗಿನ ಯುದ್ಧವೊಂದರಲ್ಲಿ ಮಹಾವಿಷ್ಣುವು ಬಹಳ ಆಯಾಸಗೊಂಡಿದ್ದ. ಅವನು ಪದ್ಮಾಸನದಲ್ಲಿ ಕುಳಿತುಕೊಂಡು ಧನುಸ್ಸಿನ ಒಂದು ಭಾಗವನ್ನು ಗಟ್ಟಿಯಾಗಿ ನೆಲದ ಮೇಲೆ ಊರಿ ಮತ್ತೊಂದು ತುದಿಯ ಮೇಲೆ ತನ್ನ ತಲೆಯನ್ನು ಇಟ್ಟು ವಿಶ್ರಮಿಸಿಕೊಳ್ಳುತ್ತಿದ್ದನು.  ದೇವತೆಗಳ ರಾಜನಾದ ಇಂದ್ರ ಮತ್ತು ಇತರ ದೇವತೆಗಳು ಯಜ್ಞವೊಂದನ್ನು ಮಾಡಲು ಬಯಸಿ ಅದಕ್ಕಾಗಿ ಸರ್ವ ಯಜ್ಞಗಳ ಅಧಿಪತಿಯಾಗಿರುವ ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ವಿಷ್ಣುವಿನ ಆವಾಸಸ್ಥಾನವಾಗಿರುವ ವೈಕುಂಠಕ್ಕೆ ಹೋದರು. ಆದರೆ ಅವನನ್ನು ಅಲ್ಲಿ ಕಾಣದೆ ಅವರು ಬೇರೆಡೆಯಲ್ಲಿ ಮಹಾವಿಷ್ಣುವು ವಿಶ್ರಮಿಸುತ್ತಿದ್ದ ಜಾಗಕ್ಕೆ ಬಂದು ಸೇರಿದರು. ಮಹಾವಿಷ್ಣುವು ಎಚ್ಚರಗೊಳ್ಳುವವರೆಗೆ ಕಾಯಲು ಅವರು ನಿರ್ಧರಿಸಿದರು. ಆದರೆ ಯಜ್ಞವು ತ್ವರಿತವಾಗಿ ಮಾಡಬೇಕಾದ್ದರಿಂದ ಅವರು ಹೆಚ್ಚು ಹೊತ್ತು ಕಾಯಲು ಇಚ್ಛೆಪಡದೆ ಗೆದ್ದಲು ಹುಳುಗಳಿಗೆ ಬಿಲ್ಲಿನ ಹುರಿಯನ್ನು ಕಡಿಯುವಂತೆ ಹೇಳಿದರು. ಗಟ್ಟಿಯಾಗಿ ಕಟ್ಟಲ್ಪಟ್ಟಿದ್ದ ಆ ಹುರಿಯು ಭಾರೀ ವೇಗದೊಂದಿಗೆ ತುಂಡರಿಸಲ್ಪಟ್ಟು ಆ ರಭಸಕ್ಕೆ ವಿಷ್ಣುವಿನ ತಲೆಯು ಛೇದಿಸಲ್ಪಟ್ಟಿತು. ಆಗ ಸಕಲ ದೇವಾನು ದೇವತೆಗಳು ಮಹಾವಿಷ್ಣುವಿನ ತಲೆಗಾಗಿ ಹುಡುಕಾಡಿದರು ಆದರೆ ಅದು ಅವರಿಗೆ ಎಲ್ಲಿಯೂ ದೊರೆಯಲಿಲ್ಲ. ಆಗ ಅವರೆಲ್ಲಾ ಲಲಿತಾಂಬಿಕೆಯನ್ನು ಪ್ರಾರ್ಥಿಸಿದಾಗ ಆಕೆಯು ಅವರಿಗೆ ಕುದುರೆಯ ತಲೆಯೊಂದನ್ನು ತಂದು ವಿಷ್ಣುವಿನ ದೇಹಕ್ಕೆ ಜೋಡಿಸಲು ಹೇಳಿದಳು. ಆಗ ವಿಷ್ಣುವು ಹಯಗ್ರೀವನೆಂದು ಹೆಸರಾದನು. ಆಗ ಲಲಿತಾಂಬಿಕೆಯಿಂದ ಶ್ರೀ ವಿಷ್ಣುವು ’ಶ್ರೀ ವಿದ್ಯಾ’ ದೀಕ್ಷೆಯನ್ನು ಪಡೆದನು. ವಿಷ್ಣುವಿನ ಈ ಅವತಾರವು ಅತ್ಯುನ್ನತ ವಿವೇಕ ಅಥವಾ ಜ್ಞಾನಕ್ಕೆ ಪ್ರಸಿದ್ಧಿಯಾಗಿದೆ. ಈ ಕಥೆಯ ಆಧಾರದ ಮೇಲೆ ಜ್ಜಾನವನ್ನು ಪಡೆಯಲು ಹಯಗ್ರೀವನ ಪೂಜೆಯನ್ನು ಕೈಗೊಳ್ಳುತ್ತಾರೆ. ತದನಂತರ ಹಯಗ್ರೀವನು ಅಗಸ್ತ್ಯನಿಗೆ ’ಶ್ರೀ ವಿದ್ಯಾ’ ಪದ್ಧತಿಯ ದೀಕ್ಷೆಯನ್ನು ಕೊಟ್ಟನು. (ಪರಿಚಯ ವಿಭಾಗದಲ್ಲಿ ಮತ್ತು ಇಲ್ಲಿ ಹೇಳಿರುವ ಸಾಂಧರ್ಬಿಕ ವ್ಯತ್ಯಾಸಗಳನ್ನು ಗಮನಿಸಿ).

        ಹಯಗ್ರೀವನು ಅಗಸ್ತ್ಯನಿಗೆ ಲಲಿತಾಂಬಿಕೆಯ ಕುರಿತು ಎಲ್ಲಾ ವಿವರಗಳನ್ನು ತಿಳಿಸಿಕೊಟ್ಟ; ಅವೆಂದರೆ ಶ್ರೀಪುರವೆಂದು ಕರೆಯಲ್ಪಡುವ ಅವಳ ನಿವಾಸಸ್ಥಾನ, ಪಂಚದಶೀ ಮಂತ್ರ, ಜಪ ಮತ್ತು ಪೂಜಾ ಪದ್ಧತಿಗಳು, ಒಳಗಿನ ಯಜ್ಞ (ಅಂತರ್ಯಜ್ಞ) ಮತ್ತು  ಶಾಸ್ತ್ರ ವಿಧಿತ ಯಜ್ಞ. ಶ್ರೀ ವಿದ್ಯಾ ಉಪಾಸನೆಯಲ್ಲಿ ಶ್ರೀ ಚಕ್ರ, ಶ್ರೀ ಗುರು, ಶ್ರೀ ವಿದ್ಯಾ, ಶ್ರೀ ದೇವಿ (ಲಲಿತಾಂಬಿಕೆ) ಮತ್ತು ಸ್ವಯಂ ತಾನು (ಆತ್ಮ) ಎಲ್ಲವೂ ಒಂದೇ ಎಂದು ಗ್ರಹಿಸುವುದು ಅತ್ಯಂತ ಮುಖ್ಯವಾಗಿದೆ. ಹಯಗ್ರೀವನು ಮೊದಲು ಲಲಿತಾಂಬಿಕೆಯ ಇಬ್ಬರು ಮಂತ್ರಾಲೋಚಕರಾದ ’ಮಂತ್ರಿಣಿ’ (ರಾಜ ಶ್ಯಾಮಲ) ಮತ್ತು ’ದಂಡಿನೀ’ (ವಾರಾಹೀ) ಇವರಿಬ್ಬರ ಸಹಸ್ರನಾಮಗಳನ್ನು ತಿಳಿಸಿಕೊಡುತ್ತಾನೆ. ಲಲಿತಾ ಸಹಸ್ರನಾಮದಲ್ಲಿ ಈ ಇಬ್ಬರೂ ದೇವತೆಗಳ ಪ್ರಸ್ತಾವನೆಯೂ ಇದೆ. ಅಗಸ್ತ್ಯನು ಮತ್ತೆ ಹಯಗ್ರೀವನನ್ನು ತನಗೆ ಲಲಿತಾಂಬಿಕೆಯ ಸಹಸ್ರನಾಮವನ್ನು ಏಕೆ ಕಲಿಸಿಕೊಡಲಿಲ್ಲವೆಂದು ಕೇಳಿ ತಾನು ಅದನ್ನು ತಿಳಿಯಲು ಅರ್ಹನಾಗಿದ್ದೇನೋ ಇಲ್ಲವೋ ಎಂದು ಪುನಃ ಪ್ರಶ್ನಿಸುತ್ತಾನೆ. ಆಗ ಲಲಿತಾಂಬಿಕೆಯ ಪ್ರಸಿದ್ಧ ಅನುಯಾಯಿಯಾದ ಈ ಅಗಸ್ತ್ಯನನ್ನು ಹಯಗ್ರೀವನು ಲೋಪಾಮುದ್ರಾಪತಿಯೇ ಎಂದು ಸಂಭೋದಿಸುತ್ತಾ, ಶ್ರೀ ವಿದ್ಯೆಯು ಬಹಳ ರಹಸ್ಯಾತ್ಮಕವಾದುದರಿಂದ ಅದನ್ನು ಕೇಳದ (ಅಪೇಕ್ಷಿಸದ) ಹೊರತೂ ಯಾರಿಗೂ ಅದನ್ನು ಉಪದೇಶಿಸಬಾರದೆಂದು ತಿಳಿಸುತ್ತಾನೆ. ಈಗ ಅಗಸ್ತ್ಯನು ಅದನ್ನು ತಿಳಿಯ ಬಯಸಿದ್ದರಿಂದ ಹಯಗ್ರೀವನು ಅದನ್ನು ಅವನಿಗೆ ಉಪದೇಶಿಸಲು ಒಪ್ಪಿಕೊಳ್ಳುತ್ತಾನೆ. ಹಯಗ್ರೀವನು ಮುಂದುವರೆದು ಸಹಸ್ರನಾಮವನ್ನು ತಿಳಿದುಕೊಳ್ಳಲು ಅಪೇಕ್ಷೆ ಪಡುವವರ ಅರ್ಹತೆಗಳೇನಿರಬೇಕೆಂದು ಅಗಸ್ತ್ಯನಿಗೆ ತಿಳಿಸುತ್ತಾನೆ. ಮೊದಲನೆಯದಾಗಿ ಶ್ರೀ ಮಾತೆಯಲ್ಲಿ ದೃಢವಾದ ನಂಬಿಕೆಯಿರಬೇಕು. ಎರಡನೆಯದಾಗಿ ಒಬ್ಬನು ಜ್ಞಾನಿಯಾದ ಗುರುವಿನ ಮೂಲಕ ಪಂಚದಶೀ ಮಂತ್ರದ ಉಪದೇಶವನ್ನು ಹೊಂದಿರಬೇಕು. ಸಾಧಕನಿಗೆ ಶ್ರದ್ಧೆ ಮತ್ತು ತಾಳ್ಮೆಗಳಿರಬೇಕು. ಅವನಿಗೆ ಯಾವುದೇ ದುಃಶ್ಚಟಗಳಿರಬಾರದು ಮತ್ತು ಅವನು ಪರಿಶುದ್ಧನಾಗಿರಬೇಕು. ಅವುಗಳಿಗೆ ಕಾರಣಗಳನ್ನೂ ವಿಶದಪಡಿಸಲಾಗಿದೆ.

         ತಂತ್ರಶಾಸ್ತ್ರದಲ್ಲಿ ತಿಳಿಸಿರುವ ವಿಧಿ-ವಿಧಾನಗಳನ್ನು ಅನುಸರಿಸಿದರೆ ಕ್ಷಿಪ್ರ ಫಲವುಂಟಾಗುವುದೆಂದು ಹೇಳಲ್ಪಟ್ಟಿದೆ. ಪ್ರತ್ಯೇಕವಾಗಿ ಲಲಿತಾ ಸಹಸ್ರನಾಮವು ಅತ್ಯುತ್ತಮವಾದದ್ದೆಂದು ಪರಿಗಣಿಸಲ್ಪಟ್ಟಿದೆ. ಅವಳ ವಿವಿಧ ರೂಪಗಳನ್ನು ಸ್ತುತಿಸಲು ಹತ್ತು ಸಹಸ್ರನಾಮಗಳು ಪ್ರಚಲಿತದಲ್ಲಿವೆ. ಅವುಗಳೆಂದರೆ ಗಂಗಾ, ಗಾಯತ್ರೀ, ಶ್ಯಾಮಲಾ, ಲಕ್ಷ್ಮೀ, ಕಾಳಿ, ಬಾಲಾ, ಮತ್ತು ಲಲಿತಾ (ಈಗ ಪ್ರಸ್ತಾಪಿಸಿರುವುದು), ರಾಜರಾಜೇಶ್ವರೀ, ಸರಸ್ವತೀ, ಮತ್ತು ಭವಾನೀ. ಮಂತ್ರ ಶಬ್ದವನ್ನು ಪುಂ ದೇವರುಗಳನ್ನು ಆರಾಧಿಸುವಾಗ ಬಳಸಿದರೆ ವಿದ್ಯಾ ಎನ್ನುವ ಶಬ್ದವನ್ನು ಸ್ತ್ರೀ ದೇವರುಗಳನ್ನು (ದೇವಿಯರನ್ನು) ಆರಾಧಿಸುವಾಗ ಬಳಸುತ್ತಾರೆ. ಅದರೆ ಶ್ರೀ ವಿದ್ಯಾ ಉಪಾಸನೆಯಲ್ಲಿ ಮಂತ್ರದ ಅಂಶಗಳು ಮತ್ತು ’ವಿದ್ಯಾ’ ಇವೆರಡರ ಅಂಶಗಳೂ ಇದ್ದು ಅದು ಶಿವ-ಶಕ್ತಿಯರ ಐಕ್ಯತೆಯ ಮಹತ್ವವನ್ನು ಒತ್ತಿ ಹೇಳುತ್ತದೆ. ಪಂಚದಶೀ ಮಂತ್ರದ ವಿಷಯಕ್ಕೆ ಬಂದರೆ ಅವುಗಳಲ್ಲಿ ಹನ್ನೆರಡು ರೀತಿಯ ಪಂಚದಶೀ ಮಂತ್ರಗಳಿದ್ದು ಅವುಗಳಲ್ಲಿ ಜನಪ್ರಿಯವಾಗಿರುವುದು ’ಕಾದಿ ವಿದ್ಯಾ’ ಮತ್ತು ಇದನ್ನು ’ಪರಾ ವಿದ್ಯಾ’ ಎಂದೂ ಕರೆಯುತ್ತಾರೆ. ಪಂಚದಶೀ ಮಂತ್ರವು ಮೇಲ್ನೋಟಕ್ಕೆ ಕೇವಲ ಹದಿನೈದು ಬೀಜಾಕ್ಷರಗಳಿಂದ ಕೂಡಿದೆ ಎಂದು ಕಂಡುಬಂದರೂ ವಾಸ್ತವವಾಗಿ ಅದರಲ್ಲಿ ೩೭ ಅಕ್ಷರಗಳಿವೆ.  ಇದರಲ್ಲಿ ೧೫ ಸ್ವರಾಕ್ಷರಗಳು, ೧೬ ವ್ಯಂಜನಾಕ್ಷರಗಳು, ಮೂರು ಬಿಂದುಗಳು ಮತ್ತು ಮೂರು ನಾದಾಗಳು ಒಟ್ಟು ೩೭ ಅಕ್ಷರಗಳಿವೆ (ವರಿವಶ್ಯಾ ರಹಸ್ಯ ೨.೨೭). ಈ ಮೂವತ್ತೇಳು ಅಕ್ಷರಗಳು ಮೂವತ್ತಾರು ತತ್ವಗಳನ್ನು ಪ್ರತಿನಿಧಿಸಿದರೆ ಮೂವತ್ತೇನಳನೆಯದು ಪರಬ್ರಹ್ಮ ತತ್ವವನ್ನು ಪ್ರತಿನಿಧಿಸುವ ’ಅ’ (अ) ಬೀಜಾಕ್ಷರವಾಗಿದೆ.

        ಲಲಿತಾ ತ್ರಿಶತಿಯು ಸಂಪೂರ್ಣವಾಗಿ ಪಂಚದಶೀ ಮಂತ್ರದ ಮೇಲೆಯೇ ಆಧಾರಿತವಾಗಿದೆ. ತ್ರಿಶತಿ ಮಂತ್ರಗಳ ಮೂಲಕ ಪೂಜಿಸಿದ ನಂತರ ಯಾವುದೇ ವಿಧವಾದ ಅರ್ಚನೆ ಅಥವಾ ಇತರೇ ಪೂಜೆಗಳನ್ನು ಮಾಡದೇ ಕೇವಲ ನೈವೇದ್ಯ ಮತ್ತು ಆರತಿಯನ್ನು ಮಾಡುವ ಮೂಲಕ ಅದನ್ನು ಮುಗಿಸಬೇಕು. ಲಲಿತಾ ಸಹಸ್ರನಾಮವನ್ನು ಧ್ವನಿಯ ಮೂಲಕ ಹೇಳುವುದಾಗಲಿ ಅಥವಾ ಮಾನಸಿಕವಾಗಿ ಹೇಳಿಕೊಳ್ಳುತ್ತಾ ಕಮಲ, ತುಳಸಿ, ಬಿಲ್ವ ಮೊದಲಾದ ಪುಷ್ಪಗಳಿಂದ ಅರ್ಚಿಸಿದರೆ ಲಲಿತಾಂಬಿಕೆಯು ಅತ್ಯಂತ ಸಂತುಷ್ಟಳಾಗುತ್ತಾಳೆ. ನಿತ್ಯಾನುಷ್ಠಾನ ಪದ್ಧತಿಯಲ್ಲಿ ಮೊದಲು ಶ್ರೀ ಚಕ್ರದ ಪೂಜೆಯನ್ನು ಮಾಡಬೇಕು, ಅದರ ನಂತರ ಪಂಚದಶೀ ಮಂತ್ರವನ್ನು ಜಪಿಸಬೇಕು ಮತ್ತು ಅಂತಿಮವಾಗಿ ಲಲಿತಾಸಹಸ್ರನಾಮವನ್ನು ಹೇಳಬೇಕು. ಒಂದು ವೇಳೆ ಯಾವುದೋ ಕಾರಣದಿಂದಾಗಿ ಈ ಮೂರನ್ನು ಕೈಗೊಳ್ಳಲು ಅಶಕ್ತರಾದರೆ ಸಹಸ್ರನಾಮೋಚ್ಛಾರಣೆಯನ್ನು ಮಾತ್ರ ತಪ್ಪಿಸಬಾರದು. ಇದರೊಂದಿಗೆ ಯಾವುದೇ ರೀತಿಯ ಹೆಚ್ಚಿನ ಸ್ತೋತ್ರಗಳನ್ನು ಹೇಳಿದರೂ ಕೂಡಾ ಖಂಡಿತವಾಗಿ ಹೆಚ್ಚಿನ ಪುಣ್ಯವು ಲಭಿಸುತ್ತದೆ, ಆದರೆ ಸಹಸ್ರನಾಮವನ್ನು ಹೇಳದೇ ಬಿಟ್ಟರೆ ಅದು ಪಾಪವೆಂದು ಪರಿಗಣಿಸಲ್ಪಡುತ್ತದೆ. ಸ್ವಯಂ ಲಲಿತಾಂಬಿಕೆಯೇ ಯಾರಾದರೂ ತಮ್ಮ ಜೀವಿತ ಕಾಲದಲ್ಲಿ ಒಂದೇ ಒಂದು ಬಾರಿ ಲಲಿತಾ ಸಹಸ್ರನಾಮವನ್ನು ಹೇಳಿದರೂ ಕೂಡಾ ಅವರ ಎಲ್ಲಾ ಬಯಕೆಗಳನ್ನು ಪೂರೈಸುವುದಾಗಿ ವಾಗ್ದಾನವಿತ್ತಿದ್ದಾಳೆ. ಈಗ ಹಯಗ್ರೀವನು ಅಗಸ್ತ್ಯನಿಗೆ ಉಪದೇಶಿಸಲು ಲಲಿತಾ ಸಹಸ್ರನಾಮವನ್ನು ಹೇಳಲು ಉಪಕ್ರಮಿಸುತ್ತಾನೆ.

 

******
ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ .LALITA SAHASRANAMA - PURVA BHAG http://www.manblunder.com/2012/06/lalita-sahasranama-purva-bhag.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ
 
Rating
Average: 5 (1 vote)

Comments

Submitted by makara Mon, 05/06/2013 - 08:38

ಈ ಲೇಖನದ ಆರನೇ ಪಂಕ್ತಿಯಲ್ಲಿ, ಪ್ರಕಟವಾಗಿರುವ, ...........ಬೃಹದಾರಣ್ಯಕ ಉಪನಿಷತ್ತಿನ (೫ನೇ ಭಾಗದ ೫ನೇ ಅಧ್ಯಾಯದ ೧೬ನೇ ಪರಿಚ್ಛೇದವು) ಪ್ರಯದೀಮುವಾಚ ಎಂದು ಕೊನೆಗೊಳ್ಳುತ್ತದೆ. ಇದರಲ್ಲಿ ಕಾಮಕಲಾ ಬೀಜ ’ಞ’ ಎನ್ನುವುದನ್ನು ಗುಪ್ತವಾಗಿರಿಸಿಲಾಗಿದೆ. ’ಕಾಮಕಲಾ’ದ ಬಗ್ಗೆ ಲಲಿತಾ ಸಹಸ್ರನಾಮದ ನಾಮಾವಳಿ ೩೨೨ರ ಚರ್ಚೆಯಲ್ಲಿ ನೋಡಬಹುದು. ಈ ’ಞ’ ಅನ್ನು ’ಶ್ರೀ ವಿದ್ಯಾ’ ಉಪಾಸನೆಯಲ್ಲಿ ಬಹಳ ಮಹತ್ವದ್ದಾಗಿ ಪರಿಗಣಿಸಲಾಗಿದೆ --ತಪ್ಪು.

.............ಬೃಹದಾರಣ್ಯಕ ಉಪನಿಷತ್ತಿನ (೫ನೇ ಭಾಗದ ೫ನೇ ಅಧ್ಯಾಯದ ೧೬ನೇ ಪರಿಚ್ಛೇದವು) ಪ್ರಯದೀಮುವಾಚ ಎಂದು ಕೊನೆಗೊಳ್ಳುತ್ತದೆ. ಇದರಲ್ಲಿ ಕಾಮಕಲಾ ಬೀಜ ईं (ಈಂ) ಎನ್ನುವುದನ್ನು ಗುಪ್ತವಾಗಿರಿಸಿಲಾಗಿದೆ. ’ಕಾಮಕಲಾ’ದ ಬಗ್ಗೆ ಲಲಿತಾ ಸಹಸ್ರನಾಮದ ನಾಮಾವಳಿ ೩೨೨ರ ಚರ್ಚೆಯಲ್ಲಿ ನೋಡಬಹುದು. ಈ ईं (ಈಂ) ಅನ್ನು ’ಶ್ರೀ ವಿದ್ಯಾ’ ಉಪಾಸನೆಯಲ್ಲಿ ಬಹಳ ಮಹತ್ವದ್ದಾಗಿ ಪರಿಗಣಿಸಲಾಗಿದೆ --ಒಪ್ಪು.

ಈ ಲೇಖನದ ಆರನೇ ಪಂಕ್ತಿಯಲ್ಲಿ, ಪ್ರಕಟವಾಗಿರುವ, ...........ಇದರಲ್ಲಿ ೧೫ ಸ್ವರಾಕ್ಷರಗಳು, ೧೬ ವ್ಯಂಜನಾಕ್ಷರಗಳು, ಮೂರು ಬಿಂದುಗಳು ಮತ್ತು ಮೂರು ನಾದಾಗಳು ಒಟ್ಟು ೩೭ ಅಕ್ಷರಗಳಿವೆ (ವರಿವಶ್ಯಾ ರಹಸ್ಯ ೨.೨೭)...ಇಲ್ಲಿರುವ ನಾದಾಗಳು..ತಪ್ಪು; ನಾದಗಳು --ಒಪ್ಪು