DLI ಪುಸ್ತಕನಿಧಿ: ಗಳಗನಾಥರ 'ನಳಚರಿತ್ರೆ' ಮತ್ತು ಕಲಿಬಾಧೆ!
ಭಾರತ ಸರಕಾರದ Digital liabrary of India ತಾಣ ( ಸದ್ಯಕ್ಕೆ http://202.41.82.144/) ದಲ್ಲಿ ಅನೇಕ ಪುಸ್ತಕಗಳು ಓದಲು ಲಭ್ಯ ಇರುವುದೂ ಅವನ್ನು PDF ರೂಪದಲ್ಲಿ ಪರಿವರ್ತಿಸಿಕೊಳ್ಳುವ ಬಗ್ಗೆ ಈಗಾಗಲೇ ನಾನು ಬರೆದಿರುವುದೂ ನಿಮಗೆ ಗೊತ್ತಿರಬಹುದು. . ಇಲ್ಲಿ ಇಂಗ್ಲೀಷಿನ ಎರಡು ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ಕನ್ನಡದ ಪುಸ್ತಕಗಳು ಹಿಂದೊಮ್ಮೆ ೨೫ ಸಾವಿರಕ್ಕೂ ಹೆಚ್ಚು ಇದ್ದವು ಈಗ ಏಕೋ ಮೂರು ಸಾವಿರದಷ್ಟೇ ಇವೆ. ಅದರಲ್ಲಿ ವೇದಾಂತ, ಧಾರ್ಮಿಕ ಪುಸ್ತಕ,ಹಳೆಗನ್ನಡ ಕಾವ್ಯ ಬಿಟ್ಟರೆ ಸುಮಾರು ಎರಡು ಸಾವಿರ ಪುಸ್ತಕ ಸಾಮಾನ್ಯ ಓದುಗನು ಓದಬಲ್ಲವು ಆಗಿವೆ.
ಇತ್ತೀಚೆಗೆ ಗಳಗನಾಥರು ಬರೆದ "ಕಲಿಬಾಧಾ ನಿವಾರಕ ಸರಹಸ್ಯ ನಳ ಚರಿತ್ರೆ' ಎಂಬ ಪುಸ್ತಕವನ್ನು ಅಲ್ಲಿ ನೋಡಿದೆ. ನಳ ದಮಯಂತಿಯರ ಕಥೆ ಇದರ ಪ್ರಮುಖ ಭಾಗ. ಇದು ಮಹಾಭಾರತದ ವನಪರ್ವದೊಳಗೆ ಬರುತ್ತದೆ. ಕತೆಯನ್ನು ಚಿಕ್ಕಂದಿನಲ್ಲಿ ಅಮರ ಚಿತ್ರ ಕಥೆಯಲ್ಲಿ ಓದಿದ್ದೆನಷ್ಟೇ. ಇಲ್ಲಿಯ ಕತೆಯೂ ತುಂಬ ಚೆನ್ನಾಗಿದೆ.
ನಳ ದಮಯಂತಿಯರು ಇಬ್ಬರೂ ಸುಂದರರು, ಸರ್ವಗುಣಸಂಪನ್ನರು. ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಇಂದ್ರ , ವರುಣ,ಅಗ್ನಿ ಮುಂತಾದ ದೇವತೆಗಳೂ ಆಕೆಯನ್ನು ಮದುವೆಯಾಗ ಬಯಸಿದರೂ , ಆ ದೇವತೆಗಳನ್ನು ಒಲ್ಲದೆ, ಅವರ ಅನುಮತಿ ಪಡೆದೇ ನಳನನ್ನು ಸ್ವಯಂವರದಲ್ಲಿ ಆಯ್ದುಕೊಳ್ಳುತ್ತಾಳೆ ದಮಯಂತಿ . ಎಲ್ಲ ದೇವತೆಗಳ ಉಪಸ್ಥಿತಿಯಲ್ಲಿ ಅವರ ಮದುವೆ ಆಗುತ್ತದೆ.
ಮದುವೆ ಮುಗಿದು ದೇವತೆಗಳು ಮರಳಿ ಹೋಗುವಾಗ ಅವರಿಗೆ ಕಲಿಯು ಸಿಗುತ್ತಾನೆ. ಅವನು ದಮಯಂತಿಯನ್ನು ಮದುವೆಯಾಗ ಬಯಸಿ ಸ್ವಯಂವರಕ್ಕೆ ಹೊರಟಿದ್ದ ! ಆಗಲೇ ಮದುವೆ ಮುಗಿದು ಹೋದದ್ದು ತಿಳಿದು , ನಳನ ಮೇಲೆ ಸಿಟ್ಟು ಬಂದು ಸಮಯ ಸಾಧಿಸುತ್ತಾನೆ. ಯಾವತ್ತೋ ಒಂದು ದಿನ ಅವನು ಕಾಲಿನ ಹಿಮ್ಮಡಿಯನ್ನು ತೊಳೆದುಕೊಳ್ಳದೇ ಇದ್ದ ಕಾರಣ ( ಹೌದು , ಅದಕ್ಕೇ ಕಾಲನ್ನು ಸರಿಯಾಗಿ ತೊಳೆದುಕೊಳ್ಳಬೇಕೆಂದು ಹಿರಿಯರು ಹೇಳುತ್ತಿದ್ದರು ) ಕಲಿಯು ಅವನನ್ನು ಪ್ರವೇಶ ಮಾಡುತ್ತಾನೆ.
ಅವನನ್ನು ಜೂಜಿಗೆ ಪ್ರೇರೇಪಿಸಿ , ಇಡೀ ರಾಜ್ಯವನ್ನು, ಎಲ್ಲ ಸಂಪತ್ತನ್ನು ಪಣಕ್ಕಿಟ್ಟು ಸೋಲುವಂತೆ ಮಾಡುತ್ತಾನೆ. ನಳ ಉಟ್ಟ ಬಟ್ಟೆಯ ಮೇಲೆ ಅರಣ್ಯಕ್ಕೆ ತೆರಳುತ್ತಾನೆ. ದಮಯಂತಿ ಅವನನ್ನು ಹಿಂಬಾಲಿಸುತ್ತಾಳೆ.ನೀನೊಬ್ಬಳೇ ತವರು ಮನೆಗೆ ಹೋಗೆಂದರೆ ಅವನ ಮೇಲಿನ ಪ್ರೇಮದಿಂದ ಅವನನ್ನು ಬಿಟ್ಟು ಹೋಗಳು. ತಂದೆಯ ಮನೆಗೆ ಬಾ ಎಂದು ಅವಳು ಅಂದರೆ ಅವನು ಅದಕ್ಕೆ ಸಿದ್ಧನಿಲ್ಲ. ಅವಳ ಮೇಲಿನ ಪ್ರೇಮದಿಂದಲೂ ಕಲಿಯ ಪ್ರಭಾವದಿಂದಲೂ ಅವಳು ಮಲಗಿದಾಗ ಅವಳನ್ನು ಬಿಟ್ಟು ಎಲ್ಲಿಯೋ ನಡೆದುಬಿಡುತ್ತಾನೆ. ಕಾಳಸರ್ಪವೊಂದು ಕಚ್ಚಿ ಅವನ ರೂಪವೂ ಗುರುತಿಸಲಾಗದಂತೆ ಬದಲಾಗಿಬಿಡುತ್ತಾನೆ. ದಮಯಂತಿ ಎಲ್ಲೆಲ್ಲೋ ಅಲೆದು ಹೇಗೋ ತನ್ನ ಮನೆಯನ್ನು ಸೇರುತ್ತಾಳೆ. ಅವನನ್ನು ಹೇಗೋ ಹುಡುಕುತ್ತಾಳೆ. ಅವನ ಗುರುತು ಹಿಡಿಯುವುದು ಹೇಗೆ ಗೊತ್ತೇ ? ಅವನ ಅಡುಗೆಯ ರುಚಿಯಿಂದ! ಬಹುಶಃ ಅವನದೇ ಅಡಿಗೆ ಅವರ ಮನೆಯಲ್ಲಿ ಯಾವಾಗಲೂ ಇದ್ದಿರಬೇಕು!! ಅಂತೂ ಪ್ರೇಮೀದಂಪತಿಗಳು ಮತ್ತೆ ಒಂದಾಗುತ್ತಾರೆ.
ಈ ಕತೆಯನ್ನು ಕೇಳಿದವರಿಗೆ ಕಲಿಯು ಬಾಧಿಸುವುದಿಲ್ಲವಂತೆ.
ಕತೆಯನ್ನಂತೂ ತುಂಬ ಚೆಂದವಾಗಿ ಹೇಳಿದ್ದಾರೆ ಗಳಗನಾಥ ರು. ಅವರಿಬ್ಬರ ಪ್ರೇಮ ಆದರ್ಶವಾದುದು.
( ಇಲ್ಲಿ ಒಂದು ಕಡೆ ಬಂದ ಮಾತು - "ಯಾವ ಬಗೆಯ ದುಃಖದಲ್ಲೇ ಆಗಲಿ ಗಂಡನಿಗೆ ಹೆಂಡತಿಯಂಥ ವೈದ್ಯಸಮ್ಮತವಾದ ಎರಡನೇ ಔಷಧವಿಲ್ಲ" )
ನೀವೂ ಆದರೆ ಈ ಪುಸ್ತಕವನ್ನು ಓದಿ.
ಈ ಪುಸ್ತಕ ಇಲ್ಲಿದೆ ..
ಆದರೆ ....
ಈ ಕತೆಯ ಜತೆಗೆ ಸ್ತ್ರೀಯರ ಕುರಿತು ಕೆಲವು ಬರಹಗಳಿವೆ. ಅವನ್ನು ಓದಿ ಅದರಲ್ಲಿರುವ ಅಭಿಪ್ರಾಯವನ್ನು ಯಾರಿಗಾದರೂ ತಿಳಿಸೀರಾ , ಎಚ್ಚರ!! ಅವರು ಅದು ನಿಮ್ಮದೇ ಅಭಿಪ್ರಾಯ ಅಂತ ತಪ್ಪು ತಿಳಿದುಕೊಂಡು ನಿಮ್ಮ ವಿರುದ್ಧ ಪ್ರತಿಭಟನೆ, ಧಿಕ್ಕಾರ ಶುರು ಆಗಿ ನೀವೂ ಆಸಾರಾಂ ಬಾಪೂ ಮತ್ತೆ ಭಾಗವತ್ ಮುಂತಾದವರ ಜತೆ ಪೋಲೀಸು ಕೋರ್ಟು ಅಂತ ಅಲೆಯುವಂತೆ ಕಲಿಯ ಬಾಧೆ ಶುರುವಾದೀತು!!!
Comments
>>ಅವನ ಅಡುಗೆಯ ರುಚಿಯಿಂದ! ಬಹುಶಃ
>>ಅವನ ಅಡುಗೆಯ ರುಚಿಯಿಂದ! ಬಹುಶಃ ಅವನದೇ ಅಡಿಗೆ ಅವರ ಮನೆಯಲ್ಲಿ ಯಾವಾಗಲೂ ಇದ್ದಿರಬೇಕು!! :) :)
"ಕಲಿಯ ಬಾಧೆ" ತಪ್ಪಿಸುವ ಉಪಾಯ(ಹಿಮ್ಮಡಿ ತೊಳೆಯುವುದು+.....ಅಭಿಪ್ರಾಯ ತಿಳಿಸದೇ ಇರುವುದು) ತಿಳಿಸಿದ್ದಕ್ಕೆ ನನ್ನಿಸುನಿಲ್ ನಲಿದಾಡಿದ್ದಾರೆ.:)
ಮರೆತ ಮಾತು-
ಮರೆತ ಮಾತು-
ನಳನು ಜೂಜಿನಲ್ಲಿ ಕಳೆದೊಂಡ ರಾಜ್ಯ ಮತ್ತು ಸಂಪತ್ತನ್ನು ಕೊನೆಯಲ್ಲಿ ಮರಳಿ ಗಳಿಸುವುದು ಮತ್ತೆ ಜೂಜಿನ ಮೂಲಕವೇ. ಆದರೆ ಪಣಕ್ಕಿಡಲು ಅವನ ಹತ್ತಿರ ಇದ್ದದ್ದು ಏನು? ಹೌದು , ಈ ಬಾರಿ ಹೆಂಡತಿಯನ್ನೇ ಪಣವಾಗಿಟ್ಟು ಆಡುತ್ತಾನೆ , ಆ ಸರ್ವಗುಣಸಂಪನ್ನ ಧೀರ!
ಹೆಂಡತಿಯೂ ಇಲ್ಲದಿದ್ದರೆ ? ಪ್ರಾಣವನ್ನೇ ಪಣವಾಗಿಟ್ಟೂ ಆಡುತ್ತಿದ್ದರು!!