ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು (ಬಾಗ ೧)

ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು (ಬಾಗ ೧)


 ಕಥೆ: ಹೀಗೊಂದು ಕನಸು.. ಕಾಲ ಕೂಡಿ ಬರಬೇಕು (ಬಾಗ ೧)


’ಎಲೊ ಜಡಬಾಲಕ ನೀನು ಯಾರು’ ಪ್ರಶ್ನೆ


’ನಾನು ಜಡನಲ್ಲ ನನ್ನ ಉಪಸ್ಥಿಥಿ ಮಾತ್ರದಿಂದ ಈ ಜಡ ಪ್ರಪಂಚ ಚಲಿಸುತ್ತದೆ’


ಆದಿಶಂಕರಾಚಾರ್ಯರ ಶಿಷ್ಯ ಹಸ್ತಾಮಲಕರ ಉತ್ತರ. ಅವರಂತು ಜಡರಲ್ಲ ಆದರೆ ನಾನು ಜಡನೆ. ಕೆಲವರು ನನ್ನನ್ನು ಹುಚ್ಚನೆಂದು ಗುರುತಿಸುವುದು ನನಗೆ ತಿಳಿದಿದೆ. ಕೆಲವೊಮ್ಮೆ ಎಚ್ಚರದಲ್ಲಿದ್ದಾಗ ನನ್ನ ಮನದಲ್ಲಿ ಮೂಡುವ ಕಲ್ಪನೆಗು ನಿದ್ದೆಯಲ್ಲಿದ್ದಾಗ ಕಾಣುವ ಕನಸಿಗು ನನ್ನಲ್ಲಿ ಹೆಚ್ಚು ವೆತ್ಯಾಸವೇನು ಕಾಣಿಸುವದಿಲ್ಲ ಹಾಗಾಗಿ ನಾನು ಎಚ್ಚರದಲ್ಲಿವುವೆನೊ ಇಲ್ಲ ನಿದ್ದೆಯಲ್ಲಿರುವೆನೊ ಎನ್ನುವ ಅನುಮಾನವು ನನ್ನನ್ನು ಕಾಡುವದುಂಟು. ಅಂತಹ ಒಂದು ಸಮಯದಲ್ಲಿನ ಮನೋ ಚಿತ್ರವನ್ನು ನಾನೀಗ ವರ್ಣಿಸಲು ಹೊರಟಿರುವೆ.....


ಸೂರ್ಯ ನೆತ್ತಿಯಮೇಲೆ ಸುಡುತ್ತಿದ್ದ , ಎದುರಿಗೆ ಯಾವುದೋ ಸುಂದರ ದೇವಾಲಯದ ಗೋಪುರ, ನೋಡಲು ಬೇಲೂರಿನ ಹೋಯ್ಸಳರ ದೇವಾಲಯದ ರೀತಿ. ಹಾಗೆ ಒಳಗೆ ಬಂದೆ ನಿಜಕ್ಕು ಬೇಲೂರಿನ ದೇವಾಲಯವೆ, ಸುತ್ತಲು ಕಲ್ಲಿನ ಹಾಸು ನಡುವೆ ನಕ್ಷತ್ರಾಕಾರದ ಪೀಠದ ಮೇಲಿನ ಅದ್ಬುತ ಶಿಲಾಕಾವ್ಯ.ಬಿಸಿಲಿನ ಝಳ ವಿಪರೀತವೆನಿಸಿ ದೇವಾಲಯದ ಒಳಹೊಕ್ಕೆ. ಬಿಸಿಲಿನಿಂದ ಒಳಬಂದ ಪರಿಣಾಮ ಎಂಬಂತೆ ಇದ್ದಕ್ಕಿದಂತೆ ಕಣ್ಣಿಗೆ ಕವಿದ ಕತ್ತಲೆ. ಎರಡು ನಿಮಿಷ ಕಣ್ಣುಮುಚ್ಚಿ ನಿಂತು ಒಳಗಿನ ಕತ್ತಲೆಗೆ ಹೊಂದಿಕೊಂಡು ಕಣ್ಣು ಬಿಟ್ಟೆ.


ಮುಸುಕು ಬೆಳಕಿನಲ್ಲಿ ಕಾಣುತ್ತಿರುವ ನವರಂಗ, ಬೀಮಾಕಾರದ ಕಲ್ಲಿನಲ್ಲಿ ಕುಸುರಿ ಬಿಡಿಸಿದ ಕಂಬಗಳು ಬಹುಷಃ ಹನ್ನೆರಡೊ ಹದಿನಾರೋ ? ಎಣಿಸಲೆ ? ಹೆಜ್ಜೆ ಹಾಕುತ್ತಿರುವಾಗಲೆ ಕಾಣಿಸಿತು ಗರ್ಭಗುಡಿಯ ದ್ವಾರ. ಹತ್ತಿರ ಹೋಗಿ ಬಗ್ಗಿ ನೋಡಿದೆ. ಒಳಗೆ ವಿಧ್ಯುತ್ ದೀಪವಿಲ್ಲ. ನಂದಾದೀಪದ ಬೆಳಕಲ್ಲಿ ದೂರದಲ್ಲಿ ಕಾಣುತ್ತಿರುವ ದೇವರ ಅಸ್ವಷ್ಟ ರೂಪ. ಇದೇನು ಒಳಗೆ ಕವಿದಿರುವುದು ಧೂಮವೋ? ಇಲ್ಲ ಮುಸುಕಿದ ಮಂಜೊ ತಿಳಿಯದು. ಒಳಗೆ ಅರ್ಚಕರಿರ ಬಹುದಾ ಎಂದು ಚಿಂತಿಸುವಾಗಲೆ ಗರ್ಭಗುಡಿಯ ಒಳಗಿನಿಂದ ಮಂತ್ರಘೋಷದ ಜೊತೆ ಜೊತೆಗೆ ಗಂಟೆಯ ನಾದ ಕೇಳಿಸಿತು. ತುಂಬು ಗಂಭೀರ ದ್ವನಿಯಲ್ಲಿ ಹೇಳುತ್ತಿದ್ದಾರೆ


 


ಹಿರಣ್ಯಪಾತ್ರಂಮಧೋಪೂರ್ಣಂ ದಧಾತಿ.....


ಓಹೋ ಪೂಜಾನಂತರದ ಮಂಗಳಾರತಿ ನಡೆಯುತ್ತಿದೆ ಅಂತ ಅರ್ಥಮಾಡಿಕೊಂಡೆ ಕೈಮುಗಿದು ಒಳಗೆ ಬಗ್ಗಿ ನೋಡುತ್ತ ಕಾದೆ. ಎರಡು ಮೂರು ನಿಮಿಷದಲ್ಲಿ ಅರ್ಚಕರು ನಿದಾನವಾಗಿ ನಡೆದುಬಂದು ಎದುರಿಗೆ ಮಂಗಳಾರತಿ ತಟ್ಟೆ ಹಿಡಿದರು.ಎರಡು ಕೈನಿಂದ ಮಂಗಳಾರತಿ ಸ್ವೀಕರಿಸಿ ನಂತರ ಕಣ್ಣೆತ್ತಿ ನೋಡಿದೆ. ಇದೇನು ಅದ್ಬುತ ! ಬಾಲ ಗಣಪತಿ ! ನನ್ನೆದುರು ಮಂಗಳಾರತಿ ತಟ್ಟೆ ಹಿಡಿದು ನಿಂತಿರುವ ಅರ್ಚಕರು ಅರಾದ್ಯದೈವ ವಿನಾಯಕ ಸೊಂಡಾಲಾಡಿಸುತ್ತ ಸುಮುಖದ ತುಂಬಾ ಹೂನಗೆಯನ್ನು ಅರಳಿಸಿ ನಿಂತಿದಾನೆ. ನನಗೆ ಕಣ್ಣುಗಳು ತುಂಬಿ ಬಂದವು ಏನು ಹೇಳಲಿ ?


ಸ್ವಾಮಿ ನೀನಾ? ಎಂದೆ


 


ಏಕೆ ಅನುಮಾನವ? ಎನ್ನುವ ಪ್ರಶ್ನೆಯ ಜೊತೆಗೆ ಸಣ್ಣ ಸಣ್ಣ ಗಂಟೆಗಳನ್ನು ಒಟ್ಟಿಗೆ ಬಾರಿಸಿದಂತೆ ನಗು.


ನೀನೆ ಇಲ್ಲಿ ಪೂಜೆ ಮಾಡುತ್ತೀಯ ಎಂದೆ ಹೌದು ಎನ್ನುವಂತೆ ತಲೆ ಸೋಂಡಿಲು ಆಡಿಸಿದ ಗಣಪ ಮತ್ತೇನಾದರು ಕೇಳಬೇಕಾ? ಎಂದನು. ಏನು ಕೇಳಲಿ ಎಂದು ಹೊಳೆಯುತ್ತಿಲ್ಲ.


ನನಗೆ ದೂರದಿಂದ ದೇವರು ಕಾಣುತ್ತಿಲ್ಲ ಏನೊ ಮುಸುಕು ಹತ್ತಿರ ಕರೆದೋಯ್ದು ತೋರಿಸುವೆಯ ? ಎಂದೆ ಆಸೆಯಿಂದ


 


ಏಕಾಗಬಾರದು ಒಳಗೆ ಬರುತ್ತೀಯಾ ? ಬಾ..ಎನ್ನುತ್ತ ತನ್ನ ಎಡಗೈ ಮುಂದೆ ಮಾಡಿದ ಗಣಪ. ಅನಂತ ಆನಂದ ಅನುಭವಿಸುತ್ತ ನನ್ನ ಬಲಕೈಯನ್ನು ಅವನ ಕೈಯಲ್ಲಿ ಸೇರಿಸಿದೆ. ಹೀಗೆ ಈ ಪ್ರಪಂಚ ನಿಂತು ಹೋಗಬಾರದ ಕಾಲ ಸ್ಥಬ್ದವಾಗಬಾರದ?


ನಿದಾನವಾಗಿ ನಡೆಯುತ್ತ ಹೊರಟೆ ಅವನ ಜೊತೆ ಗರ್ಭಗುಡಿಯ ಒಳಗೆ, ಎಷ್ಟು ಹೊತ್ತು ಆಯಿತೊ ತಿಳಿಯುತ್ತಿಲ್ಲ.ಇದೇನು ಕಣ್ಣಳತೆಯಲ್ಲಿ ಕಾಣುತ್ತಿದ್ದ ದೇವರನ್ನು ಕಾಣಲು ಎಷ್ಟು ನಡೆದರು ಮುಗಿಯುತ್ತಿಲ್ಲವಲ್ಲ ಅನ್ನಿಸುತ್ತಿದ್ದಂತೆ ನಿಂತ ಗಣಪ.


ನಗುತ್ತ ನನ್ನ ಕಡೆ ನೋಡಿದ "ನೋಡು ಇದೇ ನೀನು ಕೇಳಿದ ದೇವರು" , ಅರೇ ಇದೇನು ಇಲ್ಲಿ ಏನು ಕಾಣಿಸುತ್ತಿಲ್ಲ ಖಾಲಿ ಖಾಲಿ ಜಾಗವಷ್ಟೆ ಅದನ್ನೆ ಹೇಳಿದೆ


 


'ಏಕದಂತ ಇಲ್ಲಿ ಏನು ಇಲ್ಲ '


 "ಅದೇ ದೈವ " ನಗುತ್ತ ನುಡಿದ ಅವನು " ಬಾ ಹೊರಹೋಗೋಣ ಸಮಯವಾಯಿತು" ಎನ್ನುತ್ತ ಹೊರಟ. ಒಳಹೋಗುವಾಗ ಅಷ್ಟುಹೊತ್ತು ನಡೆದಿದ್ದೆ ಅದರೆ ಹೊರಬರುವಾಗ ಎರಡೆ ಹೆಜ್ಜೆಯಲ್ಲಿ ಗರ್ಭಗುಡಿಯ ಹೊರಗಿದ್ದೆ. ಮನಸ್ಸೆ ಒಂದು ವಿಚಿತ್ರ ಸಂಗಮದಲ್ಲಿತ್ತು ಎಲ್ಲವೂ ಅರ್ಥವಾದ ಸಂಭ್ರಮ ಜೊತೆಗೆ ಏನು ಅರ್ಥವಾಗಲಿಲ್ಲ ಅನ್ನುವ ಭಾವ. ನೀನು ಹೊರಹೋಗು ಹೊರಗೆ ಕಲ್ಲಿನ ಮಂಟಪದ ಹತ್ತಿರ ಕೋತಿಗಳಿವೆ ಅವನ್ನು ಕಾಣು ನಿನಗೆ ದೇವರ ಹತ್ತಿರ ಹೋಗುವ ದಾರಿಯನ್ನು ತೋರಿಸುತ್ತವೆ" ಎಂದು ನುಡಿದು ನಿನಗೆ ಶುಭವಾಗಲಿ ಎಂದು ಹರಸಿ ನಿದಾನವಾಗಿ ಗರ್ಭಗುಡಿಯ ಒಳಗೆ ನಡೆದ.


ಒಂದು ಕ್ಷಣನಿಂತ ನಾನು , "ನನ್ನ ಬುದ್ದಿಯೆ, ಅವನು ಎದುರಿಗೆ ಬಂದಾಗಲು ಅವನ ಪಾದಗಳಿಗೆ ಒಮ್ಮೆ ನಮಸ್ಕರಿಸಲಿಲ್ಲವಲ್ಲ" ಅನ್ನಿಸಿ ಒಳಗೆ ಬಗ್ಗಿ ನೋಡಿದೆ. ಏನು ಕಾಣಿಸುತ್ತಿಲ್ಲ ಬರೀ ಕತ್ತಲೆ , ಜೋರಾಗಿ ಕೂಗಿದೆ ಗಣಪ ವಿನಾಯಕ ಏಕದಂತ ಸುಮುಖ. ಇಲ್ಲ ಯಾವುದೆ ದ್ವನಿಯಿಲ್ಲ. ಇನ್ನು ನಿಲ್ಲುವುದರಲ್ಲಿ ಏನು ಅರ್ಥವಿಲ್ಲ ಎಂದು ಅರ್ಥವಾಯಿತು. ನೆನಪಿಗೆ ಬಂದಿತು ಅವನ ಮಾತು ಹೊರಗೆ ಹೋಗಿ ಅವನು ಹೇಳಿದ ಮಂಟಪದ ಕೋತಿಗಳನ್ನು ಕಾಣಬೇಕು. ನಿದಾನವಾಗಿ ಹೊರಹೊರಟೆ.


    ....ಮುಂದುವರೆಯುವುದು


 


                                ಮುಂದಿನ ಬಾಗ :   ಬಾಗ ೨


 

Comments