ಕಥೆ: ಪರಿಭ್ರಮಣ..(66) (ಅಂತಿಮ-ಪೂರ್ವ ಕಂತು)
( ಪರಿಭ್ರಮಣ..65ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಸರಿಯಾಗಿ ಅದೆ ಹೊತ್ತಿನಲ್ಲಿ ಯಾವುದೋ ಯುದ್ಧ ಗೆದ್ದ ವಿಜಯೋತ್ಸಾಹದಲ್ಲಿ ಪೋನ್ ಕೆಳಗಿಡುತ್ತಿದ್ದ ಶ್ರೀನಿವಾಸ ಪ್ರಭು.. ಇಂಡೋನೇಶಿಯ ಸುಲಭದ ಪ್ರಾಜೆಕ್ಟಲ್ಲ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು.. ಹೊರಗಿನ, ಒಳಗಿನ ಜನರೆಲ್ಲ ಸೇರಿ ಏಳೆಂಟು ಜನಗಳಾದರೂ ಬೇಕಾಗಿದ್ದ ಪ್ರಾಜೆಕ್ಟಿಗೆ ಇಬ್ಬರು ಮೂವರು ಸಾಕು ಎನ್ನುವ ಹೊಸ ಥಿಯರಿ ಉರುಳಿಸಿದ್ದ - ರೋಲ್ ಔಟ್ ಪ್ರಾಜೆಕ್ಟ್ ಎನ್ನುವ ನೆಪದಲ್ಲಿ.. ಆದರೆ ನೈಜದಲ್ಲಿ ಅದು ರೋಲೌಟ್ ಪ್ರಾಜೆಕ್ಟ್ ಆಗಿರಲೆ ಇಲ್ಲಾ ! ಅಲ್ಲಾವ ಟೆಂಪ್ಲೇಟ್ ಕೂಡಾ ಇರಲಿಲ್ಲ 'ಕಾಪಿ - ಪೇಸ್ಟ್' ತರಹದ ಸುಲಭದ ಕೆಲಸ ಮಾಡಲು. ಅದೆಲ್ಲಾದಕ್ಕೂ ಜತೆಯಾಗಿ ಐದಾರು ತಿಂಗಳಲ್ಲಿ ಮುಗಿಸಬೇಕೆಂದರೆ - ಅದನ್ನು ಮಾಡಹೊರಟವ ಸತ್ತಂತೆಯೆ ಲೆಕ್ಕ..! ಹೇಗಾದರೂ ಶ್ರೀನಾಥನನ್ನ ಇದಕ್ಕೆ ಸಿಕ್ಕಿಸಿಬಿಟ್ಟರಾಯ್ತು.. ಇಷ್ಟು ಕಡಿಮೆ ಅವಧಿಯಲ್ಲಿ, ಸರಿಯಾದ ಜನರ ಜತೆಯೆ ಇಲ್ಲದೆ, ಈ ಸಂಕೀರ್ಣ ಪ್ರಾಜೆಕ್ಟನ್ನು ಮಾಡಿ, ಅದು ಹೇಗೆ ಮೊದಲ ದಿನದ ಟರ್ನೋವರಿನಲ್ಲಿಯೆ 'ಬಿಜಿನೆಸ್ ಆಸ್ ಯೂಶುವಲ್' ಮಾಡುತ್ತಾನೊ ಈ ಬಾರಿಯೂ - ಅಂತ ಕಾದು ತಮಾಷೆ ನೋಡಬಹುದು ಎಂದಂದುಕೊಂಡವನ ಮೊಗದಲ್ಲಿ ಕೃತಿಮತೆ ತುಂಬಿದ ಕಿರುನಗೆಯೊಂದು ಹಾದು ಹೋಗಿತ್ತು.. ಒಂದು ವೇಳೆ ಶ್ರೀನಾಥ ಗೆದ್ದರೂ ಅದನ್ನು ಸಾಧ್ಯವಾಗಿಸಿದ್ದರ ಕ್ರೆಡಿಟ್ಟನ್ನು ತಾನೆ ತೆಗೆದುಕೊಳ್ಳಬಹುದು - ಆ ಐಡಿಯಾ ಬಂದಿದ್ದೆ ತನ್ನಿಂದಲ್ಲವೆ..? ಹೀಗಾಗಿ ಏನೇ ಫಲಿತ ಬಂದರೂ ತನಗೇ ಲಾಭ.. ಯಾವುದೇ ಫಲಿತ ಸಾಧಿಸಿದರೂ ಶ್ರೀನಾಥನಿಗೆ ಒಂದಲ್ಲ ಒಂದು ರೀತಿಯಲ್ಲಿ ನಷ್ಟವೆ ಹೊರತು ಲಾಭವಿರುವುದಿಲ್ಲ..!
ಅವನು ಕುಟಿಲ ತಂತ್ರದ ಬೀಜ ನೆಟ್ಟು, ಅದು ಸಸಿಯಾದ ಸುದ್ದಿಗೆ ಕಾಯುತ್ತ ತನ್ನ ಸದ್ಯದ ಯಶಸ್ಸಿಗೆ ಖುಷಿ ಪಡುತ್ತಿರುವ ಆ ಸಮಯದಲ್ಲೆ, ಶ್ರೀನಾಥನನ್ನು ಹೇಗಾದರೂ ಮಾಡಿ ಒಪ್ಪಿಸಲೇಬೇಕೆನ್ನುವ ಹವಣಿಕೆಯೊಡನೆ ಮಾತಿಗಿಳಿದಿದ್ದರು ಸುಬ್ರಮಣ್ಯಂ, ಪೋನಿನ ಮೂಲಕ. ಅವರು ಹೇಳುತ್ತಿದ್ದ ವಿವರಗಳನ್ನೆಲ್ಲ ಕೇಳುತ್ತಿದ್ದಂತೆ ಇದೆಲ್ಲ ಯಾರ ಷಡ್ಯಂತ್ರವೆಂದು ತಕ್ಷಣವೆ ಅರಿವಾಗಿಹೋಗಿತ್ತು ಶ್ರೀನಾಥನಿಗೆ. ಅದು ತಿಳಿವಿಗೆ ಬರುತ್ತಿದ್ದಂತೆ ಶ್ರೀನಿವಾಸ ಪ್ರಭುವಿನ ಮೇಲೆ ಕೋಪ ಬರುವ ಬದಲು ಕನಿಕರದ ನಗೆಯೊಂದು ಹಾದು ಹೋಗಿತ್ತು, ಶ್ರೀನಾಥನ ಮೊಗದಲ್ಲಿ.. ಮನದ ಹಿನ್ನಲೆಯಲ್ಲಿ 'ಮಾಂಕ್ ಸಾಕೇತ್ ಹೇಳಿದ್ದ - ಹೊಸ ತರದ ಪಂಥಗಳು, ತೊಡಕುಗಳು ಬರುತ್ತವೆಂದು ಮುನ್ನೆಚ್ಚರಿಕೆ ಕೊಟ್ಟಿದ್ದು ಇದರ ಕುರಿತೇನಾ?' ಎನ್ನುವ ಜಿಜ್ಞಾಸೆ ಕೂಡಾ ನಡೆದಿತ್ತು..
' ಮಣಿ ಸಾರ್ ಇದು ತುಂಬಾ ರಿಸ್ಕೀ... ಡೂಮ್ಡ್ ಟು ಫೆಯಿಲ್.. ಒಂದು ವೇಳೆ ಇದು ಸಕ್ಸಸ್ ಆಗದಿದ್ದರೆ 'ಪ್ರಾಜೆಕ್ಟ್ ಬಿಲ್ಲಿಂಗ್' ಮಾಡಲ್ಲನ್ನು ಸುಗಮವಾಗಿ ಮುಂದುವರೆಸಲೇ ಆಗದಿರುವಂತಹ ಕೆಟ್ಟ ರೆಫರೆನ್ಸ್ ಆಗಿ ಬಿಡಬಹುದು...' ಎಂದ ಕಾಳಜಿಯ ದನಿಯಲ್ಲಿ.
' ಅದಕ್ಕೆ ನಿನ್ನನ್ನು ಇಲ್ಲಿ ಆರಿಸುತ್ತಿರುವುದು.. ಶ್ರೀನಾಥ್.. ಓನ್ಲೀ ಯೂ ಕ್ಯಾನ್ ಡೂ ಇಟ್.. ಬೇರೆ ಯಾರಾದರೂ ಆಗಿದ್ದರೆ ಪ್ಲಾಫ್ ಆಗಿವ ಸಾಧ್ಯತೆ ಹೆಚ್ಚಿತ್ತಾದರೂ, ನೀನು ಕೈ ಹಾಕಿದರೆ ಹಾಗಾಗುವುದಿಲ್ಲವೆಂದು ನಮಗೆಲ್ಲಾ ಖಚಿತವಾದ ನಂಬಿಕೆಯಿದೆ.. ಇಟ್ ಓಪನ್ಸ್ ಏ ಗ್ರೇಟ್ ಛಾನ್ಸ್ ಫಾರ್ ಅಸ್ ಇನ್ ದಿಸ್ ಮಾರ್ಕೆಟ್.. ವಿ ಕ್ಯಾನಾಟ್ ಅಫೋರ್ಡ್ ಟು ಫೆಯಿಲ್.. ಯೂ ಆರ ಅವರ್ ಇನ್ಶ್ಯೂರೆನ್ಸ್ ಹಿಯರ್...' ಪ್ರಭುವಿನ ಪಾಠ ಚೆನ್ನಾಗಿಯೆ ಕೆಲಸ ಮಾಡಿದಂತಿತ್ತು ಈ ಬಾರಿ...
' ಈ ಬಾರಿ ಚೆನ್ನಾಗಿಯೆ ಫಿಟ್ಟಿಂಗ್ ಇಟ್ಟಿದ್ದಾನೆ, ತಪ್ಪಿಸಿಕೊಳ್ಳಲಾಗದ ಹಾಗೆ.. ಪ್ರಾಜೆಕ್ಟ್ ಯಶಸ್ಸಾಗದಿದ್ದರೆ ಅದು ತನ್ನ ಸೋಲು.. ಆ ನಂತರ ತಾನಿಲ್ಲಿ ಕೆಲಸ ಮುಂದುವರೆಸಲಾಗದು.. ಮುಂದುವರೆದರೂ ಕಡೆಗಣಿಸಿದ ವಾತಾವರಣದಲ್ಲಿ ಅನುಸರಿಸಿಕೊಂಡು ನಡೆಯಬೇಕು.. ಇಲ್ಲವೆ ಸೋತೆನಲ್ಲಾ ಎಂದು ಕೆಲಸ ಬಿಟ್ಟು ನಡೆದರೂ ಅವನಿಗೆ ಸಿಕ್ಕ ಗೆಲುವೆ ಆಗುತ್ತದೆ.. ಪ್ರಾಜೆಕ್ಟ್ ಯಶಸ್ಸಾದರೆ ತನಗೇನೂ ಕಿರೀಟ ಸಿಗದಿದ್ದರೂ ಅವನಿಗೆ ಎಲ್ಲಾ ಬಿರುದು, ಬಾವಲಿಗಳು ಸಿಗುವುದು ಖಂಡಿತ.. ಹಾಗೆಂದು 'ಮಾಡುವುದಿಲ್ಲ' ಎನ್ನಲೂ ಆಗದು.. ಯಶಸ್ವಿಯಾಗಿ ಮಾಡಿದರೆ ಮಣಿ ಸಾರ್ ಜತೆಗಿನ ಸಖ್ಯಕ್ಕೊಂದು ಬಲ ಬಂದಂತಾಗುತ್ತದೆ.. ಅದು ಮುಂದಿನ ಕೆರಿಯರ ಹೆಜ್ಜೆಗೆ ಬಲು ಮುಖ್ಯವಾದ ಅಂಶ..ಯಾವ ರೀತಿ ನೋಡಿದರೂ ಅವನಿಗೇ ವಿನ್ - ವಿನ್... ಗ್ರೇಟ್ ಐಡಿಯಾ.. 'ಶಹಭಾಷ್ ಪ್ರಭು, ಸ್ಮಾರ್ಟ್ ಐಡಿಯಾ..!' ಎಂದು ಮನದಲ್ಲೆ ಅವನನ್ನು ಶ್ಲಾಘಿಸುತ್ತ, ಒಪ್ಪುವುದೊ - ಬಿಡುವುದೊ ಎಂದು ಡೋಲಾಯಮಾನವಾಗಿದ್ದ ಮನದಲ್ಲೆ ಆಲೋಚಿಸಿಕೊಳ್ಳುತ್ತಿದ್ದ ಶ್ರೀನಾಥ.
ಆ ಹೊತ್ತಿನಲ್ಲಿ ಸುಬ್ರಮಣ್ಯಂ ಅವನಿಗಿನ್ನು ಅಲ್ಲಿ ಕೊಡುವ ಅಲೋವೆನ್ಸ್ ಬಗ್ಗೆ ಏನೂ ಸುಳಿವು ಕೊಟ್ಟಿರಲಿಲ್ಲ.. ಅದನ್ನೇನಾದರೂ ತಕ್ಷಣಕ್ಕೆ ಎತ್ತಿದರೆ ಕೆಲಸ ಕೆಡುವುದೆಂದು ಪ್ರಭು ಆಗಲೆ ಎಚ್ಚರಿಸಿದ್ದ. ಸದ್ಯಕ್ಕೆ ಮೊದಲ ಗುರಿ ಅವನನ್ನು 'ಹೂಂ' ಅನ್ನುವಂತೆ ಮಾಡುವುದು.. ಪ್ರಾಜೆಕ್ಟ್ ಕೈಗೆ ಸಿಕ್ಕ ಮೇಲೆ 'ಕಸ್ಟಮರ ಕೊಡುತ್ತಿರುವ ಹಣವೆ ಕಡಿಮೆ, ಲೋ ಕಾಸ್ಟ್ ದೇಶದ ಪ್ರಾಜೆಕ್ಟ್' ಎಂದೇನಾದರೂ ಹೇಳಿ ಒಪ್ಪಿಸಿದರಾಯ್ತು ಎಂದುಕೊಂಡು ಸದ್ಯಕ್ಕೆ ಅದರ ಕುರಿತು ಏನೂ ಮಾತನಾಡದೆ ಸುಮ್ಮನಾಗಿಬಿಟ್ಟಿದ್ದರು. ಶ್ರೀನಾಥ ಈಗಿರುವ ಅಲೋವೆನ್ಸ್ ಲೆಕ್ಕಾಚಾರದಲ್ಲೆ ಎಲ್ಲಾ ಸಿಗುವುದೆಂಬ ಅನಿಸಿಕೆಯಲ್ಲಿ 'ಐದಾರು ತಿಂಗಳ ಮಟ್ಟಿಗೆ ತಾನೆ..? ನಿಭಾಯಿಸಿದರಾಯ್ತು.. ಆ ಅನುಭವ ರೆಸ್ಯೂಮಿಗೆ ತುಂಬಾ ಮುಖ್ಯ..' ಎಂದುಕೊಂಡೆ 'ಹೂಂ'ಗುಟ್ಟಿದ್ದ. ಅದರಲ್ಲಿ ನಲವತ್ತೈವತ್ತು ಪರ್ಸೆಂಟ್ ಕಡಿತವಾಗುವುದೆಂದಾದರೆ ಅದು ಅಲ್ಲಿನ ಬದುಕಿನಲ್ಲಿ ಯಾವ ಮೂಲೆಗು ಸಾಲುವುದಿಲ್ಲವೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು, ಅಲ್ಲೆ ಕೆಲಸ ಮಾಡಿಕೊಂಡಿದ್ದ ಕೆಲವು ಗೆಳೆಯರ ಅನುಭವದ ಮುಖಾಂತರ .. ಆದರೆ ಆ ಗಳಿಗೆಯಲ್ಲಿ ಹಾಗಾಗುವುದೆನ್ನುವುದರ ಸುಳಿವೂ ಇರಲಿಲ್ಲ ಅವನಿಗೆ...
' ಓಕೆ ಮಣಿ ಸಾರ್..ಐ ವಿಲ್ ಟ್ರೈ ಮೈ ಬೆಸ್ಟ್... ಸಕ್ಸಸ್ಸಿನ ಬಗೆ ನನಗೆ ಖಾತರಿ ಇಲ್ಲ ..ಬಟ್ ಸ್ಟಿಲ್ ಐ ವಿಲ್ ಟ್ರೈ ..' ಎಂದು ಮಾತು ಮುಗಿಸಿದ್ದ ಶ್ರೀನಾಥ. ಅವನ ಗಮನವಿನ್ನು ಬ್ಯಾಂಕಾಕ್ ಬಿಡುವ ಮುನ್ನವೆ ಮಾಡಬೇಕಾಗಿದ್ದ ಮಿಕ್ಕ ಮುಖ್ಯ ಕೆಲಸಗಳ ಸುತ್ತಲೆ ಹರಿದಾಡುತ್ತಿತ್ತು. ಹೀಗಾಗಿ ಆ ಪೋನಿನ ಚರ್ಚೆಯನ್ನು ತೀರಾ ಉದ್ದಕ್ಕೆ ಎಳೆಯುವ ಮನಸ್ಥಿತಿಯಲ್ಲಿಯೂ ಇರಲಿಲ್ಲ ಶ್ರೀನಾಥ
ಕುನ್ ಸೋವಿ ಮತ್ತು ಕುನ್. ಸು ಕುರಿತಾದ ಕುನ್. ಲಗ್ ರ ಜತೆಗಿನ ಮಾತುಕಥೆ ಶ್ರೀನಾಥನಲ್ಲೊಂದು ಬಗೆಯ ಅತೀವ ನಿರಾಳತೆಯನ್ಹುಟ್ಟಿಸಿ, ಏನೊ ಹಗುರವಾದ ಭಾವನೆಯಲ್ಲಿ ತೇಲಿದಂತಾಗಿತ್ತು. ಮನದ ನಿರಾಳತೆ ದೇಹಕ್ಕಿಂತಹ ಹಗುರ ಅನುಭೂತಿಯನ್ನೀಯಬಹುದೆಂಬ ಅಂದಾಜೆ ಇರದಿದ್ದ ಶ್ರೀನಾಥ, ಮನಸಿನ ಅಗಾಧ ಶಕ್ತಿಯ ವಿಶ್ವರೂಪದ ತುಣುಕುಗಳನ್ನು ಕಂಡು ವಿಸ್ಮಯ ಪಡುವ ಹೊತ್ತಿನಲ್ಲೆ, ಇದಕ್ಕೂ ವಿಪರೀತ ಕ್ಲಿಷ್ಟಕರವಾದ ಲತಳ ಜೊತೆಗಿನ ಸಂವಾದವನ್ನು ನಿಭಾಯಿಸುವುದು ಹೇಗೆಂಬ ಚಿಂತೆ ತಲೆದೋರಿ, ಆ ಹಗುರ ಹಕ್ಕಿಯ ಹಾರಾಡುವ ರೆಕ್ಕೆಯನ್ನು ಹಿಡಿದು ಕಟ್ಟಿಹಾಕಿದಂತಾಗಿಸಿ, ಮೇಲೆ ಹಾರಾಡುತ್ತಿದ್ದ ಮನಸನ್ನು ತುಸು ಕೆಳಗಿಳಿಸತೊಡಗಿತು. ಆದರೆ ಅದುವರೆಗಿನ ತೊಡಕುಗಳ ಪರಿಹಾರವಾಗುತ್ತಿದ್ದ ರೀತಿಯ ಸುಗಮತೆಯ ಪರಿಣಾಮವೂ ಮನಸಿನ ಮೇಲೆ ಪ್ರಭಾವ ಬೀರಿ 'ಇದೂ ಕೂಡ ಹೂವೆತ್ತಿದಷ್ಟೆ ಸುಗಮವಾಗಿ ನಡೆಯುವುದು ಖಚಿತ.. ತಾನಾವುದನ್ನು ಮುಚ್ಚಿಡಲು ಹೋಗದೆ ಎಲ್ಲವನ್ನು ಸ್ಪಷ್ಟವಾಗಿ, ಪ್ರಾಮಾಣಿಕವಾಗಿ ಹೇಳಿಬಿಡಬೇಕಷ್ಟೆ.. ಅವಳದನ್ನು ಮೆಚ್ಚಿ ಕ್ಷಮಿಸುವಳೊ, ಆಕ್ರೋಶಗೊಂಡು ರಣರಂಗದ ರಾಮಾಯಣ, ಮಹಾಭಾರತಕ್ಕೆ ನಾಂದಿ ಹಾಡಲಿರುವಳೊ - ಅದವಳ ವಿವೇಚನೆಗೆ ಬಿಟ್ಟಿದ್ದು. ಒಂದು ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ನಡೆದಿರುವ ಬದುಕಿನ ಗಾಲಿಯನ್ನು ಸರಿಯಾದ ನೇರ ದಾರಿಗೆ ತರಲು ಇದು ಇಬ್ಬರಿಗೂ ಸಿಗುತ್ತಿರುವ ಸುವರ್ಣಾವಕಾಶ.. ಆತ್ಮೀಯತೆ, ಸುಗಮ ನಂಟಿನ ಸಂಬಂಧಗಳಿಗೆ ಪ್ರಾಮಾಣಿಕತೆ, ನಿಜಾಯತಿಗಳೆ ಮೂಲಭೂತ ಅಡಿಗಲ್ಲು ಎನ್ನುತ್ತಾರೆ.. ಅದರನುಸಾರವೆ ಎಲ್ಲವನ್ನು ಬಿಚ್ಚಿಟ್ಟು ಬಿಡುವುದೊಳಿತು... ಅಲ್ಲಿಂದಾಚೆಗೆ ವಿಧಿ ಬರಹವಿದ್ದಂತಾಗಲಿ. ಅವಳೂ ಇದೇ ಅವಕಾಶವನ್ನೆ ಬಳಸಿಕೊಂಡು ಇದನ್ನೆ, ಮುನ್ನಡೆಯುವ ಹಾದಿಗೆ ಹಾಸುಗಲ್ಲಾಗಿಸಿಕೊಂಡರೆ ಭವಿತದ ಬದುಕಿಗೊಂದು, ಹೊಸ ಅರ್ಥ ಸಿಕ್ಕಂತಾಗುತ್ತದೆ.. ಒಂದು ವೇಳೆ ಅವಳಿದನ್ನು ನೇತಾತ್ಮಕವಾಗಿ ಪರಿಗಣಿಸಿ, ತುಚ್ಛಿಕರಿಸಿ ತನ್ನನ್ನು ದೂರವಿಟ್ಟರೂ, ಕನಿಷ್ಠ ಪಾಪುವಿನ ಭವಿತದತ್ತ ಗಮನ ಹರಿಸಿ ಮಿಕ್ಕ ಬದುಕನ್ನು ಹೇಗೊ ದೂಡಿಕೊಂಡು ನಡೆದರಾಯ್ತು... ಪಾಪುವಿನ ನೆಪದಲ್ಲಿ ಬದುಕಿಗೊಂದು ಅರ್ಥ ಕಂಡುಕೊಳ್ಳುವುದರಲ್ಲೇನು ಕಡಿಮೆ ಸುಖವಿರುವುದಿಲ್ಲವಾಗಿ, ಮತ್ತೆ ತಾಮಸದತ್ತ ಜಾರುವ ಪ್ರಲೋಭನೆಯಂತೂ ಆಗುವುದಿಲ್ಲ...' ಎಂದು ಮನದ ಚಿಂತನೆಗೊಂದು ಸ್ಪಷ್ಟರೂಪ ಕೊಡಲೆತ್ನಿಸುತ್ತ ಆ ದಿನ ರಾತ್ರಿ ಲತಳಿಗೆ ಪೋನು ಮಾಡಿದ್ದ, ಎಂದಿನಂತೆ ಮಗುವಿನ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ...
'ಹಲೋ...' ಎಂದು ಅತ್ತ ಕಡೆಯಿಂದ ನೇರ ಲತಳ ದನಿಯೆ ಕೇಳಿಸಿದಾಗ ಮನೆಯಲ್ಲಿಯೆ ಇರುವಳೆಂಬ ವಿಷಯವೆ ಒಂದು ರೀತಿಯ ನೆಮ್ಮದಿಯುಂಟಾಗಿಸಿ, ಎಲ್ಲಾ ಸ್ವಸ್ಥವಿರಬೇಕೆಂಬ ಅನಿಸಿಕೆಯನ್ನುಂಟು ಮಾಡಿತ್ತು. ಅದೇ ಅನಿಸಿಕೆ ಮೂಡಿಸಿದ ಸಮಾಧಾನದ ದನಿಯಲ್ಲಿಯೆ 'ಲತಾ ನಾನು..' ಎಂದ
'ನೀವೇನಾ...? ನಾನ್ಯಾಕಿನ್ನು ಪೋನೆ ಮಾಡಲಿಲ್ಲವಲ್ಲಾ ಎಂದುಕೊಳ್ಳುತ್ತಿದ್ದೆ.. ಹುಷಾರಾಗಿದ್ದೀರಾ ..? ' ಎಂದು ಯಥಾರೀತಿ ವಿಚಾರಿಸಿಕೊಂಡವಳನ್ನು ಮಾತು ಮುಂದುವರೆಸಬಿಡದೆ,
' ಪಾಪು ಹುಷಾರಾಗಿದೆ ತಾನೆ..? ಯಾಕೆ ಸದ್ದೇ ಕೇಳಿಸುತ್ತಿಲ್ಲ..?' ಎಂದ.. ಆ ಹೊತ್ತಿನಲ್ಲಿ ಪೋನ್ ಮಾಡಿದಾಗೆಲ್ಲ ಮೊದಲು ಕಿವಿಗೆ ಬೀಳುತ್ತಿದ್ದುದ್ದು ಅವಳ ಕಿರುಚುವ ದನಿಯೆ ಆದ ಕಾರಣ, ಆವತ್ತಿನ ನಿಶ್ಯಬ್ದ ಯಾಕೊ ಸ್ವಲ್ಪ ಅಸಹಜವೆನಿಸಿತ್ತು...
' ಅದಾ.. ಅಯ್ಯೊ..ಇವತ್ತೆಲ್ಲ ಪೂರ್ತಿ ನಿದ್ದೇನೆ ಮಾಡಲಿಲ್ಲ ಅವಳು.. ಪಕ್ಕದ ಮನೆಯಲ್ಲೇನೊ ಫಂಕ್ಷನ್ ನಡೆಯುತ್ತಿತ್ತು.. ದಿನವೆಲ್ಲ ಪೂರ್ತಿ ಗದ್ದಲ, ಗಲಾಟೆ... ಇವಳಂತೂ ಬೆಳಗಿನಿಂದ ಅಲ್ಲೆ ಠಿಕಾಣಿ ಹಾಕಿ ಸಿಕ್ಕ ಸಿಕ್ಕವರ ಜತೆಯೆಲ್ಲ ಸುತ್ತಾಡಿಕೊಂಡು ಬಂದಿದ್ದಾಳೆ - ಗೊತ್ತಿದ್ದವರು, ಗೊತ್ತಿಲ್ಲದವರು ಎಂದು ಕೂಡ ನೋಡದೆ...ಈಗ ಅರ್ಧ ಗಂಟೆ ಹಿಂದೆಯಷ್ಟೆ ವಾಪಸ್ಸು ಬಂದಳು..ತುಂಬಾ ಸುಸ್ತಾಗಿತ್ತೇನೊ? ಅವರು ಬಿಟ್ಟು ಹೋದ ಸ್ವಲ್ಪ ಹೊತ್ತಿಗೆ ಹಾಲು ಕುಡಿದವಳೆ ಮಲಗಿಬಿಟ್ಟಳು...' ಎಂದು ಅಂದಿನ ಕಥಾನಕದ ವರದಿ ಒಪ್ಪಿಸಿದವಳ ಮಾತಲ್ಲಿ ' ನಿದ್ದೆ ಹೋಗಿದ್ದಾಳೆಂಬ' ಸಾರಾಂಶವನ್ನು ಮಾತ್ರ ಪ್ರಮುಖವಾಗಿ ಗ್ರಹಿಸಿ ನಿರಾಳವಾದವನಂತೆ,
' ಯಾಕೆ ನಿಮ್ಮಪ್ಪ ಅಮ್ಮ ಮನೆಯಲ್ಲಿರಲಿಲ್ಲವ..? ಅವರನ್ನು ಬಿಟ್ಟು ಅಷ್ಟು ಸುಲಭವಾಗಿ ಹೋಗುವುದಿಲ್ಲವೆಂದಿದ್ದೆಯಲ್ಲಾ?' ಎಂದು ಕೇಳಿದ..
' ಅವರಿದ್ದಿದ್ದರೆ ಹೋಗುವವಳಲ್ಲ ಅವಳು.. ಅವರಿಬ್ಬರೂ ಯಾವುದೊ ಮದುವೆಗೆಂದು ಊರಿಗೆ ಹೋಗಿದ್ದಾರೆ.. ಬರುವುದು ನಾಳೆ ಮಧ್ಯಾಹ್ನವೆ... ಅವರಿಲ್ಲದೆ ಬೋರಾಗಷ್ಟೆ ಅಲ್ಲೆಲ್ಲ ಹೋಗಿ ಬಂದಿದ್ದಾಳೆ.. ಇಲ್ಲದಿದ್ದರೆ ಅವರನ್ನು ಬಿಟ್ಟು ಅರೆಗಳಿಗೆಯೂ ಇರುವುದಿಲ್ಲ...'
' ಅಯ್ಯೊ... ಹಾಗಾದರೆ ಮನೆಯಲ್ಲಿ ಯಾರಿದ್ದಾರೆ ಜತೆಯಲ್ಲಿ ? ನೀನೊಬ್ಬಳೇನಾ?' ಗಾಬರಿಯಲ್ಲಿ ಕೇಳಿದ ಶ್ರೀನಾಥ.
' ಇಲ್ಲಾರಿ.. ನನ್ನ ತಮ್ಮ ಇದಾನಲ್ಲಾ..? ಈಗ ಸೆಕೆಂಡ್ ಶೋ ನೋಡಿಕೊಂಡು ಬರ್ತೀನಿ ಅಂತ ಫ್ರೆಂಡ್ಸಿನ ಜತೆ ಹೋಗಿದ್ದಾನಷ್ಟೆ... ಏನೂ ಭಯವಿಲ್ಲ ..' ಎಂದವಳ ತಾರ್ಕಿಕ ಉತ್ತರ ಕೇಳುತ್ತಿದ್ದಂತೆಯೆ, ' ಅರೆರೆ.. ಒಬ್ಬಳೆ ಇದ್ದಾಳೆಂದ ಮೇಲೆ ಇದೆ ಸರಿಯಾದ ಸಮಯವಿಲ್ಲವೆ - ಅವಳೊಂದಿಗೆ ಈ ವಿಷಯವನ್ನೆತ್ತಿ ಮಾತನಾಡಲು..? ' ಎನಿಸಿ ಶ್ರೀನಾಥನ ಅಂತರ್ಪ್ರಜ್ಞೆ ತಟ್ಟನೆ ಜಾಗೃತವಾಗಿತ್ತು - ತನ್ನ ಮನದಳಲನ್ನು ಹೊರ ಹಾಕುವ ಸೂಕ್ತ ಸಮಯವಿದಾಗಬಹುದಲ್ಲಾ ಎಂಬನಿಸಿಕೆಯೊಡನೆ..
'ಈಗ ಪೂರ್ತಿಯಾಗಿ ಹುಷಾರಾಗಿದಾಳೆ ತಾನೆ..? ಔಷಧಿಯೆಲ್ಲ ಇನ್ನು ಹಾಕುತ್ತಿರಬೇಕೊ, ಎಲ್ಲಾ ಮುಗಿಸಾಯ್ತೊ..?' ಮನದ ಮಾತನ್ನು ಯಾವ ರೀತಿ ಹೊರ ಹಾಕುವುದು, ಹೇಗದನ್ನು ಎತ್ತಿ ಆಡುವುದೆನ್ನುವ ಸಮಾಂತರ ಆಲೋಚನೆಯ ನಡುವೆಯೆ ಮಾತು ಮುಂದುವರೆಸುವ ಕೊಂಡಿಯಂತೆ ಮಗುವಿನ ಔಷಧಿಯ ಕುರಿತು ಪ್ರಶ್ನಿಸಿದ ಶ್ರೀನಾಥ..
'ಅಯ್ಯೊ.. ಔಷಧಿ ಎಲ್ಲ ಮುಗಿದು ಸುಮಾರು ದಿನಗಳಾಯ್ತು..ಈಗ ಏನೂ ಕೊಡುತ್ತಿಲ್ಲ.. ನೀವದೆಲ್ಲೊ ಯಾವುದೊ ಮಾಂಕ್ ಬರಹೇಳಿದ್ದಾರೆಂದು ಅವರ ದೇವಸ್ಥಾನಕ್ಕೆ ಹೊರಡುತ್ತಿರೆಂದು ಹೇಳಿದಿರಲ್ಲಾ..? ಆ ಹೊತ್ತಿನಿಂದಲೆ ಇದ್ದಕ್ಕಿದ್ದಂತೆ ಅವಳಲ್ಲೇನೊ ಚೇತರಿಕೆ, ಬಲ ಹೆಚ್ಚಾದಂತೆ ಕಾಣಿಸಿತು ರೀ... ಮತ್ತೊಂದು ವಿಚಿತ್ರ ಗೊತ್ತಾ? ಮೊದಲೆಲ್ಲ ಎಷ್ಟು ಹಠಮಾರಿತನ, ಎಲ್ಲಾ ವಿಷಯಕ್ಕು ಅತ್ತು, ಕಿರುಚಿ, ಗಲಾಟೆ ಮಾಡುವುದು, ಸಿಕ್ಕಿದ್ದೆಲ್ಲಾ ಎತ್ತೆಸೆಯುವುದು, ಎಳೆದಾಡುವುದು, ಸಿಟ್ಟಿನಲ್ಲಿ ಮನಸಿಗೆ ಬಂದ ಹಾಗೆ ಮಾಡುವುದು - ಇವೆಲ್ಲಾ ನಡೆಯುತ್ತಿತ್ತು... ನಾವೂ ಸಹ ಚಿಕ್ಕ ಮಗುವಿನ ಮಾಮೂಲಿ ಹಠವೆಂದುಕೊಂಡು ಸುಮ್ಮನಿದ್ದರೂ, ಇವಳಲ್ಯಾಕೊ ಅದು ಸ್ವಲ್ಪ ಹೆಚ್ಚೆ ಇರುವಂತಿದೆಯಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದೆವು.. ಆದರೆ ನೀವು ಆ ದೇವಸ್ಥಾನಕ್ಕೆ ಹೋದ ದಿನದಿಂದಲೆ ಏನಾಯ್ತೊ ಗೊತ್ತಿಲ್ಲ.. ಆ ಹಳೆಯ ಗಲಾಟೆ, ಸಿಟ್ಟು, ಸೆಡವುಗಳಲ್ಲ ಯಾರೊ ಮಂತ್ರ ಹಾಕಿದ ಹಾಗೆ ತಟ್ಟನೆ ನಿಂತುಹೋಗಿವೆ... ಈಗ ಏನಾದರೂ ತಿನಿಸಬೇಕಾದರೂ ಮೊದಲಿನ ಹಾಗೆ ಹಠ ಮಾಡುವುದಾಗಲಿ, ಎತ್ತೆಸೆಯುವುದಾಗಲಿ ಮಾಡದೆ ಸಮಾಧಾನದಿಂದ ತಿನಿಸಿದ್ದು ತಿನ್ನುತ್ತಾಳೆ... ಆಮೇಲೂ ಅಷ್ಟೆ ತಿಂದು ತನ್ನ ಪಾಡಿಗೆ ತಾನು ಆಡಿಕೊಂಡಿರುತ್ತಾಳೆ ಒಂದು ಚೂರು ಗಲಾಟೆ ಮಾಡದೆ.. ಮೊನ್ನೆ ಯಾವುದೊ ಇನ್ನೊಂದು ಮಗುವಿನ ಜತೆ ಆಡುವಾಗ ತನ್ನೆಲ್ಲ ಆಟದ ಸಾಮಾನನ್ನು ಎತ್ತಿ ಕೊಟ್ಟುಬಿಟ್ಟು ತಾನು ಸುಮ್ಮನೆ ಜತೆಗೆ ಕೂತಿದ್ದಳು.. ಮೊದಲಾದರೆ, ಬೇರೆಯವರು ಅವನ್ನು ಮುಟ್ಟಲೂ ಬಿಡುತ್ತಿರಲಿಲ್ಲ ಗೊತ್ತಾ? ನನಗೇನೊ ಎಲ್ಲ ನೀವು ಆ ದೇವಸ್ಥಾನಕ್ಕೆ ಹೋಗಿ ಬಂದ ಮೇಲಿನ ಬದಲಾವಣೆ ಎನಿಸಿಬಿಟ್ಟಿತ್ತು.. ಆ ಮಾಂಕ್ ಯಾರೊ ತೀರಾ ಶಕ್ತಿಯಿರುವವರು ಎಂದು ಕಾಣುತ್ತೆ.. ಅವರ ಆಶೀರ್ವಾದದ ಫಲವೆ ಇದೆಲ್ಲಾ ಎಂದು ನನ್ನ ಅನುಮಾನ...'
ಮಗುವಿನ ಮೇಲಣ ಪ್ರೀತಿ, ಅಭಿಮಾನ ಮಾತೃತ್ವದ ಸಹಜ ಹೃದಯದಾಳಾದ ಮಾತಾಗಿ ಹೊರಬರುತ್ತಿದೆಯೆನಿಸಿದರು, ಆ ಮಾತಿನ ನಡುವೆಯೆ ತನ್ನ ಸಂವಾದವನ್ನು ಆರಂಭಿಸಬಹುದಾದ ಅವಕಾಶದ ಮಿಂಚಿನ ರೇಖೆಯೊಂದು ಹೊಳೆದಂತೆ ಭಾಸವಾಯ್ತು ಶ್ರೀನಾಥನಿಗೆ. ಮಾಂಕ್. ಸಾಕೇತರ ಕುರಿತು ಹೇಳಲು ಇದೇ ಸರಿಯಾದ ಅವಕಾಶ.. ಅದನ್ನು ಹೇಳುವ ನಡುವೆಯೆ ಅವರು ತನ್ನಲ್ಲೂ ಉಂಟು ಮಾಡಿದ ಪರಿವರ್ತನೆಯ ಚೈತ್ರ ಯಾತ್ರೆಯನ್ನು ಸಂಕ್ಷಿಪ್ತವಾಗಿ ಹೇಳಬಹುದಲ್ಲವೆ ..? ಆ ವಿಷಯ ತನ್ನ ಮುಂದಿನ ತಪ್ಪೊಪ್ಪಿಗೆಯ ವರದಿಗೆ ಸೂಕ್ತ ವೇದಿಕೆ ಒದಗಿಸಬಹುದೇನೊ?
'ಹಾಗೇನಾದರೂ ಪರಿವರ್ತನೆ ಎಂದಾಗಿದ್ದರೆ ಅವರು ಅದನ್ನು ಪಾಪುವಿನಲ್ಲಿ ಮಾತ್ರ ಮಾಡಲಿಲ್ಲ ಲತ, ಜತೆಗೆ ನನ್ನನ್ನು ಬದಲಿಸಿಬಿಟ್ಟರು..' ಎಂದ ಶ್ರೀನಾಥ ಅರ್ಥಗರ್ಭಿತವಾಗಿ.
'ಅಂದರೆ...' ಅವನು ಹೇಳುತ್ತಿರುವ ಮಾತಿನ ಅಂತರಾರ್ಥ ಸ್ಪಷ್ಟವಾಗಿ ಅರ್ಥವಾಗದೆ ಮುಗ್ದಳಾಗಿ ಕೇಳಿದ್ದಳು ಲತ.
' ನಾನು ಒಂದಷ್ಟು ದಿನ ಅವರಿರುವ ಜಾಗಕ್ಕೆ ಹೋಗಿರಬೇಕು, ಪೋನ್ ಗೀನು ಮಾಡಲೂ ಅವಕಾಶವಿರುವುದಿಲ್ಲ - ಎಂದು ಹೇಳಿದ್ದೆ , ನೆನಪಿದೆಯಾ..?'
'ಹೌದು ನೆನಪಿದೆ.. ಆಗ ತಾನೆ ಸೀರಿಯಸ್ಸಾಗಿದ್ದ ಮಗು ಹುಷಾರಾಗುತ್ತಿದ್ದ ಹೊತ್ತು.. ನಾವು ಹರಕೆ ತೀರಿಸಲು ಹೋಗಿದ್ದ ಅದೇ ಹೊತ್ತಲ್ಲಿ..' ಆ ಹೊತ್ತಿನ ನೆನಪುಗಳನ್ನೆಲ್ಲ ಒಂದೆ ಬಂಧಕ್ಕೆ ಜೋಡಿಸುತ್ತ ನುಡಿದಳು ಲತ..
'ಆ ಸಮಯ ಒಂದು ವಾರ ಪೂರ್ತಿ ನಾನವರ ಆಶ್ರಮದಲ್ಲಿ ಕಳೆದಿದ್ದೆ - ಅವರ ಹಾಗೆ ಅವರಿರುವ ಜಾಗದಲ್ಲಿಯೆ ವಾಸವಾಗಿರುತ್ತ..'
' ಹೌದು.. ನಾನೂ ಕೇಳಬೇಕೆಂದುಕೊಂಡೆ ಪ್ರತಿ ಸಾರಿಯೂ ಮರೆತುಬಿಡುತ್ತಿದ್ದೆ - ಅಲ್ಲಿದ್ದುಕೊಂಡು ಏನು ಮಾಡಿದಿರಿ? ಅಂತ. ಅಲ್ಲಿಯೂ ದಿನ ಪೂಜೆ ಗೀಜೆ ಮಾಡುತ್ತಿರಬೇಕಾಗಿತ್ತ ಅಥವಾ ಯೋಗದ ತರದ್ದೇನಾದರೂ ಕಲಿಸುತ್ತಿದ್ದರ..?'
'ಒಂದು ರೀತಿ ಹಾಗೆ ಎಂದು ಹೇಳಬಹುದೇನೊ.. ಪೂಜೆ, ಯೋಗಗಳನ್ನೆಲ್ಲ ಒಟ್ಟಾಗಿ ಸೇರಿಸಿದ 'ಧ್ಯಾನಯೋಗ' ಅಂತಲೂ ಹೇಳಬಹುದು ಅಲ್ಲಿಯ ದಿನಗಳನ್ನೆ ನೆನಪಿಸಿಕೊಳ್ಳುತ್ತ ನುಡಿದ ಶ್ರೀನಾಥ.
' ಓಹೊ..ಅದೇನೊ ಬಹಳ ಮಹಿಮೆಯ ಜಾಗ ಅಂತಾ ಕಾಣುತ್ತೆ.. ಅಷ್ಟು ದೂರದಿಂದಲೆ ಪಾಪುವಿನ ಮೇಲೆ ಇಷ್ಟು ಪ್ರಭಾವ ಬೀರಿದೆ ಅನ್ನೋದಾದ್ರೆ, ಇನ್ನು ಅವಳನ್ನೆ ಅಲ್ಲಿಗೆ ಕರೆದುಕೊಂಡು ಹೋಗಿಬಿಟ್ಟಿದ್ದರೆ ಮಾತೆ ಆಡುವಂತಿಲ್ಲವೇನೊ...?' 'ಅವಳಿನ್ನು ಮಗುವಿನ ಜಗದಿಂದ ಹೊರ ಬಂದಂತಿಲ್ಲ.. ಅದನ್ನು ತನ್ನ ವಿಷಯದತ್ತ ತಿರುಗಿಸುವುದು ಹೇಗೆ..?' ಎಂಬ ಮಥನದಲ್ಲೆ ಶ್ರೀನಾಥ,
' ಅವಳ ಮಾತಿರಲಿ.. ಆ ವಾರದ ವಾಸದ ನಂತರ ನಾನೆ ಬದಲಾಗಿಹೋಗಿದ್ದೇನೆ.. ಇನ್ನು ಮಕ್ಕಳ ಮಾತೇನು..?' ಎಂದ.
'ನೀವು ಬದಲಾಗಿಹೋಗಿದ್ದೀರಾ..? ಆ ಸನ್ಯಾಸಿಯಂತೆ ನೀವು ಸನ್ಯಾಸಿಯಾಗಿ ಬಿಡಲಿಲ್ಲ ತಾನೆ..?' ಲಘು ಹಾಸ್ಯದ ಛೇಡಿಕೆಯ ದನಿಯಲ್ಲಿ ಕೇಳಿದ್ದಳು ಲತಾ.
' ಶಾಶ್ವತವಾಗಲ್ಲದಿದ್ದರೂ ಆ ಒಂದು ವಾರ ಅಲ್ಲಿದ್ದಾಗ ಬೌದ್ಧ ಸನ್ಯಾಸಿಯಾಗಿಯೆ ಅಲ್ಲಿದ್ದುದ್ದು..! '
'ಹಾ..!'
'ಗಾಬರಿ ಬೀಳಬೇಡ.. ಅಲ್ಲಿ ಹೋದವರೆಲ್ಲ ಇರುವಷ್ಟು ದಿನವೂ ಹಾಗೆ ಇರಬೇಕೆಂದು ಅಲ್ಲಿಯ ಕಡ್ಡಾಯ ನಿಯಮ...'
' ಅಬ್ಬಾ!.. ಸದ್ಯ...' ಅವಳ ದನಿಯಲ್ಲಿ ಅದುವರೆಗಿರದಿದ್ದ ಉದ್ವೇಗಾತಂಕ ಮಾತಿನ ರೂಪಲ್ಲಿ ನಿರಾಳತೆಯಾಗಿ ಹೊರ ಬಿದ್ದಿತ್ತು.
' ಆ ಜಾಗದಲ್ಲಿದ್ದುಕೊಂಡು ಬೇರೇನು ಮಾಡುವಂತಿರಲಿಲ್ಲ.. ಪ್ರತಿದಿನ ಒಂದೆ ಹೊತ್ತು ಊಟ, ಮತ್ತೊಂದಷ್ಟು ಕೆಲಸ ಬಿಟ್ಟರೆ ಮಿಕ್ಕೆಲ್ಲ ಹೊತ್ತಲ್ಲಿ ಧ್ಯಾನ. ಸರಿ ತಪ್ಪಿನ ವಿವೇಚನೆ ಮಾಡುತ್ತ ಹಳೆಯದನ್ನೆಲ್ಲ ನೆನೆಸಿಕೊಳ್ಳುತ್ತ ಒಂದು ರೀತಿ ಮೈ ಮನಸುಗಳನ್ನೆಲ್ಲ ಶುದ್ಧಿಗೊಳಿಸಿಕೊಳ್ಳುವ ಹಾಗೆ..'
' ಇಡೀ ದಿನ ಒಂದೆ ಹೊತ್ತಿನ ಊಟವೆ..? ನೀವು ಆರೋಗ್ಯವಾಗಿ ಸರಿಯಾಗಿದ್ದೀರಾ ತಾನೆ..? ಯಾಕದನ್ನೆಲ್ಲ ಮಾಡಲಿಕ್ಕೆ ಹೋದಿರಿ..? ಸುಮ್ಮನೆ ಒಂದು ನಮಸ್ಕಾರ ಹಾಕಿ, ಎರಡು ಊದಿನಕಡ್ಡಿ ಹಚ್ಚಿ ಪೂಜೆ ಮಾಡಿ ಬಂದಿದ್ದರೆ ಸಾಕಾಗುತ್ತಿರಲಿಲ್ಲವಾ..?' ಅವನು ಅದುವರೆವಿಗೂ ಹೇಳದಿದ್ದ ವಿವರಗಳನ್ನು ಕೇಳುತ್ತಿದ್ದಂತೆ ಒಂದೆಡೆ ಆಘಾತ ಪ್ರೇರಿತ ಗಾಬರಿಯಾಗುತ್ತಿದ್ದರೆ ಮತ್ತೊಂದೆಡೆ ಮಗುವಿಗಾಗಿ ಇಷ್ಟೆಲ್ಲಾ ಮಾಡಿದರೆ? ಎಂಬ ವಿಸ್ಮಯ ಸಹ ಸಾಕಾರವಾದ ದನಿಯಲ್ಲಿ ಒಂದೇ ಉಸುರಲ್ಲಿ ನುಡಿದಿದ್ದಳು...
'ಈಗದನ್ನೆಲ್ಲ ಪೋನಿನಲ್ಲಿ ಚರ್ಚಿಸುವುದು ಬೇಡ..ಮುಂದೊಮ್ಮೆ ವಿವರವಾಗಿ ಮಾತಾಡೋಣ... ಇಲ್ಲವಾದರೆ ನಾನು ಹೇಳ್ಹೊರಟ ವಿಷಯ ಅರ್ಧಂಬರ್ಧವಾಗಿ ಬಿಡುತ್ತದೆ... ಮಧ್ಯೆ ನಿನ್ನ ತಮ್ಮ ಬಂದುಬಿಟ್ಟರೆ ಕಥೆಯನ್ನು ಅರ್ಧದಲ್ಲೆ ನಿಲ್ಲಿಸಿಬಿಡಬೇಕಾಗುತ್ತದೆ..' ಎಂದ ಶ್ರೀನಾಥ ಹುಸಿ ಬೆದರಿಕೆ ಹಾಕುವವನಂತೆ..
'ಸರಿ ಸರಿ ಅದೇನು ಬೇಗನೆ ಹೇಳಿ.. ಇನ್ನು ಮಧ್ಯೆ ಪಾಪು ಏನಾದರು ಎದ್ದು ಬಿಟ್ಟರೆ ಕಷ್ಟ.. ಮಾತಾಡಲು ಬಿಡುವುದಿಲ್ಲ ಅವಳು..'
' ಅದೆ ಹೇಳುತ್ತಿದ್ದೀನಲ್ಲಾ ? ಆ ಧ್ಯಾನದ ಹೊತ್ತಲ್ಲಿ ಒಳಗೆಲ್ಲಾ ಏನೇನೊ ಆಲೋಚನೆ, ಚಿಂತನೆ, ಯೋಚನೆಗಳೆಲ್ಲಾ ನಡೆಯುತ್ತಿತ್ತು.. ಯಾಕೆ ಮನಶ್ಯಾಂತಿಯಿರದೆ ಕಾಡುವ ಹಾಗಾಗುತ್ತಿದೆ..? ಯಾಕೆ ಪಾಪುವಿಗೆ ಹೀಗಾಯ್ತು..? ಯಾಕೆ ಕೆಲಸದಲ್ಲೂ ನೆಮ್ಮದಿಯಿರದ ಪರಿಸ್ಥಿತಿ..? ಯಾಕೆ ಯಾವಾಗಲೂ ತೊಳಲಾಟ, ಗೊಂದಲ..? ಎಂದೆಲ್ಲಾ ಮನ ಮಥನ...'
' ಅಷ್ಟೆಲ್ಲಾ ಚಿಂತೆ ಕೊರೆಯುತ್ತಿತ್ತಾ ಒಳಗೆ..?' ಅವನ ಅಂತರ್ಯದ ಪಾಡಿನ ಅರಿವಿಲ್ಲದ ಮುಗ್ದಾಶ್ಚರ್ಯ ಬೆರೆತ ದನಿಯಲ್ಲಿ ಕೇಳಿದಳು ಲತ ತನಗೆ ತಾನೆ ಹೇಳಿಕೊಂಡಂತೆ.. ನಡುವಲ್ಲಿ ಅವಳಾಡಿದ ಮಾತನ್ನು ಗಮನಿಸದವನಂತೆ ಮುಂದುವರೆಸಿದ್ದ ಶ್ರೀನಾಥ...
' ಆ ಮಥನದಲ್ಲಿ ಮಾಂಕ್ ಸಾಕೇತರು ಒಂದು ಸತ್ಯ ಮನದಟ್ಟಾಗಿಸಿದರು... ನಾವು ಅರಿವಿದ್ದೊ, ಅರಿವಿಲ್ಲದೆಯೊ ಮಾಡುವ ಪ್ರತಿ ಕೆಲಸವು ನಮ್ಮಲ್ಲಿ ಶಕ್ತಿಯ ರೂಪದಲ್ಲಿ ಸೇರಿಕೊಳ್ಳುತ್ತ ಹೋಗುತ್ತದೆ, ಒಳ್ಳೆಯ ಶಕ್ತಿ ಅಥವಾ ಕೆಟ್ಟ ಶಕ್ತಿಯಾಗಿ.. ಅದು ಒಳ್ಳೆಯದಿದ್ದರೆ ಮನಶ್ಯಾಂತಿಗೆ ಹೆಚ್ಚು ಜಾಗ, ಕೆಟ್ಟದಿದ್ದರೆ ಅಶಾಂತಿ, ತಳಮಳಕ್ಕೆ ಅದೇ ಅಡಿಪಾಯ..'
'ಅದೊಂದು ರೀತಿ ನಮ್ಮ ಪಾಪ, ಪುಣ್ಯಗಳಿದ್ದ ಹಾಗೆ.. ಅಲ್ವಾ..?'
ನಮ್ಮ ಕರ್ಮಾಂತರ, ಜನ್ಮಾಂತರ ಪರಿಭಾಷೆಯಲ್ಲಿ ಹೇಳುವುದು ಅದೆಷ್ಟು ಸುಲಭ..? ಕೊನೆಗೆಲ್ಲವೂ ಪಾಪ ಪುಣ್ಯದ ಲೆಕ್ಕವೆಂದೆ ತಾನೂ ಕಂಡುಕೊಂಡಿದ್ದಲ್ಲವೆ..? ಅದಾವ ತರದ ಚಿಂತನೆಯ ಹಂಗಿಲ್ಲದೆ ಬರಿಯ ಪುರಾತನವೆನ್ನುವ ಗೊಡ್ಡು ನಂಬಿಕೆಗಳ ಆಧಾರದ ಮೇಲೆ ಇವಳು ಒಂದೆ ಮಾತಿನಲ್ಲಿ ಅದರ ಸಾರ ಹಿಡಿದುಬಿಟ್ಟಳು.. ತ್ರಿಶಕ್ತಿ, ತ್ರಿಗುಣಾದಿಯಾಗಿ ಎಲ್ಲಾ ಪ್ರವರ ಹೇಳಿ ಅವಳನ್ನು ಗೊಂದಲಕ್ಕಿಳಿಸದೆ ಅವಳದೆ ಸರಳ ಪರಿಭಾಷೆಯಲ್ಲಿ ಅವಳ ಪ್ರಶ್ನೆಗೆ ಉತ್ತರಿಸುವುದೊಳಿತೆನಿಸಿ, ' ಹೌದು.. ಅದು ಪಾಪ ಪುಣ್ಯದ ಲೆಕ್ಕಾಚಾರವೆ ಅನ್ನು.. ಪಾಪ ಹೆಚ್ಚಾದಷ್ಟು ಸುಖ-ಶಾಂತಿ ಕಡಿಮೆಯಾದರೆ, ಪುಣ್ಯ ಹೆಚ್ಚಾದಷ್ಟು ಸುಖ-ಶಾಂತಿ ಹೆಚ್ಚಾಗುತ್ತದೆ.. ಒಟ್ಟಾರೆ ಮನದಲ್ಲಿ ಆ ಸುಖಶಾಂತಿಯ ಭಾವನೆ ಇಲ್ಲವೆಂದರೆ ಗೊತ್ತಿದ್ದೊ, ಗೊತ್ತಿಲ್ಲದೆಯೊ ಬರಿ ಪಾಪ ಕಾರ್ಯ ಹೆಚ್ಚಾಗಿ ಮಾಡುತ್ತಿದ್ದೇವೆಂದೊ, ಹಿಂದೆಯೂ ಸಾಕಷ್ಟು ಮಾಡಿದ್ದೆವೆಂದೊ ಅರ್ಥ...' ಹಿಂದೂ ಸಂಪ್ರದಾಯ, ನಂಬಿಕೆಯಲ್ಲಿ ಬೆಳೆದವಳಿಗೆ ಆ ಪಾಪ ಪುಣ್ಯದ ಪರಿಭಾಷೆ ನೀರಿನಲ್ಲಿ ಹೊಕ್ಕ ಮೀನಿನಷ್ಟೆ ಸಹಜವಾಗಿ ನಿಲುಕಿಗೆ ಸಿಗುವಂತಾದ್ದು.. ಅಲ್ಲದೆ ಅವಳೇನು ಕಡಿಮೆ ಚತುರಮತಿಯಲ್ಲ, ಈಗ ಕೊಂಚ ಮಂಕಾದಂತಿದ್ದರೂ..
' ಸರಿ..ಅರ್ಥವಾಯಿತು ಬಿಡಿ...ಮನಶ್ಯಾಂತಿಯಿರದ ಸ್ಥಿತಿಯೆಂದರೆ ಪಾಪಗಳೆ ಹೆಚ್ಚೆಂದರ್ಥ.. ನೀವೇನಂತಹ ಪಾಪಕಾರ್ಯ ಮಾಡಿದ್ದಿರೆಂದು ಹುಡುಕಿ ನೋಡಬೇಕಿತ್ತು...ಪರಿಹಾರಕ್ಕೆ ಆಮೇಲೆ ಹರಕೆ, ಪೂಜೆಗಳ ದಾರಿ ಹೇಗೂ ಹುಡುಕಬಹುದಲ್ಲಾ..?' ಎಂದು ತುಸು ಹಾಸ್ಯದ, ಛೇಡನೆಯ ದನಿಯಲ್ಲಿ ನುಡಿದಿದ್ದಳು ಲತ.. ಶ್ರೀನಾಥನ ಮನ ಅವಳ ಛೇಡನೆಯತ್ತ ಗಮನ ನೀಡದೆ ಚಿಂತಿಸುತ್ತಿತ್ತು - 'ಹೌದು , ಇದೇ ಸರಿಯಾದ ಸಮಯ ಎಲ್ಲವನ್ನು ಅನಾವರಣಗೊಳಿಸುತ್ತ ಹೇಳಿಬಿಡಲು...' ಆ ಒಳದನಿಯ ಉತ್ತೇಜನದಲ್ಲಿಯೆ ಮುಂದುವರೆಯುತ್ತ ನುಡಿದಿದ್ದ ಶ್ರೀನಾಥ...
' ಮಾಂಕ್ ಸಾಕೇತರು ಹೇಳಿದ್ದೊಂದೆ ಮಾತು.. ಆ ಪಾಪಗಳೇನು ಎಂದು ಕಂಡುಕೊಂಡರೆ, ಅದನ್ನು ನಿವಾರಿಸುವ ಅದರ ವಿರುದ್ಧ ಕ್ರಿಯೆಯನ್ನು ಮಾಡಿ ಆ ಒತ್ತಡದಿಂದ ಬಿಡುಗಡೆಯಾಗಬಹುದು ಎಂದು.. ಆಗ ಧ್ಯಾನದ ನಡುವೆಯೆ ಕುಳಿತು ಆಲೋಚಿಸತೊಡಗಿದೆ ಹಳೆಯದೆಲ್ಲಾ ಪಾಪಗಳು ಮತ್ತು ಹೊಸದಾಗಿ ಮಾಡಿದ್ದವನ್ನು ಕೂಡ.. ಪ್ರತಿಯೊಂದಕ್ಕೂ ಏನು ಪರಿಹಾರ ಸಾಧ್ಯ ಅನ್ನುವುದನ್ನು ಹುಡುಕುತ್ತ ಹೋದಾಗ ಎಲ್ಲ ನೆನಪಾಗತೊಡಗಿದವು... ಚಿಕ್ಕ ವಯಸಿನ ಹುಡುಗಾಟ, ಕಾಲೇಜು ದಿನಗಳ ಹುಚ್ಚಾಟ, ವಯಸಿನ ತಿಮಿರಿನ ಹೊಯ್ದಾಟ, ಕೊನೆಗೆ ಬ್ಯಾಂಕಾಕಿನಲ್ಲಿ ಬಂದಿಳಿದ ಮೇಲೆ ಇಲ್ಲಿನ ಅಸಹನೀಯ ಏಕಾಂತ, ಒಬ್ಬಂಟಿತನದ ದೆಸೆಯಿಂದ ಮಾಡಿದ 'ಮಾಡಬಾರದ ಕೆಲಸ...'....'
' ಬ್ಯಾಂಕಾಕಿನಲ್ಲಿ ಮಾಡಬಾರದ್ದಂತದ್ದೇನು ಮಾಡಿದಿರಿ..? ಮೊದಲೆ ಊರುಕೇರಿ ಗೊತ್ತಿಲ್ಲದ ಜಾಗ ಅದು...' ಈಗವಳ ದನಿಯಲ್ಲಿ ನಿಜಕ್ಕೂ ಗಾಬರಿಯಿತ್ತು.
' ಅದನ್ನೆಲ್ಲ ಈಗ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಲತಾ.. ಆದರೆ ಅದು ನಿನಗೆ ನೇರ ಸಂಬಂಧಿಸಿದ್ದರಿಂದ ಹೇಳದಿದ್ದರೆ ಈ ಪಾಪದ ಹೊರೆ ಕೆಳಗಿಳಿಯುವುದಿಲ್ಲ.. ನಂತರ ಅದನ್ನು ಹೇಗೆ ಸ್ವೀಕರಿಸುತ್ತಿಯೊ ಎನ್ನುವುದು ನಿನಗೆ ಬಿಟ್ಟಿದ್ದು.. ಎಲ್ಲಾ ಕೇಳಿಯಾದ ಮೇಲೆ ನನ್ನ ಕುರಿತು ಏನು ಅಭಿಪ್ರಾಯ ತಾಳುತ್ತಿಯೊ ಎನ್ನುವುದು ಸಹ ನಿನಗೆ ಬಿಟ್ಟಿದ್ದು.. ಆದರೆ ಪ್ರಾಮಾಣಿಕವಾಗಿ ಇದ್ದುದನ್ನು ಹೇಳಿಬಿಡುವುದು ಮಾತ್ರ ಸರಿಯಾದ ದಾರಿಯೆಂದು ನನ್ನ ಮನಸು ನಿರ್ಧರಿಸಿಬಿಟ್ಟಿದೆ.. ನಾನಿದ್ದ ಈ ಹೊತ್ತಿನ ಏಕಾಂಗಿತನ, ಪ್ರಾಜೆಕ್ಟಿನ ರಾಜಕೀಯ, ಕೆಲಸದ ಒತ್ತಡ ಎಲ್ಲವೂ ಸೇರಿಕೊಂಡು ನನ್ನನ್ನು ತಪ್ಪು ದಾರಿಗೆಳೆಸಿ ಆ ಮೂಲಕ ಮಿಕ್ಕೆಲ್ಲಾ ತೊಡಕುಗಳನ್ನು ಮರೆಮಾಚಿಸಲು ಯತ್ನಿಸುತ್ತಿತ್ತೇನೊ ಈ ಮನಸು..? ಅದು ಹೇಗಾಯ್ತೊ, ಏನಾಯ್ತೊ ಗೊತ್ತಿಲ್ಲ - ನನ್ನರಿವಿಗೆ ಬರುವ ಮೊದಲೆ ಇಲ್ಲೊಂದು ಗೆಳೆತನದ ಬಲೆಗೆ ಬಿದ್ದು, ಅದು ಗಡಿರೇಖೆಯ ಮಿತಿ ಮೀರಿ ನಡೆಯಬಾರದ್ದನ್ನು ನಡೆಸುವ ಮಟ್ಟಕ್ಕೆ ಕೊಂಡೊಯ್ದುಬಿಟ್ಟಿತ್ತು..ಆ ಹೊತ್ತಿನ ಮನಸಿನ ವಿಕಲ್ಪ ಅದೆಷ್ಟು ಪ್ರಕ್ಷುಬ್ದ ಮಟ್ಟದಲ್ಲಿತ್ತೆಂದರೆ ಅಲ್ಲಿ ನೀನಾಗಲಿ, ಪಾಪುವಾಗಲಿ ನೆನಪಾಗಿ ಬಂದು ಅಡ್ಡಿಯೊಡ್ಡುವ ಸ್ತರದಲ್ಲೆ ಇರಲಿಲ್ಲ.. ಅದೆಲ್ಲವನ್ನು ಮೀರಿದ ಯಾವುದೊ ಭ್ರಮಾಲೋಕದಲ್ಲಿ ಕಳುವಾಗಿ ಹೋಗಿದ್ದೆ.. ಅಷ್ಟಿಷ್ಟು ಅರಿವಾಗಿ ಕಣ್ತೆರೆಯುವ ಹೊತ್ತಿಗೆ ಬಲು ದೂರ ಹೋಗಿಯಾಗಿತ್ತು.. ಸುದೈವಕ್ಕೆ ಅದೇ ಸಮಯದಲ್ಲೆ ಹೇಗೊ ಮಾಂಕ್ ಸಾಕೇತರ ಪರಿಚಯವಾಗಿ ಅವರಿಂದ ಇದೆಲ್ಲಾ ಬಂಧಗಳಿಂದ ಬಿಡುಗಡೆಯಾಗುವ, ಪರಿಹಾರದ ದಾರಿ ಹುಡುಕುವ ಅವಕಾಶ ಸಿಕ್ಕಿತು... ಈ ತಪ್ಪೊಪ್ಪಿಗೆ ಕೂಡ ಆ ಪ್ರಾಯಶ್ಚಿತದ ಫಲಿತವೆ... ಈಗ ಆ ಸಂಬಂಧಗಳಾವುದು ಉಳಿದುಕೊಂಡಿಲ್ಲ, ಪೂರ್ಣವಾಗಿ ಹೊರ ಬಂದಿರುವೆ ಎನ್ನುವುದು ಸತ್ಯವಾದರೂ ಅದನ್ನು ನಿನ್ನಿಂದ ಮುಚ್ಚಿಟ್ಟರೆ ಅಪ್ರಾಮಾಣಿಕತೆಯಾದಷ್ಟೆ, ಪಾಪದ ಹೊರೆಯೂ ಹಾಗೆ ಉಳಿದುಬಿಡುತ್ತದೆ.. ಅದಕ್ಕಾಗಿ ಧೈರ್ಯ ಮಾಡಿ ಹೇಳಿಬಿಡುತ್ತಿದ್ದೇನೆ... 'ಐಯಾಂ ರಿಯಲೀ ಸಾರೀ' ಅನ್ನುವುದು ತುಂಬಾ ನಾಟಕವಾದಂತೆನಿಸಿದರೂ ಅದನ್ನು ಹೇಳಲೇಬೇಕು.. ನನ್ನ ಕ್ಷಮಿಸಿಬಿಡು ಲತಾ...'
ಹೇಳಬೇಕೆನಿಸಿದ್ದನ್ನೆಲ್ಲ ಒಂದೆ ಉಸುರಿನಲ್ಲಿ ಆಡಿಬಿಟ್ಟು ಮುಗಿಸಿದ ನಿರಾಳತೆಯೊಂದಿಗೆ ದೊಡ್ಡದೊಂದು ನಿಟ್ಟುಸಿರನ್ನು ಬಿಟ್ಟು ಮೌನವಾದ ಶ್ರೀನಾಥ.. ಈಗ 'ಬಾಂಬ್' ಸಿಡಿಯಲಿದೆಯೆ ಅತ್ತ ಕಡೆಯಿಂದ..? ಗೋಳಾಡಿ, ಕಿರುಚಾಡಿ ರಂಪ ಮಾಡುವಳೆ..? ದೂಷಿಸಿ ಮುಖಕ್ಕೆ ಮಂಗಳಾರತಿ ಎತ್ತುವಳೆ.l? ಅವರಪ್ಪ ಅಮ್ಮನಿಗೆ ವಿಷಯ ತಿಳಿಸಿ ಹೊಸ ಪಂಚಾಯತಿ, ರಂಪಾಟಕ್ಕೆ ದಾರಿ ಮಾಡುವಳೆ..?
ಅದೇನು ಮಾಡುವಳೆಂಬ ಸಸ್ಪೆನ್ಸಿಗೆ ಮತ್ತಷ್ಟು ಎಣ್ಣೆ ಸುರಿಯುವ ಹಾಗೆ ಇದ್ದಕ್ಕಿದ್ದಂತೆ ಮಾತೆ ಇರದ ಮೌನ ಆವರಿಸಿಕೊಂಡುಬಿಟ್ಟಿತ್ತು ಇಬ್ಬರ ನಡುವೆ. ಬಹುಶಃ ಪೋನಿನ ಮುಖಾಂತರದ, ಈ ಮುಖಾಮುಖ ನೋಡದ ಅದೃಶ್ಯ ಹಾಗೂ ಪರೋಕ್ಷ ಸಂವಹನ ಸಾಧ್ಯವಿರದಿದ್ದರೆ, ತಾನೆಂದು ಈ ಮಾತುಗಳನ್ನಾಡಲು ಸಾಧ್ಯವಿರಲಿಲ್ಲವೇನೊ ಅನಿಸಿಬಿಟ್ಟಿತ್ತು ಶ್ರೀನಾಥನಿಗೆ. ಪ್ರತಿ ಕ್ಷಣವೂ ಯುಗಗಳಂತಾಗಿ ಕಾಣುತ್ತಿದ್ದ ಹೊತ್ತಲ್ಲಿ ಅರ್ಧ ನಿಮಿಷ ಕಳೆದರೂ ಅತ್ತ ಕಡೆಯಿಂದ ಏನೂ ಉತ್ತರ ಬರದಿದ್ದಾಗ ಗಾಬರಿಯಾಯ್ತು ಶ್ರೀನಾಥನಿಗೆ - ಈ ಸುದ್ಧಿ ಕೇಳುತ್ತಿದ್ದಂತೆ ಎಚ್ಚರ ಗಿಚ್ಚರ ತಪ್ಪಿಯೇನಾದರೂ ಬಿದ್ದುಬಿಟ್ಟಳೆ? ಎಂದು. ಮನೆಯಲ್ಲಿ ಬೇರೆ ಬೇರಾರು ಇಲ್ಲದ ಹೊತ್ತು ಎಂಬ ಗಾಬರಿಯೂ ಸೇರಿಕೊಂಡು, 'ಲತಾ...?' ಎಂದ ಎಚ್ಚರಿಸುವಂತೆ..
'ಹೂಂ...' ಎಂದು ಅತ್ತ ಕಡೆಯಿಂದ ಬಂದ 'ಹೂಂ'ಗುಟ್ಟುವ ಸದ್ದಿಗೆ ಸ್ವಲ್ಪ ಸಮಾಧಾನವಾದಂತಾಗಿ, 'ನಾನು ಹೇಳಿದ್ದೆಲ್ಲ ಕೇಳಿ.. ಶಾಕ್ ಆಯ್ತಾ..?' ಎಂದಿದ್ದ ಅದೇ ತಪ್ಪಿತಸ್ಥನ ದನಿಯಲ್ಲಿ...
ಅತ್ತ ಕಡೆಯಿಂದ ಮತ್ತರೆಗಳಿಗೆ ಉತ್ತರವಿರದ ಮೌನವೆ ಉತ್ತರವಾಗಿತ್ತು. ಬಹುಶಃ ಏನುತ್ತರ ಕೊಡಬೇಕೆಂದು ಚಿಂತಿಸುತ್ತಿರಬೇಕೆಂದು ಕೊಂಡವನಿಗೆ ಅಚ್ಚರಿಯಾಗುವಂತೆ, ಅತ್ತಕಡೆಯಿಂದ ತಟ್ಟನೆ ಸಿಡಿದು ಬಂದಿತ್ತು - ಉತ್ತರದ ಬದಲು ಪ್ರಶ್ನೆಯ ರೂಪದಲ್ಲಿ ಮಾರುತ್ತರ..
' ಆಕೆಯೇನೂ ಗಲಾಟೆ ಮಾಡಲಿಲ್ಲಾ ತಾನೆ..? ಪೋಲೀಸು ಗೀಲೀಸು ದುಡ್ಡು ಕಾಸು ಎಂದುಕೊಂಡು..ತೊಂದರೆಯೇನೂ ಆಗಲಿಲ್ಲವಲ್ಲಾ ?' ಹೆಣ್ಣಿನ ಸೂಕ್ಷ್ಮಪ್ರಜ್ಞೆಯೆಚ್ಚರಿಸಿದ ಸಮಯೋಚಿತ ಜಾಗೃತ ಸ್ಥಿತಿ ತಟ್ಟನೆ ವ್ಯವಹಾರಪ್ರಜ್ಞೆಯ ರೂಪಾಗಿ ಅನಾವರಣಗೊಂಡು ಅವನು ಹೇಳಿದ ವಿಷಯದ ಒಳಾಘಾತವನ್ನು ಬದಿಗಿರಿಸುತ್ತ, ಎಲ್ಲಕ್ಕಿಂತ ಮೊದಲು ಬಾಹ್ಯದಲ್ಲುಂಟಾಗಿರಬಹುದಾದ ನಷ್ಟದ ತುಲನೆಗಿಳಿದಿತ್ತು...!
ತನ್ನ ಪ್ರಶ್ನೆಗೆ ಮಾರುತ್ತರವಾಗಿ ಈ ಪ್ರಶ್ನೆಯನ್ನು ನಿರೀಕ್ಷಿಸಿರದಿದ್ದ ಶ್ರೀನಾಥನಿಗೂ ಕೊಂಚ ಅಚ್ಚರಿಯಾದರೂ ತೋರಿಸಿಕೊಳ್ಳದೆ, ' ಇಲ್ಲಾ ಅಂತದ್ದೇನು ಇಲ್ಲಾ..' ಎಂದ. ನಡೆದಿದ್ದೆಲ್ಲಾ ಸಂಘಟನೆಯನ್ನು ಸೂಚ್ಯವಾಗಿ ಹೇಳಿಕೊಂಡರೂ, ಅದರ ಜೀರ್ಣಿಸಿಕೊಳ್ಳಲಾಗದ ಅಸಹ್ಯಕರ ವಿವರಗಳನ್ನೆಲ್ಲ ಅವಳಲ್ಲಿ ಹೇಳುವುದಾದರೂ ಹೇಗೆ ? ಎಷ್ಟೆ ತಪ್ಪೊಪ್ಪಿಗೆಯೆಂದೆ ಹೊರಟರೂ ತನ್ನನ್ನು ಇನ್ನೂ ಕೀಳಾಗಿಸಿ ತೋರಿಸುವ ಆ ಮಟ್ಟಕ್ಕಿಳಿಸಿಕೊಳ್ಳಲು ಯಾಕೊ ಮನವಿನ್ನು ಸಿದ್ಧವಾಗುತ್ತಿಲ್ಲ..
ಅತ್ತ ಕಡೆಯಿಂದ ಮತ್ತೊಂದರೆಗಳಿಗೆ ಮೌನ ಹಾಸಿಕೊಂಡರೂ, ಅವಳೆ ಏನಾದರೂ ಹೇಳಲಿ ಎಂದು ಸುಮ್ಮನೆ ಇದ್ದ ಶ್ರೀನಾಥ ಅವಳ ಮಾತಿಗೆ ಕಾಯುತ್ತ... ಈ ಪರಿಸ್ಥಿತಿಯಲ್ಲಿ ಏನು ಮಾತನಾಡಬೇಕು, ಹೇಗೆ ನಿಭಾಯಿಸಬೇಕೆಂದು ಅವನಿಗೂ ತೋಚಿರಲಿಲ್ಲ.. ಮತ್ತೊಂದು ಯುಗದಂತೆ ಕಳೆದ ಆ ಅರೆ ನಿಮಿಷದ ತರುವಾಯ ಮೆತ್ತನೆಯ ದನಿಯಲ್ಲಿ ಅತ್ತಲಿಂದ ತೇಲಿ ಬಂದಿತ್ತು ಲತಳ ದನಿ, 'ಶ್ರೀ...' ಎನ್ನುವ ಕರೆಯ ರೂಪದಲ್ಲಿ...!
ಅವಳು ಚಿಕ್ಕ ವಯಸಿನಿಂದಲು ಅವನನ್ನು 'ಶ್ರೀ' ಎಂದೆ ಕರೆಯುತ್ತಿದ್ದುದು.. ಮದುವೆಯಾದ ಮೇಲಷ್ಟೆ ಅದು ಬದಲಾಗಿ, 'ರೀ..' ಆಗಿದ್ದು ಕುತ್ತಿಗೆಗೆ ತಾಳಿ ಬಿದ್ದಾದ ಮೇಲೆ ಅವಳೆಂದೂ ಅವನನ್ನು ಆ ಮೊದಲಿನ ಹೆಸರಲ್ಲಿ ಕರೆದಿರಲಿಲ್ಲ ಇಲ್ಲಿಯತನಕ.. ಅದೇ ಅಚ್ಚರಿಯ ನಡುವಲ್ಲೆ ಅವಳ ಕರೆಗೆ ಒಗೊಡುತ್ತ, 'ಹೂಂ..?' ಎಂದ ಶ್ರೀನಾಥ.
'ನಮ್ಮ ಮದುವೆ ನಿಶ್ಚಯವಾಗೊ ಮೊದಲು, ರಾಮಪ್ರಸಾದನ ಜತೆ ನನ್ನ ಎಂಗೇಜ್ಮೆಂಟ್ ಆದ ಮೇಲೆ ಸುಮಾರು ಒಂದು ವರ್ಷದ ತನಕ ಅವನ ಜತೆ ಓಡಾಡಿಕೊಂಡವಳು, ಅವನ ಜತೆಯಲ್ಲಿ ಏನೇನು ಮಾಡಿಕೊಂಡಿದ್ದಳೊ ಅಂತೇನಾದರೂ ನಿಮಗೆ ಯಾವಾಗಾದರೂ ಸಂಶಯ, ಅಥವಾ ಯಾರನ್ನೊ ಪ್ರೀತಿಸಿ ಮೋಸ ಹೋಗಿ ಬಂದವಳೆಂಬ ಅನಿಸಿಕೆಯ ಭಾವನೆ ಮನಸಿನಲ್ಲಿ ಬಂದಿತ್ತಾ..?' ದಿಟ್ಟ ದನಿಯಲ್ಲಿ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡ ದನಿಯಲ್ಲಿ ಕೇಳಿದ್ದಳು ಲತಾ..
ಅವಳ್ಯಾಕೆ ತನ್ನ ವಿಷಯ ಬಿಟ್ಟು ಆ ವಿಷಯ ಎತ್ತಿದಳೊ ಎಂದರಿವಾಗದಿದ್ದರು, ಆ ಗಳಿಗೆಯಲ್ಲಿ ಆದಷ್ಟು ಪ್ರಾಮಾಣಿಕ ಉತ್ತರ ನೀಡಬೇಕೆಂದು ನಿರ್ಧರಿಸಿ ಉತ್ತರಿಸಿದ ಶ್ರೀನಾಥ, ' ನಮ್ಮ ಮದುವೆ ನಡೆದ ವಿಚಿತ್ರ ಸನ್ನಿವೇಶ ನಿನಗೂ ಗೊತ್ತಿದೆ.. ನೀನಿನ್ನು ಆಸ್ಪತ್ರೆಯಲ್ಲಿದ್ದ ಹೊತ್ತದು.. ಬೇರಾವ ಚಿಂತನೆಗೂ ಅವಕಾಶವಿರಲಿಲ್ಲ..' ಮನ ಚಿಂತಿಸುತ್ತಿತ್ತು.. ಒಂದರೆಕ್ಷಣ ಮಾತು ನಿಲ್ಲಿಸಿದ ಶ್ರೀನಾಥನ ಮನ ಆಗಲೂ, ಅದೆ ಗಳಿಗೆಯಲ್ಲಿ ಚಿಂತಿಸಲಿಕ್ಕೆ ಆರಂಭಿಸಿತ್ತು - 'ಶಾಲಿನಿಯ ಕುರಿತು ಹೇಳಿಬಿಡಲು ಇದೇ ಸರಿಯಾದ ಹೊತ್ತೆ? ಬೇಡ, ಬೇಡ.... ಎಲ್ಲಾ ಒಂದೆ ಬಾರಿಯ ಶಾಕ್ ಆಗುವುದು ಸರಿಯಲ್ಲ.. ಅಲ್ಲದೆ ಶಾಲಿನಿಯ ಕಥೆ ಕುನ್. ಸು ಕಥೆಯಂತೆ ಅನೈತಿಕದ್ದಲ್ಲ.. ಬೇಕಿದ್ದರೆ ಮತ್ತೊಮ್ಮೆ ಯಾವಾಗಲಾದರೂ ಹೇಳಿದರಾಯ್ತು' ಅಂದುಕೊಳ್ಳುತ್ತಲೆ ಮಾತು ಮುಂದುವರೆಸಿದ ಶ್ರೀನಾಥ..' ನಿಜ ಹೇಳಬೇಕೆಂದರೆ ನಾನು ಕೂಡ ಆ ಹೊತ್ತಲ್ಲಿ ಮದುವೆಗೆ ಪಕ್ವವಾದ ಮನಸ್ಥಿತಿಯಲ್ಲಿರಲಿಲ್ಲ.. ಆದರೆ ನೀನಂದುಕೊಂಡಂತೆ ಕೆಲವಾರು ಬಾರಿ ಆ ರೀತಿಯ ಯೋಚನೆ ಮನದಲ್ಲಿ ತೆಳುವಾಗಿ ಸುಳಿದಿತ್ತು ಎನ್ನುವುದು ನಿಜ.. ಇಲ್ಲವೆಂದರೆ ಸುಳ್ಳು ಹೇಳಿದಂತಾಗುತ್ತದೆ..'
'ಹಾಗನಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲಾ ಶ್ರೀ.. ನಾನೆ ನಮ್ಮ ಮದುವೆ ಆಗಿಯೆ ಹೋಯ್ತೇನೊ ಎನ್ನುವ ಹಾಗೆ ಅವನ ಜತೆ ಅಷ್ಟೊಂದು ರಾಜಾರೋಷವಾಗಿ ಓಡಾಡಿಕೊಂಡಿದ್ದೆ. ಸಾಲದ್ದಕ್ಕೆ, ನನ್ನ ಗೆಳತಿಯರ ಜತೆಗೆಲ್ಲ ಬಹಿರಂಗವಾಗಿ ತೋರಿಸಿಕೊಳ್ಳುತ್ತ ಎಲ್ಲರೂ ನಮ್ಮನ್ನು ಗಂಡ-ಹೆಂಡಿರ ಹಾಗೆ ನೋಡುವ ಮಟ್ಟಕ್ಕೆ ತಂದುಕೊಂಡುಬಿಟ್ಟಿದ್ದೆ.. ಆ ಹೊತ್ತಿನಲ್ಲಿ ಅದು ನಿಜವಾದ ಪ್ರೀತಿ ಅನ್ನುವುದಕ್ಕಿಂತಲು ಒಂದು ರೀತಿಯ ಆ ವಯಸಿನ ತೋರಿಸಿಕೊಳ್ಳುವ, ನನಗೂ ಜತೆಗೊಬ್ಬನಿರುವನೆಂದು ಪ್ರದರ್ಶಿಸಿಕೊಳ್ಳುವ 'ಇಗೋ' ಅಂದರೆ ಸೂಕ್ತವೇನೊ..? ನಿಜಕ್ಕು ಪ್ರೀತಿಯೆನ್ನುವ ಮಟ್ಟದ ಪರಿಪಕ್ವತೆ ಆ ಹೊತ್ತಲ್ಲಿ ನನಗಿನ್ನು ಬಂದಿರಲಿಲ್ಲ... ಹೀಗಾಗಿಯೆ ಸಲಿಗೆಯಿಂದ, ಜಂಬದಿಂದ ಎಲ್ಲಾ ಕಡೆ ಸುತ್ತಾಡಿದ್ದೆ. ಅಷ್ಟಿದ್ದರು ಯಾವುದೆ ರೀತಿಯ ಅಚಾತುರ್ಯಕ್ಕೂ ಅವಕಾಶ ಕೊಡಬಾರದೆಂಬ ಸಂಯಮವು ಇತ್ತು.. ನಾವಿಬ್ಬರು ಆಗ ಜತೆಯಲ್ಲಿ ಓಡಾಡಿದ್ದೇನೊ ನಿಜ.. ಆದರೆ...'
ನಾನೇನೊ ತಪ್ಪೊಪ್ಪಿಗೆ ಮಾಡಿದೆನೆಂದು ಇವಳು ಅದನ್ನೆ ಮಾಡಲು ಹೊರಟಿರುವಳೇನೊ ಎನಿಸಿದರೂ, ಅವಳ ಓಘಕ್ಕೆ ತಡೆಯೊಡ್ಡದೆ ,'ಹೂಂ' ಗುಟ್ಟಿದ ಶ್ರೀನಾಥ, ಅವಳೇನು ಹೇಳಲು ಹೊರಟಿರುವಳೊ ಅದನ್ನು ಹೇಳಿಕೊಂಡು ಮುಂದುವರೆಸಲು ಅನುಕೂಲವಾಗುವಂತೆ...
( ಇನ್ನೂ ಇದೆ - ಮುಂದಿನ ಕಂತಿನಲ್ಲಿ ಮುಕ್ತಾಯ )
______________________________