ಟೊಮೆಟೊ ಬೆಲೆ ಕುಸಿತ: ಚೀನಾದಿಂದ ಆಮದಿನ ಆಘಾತ
ಆಂಧ್ರ ಪ್ರದೇಶದ ಚಿತ್ತೂರು ಮತ್ತು ಸುತ್ತಮುತ್ತಲಿನ ಟೊಮೆಟೊ ಬೆಳೆಗಾರರಿಗೆ ಖುಷಿಯೋ ಖುಷಿ. ಯಾಕೆಂದರೆ “ಒಂದು ಜಿಲ್ಲೆ ಒಂದು ಉತ್ಪನ್ನ” (ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ – ಒಡಿಒಪಿ) ಯೋಜನೆಯ ಜ್ಯಾರಿಗಾಗಿ ಕೇಂದ್ರ ಸರಕಾರ ಆಯ್ಕೆ ಮಾಡಿದ ಜಿಲ್ಲೆಗಳಲ್ಲಿ ಚಿತ್ತೂರು ಸಹ ಸೇರಿತ್ತು.
ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟಕ್ಕೆ ಕೇಂದ್ರ ಸರಕಾರ ಆ ಯೋಜನೆಯ ಅನುಸಾರ ನೆರವು ನೀಡಲಿದೆ ಎಂದು ೨೦೧೮ರ ಕೇಂದ್ರ ಬಜೆಟ್ ಭಾಷಣದಲ್ಲಿ ವಿತ್ತ ಸಚಿವರು ಘೋಷಿಸಿದ್ದರು.
ನಮ್ಮ ದೇಶದಲ್ಲಿ ಅತ್ಯಧಿಕ ಟೊಮೆಟೊ ಬೆಳೆಸುವ ಜಿಲ್ಲೆ ಚಿತ್ತೂರು. ಅಲ್ಲಿದೆ ಏಷ್ಯಾದ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ. ಮದನಪಳ್ಳಿಯಲ್ಲಿ ಇರುವ ಪ್ರಾಂಗಣ ದಿನವೊಂದಕ್ಕೆ ೮೦೦ ಟನ್ ಟೊಮೆಟೊ ಸ್ವೀಕರಿಸಿ ಶೇಖರಿಸಿಡುವಷ್ಟು ಬೃಹತ್ತಾಗಿದೆ. ಆದರೆ ಅಲ್ಲಿ ಹಲವು ದಿನ ಅದರ ಎರಡು ಪಟ್ಟು ಅಂದರೆ ೧,೬೮೦ ಟನ್ನಿನಷ್ಟು ಟೊಮೆಟೊ ಶೇಖರಿಸಿಡ ಬೇಕಾದ ಅನಿವಾರ್ಯತೆ. ಅಲ್ಲಿಂದ ಢೆಲ್ಲಿ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ತಮಿಳ್ನಾಡುಗಳಿಗೆ ಟೊಮೆಟೊ ರವಾನೆ.
ಕೊಯ್ಲೋತ್ತರ ಚಟುವಟಿಕೆಗಳಲ್ಲಿ ರೈತರಿಗೆ ಸಹಾಯ ಮಾಡಲಿಕ್ಕಾಗಿ ಒಡಿಒಪಿ ಯೋಜನೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ; ರೈತ ಉತ್ಪಾದಕರ ಕಂಪೆನಿಗಳ ಸ್ಥಾಪನೆ, ಸಂಸ್ಕರಣಾ ಸೌಲಭ್ಯ ಮತ್ತು ಪರಿಣತರಿಂದ ನಿರ್ವಹಣೆ ಒದಗಣೆ ಇತ್ಯಾದಿ. ಆಂಧ್ರ ಪ್ರದೇಶದಲ್ಲಿ ೧೫,೦೦೦ ರೈತರು ರೈತ ಉತ್ಪಾದಕರ ಕಂಪೆನಿಗಳ ಷೇರುದಾರರಾಗಿದ್ದು, ಸರಕಾರವು ಅವರ ಸಾಮರ್ಥ್ಯ ವೃದ್ಧಿಗೆ ನೆರವು ನೀಡಲಿದೆ.
“ಆಂಧ್ರ ಪ್ರದೇಶದ ರಾಜಮಹೇಂದ್ರವರಮ್ ಮತ್ತು ವಿಜಯವಾಡ; ತಮಿಳ್ನಾಡು; ಕರ್ನಾಟಕ – ಇಲ್ಲೆಲ್ಲ ತಲಾ ೫,೦೦೦ ಟನ್ ಸಾಮರ್ಥ್ಯದ ಶೇಖರಣಾ ವ್ಯವಸ್ಥೆ ಸ್ಥಾಪಿಸಲಾಗುವುದು. ಇದರ ಉದ್ದೇಶ ಸೂಕ್ತವಾಗಿ ಕೃಷಿ ಉತ್ಪನ್ನ ಸಂಗ್ರಹಿಸಿಟ್ಟು, ಉತ್ತಮ ಬೆಲೆ ಸಿಗುವ ವರೆಗೆ ರೈತರು ಕಾಯಲು ಸಹಕರಿಸುವುದು. ಉತ್ತಮ ಗುಣಮಟ್ಟದ ಬೀಜ ಉತ್ಪಾದನೆಗಾಗಿ ನರ್ಸರಿಗಳನ್ನೂ ಸ್ಥಾಪಿಸಲಾಗುವುದು” ಎಂದು ಮಾಹಿತಿ ನೀಡುತ್ತಾರೆ ವೈ.ಎಸ್. ಪ್ರಸಾದ್, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ, ಆಂಧ್ರ ಪ್ರದೇಶ ಆಹಾರ ಸಂಸ್ಕರಣಾ ಸೊಸೈಟಿ. ಆನ್-ಲೈನ್ ಮಾರಾಟ ವ್ಯವಸ್ಥೆಯನ್ನೂ ಆಂಧ್ರ ಪ್ರದೇಶವು ರೈತರಿಗೆ ಒದಗಿಸಲಿದೆ. “ಆಂಧ್ರ ಪ್ರದೇಶದಲ್ಲಿ ಒಡಿಒಪಿ ಯೋಜನೆಯ ಜ್ಯಾರಿಗಾಗಿ ೧೧೦ ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು” ಎನ್ನುತ್ತಾರೆ ಪ್ರಸಾದ್.
ಸರಕಾರವು ಇಷ್ಟೆಲ್ಲ ಪ್ರಯತ್ನ ಮಾಡಿದರೂ ಆಂಧ್ರ ಪ್ರದೇಶದ ರೈತರು ಟೊಮೆಟೊ ಫಸಲಿಗೆ ಕನಿಷ್ಠ ಬೆಲೆ ಪಡೆಯಲಿಕ್ಕೂ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಚೀನಾದಿಂದ ಆಮದಾಗುತ್ತಿರುವ ರಾಶಿರಾಶಿ ಟೊಮೆಟೊ ಪಲ್ಪ್, ನಮ್ಮ ದೇಶದ ಟೊಮೆಟೊ ಆಧರಿಸಿದ ಉದ್ಯಮ ಬೆಳೆಯಲು ಅವಕಾಶವನ್ನೇ ನೀಡುತ್ತಿಲ್ಲ.
“ನಾವು ಈ ಕ್ಷೇತ್ರದಲ್ಲಿ ಚೀನಾದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಘಟಕಗಳು ಗಂಟೆಗೆ ೧೦ರಿಂದ ೧೫ ಟನ್ ಟೊಮೆಟೊ ಸಂಸ್ಕರಿಸಲು ಸಾಧ್ಯ. ಆದರೆ ಚೀನಾದ ಘಟಕಗಳು ಗಂಟೆಗೆ ೩೦೦ರಿಂದ ೪೦೦ ಟನ್ ಟೊಮೆಟೊ ಸಂಸ್ಕರಿಸುತ್ತವೆ” ಎನ್ನುತ್ತಾರೆ ವಿ. ಪ್ರದೀಪ್ ಕುಮಾರ್, ತಾಂತ್ರಿಕ ನಿರ್ದೇಶಕ, ವರ್ಷ ಫುಡ್ಸ್, ರೇನಿಗುಂಟ, ಚಿತ್ತೂರು. ಚೀನಾದಲ್ಲಿ ಟೊಮೆಟೊ ಕೊಯ್ಲು ಯಂತ್ರಗಳಿಂದಲೇ ನಡೆಯುತ್ತದೆ. ಆದ್ದರಿಂದ, ಅವರ ಟೊಮೆಟೊ ಪಲ್ಪ್ ಅಗ್ಗ (ಅವರು ರಫ್ತು ಮಾಡಿದಾಗಲೂ); ಅದರ ಮೇಲೆ ಭಾರತ ಸರಕಾರ ಶೇ.೩೫ ತೆರಿಗೆ ವಿಧಿಸಿದ್ದರೂ ಇಲ್ಲಿ ಅದು ಅಗ್ಗ. ಈ ಕಾರಣದಿಂದಾಗಿ ಇಲ್ಲಿ ಟೊಮೆಟೊ ಪಲ್ಪ್ ಉತ್ಪಾದನೆ ಲಾಭದಾಯಕವಾಗಿಲ್ಲ. ಹಾಗಾಗಿ, ಈಗ ವರ್ಷ ಫುಡ್ಸ್ ಪಲ್ಪಿಗೆ ಬೇಕಾದ ಟೊಮೆಟೊ ಬೆಳೆಸುತ್ತಿಲ್ಲ; ಬದಲಾಗಿ ಹಣ್ಣುಗಳ ರಸ ಮತ್ತು ಪಲ್ಪ್ ತಯಾರಿಸಿ ಮಾರುತ್ತಿದೆ.
“ಮಾರ್ಚಿನಲ್ಲಿ ಟೊಮೆಟೊ ಬೆಲೆ ಕಿಲೋಕ್ಕೆ ಎಂಟು ರೂಪಾಯಿ ಆಗಿತ್ತು. ಇದು ಉದ್ಯಮಕ್ಕೆ ಸಹಕಾರಿಯಲ್ಲ” ಎನ್ನುತ್ತಾರೆ ಕಾಪ್ರಿಕಾರ್ನ್ ಫುಡ್ಸಿನ ಜನರಲ್ ಮೆನೇಜರ್ ಜಿ. ಚಂದ್ರಶೇಖರ್. “ನಾವು ಚೀನಾದೊಂದಿಗೆ ಸ್ಪರ್ಧಿಸ ಬೇಕಾದರೆ ನಮಗೆ ಕಿಲೋಕ್ಕೆ ನಾಲ್ಕು ರೂಪಾಯಿ ರೇಟಿನಲ್ಲಿ ಟೊಮೆಟೊ ಸಿಗಬೇಕು” ಎಂಬುದವರ ಅಭಿಪ್ರಾಯ.
ಚಿತ್ತೂರಿನ ರೈತರು (ಮುಖ್ಯವಾಗಿ ಮದನಪಳ್ಳಿಯಲ್ಲಿ) ಟೊಮೆಟೊ ಬೆಳೆಯಲು ಇಚ್ಛಿಸುತ್ತಾರೆ; ಯಾಕೆಂದರೆ ಅಲ್ಲಿನ ಹವಾಮಾನ ಅದಕ್ಕೆ ಸೂಕ್ತ. ಇದರಿಂದ ಲಾಭದ ಅವಕಾಶವೂ ಅಧಿಕ. ಹಾಗಾಗಿ ಕಳೆದ ನಾಲ್ಕು ವರುಷಗಳಲ್ಲಿ ಟೊಮೆಟೊ ಬೆಳೆಯುವ ಪ್ರದೇಶದ ವಿಸ್ತೀರ್ಣ ಶೇ.೬೩ರಷ್ಟು ಹೆಚ್ಚಾಗಿದೆ. ಈಗ ಅಲ್ಲಿ ಸುಮಾರು ೩೨,೯೦೦ ಹೆಕ್ಟೇರಿನಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಅದೇನಿದ್ದರೂ, ಯೋಜನಾರಹಿತವಾದ ಟೊಮೆಟೊ ಕೃಷಿ ಜೂಜಾಟದಂತಾಗಿದೆ; ಒಂದು ಎಕರೆ ಟೊಮೆಟೊ ಬೆಳೆದರೆ ರೂ. ೬ ಲಕ್ಷ ಲಾಭ ಸಿಗಬಹುದು ಅಥವಾ ನಷ್ಟವಾಗಿ, ಒಳಸುರಿಗಳ ವೆಚ್ಚವೂ ಸಿಗದೆ ಹೋದೀತು!
ಚಿತ್ತೂರಿನಲ್ಲಿ ಈಗ ಬೆಳೆಯುವ ಶೇ.೮೦ರಷ್ಟು ಟೊಮೆಟೊ ಮನೆಬಳಕೆಗೆ ಸೂಕ್ತ; ಆದರೆ ಪಲ್ಪ್ ತಯಾರಿಗೆ ಸೂಕ್ತವಲ್ಲ. ಆದ್ದರಿಂದ, ಅಲ್ಲಿನ ರೈತರು ಸಂಸ್ಕರಣೆಗೆ ಸೂಕ್ತವಾದ ಟೊಮೆಟೊ ಬೆಳೆದರೆ ಬೇಡಿಕೆ ಹೆಚ್ಚಾದೀತು. ಆದರೆ, ಯೋಜನಾಬದ್ಧವಾಗಿ ಅಲ್ಲಿ ಟೊಮೆಟೊ ಕೃಷಿ ಮಾಡುವುದು ಕಷ್ಟಸಾಧ್ಯ ಎನಿಸುತ್ತದೆ. ಇದಕ್ಕೆ ಕಾರಣ, ರೈತರು ಮತ್ತು ಉದ್ಯಮಿಗಳ ನಡುವಿನ ಅವಿಶ್ವಾಸ. ನಮ್ಮ ಕಂಪೆನಿ ಗುಣಮಟ್ಟದ ಟೊಮೆಟೊ ಬೆಳೆಯಲು ರೈತರಿಗೆ ಒಳಸುರಿಗಳನ್ನು ಕೊಟ್ಟಿತು; ಆದರೆ ರೈತರು ತಮ್ಮ ಫಸಲನ್ನು ನಮಗೆ ಕೊಡಲಿಲ್ಲ ಎನ್ನುತ್ತಾರೆ ಚಂದ್ರಶೇಖರ್. ಪಲ್ಪ್ ಉದ್ಯಮಿಗಳೆಲ್ಲ ಒಟ್ಟು ಸೇರಿ ಕೊಯ್ಲಿನ ಸಮಯದಲ್ಲಿ ಟೊಮೆಟೊದ ಬೆಲೆ ಇಳಿಸುತ್ತಾರೆ ಎಂಬುದು ರೈತ ಸಂಘಟನೆಗಳ ಫೆಡರೇಷನಿನ ಮುಖ್ಯಸ್ಥ ಎಂ. ಗೋಪಾಲ ರೆಡ್ಡಿ ಅವರ ಹೇಳಿಕೆ.
ಟೊಮೆಟೊ ಕೃಷಿಯ ಒಳಸುರಿಗಳ ವೆಚ್ಚ ಎಕ್ರೆಗೆ ಸುಮಾರು ರೂ.೧,೮೦,೦೦೦. ಇದನ್ನು ನಮ್ಮ ರೈತರು ಭರಿಸುವುದು ಸುಲಭವಿಲ್ಲ. ಆದ್ದರಿಂದಲೇ ಸಣ್ಣ ರೈತರು ತಮ್ಮ ಜಮೀನನ್ನು ಟೊಮೆಟೊ ಬೆಳೆಯಲು ಲೀಸಿಗೆ ಕೊಡುತ್ತಾರೆ. ಟೊಮೆಟೊದ ಬೆಲೆಯ ಏರಿಳಿತವಂತೂ ವಿಪರೀತ. “೨೦೧೭ರಲ್ಲಿ ಒಂದು ಕಿಲೋಕ್ಕೆ ೮೦ ರೂಪಾಯಿ ಬೆಲೆಯಿದ್ದರೆ, ೨೦೧೮ರಲ್ಲಿ ಕಿಲೋಕ್ಕೆ ೨ರಿಂದ ೧೦ ರೂಪಾಯಿ ಬೆಲೆಯಿತ್ತು” ಎಂದು ಅವಲತ್ತು ಕೊಳ್ಳುತ್ತಾರೆ ಮದನಪಳ್ಳಿಯ ರೈತ ಎಸ್. ನರಸಿಂಹ ರೆಡ್ಡಿ.
ಟೊಮೆಟೊ ಬೆಳೆಗಾರರ ಸಮಸ್ಯೆಗಳ ಪರಿಹಾರದ ದಾರಿಗಳು ಎರಡು: ದೊಡ್ಡ ಉಗ್ರಾಣಗಳ ನಿರ್ಮಾಣ ಮತ್ತು ಟೊಮೆಟೊ ಮೌಲ್ಯವರ್ಧನೆಯ ವ್ಯವಸ್ಥೆ. ಅಂತಿಮವಾಗಿ, ಚೀನಾದ ಟೊಮೆಟೊ ಪಲ್ಪ್ ಖರೀದಿಸಿದರೆ, ನಾವು (ಗ್ರಾಹಕರು ಮತ್ತು ಉದ್ಯಮಿಗಳು) ಚೀನಾದ ರೈತರು ಮತ್ತು ಉದ್ಯಮಿಗಳ ಹಿತ ರಕ್ಷಿಸಿದಂತಾಗುತ್ತದೆ. ಅದರ ಬದಲಾಗಿ, ನಾವು ನಮ್ಮ ಟೊಮೆಟೊ ಬೆಳೆಗಾರರ ಹಿತ ಕಾಯಬೇಕು, ಅಲ್ಲವೇ?