೮. ಲಲಿತಾ ಸಹಸ್ರನಾಮದ ವಿವರಣೆ - ಶ್ರೀ ಲಲಿತೆಯೇ ಶ್ರೀ ಕೃಷ್ಣ

೮. ಲಲಿತಾ ಸಹಸ್ರನಾಮದ ವಿವರಣೆ - ಶ್ರೀ ಲಲಿತೆಯೇ ಶ್ರೀ ಕೃಷ್ಣ

 

        ಹಿಂದಿನ ಸಂಚಿಕೆಯಲ್ಲಿ ಭಗವದ್ಗೀತೆ ಮತ್ತು ಲಲಿತಾ ಸಹಸ್ರನಾಮದಲ್ಲಿರುವ ಸಾಮ್ಯತೆಗಳ ಕುರಿತು ತಿಳಿದುಕೊಂಡೆವು. ಸಹಸ್ರನಾಮದ ಒಂದೊಂದೇ ನಾಮಗಳ ವಿವರಣೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಈ ಸಂಚಿಕೆಯಲ್ಲಿ ಶ್ರೀ ಲಲಿತಾ ಮತ್ತು ಶ್ರೀ ಕೃಷ್ಣ ಇವರಿಬ್ಬರ ನಡುವೆ ಇರುವ ಸಾಮ್ಯತೆಗಳ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳೋಣ.
 ಶ್ರೀ ಲಲಿತೆಯೇ ಶ್ರೀ ಕೃಷ್ಣ 
        ಲಲಿತಾ ಸಹಸ್ರನಾಮದ ೩೯೮ ನಾಮಾವಳಿಯು ’ಅವ್ಯಕ್ತ’ ಹಾಗೆಂದರೆ ನಮ್ಮ ಇಂದ್ರಿಯಗಳಿಗೆ ಗೋಚರವಾಗದ್ದು ಅಥವಾ ಗ್ರಾಹ್ಯವಲ್ಲದ್ದು. ಇದನ್ನೇ ಮಾಯೆಯ ಸ್ವರೂಪ ಎನ್ನುವುದು. ಶ್ರೀ ಲಲಿತೆಯು ನಮ್ಮ ಇಂದ್ರಿಯಗಳಿಗೆ ಗ್ರಾಹ್ಯಳಲ್ಲ ಎಕೆಂದರೆ ಅವಳು ಮಾಯಾಸ್ವರೂಪಿಣಿ ಮತ್ತು ಅಗೋಚರಳು. ಯಾವುದಾದರೂ ಒಂದು ವಸ್ತುವನ್ನು ರೂಪಾಂತರಿಸಿದರೆ ಅದಕ್ಕೆ ಜೀವವು ಇರುವುದಿಲ್ಲ. ಗೀತೆಯ ಎರಡನೆಯ ಅಧ್ಯಾಯದ ೨೫ನೇ ಶ್ಲೋಕದಲ್ಲಿ ಕೃಷ್ಣನು ಆತ್ಮನ ವಿಚಾರವಾಗಿ ಹೇಳುತ್ತಾ, ’ಅವ್ಯಕ್ತಃ ಅಯಮ್’ ಅಂದರೆ ಆತ್ಮನು ಅಗೋಚರನು ಎನ್ನುತ್ತಾನೆ. ಈ ಸಂದರ್ಭದಲ್ಲಿ ಅಯಮ್ ಎಂದರೆ ಆತ್ಮ. ಜೀವ ಮತ್ತು ಆತ್ಮರುಗಳು ಬೇರೆಬೇರೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಇದರ ಬಗ್ಗೆ ಹೆಚ್ಚಿನ ವಿವರಗಳಿಗೆ ಈ ಕೊಂಡಿಯನ್ನು ನೋಡಿ - www.manblunder.com/2009/03/soul-and-atma.html. ಲಲಿತಾ ಸಹಸ್ರನಾಮದ ೪೧೧ನೇ ನಾಮವು ಶಿಷ್ಟೇಷ್ಠಾ. ಶಾಸ್ತ್ರಗಳು ಹೇಳಿದಂತೆ ಭಕ್ತಿಯಿಂದ ನಡೆದುಕೊಳ್ಳುವವರು ಶಿಷ್ಟೇಷ್ಠರು. ಅಥವಾ ಶಾಸ್ತ್ರಗಳು ವಿಧಿಸಿದಂತೆ ಪೂಜಾ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು ಶಿಷ್ಟೇಷ್ಠರೆನ್ನಬಹುದು. ಇವರನ್ನು ಧಾರ್ಮಿಕ ಭಕ್ತರು ಅಥವಾ ಆಚಾರವಂತರು ಎನ್ನಬಹುದು. ಆಚಾರವೆಂದರೆ ಧರ್ಮ ಮಾರ್ಗದಲ್ಲಿ ನಡೆಯುವುದು. ಧರ್ಮದ ಅಧಿದೇವತೆ ವಿಷ್ಣು. ಆದ್ದರಿಂದ ಅವನನ್ನು ‘ಆಚಾರ ಪ್ರಹವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ’ ಎಂದು ಕರೆದಿದ್ದಾರೆ. ಧರ್ಮವು ಸಚ್ಚಾರಿತ್ರ್ಯದಿಂದ ಆವಿರ್ಭವಿಸುತ್ತದೆ ಮತ್ತು ಈ ಧರ್ಮದ ಅಧಿದೇವತೆ ಶ್ರೀ ವಿಷ್ಣುವಾಗಿದ್ದಾನೆ. ಇದನ್ನು ವಿಷ್ಣುಸಹಸ್ರನಾಮದ ೩೧೦ನೇ ನಾಮಾವಳಿಯಾದ ’ಶಿಷ್ಟೇಷ್ಟಃ’ವು ದೃಢಪಡಿಸುತ್ತದೆ. ಆದಿಶಂಕರರು ಶಿಷ್ಟೇಷ್ಟಃ ಎನ್ನುವುದನ್ನು, ’ವಿಷ್ಣುವನ್ನು ಹೊಂದಲು ಜ್ಞಾನಿಗಳು ಬಯಸುತ್ತಾರೆ ಮತ್ತು ವಿಷ್ಣುವೂ ಜ್ಞಾನಿಗಳನ್ನು ಇಷ್ಟಪಡುತ್ತಾನೆ’ ಎಂದು ವ್ಯಾಖ್ಯಾನಿಸುತ್ತಾರೆ. ಶಂಕರರು ಶಿಷ್ಟೇಷ್ಟ ಎನ್ನುವುದಕ್ಕೆ ಜ್ಞಾನಿ ಎನ್ನುವ ಪದವನ್ನು ಆಯ್ದುಕೊಂಡಿದ್ದಾರೆ. ಜ್ಞಾನಿಯು ಖಂಡಿತವಾಗಿ ಆಚಾರವಂತರಿಗಿಂತ ಉನ್ನತವಾದವನು. ಶಂಕರರು ವ್ಯಾಖ್ಯಾನಿಸಿರುವಂತೆ ವಿಷ್ಣುವು ಜ್ಞಾನಿಗಳನ್ನಷ್ಟೇ ಅಪೇಕ್ಷಿಸುತ್ತಾನೆಯೇ ಹೊರತು ಕೇವಲ ಆಚಾರವಂತರನ್ನಲ್ಲ. ಈ ವ್ಯಾಖ್ಯಾನಕ್ಕೆ ಗೀತೆಯ ಏಳನೆಯ ಅಧ್ಯಾಯದ ೧೭ನೇ ಶ್ಲೋಕವು,   "ಜ್ಞಾನೀ ವಿಶಿಷ್ಯತೇ ಹಿ ಜ್ಞಾನಿನಃ ಅಹಂ ಅರ್ಥಮ್ ಪ್ರಿಯೋ ಸ ಚ ಮಮ ಪ್ರಿಯಃ" (ನಾನು ಜ್ಞಾನಿಗೆ ಅತ್ಯಂತ ಪ್ರಿಯವಾಗಿದ್ದೇನೆ ಮತ್ತು ಅವನು ನನಗೆ ಅತ್ಯಂತ ಪ್ರಿಯನಾಗಿದ್ದಾನೆ). ಹೀಗಿರುವಾಗ, ಲಲಿತೆ ಮತ್ತು ಶ್ರೀ ಕೃಷ್ಣ ಎರಡೂ ಒಂದೇ ಎನ್ನಲು ನಮಗೆ ಮತ್ತಿನ್ನೇನು ಬೇಕು. ಲಲಿತಾ ಸಹಸ್ರನಾಮದ ೪೧೮ ನಾಮಾವಳಿಯು ಜಡಾಶಕ್ತಿ. ಅವಳು ಜೀವವಿಲ್ಲದ ರೂಪದಲ್ಲಿ ಅಥವಾ ಪ್ರಾಣವಿಲ್ಲದ ರೂಪದಲ್ಲಿದ್ದಾಳೆ. ಈ ಪ್ರಾಣರಹಿತ ರೂಪವು ಮಾಯೆಯಿಂದ ಉಂಟಾಗಿದೆ. ನಾವು ಈ ಮೊದಲೇ ಮಾಯೆಯು ಪರಬ್ರಹ್ಮದ ಒಂದು ಭಾಗವೆಂದು ಮನಗಂಡಿದ್ದೇವೆ (ಪ್ರಕಾಶ ವಿಮರ್ಶಾ ಮಹಾ ಮಾಯಾ ಸ್ವರೂಪಿಣಿ). ಅವಳು ಪ್ರಕೃತಿಯ ರೂಪದಲ್ಲಿದ್ದಾಳೆ. ಪ್ರಕೃತಿಯು ಭೌತಿಕ ವಸ್ತುವಿನ ರೂಪದಲ್ಲಿರುತ್ತದೆ. ಗೀತೆಯ ಏಳನೆಯ ಅಧ್ಯಾಯದ ನಾಲ್ಕನೇ ಶ್ಲೋಕದಲ್ಲಿ ಕೃಷ್ಣನು, ’ಪ್ರಕೃತಿರಷ್ಟದಾ’ ಎಂದರೆ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಮತ್ತು ಅಂತಃಕರಣ ಅಥವಾ ಮನಸ್ಸು, ಬುದ್ಧಿ, ಅಹಂಕಾರಗಳು ನನ್ನ ಎಂಟು ವಿಧವಾದ ಪ್ರಕೃತಿ. ಎನ್ನುತ್ತಾನೆ. ಆದ್ದರಿಂದ ಲಲಿತೆ ಮತ್ತು ಕೃಷ್ಣ ಇಬ್ಬರೂ ಜಡಶಕ್ತಿ ಅಥವಾ ಪ್ರಕೃತಿ ಎಂದು ಕರೆಯಲ್ಪಟ್ಟಿದ್ದಾರೆ. ಗೀತೆಯ ಹದಿಮೂರನೇ ಅಧ್ಯಾಯದ ೫ನೇ ಶ್ಲೋಕವು ಇದರ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನುಂಟು ಮಾಡುತ್ತದೆ.
 
      ಲಲಿತಾ ಸಹಸ್ರನಾಮದ ೫೪೦ನೇ ನಾಮಾವಳಿಯು ’ಸ್ಮೃತಿ’ಯಾಗಿದೆ. ’ಸ್ಮೃತಿ’ ಎಂದರೆ ವೇದಗಳನ್ನು ಆಧರಿಸಿ ಋಷಿ ಮುನಿಗಳಿಂದ ರಚಿಸಲ್ಪಟ್ಟ ಶಾಸ್ತ್ರಗಳು. ’ಸ್ಮೃತಿ’ಯು ಉಪನಿಷತ್ತುಗಳನ್ನೂ ಒಳಗೊಂಡಿದೆ. ’ಸ್ಮೃತಿ’ಯು ಕೆಲವೊಂದು ಧಾರ್ಮಿಕ ಕಟ್ಟಳೆಗಳನ್ನು ವಿಧಿಸಿ ಅವನ್ನು ಧರ್ಮದ ಶ್ರದ್ಧಾಳುಗಳು ಅಥವಾ ಆಚಾರವಂತರು ಪಾಲಿಸಬೇಕೆಂದು ಹೇಳುತ್ತದೆ; ಇದನ್ನು ನಾವು ಸಹಸ್ರನಾಮದ ೪೧೧ನೇ ನಾಮಾವಳಿಯಲ್ಲಿ ನೋಡಬಹುದು. ಲಲಿತೆಯು ’ಸ್ಮೃತಿ’ ರೂಪದಲ್ಲಿ ಇರುವಳೆಂದು ಭಾವಿಸುತ್ತಾರೆ. ಗೀತೆಯ ಹತ್ತನೇ ಅಧ್ಯಾಯದ ೩೪ನೇ ಶ್ಲೋಕದಲ್ಲಿ ಶ್ರೀ ಕೃಷ್ಣನು ತಾನು ’ಸ್ಮೃತಿ’ಯ ರೂಪದಲ್ಲಿರುವುದಾಗಿ ಹೇಳಿದ್ದಾನೆ. ಸಹಸ್ರನಾಮದ ೫೪೪ನೇ ನಾಮವಳಿಯು ’ಪುಣ್ಯ ಶ್ರವಣ ಕೀರ್ತನಾ’ ಎಂದರೆ ಕೇಳುವುದು ಮತ್ತು ಹಾಡುವುದು ಪುಣ್ಯದ ಅಥವಾ ಧಾರ್ಮಿಕ ಕೆಲಸಗಳು ಎಂದರ್ಥ. ಇದನ್ನು ಲಲಿತಾಂಬಿಕೆಯು ತನ್ನ ಭಕ್ತರಿಂದ ಹಾಡಲ್ಪಟ್ಟ ದಿವ್ಯ ಸಂಕೀರ್ತನೆಗಳನ್ನು ಕೇಳಿ ಆನಂದಿಸುತ್ತಾಳೆ ಎಂದೂ ಅರ್ಥೈಸಬಹುದು. ಉದಾಹರಣೆಗೆ ಲಲಿತಾಸಹಸ್ರನಾಮವನ್ನೇ ತೆಗೆದುಕೊಳ್ಳಬಹುದು; ಇದನ್ನು ಅವಳ ಸಮ್ಮುಖದಲ್ಲಿಯೇ ವಾಗ್ದೇವತೆಗಳು ಹಾಡಿದರು. ವಿಷ್ಣು ಸಹಸ್ರನಾಮದ ೯೨೨ನೇ ನಾಮಾವಳಿಯೂ ಕೂಡಾ ಪುಣ್ಯ ಶ್ರವಣ ಕೀರ್ತನಃ. ಲಲಿತಾ ಸಹಸ್ರನಾಮದ ೬೦೩ನೇ ನಾಮಾವಳಿಯು ಅವಳನ್ನು ’ಗುರುಮೂರ್ತಿ’ ಎನ್ನುತ್ತದೆ ಅಂದರೆ ಅವಳು ಗುರುವಿನ ಸ್ವರೂಪವಾಗಿದ್ದಾಳೆ. ವಿಷ್ಣು ಸಹಸ್ರನಾಮದ ೨೦೯ನೇ ನಾಮವಳಿಯು ಗುರುಃ ಮತ್ತು ೨೧೦ನೇ ನಾಮಾವಳಿಯು ಗುರುತಮಃ. ಗುರುತಮಃ ಎಂದರೆ ಗುರುವಿನ ಗುರು ಅಂದರೆ ಪರಮಗುರು. ಗುರು ಶಬ್ದವು ಗು ಮತ್ತು ರು ಎನ್ನುವ ಎರಡು ಸಂಸ್ಕೃತ ಅಕ್ಷರಗಳನ್ನು ಹೊಂದಿದೆ; ಗು ಎಂದರೆ ಅಜ್ಞಾನಿಯೆಂದು ಅಥವಾ ಅಂಧಕಾರದಲ್ಲಿರುವವನೆಂದು ಅರ್ಥ ಮತ್ತು ರು ಎಂದರೆ ಅದನ್ನು ಹೋಗಲಾಡಿಸುವವನು. ಒಟ್ಟಾರೆಯಾಗಿ ಗುರುವೆಂದರೆ ಅಜ್ಞಾನ ಅಥವಾ ಅಂಧಕಾರವನ್ನು ಹೋಗಲಾಡಿಸುವವನು. ಯಾವಾಗ ಕತ್ತಲೆಯು ಇಲ್ಲವಾಗುತ್ತದೆಯೋ ಆಗ ನಮಗೆ ಬೆಳಕು ಸಿಗುತ್ತದೆ. ಜ್ಞಾನವೆಂದರೇನು? ಜ್ಞಾನವೆಂದರೆ ಆತ್ಮನನ್ನು ಅರಿಯುವುದು. ಆತ್ಮನನ್ನು ತಿಳಿದುಕೊಳ್ಳುವುದು ಹೇಗೆ? ಈ ಅಂತರಾತ್ಮವನ್ನು ತಿಳಿದುಕೊಳ್ಳುವುದನ್ನೇ ಆತ್ಮಸಾಕ್ಷಾತ್ಕಾರವೆನ್ನುತ್ತಾರೆ. ಈ ಆತ್ಮನಾದರೂ ಹೇಗಿದ್ದಾನೆ. ಅವನು ಸ್ವಯಂಪ್ರಕಾಶನು. ಯಾವಾಗ ಮಾಯೆಯಿಂದ ಉಂಟಾದ ಅಜ್ಞಾನವು ಇಲ್ಲವಾಗುತ್ತದೆಯೋ ಆಗ ಸ್ವಯಂಪ್ರಕಾಶಿತನಾದ ಅಂತರಾತ್ಮನನ್ನು ನಾವು ಕಾಣಬಹುದು. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಗುರುವೆಂದು ಕರೆಯಬೇಕಾದರೆ ಮೊದಲು ಆತ ಆತ್ಮಸಾಕ್ಷಾತ್ಕಾರವನ್ನು ಪಡೆದಿರಬೇಕು ಮತ್ತು ಆ ವ್ಯಕ್ತಿಯು ಆತ್ಮಸಾಕ್ಷಾತ್ಕಾರದೆಡೆಗೆ ನಮಗೆ ಮಾರ್ಗದರ್ಶನವನ್ನೀಯುತ್ತಾ ಆತ್ಮದ ಸ್ವರೂಪವನ್ನು ಅನಾವರಣಗೊಳಿಸುವಂತವನಾಗಿರಬೇಕು. ಇಲ್ಲಿ ಲಲಿತೆ ಮತ್ತು ಕೃಷ್ಣ ಇಬ್ಬರೂ ಗುರುವಿನ ಸ್ವರೂಪದವರಾಗಿದ್ದು ನಮ್ಮಲ್ಲಿರುವ ಅಜ್ಞಾನಾಂಧಕಾರವನ್ನು ಹೋಗಲಾಡಿಸಿ ನಮಗೆ ಸುಧಾ ವಿದ್ಯೆ ಅಥವಾ ಪರಿಶುದ್ಧವಾದ ಜ್ಞಾನವನ್ನು ಕೊಡಮಾಡುತ್ತಾರೆ. ಶುದ್ಧ ಜ್ಞಾನವೆಂದರೆ ಆತ್ಮಸಾಕ್ಷಾತ್ಕಾರ ಅಂದರೆ ನಮ್ಮಲ್ಲಿ ಹುದುಗಿರುವ ಭಗವಂತನನ್ನು ಅರಿಯುವುದು. ಲಲಿತೆ ಮತ್ತು ಕೃಷ್ಣ ಇಬ್ಬರೂ ಒಂದೇ ಎನ್ನಲು ಇದೇ ರೀತಿ ಹಲವಾರು ಉದಾಹರಣೆಗಳನ್ನು ನಾವು ಕೊಡುತ್ತಾ ಹೋಗಬಹುದು.  ಈ ಚರ್ಚೆಯ ಮೂಲ ಉದ್ದೇಶವೇನೆಂದರೆ ಬ್ರಹ್ಮವು ಹಲವಾರು ರೂಪಗಳನ್ನು ಹೊಂದಿರುವುದಿಲ್ಲ; ಅದು ಲಲಿತೆಯಾಗಿರಲಿ, ಕೃಷ್ಣನಾಗಿರಲಿ ಅಥವಾ ಶಿವನಾಗಿರಲಿ ಅವರೆಲ್ಲರೂ ಪರಮಾತ್ಮದಿಂದ ಆವಿರ್ಭಾವ ಹೊಂದಿದ ರೂಪಾಂತರಗಳಷ್ಟೇ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA IS KRISHNA http://www.manblunder.com/2009/05/lalitha-is-krishna.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
 
 
Rating
No votes yet

Comments

Submitted by neela devi kn Thu, 04/25/2013 - 09:02

: ಶ್ರೀಧರ್ ರವರಲ್ಲಿ ನಮಸ್ಕಾರಗಳು, ತಾವು ನಮಗೆ ಭಕ್ತಿ ಮತ್ತು ಮುಕ್ತಿ ಮಾರ್ಗವನ್ನು ತೋರಿಸುತ್ತಿರುವ‌ ತಮಗೆ ಅನ0ತಾನ0ತ‌ ವ0ದನೆಗಳು....ನೀಳಾ

Submitted by partha1059 Thu, 04/25/2013 - 12:09

ಉತ್ತಮವಾಗಿ ಸಾಗಿದೆ, ತಾವು ಲಲಿತೆಯೆ ಶ್ರೀಕ್ರಿಷ್ಣ ಎ0ದು ಒ0ದು ಸಾರಿ ಹೇಳಿದ್ದರು ಸಾಕು ನ0ಬುತ್ತಿದ್ದೆ, ನಾಲಕ್ಕು ಸಾರಿ ಹೇಳಿದ್ದೀರಿ ,ಖ0ಡೀತ‌ ನ0ಬುವೆ ,....(ಸ್ವಲ್ಪ ತಮಾಷಿ ಮಾಡಿದೆ ಕ್ಷಮಿಸಿ) .

ಸರಣಿ ಮು0ದುವರೆಯಲಿ

Submitted by makara Thu, 04/25/2013 - 22:33

In reply to by partha1059

ಪಾರ್ಥ ಸರ್,
ಈ ಲೇಖನವನ್ನು ಸಂಪದಕ್ಕೆ ಸೇರಿಸುವಾಗ ಬಹಳ ಸಮಯ ಹಿಡಿಯಿತು ಆಗ ಅನುಮಾನಗೊಂಡು Save ಗುಂಡಿಯನ್ನು ಎರಡು-ಮೂರು ಬಾರಿ ಒತ್ತಿದೆ; ಅದಕ್ಕೂ ಮುಂಚೆ ಒಮ್ಮೆ ಸಂಪದದ ಕೊಂಡಿ ತಪ್ಪಿಹೋಗಿತ್ತು. ಹಾಗಾಗಿ ಶ್ರೀ ಲಲಿತೆಗೆ ಈ ದಿನ ಲೇಖನವನ್ನು ಸೇರಿಸಲು ಇಷ್ಟವಿದ್ದಂತಿಲ್ಲ ಎಂದು ಹೇಳಿ ಇನ್ನೇನು ನೆಟ್-ಕ್ಲೋಸ್ ಮಾಡಿ ಏಳಬೇಕೆಂದಿದ್ದೆ; ಅಷ್ಟರಲ್ಲಿ ಲಲಿತಾಂಬಿಕೆಯೇ ಈ ಲೇಖನ ನನಗೆ ಬಹಳ ಇಷ್ಟವಾಗಿದೆಯೆಂದು ತಿಳಿಸಲು ಮೂರು ಬಾರಿ ಪ್ರತ್ಯಕ್ಷಳಾಗಬೇಕೆ?!! :))

ಅಂದ ಹಾಗೆ ಹಿಂದಿನ ಲೇಖನದ ಹೆಸರು ಲಲಿತೆ ಮತ್ತು ಶ್ರೀ ಕೃಷ್ಣ; ಈ ಲೇಖನ ಶ್ರೀ ಲಲಿತೆಯೇ ಶ್ರೀಕೃಷ್ಣ! ಆದ್ದರಿಂದ ಈ ಲೇಖನ ಸಂಪದದಲ್ಲಿ ಮೂರು ಬಾರಿಯಷ್ಟೇ ಪ್ರಕಟವಾಗಿದೆ. ಹಿಂದಿನ ಸಂಚಿಕೆಯನ್ನು ಬಹುಶಃ ನೀವು ತಪ್ಪಿಸಿಕೊಂಡಿದ್ದೀರ ಎನಿಸುತ್ತಿದೆ.