SUmUಕತೆ : ಭಾಗ - ೨

SUmUಕತೆ : ಭಾಗ - ೨

SUmUಕತೆ: ಭಾಗ - ೧ ಲಿಂಕ್ :-  http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%A7/16-5-2013/40904

 

ಹೌದು... ನೀವು ಅಂದುಕೊಂಡಿರುವುದು ನಿಜ. ನಾವು ಹೋಗಿದ್ದುದು IIT ಕಾನ್ಪುರದಲ್ಲಿ ನಡೆದ ಘಟಿಕೋತ್ಸವದ ಸಮಾರಂಭಕ್ಕೆ. ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲಾ ೭ IIT ಗಳೂ ಸೇರಿ ಘಟಿಕೋತ್ಸವದ ಸಮಾರಂಭ ಏರ್ಪಡಿಸಿದ್ದರು. ಕಳೆದ ಸಲ IIT ಗುವಾಹಟಿಯಲ್ಲಿ ನಡೆದಿತ್ತಂತೆ. ಈ ಬಾರಿ ಕಾನ್ಪುರದಲ್ಲಿ. B.Tech ಸೇರಿದಂತೆ ಉಳಿದೆಲ್ಲ ಡಿಗ್ರಿಯ ಘಟಿಕೋತ್ಸವ ಆಯಾ ಕಾಲೇಜಿನಲ್ಲೇ ನಡೆದರೆ, ಪೋಸ್ಟ್ ಗ್ರಾಜುಯೇಷನ್ ಕೋರ್ಸ್ ಆದ ಕೇವಲ M.Tech ಪದವಿಯದು ಮಾತ್ರ, ಘಟಿಕೋತ್ಸವದ ಸಮಾರಂಭ ಎಲ್ಲರೂ ಸೇರಿ ಮಾಡುವುದಂತೆ. ಹಾಗಾಗಿ ಸಂಯುಕ್ತ IIT ಖರಗ್ಪುರದ ವಿದ್ಯಾರ್ಥಿನಿಯಾದರೂ, ಘಟಿಕೋತ್ಸವದಲ್ಲಿ ಭಾಗವಹಿಸಲು ಕಾನ್ಪುರಕ್ಕೆ ಬಂದಿದ್ದಳು. ಸಂಯುಕ್ತ IIT ಖರಗ್ಪುರ ಕಾಲೇಜಿಗೆ ಪ್ರಥಮ ಬಂದಿದ್ದರೂ, ಒಟ್ಟಾರೆ (ಎಲ್ಲಾ ಕಾಲೇಜ್ ಸೇರಿ) ಮೂರನೇ ರ್‍ಯಾಂಕ್ ಪಡೆದ್ದಿದ್ದಳು. ಅದರ ಜೊತೆಗೆ ಎರಡು ಚಿನ್ನದ ಪದಕ ಕೂಡ ತನ್ನದಾಗಿಸಿಕೊಂಡಿದ್ದಳು. ಮಗಳ ಈ ವಿಶೇಷ ಸಾಧನೆಗೆ ಸನ್ಮಾನ ನಡೆಯುವುದನ್ನು ನೋಡಬೇಕೆಂಬ ಹಂಬಲ ಸರಸು ಅತ್ತೆಗೆ. ಆದರೆ ಅಲ್ಲಿಗೆ ಹೋಗಿ ಬರಲು ಖರ್ಚು ಕಡಿಮೆ  ಆಗುತ್ತದೆಯೇ? ಅದೂ ಅಲ್ಲದೆ ಅಂಕಲ್ ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುವುದಾದರೂ ಹೇಗೆ? ಏನೋ ಬೆಳಗ್ಗೆ ಹೋಗಿ ಸಂಜೆ ಬರುವ ಹಾಗೂ ಇಲ್ಲ.. ಕನಿಷ್ಠವೆಂದರೂ ೪-೫ ದಿನ ಬೇಕು ಹೋಗಿ ಬರುವುದಕ್ಕೆ. ಹಾಗಾಗಿ ಇಲ್ಲಿ ಬಂದು ನೋಡುವ ತಮ್ಮ ಆಸೆಯನ್ನು ಅವರು ಯಾರ ಬಳಿಯೂ ಹೇಳಿರಲ್ಲಿಲ್ಲ ಒಬ್ಬ ಸಂಯುಕ್ತಾಳ ಹೊರತಾಗಿ. ಅವಳ ಹತ್ತಿರಾನೂ ತಮಗೆ ಅಲ್ಲಿ ಬಂದು ನೋಡುವ ಬಲವಾದ ಅಪೇಕ್ಷೆಯಿದೆಯೆಂದು ಆಕೆ ಹೇಳಿರಲ್ಲಿಲ್ಲ, ಹೀಗೆ ಏನೋ ಫೋನಲ್ಲಿ ಮಾತಾಡೋವಾಗ, ನಮಗೆಲ್ಲಿ ಬರೋಕಾಗತ್ತೆ ಕಂದಾ ಅಲ್ಲಿ ತನಕ ಅಂದಿದ್ದರಂತೆ. ಅದನ್ನು ಸಂಯುಕ್ತಾ ನನ್ನ ಬಳಿ ಹೇಳಿದ್ದಳು. ನಾನು ಅಂಕಲ್ ನು ಒಪ್ಪಿಸಿದ್ದೆ, ರಜ ಸಿಕ್ಕರೆ ಖಂಡಿತ ಬರ್ತೀನಪ್ಪ ಅಂದಿದ್ದರು. ಆದರೆ ರಜೆ ಸಿಗದ ಕಾರಣ, ಅವರು ನಾನು ಬರೋದಿಕ್ಕೆ ಆಗಲ್ಲ ಅಂದಾಗ, ಇನ್ನು ನಾನು ಬಂದರೆ ಅವರಿಗೆ ಊಟ ತಿಂಡಿಯ ಗತಿ ಏನು ಎಂದು ಸರಸು ಅತ್ತೆ ನಾನು ಬರೋದಿಲ್ಲಪ್ಪ , ನೀನು ಖಂಡಿತ ಹೋಗಲೇಬೇಕು ಅಂದರು. ಅಂಕಲ್ ಗೆ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡಿಕೊಡಲು ಪಕ್ಕದ ಮನೆಯ ಸೌಮ್ಯ ಆಂಟಿಗೆ ಒಪ್ಪಿಸಿದೆ. ಸೌಮ್ಯ ಆಂಟಿಯ ಗಂಡ ರಮೇಶ ಅಂಕಲ್ ಬಂದು, ನಾವು ನೋಡಿಕೊಳ್ಳುತ್ತೇವೆ ನೀವು ಹೋಗಿಬನ್ನಿ ಎಂದು ಧೈರ್ಯ ಹೇಳಿದೆ ಮೇಲೆ ಸರಸು ಅತ್ತೆ ಹೊರಟು ಬಂದದ್ದು. ನಾನು ಅವಳಮ್ಮನ್ನನ್ನು ಒಪ್ಪಿಸಿ ಕರೆ ತಂದಿದ್ದಕ್ಕೆ ಸಂಯುಕ್ತಾ ಗೆಸ್ಟ್ ಹೌಸ್ ನಲ್ಲಿದ್ದಾಗ ನನಗೊಂದು ಸಿಹಿ ಮುತ್ತಿನ ಲಂಚ ಕೊಟ್ಟಿದ್ದಳು.

ಯಡಿಯೂರಪ್ಪ ಮುಖ್ಯಮಂತ್ರಿಯ ಕುರ್ಚಿ ಬಿಟ್ಟು ಕೆಳಗಿಳಿಯುವುದಿಲ್ಲ ಎಂದು ಎಷ್ಟು ಹಠ ಮಾಡಿದ್ದರೋ, ಅದಕ್ಕಿಂತ ದುಪ್ಪಟ್ಟು ಹಠ ಸಂಯುಕ್ತಾ M.Tech  ಸೇರಿಕೊಳ್ಳದೇ ಇರೊದಕ್ಕೆ ಮಾಡಿದ್ದಳು. ಅದಕ್ಕೆ ಬಲವಾದ ಕಾರಣವೂ ಇತ್ತು. ಮನೆಯಲ್ಲಿ ದುಡಿಯುತ್ತಿದ್ದುದು ವಯಸ್ಸು ಅರವತ್ತು ದಾಟಿದ್ದ ಅಪ್ಪ ಒಬ್ಬರೇ, ಇದ್ದುದು ಮೂರೆ ಮಂದಿಯಾದರೂ ಅವರ ದುಡಿಮೆ ಬೆಂಗಳೂರಿನಂತ ಮಹಾನಗರದಲ್ಲಿ  ಸಾಮಾನ್ಯ ಜೀವನ ನಡೆಸುವುದಕ್ಕೂ ಕೆಲವೊಮ್ಮೆ ಕಷ್ಟವಾಗುತ್ತಿತ್ತು. ಯಾವುದೋ ಪ್ರೈವೇಟ್ ಫ್ಯಾಕ್ಟರಿಯಲ್ಲಿ ಮಷೀನ್ ಮುಂದೆ ನಿಂತು, ಶಿಫ್ಟಿನ ಅರಿವಿಲ್ಲದೆ ದಿನಕ್ಕೆ ೧೦ ಗಂಟೆಗಳ ಕಾಲ ದುಡಿದರೂ ಅವರಿಗೆ ಸಿಗುತ್ತಿದ್ದುದು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಮಾತ್ರ, ಅದೂ ಈಗ ಮೂರು ವರ್ಷದ ಹಿಂದಿನಿಂದ. ಅದಕ್ಕೂ ಮುನ್ನ ಎಂಟುವರೆ ಸಾವಿರ ಬರುತ್ತಿತ್ತಂತೆ, ಅದಕ್ಕೂ ಮುಂಚೆ ಇನ್ನೂ ಕಮ್ಮಿ. ಬರುವ ಹತ್ತು ಸಾವಿರದಲ್ಲಿ ಮೂರು ಸಾವಿರ ತಾವಿದ್ದ ಗೂಡಿಗೆ ಬಾಡಿಗೆ ಕಟ್ಟಿದರೆ, ಎರಡು ಸಾವಿರ ತಿಂಗಳ ರೇಶನ್ನಿಗೆ, ಮತ್ತೊಂದು ಸಾವಿರ ವಿದ್ಯುತ್ ಬಿಲ್ಲು, ವಾಟರ್ ಬಿಲ್ಲು, ನ್ಯೂಸ್ ಪೇಪರ್, TV ಕೇಬಲ್, ಹಾಲು-ಮೊಸರು ಹೀಗೆ.. ಉಳಿಯುತ್ತಿದ್ದುದು ಮೂರೋ ನಾಕೋ ಸಾವಿರ. ಅದರಲ್ಲೂ ಯಾರದೋ ಮುಂಜಿ, ಇನ್ಯಾರದೋ ಮದುವೆ, ಮತ್ತ್ಯಾರಿಗೋ ಅರವತ್ತರ ಶಾಂತಿ ಎಂದು ಸಣ್ಣ ಉಡುಗೊರೆ ಕೊಡಲೇಬೇಕು, ಅದು ಮರ್ಯಾದೆ ಪ್ರಶ್ನೆ, ಹಾಗಂತ ಹೋಗದೆ ಇರಲೂ ಸಾಧ್ಯವಿಲ್ಲ. ಬಂಧು ಬಳಗದವರು ಇವರ ಕಷ್ಟಕ್ಕೆ ಆಗುವುದು ಅಷ್ಟರಲ್ಲೇ ಇತ್ತು ಆದರೂ ಇವರಿಗೆ ನೆಂಟರ ಮೇಲಿನ ಪ್ರೀತಿಗೇನೂ ಕಮ್ಮಿ ಇರಲ್ಲಿಲ್ಲ.

ಮನೆಯ ಪರಿಸ್ಥಿತಿ ಹೀಗಿರುವಾಗ ಸಂಯುಕ್ತಾಳಿಗೆ ಮತ್ತೆರಡು ವರ್ಷ ಓದುವ ಯಾವ ಇರಾದೆಯೂ ಇರಲ್ಲಿಲ್ಲ. ಕ್ಯಾಂಪಸ್ ಸೆಲೆಕ್ಷನ್ ಆಗಿ ಎರಡು ಮೂರು ಆಫರ್ ಗಳು ಕೈಲಿದ್ದವು. ತಾನು ಕೆಲಸಕ್ಕೆ ಸೇರಿ ಅಪ್ಪನನ್ನು ಮನೆಯಲ್ಲಿ ಸುಖವಾಗಿರಸಬೇಕೆಂಬುದು ಅವಳ ಹೆಬ್ಬಯಕೆಯಾಗಿತ್ತು. ಅವರ ತಂದೆ ತಾಯಿಗೂ ಅದು ಬಹು ಮಟ್ಟಿಗೆ ಒಪ್ಪಿಯಾಗಿತ್ತು. ಆದರೆ ನಾನು ಬಲವಂತ ಮಾಡಿ ಅವಳನ್ನು M.Tech ಗೆ ಸೇರಿಸಿಬಿಟ್ಟಿದ್ದೆ. ಆಗೆಲ್ಲ ಒಮ್ಮೊಮ್ಮೆ ಅವರ ಮನೆಗೆ ಹೋದಾಗ, ಅವರಿಬ್ಬರ   ಮೌನದ ನಡುವಲ್ಲಿ ನಾನು ಸಿಕ್ಕಿಹಾಕಿಕೊಂಡಾಗ, ಸಂಯುಕ್ತಾಳನ್ನ M.Tech ಗೆ ಕಳುಹಿಸಿ ತಪ್ಪು ಮಾಡಿಬಿಟ್ಟೆನಾ? ಅನಿಸುತ್ತಿತ್ತು. ಆಗೆಲ್ಲ ಇನ್ನೆಷ್ಟು ದಿನ, ೨ ವರ್ಷ ಅಷ್ಟೇ ತಾನೇ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಾ ಅಲ್ಲಿಂದ ಬಹುತೇಕ ಕಾಲ್ತೆಗೆಯುತ್ತಿದ್ದೆ ಅಥವಾ ಅಂಕಲ್ ಮೂಡ್ ಚೆನ್ನಾಗಿದ್ದರೆ ಅವರೊಂದಿಗೆ ರಾಜಕೀಯ ಭಾಷಣ ಶುರು ಹಚ್ಚುತ್ತಿದ್ದೆ. ಹೌದಲ್ಲವಾ? ದಿನಗಳು ಎಷ್ಟು ಬೇಗ ಉರುಳುತ್ತಿದೆ. ಕುರ್ಚಿ ಇಳಿಯಲು ಗರ್ಜಿಸುತ್ತಿದ್ದ ಯಡ್ಡಿ, ಅದರಲ್ಲಿ ಸದಾ ಆನಂದರನ್ನು ಕೂಡಿಸಿದ ಹಾಗೆ ಮಾಡಿ ಈಗ ಶೆಟ್ಟರನ್ನ ಹತ್ತಿಸುತ್ತಿದ್ದಾರೆ.

ಯಾವನು ಮುಖ್ಯಮಂತ್ರಿಯಾದರೂ ಅಷ್ಟೇನಪ್ಪ, ಶೆಟ್ಟರ / ಬಟ್ಟರ ಯಾರಾದ್ರೇನು.. ಎಲ್ಲಾ ಪಕ್ಷದವರೂ ಅಲ್ಪ ಸಂಖ್ಯಾತರ ಮತ ಬ್ಯಾಂಕ್ ವೃದ್ದಿಸಿಕೊಳ್ಳಲು, ಅವರ ಓಲೈಸುವಿಕೆಗೆ ಮುಂದಾಗುವರೇ ಹೊರತು, ನಮ್ಮನ್ನು ಕೇಳೋರೆ ಇಲ್ಲ. ಅಕ್ಕಿ ಬೆಲೆ ನಲವತ್ತೈದಾಗಿದೆ, ಹುರುಳಿಕಾಯಿಯಂತೂ ಕಿಲೋ ನೂರಾಗಿದೆ. ಬೆಳಗಾಗ್ಗೆದ್ರೆ ಪೆಟ್ರೋಲ್ ಡೀಸೆಲ್ ದರ ಏರಿಕೆ, ವಿದ್ಯುತ್ ಪ್ರತಿ ಯೂನಿಟ್ ಗೆ ೨೦ ಪೈಸೆ ಏರಿಕೆ, ಬೆಂಗಳೂರಲ್ಲಿ ೪ ತಾಸು ಟ್ರಾಫಿಕ್ ಜಾಮ್, ದೆಹಲಿಯಲ್ಲಿ ಗ್ಯಾಂಗ್ ರೇಪ್, ಹಾಸನದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮುಂಬೈಯಲ್ಲಿ ಉಗ್ರರಿಂದ ಬಾಂಬ್ ಸ್ಪೋಟ.... ಇವರು ಅಧಿಕಾರದಲ್ಲಿದ್ದು ಮಾಡುತ್ತಿರುವುದೇನು? ಬರೀ ಸ್ವಾರ್ಥ ಜೀವನ ದ್ವೇಷ ರಾಜಕೀಯ. ಇಂಥವರು ನಮ್ಮನ್ನಾಳುತ್ತಿದ್ದಾರೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ. ಎಂತೆಂಥವರು ನಮ್ಮನಾಳಿದರು, ಕೃಷ್ಣದೇವರಾಯ, ಅಸ್ಟ್ ಹಳೆದ್ ಯಾಕೆ, ಮೊನ್ನೆ ಮೊನ್ನೆವರೆಗೂ ನಮ್ಮ ಮೈಸೂರಿನ ಮಹಾರಾಜರು ಹೇಗೆ ಆಡಳಿತ ನಡೆಸಿದರು.... ಅಂಕಲ್ ಭಾಷಣ ಶುರು ಮಾಡಿದರೆಂದರೆ ನನಗೆ ರಾತ್ರಿ ಊಟ ಅವರ ಮನೆಯಲ್ಲೇ ಎಂಬುದು ಎಂದಿನಿಂದಲೋ ಗೊತ್ತಿರುವ ವಿಷಯ. ನನಗೆಂದೂ ಅವರು ಕೊರೆಯುತ್ತಿದ್ದಾರೆ ಅನ್ನಿಸುತ್ತಿರಲ್ಲಿಲ್ಲ, ಅವರ ಮನಸಿನ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದರು ಅಷ್ಟೇ. ಟರ್ಬುಲೆನ್ಸ್ ಜಾಸ್ತಿಯಾಗಿದೆ, ಸೀಟ್ ಬೆಲ್ಟ್ ಧರಿಸಿ ಎಂದು ವಿಮಾನ ಪರಿಚಾರಿಕೆ ಪ್ರಕಟಿಸುತ್ತಿದ್ದಳು. ಅತ್ತೆ ಸೀಟ್ ಬೆಲ್ಟ್ ತೆರೆದೇ ಇರಲ್ಲಿಲ್ಲ. ಸಂಯುಕ್ತಾಳ ತಲೆಯನ್ನು ಹೆಗಲ ಮೇಲಿಂದ ಅವಳ ಸೀಟಿಗೊರಗಿಸಿ, ಅವಳಿಗೆ ಸೀಟ್ ಬೆಲ್ಟ್ ಹಾಕಿದೆ. ನಾನು  ಬೆಲ್ಟ್ ಹಾಕಿಕೊಂಡು ಸೀಟಿಗೊರಗಿ ಕಣ್ಣು ಮುಚ್ಚಿ ಕೂತೆ.

                                                          **********************

Rating
No votes yet

Comments

Submitted by ಸುಧೀ೦ದ್ರ Sun, 05/19/2013 - 21:01

ಕತೆಗೆ ಪೂರಕವಾಗಿರುವಂತೆ ಈ ಹಿಂದೆ ಬರೆದ್ದಿದ್ದ ಕೆಲ ಚುಟುಕುಗಳ ಕೊಂಡಿಯನ್ನು ನನ್ನ ಸ್ವಂತ ಬ್ಲಾಗಿಂದ ಹೆಕ್ಕಿ ಕೊಟ್ಟಿದ್ದೆ. ಸ್ವಂತ ಬ್ಲಾಗಿನ ಕೊಂಡಿಯನ್ನು ಸಂಪದದಲ್ಲಿ ಪ್ರಕಟಿಸುವ ಬರಹದಲ್ಲಿ ಕೊಡಬಾರದೆಂಬ ನಿಯಮ ನಾನು ಪಾಲಿಸಿರಲ್ಲಿಲ್ಲ. ಅದಕ್ಕೆ ಕ್ಷಮೆ ಇರಲಿ.
ಈಗ ಆ ಚುಟುಕುಗಳನ್ನು ಸಂಪದದಲ್ಲಿ ಪ್ರಕಟಿಸಿ ಅದರ ಕೊಂಡಿಯನ್ನು ನೀಡುತ್ತಿದ್ದೇನೆ. ಅದನ್ನು ಓದುಗರು ಲೇಖನದ ಈ ಭಾಗದಲ್ಲಿ ಓದಿಕೊಳ್ಳಬೇಕೆಂದು ವಿನಂತಿಸುತ್ತೇನೆ...
........... ಅಂಕಲ್ ಭಾಷಣ ಶುರು ಮಾಡಿದರೆಂದರೆ ನನಗೆ ರಾತ್ರಿ ಊಟ ಅವರ ಮನೆಯಲ್ಲೇ ಎಂಬುದು ಎಂದಿನಿಂದಲೋ ಗೊತ್ತಿರುವ ವಿಷಯ. ನನಗೆಂದೂ ಅವರು ಕೊರೆಯುತ್ತಿದ್ದಾರೆ ಅನ್ನಿಸುತ್ತಿರಲ್ಲಿಲ್ಲ, ಅವರ ಮನಸಿನ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದರು ಅಷ್ಟೇ. ಆ ಸಮಯದಲ್ಲೇ ಅವರ ಮಾತುಗಳ ಮಧ್ಯದಲ್ಲಿ ನಾನು ಗೀಚಿದ್ದು.... ಚುಟುಕುಗಳು - http://sampada.net/blog/%E0%B2%9A%E0%B3%81%E0%B2%9F%E0%B3%81%E0%B2%95%E…
...ಟರ್ಬುಲೆನ್ಸ್ ಜಾಸ್ತಿಯಾಗಿದೆ, ಸೀಟ್ ಬೆಲ್ಟ್ ಧರಿಸಿ ಎಂದು ವಿಮಾನ ಪರಿಚಾರಿಕೆ ಪ್ರಕಟಿಸುತ್ತಿದ್ದಳು.......