'ಮಾಟುಂಗಾ ಕನ್ನಡಿಗ್ರು ಯಾವುದರಲ್ಲೂ ಕಡಮೆ ಇಲ್ಲ' !

'ಮಾಟುಂಗಾ ಕನ್ನಡಿಗ್ರು ಯಾವುದರಲ್ಲೂ ಕಡಮೆ ಇಲ್ಲ' !

ಇಲ್ಲಿ ನೋಡಿ, ಈ ಅಪರೂಪದ ಫೋಟೋನ !  ಯಾರ್ಯಾರು ಇದಾರೆ ಅಂತಾ ! ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಮತ್ತು  'ಆಶಾ ನಿರಾಶ,' ಕನ್ನಡ  ಚಿತ್ರ ನಿರ್ಮಾಪಕ',  ನಮ್ಮ ಶ್ರೀ. ವೆಂಕಟ್ರಾಮ್ ರವರು ಸಹಿತ...

ಮೊಟ್ಟಮೊದಲನೆಯದಾಗಿ,  ನಾನು, 'ಮುಂಬೈನ ಕನ್ನಡ ಜನರ ಕೊಡುಗೆ' ಎಂಬ ಮಾಲಿಕೆಯಲ್ಲಿ  ಹೋಟೆಲ್ ಉದ್ಯಮ, ಕಲೆ, ಸಾಹಿತ್ಯ, ರಂಗಭೂಮಿ, ಇತ್ಯಾದಿಗಳಲ್ಲಿ ತಮ್ಮ ಅನುಪಮ ಕೊಡುಗೆಗಳನ್ನು ಕೊಟ್ಟ ದಿಟ್ಟ ಕನ್ನಡಿಗರ ಸಾಧನೆಗಳನ್ನು 'ವಿಕಿಪಿಡಿಯ'ದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೆ. 'ರಾಮಾನಾಯಕ್ ರವರ ಉಡುಪಿ ಹೋಟೆಲ್' ಗಳ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿ 'ಮೈಸೂರ್ ಕನ್ಸರ್ನ್' ಬಗ್ಗೆ ತಿಳಿಯಲು ಅದರ ಮಾಲೀಕ, ಶ್ರೀ. ಶ್ರೀಕಾಂತ್ ರನ್ನು ಸಂಪರ್ಕಿಸಲು ಅವರ ಅಂಗಡಿಗೆ ಹೋದಾಗ, ಅವರು ಹೇಳಿದ ಮಾತುಗಳು ನನಗೆ ಬಹಳ ಹಿಡಿಸಿತು. 'ಅವರ ತಂದೆ ದಿವಂಗತ ಶ್ರೀ. ವೆಂಕಟ್ರಾಮ್ ತಮ್ಮ ಸೋದರರ ಜೊತೆ ಸೇರಿ ೫೦ ರ ದಶಕದಲ್ಲೇ ಒಂದು ಕನ್ನಡ ಚಲನ ಚಿತ್ರವನ್ನು ನಿರ್ಮಿಸಲು ಕೈಹಾಕಿದರು. ಕಾರಣಾಂತರಗಳಿಂದ ಅವರ ಆಶೆ ನೆರವೇರಲಿಲ್ಲ. ಇದನ್ನು ನನಗೆ ಹೇಳುವಾಗ ಅವರ ಮಗ ಶ್ರೀಕಾಂತ್, ಬಹಳ ನೊಂದುಕೊಂಡರು.  ' ನೋಡಿ ಸಾರ್ ನನಗೆ ಹೆಚ್ಚು ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ನಮಗ್ಯಾಕೆ ಸಾರ್ ಅವೆಲ್ಲ. ಎಲ್ಲೋ ಇರ್ತಿವಿ ನಾವು '. ಎಂದರು. ಮತ್ತು ಅವರೆ ಮುಂದುವರಿದು, 'ಒಂದ್ ವಿಷ್ಯ ನಿಮಗೆ ತೋರಿಸ್ ಬೇಕು'. ಎಂದು ಹೇಳಿ ತಮ್ಮ ಮನೆಗೆ ಹೋಗಿ ಅಲ್ಲಿಂದ 'ನ್ಯೂಸ್ ಪೇಪರ್ ಕಟ್ಟಿಂಗ್ಸ್'  ಹಿಡಿದು ತಂದರು. ಇದೇನ್ರಿ ? ಎಂದಾಗ ನೀವೇ ಓದಿ ಸಾರ್, ನನಗೆ ಕನ್ನಡ ಅಷ್ಟು ಚೆನ್ನಾಗಿ ಬರಲ್ಲ,  ಅಂದ್ರು. ಓದಿನೋಡಿದಾಗ ಅದೊಂದು ಬಹು ಮಹತ್ವಪೂರ್ಣ ಸಂಗತಿಯಾಗಿತ್ತು. ಶ್ರೀಕಾಂತ್, ಒಂದು ಕಡೆ ಯಾವುದು ಬೇಡ ಅನ್ನುವ ಧೋರಣೆ ಇಟ್ಟುಕೊಂಡಿದ್ದರು. ಆದರೆ ತಮ್ಮ ತಂದೆಯವರ ಸಾಧನೆಯನ್ನು ತಮ್ಮ ಅಂಗಡಿಗೆಬಂದವರಿಗೆ ಹೇಳುವ ಆಶೆ. ಸಮಯ ಒದಗಿರಲಿಲ್ಲ. ನಾನು ಸಿಕ್ಕಿದ್ದು, ಅವರಿಗೆ ಸಮಾಧಾನ ತಂದಿತು. ಆದರೂ  ಅಳುಕು. ಇದನ್ನು 'ನೆಟ್' ನಲ್ಲಿ ಹಾಕಿದರೆ ಆಗುವ ಸಾಧಕ-ಬಾಧಕಗಳ ಬಗ್ಗೆ ಕಳವಳ, ಅವರ ಮುಖದಲ್ಲಿ ಚೆನ್ನಾಗಿ ಕಾಣಿಸುತ್ತಿತ್ತು. ಕೊನೆಗೆ, ನಾನು ಅವರಿಗೆ ಬಯ್ಯಬೇಕಾಯಿತು. "ಏನ್ರಿ ನೀವ್ ಹೇಳೋದು, ಒಂದ್ಕಡೆ ನೀವು ನಿಮ್ಮ ತಂದೆಯವರ ಸಾಧನೆ ಮೆಚ್ಚಿಕೊಂಡಿದ್ದೀರಿ. ಅದನ್ನು ಹೇಗೆ ಎಲ್ಲರೊಡನೆ ಹಂಚಿಕೊಳ್ಳೋದು ಅನ್ನುವದರ ಬಗ್ಗೆ ಗೊಂದಲದಲ್ಲಿದ್ದೀರಿ'. 'ಮೊದ್ಲು ಹೋಗಿ ಈ ಪೇಪರ್ಸ್ ನೆಲ್ಲ 'ಜೆರಾಕ್ಸ್' ಮಾಡಿ ತನ್ನಿ'. 'ಅಮ್ಮೇಲೆ ನಾನು ನೋಡ್ಕೋತೀನಿ ಹೋಗಿ,' ಅಂದೆ. ತಕ್ಷಣ ಅವರೆ ಹೋಗಿ 'ಜೆರಾಕ್ಸ್' ಮಾಡಿಸಿ ತಂದರು. ನಾನು ನನ್ನ ಘಾಟ್ಕೋಪರ್ ಮನೆಗೆ ಹೋದವನೇ, ಎಲ್ಲಾ ಓದಿ, ತಕ್ಷಣ 'ವಿಕಿಪಿಡಿಯ' ಕ್ಕೆ ಲಗತ್ತಿಸಿದೆ. ನಿಜಕ್ಕೂ ವೆಂಕಟರಾಂ ಸಾಧನೆ ಶ್ಲಾಘನೀಯ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಎಲ್ಲಾದರು ದಾಖಲಾಗಲೇ ಬೇಕು, ಎನ್ನುವುದು ನನ್ನ ಮತ್ತು ನನ್ನ ಗೆಳೆಯರ ಅಭಿಮತ.

ಶ್ರೀಕಾಂತ್ ತಮ್ಮ ತಂದೆಯವರ ಬಿಜಿನೆಸ್ ಅತ್ಯಂತ ಯಶಸ್ವಿಯಾಗಿ ಮುಂದೆ ತಂದಿದ್ದಾರೆ. ಮುಂಬೈ ನಲ್ಲಿ ನಿಮಗೇನಾದರೂ ಒಳ್ಳೆಯ ಫಿಲ್ಟರ್ ಕಾಫಿ ಪುಡಿ ಬೇಕಾದರೆ ಕೇವಲ ಅದು ಮಾಟುಂಗಾದ ಮೈಸೂರ್ ಕನ್ಸರ್ನ್ಸ್ ನಲ್ಲಿ ಮಾತ್ರವೇ ಲಭ್ಯ. 'ಫಿಲ್ಟರ್ ಕಾಫಿಯನ್ನು ಕುಡಿಯುವ ಅಭ್ಯಾಸದ ದಕ್ಷಿಣ ಭಾರತೀಯರು ತಪ್ಪದೆ ಈ ಅಂಗಡಿಯಲ್ಲೇ ತಮ್ಮ ಕಾಫಿ ಪುಡಿಯನ್ನು ಖರೀದಿಸುತ್ತಾರೆ. ನಾನು ಸಹಿತ ಸುಮಾರು ೪೦ ವರ್ಷಗಳಿಂದ ಕಾಫಿಪುಡಿಯನ್ನು ಅಲ್ಲೇ ಖರೀದಿ ಮಾಡುತ್ತಾ ಬಂದಿದ್ದೇನೆ.  ತಮ್ಮ 'ಮೈಸೂರ್ ಕನ್ಸರನ್ಸ್ ಶಾಖೆ'ಯೊಂದನ್ನು ಬೆಂಗಳೂರಿನಲ್ಲಿ ತೆರೆದಿದ್ದಾರೆ. ಅಲ್ಲಿ-ಇಲ್ಲಿ ಓಡಾಡಿ ಕೊಂಡಿದ್ದಾರೆ. 'ಒಳ್ಳೆಯ ಸಮರ್ಥ ವ್ಯಾಪಾರಿ,' ಎಂಬ ಹೆಗ್ಗಳಿಕೆಗೆ ಪಾತ್ರರು. ಅವರಿಗೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು.

'ಬೊಂಬಾಯಿನ ಕಾಫಿಪುಡಿ ಅಂಗಡಿಯೊಂದರ ಮಾಲೀಕ ಶ್ರೀ. ವೆಂಕಟ್ರಾಮ್,' ತಮ್ಮ ಸೋದರರ ಜೊತೆ, 'ಆಶಾ ನಿರಾಶ'' ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿದರು :

'ಆಶಾ ನಿರಾಶ', ಎಂಬ ಕನ್ನಡ ಚಿತ್ರವನ್ನು ದಿಗ್ದರ್ಶಿಸಿದ ಖ್ಯಾತಿ ಶ್ರೀ ವೆಂಕಟ್ರಾಮ್ ಸೋದರರಿಗೆ ಸಲ್ಲುತ್ತದೆ. ಈಗಿನ 'ಮೈಸೂರ್ ಕನ್ಸರ್ನ್ಸ್ ನ ಮಾಲಿಕ'ರಾಗಿದ್ದ ವೆಂ ಕಟ್ರಾಮ್ ರವರ  ಸೋದರ 'ಮೈಸೂರ್ ಪ್ರಿಂಟಿಂಗ್ ಪ್ರೆಸ್' ನಡೆಸುತ್ತಿದ್ದರು. ಮನೆಯಲ್ಲಿ ಎಲ್ಲರೂ ಒಳ್ಳೆಯ ಕಲಾವಿದರು. ಹಾಡು ಮತ್ತು ಬರವಣಿಗೆ ಯಲ್ಲಿ ನಿಸ್ಸೀಮರು. ಈ ಕಲೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು 'ಕರ್ನಾಟಕ್ ಫಿಲಂ ಪ್ರೊಡಕ್ಷನ್ ಸಂಸ್ಥೆ'ಯನ್ನು ಸ್ಥಾಪಿಸಿದರು.

ಬೊಂಬಾಯಿನ  ದಾದರ್ ನಲ್ಲಿನ 'ರಣಜಿತ್ ಸ್ಟುಡಿಯೋ'ದಲ್ಲಿ ಚಿತ್ರೀಕರಣವೂ ಆಗಿನ ಕಾಲದ ಉದಯೋನ್ಮುಖ ಸುಪ್ರಸಿದ್ಧ ಚಲನ ಚಿತ್ರ ತಾರೆ 'ವೈಜಯಂತೀಮಾಲ'ರ ಕರಕಮಲಗಳಿಂದ ಆರಂಭವಾಯಿತು. ನಾಯಕ ನಟ, ಕನ್ನಡ ಚಲನಚಿತ್ರ ರಂಗದ ಹೆಸರಾಂತ ಕಲಾವಿದ, 'ಕಲ್ಯಾಣ್ ಕುಮಾರ್' ಮತ್ತು 'ಮೀನಾಕ್ಷಿ' ಎಂಬ ದಕ್ಷಿಣದ ಅಭಿನೇತ್ರಿ. ಈಕೆ 'ತೀನ್ ಬತ್ತಿ ಔರ್ ಚಾರ್ ರಾಸ್ತಾ' ಎಂಬ ಹಿಂದಿ  ಚಿತ್ರದಲ್ಲಿ ನಟಿಸಿ ಹೆಸರುಮಾಡಿದ್ದರು.  ಸನ್,  ೧೯೫೪, ರ,  ಜೂನ್ ೨೦ ರ,  ಕರ್ಮವೀರ ಪತ್ರಿಕೆಯಲ್ಲಿ ಈ ಚಿತ್ರದ ಬಗ್ಗೆ  ವಿವರವಾಗ ಲೇಖನವೊಂದು ಪ್ರಕಟವಾಗಿದೆ.  'ಅಮೀರ್ ಬಾಯಿ ಕರ್ನಾಟಕಿ' ಒಂದೆರಡು ಗೀತೆಗಳನ್ನು ಹಾಡಿದ್ದಾರೆ. ಆಗಿನ್ನೂ ಹೆಚ್ಚು ಖ್ಯಾತರಾಗದ 'ಮೊಹಮ್ಮದ್ ರಫಿ,' ಮತ್ತು 'ಲತಾಮಂಗೇಶ್ಕರ್,' ಒಂದೆರಡು ಗಿತೆಗಳನ್ನು ಹಾಡಿದ್ದಾರೆ ಸಹಿತ ! 'ಬಾನಾಡಿ' 'ಹರಿತಸ್' ಗೀತೆಗಳನ್ನು ಒದಗಿಸಿದ್ದಾರೆ. ಸಂಗೀತ 'ಬುಲೋ ಇರಣಿ'ಯವರದು.'ಶ್ರೀ ಸೌಂಡ್ ಸಿಸ್ಟಮ್' ಧ್ವನಿಮುದ್ರಣದ ಜವಾಬ್ದಾರಿಯನ್ನು ನಿರ್ವಹಿಸಿತ್ತು.  'ಕರ್ನಾಟಕದ ಚಲನ ಚಿತ್ರ ಇತಿಹಾಸ,'  ವೆಂಬ ಹೊತ್ತಿಗೆಯನ್ನು ಸಂಪಾದಿಸಿದ 'ಡಾ ವಿಜಯ,'   'ಆಶಾ ನಿರಾಶ' ಚಿತ್ರದ ಬಗ್ಗೆ, ಸಾಕಷ್ಟು ಬೆಳಕು ಚೆಲ್ಲಿದ್ದಾರೆ. 

ಕೊಂಡಿ ಹಿಡಿದು ಜಗ್ಗಿ :

೧)  http://kn.wikipedia.org/wiki/%E0%B2%8E._%E0%B2%B0%E0%B2%BE%E0%B2%AE%E0%B2%BE%E0%B2%A8%E0%B2%BE%E0%B2%AF%E0%B2%95%E0%B3%8D,_%E0%B2%89%E0%B2%A1%E0%B2%BF%E0%B2%AA%E0%B2%BF_%E0%B2%B6%E0%B3%8D%E0%B2%B0%E0%B3%80_%E0%B2%95%E0%B3%8D%E0%B2%B0%E0%B2%BF%E0%B2%B7%E0%B3%8D%E0%B2%A3_%E0%B2%AC%E0%B3%8B%E0%B2%B0%E0%B3%8D%E0%B2%A1%E0%B2%BF%E0%B2%82%E0%B2%97%E0%B3%8D,_%E0%B2%AE%E0%B3%81%E0%B2%82%E0%B2%AC%E0%B3%88-%E0%B3%A7%E0%B3%AF ( 'ರಾಮಾನಾಯಿಕ್ ಉಡುಪಿ ರೆಸ್ಟಾರೆಂಟ್')  

೨) http://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%8D_%E0%B2%95%E0%B2%A8%E0%B3%8D%E0%B2%B8%E0%B2%B0%E0%B3%8D%E0%B2%A8%E0%B3%8D%E0%B2%B8%E0%B3%8D,_%E0%B2%AE%E0%B2%BE%E0%B2%9F%E0%B3%81%E0%B2%82%E0%B2%97,_%E0%B2%AE%E0%B3%81%E0%B2%82%E0%B2%AC%E0%B3%88

Comments