ಹರಕೆ

ಹರಕೆ


ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು:



Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ ಛಂದಸ್ಸಿನಲ್ಲಿ ರಚಿಸಿರಿ)



ಎಲ್ಲಿಯ ಟ್ರಿಗೊನಮೆಟ್ರಿ? ಎಲ್ಲಿಯ ಗೋಪಾಲಕೃಷ್ಣ?  ಅದೂ ಅಲ್ಲದೆ

ಸುಮಾರು ಎರಡು ತಿಂಗಳಿಂದ 'ಹಂಸನಾದ' ದ ಕಡೆಗೆ ತಲೆ ಹಾಕಿಯೂ ಮಲಗಿರಲಿಲ್ಲ! ಹಾಗಾಗಿ  ಈ ಪ್ರಶ್ನೆಗೆ  ಉತ್ತರಿಸುವಾಗ ಸ್ವಲ್ಪ ತಿಣುಕಾಡಲೇ ಬೇಕಾಯಿತು! <--break->



ಬರೆದ ಕೆಲವು ಉತ್ತರಗಳನ್ನ  ಇಲ್ಲಿ ಹಾಕಿರುವೆ:



ಮೊದಲು  ಪಂಚಮಾತ್ರಾ  ಚೌಪದಿಯಲ್ಲೊಂದು :



ಕೊರಳಲ್ಲಿ ಮೆರೆಯುತಿದೆ ಕಾಸಿನಾ ಸರವು ಮುಂ-

ಗುರುಳಲ್ಲೊ ಸೈ! ನಗುವ ನವಿಲಗರಿ ಸೊಗಸು!

ಮರೆತೆನೇನಕಟಾ! ನಲಿವ ಹರಿಯ ನೆನಕೆಯನು?

ಹರಸಲೀತನ ನೋಟ ಕಾಟಗಳ ಕಳೆದು



ಮತ್ತೆ ಸುಮಾರು  ಇದೇ ಹಂದರದಲ್ಲಿಯೇ, ಸ್ವಲ್ಪ ಬದಲಾವಣೆಗಳೊಂದಿಗೆ   ಭಾಮಿನಿ ಷಟ್ಪದಿಯಲ್ಲೊಂದು ಉತ್ತರ  :



ಕೊರಳಿನಲಿ ಕುಣಿಯುತಿಹ ಕಾಸಿನ

ಸರವ ನಲಿದಾಡುತಿಹ ಪಾದದಿ

ಮೆರೆವ ಗೆಜ್ಜೆಯ ಮೊಗದ ನಗುವನು ನೋಳ್ಪ ಸೊಗವೇ ಸೈ!

ನರರೊಳುತ್ತಮ ಗೊಲ್ಲ ಬಾಲನ

ತುರುವ ಕಾಯ್ದನ ಮರೆತೆನಕಟಾ!

ನರೆತ ಜೀವದ ಭವದ ಕಾಟವನಿವನೆ ಕಳೆವುದೆ ಸೈ!



ಇದನ್ನೇ ಚೂರುಪಾರು ಬದಲಾಯಿಸಿ, ಇನ್ನೊಂದು:



ಕೊರಳಿನಲಿ ಕುಣಿಯುತಿಹ ಕಾಸಿನ

ಸರದ ನಲಿದಾಡುತಿಹ ಪಾದದಿ

ಮೆರೆವ ಗೆಜ್ಜೆಯ ನಾದದಿಂಚರ ಕೇಳ್ವ ಸೊಗವೇ ಸೈ!

ನರರೊಳುತ್ತಮ ಗೊಲ್ಲ ಬಾಲನ

ತುರುವ ಕಾಯ್ದನ ಮರೆತೆನಕಟಾ

ನುರವಣಿಸಿರುವ ಭವದ ಕಾಟವನವನೆ ಕಳೆವುದೆ ಸೈ!



-ಹಂಸಾನಂದಿ



(ಚಿತ್ರ: ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ  ಗೋಡೆಯಲ್ಲಿ   ಕೃಷ್ಣ  - ನನ್ನ ಫೋನ್ ಕ್ಯಾಮರಾದ ಚಳಕ

 

 

Rating
No votes yet

Comments

Submitted by ಗಣೇಶ Fri, 07/05/2013 - 00:01

ವ್ಹಾ..ಹಂಸಾನಂದಿಯವರೆ ಸೂಪರ್ ಆಗಿದೆ.
ಸುಮ್ಮನೆ ಹೀಗೇ..ಬೇಸರಿಸಿಕೊಳ್ಳಬೇಡಿ.ಪದ್ಯಪಾನ ಪ್ರಶ್ನೆ ಕೊಡುವವರೂ ಕವಿಗಳೇ ಅಲ್ಲವಾ? ಕವಿತೆಯ ಎಬಿಸಿಡಿ ಗೊತ್ತಿಲ್ಲದ ನಾನು ನಾಲ್ಕು ಶಬ್ದ ಕೊಡುವೆ. ಪ್ರಯತ್ನಿಸುವಿರಾ-
’ಲೆಮನ್, ಯೆಲ್ಲೋ, ರೆಡ್, ವೈನ್" ರಾಮಾಯಣಕ್ಕೆ ಸಂಬಂಧಿಸಿದ ಕವನ ಬರೆಯಲು ಸಾಧ್ಯವಾ?:)

Submitted by nageshamysore Fri, 07/05/2013 - 03:48

In reply to by ಗಣೇಶ

>>>>’ಲೆಮನ್, ಯೆಲ್ಲೋ, ರೆಡ್, ವೈನ್" ರಾಮಾಯಣಕ್ಕೆ ಸಂಬಂಧಿಸಿದ ಕವನ ಬರೆಯಲು ಸಾಧ್ಯವಾ?:)<<<< ಗಣೇಶ್ ಜಿ, ಹಂಸಾನಂದಿಯವರು ಛಂದೋಬದ್ಧವಾಗಿ ತಿಣುಕಾಡಿ ಕಾವ್ಯ ಹೆಣೆಯುವತನಕ ಇಕೊಳ್ಳಿ - ಟೈಮ್ಪಾಸಿಗೆ ಎರಡು ತುಣುಕು; ಪ್ರಾಸವಷ್ಟೆ ನಿಯಮವಾಗಿಟ್ಟುಕೊಂಡು ಹಾಸ್ಯಕ್ಕೆ ಹೆಣೆದಿದ್ದು :-) @ಹಂಸಾನಂದಿಯವರಿಗೆ : ಮೇಲಿನ ಪದ್ಯಪಾನ ಕವನ ಸಕತ್ತಾಗಿವೆ! ಧನ್ಯವಾದಗಳು - ನಾಗೇಶ ಮೈಸೂರು

ನೋಡದೆ 'ವೈನಾ'ಗಿ ಸಿಂಗರಿಸಿಕೊಂಡಾ ಶೂರ್ಪನಖಿ ಹೆಣ್ಣಾ
ತಾ'ಯೆಲ್ಲೊ' ಗಮನ ನೆಟ್ಟು ಮೈ ಮರೆತಿದ್ದನಲ್ಲಾ ಲಕ್ಷ್ಮಣಾ
ಜನಿಸಿದ ಕೋಪವೊಂದೆ'ರೆಡಾಗಿ' ಕಾಮದುಂಬಿ ಅ'ಲೆಮನ'
ಸರಿತಪ್ಪು ಗಣಿಸದೆ ಕಾಡೆ, ಹರಿಯಿತೆ ಕಿವಿ ಮೂಗನೆ ಬಾಣ!

ಕಾಡಿನ ಕುಟೀರದಿ ಸೀತೆ ಕಾದು ಕಾದು ಬೇಸತ್ತು ದಾಹಕೆ
ಕಿವುಚಿದಳು ಸಕ್ಕರೆ ಜತೆ 'ಯೆಲ್ಲೋ' 'ಲೆಮನ್ನನು' ನೀರಿಗೆ
ಜಿಂಕೆಯ 'ರೆಡ್' ಹ್ಯಾಂಡಾಗಿ ಹಿಡಿಯ ಹೊರಟನಲ್ಲ ರಾಮ
ಮರಳಿದಾಗ ಕೊಡಲೆ 'ರೆಡ್ ವೈನ್' ಗ್ಲಾಸಲಿಟ್ಟು ಕೂತಳಮ್ಮ!

Submitted by makara Fri, 07/05/2013 - 04:52

In reply to by nageshamysore

’ವೈ’ನಾಗಿದೆ ನಾಗೇಶರೆ ನೀವು ಬರೆದ ಕವನ,
ಸ್ವಾಗತಿಸಬೇಕು ನಿಮಗೆ ಹಾಸಿ ’ರೆಡ್’ ಕಾರ್ಪೆಟು,
ಸನ್ಮಾನ ಕೂಟದಲಿ ಸರಳತೆಗಾಗಿ ಸಾಕು ಲೆಮನ್ ಜ್ಯೂಸು,
’ಎಲ್ಲೋ’ ಕಣ್ಣಿಂದ ನೋಡುವವರು ಅಂದರೂ ಸಹ ಕಂಜೂಸು.

@ಗಣೇಶ್.ಜಿ; ಹಿಂದೆ ಇಡ್ಲಿ, ಸಾಂಬಾರ್, ವಡೆ, ಚಟ್ನಿ ಎನ್ನುವ ನಾಲ್ಕು ಶಬ್ದಗಳನ್ನು ಕೊಟ್ಟು ಇದರಿಂದ ಶಿವನ ಬಗ್ಗೆ ಕವನ ಕಟ್ಟಲು ಸಾಧ್ಯವೇ ಎಂದು ಶತಾವದಾನಿ ಗಣೇಶರನ್ನು ಯಾರೋ ಕೇಳಿದಾಗ ಅವರು ಕೂಡಲೇ ಒಂದು ಕವನವನ್ನು ಕಟ್ಟಿ ಹಾಡಿದರೆಂತೆ. ಈ ಪ್ರಸಂಗ ನೆನಪಿಗೆ ಬಂತು ನಿಮ್ಮ ಸವಾಲನ್ನು ನೋಡಿ. ಅದನ್ನು ನಾಗೇಶರು ಸಮರ್ಥವಾಗಿಯೇ ಎದುರಿಸಿದ್ದಾರೆ ಎಂದೆನಿಸುತ್ತದೆ. ಶತಾವಧಾನಿ ಗಣೇಶರ ಮೂಲ ಕವನವನ್ನು ಹಂಸಾನಂದಿಯವರು ಬಹುಶಃ ಕೊಡಬಹುದು ಎಂದುಕೊಳ್ಳುತ್ತೇನೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

Submitted by hamsanandi Sat, 07/06/2013 - 00:23

In reply to by makara

ಗಣೇಶರ ಪ್ರಶ್ನೆಯೂ, ನಾಗೇಶರ ಉತ್ತರವೂ ಸೊಗಸಾಗಿದೆ. ಸಾಮಾನ್ಯವಾಗಿ ದತ್ತಪದಿಯಲ್ಲಿ ಪದಗಳನ್ನು ಅವುಗಳ ರೂಢಿಯರ್ಥದಲ್ಲಲ್ಲದೇ ಬೇರೆ ರೀತಿಯಲ್ಲಿ ಬಳಸುವುದೇ ಹೆಚ್ಚಾದದ್ದರಿಂದ ನಾನು ಒಂದು ಬೇರೆ ಪ್ರಯತ್ನವನ್ನೂ ಮಾಡುವೆ :)

ಈ ಪೂರಿ ಚಟ್ನಿ ಪದ್ಯದ ಬಗ್ಗೆಯೂ ಕೇಳಿದ್ದೆ, ಸರಿಯಾಗಿ ನೆನಪಿಲ್ಲ. ಅದನ್ನೂ ಒಂದು ಮಾಡಿ ನೋಡಬಹುದು!

Submitted by ಗಣೇಶ Mon, 07/08/2013 - 00:36

In reply to by makara

>>ಸ್ವಾಗತಿಸಬೇಕು ನಿಮಗೆ ಹಾಸಿ ’ರೆಡ್’ ಕಾರ್ಪೆಟು,
+೧
ನಾಗೇಶರೆ, ತಮ್ಮ ಎರಡೂ ಕವನಗಳು ಚೆನ್ನಾಗಿದೆ.
-ಶ್ರೀಧರ್‌ಜಿಯವರದ್ದೂ "ಕಂ ಜೂಸ್" ಕವನ ಸಹ ಚೆನ್ನಾಗಿದೆ. :) ದೇವಿ ಧ್ಯಾನ, ಧೂಮಪಾನ, ಪದ್ಯಪಾನ.. ಯಾವುದಾದರೂ ಸರಿ..ನಾಗೇಶರು ತಮ್ಮ ಕವನದೊಂದಿಗೆ ರೆಡಿ. :)

Submitted by nageshamysore Mon, 07/08/2013 - 03:57

In reply to by ಗಣೇಶ

>>>>>>ಶ್ರೀಧರ್‌ಜಿಯವರದ್ದೂ "ಕಂ ಜೂಸ್" ಕವನ ಸಹ ಚೆನ್ನಾಗಿದೆ.>>>> +1
ಇದನ್ನು ನಾನೂ ಸಹ ಓದಿದ ದಿನವೆ ಹೇಳಬೇಕೆಂದುಕೊಂಡೆ - ಗಡಿಬಿಡಿಯಲ್ಲಿ ಮರೆತು ಹೋಯ್ತು. ಶ್ರೀಧರರ ಪಂಚ್ ಲೈನುಗಳನ್ನು ಸಹ ಸೊಗಸಾಗಿ ಹುಡುಕುತ್ತಾರೆ :-)