'ನೂರು ನಮನ'

'ನೂರು ನಮನ'

ಕವನ

ನಿನ್ನ ನೂರು ಅವಹೇಳನಕಾರಿ ಮಾತುಗಳು 
ನನ್ನನು ಕುಗ್ಗಿಸದು 
ನಿನ್ನ ಚುಚ್ಚುಮಾತುಗಳಿಂದ ನನ್ನ ಮನವು 
ಇನ್ನೆಂದು ಅಳುಕದು 

ನಿನ್ನ ವಿತಂಡವಾದ ತರ್ಕಗಳಾವುವು ನನ್ನ 
ಸಿದ್ಧಾಂತವನ್ನು ಬದಲಿಸದು 
ನಿನ್ನ ಮೂದಲಿಕೆ ನಿಂದನೆಗಳಿಂದ 
ನನ್ನ ಧೃತಿಕೆಡದು 

ನಿನ್ನೆಲ್ಲ ನಿಂದನೆಗಳಿಗೆ ನನ್ನ ಸ್ವಾಗತ

ನೀನು ಸದಾ ನಿಂದಿಸುತ್ತಾ 
ನನ್ನ ಗುರಿಯನ್ನು ನೆನಪಿಸು 
ನೀನು ಸದಾ ಮೂದಲಿಸುತ್ತಾ
ನನ್ನ ಧ್ಯೇಯವನ್ನು ಜ್ಞಾಪಿಸು 

ಹರಸು,ನನ್ನನು ಹಿಯ್ಯಾಳಿಸುತ್ತಲೇ ಹರಸು
ಬೆಳೆಸು, ನನ್ನನು ಬೈಯ್ಯುತ್ತಲೇ ಬೆಳೆಸು 

ನಿನ್ನ ಈ ಎಲ್ಲ ವರ್ತನೆಗಳಿಂದ ನನ್ನಲಿ 
ದಿನನಿತ್ಯ ನಡೆಯಲಿ ಆತ್ಮಾವಲೋಕನ 
ಹೇಗಾದರೂ ನನ್ನ ಕಾರ್ಯದ ಬಗ್ಗೆ ನಿಗಾ 
ಇಡುವ ನಿಂದಕನೆ ನಿನಗೆ ನನ್ನ ನೂರು ನಮನ

Comments

Submitted by sathishnasa Sun, 09/22/2013 - 13:21

ನಿಂದಕರನ್ನು ವಂದಿಸುವ ನಿಮ್ಮ ಭಾವನೆಗೆ ನನ್ನ ನಮನ .........ಸತೀಶ್

Submitted by nageshamysore Sun, 09/22/2013 - 15:03

ನಿನ್ನ ವಿತಂಡವಾದ ತರ್ಕಗಳಾವುವು ನನ್ನ 
ಸಿದ್ಧಾಂತವನ್ನು ಬದಲಿಸದು 
ನಿನ್ನ ಮೂದಲಿಕೆ ನಿಂದನೆಗಳಿಂದ 
ನನ್ನ ಧೃತಿಕೆಡದು 

ಸೊಗಸಾದ ಸಾಲುಗಳು - ನಿಂದಕರು ಹೇಗೆ ಅವರ ಸ್ವಂತ ಸಿದ್ದಾಂತಕ್ಕೆ ಬದ್ದರೊ, ಹಾಗೆ ಇತರರು ತಮ್ಮ ತಮ್ಮ ಸಿದ್ದಾಂತಕ್ಕೆ ಬದ್ಧರು ಎನ್ನುವುದನ್ನೆ ಮರೆತುಬಿಡುವ ವಿಚಿತ್ರ ಲೋಕವಿದು. ಲೋಕೋದ್ದಾರದ ಡೊಳ್ಳು ಕುಣಿತ ಆರಂಭಿಸುವ ಅಂತಹವರ ನೃತ್ಯ ಕನಿಷ್ಠ ವಿಕೃತ ಮನರಂಜನೆಯನ್ನಾದರೂ ಕೊಡುತ್ತದೆಂದುಕೊಂಡು ಆಸ್ವಾದಿಸಬೇಕೇನೊ..:-) .   

Submitted by Shreekar Sun, 09/22/2013 - 16:25

In reply to by nageshamysore

ಅದ್ಭುತ ಕವನ !
ವಿನಯ್ ಪಟೇಲ್ ಅವರಿಗೆ ಅನೇಕ ಧನ್ಯವಾದಗಳು.

ದಾಸ ಶ್ರೇಷ್ಠ ಪುರಂದರದಾಸರು ಹೀಗೆ ಹಾಡಿದ್ದಾರೆ:-

ನಿಂದಕರಿರಬೇಕಿರಬೇಕು ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಹಿಯೋ ಹಾಂಗೆ
ಅಂದಂದು ಮಾಡಿದ ಪಾಪವೆಂಬ ಮಲ | ತಿಂದು ಹೋಗುವರಯ್ಯ ನಿಂದಕರು

ದುರುಳ ಜನಂಗಳು ಚಿರಕಾಲವಿರುವಂತೆ |
ಕರವ ಮುಗಿದು ವರ ಬೇಡುವೆನು ........ ಪುರಂದರ ವಿಠಲ

Submitted by partha1059 Sun, 09/22/2013 - 17:24

In reply to by Shreekar

ಉತ್ತಮ‌ ಸಂದೇಶ‌ ಬೀರುವ‌ ಕವನ‌.
ನಿಂದನೆಗೆ ನಾವು ಕುಗ್ಗುವುದು ಸಹಜ‌ ಆದರೆ ನಿಮ್ಮ ಕವನ‌ ಅಂತಹವರಿಗೆ ಉತ್ತಮ‌ ಸಂದೇಶ‌ ನೀಡಿ ನಾವು ಹಿಂದೆ ಹೆಜ್ಜೆ ಇಡದಂತೆ ದೈರ್ಯ‌ ನೀಡುತ್ತದೆ
ಅಭಿನಂದನೆಗಳು

Submitted by vinaypatel Sun, 09/22/2013 - 23:02

In reply to by partha1059

'ನನ್ನ ಕವನ‌ ಅಂತಹವರಿಗೆ ಉತ್ತಮ‌ ಸಂದೇಶ‌ ನೀಡಿ ನಾವು ಹಿಂದೆ ಹೆಜ್ಜೆ ಇಡದಂತೆ ದೈರ್ಯ‌ ನೀಡುತ್ತದೆ' ಎಂದೆರಲ್ಲ ಖುಷಿಯಾಯಿತು.ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.