ಕತೆ : ಬಾಹುಬಲಿ
ಬಾಹುಬಲಿ
ಕಲ್ಕಟ್ಟೆ ಎಂಬ ಹಳ್ಳಿಯ ಬಸ್ ನಿಲ್ದಾಣದಲ್ಲಿ ತಲೆಕೆಟ್ಟು ಕುಳಿತಿದ್ದ ಲಕ್ಕೆಗೌಡ. ಅವನ ಹೆಸರು ಮೊದಲಿಗೆ ಲಕ್ಷ್ಮಣಗೌಡನೆಂದೆ ಇತ್ತು, ಶಾಲೆಗೆ ಸೇರುವಾಗ ಹಳ್ಳಿಯ ಮಾಸ್ತರು ಲಕ್ಕೆಗೌಡ ಎಂದು ರಿಜಿಸ್ಟ್ರಿನಲ್ಲಿ ಬರೆದರು ನಂತರ ಅದೆ ಹೆಸರು ಸ್ಥಿರವಾಯಿತು. ಅವನು ಊರಿಗೆ ಹೋಗಲು ಬಸ್ಸು ಕಾಯುತ್ತ ಕುಳಿತಿದ್ದ. ಇನ್ನು ತಿಪಟೂರಿಗೆ ಹೋಗುವ ಬಸ್ಸು ಬಂದಿರಲಿಲ್ಲ. ಅವನಿಗೆ ಎಲ್ಲಿ ಹೋಗಬೇಕೆಂದೆ ಸ್ವಷ್ಟ ನಿರ್ದಾರವಿರಲಿಲ್ಲ. ಮೊದಲು ಹಾಳು ಹಳ್ಳಿಯಿಂದ ಹೊರಹೋಗಬೇಕು ಅಂತ ಅವನ ಯೋಚನೆ.
ಅದೇಕೊ ಅವನಿಗೆ ಮನೆಯಲ್ಲಿ ಅಮ್ಮ, ಹೆಂಡತಿ, ಕಡೆಗೆ ಮಕ್ಕಳು ಸಹ , ಎಲ್ಲ ತನ್ನ ವಿರೋದಿಗಳು ಅನ್ನಿಸಿಬಿಟ್ಟಿತ್ತು. ಅವನು ಯೋಚಿಸುತ್ತಿದ್ದ
‘ಅಲ್ಲ ನಾನು ಕೇಳುವದರಲ್ಲಿ ಅನ್ಯಾಯ ಏನಿದೆ. ಬಾಯಿ ಬಿಟ್ಟು ಕೇಳದೆ , ಆ ದರಿದ್ರ ರಾಮ ನನಗೆ ಹಾಗೆ ಬಿಟ್ಟು ಕೊಡಲು ಇದೇನು ರಾಮಾಯಣದ ಕಾಲವೆ. ಇರುವ ತೆಂಗಿನ ತೋಟ ಬಾಗಕ್ಕೆ ಎಲ್ಲ ಒಪ್ಪಿದ್ದಾಗಿದೆ, ಕೆರೆಯ ಕಡೆಯ ಬಾಗ ನನಗೆ ಬೇಕು ಅಂತ ಅಷ್ಟೆ ತಾನು ಕೇಳಿದ್ದು, ಆದರೆ ಅಣ್ಣನಾದವನು ಅದಕ್ಕು ಒಪ್ಪುತ್ತಿಲ್ಲ, ಎಲ್ಲವು ಅವನು ಹೇಳಿದ್ದೆ ಮಾತು ಅನ್ನುವಂತೆ ನಡೆಯಬೇಕು. ಥುತ್ ದರಿದ್ರ, ಅವ್ವ, ಹೋಗಲಿ ಕಡೆಗೆ ತನ್ನ ಹೆಂಡತಿಯೆ ತನಗೆ ಬಾಯಿ ಬಡಿಯುತ್ತಿದ್ದಾಳೆ, ಹೊರಗೆ ಎಲ್ಲರ ಮುಂದೆ ನನ್ನ ಮರ್ಯಾದೆ ಎಕ್ಕುಟ್ಟಿ ಹೋಗಿದೆ, ಇಲ್ಲಿರುವದಕ್ಕಿಂತ ಊರು ಬಿಟ್ಟು ಹೊರಗೆ ಹೊರಟು ಹೋಗುವುದೆ ವಾಸಿ ‘, ಅಂದು ಕೊಂಡು ಪಕ್ಕಕ್ಕೆ ಉಗಿದ. ಕೋಪದಲ್ಲಿ ಏನು ತಿನ್ನದೆ ಹೊರಟಿದ್ದು ಹೊಟ್ಟೆಯಲ್ಲಿ ಚುರುಗುಟ್ಟುತ್ತಿತ್ತು.
ರಾಮೇಗೌಡ ಹಾಗು ಲಕ್ಕೆಗೌಡ ಅಣ್ಣತಮ್ಮಂದಿರು, ಚಿಕ್ಕ ವಯಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರನ್ನು ತಾಯಿ ಹನುಮವ್ವ ಅಕ್ಕರೆಯಿಂದ ಬೆಳೆಸಿದ್ದಳು. ಊರಿಗೆ ಮಾದರಿ ತನ್ನ ಮಕ್ಕಳು ರಾಮ ಹಾಗು ಲಕ್ಕ ಅನ್ನುವ ಅವಳ ಭ್ರಮೆ ಅವರು ದೊಡ್ಡವರಾಗುತ್ತಲೆ ನೀರ ಗುಳ್ಳೆಯಂತೆ ಒಡೆದುಹೋಗಿತ್ತು. ಚಿಕ್ಕವಯಸಿನಿಂದಲು ಅಣ್ಣನ ಕೈಹಿಡಿದೆ ತಿರುಗುತ್ತಿದ್ದ ಲಕ್ಕೆಗೌಡ ವಯಸಿಗೆ ಬರುವಾಗ ಅದೇನು ಆಯಿತೊ ಅಣ್ಣನನ್ನು ಕಾಣುವಾಗ ಹಾವನ್ನು ಕಂಡ ಮುಂಗುಸಿಯಂತೆ ಆಡುತ್ತಿದ್ದ. ‘ಎಲ್ಲ ದರಿದ್ರ ಊರಿನ ಪಾರ್ಟಿ ರಾಜಕೀಯದಿಂದ’ ಎಂದು ಹನುಮವ್ವ ಬೆರಳು ಮುರಿಯುವಳು. ಗ್ರಾಮಪಂಚಾಯಿತಿ, ಜಿಲ್ಲಾ ಪಂಚಾಯಿತು ಚುನಾವಣೆ ಎನ್ನುವ ಭೂತ ಹಳ್ಳಿ ಹಳ್ಳಿಗಳನ್ನು ಹೊಕ್ಕು ಮನೆಗಳನ್ನು ಒಡೆದಿತ್ತು. ಒಂದೆ ಮನೆಯಲ್ಲಿ ಎರಡು ಪಕ್ಷಗಳು ಉದಯಿಸಿ ಹಳ್ಳಿಯ ಮನೆಗಳನ್ನು ನರಕ ಮಾಡಿತ್ತು.
ಅಣ್ಣ ತಮ್ಮ ಇಬ್ಬರು ಬೇರೆ ಬೇರೆ ರಾಜಕೀಯ ಪಕ್ಷಕ್ಕೆ ಸೇರಿದವರು. ಆದರೆ ಅದರ ಪರಿಣಾಮ ಮನೆಯ ಒಳಗು ಆಗಿದ್ದು ಮಾತ್ರ ಬೇಸರದ ಸಂಗತಿ, ಅಣ್ಣ ತಮ್ಮಂದಿರ ನಡುವೆ ಸಣ್ಣ ಸಂಗತಿಗು ವಾದ ವಿವಾದ ಏರ್ಪಡುತ್ತಿತ್ತು. ಅಣ್ಣ ಏರಿಗೆ ಎಳೆದರೆ ತಮ್ಮ ನೀರಿಗೆ ಅನ್ನುವನು. ಹೊರಗಿನ ರಾಜಕೀಯವನ್ನು ಮನೆಯ ಒಳಗೆ ತರಬೇಡಿ ಎನ್ನುವ ಹೆಂಗಸರ ಮಾತಂತು ಕೇಳುವ ಹಾಗೆ ಇರಲಿಲ್ಲ. ಮೊದಲಾದರೆ ತನ್ನ ಅತ್ತಿಗೆ ಮಾದೇವಿಯನ್ನು ಕಂಡಾಗಲೆಲ್ಲ , ‘ಅತ್ತಿಗೆ ನೀವು ಸಂಪತಿಗೆ ಸವಾಲ್ ನಲ್ಲಿ ರಾಜಕುಮಾರನಿಗೆ ಇದ್ದರಲ್ಲ ಅಂತ ಅತ್ತಿಗೆ, ತಾಯಿಗೆ ಸಮಾನ ‘ ಎಂದು ಅವಳನ್ನು ಹೊಗಳುತ್ತ ನಗುತ್ತ ಹೊಂದಿಕೊಂಡು ಇದ್ದವನು ಅದೇನು ಆಯಿತೊ, ಅವಳ ಕೈಲು ಮಾತೆ ನಿಲ್ಲಿಸಿದ.
ಆದರೆ ಅದೇನು ವಿಚಿತ್ರವೊ ಲೋಕಾರೂಡಿಗೆ ವಿರುದ್ದವಾಗಿ ಮನೆಯಲ್ಲಿ ಹೊರಗಿನಿಂದ ಬಂದ ಇಬ್ಬರು ಹೆಂಗಸರು ಅಕ್ಕತಂಗಿಯರಿಗಿಂತ ಹೆಚ್ಚಾಗಿ ಹೊಂದಿಕೊಂಡು ಬಿಟ್ಟರು. ತಮ್ಮ ಗಂಡಂದಿರ ಜಗಳದ ಬಗ್ಗೆ ತಲೆ ಕೆಡಸಿಕೊಳ್ಳಲೆ ಇಲ್ಲ. ಹಿರಿಯಳಾದ ಮಾದೇವಿ, ಲಕ್ಕೆಗೌಡನ ಹೆಂಡತಿ ರಾಜಮ್ಮ ಒಬ್ಬರಿಗೊಬ್ಬರು ಅನ್ನುವಂತೆ ಇದ್ದರು. ಅದರ ಪರಿಣಾಮ ವೆಂಬಂತೆ ಅವರ ಮಕ್ಕಳು ಸಹ , ರಾಮೇಗೌಡನ ಮಗ ವಿಕಾಸ್ ಹಾಗು ಲಕ್ಕೆಗೌಡನ ಮಗ ವಿಶಾಲ್ ಸದಾ ಒಬ್ಬರ ಕೈ ಹಿಡಿದು ಒಬ್ಬರು ಸುತ್ತೋರು, ಮನೆಯಲ್ಲು ಒಬ್ಬರ ಬಿಟ್ಟು ಒಬ್ಬರು ಇರದೆ ಸದಾ ಜೊತೆಯಾಗೆ ಊಟ, ನಿದ್ದೆ , ಸ್ನಾನ ಎಲ್ಲ, ಅವರಿಗೆ ಒಂದೆ ಬೇಸರ ಅದೇಕೆ ನಮ್ಮ ಅಪ್ಪಂದಿರು ಹೀಗೆ ಕೋತಿ ತರ ಆಡ್ತಾರೆ ಎಂದು.
ಕಡೆಗೆ ಅಣ್ಣ ತಮ್ಮಂದಿರ ಜಗಳ ಆಸ್ತಿಯನ್ನು ಪಾಲು ಮಾಡು ಎನ್ನುವಲ್ಲಿಗೆ ಬಂದು ನಿಂತಿತು, ಇವರಿಬ್ಬರ ಜಗಳ ಪರಿಹರಿಸಲಾಗದೆ ಅವರ ತಾಯಿ ಹನುಮವ್ವ ಸಹ ಸೋತು ಏನಾದರು ಮಾಡಿಕೊಳ್ಳಿ ಅಂದುಬಿಟ್ಟಳು. ಹಂಚಿಕೊಳ್ಳಲು ದೊಡ್ಡ ಆಸ್ತಿ ಏನಿರಲಿಲ್ಲ. ಇರುವ ಮನೆ ಬಿಟ್ಟರೆ ಕೆರೆ ಕೆಳಗಿದ್ದ ತೆಂಗಿನ ತೋಟ . ಸುಮಾರು ನೂರು ಫಲಕೊಡುವ ತೆಂಗಿನ ಮರವಿತ್ತು. ಸರಿ ಇಬ್ಬರು ಮನೆಯನ್ನು ಹಂಚಿಕೊಳ್ಳುವದೆಂದು, ಹಾಗೆಯೆ ತೋಟವನ್ನು ಸಹ ಅರ್ದ ಅರ್ದ ಮಾಡುವದೆಂದು , ಹೊರಗಿನ ಜನರ ಜೊತೆ ಕುಳಿತು ನಿರ್ದರಿಸಿದರು.
ಎಲ್ಲ ಸರಿ ಹೋಯಿತು ಎನ್ನುವಾಗ , ಲಕ್ಕೆಗೌಡ ತರಲೆ ತೆಗೆದ, ತನಗೆ ಕೆರೆ ಕಡೆಯ ಬಾಗವೆ ಬೇಕು ಎಂದು, ಅಲ್ಲಿ ನೀರಿನ ಪಲವತ್ತು ಇದ್ದು, ಮತ್ತೊಂದು ಬಾಗಕ್ಕೆ ನೀರು ಹೋಗಬೇಕಾದರೆ, ಈ ಬಾಗದ ಮುಖಾಂತರೆ ವೆ ಹೋಗಬೇಕಿತ್ತು ಇದನ್ನೆಲ್ಲ ಯೋಚಿಸಿ ಅವನು ತನಗೆ ಕೆರೆಯ ಪಕ್ಕದ ಪಶ್ಚಿಮ ದಿಕ್ಕನ ಅರ್ದಬಾಗವೆ ಬೇಕೆಂದು ಹಟ ಹಿಡಿದ. ಆದರೆ ರಾಮೇಗೌಡನು ತಿರುಗಿಬಿದ್ದ, ತಾಯಿ ಸಹ ಬುದ್ದಿ ಹೇಳಿದಳು , ಆದರೆ ರಾಮನು
“ನೀನು ಸುಮ್ಮನೀರವ್ವ , ಅವನು ಚೆಂಗಲು ಗೆಳೆಯರ ಮಾತು ಕೇಳಿ ಹೀಗೆಲ್ಲ ಆಡ್ತಾನೆ, ಅವನು ಹೇಳಿದಂತೆ ಕುಣಿಯಲು ಆಗಲ್ಲ ಬೇಕಾದ್ರೆ ತಗೋ ಇಲ್ಲಂದ್ರೆ ಹಾಳಾಗಿಹೋಗು ಅನ್ನು” ಎಂದು ಬಿಟ್ಟ. ತಮ್ಮನಿಗು ರೇಗಿ ಹೋಯಿತು, ತನ್ನ ಗೆಳೆಯರನ್ನು ಚೆಂಗಲು ಎನ್ನುವುದೆ, ಇವನ ಗೆಳೆಯರೇನು ಸಾಚವೆ ಎಲ್ಲರು ಹೆಂಡ ಕುಡುಕರು ಅಂತ ಕೂಗಿ ಆಡಿದ. ಮಾತಿಗೆ ಮಾತು ಬೆಳೆದು ಅಣ್ಣನಿಗೆ ಹೊಡೆಯಲು ಹೋದ.
ಆದರೆ ಮನೆಯಲ್ಲಿ ಇಬ್ಬರು ಹೆಂಗಸರಿಗು ಆಸ್ತಿ ಬೇರೆ ಆಗುವುದೆ ಬೇಕಿರಲಿಲ್ಲ. ಹಾಗಿರುವಾಗ ಈ ಜಗಳ ಬೇರೆ, ಲಕ್ಕೆಗೌಡನ ಹೆಂಡತಿ ತಿರುಗಿಬಿದ್ದಳು.
“ಹಾಳಾದವನೆ ನಿನೆಗೆ ಏನು ಬಂದಿದೆ, ಸುಮ್ಮನೆ ಹೊರಗಿನವರ ಮಾತು ಕೇಳಿ ಹಾಳಾಗ್ತ ಇದ್ದಿ, ಬಾಗ ಬೇಕೆ ಬೇಕು ಅನ್ನುವಾಗ ಸುಮ್ಮನೆ ಅರ್ದ ತೆಗೆದು ಕೊಳ್ಳದೆ, ಇಲ್ಲದ ತಗಾದೆ ತೆಗಿತೀಯ, ನಿನ್ನಿಂದ ಮನೇನೆ ಹಾಳಾಗಿ ಹೋಯ್ತು” ಅನ್ನುತ್ತ ಬಾಯಿಗೆ ಬಂದಂತೆ ಬೈಯ್ದುಬಿಟ್ಟಳು,
ಸ್ವಂತ ಹೆಂಡತಿಯೆ , ತನಗೆ ಒತ್ತಾಸೆಯಾಗದೆ ಇರುವುದು ಅವನ ಪಿತ್ತ ನೆತ್ತಿಗೇರಿಸಿತು, ಹೆಂಡತಿಗು ಹಿಡಿದು ನಾಲಕ್ಕು ಬಾರಸಿದ, ನಂತರ ತಲೆಕೆಟ್ಟವನಂತೆ , ಚೀಲ ಹಿಡಿದು, ನಾನಿನ್ನು ಈ ಮನೇಲಿ ಇರಲ್ಲ ನೀವೆ ಇದ್ದು ಹಾಳಾಗಿ ಎಂದು ಕೂಗಾಡಿ ಹೊರಟು ಬಿಟ್ಟ. ಈಗ ಬಸ್ ಸ್ಟಾಂಡಿಗೆ ಬಂದು ಬರುವ ಎಸ್ ಆರ್ ಎಸ್ ಬಸ್ಸಿಗೆ ಕಾಯುತ್ತ ಕುಳಿತಿದ್ದಾನೆ. ಕೈಯಲ್ಲೊಂದು ಬ್ಯಾಗು, ಜೇಬಿನಲ್ಲಿ ತುಂಬಿರುವ ಹಣ ಅವನಿಗೆ ದೈರ್ಯ ಕೊಡುತ್ತಿದೆ, ಯಾರದೇನು ಅನ್ನುವ ಬಾವನೆ.
ತಿಪಟೂರಿನ ಬಸ್ ನಿಲ್ದಾಣದಲ್ಲಿ ಹಳ್ಳಿಯಿಂದ ಬಂದು ಇಳಿದ ಅವನು ಚಿಂತಿಸಿದ ತುಮಕೂರಿಗೆ ಹೋಗೋಣವೆ ಎಂದು ಏಕೊ ಬೇಸರ ಎನಿಸಿತು, ಅಲ್ಲಿ ಎಲ್ಲರು ಪರಿಚಿತರೆ, ಯಾರ ಮುಖವನ್ನು ನೋಡಲು ಅವನಿಗೆ ಇಷ್ಟವಾಗಲಿಲ್ಲ. ಎದುರಿಗೆ ಹಾಸನದ ಬಸ್ ಕಾಣಿಸಿತು. ಏನಾದರು ಆಗಲಿ ಎಂದು ಬಸ್ ಹತ್ತಿದ, ಸಂಜೆ ಹಾಸನ ತಲುಪಿ, ಹೋಟೆಲ್ ನಲ್ಲಿ ರೂಮು ಮಾಡಿ ಇದ್ದ. ಬೆಳಗ್ಗೆ ಎದ್ದವನಿಗೆ ಏನು ಮಾಡುವುದು ಅನ್ನುವ ಚಿಂತೆ, ಎಲ್ಲಿಯಾದರು ಹೋಗಿ ಬಂದರಾಗದೆ ಅನ್ನಿಸಿ, ಹೋಟೆಲ್ ಮಾಣಿ ಒಬ್ಬನನ್ನು ಕೇಳಿದ, ಇಲ್ಲಿ ಸುತ್ತ ಮುತ್ತ ಹೋಗಿ ನೋಡುವುದು ಏನಿದೆ ಎನ್ನುತ್ತ. ಹಾಸನ ಜಿಲ್ಲೆಯಲ್ಲಿ ನೋಡುವ ಸ್ಥಳಕ್ಕೇನು ಕಡಿಮೆ ಅವನು ಬೇಲೂರು ಹಳೆಬೀಡು, ಶ್ರವಣಬೆಳಗೊಳ ಮುಂತಾದ ಸ್ಥಳದ ಹೆಸರು ಹೇಳಿದ.
ಲಕ್ಕೆಗೌಡ ಹಿಂದೊಮ್ಮೆ ಬೇಲುರು ಹಳೆಬೀಡಿಗೆ ಹೋಗಿದ್ದ. ಶ್ರವಣಬೆಳಗೊಳವನ್ನು ನೋಡಿರಲಿಲ್ಲ. ಹಾಗಾಗಿ ಅಲ್ಲಿಗೆ ಹೋಗಿ ಬರುವದೆಂದು ನಿರ್ದರಿಸಿದ, ಅಲ್ಲಿ ನೋಡುವದೆನಿದೆ ಎಂಬ ಪೂರ್ತಿ ಕಲ್ಪನೆಯು ಇಲ್ಲದೆ , ಹೋಟೆಲಿನಲ್ಲಿ ತಿಂಡಿ ಮುಗಿಸಿ, ರೂಮ್ ಖಾಲಿ ಮಾಡಿ . ಬಸ್ ಹತ್ತಿ ಶ್ರವಣಬೆಳಗೊಳ ತಲುಪಿದ. ಹಾಸನದಿಂದ ಸರಿ ಸುಮಾರು ಐವತ್ತು ಕಿ.ಮಿ ದೂರವೇನೊ.
ಶ್ರವಣಬೆಳಗೊಳ ಕರ್ನಾಟಕದ ಪ್ರಸಿದ್ದ ಯಾತ್ರಸ್ಥಳ. ನೋಡಲು ಅಲ್ಲಿ ಸಾಕಷ್ಟಿತ್ತು. ವಿವಿದ ಸ್ಥಳಗಳಿಂದ ಬಂದ ಯಾತ್ರಾರ್ತಿಗಳು ತುಂಬಿ ತುಳುಕುತ್ತಿದ್ದರು. ಶ್ವವಣಬೆಳಗೊಳ ಎಂಬ ಹೆಸರು ಬರಲು ಕಾರಣವಾದ ಊರಮಧ್ಯದಲ್ಲಿರುವ ಕೊಳ, ಅದನ್ನು ಶ್ವೇತ ಸರೋವರ ಎಂದು ಅನ್ನುವರಂತೆ , ಎದುರುಬದುರಾಗಿ ಇರುವ ಚಂದ್ರಗಿರಿ ಹಾಗು ಇಂದ್ರಗಿರಿ ಎಂಬ ಬೆಟ್ಟ. ಚಾವುಂಡರಾಯ ಕಟ್ಟಿಸಿದ ದೇವಾಲಯ. ಸಾಕಷ್ಟು ಜಿನಮಂದಿರಗಳು. ತೀರ್ಥಂಕರರ ದೇಗುಲಗಳು , ಕನ್ನಡ ತಮಿಳು ಹಾಗು ಮರಾಠಿಯಲ್ಲಿನ ಶಿಲಾಲೇಖನಗಳು ಎಲ್ಲವನ್ನು ನೋಡುತ್ತ, ಅವನು ಇಂದ್ರಗಿರಿಯನ್ನು ಹತ್ತುವಷ್ಟರಲ್ಲಿ ಬಿಸಿಲು ನಡುನೆತ್ತಿಯಲ್ಲಿದ್ದು, ಸುಸ್ತಾಗಿತ್ತು.
ಭೂಮಿಯಿಂದ ಆಕಾಶದುದ್ದಕ್ಕು ನಿಂತ ಬಾಹುಬಲಿಯ ಸುಂದರ ಮೂರ್ತಿಯನ್ನು ನೋಡುತ್ತ ಮುಗ್ದನಾದ “ ಅದ್ಯಾರೊ ತಂದು ಇಲ್ಲಿ ನಿಲ್ಲಿಸಿದನೊ ‘ ಎಂಬ ಉದ್ಗಾರ ಲಕ್ಕೆಗೌಡನಿಗೆ. ಈಗ ಅವನಿಗೆ ಒಬ್ಬನೆ ಬಂದಿದ್ದು ಬೇಸರವೆನಿಸಿತ್ತು. ತನ್ನ ಮಗ ಹಾಗು ಹೆಂಡತಿಯನ್ನು ಕರೆತಂದಿದ್ದರೆ ಅವರು ನೋಡುತ್ತಿದ್ದರಲ್ಲ ಎಂಬ ಭಾವ ತುಂಬಿತು. ಮಗುವಿನಂತೆ ನಿರ್ವಾಣನಾಗಿ ನಿಂತ ಗೊಮ್ಮಟನನ್ನು ಕಾಣುವಾಗ ಅವನಲ್ಲಿ ಎಂತದೊ ಧಿವ್ಯಭಾವ ತುಂಬಿಕೊಂಡಿತು. ಸ್ವಲ್ಪ ಕಾಲ ಕುಳಿತು ಕೊಳ್ಳಬೇಕೆಂಬ ಭಾವ ಅವನಲ್ಲಿ ತುಂಬಿ ಸ್ವಲ್ಪ ಜನ ಸಂಚಾರ ವಿರಳವಿರುವ ಜಾಗನೋಡಿ ಕುಳಿತ.
ಲಕ್ಕೆಗೌಡ ಗಮನಿಸಿದ, ಅವನಿಂದ ಸ್ವಲ್ಪ ದೂರದಲ್ಲಿ ಶ್ವೇತ ವಸ್ತ್ರ ಧರಿಸಿದ ವಯಸ್ಸಾದ ಪುರುಷರೊಬ್ಬರು ಕುಳಿತ್ತಿದ್ದರು. ತಲೆ ಸಂಪೂರ್ಣ ಬೋಳಾಗಿದ್ದು ಬಿಸಿಲಿನಲ್ಲಿ ಮಿಂಚುತ್ತಿತ್ತು. ಕನ್ನಡಕ ಧರಿಸಿದ್ದ ಅವರು ಪಕ್ಕದಲ್ಲಿ ಒಂದು ಕೋಲನ್ನು ಇಟ್ಟುಕೊಂಡಿದ್ದರು, ಬಹುಷಃ ನಡೆಯುವಾಗ ಆಸರೆಗಾಗಿ ಎಂದುಕೊಂಡ . ಆತನು ಸಹ ಲಕ್ಕೆಗೌಡನನ್ನು ನೋಡುತ್ತಿದ್ದವರು , ನಂತರ ನಗುತ್ತ ಪ್ರಶ್ನಿಸಿದರು
“ನೀವು ಎಲ್ಲಿಂದ ಬರುತ್ತಿದ್ದೀರಿ? ಎಲ್ಲವನ್ನು ನೋಡಿದಿರ , ಎಷ್ಟು ಸುಂದರವಲ್ಲವೆ ?”
ಲಕ್ಕೆಗೌಡ ಹೇಳಿದ
“ನಾನು ತಿಪಟೂರಿನ ಕಡೆಯವನು, ಹೀಗೆ ಬಂದೆ , ನೀವನ್ನುವುದು ನಿಜ, ಎಲ್ಲವು ತುಂಬಾನೆ ಚೆನ್ನಾಗಿದೆ ಇನ್ನೊಮ್ಮೆ ನಿದಾನಕ್ಕೆ ಬರಬೇಕು”
“ಹೌದಲ್ಲವೆ, ಒಮ್ಮೆ ಬಂದರೆ ಮತ್ತೆ ಬರಲೇ ಬೇಕೆನಿಸುವ ಪವಿತ್ರ ಜಾಗವಲ್ಲವೆ, ನೋಡಿದಿರ, ಬಾಹುಬಲಿಸ್ವಾಮಿ ನಿಂತಿರುವ ದೃಷ್ಯವನ್ನು ನೋಡಿದಿರ ಎಷ್ಟು ಮೋಹಕ” ಎಂದರು ಆ ಬಿಳಿಯ ವಸ್ತ್ರದಾರಿ.
“ಬಾಹುಬಲಿಸ್ವಾಮಿಯೆ ? “ ಎಂದ ಲಕ್ಕೆಗೌಡ ಸ್ವಲ್ಪ ಅಯೋಮಯನಾಗಿ.
ಅವರು ನಗುತ್ತ, ಇವನೆ ನೋಡಿ ಎನ್ನುತ್ತ , ಉದ್ದಕ್ಕು ನಿಂತಿದ್ದ ಗೊಮ್ಮಟನನ್ನು ತೋರಿಸಿದರು.
“ಇದು ಗೊಮ್ಮಟೇಶ್ವರನ ವಿಗ್ರಹವಲ್ಲವೆ ?” ಎಂದು ಪ್ರಶ್ನಿಸಿದ. ಲಕ್ಕೆಗೌಡನಿಗೆ ಇತಿಹಾಸ ಪುರಾಣಗಳ ಜ್ಞಾನ ಅಷ್ಟಕಷ್ಟೆ
ಆತ ನಗುತ್ತ ನುಡಿದರು
“ಹೌದು ಗೋಮಟೇಶ್ವರನೆ ಅವನು, ಬಾಹುಬಲಿ ಸ್ವಾಮಿ ಎಂದರು ಅವನೆ “
ಲಕ್ಕೆಗೌಡನಿಗೆ ಆಶ್ಚರ್ಯ , ಅವನು ನುಡಿದ “ನಿಮಗೆ ಇಲ್ಲಿಯ ಎಲ್ಲ ಕತೆಯು ಗೊತ್ತೆ, ಈ ವಿಗ್ರಹಕ್ಕೆ ಸೇರಿದ ಕತೆಯನ್ನು ಹೇಳುತ್ತಿರ, ನಿಮಗೆ ಎಲ್ಲಿಯಾದರು ಹೋಗುವ ಕೆಲಸವಿಲ್ಲವಷ್ಟೆ “ ಎಂದು ಕೇಳಿದ, ಅವನಿಗೆ ಸಾಕಷ್ಟು ಪುರುಸತ್ತು ಇತ್ತು.
ಆತ ಕಣ್ಮುಚ್ಚಿದರು. ಭಕ್ತಿಭಾವದಿಂದ ನುಡಿದರು “ ಸ್ವಾಮಿಯ ಪಾದದಲ್ಲಿಯೆ ಕುಳಿತು ಆ ಮಹನೀಯನ ಕತೆ ಹೇಳುವ ಸೌಭಾಗ್ಯ ದೊರೆತರೆ ಅದಕ್ಕಿಂತ ಮತ್ತೇನು ಕೆಲಸವಿದ್ದೀತು, ಖಂಡೀತ ಹೇಳುವೆ ಕೇಳಿ “ ಎಂದು ಸಿದ್ದರಾದರು. ಲಕ್ಕೆಗೌಡನು ಶ್ರದ್ದೆಯಿಂದ ಕೇಳಲು ಕುಳಿತ.
photo url : baahubali svetambara.
.
ಮುಂದಿನ ಬಾಗದಲ್ಲಿ ಮುಕ್ತಾಯ
Comments
@ಗುರುಗಳೇ-ಬಾಹುಬಲಿಯ ಆಧುನಿಕ ಕಥೆ ಅನ್ನಿಸುತ್ತೆ..!
ಗುರುಗಳೇ-
ಈ ಬರಹದ ಮೇಲೆ ಕಣ್ಣಾಡಿಸಿದಾಗ ನೀವ್ ಹಾಕಿದ ೨ ಚಿತ್ರಗಳು ನೋಡಿದಾಗ ಬಾಹುಬಲಿಯ ಇತಿಹಾಸದ ಕಥೆ ನೆನಪಿಗೆ ಬಂತು.. ಅಣ್ಣ ತಮ್ಮ ಗುದ್ದಾಡಿ ಸೋತವನಿಗೆ ಎಲ್ಲವನ್ನು ಮರಳಿಸಿ ನಿಜದಿ ಮನುಜನಾದ-ಯೋಗಿಯಾದ ಬೆಟ್ಟದಲಿ ನೆಲೆ ನಿಂತ ಬಾಹುಬಲಿಯ ಆಧುನಿಕ ಕಥೆ ಅನ್ನಿಸುತ್ತೆ.. ನಾ ಇನ್ನು ೨ ನೆ ಭಾಗ ಓದಿಲ್ಲ..!! ಈ ಬರಹ ಓದುತಿದ್ದಂತೆ ನೀವು ಕೆಲ ದಿನಗಳ ಹಿಂದೆ ಬರೆದ ಒಂದು ಬರಹ ನೆನಪಿಗೆ ಬಂತು (ಅದೇ- ಒಬ್ಬ ಯಶಸ್ವಿ ಉದ್ಯಮಿ - ಶ್ರೀ ಮಂತ ಒಬ್ಬ ವೈರಾಗ್ಯದಿ ಎಲ್ಲ ತ್ಯಜಿಸಿ ಮನೆ ಮಡದಿ ಮಕ್ಕಳು ಎಲ್ಲ ಬಿಟ್ಟು ಬಂದು ತುದಿಯ ದೇವಸ್ಥಾನದಿ ನೆಲೆ ನಿಲುವುದು ಅವರನ್ನು ಆ ದೇವಸ್ಥಾನ ವೀಕ್ಷಿಸಲು ಹೋದ ಒಬ್ಬರು ಮಾತಾಡಿಸುವುದು)...
೨ನೆ ಭಾಗ ಓದುವೆ.. ಅಲ್ಲಿ ಎಲವೂ ನಿಚ್ಚಳವಾಗಲಿದೆ ..! ಮೊದಲ ಭಾಗ ಕುತೂಹಲ ಕಾಯ್ದಿಡುವಲ್ಲಿ ತಕ್ ಮಟ್ಟಿಗೆ ಯಶಸ್ವಿಯಾಗಿದೆ.
ನನ್ನಿ
ಶುಭ ಸಂಜೆ..
ಶುಭವಾಗಲಿ..
\|