ಚಮಚ - ಚಮಚಾ
ಚಮಚ ಮತ್ತು ಚಮಚಾ ಪದಗಳಲ್ಲಿ ಇರುವ ವ್ಯತ್ಯಾಸ ಬಹಳ ಸಣ್ಣದು. ಆದರೆ ಅರ್ಥಗಳ ನಡುವೆ ಅಜಗಜಾಂತರ. ಪಾಶ್ಚಾತ್ಯರು ತಿಂಡಿ ತಿನ್ನಲು ಬಳಸುತ್ತಿದ್ದ ಚಮಚ (spoon) ಇಂದು ನಮ್ಮ ಕೈಗೂ ಬಂದಿದೆ. ಬೆರಳುಗಳಿಗೆ ಅಪಾರ ಶಕ್ತಿಯಿದೆಯಾದರೂ ಅಚೇತನವಾದ ಚಮಚವನ್ನು ಬಳಸುವುದು ಫ್ಯಾಷನ್ ಆಗುತ್ತಿದೆ. ಬೃಹತ್ ಕಟ್ಟಡ, ಅಣೆಕಟ್ಟುಗಳನ್ನು ನಿರ್ಮಿಸಲು ಸಾಧ್ಯವಾಗುವ ಕೈಗೆ ಇಡ್ಲಿ ತುಂಡರಿಸುವುದು ಕಷ್ಟವೇ? ಬಿಸಿ ಅನ್ನವನ್ನು ಊದಿ ಊದಿ ಸೇವಿಸಲು ಅಸಾಧ್ಯವೇ? ಕೈ ಬೆರಳಿಗೆ ಅಥವಾ ಬೆರಳುಗಳಿಗೆ ಗಾಯವಾದಾಗ ತಿನ್ನಲು ಚಮಚಗಳ ಬಳಕೆ ಸಮಂಜಸ.
ಚಮಚಾ ಎಂಬುದರ ಅರ್ಥವಾಗಲು ಚಮಚಾಗಿರಿ ಎಂಬ ಪದವೇ ಸಹಾಯಕ. ಚಮಚಾಗಿರಿಯನ್ನು ಸಾಮಾನ್ಯವಾಗಿ “ಬೂಟು ನೆಕ್ಕುವುದು” ಎಂಬುದಾಗಿಯೂ ಹೇಳುವುದುಂಟು. ಬಕೆಟ್ ಹಿಡಿಯುವುದೆಂದರೂ ಚಮಚಾಗಿರಿಯೇ. ತನ್ನ ಲಾಭಕ್ಕಾಗಿ ಮತ್ತೊಬ್ಬರನ್ನು ಮಿತಿಮೀರಿ ಅನುಸರಿಸುವುದೇ ಚಮಚಾ ಗಿರಿ. ಅಂಗಲಾಚುವುದು, ಹಲ್ಲುಗಿಂಜುವುದು, ಬೆನ್ನಹಿಂದೆ ಹೋಗುವುದು ಇವೆಲ್ಲವೂ ಚಮಚಾ ಗಿರಿಯೇ ಆಗಿವೆ. ಚಮಚಾಗಿರಿ ಮಾಡುವವರು “ಚಮಚಾ” ಗಳೆಂದು ಗುರುತಿಸಲ್ಪಡುತ್ತಾರೆ. “ಚಡ್ಡಿ, ಚೇಲಾ” ಎಂದೂ ಚಮಚಾಗಳನ್ನು ಹಂಗಿಸುವರು. ಚಮಚಾಗಿರಿ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದೆ. ತಿಂಡಿ ಸೇವನೆಗೆ ಬಳಕೆಯಾಗುವ ಚಮಚವೂ ಚಮಚಾದ ವ್ಯುತ್ಪನ್ನವಿರಬಹುದು. ಚಮಚ ಮತ್ತು ಚಮಚಾ ಒಂದರ್ಥದಲ್ಲಿ ಅವಲಂಬನೆಯ ಸಂಕೇತವೂ ಹೌದಲ್ಲವೇ?
ತಿನ್ನಲು ಕೈಯ ಬದಲಾಗಿ ಚಮಚಗಳನ್ನು ಬಳಸುವುದಾದರೂ ಅವುಗಳನ್ನು ಹಿಡಿಯಲು ಕೈ ಬೆರಳುಗಳೇ ಬೇಕು. ಆಹಾರ ವಿತರಣೆಗೂ ಚಮಚಗಳನ್ನು ಬಳಸುತ್ತಾರೆ. ಕಡಿಮೆಯೇ ಬಡಿಸ ಬೇಕಾದ ಉಪ್ಪಿನ ಕಾಯಿ, ತುಪ್ಪ, ಎಣ್ಣೆ, ಜೇನು ಮುಂತಾದ ಭಕ್ಷ್ಯಗಳ ವಿತರಣೆಯಲ್ಲಿ ಚಿಕ್ಕ ಚಮಚವೇ ಪ್ರಧಾನ. ಸಾರು, ಸಾಂಬಾರು, ಕೊದಿಲು, ಹುಳಿ, ಪಾಯಸ, ಅನ್ನ ಮೊದಲಾದ ಖಾದ್ಯಗಳನ್ನು ಚಿಕ್ಕ ಚಮಚದಲ್ಲಿ ಬಡಿಸಿದರೆ ಉಣ್ಣಲು ಕುಳಿತವರು ಗಹಗಹಿಸಿ ನಗಬಹುದು. ಕೆಲವರು ಇದಕ್ಕಿಂದ ಸಣ್ಣ ಚಮಚ ಸಿಗಲಿಲ್ಲವೇ ಎಂದು ಹಂಗಿಸಲೂ ಬಹುದು. ಅದಕ್ಕಾಗಿಯೇ ಬಡಿಸಲು ಚಮಚಾಕಾರದ ಸ್ವಲ್ಪ ದೊಡ್ಡ ಚಮಚ ಎಂದರೆ ಸೌಟುಗಳನ್ನು ಬಳಸುತ್ತಾರೆ. ಚಮಚಗಳಾಗಲಿ ಸೌಟುಗಳಾಗಲಿ ಬಳಕೆಗೆ ನಿಷಿದ್ಧವಲ್ಲ. ಅಗತ್ಯಕ್ಕೆ ಸರಿಯಾಗಿ ಪುಟ್ಟ ಚಮಚದಿಂದ ದೊಡ್ಡ ದೊಡ್ಡ ಗಾತ್ರದ ಸೌಟುಗಳನ್ನು ಬಳಸುವುದು ನಾಗರಿಕತೆಯ ಲಕ್ಷಣವೂ ಹೌದು.
ಆದರೆ “ಚಮಚಾ” ಗಿರಿ ಸಮಾಜದ ಹಿತಕ್ಕೆ ಅಪೇಕ್ಷಣೀಯವಲ್ಲ. ವೈಯಕ್ತಿಕವಾಗಿ ಸಣ್ಣ ಲಾಭ ತರಬಹುದಾದರೂ ಅದು ಗುಲಾಮಗಿರಿಗಿಂತ ಭಿನ್ನವಾದುದೇನೂ ಅಲ್ಲ. ಅದು ಹಂಗಿನ ಅರಮನೆಯೆಂದೂ ಹೇಳುವಂತಿಲ್ಲ. ಹಂಗಿನ ಶೌಚಾಲಯವೆಂದರೆ ಕಠೋರ ಸತ್ಯ, ಚೇಲಾಗಿರಿ ಪಾರತಂತ್ರ್ಯದ ಬದುಕು. ಚಮಚಾಗಿರಿ ಮಾಡುವವರು ಎಷ್ಟೋ ಬಾರಿ ಮುಜುಗರಕ್ಕೊಳಗಾಗುತ್ತಿರುವುದನ್ನು ಗಮನಿಸಿದ್ದೇವೆ. ಶಾಸಕರಿಗೆ, ಮಂತ್ರಿಗಳಿಗೆ ಅಥವಾ ಶ್ರೀಮಂತರಿಗೆ ಚಮಚಾಗಳಿರುವುದು ಸಹಜ. ಆದರೆ ಈ ಗಣ್ಯರು ಚಮಚಾಗಳೊಂದಿಗೆ ವ್ಯವಹರಿಸುವ ವಿಧಾನಗಳು ನಾಗರಿಕತೆಯನ್ನೇ ತಲೆತಗ್ಗಿಸುವಂತೆ ಮಾಡುತ್ತದೆ. ಪರಮ ಅಪಮಾನವೇ ಖಚಿತ. “ಸುಮ್ಮನಿರೋ, ಕೂತ್ಕೊಳ್ಳೋ ಅಲ್ಲಿ, ನಿನ್ನದೆಲ್ಲ ಗೊತ್ತು, ನೀನೂ ನಾಯಿ ಬುದ್ಧಿಯವ.....” ಹೀಗೆ ನಿಮ್ನ ಮಟ್ಟದಲ್ಲಿ ಮಾತನಾಡುವ ಗುಣಾಢ್ಯರ ಮುಂದೆ ಚಮಚಾಗಳು ಅಧೋಮುಖಿಗಳಾಗಿ ಕೈಕಟ್ಟಿ ಬಾಯಿ ಮುಚ್ಚಿ ನಿಲ್ಲಬೇಕಾಗುತ್ತದೆ. ಅತ್ಯಂತ ಅಗೌರವದ ಬದುಕು ಚಮಚಾಗಿರಿ. ಹುಂಬತನದ ಜೀವನ, ರಣಹೇಡಿತನದ ಜೀವನ ಸಹಿಸುವವರು “ಚಮಚಾ” ಗಳಾಗಲು ಸಿದ್ಧರಿರುತ್ತಾರೆ. ಸ್ವಾಭಿಮಾನಿಗಳಾಗಿ ಎದೆಯೆತ್ತಿ ಊರ್ಧ್ವಮುಖಿಗಳಾಗಿ ಕೈಬೀಸಿ ಮನೋ ಇಚ್ಛೆಯಂತೆ ಮಾತನಾಡುವ ಸ್ವಾತಂತ್ರ್ಯದ ಬದುಕನ್ನು ಬಯಸುವವರು “ಚಮಚಾ” ಗಳಾಗಲು ಪೂರ್ಣಶಃ ಹಿಂಜರಿಯುತ್ತಾರೆ. ನಾವೇನಾಗೋಣ? ಚಮಚವಿರಲಿ; ಚಮಚಾಗಿರಿ ಅಳಿಯಲಿ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ