ಟೀಕೆಗಳನ್ನು ಸ್ವಾಗತಿಸಿ…

ಟೀಕೆಗಳನ್ನು ಸ್ವಾಗತಿಸಿ…

ಟೀಕಿಸುವವರು ಒಂದು ರೀತಿಯಲ್ಲಿ ನಮ್ಮ ಮಾರ್ಗದರ್ಶಕರು ಇದ್ದಹಾಗೆ. ನಾವು ಮಾಡಿದ ತಪ್ಪು ಒಪ್ಪುಗಳನ್ನು ಟೀಕಿಸದೇ ಹೋದರೆ ನಮ್ಮ ತಪ್ಪುಗಳ ಅರಿವಾಗುವುದಾದರೂ ಹೇಗೆ? ಅದಕ್ಕಾಗಿ ಎಂತಹದ್ದೇ ಟೀಕೆ ಇರಲಿ, ಅದರಲ್ಲಿರುವ ತಿರುಳನ್ನು ನಾವು ಗುರುತಿಸಬೇಕು ; ಆ ನಂತರ ಅವುಗಳಿಂದ ಮಾರ್ಗದರ್ಶನ ಪಡೆಯಬೇಕು. ಟೀಕೆಗಳಿಂದ ಹೊರತಾದವರು ಯಾರೂ ಇಲ್ಲ. ಭಗವಾನ್ ಬುದ್ಧನ ಜೀವನದ ಒಂದು ಪುಟ್ಟ ಕಥೆ ಇಲ್ಲಿದೆ. ಟೀಕೆಯ ಬಗ್ಗೆ ಬುದ್ಧನ ನಿಲುವು ಏನಾಗಿತ್ತು ಎಂದು ಅರಿವಾಗುತ್ತದೆ.

ಒಂದು ಮರದ ಕೆಳಗೆ ಬುದ್ಧನು ಧ್ಯಾನ ಮಾಡುತ್ತಾ ಕುಳಿತ್ತಿದ್ದ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬನು ಬುದ್ಧನ ವರ್ತನೆಗಳನ್ನು, ಬೋಧನಾ ವಿಧಾನಗಳನ್ನು ಟೀಕಿಸತೊಡಗಿದನಂತೆ. ಆತನ ಟೀಕೆಗಳು ಎಡೆಬಿಡದೆ ಕಲ್ಲು ತೂರಾಟದಂತೆ, ಅವಿರತವಾಗಿ ಸುರುದ ಮಳೆಯಂತೆ ಇತ್ತು. ಆದರೆ ಬುದ್ಧ ಮೌನವಾಗಿ ಧ್ಯಾನದಲ್ಲಿ ಮುಳುಗಿದ್ದನು. ಕೆಲವು ನಿಮಿಷಗಳ ನಂತರ, ಆ ವ್ಯಕ್ತಿಯು ಬುದ್ಧನನ್ನು ಮೈಮುಟ್ಟಿ ಕರೆದು, ‘ನಾನು ಇಷ್ಟೊಂದು ಸಲಹೆ, ಮಾರ್ಗದರ್ಶನ, ನಿನ್ನಲ್ಲಿನ ತಪ್ಪು ಮತ್ತು ಓರೆಕೋರೆಗಳನ್ನು ದೊಡ್ಡ ದನಿಯಲ್ಲಿ ಹೇಳಿದ್ದೇನೆ. ನೀನು ಮಾತ್ರ ಮೌನವಾಗಿ ನಿನ್ನಷ್ಟಕ್ಕೇ ಕುಳಿತಿರುವೆಯಲ್ಲಾ? ನಿನಗೆ ನನ್ನ ಮಾತುಗಳು ಸ್ವಲ್ಪವೂ ನಾಟಲಿಲ್ಲವೇ?’ ಎಂದು ಕೇಳಿದ.

ಆಗ ಬುದ್ಧನು ‘ಅಯ್ಯಾ, ನೀನು ಒಂದು ಚೆಂಡನ್ನು ವೇಗವಾಗಿ ಗೋಡೆಯತ್ತ ಎಸೆದರೆ ಏನಾಗುತ್ತದೆ?’ 

‘ಅದು ಹಿಂದಕ್ಕೆ ಪುಟಿದು ನನ್ನ ಬಳಿಗೇ ಬರುತ್ತದೆ. ನಾನು ಎಸೆದ ವೇಗದಲ್ಲೇ ವಾಪಾಸು ಬರುತ್ತದೆ' ಎಂದ ಆ ವ್ಯಕ್ತಿ. 

ಬುದ್ಧನು ನಸುನಗುತ್ತಾ ‘ನೀನು ಹೇಳಿದ್ದು ನಿಜ ; ನಿನ್ನಲ್ಲೂ ಜ್ಞಾನವಿದೆ. ಆದರೆ ನೀನು ನನ್ನನ್ನು ಟೀಕಿಸಿದ ರೀತಿಯನ್ನು ಗಮನಿಸಿದೆ ; ಅವುಗಳಿಗೆ ಕಾರಣವಿರಲಿಲ್ಲ ; ಆ ಟೀಕೆಗಳೆಲ್ಲವೂ, ವೇಗವಾಗಿ ನನ್ನತ್ತ ಬರುತ್ತಿರುವ ಚೆಂಡಿನಂತೆ ಕಂಡಿತು. ಆದ್ದರಿಂದ, ನಾನು ನನ್ನ ಮನಸ್ಸನ್ನು ಕಲ್ಲು ಗೋಡೆಯನ್ನಾಗಿಸಿಕೊಂಡೆ. ನಿನ್ನ ಟೀಕೆಗಳು ನಿನಗೇ ವಾಪಾಸಾಗಲಿ ಎಂಬುದು ನನ್ನ ಅಭಿಮತ.’ ಬುದ್ಧನ ಮಾತುಗಳನ್ನು ಕೇಳಿ, ವಿನಾಕಾರಣ ಟೀಕೆ ಮಾಡಿದ ಆ ವ್ಯಕ್ತಿಯು ನಾಚಿ ತಲೆಬಾಗಿದ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ