ನಿನ್ನ ಬೆರಳು ತಾಕಿ

ನಿನ್ನ ಬೆರಳು ತಾಕಿ

ಪುಸ್ತಕದ ಲೇಖಕ/ಕವಿಯ ಹೆಸರು
ಸದಾಶಿವ ಸೊರಟೂರು
ಪ್ರಕಾಶಕರು
ಸನ್ ಸ್ಟಾರ್ ಪಬ್ಲಿಷರ್ಸ್, ಕಬ್ಬನ್ ಪೇಟೆ, ಬೆಂಗಳೂರು - ೫೬೦೦೦೨
ಪುಸ್ತಕದ ಬೆಲೆ
ರೂ. ೧೫೦.೦೦ ಮುದ್ರಣ: ೨೦೨೩

ಸದಾಶಿವ ಸೊರಟೂರು ಅವರ ನೂತನ ಕವನ ಸಂಕಲನ “ನಿನ್ನ ಬೆರಳು ತಾಕಿ" ಬಿಡುಗಡೆಯಾಗಿದೆ. ಭರವಸೆಯ ಕವಿಯಾಗಿರುವ ಸದಾಶಿವ ಸೊರಟೂರು ಅವರ ಈ ೧೧೮ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಲಕ್ಸ್ಮಣ ವಿ ಎ. ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ...‘“ನಿನ್ನ ಬೆರಳು ತಾಕಿ' ಸದಾಶಿವ ಸೊರಟೂರರ ಪ್ರೇಮ ಕವನ ಸಂಕಲನ. ಸೃಷ್ಟಿಯ ಆದಿಯಿಂದಾಗಿ ಇಲ್ಲಿಯ ತನಕ ಭಾಷೆಯ ಹಂಗಿಲ್ಲದೆ ಸಂವಹನ ಸಾಧ್ಯವಾಗಿದ್ದು ಈ ಪ್ರೇಮಕ್ಕೆ ಮಾತ್ರ. ಪ್ರೇಮ ಸರಳವೆಂದುಕೊಂಡಷ್ಟೂ ಜಟಿಲ. ಕ್ಲಿಷ್ಟಕರ ವೆಂದುಕೊಂಡಷ್ಟೂ ಸರಳ. ಇಲ್ಲಿ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಹೊರಡುವುದೆಂದರೆ ಹುಚ್ಚು ಕಡಲ ಹಕ್ಕಿ ಕಡಲಿನ ಆಗಾಧತೆಯನ್ನು ಅಳೆಯಲು ಹೊರಟಂತೆ. ಕವಿತೆ ಹುಟ್ಟುವ ಮೊದಲೇ ಪ್ರೀತಿ ಇತ್ತೋ ಅಥವ ಪ್ರೀತಿ ಹುಟ್ಟವ ಮೊದಲೇ ಕವಿತೆ ಇತ್ತೋ ಎನ್ನುವ ಜಿಜ್ಞಾಸೆ ಮೊಟ್ಟೆ ಮೊದಲೊ ಕೋಳಿ ಮೊದಲೋ ಎನ್ನುವ ಬಗೆ ಹರಿಯಲಾರದ ಪ್ರಶ್ನೆಯಂತಹದ್ದು.

ಸದಾಶಿವರ ಇಲ್ಲಿಯ ಕವಿತೆಗಳು ಅಂತರಂಗ ಹಾಗು ಬಹಿರಂಗದ ಮಾತುಗಳೆಲ್ಲವೂ ಅನುಭವದ ಮೂಸೆಯಲ್ಲಿ ಹಾದು ಬಂದದ್ದಾಗಿವೆ.

'ಚುಕ್ಕಿಗಳನ್ನು ಕೂಡಿಸಿದಷ್ಟು
ಸುಲಭವಲ್ಲ
ಎದೆಗಳನ್ನೂ ಕೂಡಿಸುವುದು'

ಎಂಬ ಸಾಲಿನಲ್ಲಿ ಪ್ರೇಮ ದಕ್ಕಿಸಿಕೊಳ್ಳಬಹುದಾದ ಎತ್ತರ ಮತ್ತು ಅಗಾಧತೆಯನ್ನು ಹೇಳುತ್ತವೆ.
ಅಡುಗೆ ಮನೆಯ ಧ್ಯಾನದಲ್ಲಿ ರುವ ಕವಿತೆಯ ಸಾಲುಗಳು

'ಮಳೆಯಲ್ಲಿ ಅಳುವುದು
ಈರುಳ್ಳಿ ಕತ್ತರಿಸುವಾಗ ಅಳುವುದು
ಎರಡೂ ಒಂದೇ ಎಂದು ನೀನು
ಹೇಳದೆ ತಿಳಿಸಿದೆ.'

ಎಂದು ಹೇಳುವ ಸಾಲುಗಳಲ್ಲಿ ಅಡುಗೆ ಮನೆಯೊಂದು ಕೇವಲ ಹಸಿವನ್ನು ಇಂಗಿಸುವ ತಾಣವಲ್ಲ ಬದಲಿಗೆ ಪ್ರೇಮದ ಎಲ್ಲ ಸೂತ್ರಗಳನ್ನೂ ಸಮೀಕರಿಸಿ ಇಟ್ಟುಕೊಂಡಿರಬಹುದಾದ ಪ್ರೇಮಿಗಳ ಪುಟ್ಟ ಜಗತ್ತು ಎಂದು ಹೇಳುತ್ತದೆ.ಎಡ ಬಲದ ಹುಸಿ ಹಣೆ ಪಟ್ಟಿ ಸೋಗಿನ ಸಿದ್ಧಾಂತಗಳಿಂದ ದೂರವೇ ಉಳಿದ ಈ ಸಾಲುಗಳು ಅಪ್ಪಟ ಕವಿತ್ವ ವನ್ನು ಉಸಿರಾಡುತ್ತವೆ.

'ಚಂದಿರನ ಅರಸಿ ಹೊರಟ ನಿನ್ನ
ಕಾಲಿಗೆ ಬೆಳದಿಂಗಳು ಚುಚ್ಚಿ
ವೃಣವಾದಾಗ ಮದ್ದಿಗೆ ನಾನು ಹಚ್ಚಿಟ್ಟ ದೀಪ ಇದೆ
ನೀ ಮರಳಿ ಬಂದು ಬಿಡು' - ಎಂಬ ಸಾಲಿನಲ್ಲಿ ಪ್ರೇಮದ ಉತ್ಕಟತೆ ಕಾಣುತ್ತದೆ.

'ನಿನ್ನ ಮುಂಗುರುಳಾಟಕ್ಕೆ
ನನ್ನ ಸಜ್ಜನ ಕಣ್ಣುಗಳು ಕೂಡ
ಪೋಲಿಯಾದವು'

'ನೀನು ಕಾಗುಣಿತ ಕಲಿಸಲು
ನನ್ನ ಕೈ ಹಿಡಿಯಲಿಲ್ಲ ಆ ಕೆಲಸವನ್ನು
ತುಟಿಗಳಿಗೊಪ್ಪಿಸಿದೆ'

ಎಂಬ ಸಾಲುಗಳಲ್ಲಿ ಪ್ರೀತಿಗೆ ಭಾಷೆಯ ಹಂಗಿಲ್ಲದೆ ವ್ಯಾಕರಣದ ಗೊಡವೆಯಿಲ್ಲದೆ ತಮ್ಮಷ್ಟಕ್ಕೇ ತಾವೇ ದೇಹ ಭಾಷೆಯೊಂದಿಗೆ ಪಿಸುಗುಟ್ಟುತ್ತ ಹೋಗುತ್ತವೆ.

"ಕಾಯುತ್ತಿರಬೇಕು. ಅನುಭವ ಮತ್ತು ಆಸಕ್ತಿಗಳನ್ನ ಜೀವನದ ಉದ್ದಕ್ಕೂ ಕಲೆ ಹಾಕಬೇಕು, ಸಾಧ್ಯವಿದ್ದರೆ ಸುದೀರ್ಘವಾಗಿ, ಹಾಗು ಆಮೇಲೆ, ಕೊಟ್ಟ ಕೊನೆಗೆ ಒಂದು ಒಳ್ಳೆಯ ಹತ್ತು ಸಾಲುಗಳು ಬರೆಯೋದು ಸಾಧ್ಯ. ಯಾಕೆಂದರೆ ಜನರು ಸಾಮಾನ್ಯವಾಗಿ ಅಂದುಕೊಳ್ಳುವ ಹಾಗೆ, ಕವಿತೆಗಳೆಂದರೆ ಕಲ್ಪನೆ ಮಾತ್ರವೇ ಅಲ್ಲ. ಕಲ್ಪನೆಗಳಾದರೆ ಬಹಳ ಬೇಗನೆ ಬಂದು ಬಿಡುತ್ತವೆ; ಕವಿತೆಗಳೆಂದರೆ ಅನುಭವಗಳು. ಒಂದೇ ಒಂದು ಕವಿತೆ ಬರೆಯಬೇಕಾದರೆ ಹಲವು ಪೇಟೆಗಳನ್ನು ನೋಡಿರಬೇಕು. ಮನುಷ್ಯರನ್ನೂ ವಸ್ತುಗಳನ್ನು ಕಂಡಿರಬೇಕು; ಪ್ರಾಣಿಗಳನ್ನು ,ಹಕ್ಕಿಗಳ ಹಾರಾಟವನ್ನೂ ಹಾಗು ಮುಂಜಾನೆ ದಳ ಬಿರಿಯುತ್ತಿರುವ ಹೂವುಗಳು ಮಾಡುವ ಸಂಜ್ಞೆಗಳನ್ನೂ ಗಮನಿಸಿರಬೇಕು."ಎಂದು ರಿಲ್ಕ ಹೇಳುತ್ತಾನೆ.

ಇಡೀ ಸಂಕಲನದ ಉದ್ದಕ್ಕೂ ಒಂದು ಮಾಗಿದ ಅನುಭವ,ಭಾಷೆಯ ಹದವಾದ ಬಳಕೆ,ಅಭಿವ್ಯಕ್ತಿಯ ಲ್ಲಿನ ಅಪ್ಪಟ ಪ್ರಾಮಾಣಿಕತೆ ನದಿಯ ಸಹಜ ಹರಿವಿನ ಹಾಗೆ ಕವಿತೆಗಳು ಬಾಗಿ ತೂಗಿಕೊಂಡು ಸ್ವಚ್ಛಂದ ವಾಗಿ ಒಂದು ಓದಿನ ಸುಖ ನೀಡುತ್ತವೆ.

ಇಲ್ಲಿನ ಕವಿತೆಗಳು ಕೇವಲ ಪ್ರೇಮದ ವಿರಹದ ತಳಮಳದ ಹಳ ಹಳಿಕೆಯಾಗದೆ - ಬದುಕಿನ ಮೌಲ್ಯಗಳನ್ನೂ ಮತ್ತದರ ಮಹತ್ತರವನ್ನು ಹುಡುಕುವ ದಾರಿಯಾಗಿ ಬಿಡುಗಡೆಯ ಮಾರ್ಗ ವಾಗಿ ಕಾಣುತ್ತದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.