ಪಾಠದ ಜೊತೆ ಒಂದಿಷ್ಟು ಆಟದ ಮಜಾ...
ಆಹಾ...! ಆಟವೆಂದರೆ ಯಾವ ಮಕ್ಕಳಿಗೆ ಇಷ್ಟವಿಲ್ಲ ಹೇಳಿ....? ಈ ಶೈಕ್ಷಣಿಕ ವರ್ಷದ ಕಲಿಕೆ ಮಾರ್ಚ್ ಅಂತ್ಯಕ್ಕೆ ಮುಗಿದು ಮಕ್ಕಳಿಗೆ ಏಪ್ರಿಲ್ ತಿಂಗಳಲ್ಲಿ ಸ್ವಲ್ಪ ಆರಾಮದಾಯಕವಾಗಿ ಖುಷಿ ಖುಷಿಯಾಗಿ ಆಟವಾಡಲು ಬಿಟ್ಟರೆ ಹೇಗೆ...? ಅವರ ಖುಷಿ ಆಕಾಶಕ್ಕೆ ಮೂರೇ ಗೇಣು. ಅವರ ಸಂತಸಕ್ಕೆ ಪಾರವೇ ಇಲ್ಲ. "ಕೋಣೆಯ ಕೂಸು ಕೊಳೆಯಿತು, ಓಣಿಯ ಕೂಸು ಬೆಳೆಯಿತು". "Healthy mind in a healthy body". ಎನ್ನುವಂತೆ ಶಿಕ್ಷಣ ನೀಡುವ ಸಂದರ್ಭದಲ್ಲಿ ನಾವುಗಳು ಆಧುನಿಕ ಶಿಕ್ಷಣ ಪದ್ಧತಿಗೆ ದಾಸರಾಗದೆ ನಮ್ಮ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ಮಕ್ಕಳಿಗೆ ಕೇವಲ ವಿಷಯಗಳೆಂಬ ರೆಡಿಮೇಡ್ ಆಹಾರ ಕೊಟ್ಟು, ಬಿಡುವಿಲ್ಲದೆ ಓದಿಸಿ ಪರೀಕ್ಷೆ ಬರೆಸಿ ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ತಯಾರು ಮಾಡದೆ ಯಾವುದೇ ಸಂದರ್ಭದಲ್ಲಿ ಒಳ್ಳೆಯ ವಿಷಯಗಳನ್ನು ನಾನು ಸ್ವೀಕರಿಸಬಲ್ಲೆ, ನಾನಿದನ್ನು ಮಾಡಬಲ್ಲೆ ಎನ್ನುವ ಆತ್ಮವಿಶ್ವಾಸದಿಂದ ಬೆಳೆಸುವುದು.
ಇದಕ್ಕೆ ಪೂರಕವಾಗಿ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಆಟ, ಹಾಡು, ಕುಣಿತ ಇತ್ಯಾದಿ ಅನೌಪಚಾರಿಕ ಕಲಿಕೆಗೂ ಹೆಚ್ಚು ಪ್ರೋತ್ಸಾಹ ನೀಡಬೇಕು. ನಿಜ ಹೇಳಬೇಕೆಂದರೆ ನಾವೆಲ್ಲರೂ ಒಂದು ಸಾರಿ ನಮ್ಮಲ್ಲಿಯೇ ಪ್ರಶ್ನೆ ಮಾಡಿಕೊಂಡರೆ ನಮ್ಮ ಬಾಲ್ಯದಲ್ಲಿ ನಾವು ಕಲಿತ ಎಷ್ಟೋ ವಿಷಯಗಳು ನಮಗೆ ನೆನಪಿಗೆ ಬರುವುದಿಲ್ಲ. ಆದರೆ ! ನಾವು ಚಿಕ್ಕವಯಸ್ಸಿನಲ್ಲಿ ಆಟವಾಡಿದ, ಕುಣಿದ, ನಲಿದ ಚೇಷ್ಟೆಗಳನ್ನು ಬೇಗ ನೆನಪಿಸಿಕೊಳ್ಳುತ್ತೇವೆ ಮತ್ತು ಹೇಳುತ್ತೇವೆ. ಏಕೆಂದರೆ ಅವು ಪ್ರಾಯೋಗಿಕವಾಗಿ ಕಲಿತಿರುವುದರಿಂದ ಮಾತ್ರ ನೆನಪಿನಲ್ಲಿ ಉಳಿದಿರುತ್ತವೆ. ಅದೇ ರೀತಿ ಕಲಿಕೆಯು ದೃಢವಾಗಬೇಕಾದರೆ ಅದು ಸ್ವತಹ ಅರಿವಿಗೆ ಬರುವ ಹಾಗೆ ಪ್ರಾಯೋಗಿಕವಾಗಿ ತೊಡಗಿಸಿ ಕೊಂಡು ಕಲಿಸಿದಾಗ ಮಾತ್ರ ನೆನಪಿನಲ್ಲಿ ಇರುತ್ತದೆ. ಅದಕ್ಕೋಸ್ಕರವೇ ಮಕ್ಕಳಿಗೆ ಆಟಗಳು ಸ್ವತಂತ್ರ ಮತ್ತು ಸಂತೋಷವನ್ನುಂಟು ಮಾಡುವುದರಿಂದ ಆಟದ ಮೂಲಕ ಪಾಠವನ್ನು ಕಲಿಸುವುದು ಸೂಕ್ತ.
ಆಟವೆನ್ನುವುದು ಮಕ್ಕಳ ಹೊರಭಾಗದ ಭಾವನೆಯಾಗಿರದೆ ಅಂತರಾಳದಲ್ಲಿ ಬರುವ ಭಾವನೆಯಾಗಿರುತ್ತದೆ. ಆಟಗಳು ಮಕ್ಕಳಲ್ಲಿ ತಕ್ಷಣದಲ್ಲಿ ಸಂತೋಷವನ್ನು ನೀಡುವ ಚಟುವಟಿಕೆಯಾಗಿರುತ್ತದೆ. ನನ್ನ ಶಾಲಾ ಮಕ್ಕಳು ಮಳೆಗಾಲದ ದಿನದಲ್ಲಿ ಹೊರಾಂಗಣ ಆಟವನ್ನು ಆಡಲು ಸಾಧ್ಯವಾಗದೆ ಒಳಾಂಗಣ ಆಟಗಳಾದ ಅಳಗುಣಿ ಮನೆ, ಚೌಕಾಬಾರ, ಕೇರಂ, ಇತ್ಯಾದಿ ಆಟವಾಡುತ್ತಿದ್ದರೆ ನೋಡಲು ಕಣ್ಣು ಸಾಲದು.
ನಲಿ ಕಲಿಯ ನಿಷ್ಕಲ್ಮಶ ಮನಸ್ಸಿನ ಪುಟಾಣಿ ಮಕ್ಕಳ ಮಾತು, ಹೊಂದಾಣಿಕೆ, ಸಮಸ್ಯಾತ್ಮಕ ಸನ್ನಿವೇಶಗಳಲ್ಲಿ ಪರಿಹಾರ ಕಂಡುಕೊಳ್ಳುತ್ತಿದ್ದ ಜಾಣತನ, ಬುದ್ಧಿಶಕ್ತಿಯ ಬೆಳವಣಿಗೆ, ನಾಯಕತ್ವದ ಗುಣ, ಅವರ ಆಸಕ್ತಿ ಎಲ್ಲವನ್ನು ಗಮನಿಸಿದ ನನಗೆ ಬಹಳ ಆನಂದವಾಯಿತು. ಶಿಕ್ಷಣದ ಜೊತೆಗೆ ಆಟಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆಟಗಳು ಮಕ್ಕಳ ಜೀವನ ಕೌಶಲ್ಯ ವೃದ್ಧಿಸುವ ನಿಟ್ಟಿನಲ್ಲಿ ಆಟಗಳು ಮೊದಲ ಮೆಟ್ಟಿಲುಗಳಾಗಿವೆ ಎನ್ನುವುದನ್ನು ಅರಿಯಬೇಕು.
-ಸುಜಾತ ಮಂಜುನಾಥ್, ನೆಲಮಂಗಲ