ಪಿಳ್ಳನ ಸಪೋಟ ಪ್ರಸಂಗ...

ಪಿಳ್ಳನ ಸಪೋಟ ಪ್ರಸಂಗ...

ಬರಹ

ಪಿಳ್ಳನ ಸಪೋಟ ಪ್ರಸಂಗ...
-----------------------

ಒಂದು ದಿನ ನಮ್ಮ ಯಡಗೊಂಡನಹಳ್ಳಿ ಪಿಳ್ಳ ರಸ್ತೇಲಿ ನಡ್ಕೋಂಡು ಮನೆಕಡೆಗೆ ಹೊರಟಿದ್ದ. ಅವನು ರಸ್ತೇಲಿ ನಡೀಬೇಕಾದ್ರೆ ಅವನ್ ಕಣ್ಣ್ ಮಾತ್ರ ನೆಲದ ಮೇಲೆ ಇರಲ್ಲ. ರಸ್ತೆ ಅಕ್ಕ ಪಕ್ಕ ಕೆಕ್ಕರಿಸ್ತಾ ಇರುತ್ತೆ. ಹಿಂಗೇ ಕೆಕ್ಕರಿಸ್ತಾ ಬರಬೇಕಾದ್ರೆ ಅವನ ಕಣ್ಣು ಒಬ್ಬ ಹಣ್ಣು ಮಾರೋವ್ನ ಮೇಲೆ ಬಿತ್ತು ನೋಡಿ. ಹಣ್ಣ್ ಮಾರೋವ್ನ ಹತ್ತಿರ ಹೋಗಿ ಯಾವ ಹಣ್ಣು ತಗೋಳೋದು ಅಂತ ಯೋಚನೆ ಮಾಡ್ತ ಇದ್ದಂಗೇ ಅವನ ಕಣ್ಣಿಗೆ ಬಿದ್ದಿದ್ದು ಸಪೋಟ ಹಣ್ಣು. ಘಮ ಘಮ ಅಂತ ವಾಸನೆ ಇಲ್ದಿದ್ರೂ ಪಿಳ್ಳನ ಬಾಯಲ್ಲಿ ಜೊಲ್ಲು ಸುರಿಯಾಕೆ ಶುರುವಾಯ್ತು. ಎರಡು ರುಪಾಯಿ ಕೊಟ್ಟು ಒಂದೇ ಒಂದು ಹಣ್ಣ್ ತಗೊಂಡ ಆಸಾಮಿ ಸ್ವಲ್ಪ ಕಂಜೂಸೇ ಅನ್ನಿ. ಅದನ್ನ ಮನೇಗೆ ತಗೊಂಡು ಹೋದ್ರೆ ಅಂಕು ಸುಬ್ಬಿ ಹೆಂಡ್ತಿ ಕಾಟ ಅಂತ ದಾರೀಲೆ ತಿಂತಾ ಮನೆಕಡೆಗೆ ಹೊರಟ. ಇವನ ಗ್ರಾಚಾರ ನೆಟ್ಟಗಿಲ್ಲ ನೋಡಿ ಇವನು ಇನ್ನೇನು ತಿಂದು ಮುಗಿಸ್ಬೇಕು ಅನ್ನೊಷ್ಟರಲ್ಲಿ ಮನೆ ಬಂದೇಬಿಡ್ತು. ಸುಬ್ಬಿ ಬಾಗಲಲ್ಲೆ ನಿಂತಿದ್ದು ಇವನ ಕಣ್ಣಿಗೆ ಬಿತ್ತು. ಸಿಕ್ಕನೊ, ಕೆಟ್ಟನೋ ಅಂತ ಕೈಲಿದ್ದ ಹಣ್ಣನ್ನ ಬೀಜಾ ತೆಗೀದೇನೆ ಕೌರಿ ತಿಂದುಬಿಟ್ಟ. ಸಪೋಟ ಬೀಜ ಹೊಟ್ಟೆ ಒಳಕ್ಕೋಗಿದ್ದು ನಿದಾನಕ್ಕೆ ಗೆಪ್ತಿ ಬಂದ್ರೂ..ಹೆಂಡ್ತಿ ಎದುರಿಗಿದ್ದ ಪರಿಣಾಮ ಮರೆತುಬಿಟ್ಟ.

ಇನ್ನ ರಾತ್ರಿಗೆ ಸುಬ್ಬಿ ಮಾಡಿದ್ದ ಗೊಡ್ಡು ಕಾರದಾಗೆ ಇಟ್ಟ್ ತಿಂದು ಮಲ್ಕೊಂಡ. ಚೆನ್ನಾಗಿ ತಿಂದಿಂದ್ದ ಅಂಕು ಸುಬ್ಬಿ ಬೇಗಾನೆ ಗೊರಕೆ ಹೊಡೆಯಕ್ಕೆ ಶುರು ಮಾಡಿದ್ಲು. ಸುಬ್ಬೀ ಗೊರಕೆ ಸದ್ದು ಕೇಳ್ತಾ ಇದ್ದಂಗೆ ಪಿಳ್ಳನಿಗೆ ಬೀಜ ನುಂಗಿದ್ದ ಗೆಪ್ತಿ ಬಂದುಬಿಡ್ತು. ಆ ಬೀಜ ಕಕ್ಕಾಕೆ ಪಿಳ್ಳ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಪಾಪ. ಬೋರಲು ಮಲಗಿದ.., ಕ್ಯಾಕರಿಸಿ ಕ್ಯಾಕರಿಸಿ ಹುಗ್ದಾ.., ತಲೆ ಕೆಳಕ್ಕಾಕಿ ಕಾಲು ಮೆಲೆ ಎತ್ತಿ ಏನು ಮಾಡಿದ್ರೂ ಬೀಜ ಉದರೇ ಇಲ್ಲ. ಥೂ ಕಳ್ಳನನ್ ಮಗನ್ ಬೀಜ ಅಂತ ದಿಗಿಲ್ ದಿಗಿಲಾಗೆ ಮಲ್ಕೊಂಡ. ಆ ಬೀಜ ಒಳಗೋಗಿದ್ದು ಉಳಾತರ ಬುಳು ಬುಳು ಅಂತ ಓಡಾಡೊ ತರ ಅನ್ನಿಸ್ತು ಪಿಳ್ಳನಿಗೆ. ಈ ದರಿದ್ರ ಬೀಜ ಮೊಳಕೆ ಹೊಡೆದ್ರೆ ಏನಪ್ಪ ಗತಿ ಅಂತ ಅನ್ಕೊಂಡು ಕಷ್ಟಪಟ್ಟು ಕಣ್ ಮುಚ್ಚಿದ...

ಅಯ್ಯೋ ಅಯ್ಯಯ್ಯೋ ಏಳ್ರೀ ಮ್ಯಾಲಕ್ಕೆ..ಏಳ್ರೀ ಮ್ಯಾಲಕ್ಕೆ.. ನಿಮ್ ಬಾಯಾಗ ಎಂತದ್ದೊ ಮೊಳಕೆ ಕಾಣಿಸ್ತಾ ಅಯ್ತೆ...ಅಂತ ಸುಬ್ಬಿ ಸುಪ್ರಭಾತ ಶುರುವಾಯ್ತು. ಸುಪ್ರಭಾತ ಕೇಳ್ತಿದ್ದಂಗೇ ಪಿಳ್ಳ ಎದ್ದು ನೋಡಿದ್ರೆ ಮೊಳಕೇನೆ!, ಬಾಯಲ್ಲಿ ಬಂದುಬಿಟ್ಟಯ್ತೆ!. ನಮ್ ಪಿಳ್ಳನಿಗೆ ಒಂದು ಕಡೆ ಮೊಳಕೆ ಭಯ..ಇನ್ನೊಂದು ಕಡೆ ಸುಬ್ಬೀಗೆ ತಿಳೀದಂಗೆ ಸಪೋಟ ತಿಂದಿದ್ದ್ ಗೊತ್ತಾದ್ರೆ ಅಂತ ಭಯ. ಸುಬ್ಬಿ ಏನೇನೊ ಮಾಡಿ ಕೀಳಾಕ್ ಪ್ರಯತ್ನ ಪಟ್ಟು ಮೊಳಕೇನ ಮುರಿದಾಕಿದ್ಲು. ಬಾಯಲ್ಲಿ ಮುರಿಯೊಷ್ಟೊತ್ತಿಗೆ ಕಿವೀಲಿ ಇದ್ದ ಮೊಳಕೆ ಕಾಣಿಸ್ತು. ಹೀಗೆ ಮುಖದಲ್ಲಿದ್ದ ಸಪ್ತ ರಂಧ್ರಗಳಲ್ಲಿ ಮೊಳಕೆ ಈಚೆ ಬಂದಿತ್ತು. ಬೇರು ಮಾತ್ರ ಕೆಳಗಡೆ ಬಿಟ್ಟಿತ್ತು ಸೊಂಪಾಗಿ ಗೊಬ್ಬರ ಸಿಕ್ಕಿದ್ದ್ರಿಂದ !.

ಹೊರಗಡೆ ಜನಕ್ಕೆ ಹೇಳಕ್ಕ್ ನಾಚಿಕೆ ಪಾಪ. ಅದಕ್ಕೆ ಪಿಳ್ಳ ಈಚೇನೆ ಬಂದಿಲ್ಲ, ಅದಕ್ಕೆ ಸುಬ್ಬೀದು ಸಹಾಯ ಇತ್ತು ಅನ್ನಿ. ಹಾಗೇ ಒಂದು ವಾರ ಕಳೆಯೊಷ್ಟೊತ್ತಿಗೆ ಅದ್ಯಾವ ಗೊಬ್ಬರದ ಮಹಿಮೇನೊ ಸಪೊಟ ಗಿಡ ಮಾತ್ರ ಮರದಂತೆ ಬೆಳೆದುಬಿಡ್ತು. ಇನ್ನ ಸುಮ್ನೆ ಇದ್ರೆ ಪ್ರಾಣಕ್ಕೆ ಅಪಾಯ ಅಂತ ಆಸ್ಪತ್ರೆಗೆ ಹೋದ್ರು. ಸೊಂಪಾಗೆ ಬೆಳೆದ ಸಪೋಟ ಮರ ನಡ್ಕಂಡು ಹೋಗ್ತಾ ಇದ್ರೆ ಜನಕ್ಕೆ ಆಶ್ಚರ್ಯ. ಪಿಳ್ಳ ಮರದ ಸಂದೀಲಿ ಕಾಣಿಸ್ದೆ ಇದ್ರು ನಾಚಿಕೆ ಇತ್ತು ಅವನಿಗೆ. ಸೊಂಪಾಗಿ ಬೆಳೆದ ಮರ ಅಂದ ಮೇಲೆ ಹೂವು, ಕಾಯಿ ಬೇಗಾನೆ ಶುರುವಾಗಿತ್ತು ಅನ್ನಿ. ಅದಕ್ಕೇ ಹೈಕಳೆಲ್ಲ ಪರಿಷೆ ತರಾ ಗುಂಪಾಗಿ ಇವರಿಂದೆ ಇದ್ರು. "ಈಗ ಕೈ ಮೀರಿಹೋಗಿದೆ, ಇನ್ನು ಸ್ವಲ್ಪ ಮುಂಚೆ ಬರಬೇಕಿತ್ತು, ಈಗ ಇವನ ಜೀವ ಬೇರೆ ಅಲ್ಲ, ಮರದ ಜೀವ ಬೇರೆ ಅಲ್ಲ, ಮರಾ ಕಡಿದ್ರೆ ಇವನ ಜೀವಕ್ಕೆ ಅಪಾಯ" ಅಂದುಬಿಟ್ರು ಡಾಕ್ಟರ್ ದೊಡ್ಡಣ್ಣ.

ಸುಬ್ಬೀಗೆ ಆಕಾಶಾನೆ ತಲೆಮೇಲೆ ಬಿದ್ದಂಗಾಯ್ತು. ಯಾಕಂದ್ರೆ ಮರಕ್ಕೆ ಮತ್ತೆ ಪಿಳ್ಳನಿಗೆ ಇಬ್ಬರಿಗಾಗೊಷ್ಟು ಬೇಯಿಸಾಕೋದು ಅವಳ ಕಷ್ಟ. ಅಷ್ಟರಲ್ಲೆ ನಮ್ ಪ್ಲಾನ್ ಪಾಪಣ್ಣ ಪ್ರತ್ಯಕ್ಷ ಆಗಿ ಸುಬ್ಬೀಗೆ ಸೂಪರ್ ಐಡಿಯಾ ಕೊಟ್ಟ ನೋಡಿ. ರೆಂಬೆ ಜೌರಿದರೆ ನಿನಗೆ ಸ್ವಲ್ಪ ಅನುಕೂಲ ಆಗಬಹುದು ಅಂದ ಪಾಪಣ್ಣ. ಇನ್ನೇನು ಅದನ್ನೇ ಪ್ರಯೋಗ ಮಾಡೊಣ ಅನ್ನೊಷ್ಟೊತ್ತಿಗೆ ಪರಿಸರ ಪ್ರ್‍ಎಮಿ ಮಿಟುಕಲಾಡಿ ಪ್ರಮೀಳ ಪ್ರತ್ಯಕ್ಷ ಆದ್ಲು. ಮರ ಕಡಿಯೋದು, ಪಸಲಿರೊ ಮರದ ರೆಂಬೆ ಜೌರ್‍ಓದು ಕಾನೂನು ವಿರುದ್ದ ಅಂತ ಕೋರ್ಟಲ್ಲಿ ಕೇಸ್ ಹಾಕಿ ಸ್ಟೇ ಆರ್ಡರ್ ತಂದೇ ಬಿಟ್ಲು. ಪಿಳ್ಳನಿಗೂ ಒಂತರ ರೆಂಬೆ ಜೌರದೆ ಇದ್ರೆ ಖುಷೀನೆ, ಯಾಕಂದ್ರೆ ರೆಂಬೆ ಜೌರೊವಾಗ ಇವನದ್ದು ಏನಾದ್ರು ಜೌರಿಬಿಟ್ರೆ ಅಂತ ದಿಗಿಲು!. ಪಿಳ್ಳ ಒಳಗೊಳಗೇ ಪ್ರಮೀಳನಿಗೆ ಥ್ಯಾಂಕ್ಸ್ ಹೇಳಿಕೊಂಡ.

ಈ ಮರದ ಗಂಡನ ಜೊತೆ ಏಗಿ ಏಗಿ ಸಾಕಗಿದ್ದ ಸುಬ್ಬಿ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಿ, ಏನಾದ್ರು ಮಾಡಿ ಕೊನೆಪಕ್ಷ ರೆಂಬೆ ಜೌರಕ್ಕಾದ್ರು ಅನುಕೂಲ ಮಾಡಿಸಿ ಅಂತ ಅತ್ಕಂಡ್ಲು. ಹಾಗು ಹೀಗು ಕೋರ್ಟ್ ಎಲ್ಲ ವಾದ ವಿವಾದ ಕೇಳಿ, ಸುಬ್ಬಿ ಮೇಲೆ ಕರುಣೆ ತೋರಿಸಿತು. "ಪಸಲೆಲ್ಲ ಕಿತ್ಕೊಂಡು ರೆಂಬೆ ಜೌರಬಹುದು, ಮತ್ತೆ ಯುಗಾದಿಗೆ ಹೇಗಿದ್ರೂ ಮರಚಿಗುರುತ್ತೆ" ಅಂತ ತೀರ್ಪು ಕೊಟ್ಟೇಬಿಡ್ತು. ಪಸಲೆಲ್ಲ ಕಿತ್ಕೊಂಡು ಒಂಚೂರು ಕಾಸು ಮಾಡಿಕೊಂಡ ಸುಬ್ಬಿ ರೆಂಬೆ ಜೌರಕ್ಕೆ ಜನ ಸೇರಿಸೇಬಿಟ್ಲು. ಇನ್ನೇನು ಮರ ಕಡಿಯೋನು ಪಿಳ್ಳನ ಕಿವೀಗೆ ಸರಿಯಾಗಿ ಮಚ್ಚಲ್ಲಿ ಹೊಡೀಬೇಕು ಅನ್ನೊಷ್ಟರಲ್ಲಿ ಎಚ್ಚರ ಆಯ್ತು ಕನಸಲ್ಲಿ ಇದ್ದ ಪಿಳ್ಳನಿಗೆ ಎರಡಕ್ಕ್ ಹೋಗಕ್ಕೆ :-).

ಆಮೇಲೆ ಬೀಜ ವಾಪಸ್ಸು ಬಂದ ಖುಷಿ ತಡಿಲಾರದೆ ನಡೆದಿದ್ದೆಲ್ಲ ಕನಸಿನ ಸಮೇತ ಸುಬ್ಬೀಗೆ ಹೇಳ್ದ ನೋಡಿ. ಎರಡು ನಿಮಿಷ ನಗೂ ತಡೆಯಕ್ಕಾಗದ ಸುಬ್ಬಿ ನಕ್ಕೂ ನಕ್ಕೂ, ತನಗೆ ಕೊಡದೆ ಕದ್ದು ಒಬ್ಬನೆ ಸಪೋಟ ತಿಂದಿದ್ದು ಗೆಪ್ತಿ ಆಗ್ತಿದ್ದಂಗೇ ಪಿಳ್ಳನಿಗೆ ಜಾಡಿಸಿ ಒದ್ದಳು ನೋಡಿ. ಬಿದ್ದ ಒದೇಗೆ ಪಕ್ಕೆಲಬು ಮುರಿದ ಪಿಳ್ಳ ಈಗ ಬೋರಿಂಗ್ ಆಸ್ಪತ್ರೇಲಿ ಇದ್ದಾನೆ. ಹೋಗಿ ನೋಡ್ಕೊಂಡು ಬನ್ನಿ ಪಾಪ....!!

(ರವಿಕುಮಾರ ವೈ.ಎಂ)