ಬೀದಿ ನಾಯಿ ಉಪಟಳ ತಡೆಯುವ ತುರ್ತು
ಬ್ರ್ಯಾಂಡ್ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿರುವ ನಡುವೆ, ನಾಯಿ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಅದಕ್ಕಿಂತ, ಮುಖ್ಯವಾಗಿ ಮೂರು ವಲಯಗಳಲ್ಲಿ ಶ್ವಾನಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸುವ ಹಾಗೂ ಆಂಟಿ ರೇಬಿಸ್ ವ್ಯಾಕ್ಸಿನ್ ಹಾಕುವ ವ್ಯವಸ್ಥೆ ಇಲ್ಲದಿರುವುದು ರಾಜಧಾನಿಯ ಆಡಳಿತ ವೈಖರಿಯನ್ನು ಅಣಕಿಸುವಂತಿದೆ.
ಬೆಂಗಳೂರಿನಲ್ಲಿ ರಾತ್ರಿ ೧೦ ಗಂಟೆ ನಂತರ ನಾಗರಿಕರು ಬಡಾವಣೆಗಳ ಬೀದಿಗಳಲ್ಲಿ ಓಡಾಡುವುದೇ ಕಷ್ಟ. ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಜನರನ್ನು ಅಟ್ಟಾಡಿಸುವ ಬೀದಿ ನಾಯಿಗಳು ಕಚ್ಚಲು ಮುಗಿಬೀಳುತ್ತವೆ. ಇದರಿಂದ ವಾಹನ ಸವಾರರು ತಪ್ಪಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ.
ಆರ್ ಆರ್ ನಗರ, ಯಲಹಂಕ, ಮಹದೇವಪುರ ವಲಯಗಳಲ್ಲಿ ಶ್ವಾನಗಳಿಗೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸುವ ಹಾಗೂ ಆಂಟಿ ರೇಬಿಸ್ ಹಾಕುವ ಸಂಸ್ಥೆಯ ಗುತ್ತಿಗೆಯನ್ನು ಬಿಬಿಎಂಪಿ ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಕರೆದಿದೆ. ಬಿಬಿಎಂಪಿಯ ಈ ನಡೆ ಬೆಂಗಳೂರಿಗರ ತೀವ್ರ ಟೀಕೆಗೂ ಕಾರಣವಾಗಿದೆ. ನಾಗರಿಕರ ಜೀವದ ಜತೆ ಪಾಲಿಕೆ ಚೆಲ್ಲಾಟವಾಡುವುದನ್ನು ಇನ್ನಾದರೂ ಬಿಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.
ಬೀದಿ ನಾಯಿ ಕಡಿತಕ್ಕೆ ಒಳಗಾಗುವವರಿಗೆ ನಗರದ ಆಯ್ದ ಪ್ರಮುಖ ಸರಕಾರಿ ಆಸ್ಪತ್ರೆಗಳಲ್ಲಷ್ಟೇ ಸಕಾಲದಲ್ಲಿ ಚಿಕಿತ್ಸೆ ದೊರಕಲಿದೆ. ಇನ್ನುಳಿದ ಸರಕಾರಿ ಆಸ್ಪತ್ರೆಗಳಲ್ಲಿ ‘ರಿಗ್' ಲಸಿಕೆ ಸಿಗದೆ ನಾಗರಿಕರು ಪರದಾಡುವಂತಾಗಿದೆ. ಒಂದು ವೇಳೆ ನಿಗದಿತ ಸಮಯಕ್ಕೆ ಲಸಿಕೆ ಸಿಗದಿದ್ದರೆ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ. ಬಡವರು, ಅದರಲ್ಲೂ ಮಧ್ಯಮ ವರ್ಗದ ಜನರು ಸಾವಿರಾರು ರೂ. ವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಪಡೆಯುವುದು ದುಸ್ತರವೇ.
ಮೂರು ವಲಯಗಳಲ್ಲಿ ಶ್ವಾನಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಹಾಗೂ ಆಂಟಿ ರೇಬಿಸ್ ವ್ಯಾಕ್ಸಿನ್ ನೀಡುವಲ್ಲಿನ ದೂರುಗಳ ಹಿನ್ನಲೆಯಲ್ಲಿ ಅಸ್ರಾ-ಎಡಬ್ಲ್ಯೂಒ ಸಂಸ್ಥೆಯ ಗುತ್ತಿಗೆ ರದ್ದುಪಡಿಸಲಾಗಿದೆ ಎಂದು ಪಾಲಿಕೆ ಹೇಳಿದೆ. ಆದರೆ, ಹೊಸ ಸಂಸ್ಥೆಗೆ ಗುತ್ತಿಗೆ ಹೊಣೆ ನೀಡುವುದಕ್ಕೆ ಟೆಂಡರ್ ಕರೆಯುವ ಮೊದಲೇ ಪಾಲಿಕೆ ಪರ್ಯಾಯ ಕ್ರಮ ಕೈಗೊಳ್ಳಬೇಕಾಗಿತ್ತು. ಅಲ್ಲಿಯವರೆಗೆ ಈ ವಲಯಗಳಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವುದು ಹೇಗೆ? ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ಈ ಮಧ್ಯೆ, ನಾಯಿ ಕಡಿತಕ್ಕೆ ತುತ್ತಾದವರಿಗೆ ಪ್ರತಿ ಹಲ್ಲಿಗೆ ೨ ಸಾವಿರ ರೂ.ದಂತೆ ಬಿಬಿಎಂಪಿಯು ಪರಿಹಾರ ನೀಡಲಿದೆ. ಅಷ್ಟೇ ಅಲ್ಲ, ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಿಲ್ ಸಮೇತ ಮನವಿ ಸಲ್ಲಿಸಿದರೆ ಚಿಕಿತ್ಸೆಗೆ ವೆಚ್ಚ ಮಾಡಿದ ಅಷ್ಟೂ ಹಣವನ್ನು ರೋಗಿಗಳಿಗೆ ಬಿಬಿಎಂಪಿ ನೀಡಲಿದೆ. ಆದರೆ, ದಾಖಲೆ ಸಲ್ಲಿಸಿ ಪರಿಹಾರ ಪಡೆಯುವುದೇ ನಾಗರಿಕರ ಸವಾಲಾಗಿ ಪರಿಣಮಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ. ಬದಲಿಗೆ ಅವುಗಳಿಗೆ ಸಂತಾನಶಕ್ತಿ ಹರಣ ಮಾಡಿ ಅವು ಇರುವ ಸ್ಥಳದಲ್ಲೇ ವಾಪಾಸ್ ಬಿಡಬೇಕು. ಈ ನಡುವೆ, ಬೀದಿನಾಯಿಗಳಿಗೆ ಸಂತಾನ ಶಕ್ತಿಹರಣ ಮಾಡುವ ಗುತ್ತಿಗೆ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆಯೂ ಅನುಮಾನ ಮೂಡುತ್ತಿದೆ. ಪ್ರತಿ ವರ್ಷ ಪಾಲಿಕೆ ಈ ಉದ್ದೇಶಕ್ಕೆ ಕೋಟ್ಯಾಂತರ ರೂ. ವ್ಯಯಿಸಿದರೂ, ಶ್ವಾನಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಅಲ್ಲದೆ, ನಾಯಿ ಕಡಿತಕ್ಕೊಳಗಾಗುವ ನಾಗರಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪಾಲಿಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೩-೦೭-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ