ವನ್ಯಸಂಪತ್ತು, ವನ್ಯಜೀವಿ ರಕ್ಷಣೆ ಆಗಬೇಕು
ಕರ್ನಾಟಕದಲ್ಲಿ ಈಗ ಹುಲಿ ಉಗುರಿನ ಪ್ರಕರಣಗಳದ್ದೇ ಚರ್ಚೆ. ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಂತೋಷ್ ವರ್ತೂರು ಹುಲಿ ಉಗುರು ಲಾಕೆಟ್ ಧರಿಸಿದ್ದ ಕಾರಣ ಬಂಧಿತರಾಗಿದ್ದಾರೆ. ಇದರ ಬೆನ್ನಲ್ಲೇ ಅನೇಕ ಗಣ್ಯರ ಬಳಿ ಇಂತಹ ವನ್ಯಜೀವಿ ಉತ್ಪನ್ನಗಳಿವೆ ಎಂಬ ದೂರುಗಳು ಸರ್ಕಾರದ ಬಾಗಿಲು ತಟ್ಟುತ್ತಿವೆ. ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಾಣಿಬೇಟೆ ಪ್ರಕರಣದಲ್ಲಿ ಬಾಲಿವುಡ್ ನ ಹಲವು ನಟ/ನಟಿಯರು ವಿಚಾರಣೆ ಎದುರಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ವನ್ಯಜೀವಿಗಳು ಮತ್ತು ವನ್ಯಸಂಪತ್ತನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆ. ಏಕೆಂದರೆ, ಪ್ರಕೃತಿಯ ಸಮತೋಲನಕ್ಕೆ ಕೇವಲ ಮನುಷ್ಯರಿದ್ದರೆ ಸಾಕಾಗುವುದಿಲ್ಲ. ಪ್ರಾಣಿ, ಪಕ್ಷಿ, ಗಿಡಮರ, ನದಿ, ಬೆಟ್ಟಗುಡ್ಡ ಈ ಎಲ್ಲವುಗಳ ಅಸ್ತಿತ್ವ ಅಷ್ಟೇ ಮುಖ್ಯವಾಗಿದೆ. ಮನುಷ್ಯನ ಅತಿಯಾದ ಚಟುವಟಿಕೆಗಳಿಂದ, ಸ್ವಾರ್ಥದಿಂದ ಪ್ರಾಕೃತಿಕ ಸಂಪತ್ತಿಗೆ ಹಾನಿಯಾಗುತ್ತಿರುವುದಂತೂ ನಿಜ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ, ಅರಿವು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ನಿಸರ್ಗ ರಕ್ಷಣೆಯ ಕ್ರಮಗಳು ಇನ್ನಷ್ಟು ವೇಗ ಪಡೆಯಬೇಕಿದೆ.
ಸಮಾಜದಲ್ಲಿ ಪ್ರತಿಷ್ಟಿತರು, ಗಣ್ಯರು ಎನಿಸಿಕೊಂಡವರು ಈ ವಿಷಯದಲ್ಲಿ ಬದ್ಧತೆ ಪ್ರದರ್ಶಿಸುವುದನ್ನು ಬಿಟ್ಟು, ಆರೋಪಿಗಳ ಸ್ಥಾನದಲ್ಲಿ ನಿಲ್ಲುತ್ತಿರುವುದು ದುರದೃಷ್ಟಕರ ಬೆಳವಣಿಗೆ. ವನ್ಯಜೀವಿ ಸಂರಕ್ಷಣೆ ತಿದ್ದುಪಡಿ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿ ತಮ್ಮ ಬಳಿ ಇರುವ ವನ್ಯಜೀವಿ ಉತ್ಪನ್ನ, ವನ್ಯ ಸಂಪತ್ತನ್ನು ಸರ್ಕಾರಕ್ಕೆ ಹಿಂತಿರುಗಿಸಲು ಅವಕಾಶವಿದೆ. ಇದು ಗೊತ್ತಿದ್ದರೂ, ಸರ್ಕಾರಕ್ಕೆ ಮರಳಿಸದೆ ಹಲವರು ಬೇಜವಾಬ್ದಾರಿ ಧೋರಣೆ ತಳೆದಿದ್ದು ಏಕೆ? ವನ್ಯಪ್ರಾಣಿಗಳು, ಹುಲಿ ಉಗುರು, ಚರ್ಮ, ಆನೆದಂತ ಸೇರಿ ಯಾವುದೇ ಉತ್ಪನ್ನ ಅಥವಾ ವಸ್ತು ಇಟ್ಟುಕೊಳ್ಳುವುದು ಕಾನೂನು ರೀತ್ಯ ಅಪರಾಧವಾಗಿದೆ. ವನ್ಯಜೀವಿಗಳು ಮತ್ತು ಸಂಪತ್ತು ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರಕಾರ ೧೯೭೨ರ ಕಾಯ್ದೆಗೆ ೨೦೨೨ರಲ್ಲಿ ತಿದ್ದುಪಡಿ ತಂದಿದ್ದು, ೨೦೨೩ರ ಮಾರ್ಚ್ ಒಂದರಿಂದ ಜಾರಿಗೊಳಿಸಿದೆ. ವನ್ಯ ಜೀವಿ (ರಕ್ಷಣೆ) ತಿದ್ದುಪಡಿ ಕಾಯ್ದೆಯಲ್ಲಿದ್ದ ‘ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳ ರಕ್ಷಣೆ' ಪೀಠಿಕೆಯನ್ನು ‘ವನ್ಯಜೀವಿಗಳ ಸಂರಕ್ಷಣೆ, ರಕ್ಷಣೆ ಮತ್ತು ನಿರ್ವಹಣೆ' ಎಂದು ಬದಲಾವಣೆ ಮಾಡಲಾಗಿದೆ. ಅಂದರೆ, ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ತಿದ್ದುಪಡಿ ಕಾಯ್ದೆ, ಸೆಕ್ಷನ್ ೪೨ಎ (೧) ರ ಪ್ರಕಾರ ವನ್ಯಜೀವಿಗಳು, ಉತ್ಪನ್ನ ಮತ್ತಿತರ ವಸ್ತುಗಳನ್ನು ಹೊಂದಿರುವ ವ್ಯಕ್ತಿಯು ನೋಟಿಸ್ ಸಿಕ್ಕ ಏಳು ದಿನಗಳೊಳಗೆ ಮುಖ್ಯ ಅರಣ್ಯ ಸಂರಕ್ಷಣಾ ವಾರ್ಡನ್ ಸುಪರ್ದಿಗೆ ಒಪ್ಪಿಸಬೇಕು. ಇದು ಗೊತ್ತಿದ್ದರೂ, ಉದಾಸೀನ ಭಾವ ತೋರಿ, ಹಲವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ನಮ್ಮಲ್ಲಿ ಕಾಯ್ದೆಗಳಿಗೆ ಕೊರತೆಯಿಲ್ಲ. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದೆ ಮೂಲೋದ್ದೇಶ ಈಡೇರಲು ಹೇಗೆ ಸಾಧ್ಯ? ವನ್ಯ ಜೀವಿ ರಕ್ಷಣೆ ಕಾಯ್ದೆ ವಿಷಯದಲ್ಲೂ ಇದು ಅನ್ವಯಿಸುತ್ತದೆ. ಪ್ರಸಕ್ತ ಕಾಯ್ದೆ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕು ಮತ್ತು ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರಕಾರ ಮುಂದಾಗಬೇಕು. ಆಗ ಮಾತ್ರ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೬-೧೦-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ