ವಿಫಲ ಕೊಳವೆಬಾವಿ ಮುಚ್ಚುವ ಮುನ್ನ...
ರಾಯಚೂರಿನಲ್ಲಿ ಕೊಳವೆಬಾವಿಗೆ ಬಿದ್ದು ಬಾಲಕ ಅಸುನೀಗಿದ ಬಳಿಕ, ಸರಕಾರ ಎಚ್ಚೆತ್ತುಕೊಂಡು, ವಿಫಲವಾದ ಕೊಳವೆಬಾವಿಗಳನ್ನು ಮುಚ್ಚಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಆರಿಂಚಿನಷ್ಟು ವ್ಯಾಸ ಹೊಂದಿದ ಕೊಳವೆಬಾವಿಗಳು ತೆರೆದೇ ಇದಾಗ ಅಪಾಯವನ್ನು ಆಹ್ವಾನಿಸುವುದಕ್ಕೆ ಹೇತುವಾಗಬಹುದು ಎನುವುದು ನಿಸ್ಸಂಶಯ. ಆದರೆ ಇವನ್ನು ಸುಮ್ಮನೆ ಮುಚ್ಚಿ ಬಿಡುವ ಬದಲು, ಅವನ್ನು ಜಲಮರುಪೂರಣಕ್ಕೆ ಬಳಸುವುದು ಸೂಕ್ತವಲ್ಲವೇ? ಮರುಪೂರಣಕ್ಕೆ ವಿಫಲವಾದ ಕೊಳವೆಬಾವಿಗಳನ್ನು ಬಳಸುವುದು ಸುಲಭ. ಇವುಗಳ ಒಳಗೆ ಜಲ್ಲಿ,ಮರಳನ್ನು ತುಂಬಿದರೆ ಮುಗಿಯಿತು. ಈ ಮರಳು ಮತ್ತು ಜಲ್ಲಿ ಶೋಧಕಗಳಂತೆ ಕೆಲಸ ಮಾಡುವ ಜತೆಗೆ, ಕೊಳವೆಬಾವಿಯ ಅವಕಾಶವನ್ನು ಮುಚ್ಚಿ, ಯಾರೂ ಇವುಗಳ ಒಳಗೆ ಬೀಳದಂತೆ ತಡೆಯುತ್ತವೆ.
ಕೊಳವೆಬಾವಿಗಳು ವಿಫಲವಾಗುತ್ತಿವೆ ಎಂದರೆ, ಆ ಪ್ರದೇಶದಲ್ಲಿ ಅಂತರ್ಜಲ ಬತ್ತಿದೆ ಎಂದೇ ಅರ್ಥ ತಾನೇ? ಹಾಗಾಗಿ ಎಲ್ಲೆಲ್ಲಾ ಕೊಳವೆಬಾವಿಗಳು ವಿಫಲವಾಗಿವೆಯೋ ಅಲ್ಲಿ ಅವನ್ನು ಸುಮ್ಮನೆ ಮುಚ್ಚುವ ಬದಲು, ಅಂತರ್ಜಲ ಮರುಪೂರಣಕ್ಕೆ ಬಳಸುವುದು ಸೂಕ್ತ. ಮುಚ್ಚುವ ನಿರ್ಧಾರ ತೆಗೆದುಕೊಳ್ಳುವಾಗ,ಅವಕ್ಕೆ ಮರಳು ಮತ್ತು ಜಲ್ಲಿ ತುಂಬಿಸಿ ಮುಚ್ಚುವಂತೆ ಕ್ರಮಕೈಗೊಳ್ಲಲು ಸಂಬಂಧಿತರು ಮುಂದಾಗಬೇಕು. ಪರಿಸರದ ಜನರೂ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಲಿ. ಕೊಳವೆಬಾವಿ ಮರುಪೂರಣವಾದರೆ,ಆ ಪ್ರದೇಶದ ಜನರು ತಾನೇ ಲಾಭ ಪಡೆಯುವುದು.ಇನ್ನು ಇಂತಹ ಮರುಪೂರಣ ಕೇಂದ್ರಗಳ ಕಡೆ ಮಳೆ ನೀರು ಹರಿದು ಬರುವಂತೆಯೂ ಕ್ರಮಕೈಗೊಳ್ಳಬೇಕಾಗುತ್ತದೆ. ರಸ್ತೆ ಚರಂಡಿ ನೀರು, ಆ ಕಡೆ ಬರುವಂತೆ ಮಾಡಲು ಹೆಚ್ಚಿನ ಪರಿಶ್ರಮ ಬೇಡ. ದೊಡ್ದ ಹೊಂಡವನ್ನು ಇದರ ಸಮೀಪ ನಿರ್ಮಿಸಬಹುದಾದರೆ ಅದು ಹೆಚ್ಚಿನ ಪರಿಣಾಮ ಬೀರಬಲ್ಲುದು. ಆದರೆ ಕೊಳಕು ನೀರು,ಮರುಪೂರಣಕ್ಕೆ ಬಳಕೆಯಾಗದಂತೆ ಎಚ್ಚರಿಕೆ ಅಗತ್ಯ.