‘ಸಂಪದ' ನಗೆ ಬುಗ್ಗೆ - ಭಾಗ ೧೭

‘ಸಂಪದ' ನಗೆ ಬುಗ್ಗೆ - ಭಾಗ ೧೭

ಗಾಲ್ಫ್ ಮೈದಾನ

ಗಾಲ್ಫ್ ಕ್ರೀಡಾಪ್ರಿಯ ತನ್ನ ಧರ್ಮಗುರುವಿನ ಬಳಿ ಹೋಗಿ ‘ಸ್ವರ್ಗದಲ್ಲಿ ಗಾಲ್ಫ್ ಮೈದಾನ ಇದೆಯೇ?’ ಅಂತ ಕೇಳಿದ. 

ಗುರು ‘ನೋಡಿ ಹೇಳ್ತೇನೆ' ಅಂದ.

ಮರುದಿನ ಗುರು ಗಾಲ್ಫ್ ಕ್ರೀಡಾಪಟುವನ್ನು ಕರೆದು ಹೇಳಿದ.

‘ನಾನು ಸ್ವಲ್ಪ ವಿಚಾರಿಸಿ ನೋಡಿದೆ. ಒಂದು ಒಳ್ಳೆಯ ಸುದ್ದಿ, ಇನ್ನೊಂದು ಕೆಟ್ಟ ಸುದ್ದಿ. ಒಳ್ಳೆ ಸುದ್ದಿ ಎಂದರೆ ಸ್ವರ್ಗದಲ್ಲಿ ಗಾಲ್ಫ್ ಮೈದಾನಗಳಿವೆ. ಇವು ಲೋಕದ ಗಾಲ್ಫ್ ಮೈದಾನಗಳಿಗಿಂತ ಉತ್ತಮ.’

ಗಾಲ್ಫ್ ಕ್ರೀಡಾಪಟು ಕೇಳಿದ. ಹಾಗಾದರೆ ಕೆಟ್ಟ ಸುದ್ದಿ ಏನು?

ಗುರು: ಕೆಟ್ಟ ಸುದ್ದಿ ಎಂದರೆ, ಮುಂದಿನ ಸೋಮವಾರ ಮದ್ಯಾಹ್ನ ನೀನು ಅಲ್ಲಿರುತ್ತಿ !

***

ಸಮಾಲೋಚನೆ

ನ್ಯಾಯಾಲಯದಲ್ಲಿ ವಕೀಲರು ವಾದ ಮಾಡುತ್ತಿದ್ದರು. ಆಗ ಪಕ್ಕದಲ್ಲೇ ಹೊರಗಡೆ ಕತ್ತೆಯೊಂದು ಅರಚಿತು. ತಮ್ಮ ವಿನೋದ ಪ್ರಜ್ಞೆ ಪ್ರಕಟಿಸಲು ಸಿಕ್ಕ ಅವಕಾಶ ಬಳಸಿಕೊಂಡು ನ್ಯಾಯಾಧೀಶರು ‘ಒಂದು ಸಾರಿಗೆ ಒಬ್ಬರಂತೆ Once at a time, ವಾದ ಮಾಡಿ' ಎಂದು ನಕ್ಕರು.

ಸ್ವಲ್ಪ ಕಾಲಾನಂತರ ವಕೀಲರಿಗೂ ಒಂದು ಅವಕಾಶ ಸಿಕ್ಕಿತು. ನ್ಯಾಯಾಧೀಶರು ತಮ್ಮ ಪಕ್ಕದಲ್ಲಿದ್ದ ಸಾಕು ನಾಯಿಗೆ -ಮೃದುವಾದ ಪೆಟ್ಟು ಕೊಡುತ್ತಾ ಮುದ್ದು ಮಾಡುತ್ತಿದ್ದರು. ವಕೀಲರು ವಾದ ನಿಲ್ಲಿಸಿದರು. ನ್ಯಾಯಾಧೀಶರು ತಲೆ ಎತ್ತಿ ನೋಡಿ ‘ಏಕೆ ನಿಲ್ಲಿಸಿದಿರಿ? ಮುಂದುವರೆಸಿ' ಎಂದರು.

ವಕೀಲರೆಂದರು ‘ತಾವು ಸಮಾಲೋಚಿಸಿ ಸಲಹೆ ಪಡೆಯುತ್ತಿದ್ದಿರಿ. ಅದಕ್ಕೆ ಅಡ್ಡಿಯಾಗದಿರಲೆಂದು ವಾದ ಸರಣಿ ತಡೆದೆ'.

***

ಹೆಸರು ಬದಲಾವಣೆ

ಒಬ್ಬ ವಿದ್ಯಾರ್ಥಿಯ ಹೆಸರು ಹುಚ್ಚ ರಾಮೇಗೌಡ. ಗ್ರಾಮಾಂತರದಿಂದ ಬಂದ ಆ ವಿದ್ಯಾರ್ಥಿಯ ಹೆಸರನ್ನು ಹಿಡಿದು ಅವನ ಗೆಳೆಯರು ಪೀಡಿಸುತ್ತಿದ್ದರು. -ಹುಚ್ಚ ಹುಚ್ಚ ಎಂದು ಗೇಲಿ ಮಾಡುತ್ತಿದ್ದರು.

ಅವನಿಗೂ ಕ್ರಮೇಣ ತುಂಬಾ ಬೇಜಾರಾಯಿತು. ತಲೆ ಚಿಟ್ಟು ಹಿಡಿಯಿತು. ಕಡೆಗೆ ಆತ ದೃಢ ನಿರ್ಧಾರಕ್ಕೆ ಬಂದು ಸಂಬಂಧಪಟ್ಟ ಅಧಿಕಾರಿಯ ಮುಂದೆ ಹೋಗಿ ತನ್ನ ಹೆಸರು ಬದಲಾಯಿಸಿಕೊಂಡ. ಹುಚ್ಚ ರಾಮೇಗೌಡ ‘ಹೆಚ್’ ರಾಮೇಗೌಡ ಆದ.

ಹೆಸರು ಬದಲಾದ ಮೇಲೆ ತರಗತಿಯಲ್ಲಿ ಹಾಜರಿ ಹೆಸರುಗಳನ್ನು ಅಧ್ಯಾಪಕರು ಕರೆಯುತ್ತಿದ್ದಾಗ, ಹುಚ್ಚ ರಾಮೇಗೌಡ ಬದಲು ‘ಹೆಚ್’ ರಾಮೇಗೌಡ ಎಂದಿತ್ತು. ವಿನೋದಪ್ರಿಯರಾದ ಆ ಅಧ್ಯಾಪಕರು, ಇದೇನಿದು, ರಾಮೇಗೌಡರ ‘ಹುಚ್ಚು' ‘ಹೆಚ್’ ಆಗಿದೆ ಎಂದರಂತೆ.

***

ಸಮಾಚಾರ

ಸುಮಾ ಯಾವುದೇ ವಿಚಾರ, ಸುದ್ದಿ ಸಮಾಚಾರ ಇಲ್ಲದಿದ್ದರೂ ನಿತ್ಯವೂ ತನ್ನ ಗೆಳತಿ ಗೀತಾಗೆ ಫೋನ್ ಮಾಡುತ್ತಿದ್ದಳು. ಫೋನ್ ನಲ್ಲಿ ತನ್ನ ಮೂರು ವರ್ಷದ ಮಗ ಹೇಮಂತನ ತುಂಟಾಟಗಳನ್ನು, ವೀರಗಾಥೆಯ ಹಾಗೆ ವರ್ಣಿಸುತ್ತಿದ್ದಳು. ಹಾಗೆ ಹೇಳದ ದಿನ ಆಕೆಗೆ ಏನನ್ನೋ ಕಳೆದುಕೊಂಡ ಭಾವ ಕಾಡುತ್ತಿತ್ತು. ಎಂದಿನಂತೆ ಫೋನ್ ಮಾಡಿದ ಸುಮಾ ‘ನನ್ ಮಗ ಬಲ್ ನನ್ಮಗ ಕಣೆ. ಮೂರು ವರ್ಷಕ್ಕೆ ಎಬಿಸಿಡಿ ಝೆಡ್ ವರ್ಗೂ ತಪ್ಪಿಲ್ಲದೆ ಹೇಳ್ತಾನೆ' ಅದಕ್ಕೆ ಪ್ರತಿಯಾಗಿ ಗೀತಾ, ‘ಬಿಗ್ ಲೆಟರ್ಸ್ ಹೇಳ್ತಾನೋ, ಸ್ಮಾಲ್ ಲೆಟರ್ಸ್ ಹೇಳ್ತಾನೋ?’ 

***

ದೊಡ್ಡವರೆಲ್ಲಾ...

ಗಾಂಪ: ದೊಡ್ಡವರೆಲ್ಲಾ ಜಾಣರಲ್ಲ ಅಂತ ಅವರೇ ಹಾಡ್ಕಂಡವರಲ್ಲಾ.

ಸೂರಿ: ಅದ್ರಲ್ಲೇನು ತಪ್ಪಿಲ್ಲ ಬಿಡೋ.

ಗಾಂಪ: ಅದೇಗೆ?

ಸೂರಿ: ನಿನ್ನೆ ಮಿಸ್ ಸೊನ್ನೇನ ಜೀರೊ ಅಂತ ಹೇಳ್ಕೊಟ್ಟೋರು ಇವತ್ತು ‘ಓ’ ಅಂತ ರಾಗ ಎಳಿತಾರೆ !

***

ಜಾಮೂನು

ಹಿಂದೆ ಕೇಂದ್ರ ಸರ್ಕಾರದ ಸಚಿವ ಬಲದೇವಸಿಂಗರನ್ನು ಯಾರೋ ಕೇಳಿದರಂತೆ : ‘ಖಾಲಿ ಹೊಟ್ಟೆಯಲ್ಲಿ ಎಷ್ಟು ಜಾಮೂನು ತಿನ್ನಬಲ್ಲಿರಿ?’

‘ಒಂದು ಡಜನ್'

‘ಅದು ಹೇಗೆ ಸಾಧ್ಯ? ಒಂದು ಜಾಮೂನು ತಿಂದ ಬಳಿಕ ಅದು ಖಾಲಿ ಹೊಟ್ಟೆಯಾಗಿ ಉಳೀದಿರೋಲ್ಲ ಅಲ್ವಾ?’

ಈ ಜೋಕ್ ಬಲದೇವ್ ಸಿಂಗರಿಗೆ ತುಂಬಾ ಹಿಡಿಸಿತು. ಅದನ್ನು ಯಾರ ಮೇಲಾದರೂ ಪ್ರಯೋಗಿಸಬೇಕೆಂದು ಕಾಯುತ್ತಿದ್ದಾಗ ಪ್ರಧಾನಿ ನೆಹರು ಎದುರಾದರು.

“ಪಂಡಿತ್ ಜಿ, ಖಾಲಿ ಹೊಟ್ಟೇಲಿ ಎಷ್ಟು ಜಾಮೂನು ತಿನ್ನಬಲ್ಲಿರಿ?”

ನೆಹರೂ ಯೋಚಿಸಿ “ಬಹುಷಃ ಐದಾರು ತಿಂದೇನು" ಎಂದರು.

“ಹಾ, ನೀವು ಒಂದು ಡಜನ್ ಅಂತ ಹೇಳಿದ್ದರೆ ಒಂದು ಒಳ್ಳೇ ಜೋಕ್ ಹೇಳುತ್ತಿದ್ದೆ" ಎಂದರಂತೆ ಸರ್ದಾರ್ಜಿ.

***

(ಕೃಪೆ: ವೈಯೆನ್ಕೆ ಅವರ ‘ಕೊನೆ ಸಿಡಿ’ ಪುಸ್ತಕ ಹಾಗೂ ಸುಧಾ ಪತ್ರಿಕೆ)

ಚಿತ್ರ ಕೃಪೆ: ಅಂತರ್ಜಾಲ ತಾಣ