ಪ್ರಕೃತಿ ಶಾಶ್ವತ!
ಶಾಶ್ವತ ಪ್ರಕೃತಿ
ಹುಡುಗ ಹುಡುಗಿಯರು ಹರಯಕ್ಕೆ ಬರುತ್ತಿರುವಂತೆಯೇ
ಮಾಡುತ್ತಾರಂತೆ ಮದುವೆ|
ಏಳು ದಿನಗಳ ಮದುವೆ ಅಗ್ನಿಯ ಝಳಕ್ಕೆ ಹೊಗೆಯ ಮಸಿಗೆ
ಇಬ್ಬರು ಮಾಗಲು ತಡವೆ?||
ಉತ್ತು ಬಿತ್ತು ನೀರ ಹನಿಸಿ ಬೆಳೆಸಿದ ಸೂರ್ಯಕಾಂತಿ ಗಿಡಗಳಿಗೆ
ಕುಡಗೋಲು ಬೀಳುವ ಹಾಗೆ|
ಮದುವೆ ಮುಗಿದ ಮೇಲೆ ಇಬ್ಬರನ್ನು ಒಂದು ರಾತ್ರಿ ದೂಡುತ್ತಾರೆ
ಕತ್ತಲು ತುಂಬಿದ ಕೋಣೆಗೆ||
ಅಂದು, ಹುಡುಗಿ ಬೆದರಿದ ಹರಿಣಿ ಮೂಲೆಯಲ್ಲಿದ್ದಳು
ಒಳಗೊಳಗೆ ನಡನಡುಗುತ್ತಾ!
ಬರುವುದು ಹುಲಿಯೋ ಕಿರುಬನೋ ಇಲ್ಲ ಸಾರಂಗವೋ
ಎಂದು ಒಬ್ಬಳೇ ಕಾಯುತ್ತಾ||
ಪುರುಷಮೃಗದ ಕಾಲಿಗೆ ಬಿದ್ದು, ಕೈಗೆ ಬಿಸಿ ಹಾಲನ್ನು
ಕೊಟ್ಟು ತಲೆಬಗ್ಗಿಸಿ ನಿಲ್ಲಬೇಕಿತ್ತು|
ಖಂಡವಿದೆಕೋ ಮಾಂಸವಿದೆಕೋ ಬಿಸಿರಕ್ತದ ಗುಂಡಿಗೆಯಿದೆಕೋ
ಕುತ್ತಿಗೆಯೊಡ್ಡಬೇಕಿತ್ತು||
ಏಳುಸುತ್ತಿನ ಕೋಟೆಯೋ ಆಫ್ರಿಕದ ಕಗ್ಗತ್ತಲ ಖಂಡವೋ
ಸಾಹಸಕ್ಕಿಳಿಯಲೇಬೇಕಿತ್ತು|
ಮೊದಲ ಬಾರಿಗೆ ನೇಗಿಲ ಹಿಡಿದು ಹೊಲವನುಳಲು ಹೊರಟ
ಅಳುಕು ಭೀತಿಯಿರುತ್ತಿತ್ತು||
ತೆರೆಗಳ ಸರಿಸಿ ಮನದ ಪೊರೆಗಳ ಕಳಚಿ ಹುಡುಕಾಟ ಬೆದಕಾಟ
ಮುದವನ್ನು ಕೊಡುತ್ತಿತ್ತು|
ಕಚ್ಚಾಟ ಕಿರುಚಾಟ ಪರಚಾಟ ಕರಡಿಯುಗುರ ಘಾತಕ್ಕೆ ಹಲಸು
ಬಿರಿದು ಅಂಟು ರೇಜಿಗೆಯಾಗುತ್ತಿತ್ತು||
ಇಂದು ಅಂತರ್ಜಾಲದಲ್ಲಿ ಜಾರಿ ಹೋಗುವಾಗ ಸಂಗಾತಿ ತೇಲಿ
ಬರಲು ಹೃದಯಗಳು ದಡಗುಟ್ಟುತ್ತವೆ|
ಮಾತೇ ಕಥೆಯಾಗಿ, ಕಥೆಯೇ ಬದುಕಾಗಿ ಬದಲಾಗುವ ಅದ್ಭುತವೆಂಬ
ಮಾಯೆಯ ಮುಸುಕು ಅಡರುತ್ತದೆ||
ಮುಖಾಬಿಲೆಯಲ್ಲಿ ಮೊಳಕೆಯೊಡೆದರೆ ಪ್ರೀತಿ, ಗಿಡವಾಗಿ ಮರವಾಗಿ
ಬೇರು ಬಿಳಲು ಬಿಡುತ್ತದೆ|
ಹೊರಒಳಗನ್ನು ನೋಡುವ ತಡಕುವ ಅರ್ಥಮಾಡಿಕೊಳ್ಳುವ ವ್ಯರ್ಥ
ಪ್ರಯತ್ನವೂ ನಡೆಯುತ್ತದೆ||
ತೇಲುವಾಗ ಹುಡುಗ ಹುಡುಗಿಯರೆಷ್ಟು ಕಳಿತಿದ್ದರು ಎಂಬುದು ಮುಖ್ಯ
ತೇಲಿಹೋಗಬಹುದು, ಇಲ್ಲ|
ಹಿರಿಯರ ಸಮ್ಮುಖದಲ್ಲಿ ನೆಪಮಾತ್ರಕ್ಕೆ ಹಸೆಮಣೇಯೇರಿ ಮದುವೇ
ಶಾಸ್ತ್ರವೆಲ್ಲ ಮುಗಿದೇ ಹೋಗುವುದಲ್ಲ||
ಮೊದಲ ರಾತ್ರಿ ಹುಡುಗ ಹುಡುಗಿಯರಿಗೆ ಹೊಸ ಹೋಟಲಿಗೆ ಹೋಗುವ
ಸಂಭ್ರಮವು ತುಳುಕುತ್ತಿರುತ್ತದೆ|
ತಿಂಡಿ ಹೇಗಿರುವುದೋ, ರುಚಿಯಿರುವುದೋ, ಮಸಾಲೆ ಹದವಾಗಿರುತ್ತದೋ
ಎಂಬ ಕುತೂಹಲವಿಷ್ಟಿರುತ್ತದೆ||
ಹುಲಿಗಳಿಲ್ಲ, ಚಿರತೆಗಳಿಲ್ಲ, ಕಿರುಬಗಳ ಕಾಟವಿಲ್ಲ, ಹಾಲನೊಪ್ಪಿಸುವ
ಹರಕೆ ಪುಣ್ಯಕೋಟಿ ಬದುಕೇ ಇಲ್ಲ|
ಎಲ್ಲವೆಲ್ಲ ಲೆಕ್ಕ, ಸರಿಸಮ ಲೆಕ್ಕ! ಯಾರೂ ಹೆಚ್ಚಲ್ಲ ಯಾರೂ ಕೀಳಲ್ಲ
ಎಲ್ಲ ವೆಲ್ಲದರಲ್ಲಿ ಸರಿಸಮವೆಲ್ಲ||
ಅಂತರ್ಜಾಲದಲ್ಲಿ ತೇಲಿ ತೇಲಿ ಹೋಗುವಾಗಲೆಲ್ಲ ಕಗ್ಗತ್ತಲ ಖಂಡವೆಲ್ಲ
ದಟ್ಟ ಪರಿಚಯವಾಗಿರುತ್ತದೆಯಲ್ಲ|
ಮರುಭೂಮಿಯನ್ನು ಉತ್ತು ಓಯಸಿಸ್ಸು ಹರಸಿ ಸಿಹಿ ಸಿಹಿ ಖರ್ಜೂರವ
ಬೆಳೆಸಿದ ಅನುಭವವಿರುತ್ತದೆಯಲ್ಲ||
ಕೋಟೆಕೊತ್ತಲಗಳ ಕಾಲ ಮುಗಿದಿದೆ, ಜಗದ ತುಂಬಾ ಉಜ್ವಲ
ಸೂರ್ಯಕಿರಣದ ಬೆಳಕಿದೆ|
ಟ್ರಾಕ್ಟರ್ ಇರುವ ಕಾಲದಲ್ಲಿ ಉತ್ತ ನೆಲ ಎಳ್ಳೆಡೆ ಇರುವಾಗ
ನೆಲವೆಲ್ಲ ಫಲವತ್ತಾಗಿಯೇ ಇರುತ್ತದೆ||
ಬೇಕಿದ್ದಲ್ಲಿ ಭತ್ತದ ಪಯಿರನ್ನು ನೆಡಿ ಬೆಳೆಸಿ, ಬೇಡವಿದ್ದಲ್ಲಿ ನೆಲದ
ಗಂಧವ ಮನದಣಿಯುವವರಿಗೆ ಆಸ್ವಾದಿಸಿ|
ಕಳಪೆ ಬೀಜವ ಮಣ್ಣಲಿ ಹೊಸಕಿ, ಸ್ವದೇಶದ್ದೋ ವಿದೇಶದ್ಧೋ
ಉತ್ತಮ ತಳಿಯ ಬೀಜವ ಬಿತ್ತಿ ಬೆಳೆಯಿರಿ||
ಹಣದ ಥೈಲಿ ಝಣ ಝಣ ನೀನಾದ ಮಾಡುತ್ತಿರಲು ದಿನದಿನ
ಹೊಸನೆಲದ ಅನ್ವೇಷಣೆ ಅಸಹಜವಲ್ಲ|
ಜಗವು ಕುಗ್ರಾಮವಾಗಿರಲು ವಿಶಾಲ ಬಯಲು ನಮ್ಮದಾಗಿರಲು
ವಿಧ ವಿಧ ಗಿಡಮರ ಗಿಡಮರ ಬೆಳೆಸುವುದರಲ್ಲಿ ತಪ್ಪಿಲ್ಲ||
ಬೇಕೆನಿಸಿದಾಗ ನೆಲದ ಮೇಲಕ್ಕಿಳಿದರಾಯಿತು ಇಲ್ಲದಿರೆ
ಜಗವನ್ನೇ ಮನೆಯನ್ನಾಗಿಸಿ ತೇಲಿದರಾಯಿತು|
ಮುಕ್ತ ಎಲ್ಲ ಮುಕ್ತ ಎಲ್ಲರಿಗೂ ಮುಕ್ತ ಮದುವೆಯ ಚೌಕಟ್ಟೆಂಬುದು
ಬೇಡವೆಂದಲ್ಲಿ ಹೊರಬಂದರಾಯಿತು||
ನಾಗರಿಕತೆ ಎಣ್ಣುವುದು ಕೃತಕ! ಮಾನವ ಮಾಡಿಕೊಂಡ
ಒಪ್ಪಂದ ಎಷ್ಟು ದಿನವಿದ್ದೀತು ಹೇಳು?
ಪ್ರಕೃತಿ ಅನಂತ! ಶಕ್ತಿಶಾಲಿ, ಕುಣಿಸುವುದು ಹಿಡಿದು ಮೂಗುದಾರ
ಎಂದೆಂದಿಗೂ ಶಾಶ್ವತ ಕೇಳು||
-ಡಾ.ನಾ.ಸೋಮೇಶ್ವರ