ಮುಳುಗುತ್ತಿರುವ, ಆದರೆ ಮುಳುಗಬಾರದ ಹಡಗು: ಕಾಂಗ್ರೆಸ್

ಮುಳುಗುತ್ತಿರುವ, ಆದರೆ ಮುಳುಗಬಾರದ ಹಡಗು: ಕಾಂಗ್ರೆಸ್

ಮುಳುಗುತ್ತಿರುವ, ಆದರೆ ಮುಳುಗಬಾರದ ಹಡಗು: ಕಾಂಗ್ರೆಸ್

ರಾಜಕೀಯ ಆಸಕ್ತಿಯುಳ್ಳ ನಾವು ಕೆಲವು ಗೆಳೆಯರು ಇತ್ತೀಚೆಗೆ ಲೋಕಾಭಿರಾಮವಾಗಿ ಮಾತನಾಡುತ್ತಾ, ಈಗ ವಿಧಾನಸಭಾ ಚುನಾವಣೆ ನಡೆದರೆ ಯಾವ್ಯಾವ ಪಕ್ಷ ಎಷ್ಟೆಷ್ಟು ಸ್ಥಾನಗಳನ್ನು ಪಡೆಯಬಹುದು ಎಂಬ ಊಹೆಗೆ ಚಾಲನೆ ನೀಡಿದೆವು. ಆಶ್ಚರ್ಯವೆಂದರೆ, ಎಲ್ಲರ ಪ್ರಕಾರವೂ ಭಾರತೀಯ ಜನತಾ ಪಕ್ಷಕ್ಕೆ ಅತಿ ಹೆಚ್ಚು-ಅದೃಷ್ಟ ಖುಲಾಯಿಸಿದರೆ, ಬಹುಮತದಷ್ಟು-ಸ್ಥಾನಗಳು ದೊರೆಯಬಹುದು. ಎರಡನೇ ಸ್ಥಾನ, ಸಾಕಷ್ಟು ದೂರದಲ್ಲಿ ಜಾತ್ಯತೀತ ಜನತಾ ದಳಕ್ಕೆ. ಕಾಂಗ್ರೆಸ್ಸಿಗೇನಿದ್ದರೂ ಬಹು ದೂರದ ಮೂರನೇ ಸ್ಥಾನ-ತನ್ನ ಪಾರಂಪರಿಕ ಭದ್ರ ಕೋಟೆಗಳಲ್ಲಿ ಮಾತ್ರ ಅದು ಗೆಲ್ಲಬಹುದು.
ಇದು ಕೇವಲ ಊಹೆ ಮಾತ್ರವಲ್ಲ; ಬೀದಿಗಿಳಿದು ಸಾಮಾನ್ಯ ಜನರನ್ನು ಮಾತನಾಡಿಸಿದರೂ, ಇದೇ ಮುನ್ಸೂಚನೆ ನೀಡಿಯಾರು. ಇದಕ್ಕೆ ಮುಖ್ಯ ಕಾರಣ, ಸಮ್ಮಿಶ್ರ ಸರ್ಕಾರ-ವಿಶೇಷವಾಗಿ ಹಣಕಾಸು ಖಾತೆಯನ್ನೂ, ವಿಶಾಲ, ದಕ್ಷ ಹಾಗೂ ಬದ್ಧ ಪ್ರಚಾರ ಜಾಲವನ್ನೂ ಹೊಂದಿರುವ ಭಾ.ಜ.ಪ.-ಜನಪ್ರಿಯ ಕಾರ್ಯಕ್ರಮಗಳ ಪ್ರಕಟಣೆ ಹಾಗೂ ಚಾಲನೆಯ ಮೂಲಕ ಸೃಷ್ಟಿಸಲಾಗಿರುವ ಹೊಸ ಭರವಸೆಯ ವಾತಾವರಣವೆಂಬಂತೆ ಕಂಡರೂ, ಅಷ್ಟೇ ಮುಖ್ಯವಾದ ಇನ್ನೊಂದು ಕಾರಣವಿದೆ. ಅದೆಂದರೆ, ಅಧಿಕಾರ ಕಳಕೊಂಡ ದಿಗ್ಭ್ರಮೆಯಿಂದ ಇನ್ನೂ ಹೊರಬರಲಾಗದೆ ವಿರೋಧ ಪಕ್ಷವಾಗಿ ಪ್ರತಿ ರಾಜಕಾರಣ ಮಾಡುವ ಸಾಮರ್ಥ್ಯವನ್ನೇ ಕಳೆದುಕೊಂಡಂತೆ ತೋರುತ್ತಿರುವ ಕಾಂಗ್ರೆಸ್ ಪಕ್ಷದ ಜೋಭದ್ರಗೇಡಿತನ. ಈಗಾಗಲೇ ಜನಪ್ರಿಯ ಪತ್ರಿಕೋದ್ಯಮದ ಪರಿಭಾಷೆಯಲ್ಲಿ ಸೆಟ್ ದೋಸೆಗಳೆಂದು ಹೆಸರಾಗಿರುವ ಖರ್ಗೆ-ಧರ್ಮಸಿಂಗ್- ಎಚ್.ಕೆ.ಪಾಟೀಲ್ ತ್ರಿವಳಿ ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡುವ ರೀತಿಯನ್ನೇ ಗಮನಿಸಿ. ಯಾವ ಮಾತನ್ನು ಖಚಿತವಾಗಿ ಆಡಿಬಿಟ್ಟರೆ ಸನಿಹದಲ್ಲೇ ಎಲ್ಲೋ ಅಡ್ಡಾಡತ್ತಿರಬಹುದಾದ ಅಧಿಕಾರದ ಸಾಧ್ಯತೆ ಎಲ್ಲಿ ಕೈ ತಪ್ಪಿ ಹೋಗುವುದೋ ಎಂಬ ಆತಂಕದಲ್ಲೇ ಕನ್ನಡ ಭಾಷೆಯ ವ್ಯಾಕರಣ ಹಾಗೂ ವಾಕ್ಯರಚನೆಯ ಸಾಧ್ಯತೆಗಳನ್ನೆಲ್ಲಾ ಸೂರೆ ಮಾಡುತ್ತಾ, ಇವರ ದಾರಿ ಏನೆಂಬುದು ಸ್ಪಷ್ಟವೇ ಆಗದ ರೀತಿಯಲ್ಲಿ ಮಾತನಾಡುವುದರಲ್ಲಿ ಇವರು ನಿಸ್ಸೀಮರಾಗಿದ್ದಾರೆ! ಇಂತಹವರ ಬಳಿ ಪಕ್ಷ ಕಟ್ಟುವುದಕ್ಕೆ ಅಗತ್ಯವಾದ ಹೊಸ ಆಲೋಚನೆಯಾಗಲೀ, ಕಟಿ ಬದ್ಧತೆಯಾಗಲೀ ಸುಳಿಯಬಲ್ಲುದೆಂದು ಯಾರೂ ನಿರೀಕ್ಷಿಸಲಾರರು. ಇವರ ಪ್ರಕಾರ ಈಗ ಪಕ್ಷ ಕಟ್ಟುವುದೆಂದರೆ ಆಡಳಿತ ಪಕ್ಷಗಳ ಒಳಜಗಳ ಲಾಭ ಪಡೆದು ಹೇಗಾದರೂ, ಯಾವ ಪ್ರಮಾಣದದ್ದಾದರೂ ಅಧಿಕಾರ ಹಿಡಿಯುವುದು! ಇನ್ನು ಪಕ್ಷಕ್ಕೆ ಹೊಸದಾಗಿ ಪ್ರವೇಶಿಸಿರುವ ಸಿದ್ಧರಾಮಯ್ಯನವರು ತಮ್ಮ ಅಮೋಘ 'ಚಾಮುಂಡೇಶ್ವರಿ ವಿಜಯ'ಕ್ಕಾಗಿ 'ಅಹಿಂದ' ಬಳಗದಿಂದ ಸನ್ಮಾನಗಳನ್ನು ಸ್ವೀಕರಿಸುವ ಹಾಸ್ಯಾಸ್ಪದ ರಾಜಕಾರಣದಲ್ಲಿ ತೊಡಗಿದ್ದಾರೆ. ಪಕ್ಷದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಇಂತಹ ಅಡ್ಡದಾರಿ ಹಿಡಿದಿರುವ ಇವರು ಬಹು ಬೇಗ ಲಡ್ಡಾದ ರಾಜಕಾರಣಿಯಂತೆ ಕಾಣಿಸತೊಡಗಿ ಎಲ್ಲರಲ್ಲೂ ಆಶ್ಚರ್ಯ, ವಿಷಾದ ಮೂಡಿಸಿದ್ದಾರೆ. ಇದ್ದುದರಲ್ಲಿ ವಿಚಾರ ಹೋರಾಟಗಳೆರಡರಲ್ಲೂ ಪ್ರತಿಭೆ ತೋರಬಲ್ಲವರಾಗಿದ್ದ ರಮೇಶ್ ಕುಮಾರ್ ವಿವಾದಾಸ್ಪದ ಕೊಲೆ ಮೊಕದ್ದಮೆಯೊಂದನ್ನು ಎದುರಿಸುತ್ತ ಅನ್ಯಮನಸ್ಕರಾದಂತೆ ಕಾಣುತ್ತಿದ್ದರೆ, ನಾಯಕತ್ವದ ಎಲ್ಲ ಗುಣಗಳನ್ನೂ ಪಡೆದಿರುವಂತೆ ತೋರುವ ಕಾಗೋಡು ತಿಮ್ಮಪ್ಪನವರು ಕಳೆದ ಚುನಾವಣೆಯ ಸೋಲಿನಿಂದ ಕಂಗಾಲಾದವರಂತೆ, ಜನ ಕಂಡರೆ ದೂರವಿರತೊಡಗಿದ್ದಾರೆ! ಇನ್ನು ಪಕ್ಷದಲ್ಲಿ ಈಗ ಯುವ ಶಕ್ತಿಯ ನಾಯಕರೆಂದು ಹೇಳಲಾದ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಇತ್ಯಾದಿಗಳ ಚರಿತ್ರೆ ಬಲ್ಲ ಯಾರೂ ಕಾಂಗ್ರೆಸ್ಸಿನಿಂದ ಸಾರ್ವಜನಿಕ ಒಳಿತನ್ನು ನಿರೀಕ್ಷಿಸಲಾರರು.
ಮೊನ್ನೆ ಕಾಗದದ ಮೇಲೆಯೇ ಕಾನೂನು ಹೋರಾಟ ಮಾಡಿ ಬರಮಾಡಿಕೊಂಡ ವಿಧಾನ ಪರಿಷತ್ತಿನ ಸಭಾಪತಿ ಚುನಾವಣೆಯನ್ನು ರಾಜ್ಯ ಕಾಂಗ್ರೆಸ್ ನಿರ್ವಹಿಸಿದ ರೀತಿ ನೋಡಿದರೆ, ಅದಕ್ಕೆ ತಗುಲಿರುವ ಒಳ ರೋಗದ ಅರಿವಾದೀತು. ಪಕ್ಷದ ರಾಜ್ಯ ನಾಯಕರ ಶಿಫಾರ್ಸಿಗೆ ದೆಹಲಿ ಮಟ್ಟದಲ್ಲಿ ಮೂರು ಕಾಸಿನ ಬೆಲೆ ಇಲ್ಲದಾಗಿದೆ. ಜನತೆಯ ರಾಜಕಾರಣ ಮಾಡುವವರಿಗಿಂತ ಮಧ್ಯವರ್ತಿಗಳಾಗಿ ಹಣದ ಥೈಲಿ ರಾಜಕಾರಣ ಮಾಡುವ 'ಪ್ರತಿಷ್ಠಿತ'ರ ಗುಂಪೇ ದೆಹಲಿ ಮಟ್ಟದಲ್ಲಿ ಮೇಲುಗೈ ಪಡೆದಿರುವುದೇ ಕಾಂಗ್ರೆಸ್‌ನ ಈ ದುಃಸ್ಥಿತಿಗೆ ಕಾರಣವೆಂದು ಪಕ್ಷದೊಳಗಿನವರೇ ಹೇಳತೊಡಗಿದ್ದಾರೆ. ಹೀಗೆ ಪಕ್ಷ ಬೆಂಗಳೂರಿನಿಂದ ದೆಹಲಿಯವರೆಗೆ ಹರಿದು ಹಂಚಿ ಹೋಗಿದ್ದು, ರಾಜ್ಯ ರಾಜಕಾರಣದ ವಾಸ್ತವಗಳಿಂದಲೇ ಅದು ದೂರಾಗಿರುವಂತೆ ತೋರುತ್ತಿದೆ. ಇದು ದುರಂತ. ಆ ಪಕ್ಷಕ್ಕೆ ಮಾತ್ರವಲ್ಲ; ರಾಜ್ಯದ ಜನತೆಗೂ ಕೂಡ.
ಮೊನ್ನೆ ವಿಧಾನ ಪರಿಷತ್ ಸದಸ್ಯೆ ಮೋಟಮ್ಮನವರು ಮೂಡಿಗೆರೆಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಗೆ ಅತಿಥಿಯಾಗಿ ಹೋಗಿದ್ದೆ. ತನ್ನ ಸಹಜ ಸರಳತೆ, ಸಭ್ಯತೆಗಳ ಜೊತೆಗೆ ದಿಟ್ಟತನ ಹಾಗೂ ದಕ್ಷತೆಗಳನ್ನೂ ಮೈಗೂಡಿಸಿಕೊಂಡಿರುವ ಮೋಟಮ್ಮ ಅಸಾಧಾರಣ ಜನಪದ ವಿವೇಕದೊಂದಿಗೆ, ಸಾವಿರಾರು ಜನರಿದ್ದ ಆ ಸಮಾರಂಭದಲ್ಲಿ ಹತ್ತಾರು ಜೊತೆಗಳ ಸಾಮೂಹಿಕ ವಿವಾಹದ ಯಜಮಾನಿಕೆಯನ್ನೂ ವಹಿಸಿ ಅದನ್ನು ನಡೆಸಿ ಕೊಟ್ಟ ರೀತಿ, ಚಲನ ಚಿತ್ರ ತಾರೆಯರಾದ ಶೃತಿ-ಮಹೇಂದ್ರರೂ ಸೇರಿದಂತೆ ಅಲ್ಲಿದ್ದ ಅತಿಥಿ ಸಮೂಹವನ್ನು ಬೆರಗುಗೊಳಿಸಿತು. ಅಂಬೇಡ್ಕರ್ ಜಯಂತಿಯನ್ನು ವಿಚಾರದ ಸೊಗಸು, ಬಣ್ಣದ ಬೆಡಗು ಹಾಗೂ ಸಾಂಸ್ಕೃತಿಕ ಸಂಭ್ರಮಗಳ ಸಮ್ಮಿಲನದ ಒಂದು ಜನಪದ ಹಬ್ಬವಾಗಿ ಅವರು ಕಲ್ಪಿಸಿಕೊಂಡ ರೀತಿಯೇ ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಪರಿಚಯ ಮಾಡಿಕೊಡುವಂತಿತ್ತು. ಇಲ್ಲಿ ನನಗುಂಟಾದ ಒಂದೇ ವಿಷಾದವೆಂದರೆ, ಯಾರ್ಯಾರನ್ನೋ ಚುನಾವಣೆಗಳಲ್ಲಿ ಗೆಲ್ಲಿಸಿ ಕಳಿಸುವ ಜನ ಮೋಟಮ್ಮನವರಂತಹ ಮಣ್ಣಿನ ಮಗಳನ್ನೇಕೆ ಸೋಲಿಸುತ್ತಾರೆ ಎಂಬುದು! ಈ ಪ್ರಶ್ನೆಯನ್ನು ನಾನು ಮೋಟಮ್ಮನವರಿಗೇ ಕೇಳಿದೆ. ಅವರ ಬದಲಿಗೆ ಅಲ್ಲಿ ಹಾಜರಿದ್ದ ಹತ್ತಾರು ಜನ ಸ್ಥಳೀಯ ಕಾಂಗ್ರಸ್ ನಾಯಕರೇ ಉತ್ತರಿಸಿದರು: ಪಕ್ಷದೊಳಗೇ ಅವರನ್ನು ಸಹಿಸದ ಜನರಿದ್ದಾರೆ. ಈ ಪರಸ್ಪರ ಅಸಹನೆ-ಈರ್ಷ್ಯೆಗಳು ಪಕ್ಷವನ್ನು ನಾಶ ಮಾಡುತ್ತಿವೆ. ಅದೂ ಒಳ್ಳೆಯದಕ್ಕೇ-ಪೂರ್ಣ ನಾಶವಾದ ಮೇಲಾದರೂ ಎಲ್ಲವನ್ನೂ ಹೊಸದಾಗಿ ಕಟ್ಟಬಹುದು! ನಾನು ಗಾಬರಿಯಾಗಿ, ಆ ಹೊತ್ತಿಗೆ ರಾಜ್ಯ ಯಾರ ಕೈಗೆ ಸಿಕ್ಕಿ ಏನಾಗಿರುತ್ತದೆ ಎಂಬ ಪರಿವೆಯಾದರೂ ನಿಮಗಿದೆಯೇ? ಎಂದು ಕೇಳಿದೆ. ಪಕ್ಕದಲ್ಲಿದ್ದ ಸ್ಥಳೀಯ ಸಿ.ಪಿ.ಐ. ನಾಯಕ ಸಾತಿ ಸುಂದರೇಶ್ ನನ್ನ ಪ್ರಶ್ನೆಗೆ ಸಹಾನೂಭೂತಿ ತೋರಿಸುವವರಂತೆ ನಕ್ಕರು. ಆದರೆ. ಆ ಕಾಂಗ್ರೆಸ್ ನಾಯಕರು ಏನೂ ಉತ್ತರ ಹೇಳುವ ಸ್ಥಿತಿಯಲ್ಲಿರಲಿಲ್ಲ...
ನನಗೆ ತಕ್ಷಣ ನೆನಪಾದದ್ದು, ಕಳೆದ ಎಂಭತ್ತರ ದಶಕದ ಕೊನೆಯಲ್ಲಿ ಬಹುಮುಖ್ಯ ರಾಜಕೀಯ ಸಂವಾದಕ್ಕೆ ಪೀಠಿಕೆ ಹಾಕಿದ್ದ ಸಮಾಜವಾದಿ ನಾಯಕ ಮಧು ಲಿಮಯೆ ಅವರ ಮುನ್ನೋಟದ ಮಾತುಗಳು. 1984 ಇರಬೇಕು, ಅಧಿಕೃತ ಕೆಲಸದ ಮೇಲೆ ದೆಹಲಿಗೆ ಹೋಗಿದ್ದ ನನ್ನನ್ನು ಸಮಾಜವಾದಿ ಗೆಳೆಯ ಮದನ್ಲಾಲ್ ಹಿಂದ್, 'ಮಧು ಲಿಮಯೆಗೆ ತುಂಬಾ ಅನಾರೋಗ್ಯ, ನೋಡಿಕೊಂಡು ಬರೋಣ' ಎಂದು ಜನಪಥ್ನಲ್ಲಿದ್ದ ಸಂಸತ್ ಸದಸ್ಯರೊಬ್ಬರ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿದ್ದರು. ನನಗೆ ನೆನಪಿದ್ದಂತೆ ಅದು ಆಗ ರಾಜ್ಯಸಭಾ ಸದಸ್ಯರಾಗಿದ್ದ ಸಮಾಜವಾದಿ ನಾಯಕ ಲಾಡ್ಲಿ ಮೋಹನ್ ನಿಗಂ ಅವರ ಎರಡು ಕೊಠಡಿಗಳ ಚಿಕ್ಕ ಮನೆ. ಅಲ್ಲಿ ಲಿಮಯೆ ವಿಶ್ರಾಂತಿಗೆ ತಂಗಿದ್ದರು. ಲೋಕಸಭೆಯಲ್ಲಿ ಆಡಳಿತ ಪಕ್ಷದವರ(ಅಂದರೆ ಕಾಂಗ್ರೆಸ್ಸಿನವರಿಗೆ) ಪಾಲಿಗೆ ಸಿಂಹಸ್ವಪ್ನರಾಗಿದ್ದ, ಲೋಹಿಯಾರ ನಿಜ ವಾರಸುದಾರರಂತಿದ್ದ ಅವರು ಈಗ ಹಣ್ಣಾಗಿ ಹೋಗಿದ್ದರು. ಗೋವಾ ವಿಮೋಚನಾ ಚಳುವಳಿಯಲ್ಲಿ ಅವರು ಎದುರಿಸಿದ ಪೋಲಿಸ್ ದೌರ್ಜನ್ಯದ-ಮೂಳೆ ಹಾಗೂ ಮಾಂಸಖಂಡಗಳಿಗೆ ಆಗಿದ್ದ ಆಘಾತ ಇತ್ಯಾದಿ-ಪರಿಣಾಮಗಳು ಈ ಇಳಿ ವಯಸ್ಸಿನಲ್ಲಿ ಕಾಣತೊಡಗಿದ್ದವು. ಕಣ್ಣುಗಳೂ ಮಂಜಾಗಿದ್ದವು. ಆ ತೊಂದರೆಗಳ ನಡುವೆಯೂ ಅವರು ಒಂದು ತಾಸು ಸಮಾಜವಾದಿ ಚಳುವಳಿ ಮುನ್ನಡೆಯಬೇಕಾದ ಹಾದಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದರು. ಈ ಮಾತುಕತೆಯಲ್ಲಿ ನಾನು ಜನತೆಯ ಬಹುದಿನದ ಕನಸಾಗಿದ್ದ ಹಾಗೂ ಲೋಹಿಯಾರ ಕಾಂಗ್ರೇಸ್ಸೇತರವಾದದ ಆಶಯವಾಗಿದ್ದ ಆಗಿನ ಜನತಾ ಪಕ್ಷದ ನೇತೃತ್ವದ ಕಾಂಗ್ರೆಸ್ಸೇತರ ಸರ್ಕಾರವನ್ನು ದ್ವಿಸದಸ್ಯತ್ವದ ವಿವಾದದ ನೆಪದಲ್ಲಿ ಏಕೆ ಬೀಳಿಸಿದಿರಿ? ಎಂದು ಕೇಳಿದೆ. ಅದಕ್ಕವರು, ಆ ಮೂಲಕ ತಾವೊಂದು ಐತಿಹಾಸಿಕ ಕೆಲಸ ಮಾಡಿರುವುದಾಗಿ ಹೇಳಿದ ಮಾತುಗಳು ಅಪೂರ್ವ ಒಳನೋಟಗಳಿಂದ ಕೂಡಿದುವಾಗಿದ್ದವು.
ಜೆ.ಪಿ.ಯಂತಹ ಹಿರಿಯರ ನೈತಿಕ ಒತ್ತಡದಿಂದಾಗಿ ತೀರಾ ವಿಭಿನ್ನ ತತ್ವ ಪ್ರಣಾಳಿಗಲನ್ನು ಹೊಂದಿದ್ದ ಪಕ್ಷಗಳು ನಾಮಕಾವಸ್ತೆ ಮಾತ್ರ ಒಂದಾಗಿ, ಜನತಾ ಪಕ್ಷವನ್ನು ರಚಿಸಿಕೊಂಡಿದ್ದವು. ಆದರೆ, ಜೆ.ಪಿ. ದುರ್ಬಲರಾಗುತ್ತಿದ್ದಂತೆ, ಆರ್.ಎಸ್.ಎಸ್. ಮೂಲದ ಜನಸಂಘಿಗಳು ಆರ್.ಎಸ್.ಎಸ್. ಸದಸ್ಯತ್ವನ್ನು ಬಿಟ್ಟುಕೊಡದೆ, ಪಕ್ಷ ಸರ್ವಸಮ್ಮತವಾಗಿ ಒಪ್ಪಿಕೊಂಡಿದ್ದ ಗಾಂಧಿ ಸಮಾಜವಾದಿ ಕಾರ್ಯಕ್ರಮವನ್ನು ಒಳಗೊಳಗೇ ಬುಡಮೇಲುಗೊಳಿಸುತ್ತ, ಆಂತರಿಕವಾಗಿ ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಮರು ಸ್ಥಾಪಿಸಿಕೊಂಡು ಪಕ್ಷವನ್ನು ವಶ ಮಾಡಿಕೊಳ್ಳುವ ಸನ್ನಾಹ ಮಾಡಿದರು. ಇದನ್ನು ಚಿಗುರಿನಲ್ಲೇ ಮುರುಟಿ ಹಾಕದಿದ್ದರೆ ದೇಶಕ್ಕೆ ಗಂಡಾಂತರ ಖಂಡಿತ ಎಂದು ಮುನ್ನೋಡಿಯೇ, ಒಂದು ಪ್ರಗತಿಪರ ರಾಜಕೀಯ ಪಕ್ಷವಾಗಿ ಬೆಳೆಯುವ ಆಂತರಿಕ ಸಾಮರ್ಥ್ಯವನ್ನೇ ಪ್ರದರ್ಶಿಸದ ಜನತಾ ಪಕ್ಷವನ್ನು ಒಡೆಯಲು ನಿರ್ಧರಿಸಿದ್ದಾಗಿ ಲಿಮಯೆ ವಿವರಿಸಿದರು. ಈ ಮುನ್ನೋಟದ ಭಾಗವಾಗಿಯೇ ಅವರು, ಆ ಹೊತ್ತಿಗಾಗಲೇ ಜನತಾ ಪಕ್ಷದಿಂದ ಸಿಡಿದು ಭಾರತೀಯ ಜನತಾ ಪಕ್ಷವಾಗಿ ಪುರ್ನಸಂಘಟಿತವಾಗಿದ್ದ ಜನಸಂಘಿಗಳ ವಿಚ್ಛಿದ್ರಕಾರಿ ರಾಜಕಾರಣವನ್ನು ಎದುರಿಸುವ ಏಕೈಕ ಮಾರ್ಗವೆಂದರೆ; ಭಾರತೀಯ ಜನತೆಯ ಬಹುಮುಖಿ ಆಶೋತ್ತರಗಳ ನಿಜವಾದ ಪ್ರತಿನಿಧಿಯಾಗಿದ್ದು, ಆಗಾಗ್ಗೆ ಅಧಿಕಾರದ ಅಮಲಿನಲ್ಲಿ ಅಡ್ಡಹಾದಿ ಹಿಡಿಯುವ ಕಾಂಗ್ರೆಸ್ ಪಕ್ಷವನ್ನು ಉಳಿಸಿ ಸರಿ ಹಾದಿಯಲ್ಲಿ ಬೆಳೆಸುವುದೇ ಆಗಿದೆ ಎಂದು ವಿವರಿಸಿದರು. ಸಮಾಜವಾದಿ ಚಳುವಳಿಯನ್ನು ಸಂಘಟಿಸಬೇಕಾದ್ದೂಈ ರೀತಿಯ ಒಂದು ನೈತಿಕ ಒತ್ತಡದ ವಾತಾವರಣ ನಿರ್ಮಿಸುವ ಕಾರ್ಯ ಯೋಜನೆಯಾಗಿಯೇ ಎಂದವರು ಸೂಚಿಸಿದರು.
ಇಂದು ಈ ಮಾತು ಎಷ್ಟು ನಿಜವೆನ್ನಿಸುತ್ತಿದೆ! ಲೋಹಿಯಾರ ಕಾಂಗ್ರೇಸ್ಸತರವಾದ ಇಂದು ಭಾಜಪೇತರವಾದವಾಗುವ ಅನಿವಾರ್ಯತೆ ಉಂಟಾಗಿದೆ. ಜನಸಂಘವು ಭಾ.ಜ.ಪ. ಆಗುವ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗೆ ಒಳಪಟ್ಟಿದೆ ಎಂಬ ಹಲವರ ನಂಬಿಕೆ ಹುಸಿಯಾಗಿ, ಇಂದು ಭಾ.ಜ.ಪ. ಪ್ರಭಾವ ಹೆಚ್ಚುತ್ತಿದ್ದಂತೆ, ದೇಶ ಮಧ್ಯಯುಗಕ್ಕೆ ಕಾಲಿಡುತ್ತಿರುವ ಅನುಭವವಾಗುತ್ತಿದೆ. ಇದಕ್ಕೆ ಸರಿಯಾದ ಜೊತೆಯಾದಂತೆ ಜಾಗತೀಕರಣವೂ ಸೇರಿಕೊಂಡು, ಹೊಸ ಆಡಂಬರಗಳೊಂದಿಗೆ ಹಳೆಯ ಊಳಿಗಮಾನ್ಯ ಪದ್ಧತಿಯ ನಂಬಿಕೆಗಳು, ಆಚರಣೆಗಳು ಮತ್ತೆ ತಲೆ ಎತ್ತುತ್ತಿವೆ. ಸತಿ ಪದ್ಧತಿಯ ಆಚರಣೆಗೆ ಪರೋಕ್ಷ ಪ್ರೋತ್ಸಾಹ, ಸಾಮೂಹಿಕ ಪ್ರಾಣಿಬಲಿ, ಸಾರ್ವಜನಿಕ ಹೋಮ ಹವನಗಳು, ಜಾತಿ ಹಾಗೂ ಧರ್ಮ ಸಂಬಂಧಿ ನಿರ್ಬಂಧಗಳು ಹಾಗೂ ಹಿಂಸಾಚಾರಗಳು ಹೊಸ ಮಾನ್ಯತೆ ಪಡೆದು, ಹೊಸದೊಂದು ಸಾಮಾಜಿಕ ಸಂಹಿತೆಯೊಂದನ್ನು ಪರ್ಯಾಯ ಸಂವಿಧಾನವೆಂಬಂತೆ ಜನತೆಯ ಮೇಲೆ ಹೇರುವ ಸನ್ನಾಹದ ಎಲ್ಲ ಸೂಚನೆಗಳು ಕಾಣಬರುತ್ತಿವೆ. ಜಾತಿ ಮಠಾಧೀಶರ ಸಿಂಹಾಸನದ ಕೆಳಗಡೆ ಕುರ್ಚಿ ಹಾಕಿಸಿಕೊಂಡು ಅವರ ಅಕ್ಕ-ಪಕ್ಕ ಕೂತು ಧನ್ಯರಾಗಬಯಸುವ ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿಗಳಿಂದ ಜನತೆ ಕುರಿತಂತೆ ಯಾವ ರೀತಿಯ ಬದ್ಧತೆಯನ್ನು ನಿರೀಕ್ಷಿಸಬಹುದಾಗಿದೆ? ಭಾ.ಜ.ಪ. ಭದ್ರವಾಗಿ ನೆಲೆಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಜೀವನವನ್ನು ಉಸಿರುಗಟ್ಟಿಸುವ ಪರಿಸ್ಥಿತಿ ರೂಪುಗೊಳ್ಳುತ್ತಿರುವುದರ ಹಿಂದಿನ ರಾಜಕಾರಣವನ್ನು ಬಲ್ಲ ಯಾರಾದರೂ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಬ್ಬಬಹುದಾದ ಪರಿಸ್ಥಿತಿಯ ಕಲ್ಪನೆ ಮಾಡಿಕೊಳ್ಳಬಲ್ಲರು. ಸಮಾಜದಲ್ಲಿ ಮಧ್ಯಯುಗೀನ ರಾಜ-ಪುರೋಹಿತ-ಸೇನಾ(ಕರ್ನಾಟಕದಲ್ಲಿ ಎಷ್ಟೊಂದು 'ಸೇನೆ'ಗಳಿವೆ!) ವ್ಯವಸ್ಥೆಯ ನೀತಿ ಸಂಹಿತೆ ಜಾರಿಗೆ ಬರುವ ಭಯ ಇಂದು ಸುಳ್ಳಾಗಿ ಕಾಣುತ್ತಿಲ್ಲ. ಇದಕ್ಕೆ ಜಾತ್ಯತೀತ ಜನತಾ ದಳದಂತಹ, ಅಧಿಕಾರವೇ ತತ್ವವಾಗಿರುವಂತಹ 'ಪಕ್ಷ'ಗಳ ಬೆಂಬಲ ದೊರೆತು ಕರ್ನಾಟಕ ಧಾರ್ಮಿಕ ಪಾಳೇಗಾರರ ವಶವಾಗುವ ಅಪಾಯ ಹತ್ತಿರದಲ್ಲೇ ಇದ್ದಂತೆ ತೋರುತ್ತಿದೆ.
ಇಂತಹ ಸಂದರ್ಭದಲ್ಲಿ ತಾತ್ವಿಕ ಸ್ಪಷ್ಟತೆಯೊಂದಿಗೆ ಹಾಗೂ ಕಾರ್ಯಕ್ರಮಗಳ ತೀವ್ರತೆಯೊಂದಿಗೆ, ಪ್ರಸಕ್ತ ಸರ್ಕಾರದ ಜನಪ್ರಿಯ ರಾಜಕಾರಣದ ಬೂಟಾಟಿಕೆ ಹಾಗೂ ಅಪಾಯಗಳನ್ನು ಬಹಿರಂಗಗೊಳಿಸುವ ಮೂಲಕ ಜನತೆಯ ವಿಶ್ವಾಸಾರ್ಹತೆಯನ್ನು ಪುನಃ ಗಳಿಸಿಕೊಳ್ಳುವಂತಹ ಜನಮಧ್ಯದ ಕಾರ್ಯಾಚರಣೆಗಳನ್ನು ನಡೆಸಬೇಕಾದ ಕಾಂಗ್ರೆಸ್, ಇಂದು ಸುಲಭ ಅಧಿಕಾರದ ಅವಕಾಶಗಳಿಗಾಗಿ ಹೊಂಚು ಹಾಕುತ್ತಾ ಕೂತಿರುವ ಪಕ್ಷದಂತೆ ಪ್ರಸ್ತುತಗೊಳ್ಳುತ್ತಿರುವುದು ಶೋಚನೀಯ. ಇಂತಹ ರಾಜಕಾರಣ ಪಕ್ಷವನ್ನು ಮತ್ತು ಆ ಮೂಲಕ ರಾಜ್ಯವನ್ನು ಇನ್ನಷ್ಟು ಅಧೋಗತಿಗೆ ತಳ್ಳಬಹುದಷ್ಟೆ.
ಇದನ್ನು ಆ ಪಕ್ಷಕ್ಕೆ ಮನವರಿಕೆ ಮಾಡಿಕೊಡುವವರಾದರೂ ಯಾರು? ಅಥವಾ ಇಂತಹ ಕಾಂಗ್ರೆಸ್‌ಗೆ ಪರ್ಯಾಯ ರೂಪಿಸುವವರಾದರೂ ಯಾರಿದ್ದಾರೆ, ಕರ್ನಾಟಕದಲ್ಲಿ?
ಅಂದಹಾಗೆ: ಶಾಸಕ ರೇಣುಕಾಚಾರ್ಯರ ಲೈಂಗಿಕ ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಪತ್ತೇದಾರಿಕೆ ಆರಂಭಿಸಿರುವ ಪತ್ರಿಕೆಗಳಿಗೆ ಪ್ರಕರಣದ ಹಿಂದೆ ಯಾರಿದ್ದರೇನು, ಪ್ರಕರಣದ ತುಂಬಾ ಇರುವುದು ರೇಣುಕಾಚಾರ್ಯರೇ ಎಂಬುದೇಕೆ ಕಾಣುತ್ತಿಲ್ಲ. ಈ ಪ್ರಕರಣದ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಯಡಿಯೂರಪ್ಪನವರು ಹೇಳುತ್ತಿರುವುದರ ಅರ್ಥವಾದರೂ ಇದೇ ಇರಬಹುದೇ?!

6.ಪರ್ಯಾಯ ರಾಜಕಾರಣದ ಸಾಧ್ಯತೆಗಳು...

ಕಳೆದ ಸಂಚಿಕೆಯ 'ವಾರದ ಒಳನೋಟ'ವನ್ನು ಕೊನೇ ನಿಮಿಷದಲ್ಲಿ ಕಳಿಸಬೇಕಾದ ಅನಿವಾರ್ಯತೆಯ ಅವಸರದಲ್ಲಿ ಒಂದೆರಡು ಕಡೆ ಮುಖ್ಯ ಪದಗಳೇ ಬಿಟ್ಟು ಹೋಗಿ ಅರ್ಥ ಸಂದಿಗ್ಧತೆ ಉಂಟಾಗಿರುವುದನ್ನು ಓದುಗರು ಗಮನಿಸಿರಬಹುದು. ಹಾಗಾಗಿ, ಅಂಕಣದ ಕೊನೆಯ ವಾಕ್ಯ ಹೀಗಿರಬೇಕಿತ್ತು: '...ಇಂತಹ ಕಾಂಗ್ರೆಸ್ಸಿಗೆ ಪರ್ಯಾಯ ರೂಪಿಸುವವರಾದರೂ ಯಾರಿದ್ದಾರೆ, ಕರ್ನಾಟಕದಲ್ಲಿ?' ಇಲ್ಲಿ ಬಿಟ್ಟು ಹೋಗಿದ್ದ ಪದ: ಪರ್ಯಾಯ. ಹೌದು, ರಾಜಕೀಯ ಪರ್ಯಾಯದ ಬಗ್ಗೆ ಇಂದು ನಾವು ಗಂಭೀರವಾಗಿ ಆಲೋಚಿಸುವ ಅನಿವಾರ್ಯತೆ ಉಂಟಾಗಿದೆ.
ಈಗ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಯಾವುದೇ ಸರ್ಕಾರ ಬಂದರೂ, ಹೆಚ್ಚೂ ಕಡಿಮೆ ಅದು ಪಾರಂಪರಿಕ ಕಾಂಗ್ರೆಸ್ ಮಾರ್ಗಕ್ಕೇ ಬಂದು ಬೀಳುವುದನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಕಾಂಗ್ರೆಸಸಿಗಿಂತ ಬಹು ಭಿನ್ನವಾದ ರಾಜಕೀಯ ಸಂಸ್ಕೃತಿಯೊಂದಿಗೆ ಬೆಳೆದದ್ದೆಂದು ಹೇಳಲಾದ ಭಾರತೀಯ ಜನತಾ ಪಕ್ಷ ಕೂಡ ಕ್ಷಿಪ್ರವಾಗಿ ಅಧಿಕಾರ ಹಿಡಿಯುವ ಹಠದಲ್ಲಿ ಒಂದು ಸಮೂಹ ಪಕ್ಷವಾಗುತ್ತಿದ್ದಂತೆ, ಅದೂ ಕಾಂಗ್ರೆಸ್ಸೀಕರಣಕ್ಕೆ ಒಳಪಟ್ಟಿರುವುದನ್ನು ನಾವು ಕಳೆದ ಎರಡು ದಶಕಗಳಲ್ಲಿ ಗಮನಿಸಿದ್ದೇವೆ. ಭಾ.ಜ.ಪ. ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ ಸರ್ಕಾರ ಕಳೆದ ಚುನಾವಣೆಗಳಲ್ಲಿ ಅಧಿಕಾರ ಕಳೆದುಕೊಂಡಿದ್ದೇ, ಅದರ ರಾಜಕೀಯ ಕಾಂಗ್ರೆಸ್ಸಿಗಿಂತ ಏನೂ ಭಿನ್ನವಲ್ಲ ಎಂಬ ಕಾರಣಕ್ಕಾಗಿ! ಅದೇ ಭ್ರಷ್ಟಾಚಾರ, ಅದೇ ಸ್ವಜನ ಪಕ್ಷಪಾತ, ಅದೇ ಜನ ವಿಮುಖ ಆರ್ಥಿಕ ನೀತಿ ಹಾಗೂ ಆಡಳಿತ ಮತ್ತು ಅಧಿಕಾರದ ಅಮಲಿನಲ್ಲಿ ನಡೆಸಲಾಗುವ ಅದೇ ಕುಕೃತ್ಯಗಳು, ಹತ್ಯಾಕಾಂಡಗಳು... ಈಚೆಗೆ ಕೇಳಿ ಬರುತ್ತಿರುವ ಕಟಾರ, ರೇಣುಕಾಚಾರ್ಯ, ಗುಜರಾತ್‌ನ ಹುಸಿ ಎನ್ಕೌಂಟರ್ ಪ್ರಕರಣಗಳು, ಅದರ ಮುಂದುವರೆದ ಉದಾಹರಣೆಗಳಷ್ಟೆ.
ದುರಂತವೆಂದರೆ, ಈ ಕಾಂಗ್ರೆಸ್ ಹಾಗೂ ಭಾ.ಜ.ಪ. ಹೊರತಾದ ಮೂರನೆಯ ಶಕ್ತಿಯನ್ನು ಕಟ್ಟುವ ಪ್ರಯತ್ನ ಕೂಡಾ ಈ ಎರಡು ಪಕ್ಷಗಳ ಸಹಕಾರವಿಲ್ಲದೆ ಯಶಸ್ವಿಯಾಗಲಾರದು ಎಂಬುದೂ, ಇಂತಹ ಎರಡು ಪ್ರಯತ್ನಗಳ ವೈಫಲ್ಯದಿಂದ (ಒಂದು, ಭಾ.ಜ.ಪ. ಬೆಂಬಲದ ವಿ.ಪಿ.ಸಿಂಗ್ ಸರ್ಕಾರ; ಇನ್ನೊಂದು ಕಾಂಗ್ರೆಸ್ ಬೆಂಬಲದ ದೇವೇಗೌಡರ ಸರ್ಕಾರ) ಈಗ ಖಾತರಿಯಾಗಿದೆ. ಹಾಗಾಗಿ ಈಗ ರಾಜಕೀಯ ಅನುಕೂಲತೆಗಳಿಗನುಸಾರ ಜೊತೆಗಾರರು ಬದಲಾಗುವ ಎರಡು ರಾಜಕೀಯ ರಂಗಗಳು ಇಂದು ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿವೆ. ಇದರಿಂದಾಗಿ, ಯಾರೇ ಅಧಿಕಾರಕ್ಕೆ ಬರಲಿ, ರಾಜಕಾರಣವು ಒಂದು ತಾತ್ವಿಕ ಬದ್ಧತೆಯಿಲ್ಲದೆ, ಅಭಿವೃದ್ಧಿಯ ದಿಕ್ಕಿನ ಬಗ್ಗೆ ಒಂದು ಸ್ಪಷ್ಟತೆಯಿಲ್ಲದೆ; ಜೊತೆಗಾರ ಪಕ್ಷಗಳ ರಾಜಕೀಯ ಒತ್ತಡಗಳಿಗನುಸಾರ ಆಡಳಿತ ಮತ್ತು ಅಭಿವೃದ್ಧಿ ನೀತಿಗಳನ್ನು ಅತ್ತಿತ್ತ ಎಳೆದಾಡುತ್ತ, ಹೇಗೋ ಐದು ವರ್ಷದ ಅಧಿಕಾರಾವಧಿಯನ್ನು ಮುಗಿಸುವುದೇ ಒಂದು ಸಾಧನೆ ಎಂದು ಮೆಚ್ಚುವ ಹಾಗೂ ಅದನ್ನು ಭಾರತೀಯ ಪ್ರಜಾಪಭುತ್ವದ ಯಶಸ್ಸು ಎಂದು ಕೊಂಡಾಡುವ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಇದರ ಉಪಯೋಗ ಪಡೆದ ಅಂತಾರಾಷ್ಟ್ರೀಯ ರಾಜಕೀಯ ಹಿತಾಸಕ್ತಿಗಳು, ಜಾಗತೀಕರಣದ ಹೆಸರಿನಲ್ಲಿ ನಮ್ಮ 'ಅಭಿವೃದ್ಧಿ'ಯ ಹಾದಿಯನ್ನು ತಾವೇ ನಿರ್ಧರಿಸತೊಡಗಿವೆ. ಇದರಿಂದಾಗಿ ರಾಷ್ಟ್ರ ಜೀವನದ ಚುಕ್ಕಾಣಿ ಜನತಾ ಶಕ್ತಿಯ ಕೈ ತಪ್ಪಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಶವಾಗುತ್ತಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ.
ಜನತೆಯನ್ನು ಇತ್ತ, ಬಿ.ಪಿ.ಎಲ್. ಕಾರ್ಡ್, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಮಧ್ಯಾಹ್ನದ ಬಿಸಿಯೂಟ, ತಾಳಿ ಭಾಗ್ಯ ಮುಂತಾದ ದಾನ-ಧರ್ಮ-ಸಹಾನುಭೂತಿ ಶೈಲಿಯ ಕಾರ್ಯಕ್ರಮಗಳ ಮೂಲಕ ಸಂತೈಸುತ್ತ; ಅತ್ತ, ದೇಶವನ್ನು ಕಾ‌ರ್ಪೋರೇಟ್ ಲಾಭದ ಒಂದು ಅಂಗಡಿಯನ್ನಾಗಿ ಪರಿವರ್ತಿಸುವ ನೀತಿ ಇಂದು 'ಅಭಿವೃದ್ಧಿ' ಎಂದು ಮಾನ್ಯತೆ ಗಳಿಸುತ್ತಿದೆ.
ಇದರ ಪರಿಣಾಮವೆಂದರೆ, 'ಅಭಿವೃದ್ಧಿ' ಎಂಬುದು ಆತ್ಯಂತಿಕವಾಗಿ ಮಾನವ ಸಂಪನ್ಮೂಲಗಳ ಅಭಿವೃದ್ಧಿಯ ಸೂಚಕವಾಗದೆ, ನೈಸರ್ಗಿಕ ಸಂಪನ್ಮೂಲಗಳ ಹೆಚ್ಚೆಚ್ಚು ಹಾಗೂ ಹೊಸ ಹೊಸ ರೀತಿಯ ಬಳಕೆಯ ಸಾಧ್ಯತೆಗಳ ಸೂಚಕವಾಗುತ್ತಿದೆ. ಇದು, ಮನುಷ್ಯನನ್ನು ಕೇವಲ ವೈಯುಕ್ತಿಕ ಸುಖಾಪೇಕ್ಷೆಯ ಸಾಹಸಗಳಲ್ಲಿ ತೊಡಗಿಸಿ, ಅವನನ್ನು ಸಾಮಾಜಿಕ ಹಾಗೂ ಜೈವಿಕ ಎಚ್ಚರಗಳ ಸೂಕ್ಷ್ಮಗಳಿಗೆ ಎರವಾಗಿಸುತ್ತಿದೆ. ಇದರ ಪರಿಣಾಮವೆಂದರೆ, ಈವರೆಗೆ ರಾಷ್ಟ್ರದ ಚೈತನ್ಯವನ್ನು ಒಡೆದಿಟ್ಟದ್ದ ಜಾತಿ ವ್ಯವಸ್ಥೆ ಈಗ ಹೊಸ ಪ್ರತ್ಯೇಕತೆ ಹಾಗೂ ಶ್ರೇಣೀಕರಣಗಳ ರೂಪಗಳಲ್ಲಿ ಕಾಣತೊಡಗಿದ್ದು, ಸಾಮುದಾಯಿಕ ವೈರತ್ವದ ಹೊಸ ಹೊಸ ಮಾದರಿಗಳು ಸೃಷ್ಟಿಯಾಗುತ್ತಾ ಸಾಮಾಜಿಕ ಬಿಗುವು ಆಸ್ಫೋಟನಕಾರಿ ಹಂತ ತಲುಪಿದೆ. ಇಂತಹ ಆಸ್ಫೋಟಗಳು, ಹೆಚ್ಚುತ್ತಿರುವ ಆತ್ಮಹತ್ಯೆ, ಕೊಲೆ, ಹೊಸ ಹೊಸ ರೀತಿಯ ಲೈಂಗಿಕ ಅಪರಾಧಗಳು, ಕೋಮು ಅಶಾಂತಿಯೂ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಹಿಂಸಾಚಾರಗಳು ಮತ್ತು ದಿನ ನಿತ್ಯದ ರಸ್ತೆ ಅಪಘಾತಗಳ ರೂಪದಲ್ಲಿಯೂ ಕಾಣತೊಡಗಿವೆ. ಇವು ಈಗ ಬಿಡಿ ಬಿಡಿಯಾಗಿ ಅಲ್ಲಲ್ಲಿ ಚದುರಿದಂತೆ ಸಂಭವಿಸುತ್ತಿರುವಂತೆ ತೋರುತ್ತಿವೆಯಾದರೂ, ಇವೆಲ್ಲ ಬರಲಿರುವ ದೊಡ್ಡ ಸಾಮಾಜಿಕ ಆಶಾಂತಿಯ ಆರಂಭಿಕ ಸೂಚನೆಗಳಾಗಿದ್ದರೆ ಆಶ್ಚರ್ಯವಿಲ್ಲ.
ಇಂತಹ ಅಶಾಂತಿಯ ಮುನ್ಸೂಚನೆಗಳಾಗಿಯೇ, ಕರ್ನಾಟಕದಲ್ಲಿ ಬಹು ಹಿಂದೆಯೇ ದಲಿತ ಚಳುವಳಿ, ರೈತ ಚಳುವಳಿ,ಕನ್ನಡ ಚಳುವಳಿ ಹಾಗೂ ಪರಿಸರ ಚಳುವಳಿಗಳು ಆರಂಭವಾದವು. ಅವೆಲ್ಲ, ಕರ್ನಾಟಕದ ಅಭಿವೃದ್ಧಿ-ಆಡಳಿತದ ದಾರಿಯ ಬಗ್ಗೆ ಬಹು ಹಿಂದೆಯೇ ಸಾಮಾನ್ಯ ಜನತೆ ವ್ಯಕ್ತಪಡಿಸಲಾರಂಭಿಸಿದ್ದ ಪ್ರತಿಭಟನೆಯ ಸಂಕೇತಗಳೇ ಆಗಿದ್ದವು. ಅಷ್ಟೇ ಅಲ್ಲ, ಅವುಗಳಲ್ಲಿ ಕೆಲವು-ದಲಿತ ಹಾಗೂ ರೈತ ಚಳುವಳಿಗಳು-ಒಗ್ಗೂಡಿ ಕರ್ನಾಟಕಕ್ಕೆ ಪರ್ಯಾಯ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಬಲ್ಲ ಹೊಸ ರಾಜಕಾರಣವನ್ನು ಆರಂಭಿಸುವ ಸೂಚನೆಗಳನ್ನೂ ನೀಡಿದ್ದವು. ಆದರೆ, ಪ್ರೊ. ನಂಜುಂಡ ಸ್ವಾಮಿ ಹಾಗೂ ಪ್ರೊ. ಬಿ ಕೃಷ್ಣಪ್ಪನವರ ಹಠಮಾರಿತನಗಳಿಂದಾಗಿ ಅದು ಕೈಗೂಡಲಿಲ್ಲ. ನಂತರ ನಂಜುಂಡ ಸ್ವಾಮಿಯವರ ನೇತೃತ್ವದಲ್ಲಿ ರೈತ ಸಂಘ ಏಕಾಂಗಿಯಾಗಿ ಮಾಡ ಹೊರಟ ರಾಜಕಾರಣ ಅಷ್ಟೇನೂ ಯಶಸ್ವಿಯಾಗದೆ, ರೈತ ಸಂಘವೇ ಇಬ್ಭಾಗವಾಗುವುದರಲ್ಲಿ ಕೊನೆಗೊಂಡಿತು. ಇನ್ನು ಕೃಷ್ಣಪ್ಪನವರು ಜನತಾ ಪಕ್ಷದ ಬಾಗಿಲು ಬಡಿದು ಕೋಲಾರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಸೋತು ನಿರಾಶರಾಗಿ, ನಂತರದಲ್ಲೇ ಬಿ.ಎಸ್.ಪಿ. ಸೇರುವುದರೊಂದಿಗೆ ದಲಿತ ಚಳುವಳಿಯೂ ಛಿದ್ರವಾಗುತ್ತಾ ಹೋದದ್ದು ಈಗ ಇತಿಹಾಸ.
ಇಷ್ಟಾದರೂ, ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಆಸೆ ಇಂಗಿಲ್ಲ. ಅದಕ್ಕೆ ಕಾರಣ, ದಿನೇ ದಿನೇ ಅಧೋಗತಿಗಿಳಿಯುತ್ತಿರುವ ರಾಜ್ಯದ ರಾಜಕಾರಣವೇ ಆಗಿದೆ. ಹೋದ ವರ್ಷ ತಾನೇ, ದಲಿತ ಚಳುವಳಿಯೊಂದಿಗೆ ಇದ್ದೂ ಇಲ್ಲದಂತಿರುವ ನಾಯಕ ದೇವನೂರ ಮಹಾದೇವ ಹಾಗೂ ರೈತ ಸಂಘದ ಕೆ.ಎಸ್. ಪುಟ್ಟಣ್ಣಯ್ಯ ಸಮಾನ ಮನಸ್ಕರೊಡನೆ ಸೇರಿ ಆಗ ಅತಿ ಅನಿವಾರ್ಯವಾಗಿದ್ದಂತೆ 'ಸರ್ವೋದಯ ಕರ್ನಾಟಕ' ಪಕ್ಷದ ಸ್ಥಾಪನೆಯ ಘೋಷಣೆ ಮಾಡಿದರು. ಅದಕ್ಕೆ ತಕ್ಕದಾಗಿ ಕೆಲವು ನವೀನ ಕಾರ್ಯಕ್ರಮಗಳನ್ನೂ ರಾಜ್ಯದ ಜನತೆಯ ಮುಂದಿಟ್ಟರು. ಈ ಕುರಿತು ರಾಜ್ಯಾದ್ಯಂತ ಅಲ್ಲಲ್ಲಿ ಭರವಸೆಯ ಸಂಚಲನ ಶುರುವಾಗುತ್ತಿದ್ದಂತೆಯೇ, ಅದೇಕೋ ಏನೋ ಈ ಪ್ರಯತ್ನವೇ ಹಿನ್ನೆಲೆಗೆ ಸರಿದುಹೋಯಿತು! ಈ ಬಗ್ಗೆ ದೇವನೂರ ಮಹಾದೇವರನ್ನು ಕೇಳಿದರೆ, ಸಮಜಾಯಿಷಿ ಕೊಡುವ ಶೈಲಿಯಲ್ಲ್ಲಿ 'ಇಲ್ಲ, ಕೆಲಸ ನಡೀತಾ ಇದೆ' ಎನ್ನುತ್ತಿದ್ದಾರೆ. ಆದರೆ, ಎಲ್ಲಿ, ಏನು ಕೆಲಸ ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ! ಇನ್ನು ಪುಟ್ಟಣ್ಣಯ್ಯ ಮೊನ್ನೆ ಸಭೆಯೊಂದರಲ್ಲಿ ಸ್ವಯಂ ಪ್ರೇರಿತರಾಗಿ, 'ಪಕ್ಷದ ವಿಳಾಸವನ್ನ ಕಳೀದೆ ಜೋಪಾನವಾಗಿ ಮಡಿಕ್ಕಂಡಿದ್ದೀವಿ' ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ಈ ಪ್ರಯತ್ನದಲ್ಲಿ ತಮಗೇ ನಂಬಿಕೆ ಹೋಗಿರುವುದನ್ನು ಸೂಚಿಸಿದ್ದಾರೆ.
ಜನರಲ್ಲಿ ಸುಪ್ತವಾಗಿರುವ ಪರ್ಯಾಯ ರಾಜಕಾರಣದ ನಿರೀಕ್ಷೆಯ ಮೇಲಾಗಲೀ ಅಥವಾ ತಮ್ಮ ಮೇಲಾಗಲೀ ನಂಬಿಕೆ ಇಲ್ಲದೆ; ಬಂಗಾರಪ್ಪ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಸ್ಥಾಪಿಸಿ ಮತ್ತು ಸಿದ್ಧರಾಮಯ್ಯ ಕಾಂಗ್ರೆಸ್ ಸೇರಿ ತಮ್ಮ ಪ್ರಯತ್ನಕ್ಕೆ ಆಘಾತ ಮಾಡಿದರು ಎಂದು ಖಾಸಗಿಯಾಗಿ ಅಲವತ್ತುಕೊಳ್ಳುತ್ತಿರುವ ಈ ನಾಯಕರಿಗೆ, ತಾವು ಹೊಸ ರಾಜಕಾರಣದ ಕಾರ್ಯಕ್ರಮ ನಕ್ಷೆಯನ್ನು (Agenda) ಮುಂದಿಟ್ಟು, ಅದರ ಆಧಾರದ ಮೇಲೆ ಸದ್ಯದ ರಾಜಕಾರಣದ ಚೌಕಟ್ಟಿನಿಂದ ಹೊರಬರಲಿಚ್ಛಿಸುವ ಮರ್ಯಾದಸ್ಥ ರಾಜಕೀಯ ನಾಯಕರನ್ನು ಆಕರ್ಷಿಸುವ ರಚಾನತ್ಮಕ ಪ್ರಯತ್ನ ಮಾಡದೆ, ಇದಕ್ಕೆ ವಿರುದ್ಧವಾದ ಪ್ರಯತ್ನಕ್ಕೆ ಕೈಹಾಕಿದ್ದರಿಂದಲೇ 'ಸರ್ವೋದಯ ಕರ್ನಾಟಕ'ವನ್ನು ಜನತೆಯ ಮುಂದೆ ತರಲು ಧೈರ್ಯವಿಲ್ಲದಾಗಿದೆಯೇನೋ ಅನ್ನಿಸುತ್ತಿದೆ. ಅದೇನೇ ಇರಲಿ, 'ಸರ್ವೋದಯ ಕರ್ನಾಟಕ'ದ ತಾತ್ವಿಕ ಕಲ್ಪನೆ ನಿಜವಾಗಿಯೂ ಪರ್ಯಾಯ ರಾಜಕಾರಣಕ್ಕೊಂದು ಅದ್ಭುತ ಮಾದರಿಯಂತಿದ್ದು, ಅದರ ನಾಯಕರು ಜನತೆಯಲ್ಲಿ ನಂಬಿಕೆಯಿಟ್ಟು ತೆರೆಮರೆಯ ದಲಿತ-ರೈತ ರಾಜಕಾರಣದ ಜಟಿಲತೆಗಳನ್ನು ನಿರ್ಲಕ್ಷಸಿ ಸಾರ್ವಜನಿಕರ ಮಧ್ಯೆ ಬಂದಿದ್ದರೆ, ಈ ಹೊತ್ತಿಗೆ ಅದು ರಾಜ್ಯಾದ್ಯಂತ ಒಂದು ಆಂದೋಲನವಾಗಿ ಬೆಳೆಯುವ ಸಾಧ್ಯತೆಗಳಿದ್ದವು.
ಈ ಮಾತನ್ನು ನಾನು ಇಷ್ಟು ವಿಶ್ವಾಸದಿಂದ ಏಕೆ ಹೇಳುತ್ತಿದ್ದೇನೆಂದರೆ, ಪ್ರಸಕ್ತ ರಾಜಕಾರಣದಿಂದ ಬೇಸತ್ತು, ಹೊಸ ರಾಜಕೀಯ ಸಂಸ್ಕೃತಿಯ ಅಗತ್ಯವನ್ನು ಮನದಾಳದೊಳಗೆಲ್ಲೋ ಹೊಳಾಹಾಗಿ ಕಾಣುತ್ತಿರುವ ದೊಡ್ಡ ಜನಸ್ತೋಮವೇ ಇದ್ದು; ಇದರ ಬಿಡಿ ಬಿಡಿ ಅಭಿವ್ಯಕ್ತಿ ರೂಪಗಳಾಗಿ, ಈ ದಿಸೆಯಲ್ಲಿ ಕ್ರಿಯಾಶೀಲರಾಗಲು ಅಥವಾ ತಮ್ಮ ಮಿತಿಗಳಲ್ಲೇ ಕೊಡುಗೆ ಸಲ್ಲಿಸಲು ಸಿದ್ಧವಿರುವ ಗುಂಪುಗಳು ರಾಜ್ಯಾದ್ಯಂತ ಅಲ್ಲಲ್ಲಿ ಕ್ರಿಯಾಶಾಲಿಯಾಗಿರುವುದನ್ನು ನಾನು ಸ್ವತಃ ಗಮನಿಸಿದ್ದೇನೆ ಹಾಗೂ ಅವುಗಳಲ್ಲಿ ಕೆಲವುಗಳೊಡನೆ ಒಡನಾಡಿದ್ದೇನೆ. ಉದಾಹರಣೆಗೆ ಮೊನ್ನೆ ತಾನೆ, ಹಾಸನದಂತಹ ಚಿಕ್ಕ ಊರಲ್ಲಿ 'ಜನತಾ ಮಾಧ್ಯಮ' ಪತ್ರಿಕೆ ಸಂಪಾದಕ ಆರ್.ಪಿ.ವೆಂಕಟೇಶಮೂರ್ತಿ ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಚರ್ಚಿಸಲು ಕೊನೇ ನಿಮಿಷದಲ್ಲಿ ಕರೆದಿದ್ದ ಹಾಗೂ ಮಾರನೆಯ ದಿನ ಮಧ್ಯಾಹ್ನ ಅದೇ ಉದ್ದೇಶದಿಂದ ಏರ್ಪಡಿಸಿದ್ದ 'ತೇಜಸ್ವಿ ನಮನ' ಹಾಗೂ 'ಲೋಹಿಯಾ ನೆನಪು' ಕಾರ್ಯಕ್ರಮಕ್ಕೆ, ಅಂದು ಕಛೇರಿ ದಿನವಾಗಿದ್ದರೂ ಬಂದಿದ್ದ ಜನರ ಆಸೆ-ಆಸಕ್ತಿ ನೋಡಿದರೆ, 'ಸರ್ವೋದಯ ಕರ್ನಾಟಕ'ದ ನಾಯಕರು ನಂಬಿಕೆ ಕಳೆದು ಕೊಳ್ಳುವ ಅಗತ್ಯವಿಲ್ಲವೆಂದು ಕಾಣುತ್ತದೆ. ಏಕೆಂದರೆ, 'ಸರ್ವೋದಯ ಕರ್ನಾಟಕ'ದ ಸ್ಥಾಪನೆಯ ಸಂದರ್ಭದಲ್ಲಿ ಅದರ ನಾಯಕರೇ ಹೇಳಿಕೊಂಡಿದ್ದಂತೆ, ಅದರ ಸದ್ಯದ ಉದ್ದೇಶ ಅಧಿಕಾರ ಹಿಡಿಯುವುದಾಗಿರದೆ, ರಾಜ್ಯದಲ್ಲಿ ಹೊಸದೊಂದು ರಾಜಕೀಯ ಸಂಸ್ಕೃತಿಯನ್ನು ಬಿತ್ತಿ ಬೆಳೆಯುವುದೇ ಆಗಿದೆ.
ಇದು ಇಂದಿನ ತುರ್ತು ಅಗತ್ಯವಷ್ಟೇ ಅಲ್ಲ, ಈಗ ಕರ್ನಾಟಕವನ್ನು ಸಾರ್ವತ್ರಿಕ ಲೂಟಿಯಿಂದ ರಕ್ಷಿಸಲು ಅನಿವಾರ್ಯವೂ ಆಗಿದೆ. ಹಾಗಾಗಿ ಈ ದಿಸೆಯಲ್ಲಿ ಗಂಭೀರ ಪ್ರಯತ್ನ ಮತ್ತೆ ಆರಂಭವಾಗಬೇಕಿದೆ.
ಅಂದ ಹಾಗೆ: ಹತ್ತು ವರ್ಷಗಳ ಹಿಂದೆ ವೀರಶೈವ ಮೂಲಭೂತವಾದಿಗಳ ಒತ್ತಡದಿಂದಾಗಿ ಕರ್ನಾಟಕ ಸರ್ಕಾರ ಪಿ.ವಿ.ನಾರಾಯಣರ ಕಾದಂಬರಿ 'ಧರ್ಮಕಾರಣ'ದ ಮೇಲೆ ಹೇರಿದ್ದ ನಿಷೇಧವನ್ನು ಸರ್ವೋಚ್ಛ ನ್ಯಾಯಾಲಯ ಈಗ ಎತ್ತಿ ಹಿಡಿದಿದೆ. ಬಸವಣ್ಣನ ಜಾತಿ ಮೂಲವನ್ನು ಕೆದಕುವ ಗಂಭೀರ ಪ್ರಯತ್ನವೊಂದು ನಡೆದಿರುವಾಗಲೇ ಈ ತೀರ್ಪು ಹೊರಬಂದಿರುವುದು ಆಕಸ್ಮಿಕವಿದ್ದರೂ, ಕುತೂಹಲಕಾರಿಯಾಗಿದೆ! ಅದೇನೇ ಇರಲಿ, ಕರ್ನಾಟಕದ ಸಾಂಸ್ಕೃತಿಕ ಲೋಕವು ಹತ್ತು ವರ್ಷಗಳ ಹಿಂದೆ ಸಾಹಿತ್ಯ ಕೃತಿಯೊಂದರ ಸಾಮಾಜಿಕ ಪರಿಣಾಮಗಳನ್ನು ಕಾನೂನು ಚೌಕಟ್ಟಿನಲ್ಲಿ ಪರೀಶೀಲಿಸಲು-ಬಹುಶಃ, ಈ ಕಾದಂಬರಿ ಅಷ್ಟೇನೂ ಒಳ್ಳೆಯ ಕೃತಿಯಲ್ಲ ಎಂಬ ಹುಂಬ ಕಾರಣದ ಮೇಲೆ-ಅವಕಾಶ ಮಾಡಿಕೊಟ್ಟಿದ್ದರಲ್ಲಿ ತೋರಿದ ಹೊಣೆಗೇಡಿತನ, ಎಂತಹ ಅಕ್ಷಮ್ಯ ಅಪರಾಧವಾಗಿದೆ ಎಂಬುದು ಅದಕ್ಕೆ ಈಗಲಾದರೂ ಗೊತ್ತಾದರೆ ಸಂತೋಷ. ಏಕೆಂದರೆ, ಮುಂದಿನ ದಿನಗಳು ಕರ್ನಾಟಕದಲ್ಲಿ ಸಾಹಿತ್ಯ-ಸಂಸ್ಕೃತಿಗಳಿಗೆ ಕಷ್ಟದ ದಿನಗಳು ಕಾದಿರುವಂತಿದೆ.

Rating
No votes yet

Comments