ಸುರಿವ ಮಳೆ, ತಣ್ಣಗೆ ಬೀಸುವ ಗಾಳಿಯಲ್ಲೂ ಹರಿಯುತ್ತಿದೆ ಬೆವರು...!

ಸುರಿವ ಮಳೆ, ತಣ್ಣಗೆ ಬೀಸುವ ಗಾಳಿಯಲ್ಲೂ ಹರಿಯುತ್ತಿದೆ ಬೆವರು...!

ಎನ್‌ಕೌಂಟರ್, ಬಸ್ಸಿಗೆ ಬೆಂಕಿ, ನಗನಾಣ್ಯ ಲೂಟಿ-
ಏನಾಗುತ್ತಿದೆ... ಎತ್ತ ಸಾಗುತ್ತಿದೆ ಸುಂದರ ಮಲೆನಾಡು?

ಧೋ... ಎಂದು ಸುರಿಯುವ ಮಳೆ... ಜೊತೆಗೆ ಕೊರೆಯುವ ತಣ್ಣನೆ ಗಾಳಿ. ಈ ಮಧ್ಯೆಯೂ ಮಲೆನಾಡಿನ ಮಂದಿ ಬೆಚ್ಚಿ ಬಿದಿದ್ದಾರೆ. ಮೈಯಲ್ಲಿ ಬೆವರು.
ಭೋರ್ಗರೆವ ಗುಂಡಿನ ಸದ್ದು, ಅಲ್ಲಲ್ಲಿ ಕಾಣಿಸಿ ಉಪಟಳ ಕೊಡುವ ನಕ್ಸಲರು, ಅವರನ್ನು ಹಿಂಬಾಲಿಸಿ ಅತ್ತಿತ್ತ ಸುಳಿದಾಡುವ ಪೊಲೀಸರ ಬೂಟಿನ ಸದ್ದು ದಟ್ಟ ಹಸಿರು ಸೆರಗುಹೊದ್ದ ಮಲೆನಾಡಿನ ಚಿತ್ರಣವನ್ನೇ ಬದಲು ಮಾಡಿದೆ.
ಸತತವಾಗಿ ಕೇಳಿಸುವ ಗುಂಡಿನ ಸದ್ದಿಗೆ ಸದ್ದಿಲ್ಲದೇ ಇಲ್ಲಿನ ಮಂದಿ ಮನೆಹೊಕ್ಕು ಕುಳಿತಿದ್ದಾರೆ.
ತಮ್ಮ ಹಳ್ಳಿ, ಊರಿನ ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬರನ್ನೂ ಕಿಟಕಿಯಿಂದಲೇ ಇಣುಕಿ ಅನುಮಾನಿಸುತ್ತಾ ನೋಡುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಮೆಣಸಿನ ಹಾಡ್ಯ, ಶಿವಮೊಗ್ಗ ಜಿಲ್ಲೆಯ ತಲ್ಲೂರು ಅಂಗಡಿಯಲ್ಲಿ ನಡೆದ ನಕ್ಸಲರಿಂಗ ಸಂಬಂಧಿಸಿದ ಎರಡು ಘಟನೆಗಳು ಈಗ ಪ್ರದೇಶದ ಜನರನ್ನು ತಬ್ಬಿಬ್ಬು ಮಾಡಿದೆ. ಊರಲ್ಲಿ ಇರಲೂ ಆಗಲೇ, ಬಿಡಲೂ ಆಗದೇ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿದ್ದಾರೆ.

ಆದಿವಾಸಿಗಳ ಪರವಾಗಿ ನಾವು ಎಂದು ಹೋರಾಟಕ್ಕಿಳಿದ ನಕ್ಸಲರು, ಅವರನ್ನು ಸದೆಬಡಿಯಲು ಹೊರಟ ಪೊಲೀಸರ ಮಧ್ಯೆ ಈಗ ನಿತ್ಯ ಕಣ್ಣಾಮುಚ್ಚಾಲೆ.
ಇಷ್ಟರ ಮಧ್ಯೆ ನಕ್ಸಲರಿಂದ ಹಣಕ್ಕಾಗಿ ಜನರ ಪೀಡನೆ. ನಗ ನಾಣ್ಯ ಲೂಟಿ. ಅಷ್ಟೋ ಇಷ್ಟು ಕೂಡಿಟ್ಟ ಹಣ, ಬಂಗಾರವನ್ನು ನಕ್ಸಲರು ಬಂದೂಕು ತೋರಿಸಿ ತಪರಾಕಿಗೆ ತಟ್ಟಿ ಹೊತ್ತೊಯ್ಯುತ್ತಿರುವುದು ಈಗ ತಡವಾಗಿ ಬೆಳಕಿಗೆ ಬರ ಹತ್ತಿದೆ.
ಮೊದಲಿಂದಲೂ ಗುಸು ಗುಸುವಾಗಿದ್ದ ಈ ಸುದ್ದಿ ಇದೀಗ ಸತ್ಯವಾಗುತ್ತಿದೆ. ಕಳೆದ ವಾರದೊಳಗೆ ಎರಡು ಈರೀತಿಯ ಘಟನೆ ನಡೆದಿದೆ. ಲಕ್ಷಾಂತರ ರುಪಾಯಿ ನಕ್ಸಲರ ಪಾಲಾಗಿದೆ.
ಇಷ್ಟರ ಮಧ್ಯೆ ನೆತ್ತರ ಹರಿಯುತ್ತಿದೆ. ನಕ್ಸಲರು, ಸಾರ್ವಜನಿಕರು ಈಗ ಪೊಲೀಸರು ಗುಂಡಿನ ದಾಳಿಗೆ ಬಲಿಯಾಗುತ್ತಿದ್ದು, ದೊಡ್ಡದೊಂದು ರಕ್ತಕೋಡಿ ಹರಿಯುವ ಎಲ್ಲ ಲಕ್ಷಣ ಕಂಡುಬರುತ್ತಿದೆ.
ಸಾವು ಇಲ್ಲಿ ಮಕ್ಕಳ ಆಟದಂತೆ. ಪೊಲೀಸರ ಮಾಹಿತಿ ದಾರನೆಂದು ನಕ್ಸಲರು ಕೊಂದರೆ, ಅವರನ್ನು ಅಟ್ಟಿಸಿಕೊಂಡು ಬರುವ ಪೊಲೀಸರು ಅಡ್ಡಾದಿಡ್ಡಿ ಗುಂಡು ಹಾರಿಸಿ ಆದಿವಾಸಿಗಳನ್ನೂ ಕೊಂದಾಗಿದೆ. ಹೀಗೆ ಪ್ರತಿಕಾರ ಖಾರವಾಗಿದೆ.
ರಾತ್ರಿ ಬೆಳಗಾಗುವುದರೊಳಗೆ ಏನೇನೋ ಘಟನೆಗಳು ಇಲ್ಲಿನ ಮುಗ್ದ ಮನಸ್ಸನ್ನು ತಲ್ಲಣಗೊಳಿಸಿದ್ದಂತೂ ನಿಜ. ಪೊಲೀಸರ ಸ್ಥಿತಿಯೇನು ಉತ್ತಮವಾಗಿಲ್ಲ. ದಟ್ಟವಾಗಿ ಬೀಳುತ್ತಿರುವ ಮಳೆ ಮಧ್ಯೆ ಕಾಡಿನಲ್ಲಿ ಇಂಬಳಗಳ ಕಾಟದಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರ ಸಿಟ್ಟು ನೆತ್ತಿಗೇರಿದೆ.
ಒಟ್ಟಿನಲ್ಲಿ ಒಂಟಿ ಮನೆಯ ಮಲೆನಾಡಿನ ಮುಗ್ದ ಮನಸ್ಸಿನ ಮೇಲೆ ಗಾಡವಾದ ಪ್ರಭಾವ ಬೀರಿದೆ.
೨೦೦೩ರಲ್ಲಿ ಪಾರ್ವತಿ, ಹಾಜಿಮಾ, ೨೦೦೫ರಲ್ಲಿ ಸಾಕೇತ್ ರಾಜನ್, ಶಿವಲಿಂಗು, ೨೦೦೬ರಲ್ಲಿ ದಿನಕರ, ೨೦೦೭ರಲ್ಲಿ ಪರಮೇಶ ಹಾಗೂ ಗೌತಮ್ ಪೊಲೀಸರ ಗುಂಡಿಗೆ ಜೀವ ಕಳಕೊಂಡವರು.
ಹಾಗೆಯೇ ವಿವಿಧ ಕಾರಣಗಳಿಗಾಗಿ ನಕ್ಸಲರ ಗುಂಡಿಗೆ ೨೦೦೪ರಲ್ಲಿ ಪಾವಗಡ ತಾಲೂಕು ವೆಂಕಟಮ್ಮನಹಳ್ಳಿಯಲ್ಲಿ ಏಳು ಪೊಲೀಸ್ ಪೇದೆ, ೨೦೦೫ರಲ್ಲಿ ಗಿರಿಜನ ಮುಖಂಡ ಶೇಷಯ್ಯ ಗೌಡ್ಲು, ೨೦೦೭ರಲ್ಲಿ ಕೆಸಮುಡಿ ವೆಂಕಟೇಶ್ ಹಾಗೂ ಪೊಲೀಸ್ ಎಎಸ್‌ಐ ವೆಂಕಟೇಶ್ ಬಲಿ.
ಇದರ ಮಧ್ಯೆ ೨೦೦೩ರಲ್ಲಿ ನೆಮ್ಮಾರು ಅರಣ್ಯ ಪ್ರವಾಸಿ ಮಂದಿರಕ್ಕೆ ನಕ್ಸಲರಿಂದ ಬೆಂಕಿ, ೨೦೦೪ರಲ್ಲಿ ಪೊಲೀಸ್ ಪೇದೆಯ ಬಂದೂಕು ಅಪಹರಣ, ೨೦೦೪ರಲ್ಲಿ ಹೆಮ್ಮಿಗೆ ಚಂದ್ರಕಾಂತ್ ಮೇಲೆ ಮಾರಣಾಂತಿಕ ಹಲ್ಲೆ, ೨೦೦೫ರಲ್ಲಿ ಕಲಗಾರು ಉಮೇಶ್‌ಗೆ ಬೆದರಿಕೆ, ೨೦೦೫ರಲ್ಲಿ ಪೊಲೀಸ್ ವಾಹನ ಜಖಂ, ೨೦೦೬ಲ್ಲಿ ಕೆರೆಕಟ್ಟೆ ಅರಣ್ಯ ಕಚೇರಿ ಮೇಲೆ ದಾಳಿ, ಕಂಪ್ಯೂಟರ್, ವಾಹನಕ್ಕೆ ಹಾನಿ, ೨೦೦೭ರಲ್ಲಿ ಬಸ್‌ಗೆ ಬೆಂಕಿ, ಕೇಶವ ಹೆಗ್ಡೆ ಮನೆ ಸೇರಿ ೫ ಮನೆ ಸತತವಾಗಿ ಲೂಟಿ. ಜನಪ್ರತಿನಿಧಿಗಳಿಗೆ ಬೆದರಿಕೆ.
ಹೀಗೆ ಎಡಬಿಡದೆ ನಡೆದ ಘಟನೆಗಳು ಮಲೆನಾಡನ್ನು ಕಂಗಾಲು ಮಾಡಿದೆ.
ಎಲ್ಲೆಲ್ಲೂ ಅನುಮಾನದ್ದೇ ಕಾರುಬಾರು. ಆಗುಂಬೆ ಸುತ್ತಮುತ್ತ ಯಾರಾದರೂ ಕೈಯಲ್ಲಿ ದಿನಪತ್ರಿಕೆ ಹಿಡಿದು ಓಡಾಡಿದ್ದು ಕಂಡರೆ ಪೊಲೀಸರಿಗೆ ಅನುಮಾನ, ಆತ ನಕ್ಸಲರಿಗೆ ದಿನಪತ್ರಿಕೆ ಕೊಂಡೊಯ್ಯುತ್ತಿದ್ದಾನೆಂಬ ಶಂಕೆ. ರಸ್ತೆಯಲ್ಲಿ ಹೊಸ ಮುಖ ಕಂಡರೆ ಜನರಿಗೆ ಭಯ, ಪೊಲೀಸರು ಒಂದೆರಡು ಬಾರಿ ಯಾರ ಮನೆಗಾದರೂ ಬಂದು ಹೋದರೆ ನಕ್ಸಲರಿಗೆ ಆತ ಪೊಲೀಸ್ ಮಾಹಿತಿದಾರ ಎಂಬ ನಂಬಿಕೆ ಹೀಗೆ ಅನುಮಾನಗಳ ಹುತ್ತ ದೊಡ್ಡದಾಗಿ ಬೆಳದಿದೆ.
ಮನೆ ಮನೆಗೆ ನುಗ್ಗಿ ದರೋಡೆ ಮಾಡುವ ನಕ್ಸಲೀಯರು ಈ ಭಾಗದ ಜನರ ಸಹಾನುಭೂತಿಯನ್ನು ಕಳೆದುಕೊತ್ತಾರೆಂಬ ಆತಂಕವೇ ಇಲ್ಲ. ನಕ್ಸಲರೀಗ ಆ ಬೆಳವಣಿಗೆಯ ಹಂತದ ಅವಶ್ಯಕತೆಗಳನ್ನೆಲ್ಲಾ ಮೀರಿ ಬೆಳೆದಿದ್ದಾರೆ. ಅವರಿಗೀಗ ಅನುಕಂಪವೇನೂ ಬೇಕಾಗಿಲ್ಲ. ಬದಲಾಗಿ ಬಂದೂಕಿನ ಭಯವನ್ನು ಮುಂದೊಡ್ಡಿ ತಮ್ಮ ಉದ್ದೇಶ ಈಡೇರಿಸಿಕೊಳ್ಳುವಷ್ಟು ಪ್ರಬಲರಾಗಿದ್ದಾರೆ ಎನ್ನುವ ಉತ್ತರವೂ ದೊರೆಯುತ್ತದೆ.
ಬಂದ್‌ಗೆ ಕರೆ ಕೊಟ್ಟು, ರಾಜ್ಯ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ವಾಹನ ೨೪ ಗಂಟೆ ಓಡಾಡಬಾರದೆಂದು ತಾಕೀತು ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ ನಕ್ಸಲರು.
ಪೊಲೀಸರು ತಮ್ಮ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಲಕ್ಷ್ಯವೇ ಇಲ್ಲದಂತೆ ನಕ್ಸಲೀಯರು ತಮ್ಮ ಕೃತ್ಯ ಅವ್ಯಾಹತವಾಗಿ ನಡೆಸುತ್ತಿರುವುದನ್ನು ನೋಡುವಾಗ ಬಹುಶಃ ಅವರು ಯಾವ ದಮನ ಪ್ರಯತ್ನಕ್ಕೂ ಬಗ್ಗೆವು ಎಂಬ ಸಂದೇಶವನ್ನು ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಗುಮಾನಿ ಬರುತ್ತದೆ.
ಹೀಗೆ ಮಲೆನಾಡು ಶಾಂತಿಯ ವಿಚಾರದಲ್ಲಿ ಮಲಿನ ನಾಡಾಗುತ್ತಿದೆ. ಸರ್ಕಾರ ಕೂಡಲೇ ಗಮನ ಹರಿಸಬೇಕು. ಜೀವಹಾನಿಗೆ, ಅಶಾಂತಿಗೆ ಫುಲ್‌ಸ್ಟಾಫ್ ಇಡಬೇಕು.

Rating
No votes yet