ಎದೆ ಕದವ ತಟ್ಟುತಾನ

ಎದೆ ಕದವ ತಟ್ಟುತಾನ

ಕವನ

ಚೆಂದ ಇವನ ಸ್ನೇಹದಾಟ

ಇಂದು ನನಗೆ ಸಿಕ್ಕೈತೆವ್ವ

ಅತ್ತಕರೆದು ಚಿತ್ತ ಸೆಳೆದು

ಜ್ಞಾನಗುಗ್ಗರಿ ತಿನಿಸೈತೆವ್ವ.

 

ಕರೆಕರೆದು ತೋಟಕೆ ನನ್ನ ಪ್ರಕೃತಿಯ ತೋರಿಸುತಾನ

ಮುಂಗಾರಿನ ಪಚ್ಚೆಪೈರು ತುಂಬಿತ್ತು ಹೊಲದ ಬಯ್ಲು

ಯಾವ ಜನ್ಮದ ಪುಣ್ಯವಿದವ್ವ ಅವನೆದೆಯಲಿ ಕಂಡೆ ನನ್ನವ್ವ.

 

ಸುಯ್ ಸುಯ್ ಸುಯ್ ಸುಳಿಯುತಾವ ತಂಪುಗಾಳಿ ಮುತ್ತುತಾವ

ಇವ ಕಿವಿಯಲಿ ಉಲಿಯುತಾನ ಜಗದರಿವ ಮೂಡಿಸುತಾನ

ಹ್ಯಾಗೊ ಏನೋ ಮನವ ಕದ್ದು ಬುದ್ಧಿಯನ್ನೇ ಆಳುತಾನ.

 

ಸುರ್ ಸುರ್ ಸುರ್ ಸೇದುತಾನ ಗುಡುಗುಡಿ ಹೊಗಿಬಿಡುತ್ತಾನ

ಬಿಡು ಎಂದರೆ ಒಲ್ಲೆ ಅಂತ ನಲ್ಲೆಗೆ ಅದ ಹೋಲಿಸುತಾನ

ಕೊಡಲಿ ಅವಗೆ ಆರೋಗ್ಯ ದೇವನಲ್ಲಿ ಬೇಡುತೇನ.

 

ಎಡಬಿಡದೆ ತಿಳಿಸುವುದೇನ ನಾಡಿನ ಸಿರಿ ಸಂಪದವನ್ನ

ಮೆದುಳಿಗೆ ಕೈ ಹಾಕುತಾನ ಎದೆ ಕದವ ತಟ್ಟುತಾನ

ಅವ ಎಂದರೆ ನನ ಗೆಳೆಯ ಚಿಂತನೆಯಲಿ ಗೆಲುವ ಇಳೆಯ.

                                *** ಗುರುರಾಜ್ ಹಾಲ್ಮಠ್, ಕಡೂರು.