ಎಲ್ಲರಂತಲ್ಲ ನಾವು

ಎಲ್ಲರಂತಲ್ಲ ನಾವು

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀನಿವಾಸ ಪಾ. ನಾಯ್ಡು
ಪ್ರಕಾಶಕರು
ಅಕ್ಷರ ಚಪ್ಪರ ಪ್ರಕಾಶನ, ಲಕ್ಕಸಂದ್ರ ಬಡಾವಣೆ, ಬೆಂಗಳೂರು -೫೬೦೦೩೦
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಶ್ರೀನಿವಾಸ ಪಾ.ನಾಯ್ಡು ಅವರು ಬರೆದ ‘ಎಲ್ಲರಂತಲ್ಲ ನಾವು' ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಲೇಖಕ ವಾಸುದೇವ ನಾಡಿಗ್. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ಹೀಗಿದೆ...

“ಭಾವಲೋಕವು ಬತ್ತಬಾರದು. ಅದನ್ನು ಮೊಗೆ ಮೊಗೆದು ಕೊಡುವ ಸೂಕ್ಷ್ಮ ಬೊಗಸೆ ಖಾಲಿಯಾಗಬಾರದು. ಶ್ರೀನಿವಾಸ್ ಅವರ ಹಸ್ತಪ್ರತಿ ಓದುವಾಗ ಹೊಳೆದ ಯೋಚನೆಗಳಿವು. ಇದು ವಿಮರ್ಶೆ ಅಲ್ಲ ಮತ್ತು ತಕ್ಕಡಿಯೂ ಅಲ್ಲ. ಕವಿತೆಯೇ ಹೀಗೆ. ಅವರವರ ಭಾವಕೋಶದ ಅವರವರದೇ ಕಾವ್ಯ ಮೀಮಾಂಸೆ. ಮೌಲ್ಯಮಾಪನ ಇಲ್ಲಿ ಮುಖ್ಯವಲ್ಲ ಒಂದು ವಿನಮ್ರ ಓದು ಮತ್ತು ಆ ಮೂಲಕ ಅನಿಸುವ ಪ್ರಾಮಾಣಿಕ ಅಭಿಪ್ರಾಯಗಳಷ್ಟೇ ಮುಖ್ಯ. ಪಂಪನಾದಿಯಾಗಿ ಈವರೆಗೂ ಯಾವುದು ಕಾವ್ಯ? ಎಂಬ ಪ್ರಶ್ನೆಗೆ ಉತ್ತರವಾಗೇ ಅನೇಕ ಕವಿಗಳು ಬರೆದಿದ್ದಾರೆ. ‘ಇದು ನನ್ನ ಪಾಲಿನ ಕಾವ್ಯ’ ಎಂಬ ನಿಲುವೇ ಆಯಾ ಕವಿಗಳ ಶಕ್ತಿ ಮತ್ತು ಮಿತಿಗಳನ್ನು ಹೇಳಿಬಿಡುತ್ತವೆ. ಹಾಗಾಗಿ ಪೊಯಟ್ರಿ ಎನ್ನುವುದು ಭಾವವಲಯದ ಸ್ವಗತ. ಅದು ಚಾಚಿಕೊಳ್ಳುವ ಲೋಕಾನುಭವದ ಮೂಲಕ ಅದರ ಅಸ್ತಿತ್ವ ಉಳಿಯುತ್ತದೆ.

‘ಎಲ್ಲರಂತಲ್ಲ ನಾವು’ ಎಂಬ ಪದ್ಯ ಗುಚ್ಚ ಹೇಳೋದೂ ಇದೇ ಮಾತನ್ನೇ. ಸಂಕಲನದ ತುಂಬೆಲ್ಲ ಅನುರಣಿಸುವ ದನಿ ಎಂದರೆ ಉಳಿಸಿಕೊಳ್ಳಬೇಕಾದ ಅನನ್ಯತೆ ಮತ್ತು ತನ್ನತನದ ಛಾಪು. ಮೊದಲ ಸಂಕಲನದ ಸಹಜವಾದ ಮಿತಿಗಳನ್ನು ಒಳಗೊಂಡಂತೆ ಇಲ್ಲಿ ಅನೇಕ ಹೊಸ ಸಾಧ್ಯತೆ ಸುಳಿಮಿಂಚು ಮತ್ತು ವಸ್ತುಗ್ರಹಿಕೆಯಲ್ಲಿ ಹೊಸತನ ತೋರುವ ಆಸಕ್ತಿ ಮತ್ತು ಧ್ಯಾನ ಕಾಣಬಹುದು.

‘ಕತ್ತಲ ನೆತ್ತಿಯ ಕುಕ್ಕಿ ಬಂದ ಮಾಯಾಕಾರ ಜಗದ ಬಣ್ಣಗಾರ’ ಎಂಬ ಸಾಲಿನಲ್ಲಿ ಮೂಡುವ ಪದ್ಯತನ ಇದಕ್ಕೆ ಸಾಕ್ಷಿ. ಹೀಗೆ ಇಲ್ಲಿ ಅನೇಕ ಹೊಸಬಗೆಯ ಚಿತ್ರಗಳನ್ನು ಕಾಣಬಹುದು.

‘ದೇವರ ರುಜುವಿಗೆ ಸಾಕ್ಷಿಯಾದ ಬೆಳೆಗಾರ’ ಎಂಬ ಆಲೋಚನೆಯನ್ನು ಗಮನಿಸಿದರೆ ಶ್ರೀನಿವಾಸ್ ಅವರು ಹೊಸ ಪರಿಭಾಷೆಗಾಗಿ ತುಡಿಯುವಿಕೆ ಕಾಣುತ್ತದೆ. ಒಂದು ಕವನ ಸಂಕಲನ ಎಂದರೆ ಅದು ಅನೇಕ ಬಿಡಿ ಬಿಡಿ ಕವನಗಳ ಸಂಗ್ರಹವಲ್ಲ ಬದಲಿಗೆ ಒಟ್ಟು ಸೃಜಿಸುವ ದನಿಮುಖ್ಯವಾಗುತ್ತದೆ. ಒಂದು ಕವಿತೆಯ ಬೆನ್ನಲ್ಲೇ ಮೂಡುವ ಹತ್ತಾರು ಭಾವದ ಸಾಲುಗಳು ಮೂಲ ಒಂದು ದನಿಗಾಗೇ ಶ್ರಮಿಸುತ್ತಿರುತ್ತದೆ. ಈ ಸಂಕಲನದಲ್ಲಿ ಈ ಭಾವ ಅನುಭವಕ್ಕೆ ಬರುತ್ತದೆ. ಇದೇ ಪ್ರಾಮಾಣಿಕ ಕವಿಯ ಯಶಸ್ಸಿನಕಡೆಯ ಚಲನೆ ಕೂಡಾ. ಇದನ್ನೇ ಬಹಳ ತಾತ್ವಿಕವಾಗಿ ‘ಒಬ್ಬ ಕವಿ ತನ್ನ ಜೀವಮಾನದಲ್ಲಿ ಬರೆಯುವುದು ಒಂದು ಕವನ ಮಾತ್ರ ಅಥವಾ ಅದೂ ಸಾಧ್ಯವಾಗದೆಯೂ ಇರಬಹುದು ಕೂಡಾ ಅಥವಾ ಆ ಒಂದು ಕವನದ ಮುಂದುವರಿಕೆ ಅದನ್ನೇ ಎಷ್ಟು ಸರಳವಾಗಿ ಹೀಗೆ ಶ್ರೀನಿವಾಸ ನಾಯ್ಡು ಅವರು ಹೇಳಿದ್ದಾರೆ

ಏಕೋ ಕವಿತೆ ಬರೆದ ಮೇಲೆ
ಹೀಗನಿಸುತ್ತಿದೆ
ಬರೆಯಬಾರದಿತ್ತು ಕವಿತೆಯನ್ನು
ಬರೆದು ಖಾಲಿಯಾಗಬಾರದಿತ್ತು
ಕವಿಯ ಮನ
ಬರೆಯದ ಕವನ ಚೆಂದಿತ್ತು
ಕುತೂಹಲವಿತ್ತು

ಕವಿತೆ ಏನನ್ನು ಒಳಗೊಳ್ಳುತ್ತದೆ ಎಂಬ ಪ್ರಶ್ನೆಗಿಂತ ಕವಿ ವಸ್ತು ಲೋಕವನ್ನು ಹೇಗೆ ಗ್ರಹಿಸುತ್ತಾನೆ ಎಂಬುದರ ಮೇಲೆ ಅದರ ತಾಕತ್ತು ಅಡಗಿದೆ. ಹೊರಗೆ ಎಸೆವ ಕಸದಿಂದ ಹಿಡಿದು ಕೊನೆಯಿರದ ಬೆಳದಿಂಗಳ ಬಯಲತನಕ ಈ ಲೋಕ ಹಬ್ಬಿದೆ. ಹಾಗಾಗಿ ವಸ್ತುವನ್ನು ವಿಸ್ತರಿಸುವ ಹೊಸ ಆಯಾಮವನ್ನು ಕೊಡುವ ಬಗೆ ಇದೆ ನೋಡಿ ಅದಕ್ಕೆ ಧ್ಯಾನ ಬೇಕು ಮಾಗಬೇಕು. ಇಲ್ಲಿ ಇಂತಹ ದಾಟುವ ಮತ್ತು ಮಿತಿಯನ್ನು ಅರಿಯುವ ಸೂಚನೆಗಳನ್ನೂ ಕಾಣಬಹುದು.

ಮತ್ತೆ ಮತ್ತೆ ದೀಪ ಬೆಳಗಿಸಬೇಕು
ನನ್ನೊಡಲ ಕತ್ತಲೆ ತಣಿಸಬೇಕು
ನನ್ನನ್ನು ನಾನು ಕಂಡುಕೊಳ್ಳಬೇಕು.
ಎಂಬ ಮಾತು ಕೇವಲ ವ್ಯಕ್ತಿನಿಷ್ಟ ವಾಗದೆ ಕಾವ್ಯ ನಿಷ್ಟವೂ ಆಗಿದೆ

ಶ್ರೀನಿವಾಸ್ ನಾಯ್ಡು ಅವರ ಪದ್ಯದ ಮೂಕಭಾವವೇ ವಿನೀತ ಮತ್ತು ನಯನಾಜೂಕಿನದ್ದು ಸಮಾಜದ ಅಂಕುಡೊಂಕುಗಳನ್ನೂ ಕೂಡಾ ಅರಚಾಟದ ದನಿಯಲ್ಲಿ ಹೇಳದೆ ಮೆಲುದನಿಯಲ್ಲಿ ಹೇಳುತ್ತಾರೆ. ಇಲ್ಲಿನ ಕೆಲವು ಸಮುದಾಯ ಪರವಾದ ಮಾತು ಮತ್ತು ಜೀವ ವಿರೋಧಿ ಧೋರಣೆಗಳನ್ನು ಕುರಿತ ಅಸಹನೆ ಕೂಡಾ ಅತ್ಯಂತ ತಣ್ಣನೆಯ ನೆಲೆಯಲ್ಲಿ ಗ್ರಹಿಸುತ್ತಾರೆ ಕವಿಗೆ ಅಮ್ಮ ಅಪ್ಪ ಮತ್ತು ಇತರ ಭಾವನಾತ್ಮಕ ಸಂಬಂಧಗಳ ಜೊತೆಗೆ ಒಡನಾಡುವಾಗ ಕೂಡಾ ನಾಯ್ಡು ಅವರ ಸ್ಪಂದನ ಸಂಯಮದ್ದು.

ಅಮ್ಮನ ಸೀರೆ
ಬರಿ ಸೀರೆ ಅಲ್ಲ
ನೆನಪುಗಳ ಆಗಸ
ನಮ್ಮೊಳಗಿನ ಸುಖದುಃಖಗಳ
ನಿತ್ಯ ನೂತನ ದಿನಚರಿ ಪುಸ್ತಕ

ಕವಿ ಇರೋ ವಸ್ತುವಿನ ಮೂಲಕವೇ ಹೊಸದನು ಕಾಣಿಸುವುದೇ ನಿಜವಾದ ಕವಿತೆ ಅನೇಕ ಕಡೆ ಇದು ಇಲ್ಲಿ ಕಾಣಬಹುದು. ಸರಳವಾದ ಮತ್ತು ನೇರವಾದ ಭಾಷೆ ಜನಜನಿತವಾದ ಚಿತ್ರಗಳ ಮೂಲಕವೇ ಶ್ರೀನಿವಾಸ್ ಅವರು ಕವಿತೆಯನ್ನು ಅನಾವರಣಗೊಳಿಸುತ್ತಾರೆ. ‘ ಸಾಯಬೇಕು’ ‘ ಸಮಾಧಾನ’ ‘ ಕಳೆದು ಹೋಗಿದೆ’ ‘ಬೆಳಕ ಹೂ’ ‘ ಜೋಗಿ’ ‘ಓದು’ ‘ ಬಲಿದಾನ’ ‘ ನೀನೆಂದರೆ’ ‘ ಚಿತ್ರದ ಬೆನ್ನು’ ‘ ಪ್ರಶ್ನೆಪತ್ರಿಕೆ’ ‘ಅನುಭವ’ ಬನ್ನಿ ಸೋದರರೆ ಬನ್ನಿ’ ಇವು ಈ ದೃಷ್ಟಿಯಿಂದ ಗಮನಾರ್ಹ.

ಅನುಭವಗಳನೆಲ್ಲ ಕವಿತೆಮಾಡುವುದು ಸುಲಭವಲ್ಲ ಎಂಬ ಬೇಸಿಕ್ ಅರಿವು ಇರುವ ಕವಿಯ ಸವಾಲುಗಳೇ ಬೇರೆ ಮತ್ತು ಭಿನ್ನ. ಶ್ರೀನಿವಾಸ್ ಅವರು ಇಂತವನ್ನು ಬಲ್ಲರು ಹಾಗಾಗೇ ಕೆಲವು ಕವಿತೆಗಳು ಪೂರ್ಣವಾಗದ ಭಾವವೂ ಅವರು ಬಲ್ಲರು. ಕವಿತೆ ಸರಳವಲ್ಲ ಎಂಬ ಎಚ್ಚರ ಮತ್ತು ಅನುಭವನ್ನು ಕಲಾತ್ಮಕ ಗೊಳಿಸಬೇಕೆಂಬ ಒತ್ತಾಸೆಗಳ ಸ್ವರೂಪವನ್ನೂ ಕೂಡಾ ಅವರು ಬಲ್ಲರು.

ಹಾಗಾಗೇ ಈ ಸಂಕಲನದ ಮೂಲಕ ಅವರು ಕಂಡುಕೊಂಡ ಮಿತಿ ಮತ್ತು ಅಸಮಾಧಾನಗಳಿಂದ ಬಿಡಿಸಿಕೊಳ್ಳಬೇಕಾದ ಕೌಶಲ್ಯತೆ ದಕ್ಕಬಲ್ಲದು. ಅದಕ್ಕೆ ಅನುಭವವನ್ನು ಮಾಗಿಸಿಕೊಂಡು ಅದನ್ನು ಸಾಂದ್ರಗೊಳಿಸಿ ರೂಪಕಾತ್ಮಕವಾಗಿ ಹೇಳಬೇಕಾದ ಅಗತ್ಯ ಇದೆ. ಪದಗಳು ಮಾತಾಡಬಾರದು ದನಿಗಳು ಮಾತಾಡಬೇಕಿದೆ. ‘ಅನುಭವ’ ಎಂಬ ಒಂದು ವಿಭಿನ್ನವಾದ ಪದ್ಯವೊಂದು ಇದನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದೆ. ಪದಗಳ ತೂಕಬದ್ಧ ಬಳಕೆ, ಸಾಮ್ಯತೆಗಳ ಜೊತೆಗೆ ಮಾತಾಡುವ ಗುಣ, ವಿವೇಚನಾ ಯುಕ್ತ ತೌಲನಿಕ ಕ್ರಮ ಮತ್ತು ತಾತ್ವಿಕವಾದ ನಿಲುವು (ಎಲ್ಲರೂ ಒಪ್ಪಬಹುದಾದ) ಅದರಾಚೆ ವೈಯಕ್ತಿಕತೆಯನ್ನು ಕೊಡವಿಕೊಂಡ ಸಾರ್ವತ್ರಿಕರಣ ಇವು ದಕ್ಕಬೇಕಾದುದೂ ನಿರೀಕ್ಷಿತ. ಕನ್ನದ ಕಾವ್ಯದ ಬಹುದೊಡ್ಡ ಪರಂಪರೆ ಮತ್ತು ವರ್ತಮಾನದ ಜೊತೆಗಿನ ಅನುಸಂಧಾನ ಎರಡರ ಸಾಂಗತ್ಯ ಶ್ರೀನಿವಾಸ್ ಅವರ ಕಾವ್ಯದ ಶಕ್ತಿಯನ್ನು ವಿಸ್ತರಿಸಬಲ್ಲದು.

‘ಎಲ್ಲರಂತಲ್ಲ ನಾವು’ ಎಂಬ ಪದ್ಯದ ಭಾವ ವಿಸ್ತಾರ ಇದನ್ನೇ ಹೇಳುತ್ತದೆ. ಅದು ಮತ್ತೆ ಮುಗಿಯದ ದಾಹ. ಕವಿತೆ ಹಾಗೆ ಮತ್ತೆ ಮತ್ತೆ ದೀಪ ಬೆಳಗಿಸುವುದು ಮತ್ತು ತನ್ನನು ತನು ಕಂಡು ಕೊಳ್ಳುವುದು. ದೀಪವಾಗುವ ಮಳೆಯಾಗುವ ಭಿನ್ನವಾಗುವ ಹಂಬಲವೇ ಶ್ರೀನಿವಾಸ ನಾಯ್ಡು ಅವರ ಮುಂದಿನ ಪದ್ಯ ಮಾರ್ಗವನ್ನು ಕಾಯುವ ಹಾಗೆ ಮಾಡಬಲ್ಲದು.

ಏಕೆಂದರೆ

ಅಲ್ಲಿ ಸುರಿದ ನೆತ್ತರು
ಇಲ್ಲಿ ಮತ್ತೊಬ್ಬರ ಪಾದ ತೋಯಿಸುತ್ತದೆ
ಎಂಬ ಸಾಲುಗಳು ಅವರಿಗೆ ಸಾಧ್ಯವಾಗಿದೆ. ಇದೇ ಕವಿತೆ....

ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಕವಿ, ಶಿಕ್ಷಕ ಸಂತೆಬೆನ್ನೂರು ಫೈಜ್ಞಟ್ರಾಜ್ ಇವರು. ಇವರು ತಮ್ಮ ಬೆನ್ನುಡಿಯಲ್ಲಿ ಈ ಕವನ ಸಂಕಲನದ ಎಲ್ಲಾ ಕವನಗಳು ಮಾನವೀಯ ತುಡಿತಗಳ ಸೆಳೆತ ಇದೆ ಎಂದು ಹೇಳಿದ್ದಾರೆ.