ಒಂದು ಎರಡು ಮೂರು ನಾಲ್ಕು

ಒಂದು ಎರಡು ಮೂರು ನಾಲ್ಕು

ಕವನ

ಒಂದು ಎರಡು ಮೂರು ನಾಲ್ಕು

ಒಂದು ಎರಡು ಮೂರು ನಾಲ್ಕು
ಕಲಿಯುವುದಕ್ಕೆ ಹೊಸಬ |
ಸುತ್ತ ಮುತ್ತ ಕಾಣುವುದನ್ನು
ಗಮನಿಸಿ ಬಿಟ್ರೆ ಸುಲಭ ||ಪ||

ನಮಗಿದೆ ಒಂದು ಮೂಗು
ಬಾಯಿಯು ಒಂದೇ ನೋಡು
ತಲೆಯೂ ಒಂದೇ ಹೊಟ್ಟೆಯು ಒಂದೇ
ಎಲ್ಲರ ಭೂಮಿಯು ಒಂದೇ ||1||

ಕಾಣುವ ಕಣ್ಣಿದೆ ಎರಡು
ಕೇಳುವ ಕಿವಿಯೂ ಎರಡು
ಕೈಗಳು ಎರಡು ಕಾಲಿವೆ ಎರಡು
ಹಗಲಿರುಳೆಂಬುದು ಎರಡು ||2||

ತೆಂಗಿಗೆ ಕಣ್ಣು ಮೂರು
ಬಾವುಟ ಬಣ್ಣವು ಮೂರು
ಶಿಶುಮಂದಿರಕೆ ಸೇರಿದ ಮಕ್ಕಳ
ವಯಸ್ಸು ಇನ್ನೂ ಮೂರು ||3||

ಆಕಳ ಕಾಲಿದೆ ನಾಲ್ಕು
ನಾಯಿಗು ಕಾಲು ನಾಲ್ಕು
ಜೋಗದ ಗುಂಡಿಯ ನೋಡಿದರಲ್ಲಿ
ಬೀಳುವ ಧಾರೆಯು ನಾಲ್ಕು ||4||

ಕೈಗಳ ಬೆರಳುಗಳೈದು
ಭೂತಗಳೆಂಬುದು ಐದು
ವರ್ಷಗಳಾಗದೆ ಇದ್ದರೆ ಐದು
ಶಾಲೆಗೆ ಸೇರಲು ಬರದು ||5||

ವರ್ಷಕೆ ಋತುಗಳು ಆರು
ನಾಲಿಗೆ ರುಚಿಯೂ ಆರು
ಪೆಟ್ಟಿಗೆಗಿರುವ ಮುಖಗಳನೆಣಿಸಲು
ಸಿಗುವುದು ಅಲ್ಲೂ ಆರು ||6||

ವಾರಕೆ ದಿನಗಳು ಏಳು
ಸಂಗೀತÀÀ ಸ್ವರವೂ ಏಳು
ವಿಶ್ವದ ಭೂಪಟದಲ್ಲಿಹ ಖಂಡಗ
ಳೆಣಿಸಿದರವುಗಳು ಏಳು ||7||

ದಿಕ್ಕುಗಳಿರುವುದು ಎಂಟು
ಸಿದ್ಧಿಗಳಿರುವುದು ಎಂಟು
ನಾಲ್ಕಕೆ ನಾಲ್ಕನು ಕೂಡಿಸಿದಾಗ
ಅಲ್ಲಿದೆ ಒಟ್ಟು ಎಂಟು ||8||

ಗ್ರಹಗಳಿರುವುದು ಒಂಬತ್ತು
ರತ್ನಗಳೊಟ್ಟು ಒಂಬತ್ತು
ಬತ್ತ ಗೋಧಿ ರಾಗಿಗಳೆಂಬ
ಧಾನ್ಯಗಳೆಲ್ಲ ಒಂಬತ್ತು ||9||

ರಾವಣನಿಗೆ ತಲೆ ಹತ್ತು
ಎಣಿಸಲು ಈಗ ಗೊತ್ತು
ಎರಡು ಕೈಗಳನು ಸೇರಿಸಿ ನೋಡಲು
ಬೆರಳುಗಳಿರುವುದು ಹತ್ತು ||10||

- ಸದಾನಂದ