ಒಲವಿನ ಸ್ವಾರ್ಥ..

ಒಲವಿನ ಸ್ವಾರ್ಥ..

ಕವನ

ಹಸಿರು ಬತ್ತುವ ಕಾಲವಿದು ಎಂದು 
ಸರಸರನೆ ಬಂದ ಮಳೆರಾಯನಂದು. 
ಕೆರೆ ಕಟ್ಟೆಗಳ ಹೊಟ್ಟೆಯನು ತುಂಬಿ 
ಗದ್ದೆಗಳ ಒಳಗೆ ನಮ್ಮ ದಬ್ಬಿದನಂದು. 
 
ಭತ್ತವ ಬಿತ್ತಲು ಕನಸುಗಳು ಅರಳಿ 
ನಲಿದವು ಮನದಲ್ಲಿ ಹಸಿರಿನ ಬೆಳಕನ್ನು ಚೆಲ್ಲಿ
ಮನೆಯ ಮಗಳಂತೆ ಅರಳಿದ ಧರೆಯು 
ನೋವ ಸಹಿಸಿತು ನೇಗಿಲ ನುಣುಪಾದ ತುದಿಗೆ
 
ಬಾಗಿ ಬಳುಕುವ ನಿನ್ನ ಹಸಿರ ಕಾಂತಿ 
ಮನದಲ್ಲಿ ಮೂಡುವುದು ನೆಮ್ಮದಿಯ ಶಾಂತಿ
ಅವರಿವರು ನಿನ್ನ ಕೆಣಕರು ಎಂದೂ
ನನ್ನೀ ಅಭಯವಿರುವುದು ನಿನ್ನೊಂದಿಗೆಂದೂ  
 
ಇಷ್ಟೇ ಬಿತ್ತಿದೆ ನಾನು, ಅಷ್ಟು ನೀಡಿದೆ ನೀನು
ಈ ಋಣವ ನಾ ತೀರಿಸಬಲ್ಲೆನೇನು?
ಚಳಿ ಗಾಳಿಯನ್ನೂ ಲೆಕ್ಕಿಸದೆ ನೀನು 
ಮನೆಗಾಗಿ ಬೆಳೆದೆ ಮಗಳಾಗಿ ನೀನು. 
 
ಭತ್ತದ ಕಾಳುಗಳಿಗೆ ಕತ್ತ ಹಿಸುಕಬೇಕೆಂದು
ಕೊಲ್ಲ ಹೊರಟರಲ್ಲ ನಿನ್ನ ಪಾಪಿಗಳು ಇಂದು!
ನನ್ನ ಅಭಯವನ್ನು ಸುಳ್ಳೆಂದು ಮರೆತು
ಕ್ಷಮಿಸಿಬಿಡು ಮಗಳೇ ನಮ್ಮಿ ಸ್ವಾರ್ಥಿ ಜನುಮವನು.
 
(ಮಳೆಯ ನೆಪದಲ್ಲಿ ಮೂಡುವ ಒಲವು ...
ಹನಿಯಾಗಿ,ಹದವಾಗಿ,ಹಸಿರಾಗಿ, ಬೀಜವಾಗಿ ಸಾಯಬೇಕು 
ಕೊನೆಗೆ ಹಸಿವೆಂಬ ಸ್ವಾರ್ಥದಲ್ಲಿ...!)
 
 

ಚಿತ್ರ್