ಕಗ್ಗ ದರ್ಶನ – 5 (2)

ಕಗ್ಗ ದರ್ಶನ – 5 (2)

ಬಂದ ಸುಖವನು ಬಿಡದೆ ಬಾರದುದ ಬೇಕೆನದೆ
ದಂದುಗಂಬಡದೆ ಮನದೆಚ್ಚರವ ಬಿಡದೆ
ಸಂದುದನದೇಕೆನದೆ ಮುಂದದೇಂ ಗತಿಯೆನದೆ
ಹೊಂದಿಕೊಳೊ ಬಂದುದಕೆ – ಮರುಳ ಮುನಿಯ
“ಈಗಿನ ಕ್ಷಣದಲ್ಲಿ ಬದುಕಬೇಕು” ಎಂಬ ಸರಳ ತತ್ವವನ್ನು ನವಿರಾಗಿ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ವಿವರಿಸುತ್ತಾರೆ. ಆಗಿಹೋದದ್ದರ ಬಗ್ಗೆ ಮತ್ತು ಆಗಲಿರುವುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾ, ಈ ಕ್ಷಣದ ಬದುಕಿನ ಸಂತೋಷ ಕಳೆದುಕೊಳ್ಳುವವರು ಹಲವರು. ಅದರಿಂದ ಏನಾದರೂ ಪ್ರಯೋಜನ ಇದೆಯೇ? ಖಂಡಿತವಾಗಿಯೂ ಇಲ್ಲ.
ನಮಗೆಲ್ಲರಿಗೂ ದಿನದಿನವೂ ಸುಖ ಬರುತ್ತದೆ. ಇಲ್ಲ ಎನ್ನುತ್ತೀರಾ? ಮನೆಯೆದುರಿನ ಗಿಡದಲ್ಲಿ ಹೂ ಅರಳುವುದನ್ನು, ಹತ್ತಿರದ ಮರದಲ್ಲಿ ಹಕ್ಕಿ ಹಾಡುವುದನ್ನು, ಹುಲ್ಲಿನ ಮೇಲಿನ ಇಬ್ಬನಿಯಲ್ಲಿ ಮುಂಜಾವದ ಸೂರ್ಯಕಿರಣಗಳು ಪ್ರತಿಫಲಿಸುವುದನ್ನು, ಕಾಳಗತ್ತಲಿನಲ್ಲಿ ಆಕಾಶದಲ್ಲಿ ಲಕ್ಷಗಟ್ಟಲೆ ನಕ್ಷತ್ರಗಳು ಮಿಂಚುವುದನ್ನು ಗಮನಿಸಿದ್ದೀರಾ? ಅವೆಲ್ಲ ದಿನದಿನದ ಬದುಕಿನಲ್ಲಿ ಸುಖ ನೀಡುವುದಿಲ್ಲ ಎನ್ನಲಾದೀತೇ? ಹೀಗೆ ಬಂದ ಸುಖವನ್ನು ಬಿಡಬಾರದು; ಮನದುಂಬಿ ಅನುಭವಿಸಬೇಕು.
ಹಾಗೆಯೇ ನಮಗೆ ಬಾರದ ಸುಖವನ್ನು ಬಯಸಬಾರದು. ದೊಡ್ಡ ಬಂಗಲೆಯ ಒಡೆತನದ ಸುಖ, ದುಬಾರಿ ಕಾರಿನ ಸವಾರಿಯ ಸುಖ, ಮೈತುಂಬ ಬಂಗಾರದೊಡವೆಯ ಸುಖ – ಇವೆಲ್ಲ ನಮ್ಮ ಬದುಕಿನಲ್ಲಿ ಸಿಗದಿರಬಹುದು. ಅದಕ್ಕೆ ಯಾಕೆ ಸಂಕಟ ಪಡಬೇಕು? ಅವು ಸಿಗದಿದ್ದರೆ ಹೋಗಲಿ ಎಂದು ಬಿಟ್ಟು ಬಿಡಬೇಕು.
ತೊಂದರೆ (ದಂದುಗ) ಎದುರಾದರೂ ಹಾಗೆಯೇ ಎದುರಿಸಬೇಕು. ಅವಕ್ಕೆ ಅಂಜಬಾರದು; ಕಂಗೆಡಬಾರದು. ಅದಕ್ಕಾಗಿ ಸದಾ ಮನದ ಎಚ್ಚರ ಕಾದುಕೊಳ್ಳಬೇಕು. ಇಂದು ಬಂದ ಕಷ್ಟ ನಾಳೆ ಇರುವುದಿಲ್ಲ ಎಂಬ ನಂಬಿಕೆಯಿಂದ ಬಾಳಬೇಕು.
ಹ್ಯಾಗೆ ಹೊಂದಿಕೊಳ್ಳಬೇಕು ಬದುಕಿನಲ್ಲಿ ಬಂದುದಕೆ? ಎಂಬ ಪ್ರಶ್ನೆಗೆ ಉತ್ತರವಿಲ್ಲಿದೆ. ಸಂದುದನ್ ಅದು ಏಕೆ ಎನದೆ, ಮುಂದೆ ಅದೇಂ ಗತಿಯೆನದೆ ಹೊಂದಿಕೊಳ್ಳಬೇಕು. ಆಗಿಹೋದದ್ದರ ಬಗ್ಗೆ “ಆದದ್ದೆಲ್ಲಾ ಒಳಿತೇ ಆಯಿತು” ಎಂದುಕೊಳ್ಳೋಣ. ಆಗಲಿರುವುದರ ಬಗ್ಗೆ “ಆಗುವುದೆಲ್ಲಾ ಒಳಿತೇ ಆಗಲಿ” ಎಂದು ಹಾರೈಸೋಣ. ಹಿಂದಿನ ಮುಂದಿನ ಬದುಕಿನ ಬಗ್ಗೆ ಚಿಂತೆ ಬಿಟ್ಟು, ಈಗಿನ ಕ್ಷಣದಲ್ಲಿ ಖುಷಿಯಿಂದ ಇರಲು ಕಲಿಯೋಣ.