ಗುಳ್ಳದ ಬೋಳುಹುಳಿ

ಗುಳ್ಳದ ಬೋಳುಹುಳಿ

ಕವನ

ಬೇಳೆ ತೊಗರಿ ತೊಳೆದು
ನೀರಿಟ್ಟು ಕುದಿಸಿ
ಮಟ್ಟುಗುಳ್ಳ
ಬದನೆಯ ದೊಡ್ಡ 
ಹೋಳುಗಳ 
ಸೇರಿಸಿ ಬೇಯಿಸಿ
ಹಸಿಮೆಣಸ ಉದ್ದಕ್ಕೆ
ಸೀಳಿ ಕೊತ್ತೊಂಬರಿಯ
ಸೊಪ್ಪು ಹಾಕಿ ಕುದಿತಕ್ಕೆ
ಹದಕಲಸಿ ಇಂಗು
ತಪ್ಪಿಸದೆ ಉಪ್ಪು
ಕೊನೆಗೊಗ್ಗರಣೆ ಪಟಪಟಿಸಿ
ಜೀಂಕರಿಸಿಬಿಟ್ಟರೆ
ಮನೆಯೊಳಗಿನೆಲ್ಲ ಹೊಳ್ಳೆಗಳು
ಅರಳುತ್ತ ತಳಮಳಿಸುತ್ತ
ಅನ್ನಕ್ಕೆ ಬನ್ನಪಡತೊಡಗುವತ್ತ...

ಇಳಿಸಿದ ಪಾತ್ರೆ
ಹುಳಿಗೆ ತಡವಿಲ್ಲ 
ಜಮಾಯಿಸಿ ಎಲ್ಲ
ವಟವಟ ನಿಲ್ಲಿಸಿ
ತಟ್ಟೆ ಮೀಟಿ 
ತದೇಕ ಕಲಸುತ್ತ 
ಹೊಟ್ಟೆಗಿಳಿಸುತ್ತ
ಪಾತ್ರೆ ಬೋಳಾಗುತ್ತ
ಬೆವರ ಹನಿ
ನೊಸಲು
ನಾಸಿಕಾಗ್ರಗಳಿಂದ
ಒಸರುತ್ತ ಮತ್ತೆ
ಎಲ್ಲ ಧ್ಯಾನಸ್ತ
ಚಿತ್ತ ಏಕಾಗ್ರ
ವ್ರತ ನಿರತರಂತೆ
ಸೊರ ಸೊರ
ಸಣ್ಣ ಸ್ವರ ಸಪ್ಪಳದಲ್ಲಿ
ಜಿಹ್ವೆ ಹೊರಳಾಡುತ್ತ
ಪಿಷ್ಠದೊಟ್ಟಿಗೆ
ಗುಳ್ಳಹುಳಿ ಸೇರುತ್ತಿದೆ 
ಅಗ್ನಿ ಜಠರ
ಚಾಪಲ್ಯ ಜೀವ
ಕೆಲ ಘಳಿಗೆ ಸಾಫ಼ಲ್ಯ 
ಬೋಳುಹುಳಿ ರುಚಿಗೆ

ಯೋಗಿ ವರ ಕೊಟ್ಟ ಗುಳ್ಳ
ಮಳ್ಳ ನಾಲಿಗೆಯ ಮುಟ್ಟಿ
ಯೋಗಚಿತ್ತಕ್ಕೆ 
ಮೆಟ್ಟಿಲಾಗುವುದ
ಮೆಟ್ಟಲಾಗುವುದೆ!

(ಉಡುಪಿ ಸಮೀಪದ ಮಟ್ಟುವಿನಲ್ಲಿ ಬೆಳೆಯುವ ಗುಳ್ಳ 
ಸೋದೆ ವಾದಿರಾಜರು ಕರುಣಿಸಿದ್ದು ಅನ್ನುವುದು ಪ್ರತೀತಿ)