ಚಂದ್ರಮಾನೆ

ಚಂದ್ರಮಾನೆ

ಪುಸ್ತಕದ ಲೇಖಕ/ಕವಿಯ ಹೆಸರು
ಕಗ್ಗೆರೆ ಪ್ರಕಾಶ್
ಪ್ರಕಾಶಕರು
ಕಗ್ಗೆರೆ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ : ೨೦೨೨

ತ್ರಿಕೋನ ಪ್ರೇಮದ ಕಥಾ ಹಂದರವನ್ನು ಹೊಂದಿರುವ "ಚಂದ್ರಮಾನೆ" ಎಂಬ ಕಾದಂಬರಿಯನ್ನು ಬರೆದವರು ಕಗ್ಗೆರೆ ಪ್ರಕಾಶ್. ಇವರು ತಮ್ಮ ಈ ಪುಟ್ಟ ಕಾದಂಬರಿಯಲ್ಲಿ ತ್ರಿಕೋನ ಪ್ರೇಮವನ್ನು ಬಹಳ ಸೊಗಸಾಗಿ ಹೇಳ ಹೊರಟಿದ್ದಾರೆ. ಈ ಬಗ್ಗೆ ಅವರೇ ತಮ್ಮ ಮಾತು ‘ನಿಮ್ಮೊಂದಿಗೆ..." ಇಲ್ಲಿ ಹೇಳಿದ್ದು ಹೀಗೆ…

“ಕಥಾನಾಯಕ ‘ಚಂದ್ರ’ ಅರವತ್ತು ವರ್ಷ ವಯಸ್ಸಿನ ಗಂಡ. ಕಥಾನಾಯಕಿ ‘ಮಾನೆ’ ಐವತ್ತು ವರ್ಷದ ಹೆಂಡತಿ. ಇವರಿಬ್ಬರ ಜೋಡಿಯ ಕಾದಂಬರಿ ಶೀರ್ಷಿಕೆಯೇ ‘ಚಂದ್ರಮಾನೆ.’ ಇವರಿಬ್ಬರ ನಡುವೆ ವಿಲನ್‌ನಂತೆ ಬರುವ ಇಪ್ಪತ್ತೈದರ ಹದಿಹರೆಯದ ಮುಸ್ಲಿಂ ಹುಡುಗನೇ ರಿಯಾಜ್. ಇದು ಸಂಕೀರ್ಣ ಹಾಗೂ ಸೂಕ್ಷ್ಮ ಮನಸ್ಸಿನ ಒಳನೋಟದ ತ್ರಿಕೋನ ಪ್ರೇಮ ಕಥೆಯ ಕಥಾಹಂದರ. ಇದಿಷ್ಟೇ ಈ ಕಾದಂಬರಿಯ ಕಥಾವಸ್ತು.

ಆದರೆ, ಇದು ಸತ್ಯ ಘಟನೆಯನ್ನು ಆಧರಿಸಿ ಬರೆದ ಕಾದಂಬರಿ. ಇದು ನನ್ನ ಮೊದಲ ಕಾದಂಬರಿ ಕೂಡ. ಕಾದಂಬರಿಯಲ್ಲಿ ಬರುವ ಆಯಾ ಘಟನೆ, ಸನ್ನಿವೇಶ, ಸಂದರ್ಭ, ಪ್ರಸಂಗಗಳು ಬಹುಮುಖ್ಯವಾಗುತ್ತವೆ. ಈ ಮೂರು ಮುಖ್ಯ ಪಾತ್ರಗಳು ನಮ್ಮ ನಡುವೆ ಇರುವ ಮನುಷ್ಯ ಸಂಬಂಧಗಳ ಸಾಂಕೇತಿಕ ಪ್ರತಿನಿಧಿಗಳಾಗಿ ನಿಲ್ಲುತ್ತವೆ. ಹಾಗಾಗಿ ಇಲ್ಲಿನ ಪಾತ್ರಗಳು ಜೀವಂತಿಕೆಯಿಂದ ನೈಜತೆಯನ್ನು ಉಳಿಸಿಕೊಂಡಿವೆ.

ಈ ಕಾದಂಬರಿಯನ್ನು ಕೇವಲ ಏಕಮುಖವಾಗಿ ನೋಡದೆ ಒಳಿತು-ಕೆಡಕುಗಳ ಹಾಗೂ ಸಾಧಕ-ಬಾಧಕಗಳನ್ನು ವಿಶಾಲ ದೃಷ್ಟಿಕೋನದಲ್ಲಿ ನೋಡುವುದು ಸೂಕ್ತ. ಎಲ್ಲ ಮನುಷ್ಯರಲ್ಲೂ ಗಂಡಿರಲಿ, ಹೆಣ್ಣಿರಲಿ; ಶಕ್ತಿಶಾಲಿ ಅಂಶಗಳು, ದುರ್ಬಲ ಮನಸ್ಸುಗಳು ಇದ್ದೇ ಇರುತ್ತವೆ. ಋಣಾತ್ಮಕ, ಸಕಾರಾತ್ಮಕ ಅಂಶಗಳೇ ಮಾನವ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತವೆ. ಆದರೆ “ಇಂಥ ಅಂಶಗಳೇ ಮಾನವ ಬದುಕನ್ನು ನಾಶ ಮಾಡಬಾರದು, ನೆಮ್ಮದಿಯ ಜೀವನವನ್ನು ನರಕ ಮಾಡಿಕೊಳ್ಳಬಾರದು, ಇರುವುದರಲ್ಲೇ ಸುಖ-ಸಂತೋಷ ಕಂಡುಕೊಳ್ಳಬೇಕು, ಇಲ್ಲದ್ದಕ್ಕೆ ಆಸೆಪಟ್ಟು ದುಃಖಕ್ಕೆ ಒಳಗಾಗಬಾರದು. ನಮ್ಮ ಬಾಳಲ್ಲಿ ಬರುವ ಕಷ್ಟ-ನಷ್ಟ, ನೋವು- ಸಂಕಟ, ಮಾನ-ಅವಮಾನಗಳಿಗೋಸ್ಕರ ಆತ್ಮಹತ್ಯೆ ಮಾಡಿಕೊಳ್ಳಬಾರದು. ಬರುವುದೆಲ್ಲವನ್ನೂ ಧೈರ್ಯವಾಗಿ ಎದುರಿಸಬೇಕು, ವಿವೇಕ-ವಿವೇಚನೆಯಿಂದ ನಡೆದುಕೊಳ್ಳಬೇಕು. ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಈಸಬೇಕು ಇದ್ದು ಜಯಿಸಬೇಕು” ಎಂಬುದೇ ಈ ಕಾದಂಬರಿಯ ಸಂದೇಶವಾಗಿದೆ.

ತಿಳಿದೋ ತಿಳಿಯದೆಯೋ ಮಾಡುವ ನಮ್ಮ ತಪ್ಪುಗಳು ಜೀವನಪೂರ್ತಿ ನಮ್ಮನ್ನು ನರಕದ ಕೂಪಕ್ಕೆ ತಳ್ಳುವಂತಾಗಬಾರದು. ಹೌದು, ಇಲ್ಲಿ ಬರುವ ಮುಖ್ಯ ಪಾತ್ರಗಳು ಚಂದ್ರ, ಮಾನೆ, ರಿಯಾಜ್. ಮಾನೆ, ಗಂಡ ಚಂದ್ರನ ವಂಚಿಸಿ ರಿಯಾಜ್ ಜೊತೆ ಪ್ರೀತಿ, ಪ್ರೇಮ, ಪ್ರಣಯ ಬೆಳೆಸಿಕೊಳ್ಳುವುದೇ ಒಂದು ವಿಸ್ಮಯ. ಇದು ಪ್ರೀತಿಯೋ, ಪ್ರೇಮವೋ, ಕಾಮವೋ, ಆಕರ್ಷಣೆಯೋ, ಹುಚ್ಚುತನವೋ ತಿಳಿಯದಷ್ಟು ಗಂಭೀರ ವಿಷಯವಾಗಿ ಬಿಡುತ್ತದೆ. ಇದರ ಸಮಸ್ಯೆಯ ಪರಿಹಾರಕ್ಕೆ ಮನಶಾಸ್ತ್ರಜ್ಞರು ಏನು ಹೇಳುತ್ತಾರೆ? ಸಮಾಜ ಇದನ್ನು ಹೇಗೆ ನೋಡುತ್ತದೆ? ಕುಟುಂಬ ವ್ಯವಸ್ಥೆಯ ಮಾನ, ಮರ್ಯಾದೆ, ಗೌರವ ಏನು? ಇದು ನೈತಿಕವೋ, ಅನೈತಿಕವೋ? ಎಂಬೆಲ್ಲ ಪ್ರಶ್ನೆಗಳು ಬರುತ್ತವೆ. ಆದರೆ ಇಷ್ಟಂತ್ತು ಸತ್ಯ; ನೆಮ್ಮದಿಯ ಬದುಕನ್ನು ನರಕ ಮಾಡಿಕೊಳ್ಳುವುದಿದೆಯಲ್ಲ; ಅದು ಮಾತ್ರ ಘೋರ. ಇಂಥ ಘೋರ ಘಟನೆಗಳು ಎಲ್ಲಿಯೂ ನಡೆಯದಿರಲಿ ಎಂಬುದಷ್ಟೇ ಈ ಕಾದಂಬರಿಯಿಂದ ನಾನು ಹೇಳಹೊರಟಿದ್ದೇನೆ.

ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಚೆನ್ನಗಿರಿ ಕೇಶವಮೂರ್ತಿ. ಇವರ ಮುನ್ನುಡಿ “ಓದುವ ಮುನ್ನ..." ದಿಂದ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

“ನನ್ನ ಆತ್ಮೀಯ ಗೆಳೆಯರಾದ ಕಗ್ಗೆರೆ ಪ್ರಕಾಶ್ ವಿರಚಿತ ‘ಚಂದ್ರಮಾನೆ’ ಓದಿದಾಗ ನಾನು ಅವರಿಗೆ ಹೇಳಿದ ಮೊದಲ ಮಾತುಗಳು; “ಪ್ರಕಾಶ್, ನೀವು ಈ ಕೃತಿ ರಚಿಸಿರುವುದು ಜೇನುಗೂಡಿಗೆ ಕಲ್ಲು ಎಸೆದಂತಾಗಿದೆ” ಎಂದು. ನಿರೀಕ್ಷಿಸಿದಂತೆಯೇ ಅವರು ಓದುಗರ ಅಭಿಪ್ರಾಯ ಕೇಳಿದಾಗ; ಹಲವಾರು ಪರ-ವಿರೋಧ ಪ್ರತಿಕ್ರಿಯೆಗಳು ಬಂದವು. ಇದಕ್ಕೆ ಕಾರಣವಾಗಿದ್ದು ‘ಚಂದ್ರಮಾನೆ’ ಕಥಾವಸ್ತು. ಹಾಗಂತ ಈ ಕೃತಿಯಲ್ಲಿ ಅವರು ಹೇಳಬಾರದ್ದೇನೂ ಹೇಳಿಲ್ಲ, ಬರೆಯಬಾರದ್ದೇನೂ ಬರೆದಿಲ್ಲ.

ವಿವಾಹಿತರಲ್ಲಿನ ತ್ರಿಕೋನ ಪ್ರೇಮ ಅನಾದಿ ಕಾಲದಿಂದಲೂ ಚರ್ಚಿತವಾದ, ಈಗಲೂ ಚರ್ಚಿತವಾಗುತ್ತಿರುವ ವಿಷಯವಾಗಿದೆ. ಅವಿವಾಹಿತ ಯುವಕ ಯುವತಿಯರು, ವಿವಾಹಿತ ಮಹಿಳೆ-ಪುರುಷರನ್ನು ಬಯಸುವುದು ಸರ್ವೇಸಾಮಾನ್ಯವಾಗಿದೆ. ಇಂತಹ ಪ್ರಸಂಗಗಳಲ್ಲಿ ಜಾತಿ ಭೇದವಿರುವುದಿಲ್ಲ, ವಯಸ್ಸಿನ ಅಂತರ ಅಡ್ಡ ಬರುವುದಿಲ್ಲ, ಪ್ರೀತಿ-ಪ್ರೇಮದ ಹೆಸರಿನಲ್ಲಿ ಈ ಘಟನೆಗಳು ಪುನರಾವರ್ತನೆ ಆಗುತ್ತಿರುತ್ತವೆ. ಇದು ತಪ್ಪೆಂದು ತಿಳಿದಿದ್ದರೂ ಇಂತಹ ಪ್ರಸಂಗಗಳು ಜರುಗುತ್ತಲೇ ಇವೆ. ಇದರ ಪರಿಣಾಮದಿಂದಾಗಿ ಹಲವಾರು ಭಿನ್ನ ಸಮಸ್ಯೆಗಳ ಉಗಮಕ್ಕೆ, ಕೋಪ-ತಾಪಗಳಿಗೆ ಹಾಗೂ ಕೆಲವು ಬಾರಿ ಅತಿರೇಕದ ಮಟ್ಟ ತಲುಪಿ ಕೊಲೆ, ಆತ್ಮಹತ್ಯೆ, ಸಾವಿನಲ್ಲಿ ಪರ್ಯಾವಸಾನಗೊಂಡಿವೆ. ಅನೈತಿಕ ಸಂಬಂಧಗಳು ಅನಿವಾರ್ಯವಲ್ಲವೆಂದೂ, ತಪ್ಪೆಂದು ಮನವರಿಕೆಯಾಗಿದ್ದರೂ ಜೀವನ ಶೈಲಿಯಲ್ಲಿ ಇದೂ ಸಹ ಒಂದು ಹಂತದಂತಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.

‘ಮಾನೆ’ ವಿವಾಹಿತ ಹೆಣ್ಣು, ರಿಯಾಜ್ ಎಂಬ ಮುಸ್ಲಿಂ ಯುವಕ ಅವಳಲ್ಲಿ ಅನುರಕ್ತನಾಗಿ ‘ಚಂದ್ರ-ಮಾನೆ’ ಅವರ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸುತ್ತಾನೆ. ಪತಿಯ ಎಚ್ಚರಿಕೆಯ ಗಂಟೆಗೆ ಮಾನೆಯಾಗಲಿ, ರಿಯಾಜ್ ಆಗಲಿ ಸೊಪ್ಪು ಹಾಕುವುದಿಲ್ಲ. ಇಂತಹ ಪ್ರೇಮ ಪ್ರಕರಣಗಳಿಗೆ ಕಾರಣಭೂತರು ಯಾರು ಎಂಬುದೇ ಇಲ್ಲಿಯ ಕಥಾವಸ್ತುವಾಗಿದೆ. ‘ಚಂದ್ರಮಾನೆ’ ಕಾದಂಬರಿಯ ಹೊಸತನ ಏನೆಂದರೆ; ಪ್ರಕಾಶ್ ಕೇವಲ ವಿಷಯ ನಿರೂಪಣೆ ಮಾಡಿ, ಒಳಿತು-ಕೆಡುಕುಗಳ ಪರಾಮರ್ಶೆಗೆ ಓದುಗರನ್ನೇ ಗುರಿ ಮಾಡಿದ್ದಾರೆ. ಸುಮ್ಮನೆ ಪುಸ್ತಕ ಓದಿ ಬದಿಗಿರಿಸುವ ಬದಲು ‘ಚಂದ್ರ-ಮಾನೆ’ ಅವರಂಥ ವಿವಾಹಯೇತರ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಸೂತ್ರವನ್ನು ಓದುಗರ ವಿಶ್ಲೇಷಣೆಗೆ ಬಿಟ್ಟಿದ್ದಾರೆ.

ಆಧುನಿಕ ತಂತ್ರಜ್ಞಾನದ ಕೊಡುಗೆಯಾಗಿ ಬಂದ ಮೊಬೈಲ್ ದೊಡ್ಡವರೂ ಸೇರಿದಂತೆ ಮಕ್ಕಳ ಕೈಯಲ್ಲಿ ಆಡುವ ಆಟಿಕೆಯಂತೆ ಬಳಕೆಯಾಗುತ್ತಿದೆ. ಇದರ ಬಳಕೆಯಿಂದ ಸಾಕಷ್ಟು ಅನುಕೂಲಗಳು ಆಗಿರುವುದು ನಿಜ. ಆದರೆ ದುಷ್ಪರಿಣಾಮಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಹಾಗಾಗಿ ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಅವರ ಭವಿಷ್ಯವನ್ನು ನರಕ ಮಾಡದೆ ಉಜ್ವಲಗೊಳಿಸುವ ಅಗತ್ಯವಿದೆ. ವಿವಾಹಯೇತರ ಸಂಬಂಧಕ್ಕೆ ಇಲ್ಲಿ ಮೊಬೈಲ್ ಸೇತುವೆಯಾಗುತ್ತದೆ. ದೊಡ್ಡವರು, ಯುವಕರೂ ಕೂಡ ಮೊಬೈಲ್ ಬಳಕೆಯಲ್ಲಿ ಎಚ್ಚರಿಕೆ ವಹಿಸಿದರೆ ಆಗುವ ಅನಾಹುತ, ಅವಾಂತರಗಳನ್ನು ತಪ್ಪಿಸಬಹುದು. ಮೊಬೈಲ್ ಕೂಡ ಇಲ್ಲಿ ಒಂದು ಪಾತ್ರವಾಗಿಯೇ ಬಂದಿದ್ದು ‘ಚಂದ್ರಮಾನೆ’ ಕಾದಂಬರಿಯ ಮೂಲ ಆಶಯವೂ ಕೂಡ ಇದೇ ಆಗಿದೆ.

ಕಗ್ಗೆರೆ ಪ್ರಕಾಶ್ ಹೆಚ್ಚಾಗಿ ಹೆಸರು ಗಳಿಸಿರುವುದು ಮನಸ್ಸಿಗೆ ನಾಟುವಂತಹ ತಮ್ಮ ಕವನಗಳಿಂದ ಹಾಗೂ ವಿವಿಧ ತೆರೆಮರೆಯ ಕಲಾವಿದರ ಬಗೆಗಿನ ಆಕರ್ಷಕ ಬರಹಗಳಿಂದ. ಇದೀಗ ಮೊದಲ ಬಾರಿಗೆ ಕಾದಂಬರಿ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಕಥೆ ಹೇಳುವುದರಲ್ಲಿ ನಿಸ್ಸೀಮರಾಗಿರುವ ಪ್ರಕಾಶ್; ನಿರೂಪಣೆಯಲ್ಲಿ ತಮ್ಮದೇ ವಿಶೇಷ ಛಾಪು ಒತ್ತಿರುವ ಈ ಕಾದಂಬರಿ ಓದುಗರನ್ನು ಆಕರ್ಷಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಕಥಾವಸ್ತು ಚಿರಪರಿಚಿತವಾದರೂ ಪ್ರಕಾಶ್ ತಮ್ಮ ನೇರ ನಿರೂಪಣೆಯಿಂದ ಓದುಗರ ಮನಸೆಳೆಯುತ್ತಾರೆ.