ಚೋದ್ಯ

ಚೋದ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಅನುಪಮಾ ಪ್ರಸಾದ್
ಪ್ರಕಾಶಕರು
ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು -೫೬೦೦೪೦
ಪುಸ್ತಕದ ಬೆಲೆ
ರೂ. ೧೮೫.೦೦, ಮುದ್ರಣ: ೨೦೨೩

‘ಚೋದ್ಯ’ ಅನುಪಮಾ ಪ್ರಸಾದ್‌ ಅವರ ಕಥಾಸಂಕಲನವಾಗಿದೆ. ಏಕಾಂತಕ್ಕಿಳಿದು ಬರೆಯಲು ತೊಡಗುವುದು.. ನಂತರ ಅದು ಬರೆಸಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ.. ಮತ್ತೆಲ್ಲೊ ಒಂದು ಕಡೆ ಅದೇ ಕಂಡುಕೊಳ್ಳುವ ನಿಲುಗಡೆ.. ಇದೆಲ್ಲ ಸೇರಿದಾಗ ಸಿಗುವ ಮೊತ್ತವೇ ಕಥೆಯೆಂಬ ಚೋದ್ಯ ಅಂತಹ ಕೆಲವು ಈಗ ಮತ್ತೆ ನಿಮ್ಮ ಓದಿಗಾಗಿ ಕಾಯುತ್ತಿವೆ. ಕೈಗೆತ್ತಿಕೊಳ್ಳುವ ನಿಮಗೆ ಶರಣು. ಇಲ್ಲಿರುವ ಕಥೆಗಳಲ್ಲಿ ಕೆಲವು ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ ಹಾಗು ಮಯೂರ, ತುಷಾರ, ತರಂಗ ವಿಶೇಷಾಂಕ, ವಿಜಯವಾಣಿ ವಿಶೇಷಾಂಕ, ಸುಧಾ ವಿಶೇಷಾಂಕ, ನ್ಯಾಯ ಪಥ ಮುಂತಾದ ಪತ್ರಿಕೆಗಳಲ್ಲಿ, ಡಿಜಿಟಲ್ ಮಾಧ್ಯಮ ಬುಕ್ ಬ್ರಹ್ಮದಲ್ಲಿ ಪ್ರಕಟಗೊಂಡಿವೆ. ಲೇಖಕಿ ಎಲ್ ಸಿ ಸುಮಿತ್ರಾ ಅವರು ಪುಸ್ತಕಕ್ಕೆ ಬರೆದ ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...

“ಜೋಗತಿ ಜೋಳಿಗೆ', 'ಪಕ್ಕಿಹಳ್ಳದ ಹಾದಿಗುಂಟ' ಕಾದಂಬರಿ, ಮತ್ತು ಕಥೆಗಾರ ಎಂ. ವ್ಯಾಸರ ಕುರಿತ 'ಅರ್ಧ ಕಥಾನಕ', ಮೂಲಕ ಗುರುತಿಸಿಕೊಂಡಿರುವ ಅನುಪಮಾ ಪ್ರಸಾದ್ ಅವರ ಹೊಸ ಕಥಾಸಂಗ್ರಹ 'ಚೋದ್ಯ'. ಇಲ್ಲಿನ ಕತೆಗಳಲ್ಲಿ ಕೆಲವು ಕರೋನ ಕಾಲದಲ್ಲಿ ಬರೆದವು. ಅನುಪಮಾ, ಬಾಲ್ಯವನ್ನು ಉಜಿರೆಯ ಪರಿಸರದಲ್ಲಿ ಕಳೆದು, ಮದುವೆಯ ನಂತರ ಕಾಸರಗೋಡಿನಲ್ಲಿ ಇದ್ದು, ಈಗ ಬೆಂಗಳೂರಿನಲ್ಲಿ ವಾಸಿಸುತ್ತಿರುವುದರಿಂದ ಈ ಕಥೆಗಳು ಬೇರೆ ಬೇರೆ ಹಿನ್ನೆಲೆಯಿಂದ ಕೂಡಿವೆ. ಮತ್ತು ಇದು ವೈವಿಧ್ಯಕ್ಕೆ ಕಾರಣವೂ ಆಗಿದೆ. ಮೊಲ್ಲೆ ಹೂ ಮಾರುವ ಮಾದೇವಿಯ ಮಾನವೀಯತೆ ಬದುಕುವ ಛಲ, ಅನಿರೀಕ್ಷಿತವಾಗಿ ಬಂದ ಕರೋನ ಲೋಕ್ ಡೌನ್, ತಾನು ಕಷ್ಟದಲ್ಲಿದ್ದರೂ ಅನಾಥ ಹುಡುಗನಿಗೆ ಸಹಾಯ ಮಾಡುವ ಮನಸ್ಸಿನ ಮಾದೇವಿ. ಮೊಲ್ಲೆ ಹೂ ಮಾದೇವಿ ಮೀಮಾಂಸೆ ಒಂದು ಒಳ್ಳೆಯ ಕತೆ. ಸ್ಯಾನಿಟರಿ ಪ್ಯಾಡ್ ಹೆಸರಿನ ಕತೆ, ತಂದೆಯಾಗಿರುವವನು ತಾಯಿಯ ಅನುಪಸ್ಥಿತಿಯಲ್ಲಿ ಮಗಳನ್ನು ಬೆಳೆಸುವ ಕತೆ.. ವಸ್ತು ಹೊಸದು.

ಸಂಕಲನದಲ್ಲಿ ಗಮನ ಸೆಳೆಯುವ ಕತೆ 'ಕುಂತ್ಯಮ್ಮನ ಮಾರಾಪು'. ಒಬ್ಬ ವ್ಯಕ್ತಿ ಜೀವನದ ಅವಧಿಯಲ್ಲಿ ಸಂಪಾದಿಸುವುದು ಏನು? ಮಕ್ಕಳನ್ನು ಪ್ರೀತಿ ವಾತ್ಸಲ್ಯಗಳಿಂದ ಬೆಳೆಸಿದರೂ ಕೊನೆಗಾಲದಲ್ಲಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಬೇಕಾದ ಸ್ಥಿತಿಯಲ್ಲಿ ಕುಂತ್ಯಮ್ಮನ ಮಾರಾಪು ಅಂದರೆ ಬಟ್ಟೆ ಗಂಟನ್ನೂ ತಾನೇ ಹೊರಬೇಕಾದ ಸ್ಥಿತಿ. (ಅಂದರೆ ಇಲ್ಲಿ ಅವಳ ನಿಯಂತ್ರಣವಿಲ್ಲದ ಮೂತ್ರದಿಂದ ಒದ್ದೆಯಾದ ಬಟ್ಟೆ ಗಂಟು). ಕಥೆ ಕೊನೆಯಲ್ಲಿ ಅನಿರೀಕ್ಷಿತ ಅಂತ್ಯವನ್ನು ತಂದಿರುವುದು ಚೆನ್ನಾಗಿದೆ.

ಕೇರಳಾಪುರದಲ್ಲೊಂದು ದಿನ ಎಂಬ ಕಥೆ ಲೇಖಕಿಯ ಸಾಮಾಜಿಕ ಅರಿವು ಮತ್ತು ಚಿಂತನೆಗೆ ಸಾಕ್ಷಿ ಆಗಿದೆ. ಆಳದ ಗುಂಡಿಗೆ ಬಿದ್ದ ಗಬ್ಬದ ಹಸುವನ್ನು ರಕ್ಷಿಸಿದ ಮೂವರು ಶ್ರಮಜೀವಿಗಳು ರಾಜಕೀಯ ವ್ಯಕ್ತಿಗಳ ಪ್ರಲೋಭನೆಯಿಂದ ವ್ಯಕ್ತಿಯೊಬ್ಬನನ್ನು ಸಾಯಿಸುತ್ತಾರೆ. ಕರಾವಳಿಯ ಇವತ್ತಿನ ಸಂಘರ್ಷದ ಒಂದು ಕಿರುಚಿತ್ರ. ಮೂಲಭೂತವಾಗಿ ಕೆಡುಕನಲ್ಲದ ಮನುಷ್ಯನನ್ನು ಕೇಡಿನ ಕಡೆಗೆ ಸೆಳೆದು ಅಪರಾಧಿಯಾಗಿಸುವ ಶಕ್ತಿಯ ಕಡೆಗೆ ಗಮನ ಸೆಳೆಯುವ ಕತೆ ಇದು.

ಪರಿಸರ ಕಾಳಜಿ ವುಳ್ಳ ಪಕ್ಕಿ ಹಳ್ಳದ ಗುಂಟ ಕಾದಂಬರಿ ಬರೆದಿರುವ ಅನುಪಮಾ ಅಪರೂಪದ ಸಾಮಾಜಿಕ ಕಾಳಜಿಯ ಲೇಖಕಿ. ಚೆನ್ನಾಗಿ ಓದಿಸಿಕೊಳ್ಳುವ ಈ ಕಥೆಗಳನ್ನು ಬರೆದಿರುವ ಅನುಪಮಾ ಪ್ರಸಾದ್ ಅವರಿಗೆ ಅಭಿನಂದನೆಗಳು.”