ತುರ್ತು ಪರಿಸ್ಥಿತಿಯ ಕರಾಳ ದಿನಗಳು

ತುರ್ತು ಪರಿಸ್ಥಿತಿಯ ಕರಾಳ ದಿನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಿ. ರವೀಂದ್ರನ್ ಕುಂಬಳೆ
ಪ್ರಕಾಶಕರು
ಲೆನ್ಸ್ ಬುಕ್ಸ್, ಕಣ್ಣೂರು
ಪುಸ್ತಕದ ಬೆಲೆ
ರೂ. ೨೭೦.೦೦, ಮುದ್ರಣ: ೨೦೨೩

೧೯೭೫ರ ಜೂನ್ ೨೫ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ. ನಂತರದ ೬೩೫ ದಿನಗಳು ಭಾರತದ ಇತಿಹಾಸದ ಕರಾಳದಿನಗಳಾಗಿ ದಾಖಲಾಗಿವೆ. ಭಾರತದ ಪ್ರಜಾಪ್ರಭುತ್ವವನ್ನೂ, ಸ್ವಾತಂತ್ರ್ಯವನ್ನೂ ಅತಿಕ್ರಮಿಸಿ ನುಂಗಿದ ಸರ್ವಾಧಿಕಾರಿಯ ಆಜ್ಞೆಯಂತೆ ಭಾರತದ ಸಂವಿಧಾನಕ್ಕೆ ವಿರುದ್ಧವಾದ ರಾಜನೀತಿ, ಜನರ ಮನಸ್ಸಿನಲ್ಲಿ ಭಯಾತಂಕಗಳ ಕರಾಳ ನೆನಪುಗಳನ್ನು ಅಚ್ಚೊತ್ತಿ ಬಿಟ್ಟಿದೆ. ತುರ್ತು ಪರಿಸ್ಥಿತಿಯ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಹೊರಬಂದಿವೆ. ಈಗ ಹೊರಬಂದಿರುವ “ತುರ್ತು ಪರಿಸ್ಥಿತಿಯ ಕರಾಳ ದಿನಗಳು" ಎನ್ನುವ ಪುಸ್ತಕವನ್ನು ಬರೆದವರು ವಿ.ರವೀಂದ್ರನ್ ಕುಂಬಳೆ ಇವರು. ಈ ಪುಸ್ತಕದಲ್ಲಿರುವುದು ಬರಹಗಾರನ ಜೀವನಾನುಭವವೇ ಆಗಿದೆ.

ಪುಸ್ತಕದ ಮೂಲ ಮಲಯಾಳಂ ಭಾಷೆಯ ‘ಅಡಿಯಂತರಾವಸ್ಥೆಯಿಲೆ ಇರುಂಡ ನಾಳುಗಳ್' ಎಂಬ ಕೃತಿ. ಈ ಪುಸ್ತಕವನ್ನು ಸೊಗಸಾಗಿ ಅನುವಾದ ಮಾಡಿದ್ದಾರೆ ಪ್ರಮೀಳಾ ಮಾಧವ್ ಇವರು. ಈ ಕೃತಿಯ ಬಗ್ಗೆ ಮೂಲ ಲೇಖಕರಾದ ರವೀಂದ್ರನ್ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿರುವುದು ಹೀಗೆ…

“ನಾನು ಬರಹಗಾರನಲ್ಲ. ಆದರೂ ರಾಜಕೀಯ ಜೀವನದಲ್ಲಿ ನಡೆಸಿದ ಹೋರಾಟಗಳು ಅನುಭವಗಳೂ ಮನಸ್ಸಿನಲ್ಲಿ ಹೆಪ್ಪುಗಟ್ಟಿದ ಸಮಯದಲ್ಲಿ ಅವುಗಳನ್ನು ಬರೆಯಲೇ ಬೇಕೆಂಬ ಒತ್ತಡವುಂಟಾಯಿತು. ತೀವ್ರವಾಗಿ ಕಾಡುವ ಬದುಕಿನ ಅನುಭವಗಳು, ಎಂದೆಂದೂ ಮರೆಯಲಾರದ ಭೀಕರ ದೃಶ್ಯಗಳಾಗಿ ಇವತ್ತೂ ನನ್ನ ಕಣ್ಣು, ಮನಸ್ಸುಗಳಲ್ಲಿ ಅಚ್ಚಳಿಯದೇ ಇವೆ. 

ಯಾವುದೇ ಬರಹವನ್ನಾದರೂ ಸಾರ್ಥಕಗೊಳಿಸುವುದು ಅನುಭವಗಳೇ. ಪ್ರಜಾಪ್ರಭುತ್ವದ ಎಲ್ಲ ಘಟ್ಟಗಳನ್ನು ಮೌನವಾಗಿಸಿದ, ದಟ್ಟವಾಗಿ ಕವಿದ ಭೀಕರ ತುರ್ತುಪರಿಸ್ಥಿತಿಯ ಕರಾಳ ದಿನಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ, ಅದರ ವಿರುದ್ಧ ಪ್ರತಿಭಟನೆ ಮತ್ತು ಹೋರಾಟಗಳನ್ನು ನಡೆಸಿದ, ಸ್ಪೂರ್ತಿ ಚೈತನ್ಯರಾದ ಹೋರಾಟಗಾರರನ್ನು ಈ ಮೂಲಕ ಪರಿಚಯಿಸುವ, ನೆನಪಿಸುವ ಉದ್ದೇಶ ನನ್ನದು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತುರ್ತು ಪರಿಸ್ಥಿತಿಯ ಕಾಲದಲ್ಲಿ ಒಬ್ಬ ಪ್ರಚಾರಕರಾಗಿದ್ದರು. ಕರಪತ್ರಗಳ ವಿತರಣೆಯನ್ನು ಮಾಡುವ ಸಂದರ್ಭಗಳಲ್ಲಿ ಅವರು ನಿಜರೂಪವನ್ನು  ಮರೆಮಾಡುತ್ತಿದ್ದರು. ಸೆರೆಮನೆಯಲ್ಲಿ ಬಂಧಿತರಾಗಿದ್ದ ನಾಯಕರುಗಳಿಗೆ ಕರಪತ್ರವನ್ನು ತಲುಪಿಸುವಾಗ ಅವರು ಸಿಖ್ಖರಂತೆಯೋ, ಕಾಲೇಜು ವಿದ್ಯಾರ್ಥಿಯಂತೆಯೋ, ಸನ್ಯಾಸಿಯಂತೆಯೋ ವೇಷ ಬದಲಿಸುತ್ತಿದ್ದರು.”

ಪುಸ್ತಕಕ್ಕೆ ಗೋವಾದ ರಾಜ್ಯಪಾಲರರಾದ ಪಿ ಎಸ್ ಶ್ರೀಧರನ್ ಪಿಳ್ಳೆ ಅವರು ‘ಉಪದ್ಭಾತ' ದಲ್ಲಿ ಹಿತನುಡಿಗಳನ್ನು ಬರೆದಿದ್ದಾರೆ. ಅವರ ಅನಿಸಿಕೆಯಂತೆ “ನನ್ನ ಹಳೆಯ ಸಹಕಾರ್ಯಕರ್ತನಾಗಿದ್ದ ಕುಂಬ್ಳೆಯ ಶ್ರೀ ವಿ ರವೀಂದ್ರನ್ ಬರೆದ “ತುರ್ತು ಪರಿಸ್ಥಿತಿಯ ಕರಾಳ ದಿನಗಳು" ಎಂಬ ಈ ಕೃತಿ ನಮ್ಮ ಸಾಮಾಜಿಕ, ರಾಜಕೀಯ ಚರಿತ್ರೆಯ ಕ್ಷೇತ್ರಕ್ಕೆ ಒಂದು ಮೌಲಿಕ ಕೊಡುಗೆಯಾಗಿದೆ. ಓದು ಮತ್ತು ಬರಹಗಳನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ರಾಜಕೀಯ ಚಟುವಟಿಕೆಗಳಲ್ಲಿನ ಅವಿಭಾಜ್ಯ ಘಟಕವಾಗಿ ಸ್ವೀಕರಿಸಿ ಎಪ್ಪತ್ತೈದು ವರ್ಷಗಳೇ ಸಂದಿವೆ. ಸ್ವಾತಂತ್ರ್ಯಾನಂತರ ನಡೆದ ಮೊದಲ ಚುನಾವಣೆಯ ವೇಳೆ ಸಾರ್ವಜನಿಕ ಬದುಕಿನಲ್ಲಿ ಹೊಸತೊಂದು ಪ್ರಶ್ನೆ ಉದ್ಭವಿಸಿತು. ಓದುಬರಹ ತಿಳಿಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಪ್ರಜಾಪ್ರಭುತ್ವದ ಪಾತ್ರವನ್ನು ನಿರ್ಣಯಿಸುವುದು ಇಂಥವರಿಂದ ಸಾಧ್ಯವೇ? ವಿವಿಧ ಪಕ್ಷಗಳಲ್ಲಿರುವ ಕಾರ್ಯಕರ್ತರು ಈ ವಿಷಯದಲ್ಲಿ ಜನರಿಗೆ ತಿಳಿಹೇಳುವುದೇ ಈ ಸಮಸ್ಯೆಗಿರುವ ಪರಿಹಾರವೆಂದು ಅಂದಿನ ಜನನಾಯಕರು ಹೇಳಿದ್ದರು. ಆದರೆ ಸದ್ಯದ ರಾಜಕೀಯ ವರ್ತುಲದಲ್ಲಿ ಆ ರೀತಿಯ ಶಿಕ್ಷಣವನ್ನು ಕೊಡಲು ಸಾಧ್ಯವಿದೆಯೇ? ಎಂಬ ತೀಕ್ಷ್ಣವಾದ ಪ್ರಶ್ನೆ ರಾಜನೈತಿಕ ವಲಯದಲ್ಲಿ ಎದುರಾಗಿದೆ.” ಎನ್ನುತ್ತಾ ಅಂದಿನ ತುರ್ತು ಪರಿಸ್ಥಿತಿಯ ಘಟನಾವಳಿಗಳನ್ನು ಮೆಲುಕು ಹಾಕಿದ್ದಾರೆ.

ಮಲಯಾಳ ಭಾಷೆಯಿಂದ ಕನ್ನಡಕ್ಕೆ ಸೊಗಸಾಗಿ ಅನುವಾದ ಮಾಡಿದವರು ಪ್ರಮೀಳಾ ಮಾಧವ್ ಇವರು. ಇವರು ತಮ್ಮ ಅನುವಾದ ಸವಿಸ್ಮರಣೆಯಲ್ಲಿ ಬರೆದುಕೊಂಡದ್ದು ಹೀಗೆ... “ ಈ ಒಂದು ಚಿಕ್ಕ ಪ್ರದೇಶದಲ್ಲಿಯೇ ಇಷ್ಟೊಂದು ದೌರ್ಜನ್ಯ ನಡೆದಿದ್ದರೆ ಇಡೀ ದೇಶದ ಅವಸ್ಥೆ ಹೇಗಿದ್ದಿರಬಹುದು? ಮೂರು ಸಹಸ್ರಮಾನದ ಹಿಂದೆ ಪ್ಲೇಟೋ ತನ್ನ ‘ದಿ ರಿಪಬ್ಲಿಕ್' ಕೃತಿಯಲ್ಲಿ ಒಂದು ಮುಖ್ಯ ವಿಷಯವನ್ನು ಪ್ರಸ್ತಾಪಿಸಿದ್ದ. ಅವನ ಅಭಿಪ್ರಾಯದಂತೆ ಆಡಳಿತಗಾರ ನಿರ್ಮೋಹಿಯೂ ವಿವೇಕಿಯೂ ಆಗಿರತಕ್ಕದ್ದು. ಇಲ್ಲವಾದರೆ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ರಾಜಕಾರಣ ಹಿಂಸಾತ್ಮಕವಾಗಿ ಏನನ್ನೂ ಕೂಡ ಮಾಡೀತು!” 

ಪುಸ್ತಕದ ಅನುಕ್ರಮಣಿಯಲ್ಲಿ ೬೧ ಪುಟ್ಟ ಪುಟ್ಟ ಅಧ್ಯಾಯಗಳಿವೆ. ಲೇಖಕರು ತಮ್ಮ ಊರಾದ ಕುಂಬಳೆ ಮತ್ತು ಅದರ ಆಸುಪಾಸಿನ ಗ್ರಾಮಗಳಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಹೋಗಿದ್ದಾರೆ. ಪ್ರತೀ ಅಧ್ಯಾಯದಲ್ಲೂ ಅದಕ್ಕೆ ಪೂರಕವಾದ ಚಿತ್ರವನ್ನು ನೀಡಿದ್ದಾರೆ. ಸುಮಾರು ೧೭೫ ಪುಟಗಳಷ್ಟು ಮಾಹಿತಿಯನ್ನು ಒಳಗೊಂಡಿರುವ ಈ ಪುಸ್ತಕಕ್ಕೆ ಕಾಸರಗೋಡಿನ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎ. ಶ್ರೀನಾಥ್ ಕಾಸರಗೋಡು ಇವರು ನಲ್ನುಡಿಯನ್ನು ಬರೆದಿದ್ದಾರೆ. ತುರ್ತು ಪರಿಸ್ಥಿತಿಯ ವರ್ಷಗಳ ನಂತರ ಹುಟ್ಟಿದವರು ಈ ಪುಸ್ತಕವನ್ನು ಅವಶ್ಯ ಓದಬೇಕು.