ಪ್ರಿಯ ಗಾಂಧಿ

ಪ್ರಿಯ ಗಾಂಧಿ

ಕವನ

 ಸತ್ತು ಬದುಕಿದೆ ಕಣಾ

 
 
ಪ್ರಿಯ ಗಾಂಧಿ,

ಬುದ್ಧಬಸವಂಬೇಡ್ಕರ್ ಎಂದು ಒಟ್ಟಿಗೆ ನೆನೆವ
ಆಧುನಿಕ ತ್ರಿಮೂರ್ತಿಗಳಲಿ ನೀನೊಬ್ಬನಲ್ಲ.
ದಶಾವತಾರಿಗಳೊಳು ನಿನಗೆ ತಾವಿದೆಯೆ ?
ಪ್ರಚ್ಛನ್ನ ಕಲ್ಕಿಯೆಂದಿಹನು ಪುಟ್ಟಪ್ಪ ನಿನ್ನ !

ನೀನು ಮುಸ್ಲಿಮನಲ್ಲ, ನೀನು ಕ್ರೀಸ್ತುವನಲ್ಲ
ದಲಿತ ಬೌದ್ಧನು ಅಲ್ಲ, ಹಾರುವನುಮಲ್ಲ.
ತಮ್ಮ ಗುಂಪಲ್ಲದವ ತಮ್ಮ ಹಿತ ಕಾಯುವನೆ ?
ಯಾರು ನಿನ್ನನು ಪೂರ್ತಿ ನಂಬಲೇ ಇಲ್ಲ !

ಗೀತೆಯೋದುವ ಗೊಡ್ಡು, ಹಾರುವರ ಹಿಂಬಡುಕ
ಹಿಂದುವಲ್ಲದ ಜನರ ಹಿತವ ಕಾಯುವನೆ ?
ಹೇರಾಮ ಜಪದವನು ಜೈಭೀಮನೆನ್ನುವನೆ ?
ಜೆಹ್ಹಾದನೊಪ್ಪುತ್ತ ಕಾಫಿರರ ಕೊಲ್ಲುವನೆ ?

ಪಾಕಿಗಳ ಹಿತಬಯಸೊ ಮೂಢ ಕಾಯಸ್ಥನಿವ-
ನೆನ್ನುತ್ತ ಕೊಂದವನೆ ನಿನ್ನ ಹಿಂದು !
ಗೊತ್ತೆ ನೂತನ ಗಾದೆ ? ಎಲ್ಲರ ಸ್ನೇಹಿತನು
ಯಾರ ಸ್ನೇಹಿತನೂ ಅಲ್ಲ ವೆಂದು !

ನಿನ್ನ ವಂಶದ ಜನರೆ ನಿನ್ನ ನಾಮದ ಬಲವ
ಬಳಕೆ ಮಾಡದೆ ಇಹರು, ಶರಣು ಎಂಬೆ.
ಚೋದ್ಯವಿದೊ ಕಾಶ್ಮೀರಿ ಪಂಡಿತನ ವಂಶಜರು
ವೋಟಿನಾಸೆಗೆ ನಿನ್ನ ಹೆಸರ ಹೊತ್ತಿಹರೋ !


ರಾಜಕಾರಣಿಗಳಿಗೆ ನೀನು ಒಳ್ಳೆಯ ದಾಳ
ದೇಶ ಮಾರುವ ಜನಕೆ ಇದು ಒಳ್ಳೆ ಕಾಲ !
ನಿನ್ನೆಲ್ಲ ಸಿದ್ಧಾಂತಗಳಿಂದು ಸರ್ವೋದಯದ
ಮುದುಕರೊಡನೆಯೆ ತಾವೂ ನಶಿಸಬಹುದೋ ?

ಅದಕೆಂದೆ ನವಜನ್ಮ ಪಡೆಯೆಂಬ ಕೂಗಿಹುದು
ಮನಸುಕ್ಕಿ ನೀ ಮತ್ತೆ ಹುಟ್ಟೀಯೆ ಜೋಕೆ !
ತ್ಯಾಗ, ಪ್ರೇಮಗಳೆಲ್ಲ ಇಂದು ಬಳಕೆಯಲಿಲ್ಲ
ಅಹಿಂಸೆಯ ವ್ರತಕಿಲ್ಲಿ ಬೆಲೆಯೆ ಇಲ್ಲ.

ಇಂದು ಜೀವಂತಿಕೆಯ ಲಕ್ಷಣವು ತಾ
ಕರುಣೆ ತೋರುವುದಲ್ಲ ಲವಲವಿಕೆಯಲ್ಲ
ನೀನು ಬದುಕಿರುವಿಯೆಂದರೆ ಸುದ್ದಿ
ಮಾಡುತ್ತಿರಬೇಕು ; ಸ್ಫೋಟಿಸುತ್ತಿರಬೇಕು !

ಕಾಫಿರರನೆಲ್ಲ ಕೊಲ್ಲುತಿರಬೇಕು
ಹಾರುವರನೆಲ್ಲ ನೀ ಹಳಿಯುತಿರ ಬೇಕು
ಹೊರಗಟ್ಟು ಹೊರಗಟ್ಟು ಹೊಲಸು ಹಾರ‍್ವರನೆಲ್ಲ
ದೇಶ ತಾನುದ್ಧಾರವಾದೀತೋ ನೋಡು

ಇಷ್ಟು ಗೈದರೆ ಇಂದು ನಿನ್ನ ಕೊಂಡಾಡುವರು
ಇಲ್ಲದಿರೆ ಮತ್ತೆ ನಿನ್ ಹತ್ಯೆ ಗೈದಾರು !
ಇಲ್ಲ, ಬಹುಶಃ ಇಲ್ಲ, ಇದನೆಲ್ಲ ಕಂಡುಂಡು
ಆತ್ಮಹತ್ಯೆಗೆ ನೀನೆ ಶರಣು ಪೋಪೆ !

ಅದಕೆಂದೆ ನಾನೆಂಬೆ ಬದುಕಿ ಹಲುಬುದಕಿಂತ
ಹಲುಬಿ ಸಾವುದಕಿಂತ ಸತ್ತು ಬದುಕಿದೆ ಕಣಾ
ನೀ ಸತ್ತು ಬದುಕಿದೆ !!
 
*****
- ಎಸ್ ಎನ್ ಸಿಂಹ, ಮೇಲುಕೋಟೆ.
 
 
 
 
 

Comments