ಮನಸುಗಳ ಮಿಲನ

ಮನಸುಗಳ ಮಿಲನ

ಪುಸ್ತಕದ ಲೇಖಕ/ಕವಿಯ ಹೆಸರು
ಸುಮಾ ಉಮೇಶ್ ಗೌಡ
ಪ್ರಕಾಶಕರು
ಅಕ್ಷರ ಚಪ್ಪರ ಪ್ರಕಾಶನ, ಲಕ್ಕಸಂದ್ರ ಬಡಾವಣೆ, ಬೆಂಗಳೂರು -೫೬೦೦೩೦
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ : ೨೦೨೩

ಸ್ತ್ರೀ ಸಂವೇದನೆಗಳ ಮಾನಸಿಕ ತೊಳಲಾಟದ ಬಗ್ಗೆ ಲೇಖಕಿ ಸುಮಾ ಉಮೇಶ್ ಗೌಡ ಇವರು ತಮ್ಮ ನೂತನ ಕಾದಂಬರಿ “ಮನಸುಗಳ ಮಿಲನ" ವನ್ನು ರಚಿಸಿದ್ದಾರೆ. ಈ ೮೮ ಪುಟಗಳ ಪುಟ್ಟ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂಥ ಕಾದಂಬರಿಯಾದರೂ ಓದಿದ ಬಳಿಕ ಅದರ ಕಥಾ ವಸ್ತು ಬಹಳ ಕಾಲ ನಮ್ಮ ಮನದಲ್ಲಿ ಉಳಿಯಲಿದೆ. ಈ ಬಗ್ಗೆ ಲೇಖಕರಾದ ಪದ್ಮನಾಭ ಡಿ. ಅವರು ತಮ್ಮ ಮುನ್ನುಡಿಯಲ್ಲಿ ಹೇಳುವುದು ಹೀಗೆ... 

ಸಂಗೀತ ಸಾಹಿತ್ಯ ಕಲಾವಿಹೀನಃ
ಸಾಕ್ಷಾತ್ ಪಶೂನಾಂ ಪರಪುಚ್ಛಹೀನಃ
ತೃಣಂ ನ ಖಾದನ್ನಪಿ ಜೀವಮಾನಃ
ತದ್ಭಾಗದೇಯಂ ಪರಮಂ ಪಶೂನಾಂ

ಈ ಶ್ಲೋಕದ ಭಾವಾರ್ಥವೆಂದರೆ ಸಂಗೀತ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ ಇಲ್ಲದವನು ಪಶುವಿಗಿಂತಲೂ ಹೀನ. ಏಕೆಂದರೆ ಅವನು ಜೀವನದ ಬಹುಭಾಗವನ್ನು ಲೆಕ್ಕಾಚಾರದಲ್ಲಿ ಅಥವ ಒತ್ತಡದಲ್ಲಿಯೇ ಕಳೆಯುತ್ತಾನೆ. ದೇಹಕ್ಕೆ ಸ್ನಾನವಾಗುವಂತೆ ಮನಸಿಗೂ ಸ್ನಾನವಾಗಬೇಕು. ಆ ಸ್ನಾನಕ್ಕೆ ನೀರು ಸಾಬೂನುಗಳಂತೆ ಕಲೆ ಮತ್ತುಸಾಹಿತ್ಯ. ಇಂತಹ ಸಾಹಿತ್ಯ ಹಾಗೂ ಕಲೆಗೆ ಜನಾಶ್ರಯ ಬೇಕೇಬೇಕು. ಹಿಂದೆ ರಾಜಾಶ್ರಯ ದೊರೆಯುತ್ತಿತ್ತು. ಇಂದು ರಾಜಾಶ್ರಯ ಇಲ್ಲವಾದರೂ ಸಾಹಿತ್ಯ ಹಾಗೂ ಕಲೆಯ ಪ್ರೋತ್ಸಾಹ ಸಿಗುತ್ತಿರುವುದು ಫೇಸ್ಬುಕ್ ಸಾಹಿತ್ಯಬಳಗಗಳಿಂದ ಮತ್ತು ಓದುಗರಿಂದ. ವಿಶೇಷವಾಗಿ ಉದಯೋನ್ಮುಖರಿಗೆ ಜಾಲತಾಣದ ಸಾಹಿತ್ಯ ಬಳಗಗಳು ವರವಾಗಿ ಪರಿಣಮಿಸಿ ವೇದಿಕೆಯನ್ನೂ ಓದುಗರನ್ನೂ ನೀಡಿ ಸಾಹಿತ್ಯಾಸಕ್ತಿಗೆ ನೀರೆರೆದಿವೆ. ಅಂತಹ ಬಳಗಗಳಲ್ಲಿ ಅಕ್ಷರ ಚಪ್ಪರ ವಿಶಿಷ್ಟವಾದ ಬಳಗ. ಅಂತೆಯೇ ಫೇಸ್ಬುಕ್ ಬಳಗವನ್ನು ಸಮರ್ಥವಾಗಿ ಬಳಸಿಕೊಂಡ ಲೇಖಕಿಯರಲ್ಲಿ ಸುಮಾ. ಯು. ಕೆ. ಒಬ್ಬರು. ಹೊರಗಿನ ವಾತಾವರಣಕ್ಕಿಂತ ಅಂತರಿಕ ವಾತಾವರಣ ಮುಖ್ಯ ಎಂದು ಮನಗಂಡ ಇವರು ಅವಿರತವಾಗಿ ಫೇಸ್ಬುಕ್ನಲ್ಲಿ ಸಾಹಿತ್ಯ ಕೃಷಿ ಮಾಡುತ್ತಲೇ ಇದ್ದಾರೆ. ಇಂದು ಅಕ್ಷರ ಚಪ್ಪರ ಬಳಗದ ಮೂಲಕ ಇವರ ಕೃತಿಯೊಂದು ಲೋಕಾರ್ಪಣೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

ಈ ಕೃತಿಯ ಬಗ್ಗೆ ಹೇಳುವುದಾದರೆ ಸ್ತ್ರೀ ಸಂವೇದನೆ ಜೊತೆಯಲ್ಲೇ ಉತ್ತಮ ಸಂದೇಶವಿದೆ. ಜೀವನದಲ್ಲಿ ಪದವಿ ಪ್ರಮಾಣಪತ್ರ ವೇ (ಡಿಗ್ರೀ ಸರ್ಟಿಫಿಕೇಟ್) ಮುಖ್ಯವಲ್ಲ. ಹೆಣ್ಣು ಮನಸ್ಸು ಮಾಡಿದರೆ ಸಾಧಿಸಬಲ್ಲಳು ಸ್ವಾಭಿಮಾನಕ್ಕೆ ಪದೇಪದೇ ಧಕ್ಕೆ ಬಂದರೆ ಸಹಿಸುವುದಿಲ್ಲ ಹೊಂದಾಣಿಕೆ ಮುಖ್ಯ ಸಣ್ಣ ಸಣ್ಣ ಕಾರಣಕ್ಕೆ ವಿಚ್ಛೇದನ ಸರಿಯಿಲ್ಲ ಎಂಬ ಸಂದೇಶವೂ ಇದೆ. ಅ. ನ. ಕೃ ಹೇಳುವಂತೆ ಕವಿಯ ಕೆಲಸ ನೇರವಾಗಿ ಉಪದೇಶ ನೀಡುವುದಲ್ಲ. ಬದಲಿಗೆ ಕೃತಿಯಲ್ಲಿ ಸೃಷ್ಟಿಸಿದ ಪಾತ್ರಗಳು ತಮ್ಮ ನಡವಳಿಕೆಯಿಂದಲೇ ಸಮಾಜಕ್ಕೆ ಸಂದೇಶ ನೀಡಬೇಕು . ಈ ನಿಟ್ಟಿನಲ್ಲಿ ಈ ಕಾದಂಬರಿಯ ಕಥಾನಕ ರೂಪುಗೊಂಡಿದೆ. ಪಾತ್ರಗಳು ತಮ್ಮ ವರ್ತನೆಯಿಂದಲೇ ಸ್ಪಷ್ಟ ಸಂದೇಶ ಸಾರುತ್ತವೆ.

ಕೇವಲ ಘಟನೆಗಳನ್ನು ಜೋಡಿಸಿದರಷ್ಟೇ ಕಥೆಯಾಗುವುದಿಲ್ಲ. ಅಲ್ಲೊಂದು ಭಾವಸ್ಪರ್ಶ ಇರಬೇಕು. ಸತ್ವಯುತ ಸಂಭಾಷಣೆಗಳು ಕಥೆಯ ಮಟ್ಟವನ್ನು ಹೆಚ್ಚಿಸುತ್ತವೆ. ಆದರೆ ಸಂಭಾಷಣೆಗಳೇ ಅಧಿಕವಾಗಿ ನಿರೂಪಣೆ ಸೊರಗಬಾರದು.
ಕಾದಂಬರಿಯಲ್ಲಿ ಭಾವಸ್ಪರ್ಶಿ ಘಟನೆಗಳಿದ್ದರೂ ಎಲ್ಲೂ ಅತಿರೇಕವಿಲ್ಲ. ಸಹಜತೆಯಿಂದ ದೂರ ಎನಿಸಿಲ್ಲ. ಹಲವಾರು ಕಡೆ ಲೇಖಕಿ ಗ್ರಾಂಥಿಕ ಭಾಷೆ ಬದಲು ಆಡುಮಾತಿನ ಶೈಲಿ ಬಳಸಿದ್ದಾರೆ. ಉದಾಹರಣೆಗೆ ನನಗೂ ನಿನಗೂ ಎನ್ನುವ ಬದಲು ನಂಗು ನಿಂಗು ಎಂದು ಬಳಸಿದರೆ ಇದು ತಪ್ಪು ಎಂದು ಹೇಳಲಾಗುವುದಿಲ್ಲ ಆದರೆ ಎಲ್ಲ ಸಂದರ್ಭಗಳಲ್ಲೂ ಚಂದ ಕಾಣುವುದಿಲ್ಲ ಎಂದು ನನ್ನ ಅನಿಸಿಕೆ.