ರಜೆಯ ದಿನಚರಿ

ರಜೆಯ ದಿನಚರಿ

ಕವನ

 

ಚಟ ಪಟ ಓಡುವ ಪುಟಾಣಿ ಪುಟ್ಟಿ

ಎಲ್ಲದರಲ್ಲೂ ಬಲು ಗಟ್ಟಿ

 

ಶಾಲೆಗೆ ಬೇಸಿಗೆ ರಜೆ ಬಂತು

ಪುಟ್ಟಿಯ ದಿನಚರಿ ಚುರುಕಾಯ್ತು

 

ಬೆಳಿಗ್ಗೆ ಬೇಗನೆ ಏಳುತ್ತಾಳೆ

ಅಣ್ಣನ ನಿದ್ರೆ ಕೆಡಿಸುತ್ತಾಳೆ

 

ಅಮ್ಮನ ಹತ್ತಿರ ಹೋಗುತ್ತಾಳೆ

ಕುಡಿಯಲು ಹಾಲು ಕೇಳುತ್ತಾಳೆ

 

ಅಪ್ಪನ ಬಳಿಗೆ ಓಡುತ್ತಾಳೆ

ದಿನ ಪತ್ರಿಕೆ ಕಸಿಯುತ್ತಾಳೆ

 

ಅಜ್ಜನ ಕೋಲನು ಹಿಡಿಯುತ್ತಾಳೆ

ಅಜ್ಜಿಯ ಚಾಳೀಸ ಹಾಕುತ್ತಾಳೆ

 

ಗೋಡೆಯ ತುಂಬಾ ಚಿತ್ರಬರೆದು

ಅಣ್ಣ ಬರೆದನು ಅನ್ನುತ್ತಾಳೆ

 

ಸ್ನಾನಕ್ಕೆ ಹೋಗಲು ಕೊನೆಯವಳು

ತಿಂಡಿಗೆ ಮಾತ್ರ ಮೊದಲಿಗಳು

 

ಅಣ್ಣನ ಆಡಲು ಕರೆಯುತ್ತಾಳೆ

ಎಲ್ಲ ಆಟಕು ಸೈ ಅನ್ನುತ್ತಾಳೆ

 

ಆಟದಲ್ಲವಳು ಸೋತರೆ ಮಾತ್ರ

ಊದಿಸುತ್ತಾಳೆ ಕೆನ್ನೆಯ ಗಾತ್ರ !

 

ಪುಟ್ಟಿ ತಂಟೆ ಮಾಡದೆ ಕುಳಿತರೆ

ಮನೆಯವರಿಗೆಲ್ಲ ಬೇಸರ ಕರೆಕರೆ

 

ಅವಳಿರಬೇಕು ರೇಗಸಿ ನಗಿಸಲು

ಪುಟಾಣಿ ಎಲ್ಲರ ಪ್ರೀತಿಗೆ ಪಾತ್ರಳು

 

ಎಲ್ಲರ ಮೆಚ್ಚಿನ ಪುಟ್ಟಿಗೆ

ಚಪ್ಪಾಳೆ ತಟ್ಟೋಣ ಒಟ್ಟಿಗೆ                

                                   - ಅನಂತ ರಮೇಶ್