ವಾಲ್ಟ್ ವಿಟ್ಮನ್‌ನ ಕೆಲವು ಕವಿತೆಗಳು

ವಾಲ್ಟ್ ವಿಟ್ಮನ್‌ನ ಕೆಲವು ಕವಿತೆಗಳು

ಕವನ

ವಾಲ್ಟ್ ವಿಟ್ಮನ್‌ನ ಕೆಲವು ಕವಿತೆಗಳು

ಹೆಗೆಲ್‌ನನ್ನು ಓದಿದ ಬಳಿಕ
ಮನಸ್ಸಲ್ಲೇ ಲೋಕವಲೆಯುತ್ತ ಕಂಡೆ ಇದ್ದ ಕಿಂಚಿತ್ ಒಳ್ಳೆಯದು
ಕ್ರಮವಾಗಿ ಸಾಗಿಹೋಗುತ್ತಿತ್ತು ಚಿರಂಜೀವತ್ವದ ಕಡೆಗೆ
ಉಳಿದ ಕೇಡೆಲ್ಲವೂ ಒಗ್ಗೂಡಿ ಇಡಿಯಾಗಲು
ಇಡಿಯಾಗಿ ಮಡಿಯಲು ಅವಸರದ ನಡಿಗೆಯಲ್ಲಿದ್ದವು

ಒಂದು ಫಾರ‍್ಮಿನ ಚಿತ್ರ
ಹಳ್ಳಿಯ ಪ್ರಶಾಂತ ಗುಡಿಸಲಿನ ದೊಡ್ಡ ತೆರೆದ ಬಾಗಿಲಿನಿಂದ ಕಾಣುತ್ತದೆ
ಸೂರ್ಯನ ಬೆಳಕು ಹೊಳೆದ ಹುಲ್ಗಾವಲು. ಕುದುರೆ ಆಕಳುಗಳು ಮೇಯುತ್ತಿವೆ
ಮಂಪರು ಕವಿದ ನೋಟ. ದೂರಕ್ಷಿತಿಜ ಮಸಕಾಗಿ ಕರಗಿಹೋಗುತ್ತಿದೆ

ಮಗುವಿನ ಅಚ್ಚರಿ
ಪ್ರತಿ ಭಾನುವಾರ ದೇವರನ್ನು ತನ್ನ ಹೇಳಿಕೆಗಳಲ್ಲಿ ನಿಕ್ಷೇಪ ಮಾಡಿ ಇಡುತ್ತಿದ್ದ 
ಪ್ರೀಚರ್‌ನ ಮಾತುಗಳನ್ನ ಕೇಳುತ್ತಿದ್ದದು ನನಗೆ ನೆನಪಿದೆ 
ನಾನಾಗ ಅಚ್ಚರಿ ತುಂಬಿದ ನಿಶಬ್ದವಾಗಿರುತ್ತಿದ್ದ ಹುಡುಗ
ಯಾರೋ ಒಬ್ಬನ ಅಥವಾ ಯಾವುದೋ ಪ್ರಭಾವವೊಂದರ 
ಎದುರು ಸ್ಪರ್ಧಿಸುತ್ತಿದ್ದ ಹಾಗೆ ಅವನು. 

ಓಟಗಾರ
ಸಮತಟ್ಟಾದ ರಸ್ತೆಯ ಮೇಲೆ ಓಡುತ್ತಾನೆ ಚೆನ್ನಾಗಿ ತರಬೇತಿ ಪಡೆದ ಓಟಗಾರ
ಅವನು ತೆಳ್ಳನೆಯ ದೃಢಕಾಯದ ಮನುಷ್ಯ, ಹುರಿಗಟ್ಟಿದ ಕಾಲುಗಳು
ತೆಳ್ಳಗಿನ ಬಟ್ಟೆ ತೊಟ್ಟಿದ್ದಾನೆ. ಓಡುವಾಗ ಮುಂದೆ ಬಾಗುತ್ತಾನೆ
ಕೊಂಚವೇ ಮಡಚಿದ ಮುಷ್ಠಿ ಮತ್ತೆ ಕೊಂಚವೇ ಎತ್ತರಿಸಿದ ತೋಳುಗಳು

ಸುಂದರ ಹೆಂಗಸರು
ಹೆಂಗಸರು - ಕೂತಿದ್ದಾರೆ, ಓಡಾಡುತ್ತಿದ್ದಾರೆ ಅತ್ತಿಂದಿತ್ತ ಇತ್ತಿಂದತ್ತ, 
ಕೆಲವರು ವಯಸ್ಸಾದವರು, ಕೆಲವರು ಯುವತಿಯರು
ಯುವತಿಯರು ಸುಂದರವಾಗಿದ್ದಾರೆ. ಆದರೆ ವಯಸ್ಸಾದವರು
ಯುವತಿಯರಿಗಿಂತಲೂ ಬಹಳ ಸುಂದರವಾಗಿದ್ದಾರೆ

ತಾಯಿ ಮತ್ತು ಹಸುಗೂಸು
ಆ ಮಗು ತಾಯ ಮೊಲೆಯನ್ನು ಹಕ್ಕಿಗೂಡಾಗಿಸಿಕೊಂಡಂತೆ ಮಲಗಿ ನಿದ್ದೆಹೋಗಿದೆ
ಆ ನಿದ್ದೆಹೋದ ತಾಯಿ ಮತ್ತು ಮಗು - ಸದ್ದಡಗಿಸಿಕೊಂಡು ನಾನು
ಅವನ್ನೇ ಗಮನಿಸುತ್ತೇನೆ ಅಧ್ಯಯನವೆಂಬಂತೆ

ಯೋಚನೆ
ವಿಧೇಯತೆಯ, ನಂಬಿಕೆಯ, ಹೊಂದಿಕೊಳ್ಳುವದರ ಕುರಿತ ಯೋಚನೆ
ಸುಮ್ಮನೆ ಹಾಗೇ ನಿಂತಿರುವಾಗ ಅಲ್ಲೇನೋ ಬಲು ದೊಡ್ಡ ಜನಸಮೂಹ 
ಜನರನ್ನೇ ನಂಬದ ಆ ಮುಂಚೂಣಿಯ ಜನರು ತುಂಬ ಗಂಭೀರವಾಗಿ 
ತಮ್ಮನ್ನು ಪ್ರಭಾವಿಸಿಬಿಟ್ಟಂತೆ ಸಾಗುತ್ತಿರುವುದನ್ನು ನೋಡುತ್ತಲಿರುವಾಗ

 

ಮುಖವಾಡದ ಹೆಣ್ಣು
ಆ ಮುಖವಾಡ, ಆಕೆಗೆ ಚಿರಂತನವಾದ ಮತ್ತು ಸಹಜವಾದ ವೇಷ ಮರೆಸುವ ವಸ್ತು
ಅವಳ ಮುಖವನ್ನು ಮರೆಸುತ್ತ ಅವಳ ರೂಪವನ್ನು ಮರೆಸುತ್ತ, 
ಅವಳು ನಿದ್ರಿಸುತ್ತಿರುವಾಗಲೂ ಅವಳ ಮೇಲೆ ಪ್ರತಿ ಗಂಟೆ, ಪ್ರತಿ ಕ್ಷಣ 
ಉದುರುತ್ತಿರುವ ಬದಲಾವಣೆಗಳು

ನ್ಯಾಯದ ಯೋಚನೆ
ನ್ಯಾಯದ ಯೋಚನೆ, ಅದೇನೋ ಎಂಥದಾದರೂ ಆಗಿರಲಿ 
ಆದರದೇ ಸಹಜ ನ್ಯಾಯವಾದಿಗಳು ಮತ್ತು ಸಂರಕ್ಷಕರು 
ಸಮರ್ಥಿಸಿದ ಕಾನೂನು ನಿರ್ಧಾರಗಳಿಗೆ ಅನ್ವಯಿಸಿ 
ಇದಾಗಲಿ ಅಥವಾ ಅದೇ ಆಗಿರಲಿ

ಎಲ್ಲದರ ಮೇಲೆ ತೇಲುತ್ತ
ನಿಸರ್ಗ ಕಾಲ ದೇಶ ಎಲ್ಲದರ ಮೇಲೆ ಎಲ್ಲದರ ಮೂಲಕ ತೇಲುತ್ತ
ನೀರಿನಲ್ಲಿ ಮುಂದೆ ಸಾಗುತ್ತಿರುವ ಹಡಗಿನಂತೆ ಆತ್ಮದ ಪಯಣ 
ಬರೀ ಬದುಕಷ್ಟೇ ಅಲ್ಲ, ಸಾವು, ಅನೇಕ ಸಾವುಗಳನ್ನು ಕುರಿತೂ ನಾನು ಹಾಡುತ್ತೇನೆ

ವೃದ್ದಾಪ್ಯಕ್ಕೆ
ನಿನ್ನಲ್ಲಿ ನಾನು ಅಳಿವೆಯೊಂದನ್ನು ಕಾಣುತ್ತೇನೆ. ಅದು ವಿಸ್ತಾರಗೊಳ್ಳುತ್ತದೆ ಕಡಲ ಮುಖದಲ್ಲಿ
ಮಹಾಸಾಗರದೊಳಕ್ಕೆ ತನ್ನ ಸುರಿದುಕೊಂಡು ಬಹಳ ಮಹತ್ತಾಗಿ ಹರಡಿಕೊಳ್ಳುತ್ತದೆ

ಸಮರ್ಪಣೆ
ಸಾವಿರ ಪರಿಪೂರ್ಣ ಹೆಣ್ಣು ಗಂಡುಗಳು ಬರುತ್ತಾರೆ
ಒಬ್ಬೊಬ್ಬರ ಸುತ್ತಲೂ ಗೆಳೆಯರ ಗುಂಪು
ಖುಷಿಯ ಮಕ್ಕಳು ಮತ್ತು ಜವ್ವನಿಗರು
ಅರ್ಪಣೆಯ ವಸ್ತುಗಳೊಂದಿಗೆ

***
ಆರ್ ವಿಜಯರಾಘವನ್
ಸೀನಿಯರ್ ಮೇನೇಜರ್
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್
ಪ್ರಧಾನ ಕಛೇರಿ, ಬಳ್ಳಾರಿ