ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ?

ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ?

ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ? .... ಈ ಥರ ಡ್ರೆಸ್ ಮಾಡಿಕೊಂಡರೆ ಇನ್ನೇನು?...ಆ ಜಾಗದಲ್ಲಿ ಅವಳೇನು ಮಾಡುತ್ತಿದ್ದಳು?
ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು. ತುಂಟ ನಗೆ ತುಂಬಿದ ಪ್ರಶ್ನೆಗಳು, ಗಂಡು ಮತ್ತು ಹೆಣ್ಣು, ಇಬ್ಬರಿಂದಲೂ. 

ಓರ್ವ ಹೆಣ್ಣು ಬಲಾತ್ಕಾರಕ್ಕೆ ತುತ್ತಾದಾಗ ಮೇಲಿನ ಪ್ರಶ್ನೆಗಳ ಧಾಳಿ. ಡಿಫೆನ್ಸ್ ಲಾಯರ್ ಕಡೆಯಿಂದಲ್ಲ, ಜನಸಾಮಾನ್ಯ ನ ಕಡೆಯಿಂದ . ಈ ಪ್ರಶ್ನೆ ಬರೀ ನಮ್ಮಂಥ ಹಿಂದುಳಿದ ದೇಶಗಳ ಜನರಿಂದ ಮಾತ್ರವಲ್ಲ,  
ಮಂಗಳ ಗ್ರಹಕ್ಕೆ ಜನರನ್ನು ಕಲಿಸಲು ಸಿದ್ಧತೆ ನಡೆಸುವ ಅಮೇರಿಕಾ ದಂಥ ದೇಶದವರದೂ ಇದೇ ನಿಲುವು. (ಭೂಮಿಯ ಪಾಡನ್ನು ನಾಯಿ ಪಾಡು ಮಾಡಿಯಾಯಿತು, ಈಗ ಮಂಗಳದ ಕಡೆ ಪಯಣ, ಅದನ್ನೂ ಹಾಳುಗೆಡವಲು).  

ಅಮೆರಿಕೆಯ 'ಮೇರಿ ವಿಲ್' ಪಟ್ಟಣದಲ್ಲಿ ಮೊನ್ನೆ ೧೪ ರ ವರ್ಷದ ಬಾಲಕಿಯೊಬ್ಬಳ ಮೇಲೆ ಫುಟ್ ಬಾಲ್ ಆಟಗಾರನೊಬ್ಬ ಅತ್ಯಾಚಾರ ಎಸಗಿ ಆಕೆಯ ಮನೆಯ ಹತ್ತಿರವೇ ಆಕೆಯನ್ನು ಬಿಸಾಡಿ ಹೋದ. ಅವನ ಮಿತ್ರ ಈ ನಡತೆಗೆಟ್ಟ ಕೃತ್ಯದ ಮೊಬೈಲ್ ಶೂಟಿಂಗ್ ಸಹ ನಡೆಸಿದ. ಕೊರೆಯುವ ಚಳಿಯಲ್ಲಿ ಆ ಬಾಲೆ ರಾತ್ರಿ ಕಳೆದಳು. ಸರಿಯಾದ ತನಿಖೆಯ ಕೊರತೆ ಮತ್ತು ಹುಡಗಿಯ ಅಸಹಕಾರದ ಕಾರಣ ತಪ್ಪಿತಸ್ಥ ರನ್ನು ಕೋರ್ಟ್ ಬಿಡುಗಡೆ ಮಾಡಿತು. ಹುಡುಗನ ಪರ ವಾದ ಮಾಡಿದ ಡಿಫೆನ್ಸ್ ಲಾಯರ್ ಫಾಕ್ಸ್ ನ್ಯೂಸ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ " ಆಕೆಗೆ ಸಂಭವಿಸಿದ್ದು ಸರಿ ಎಂದು ನಾನು ಹೇಳ್ತಾ ಇಲ್ಲ, ಆದರೆ ಆ ಸರೀ ರಾತ್ರೀಲಿ ಆಕೆ ಹೊರಕ್ಕೆ ಹೋಗಿದ್ದಾದರೂ ಏಕೆ?" ಎಂದು ಪ್ರಶ್ನೆ ಮಾಡಿದ. ಮಾಡದೆ ಏನು ಮಾಡಿಯಾನು? ಅತ್ಯಾಚಾರಕ್ಕೆ ಒಳಗಾಗಿದ್ದು ಯಾರದೋ ಹೆಣ್ಣು ಮಗಳು. ತನ್ನ ಮಗಳೋ, ತಂಗಿಯೋ ಆ ಸ್ಥಾನದಲ್ಲಿದ್ದರೆ ಗಲ್ಲು ಶಿಕ್ಷೆ ಕೊಡ ಮಾಡಲು ತನ್ನೆಲ್ಲಾ ಶ್ರಮ ವ್ಯಯಿಸುತ್ತಿದ್ದ. ಕೋರ್ಟಿನ ಛಾವಣಿ ಹರಿಯುವಂತೆ ಅಬ್ಬರಿಸುತ್ತಿದ್ದ. 

ನವದೆಹಲಿಯ ನಿರ್ಭಯ ಅತ್ಯಾಚಾರದ ಗಲಾಟೆ ಗೊತ್ತೇ ಇದೆಯಲ್ಲ. ಸಂಸ್ಕಾರ ವಿಹೀನ, ನಿರ್ದಯೀ  ಕಾಮ ಪಿಪಾಸುಗಳ ಪರ ವಕಾಲತ್ತು ವಹಿಸಿದ ವಕೀಲನೂ ಅತ್ಯಾಚಾರಿಗಳ ರೀತಿಯ ನಿರ್ದಯಿಯೇ. ಕಾಮ ಪಿಪಾಸುಗಳು ತಮ್ಮ ಮದನ ದಂಡದ ಪ್ರಯೋಗ ಮಾಡಿದರೆ ಇವನು ತಾನು ಕಲಿತ ವಕ್ರ ಬುದ್ಧಿಯ ವಕೀಲಿತನವನ್ನು ಬಳಸಿ ವಿವೇಚನೆಯ ಮೇಲೆ  ತನ್ನದೇ ರೀತಿಯ ಅತ್ಯಾಚಾರವನ್ನು ಮಾಡುತ್ತಾನೆ. ಈ ವಕೀಲ,  "ಲಿವಿಂಗ್ ಟುಗೆದರ್" ಅರೆಬರೆ ಬಟ್ಟೆ, ಬಾಯ್ ಫ್ರೆಂಡ್ ಜೊತೆ ಹೊರಗೆ ತಿರುಗೋದು ಮಾಡಿದಾಗ ಅತ್ಯಾಚರವನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಬೇಡಿ"  ಎಂದು ಕಿವಿ ಮಾತನ್ನು ಹೇಳುತ್ತಾನೆ.  

ಮನೆಯಲ್ಲಿ ಸದಾಚಾರ ಹೇಳಿ ಕೊಡಬೇಕಾದ ತಂದೆ ತಾಯಿ  ಧನದಾಸೆಗೆ ಬಿದ್ದು ಮಕ್ಕಳನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟು ದುಡಿಯಲು ಹೊರಟರೆ ಆಗುವ ಅನಾಹುತ ಇದು. ಹೆಣ್ಣನ್ನು ಗೌರವಿಸಲು, ಆದರಿಸಲು ಕಲಿಸದ ಸಮಾಜ ತನ್ನ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿಗೆ ತಾನೇ ಜವಾಬ್ದಾರೀ ಹೊರಬೇಕಾಗುತ್ತದೆ. ಅಷ್ಟೇ ಅಲ್ಲ, ಗಂಡು ಮಾಡಿದ್ದೆಲ್ಲಾ ಸರಿ, ಅವನು ಎಷ್ಟಿದ್ದರೂ ಗಂಡು ತಾನೇ ಎನ್ನುವ ಮಾತುಗಳ ಮುಕ್ತ ಲೈಸನ್ಸ್  ಚಾರಿತ್ರ್ಯವಿಹೀನ ಗಂಡುಗಳಿಗೆ ಹಿರಿಯರು ಕೊಡಮಾಡಿದಾಗ ಅವನು ತನ್ನ ಪಶು ಸಂಸ್ಕಾರ ವನ್ನಲ್ಲದೆ ಮತ್ತೇನನ್ನು ಮೆರೆಯಲು ಸಾಧ್ಯ?

ಚಾರಿತ್ರ್ಯ, ಶೀಲ, ಒಳ್ಳೆಯ  ನಡತೆ, ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು, ಅವು ಗಂಡಿಗೂ ಅನ್ವಯಿಸಬೇಕು. ಆಗ ಮಾತ್ರ ಬೀದಿನಾಯಿ ಬುದ್ಧಿಯ ಗಂಡುಗಳಿಂದಲೂ, ಕಂತ್ರಿ ಬುದ್ಧಿಯ ವಕೀಲರಿಂದಲೂ ನಾವು ನಮ್ಮ ಹೆಣ್ಣು ಮಕ್ಕಳು ಬಚಾವಾಗಬಹುದು.                    

Rating
No votes yet