ತಿರುವು ಮುರುವು - ಲಕ್ಷ್ಮೀಕಾಂತ ಇಟ್ನಾಳ

ತಿರುವು ಮುರುವು - ಲಕ್ಷ್ಮೀಕಾಂತ ಇಟ್ನಾಳ

ತಿರುವು ಮುರುವು      

ಈ ಬೆಟ್ಟ, ಪರ್ವತ, ಮುಗಿಲು, ಮೋಡಗಳು

ಮಳೆ, ಝರಿ, ತೊರೆ, ಸಾಗರ, ಹೊಲ, ಊರು, ಕೇರಿಗಳ

ಸಜೀವ ಸೂತ್ರದ ಸುಂದರ ತೋಟ,

ಕ್ಷಣ ಕ್ಷಣವೂ ಅರಳುವ ಜಗದ ನೋಟ

 

ಅಗಣಿತ ರೂಪ, ಪರಿಮಳದ ಈ ಸುಮಧುರ ಹೂ ಜಲ್ಲೆ

ಕುಸುರಿ ಜರಿಬಣ್ಣಗಳ ಕಾಮನಬಿಲ್ಲು,

ಚಿತ್ರ ಚಿತ್ತಾರಗಳು ಸಂಜೆಗೆಂಪಿನಲ್ಲೂ

 

ನೀಲಿಬಾನಿನಲ್ಲಿ ಸೂರ್ಯ ರಶ್ಮಿಗಳ ಪ್ರಣತಿ

ಚುಕ್ಕಿ ಚಂದ್ರಮಗಳ ನಾಡಿನ ಗಗನ ಭರತಿ

 

ಅದರಡಿಯಲ್ಲೆ ಸಡಗರದ ಬದುಕಿನ ಜನ, ಜಾನುವಾರು,

ವನ ಕಾಡು ಮೇಡು,ಗಾಳಿ, ಹಕ್ಕಿ, ಜಲಚರ ತರಹೇವಾರು

 

ನನ್ನ ಲೋಕವೇ ಬೇರೆ!

ಬೆವರು, ದುರ್ಗಂಧಗಳ, ಏಕತಾನತೆಯ ಶೂದ್ರ ಬದುಕು,

ತೊಟ್ಟುಕೊಂಡವರ ಮಾನ ಕಾಯುವುದು,

 

ಬದುಕೇ ಹೀಗೇನೋ ಎಂದು ಬಗೆದಿದ್ದೆ!

 

ತಿರುವು ಮುರುವು ಹಾಕಿಕೊಂಡ ಅಂಗಿಯೊಂದು

ಬೆರಗಿನಿಂದ ಮೊದಲ ಬಾರಿ

ಹೊರಜಗವನ್ನು ಕಂಡು ದಂಗಾಗಿತ್ತು!

 

ಹೊಲಮನೆಯಿಂದ ನಗರಕ್ಕೊಮ್ಮೆ ಕರೆದೊಯ್ದಾಗ

ಗರಬಡಿದಿದ್ದಳು ಅವ್ವ,

ತಾಸುಗಟ್ಟಲೆ ಸಾಲು ಸಾಲು ಮನೆ, ಅಂತಸ್ತುಗಳು,

ಬಾಯಿಂದ ಹೊರಟ ಒಂದೇ ಮಾತು,

'ಎಲ್ಲಾ ಪರಮಾತ್ಮನ ಆಟ'!

ಹೊಲಗಳೆಲ್ಲ ಮಾಯ,

ಕೇಳಿದ್ದಳು,

''ಹೌದು, ಇವರೆಲ್ಲಾ, ಹೊಟ್ಟೀಗೆ ಏನ್ ತಿಂತಾರ''!

 

ತನ್ನದೇ ಮರದ ಹಸಿರೆಲೆ, ಹೂವು, ಹಣ್ಣು, ಗಂಧಗಳ

ಭಾಗ್ಯ ಇಲ್ಲದಿರುವ

ಬೆವರಿನ ಬೇರುಗಳು!

 

ತಿರುವಿ ಹಾಕದ ಮುಖಗಳು ಇನ್ನೆಷ್ಟೋ!

Rating
No votes yet

Comments

Submitted by swara kamath Thu, 01/01/2015 - 19:21

ಅವ್ವ ಕೇಳಿದ್ದಳು ''ಹೌದು, ಇವರೆಲ್ಲಾ, ಹೊಟ್ಟೀಗೆ ಏನ್ ತಿಂತಾರ''! ಎಷ್ಟು ಮಾರ್ಮಿಕವಾಗಿದೆ ಈ ಸಾಲಿನ ಅರ್ಥ !
ಸುಂದರ,ಅರ್ಥಗರ್ಭಿತ ವಾದ ಕವನ ಇಟ್ನಾಳರೆ . .......ರಮೇಶ ಕಾಮತ್

Submitted by H A Patil Fri, 01/02/2015 - 19:55

ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
' ತಿರುವು ಮುರುವು ' ಬಹಳ ಮಾರ್ಮಿಕವಾದ ಕವನ, ಸುಂದರ ಪ್ರಕೃತಿಯ ಅನಾವರಣಗೊಳಿಸುತ್ತ ಸಾಗುವ ಕವನ ನಂತರ ಶೂದ್ರ ಬದುಕಿನ ಕಟು ವಾಸ್ತವದ ದರ್ಶನ ಮಾಡಿಸುತ್ತ ಕವನ ಗರಿಗಟ್ಟುತ್ತ ಸಾಗುವ ಪರಿ ಅದ್ಭುತ. ಕವನದ ಅಂತ್ಯ ಬಹಳ ಅರ್ಥಪೂರ್ಣ. ಬಹಳ ದಿನಗಳ ನಂತರ ಸಂಪದಕ್ಕೆ ಬಂದಿದ್ದೀರಿ ನಮಗೆಲ್ಲ ಸಂತಸವಾಗಿದೆ. ಈಗೊಂದು ತಿಂಗಳ ಹಿಂದೆ ನಾನು ಹುಬ್ಬಳ್ಳಿಗೆ ಚಿಕಿತ್ಸೆ ನಿಮಿತ್ತ ಬಂದವನು 15 ದಿನಗಳ ಕಾಲ ಅಲ್ಲಿದ್ದೆ. ತಮ್ಮನ್ನು ಒಮ್ಮೆ ಭೇಟಿಯಾಗಬೇಕೆಂದಿದ್ದೆ ಆದರೆ ತಮ್ಮ ಖಚಿತ ವಿಳಾಸ ನನ್ನಲ್ಲಿ ಇರದ ಕಾರಣ ತಮ್ಮನ್ನು ಭೇಟಿಯಾಗಲಾಗಲಿಲ್ಲ. ಸುಮ್ಮನೆ ತಮ್ಮನ್ನು ಕಾಣಬೇಕೆಂಬ ಅಭೀಪ್ಸೆ ಮತ್ತೇನಿಲ್ಲ.ತಮ್ಮ ಮೊಬೈಲ್ ನಂಬರನ್ನು ನನ್ನ ಈ ಮೇಲ್ ವಿಳಾಸ patilsamshi@gmail.com ಗೆ ತಿಳಿಸಿ ಇನ್ನೊಮ್ಮೆ ಅಲ್ಲಿಗೆ ಬಂದಾಗ ಮುಕ್ತ ಭೇಟಿಯಾಗಲು ಅವಕಾಶವಾಗುತ್ತದೆ, ಧನ್ಯವಾದಗಳು.

Submitted by Lakshmikanth Itnal Fri, 01/02/2015 - 20:46

In reply to by H A Patil

ಹಿರಿಯರಾದ ಹೆಚ್ ಎ ಪಾಟೀಲ ಸರ್ ಜಿ, ತಾವು ಬಹು ವಿಶಾಲ ಹೃದಯದಿಂದ ಪ್ರತಿಯೊಬ್ಬರನ್ನು ಹುರಿದುಂಬಿಸಿ ವಿಶ್ಲೇಷಿಸಿ, ಪ್ರೇರಣೆ ನೀಡುವುದು ನನ್ನಂತಹ ಸಣ್ನವರಿಗೆ ಇ್ಪರೇರಣೆ ನೀಡುತ್ತದೆ. ಎಂತಹ ಸದಭಿಪ್ರಾಯವನ್ನು ಸಲೀಸಾಗಿ, ಸುಂದರವಾಗಿ ಬರೆದುಬಿಡುತ್ತೀರಿ. ಲೇಖಕನಾದವನಿಗೆ, ಕವಿಗೆ ಇಂತಹ ಮಾತುಗಳು ಇನ್ನೂ ಹೆಚ್ಚಿನ ಪ್ರೇರಣೆ ರೂಪಿಯಾಗಿ ಇನ್ನೂ ಹೆಚ್ಚು ಹೆಚ್ಚು ಕನ್ನಡಮ್ಮನ ಸೇವೆಗೆ ಅಣಿ ಮಾಡುವುದನ್ನು ಅನುಭವಿಸಿ ಬಲ್ಲೆ. ಅಂದಹಾಗೆ ಕವನಕ್ಕೆ ತಮ್ಮ ಮೆಚ್ಚುಗೆಗೆ ಧನ್ಯ ಸರ್. ತಾವು ಹುಬ್ಬಳ್ಳಿಗೆ ಬಂದಾಗ, ತಮ್ಮನ್ನು ಭೇಟಿಯಾಗುವ ಅವಕಾಶ ಕಳೆದುಕೊಂಡವನು ನಾನು ಸರ್. ಈ ಸಾರೆ ಬಂದಾಗ ಫೋನ್ ಮಾಡಿ, ;ಅನುವು ಮಾಡಿಕೊಂಡು ಬಂದು ಭೇಟಿಯಾಗುವೆ, ತಮಗೆ ಅನುಕೂಲವಿದ್ದರೆ, ಧಾರವಾಡದ ನನ್ನ ಮನೆಗೂ ಬನ್ನಿ ಸರ್. ತಮ್ಮನ್ನು ನೋಡಿದ ಹಾಗೂ ಆಗುತ್ತದೆ. ಹಾಗೂ ಸಾಹಿತ್ಯದ ಚರ್ಚೆಗಳು ಸಾಧ್ಯವಾದಲ್ಲಿ ಮಾಡಿದ ಹಾಗು ಆಗುತ್ತದೆ. 'ವಸ್ತಿ' ಬಂದು ಬಿಡಿ. ಇನ್ನು ಸಂಪದಕ್ಕೆ ಸ್ವಾಗತಿಸಿದ್ದೀರಿ. ಸಂಪದ ನನಗೆ ಮನೆಯಂತೆ, ಇಷ್ಟಮಿತ್ರರ ಚಾವಡಿಯಂತೆ,...ನನಗೆ ಸಂಪದದ ಗೆಳೆಯರೆಲ್ಲರೂ ನೆರೆಹೊರೆ ಬಂಧುಗಳಿದ್ದಂತೆ. ಕೆಲವೊಮ್ಮೆ ಸಮಯಾಭಾವದಿಂದ ಬರವಣಿಗೆ ಸಾವಕಾಶವಾಗುತ್ತದೆ, ಕೆಲವೊಮ್ಮೆ, ಕೆಲಸಗಳ ಒತ್ತಡಗಳು, ಕೆಲಸಲ ಸಾಹಿತ್ಯಗಳು ಕಡಿಮೆಯೆನಿಸಿದ್ದುಂಟು. ಹೇಗೆ ಹೇಳುವುದು, ಕೇವಲ ಸಾಹಿತ್ಯ ಸಂಬಂಧಿ ಕವನಗಳು, ಲೇಖನಗಳು ಹೆಚ್ಚು ಇರಲಿ ಸಂಪದದಲ್ಲಿ ಎಂದು! ಕೆಲವೊಮ್ಮೆ ಸಾಹಿತ್ಯವಲ್ಲದ ಸಂವಾದಗಳು, ಲೇಖನಗಳು ಬಹಳವಾಗಿ, ಟ್ರ್ಯಾಕ್ ಬಿಡುತ್ತಿದೆಯೇನೊ ಅನ್ನಿಸಿ,, ಆತಂಕಪಟ್ಟಿದ್ದುಂಟು. ಇದಕ್ಕೆ ನಾವೆಲ್ಲರೂ ಕಡಿವಾಣ ಹಾಕಿಕೊಳ್ಲಬೇಕು. ಸಾಹಿತ್ಯಿಕ ಸಂಬಂಧಿ ಬರಹ, ಕವನಗಳಿದ್ದಲ್ಲಿ ಹೆಚ್ಚು ಅರ್ಥಪೂರ್ಣವಾಗಿ 'ಸಂಪದ' ದ ಬೆಳವಣಿಗೆ ನೂರ್ಮಡಿಯಾಗುತ್ತದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಇದು ನನ್ನ ಕಾಳಜಿ ಮಾತ್ರ. ದಯಮಾಡಿ ಅಪಾರ್ಥ ಬೇಡ. ಅಂದಹಾಗೆ ನಾನು ತಮ್ಮ ವಿಳಾಸಕ್ಕೆ ನನ್ನ ಮೋ. ನಂ ಕಳುಹಿಸುವೆ. ಮುಂದಿನ ಸಾರೆ ಬಂದಾಗ ಖಂಡಿತ ಭೇಟಿಯಾಗೋಣ ಸರ್. ನಮಸ್ಕಾರ.

Submitted by H A Patil Mon, 01/05/2015 - 19:34

In reply to by Lakshmikanth Itnal

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ತಮ್ಮ ಮನ ತುಂಬಿದ ಪ್ರತಿಕ್ರಿಯೆ ಓದಿ ಬಹಳ ಸಂತಸವಾಯಿತು, ತಮ್ಮ ಅನಿಸಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ತಮ್ಮ ಬರಹಗಳು ಸಂಪದದಲ್ಲಿ ನಿರಂತರವಾಗಿ ಬರುವಂತೆ ಆಗಲಿ. ಧನ್ಯವಾದಗಳು.

Submitted by partha1059 Wed, 01/07/2015 - 10:47

ಕವನದಲ್ಲಿ ವಾಸ್ತವ ಚಿತ್ರಣ !
ಅವ್ವನ ಮಾತು ಇಂದು ಎಲ್ಲರ ಎದೆಯಾಳದ ಮಾತು !
ಆದರೂ ಕಾಣುತ್ತಿಲ್ಲ ಇದಕ್ಕೆಲ್ಲ ಒಂದು ಪರಿಹಾರ!
ನಿಮ್ಮ ಮಾತು ನಿಜ ಸಂಪದದಲ್ಲಿ ಸಾಹಿತ್ಯ ಮುಖವಾದ ರಚನೆಗಳು ಕಡಿಮೆಯಾಗಿತ್ತು , ನಿಮ್ಮಂತಹವರು ಅದನ್ನು ತುಂಬಬಲ್ಲಿರಿ

Submitted by lpitnal Thu, 01/08/2015 - 23:43

In reply to by partha1059

ಆತ್ಮೀಯ ಪಾರ್ಥ ರವರೇ, ನಮಸ್ಕಾರ. ತಮ್ಮ ಪ್ರತಿಕ್ರಿಯೆಗೆ ವಂದನೆಗಳು. ಸುಮ್ಮನೆ ಅನ್ನಿಸಿದ ಒಂದು ಭಾವನೆಯನ್ನು ಹಂಚಿಕೊಂಡೆ ಅಷ್ಟೆ. ತಮ್ಮ ಸಹಮತಕ್ಕೆ ಧನ್ಯವಾದ. ಒಂದು ಥರದಲ್ಲಿ ಸಾಹಿತ್ಯಕ್ಕೆ ಮೀಸಲಾದ ಪುಟಗಳಿದ್ದರೆ ಹೆಚ್ಚು ಕ್ಷೇಮ. ಮಿಕ್ಕ ವಿಷಯಗಳಿಗೆ ನಮ್ಮ ದಿನನಿತ್ಯದ ಪೇಪರಗಳಿವೆ, ಅದನ್ನೂ ಮೀರಿಸಿದ ಮೀಡಿಯಾಗಳಿವೆ, ಆದರೆ ಇದು ಹೀಗೆಯೇ ಇರಬೇಕು ಎನ್ನುವ ಸಿಲ್ಯಾಬಸ್ ಮಾತ್ರ ಬೇಡ. ಒಟ್ಟಾರೆ ಹಾಗನ್ನಿಸಬೇಕು ಅಷ್ಟೆ.