ಫೇಸ್ ಬುಕ್ ಪುಸ್ತಕ ಸವಾಲು : ನನ್ನ ಮೇಲೆ ಪ್ರಭಾವ ಬೀರಿದ ಹತ್ತು ಪುಸ್ತಕಗಳು

ಫೇಸ್ ಬುಕ್ ಪುಸ್ತಕ ಸವಾಲು : ನನ್ನ ಮೇಲೆ ಪ್ರಭಾವ ಬೀರಿದ ಹತ್ತು ಪುಸ್ತಕಗಳು

ಚಿತ್ರ

ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬಕೆಟ್ ಚಾಲೆಂಜ್ ನಡೀತು ಒಂದಷ್ಟು ದಿನ. ಒಟ್ಟಲ್ಲಿ ಏನೋ ಒಂದು ಒಳ್ಳೆ ಕೆಲಸ ಮಾಡ್ತಿದ್ದರಾಯ್ತು ಅಂತ ನಂಬಿದವನು ನಾನು. ಅಷ್ಟರಲ್ಲಿ ಇನ್ನೇನೋ ಫೇಸ್ ಬುಕ್ "ಬುಕ್ ಚಾಲೆಂಜ್" ಶುರುವಾಗಿದೆ ಈಗ ಕೆಲವು ದಿನಗಳಿಂದ. ನಮ್ಮ ಮೇಲೆ ಪರಿಣಾಮ ಬೀರಿದ ಹತ್ತು ಪುಸ್ತಕಗಳನ್ನು ಪಟ್ಟಿ ಮಾಡಿ, ಇನ್ನೊಬ್ಬರಿಗೆ ಖೋ ಕೊಡುವುದು ಈ ಸವಾಲಿನ ಗುರಿ.

ನನ್ನ ಇಬ್ಬರು ಮಿತ್ರರೂ ಈ ಚಾಲೆಂಜ್ ನನಗೆ ಹಾಕಿದ್ದರಿಂದ - ನಾನೂ ಪಟ್ಟಿ ಮಾಡೋಕೇ ಹೊರಟೆ. ಆಗಲೇ ಬರೀ ಪಟ್ಟಿ ಮಾಡೋಕಿಂತ ಆ ಪುಸ್ತಕ ಯಾಕೆ ನನ್ನ ಮೇಲೆ ಪರಿಣಾಮ ಬೀರಿತು ಅಂತ ಹೇಳಿದರೆ ಒಳ್ಳೇದು ಅಂತ ಅನ್ನಿಸಿ ಈ ಟಿಪ್ಪಣಿಯುಕ್ತ ಪಟ್ಟಿ ಬರೆದಿದ್ದಾಯಿತು.  ಈ ಪಟ್ಟಿಯಲ್ಲಿ ಕೆಲವು "ಒಂದು" ಪುಸ್ತಕವಲ್ಲ. ಹಾಗಿಲ್ಲದಿದ್ದರೂ ಪರವಾಗಿಲ್ಲ ಅಂತ ನನ್ನೆಣಿಕೆ.  ಓದಿ ನೋಡಿ. ಈ ಪಟ್ಟಿಯಲ್ಲಿ ನೀವು ಮೆಚ್ಚುವುದೆಷ್ಟಿದೆ ಅಂತ.

1) ಕಸ್ತೂರಿ

ನನಗೆ ನೆನಪಿರೋವಾಗಿನಿಂದ ಓದೋದು ಅಂದರೆ ನನಗೆ ಬಹಳ ಇಷ್ಟವೇ. ಕೈಗೆ ಸಿಕ್ಕಿದ್ದನ್ನೆಲ್ಲ ಓದುತ್ತಿದ್ದೆ. ಮನೆಯಲ್ಲಿ ಕೆಲವು ಪುಸ್ತಕದ ಕಪಾಟುಗಳಿದ್ದವು. ಪಕ್ಕದಲ್ಲೇ ಇದ್ದ ಅಜ್ಜನ ಮನೆಯಲ್ಲಿ ಇನ್ನೊಂದಷ್ಟು ಕಪಾಟುಗಳು. ಅದೂ ಸಾಲದಿದ್ದರೆ ಅಟ್ಟದ ಮೇಲೆ ದೂಳು ಕುಡಿಯುತ್ತ ಕುಳಿತಿದ್ದ ಇನ್ನೊಂದಷ್ಟು ಪುಸ್ತಕಗಳು. ಅವುಗಳಲ್ಲಿ ಹಳೆಯ ಕಸ್ತೂರಿಗಳ ಪಾಲು ಹೆಚ್ಚಿತ್ತು. ಕಸ್ತೂರಿಯಲ್ಲಿ ಬರುತ್ತಿದ್ದ ಪುಸ್ತಕ ವಿಭಾಗ ನನಗೆ ಬಹಳ ಅಚ್ಚುಮೆಚ್ಚಾಗಿರುತ್ತಿತ್ತು. ನನ್ನ ಕೈಗೆ ಸಿಕ್ಕದಿರುವಂತಹ ಪುಸ್ತಕಗಳ ಸಂಗ್ರಹಿತ ಭಾಗಗಳು ಅದರಲ್ಲಿರುತ್ತಿದ್ದವು. ಚಿಕ್ಕ ಹುಡುಗರು ಕಾದಂಬರಿ ಗೀದಂಬರಿ ಎಲ್ಲಾ ಓದೋದು ಬೇಡ - ಅಂತ ಮನೆಯಲ್ಲಿ ಏನಾದರೂ ಕಟ್ಟುಪಾಡು ಮಾಡಿದರೆ, ಕಾದಂಬರಿಗಳ ಸಾರವನ್ನು ಓದಲು, ಈ ಕಸ್ತೂರಿಯ ಪುಸ್ತಕ ವಿಭಾಗ ಸುಲಭವಾದ ದಾರಿಯಾಗಿತ್ತು. ಈಗ ನೆನೆಸಿಕೊಂಡರೆ ಹಾಗೆ ಓದಿದ ಹಲವು "ಪುಸ್ತಕ"ಗಳು ನಿಜವಾಗಿ ಏಜ್-ಅಪ್ರಾಪ್ರಿಯೇಟ್ ಆಗಿರಲಿಲ್ಲವೇನೋ ಅಂತ ಈಗನ್ನಿಸುತ್ತಿದೆ! ಹೀಗೆಓದಿದ ಹಲವು "ಪುಸ್ತಕ"ಗಳು ಇಂದಿಗೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ, ದಶಕಗಳ ನಂತರವೂ - ದಂಡಿಯ "ದಶಕುಮಾರ ಚರಿತ", ಸಾಮರ್ ಸೆಟ್ ಮಾಮ್ ರ "ದ ಮಿರಾಜ್", ರೈಡರ್ ಹೆಗ್ಗಾರ್ಡ್ ನ ಕುತೂಹಲಕಾರಿ ಕಾದಂಬರಿಗಳು ( King Solomon's Mines, She, The Return of She ), ಭೈರಪ್ಪನವರ "ಗಾಂಧಾರಿ" (ಪರ್ವ ದಿಂದ ಸಂಗ್ರಹಿತ), ಡಾ.ನಾ.ಮೊಗಸಾಲೆಯವರ "ನನ್ನದಲ್ಲದ್ದು", ಎಡ್ಗರ್ ಅಲನ್ ಪೋ ರ "The Gold Bug"  "ಸುವರ್ಣಕೀಟ" ಅಂತ ಗೋಪಾಲ ಕೃಷ್ಣ ಅಡಿಗರ ಅನುವಾದ, ವಾಸಂತಿ ಪಡುಕೋಣೆ ಅವರ "ನನ್ನ ಮಗ ಗುರುದತ್ತ", ಗಿರಿ ಅವರ "ಗತಿ-ಸ್ಥಿತಿ", ಶ್ರೀಕೃಷ್ಣ ಆಲನಹಳ್ಳಿ ಅವರ "ಪರಸಂಗದ ಗೆಂಡೆತಿಮ್ಮ", ಜಯಂತ ನಾರಲೀಕರರ "ಸ್ಫೋಟ"  ಇತ್ಯಾದಿ ಪುಸ್ತಕ/ಸಂಗ್ರಹ ಗಳು ನನ್ನ ಮನಸ್ಸಿನಲ್ಲಿ ದಶಕಗಳಿಂದ ನಿಂತುಬಿಟ್ಟಿವೆ. ಹೀಗಾಗಿ ಒಂದೇ ನಿರ್ದಿಷ್ಟ ಪುಸ್ತಕವಲ್ಲದಿದ್ದರೂ , ಕಸ್ತೂರಿಯ ಪುಸ್ತಕ ವಿಭಾಗವನ್ನೇ ನನ್ನ ಪಟ್ಟಿಯಲ್ಲಿ ಮೊದಮೊದಲಿಗೆ ಹೆಸರಿಸಬೇಕೆನ್ನಿಸಿತು.

2) ಮಯೂರ

ಇನ್ನೊಂದು ನೆನೆಯಬೇಕಾದ "ಪುಸ್ತಕ"ವೆಂದರೆ ಮಯೂರ. ಅದರಲ್ಲಿ ಬರುತ್ತಿದ್ದ ಕತೆ, ಅದರಲ್ಲೂ ನೀಳ್ಗತೆಗಳೆಂದರೆ ನನಗೆ ಬಹಳ ಹಿಡಿಸುತ್ತಿದ್ದವು. ವಿವಿಧ ರೀತಿಯ ಕಥಾ ತಂತ್ರಗಳ  ಕತೆಗಾರರನ್ನು ಪರಿಚಯಿಸಿದ್ದಕ್ಕೆ ಮಯೂರಕ್ಕೆ ನಾನು ಋಣಿ. ಟಿ.ಕೆ.ರಾಮರಾವ್ ಅವರ "ಚುಕ್ಕೆಯ ಪಾರಿವಾಳ", ಮಾಸ್ತಿ ಅವರ "ಸುಬ್ಬಣ್ಣ", ಅಶ್ವತ್ಥ ಅವರ "ಲಲಿತಾತಿಥ್ಯ", ನಾ.ಡಿಸೋಜರ "ಮೇಲುಪರ್ವತದ ಹೊಸಮನೆೆ, ಎಂ.ಎಸ್.ವೇದಾ ಅವರ "ಪ್ರೀತಿಯ ಅಪ್ಪ", ಬೆಸಗರಹಳ್ಳಿ ರಾಮಣ್ಣ ಅವರ "ಚೆಲುವನ ಪರಂಗಿ ಗಿಡಗಳು - ಹೀಗೆ ಮಯೂರದಲ್ಲಿ ಓದಿದ ಹಲವಾರು ಕಥೆಗಳು ಇನ್ನೂ ನೆನಪಿನಲ್ಲಿವೆ. ಇನ್ನು ಇದರ ಜೊತೆಗೆ ಹೇಳಬೇಕೆಂದರೆ, ಇಂಗ್ಲಿಷ್ ಕತೆಗಾರರ ಪರಿಚಯ ನನಗಾದದ್ದೂ ಮಯೂರದಿಂದ. ಶಾಲೆಯಲ್ಲಿ ನಾನು ಇಂಗ್ಲಿಷ್ ಕಲಿಯಲು ತೊಡಗಿದ್ದೇ ಐದನೇ ತರಗತಿಯಲ್ಲಿ. ಹಾಗಾಗಿ ಇಂಗ್ಲಿಷ್ ನಲ್ಲೇ ಈ ಕಥೆಗಾರರನ್ನು ಓದಬೇಕೆಂದಿದರೆ ಇನ್ನೂ ಹಲವು ವರ್ಷ ಕಾಯಬೇಕಾಗುತ್ತಿತ್ತೋ ಏನೋ. ಕಾನನ್ ಡಾಯಲ್ ರ ಷೆರ್ಲಾಕ್ ಹೋಮ್ಸ್ ಸರಣಿಯ ಹಲವು ಕಥೆಗಳು - Naval Treaty, A Scandal in Bohemia, The Red Headed League ಮೊದಲಾದುವನ್ನು ನಾನು ಮೊದಲು ಕನ್ನಡದಲ್ಲೇ, ಮಯೂರದಲ್ಲೇ ಓದಿದ್ದು. ಇದೇ ರೀತಿ ಅಗಾಥಾ ಕ್ರಿಸ್ಟೀಯವರ ಕಥೆಗಳನ್ನು ಮೊದಲು ನಾನು ಓದಿದ್ದೂ ಮಯೂರದಲ್ಲೇ (ವಸಂತ ನಿಲಯ - Philomel Cottage, ಮೂರು ಕುರುಡು ಇಲಿಮರಿಗಳು- Three Blind Mice ಇತ್ಯಾದಿ)

3) ಲೂಯಿ ಪಾಸ್ಚರ್ - ಪ್ರೊ ಜೆ ಆರ್ ಲಕ್ಷ್ಮಣ ರಾವ್

ನನ್ನ ಅಣ್ಣನಿಗೂ ಪುಸ್ತಕಗಳ ಹುಚ್ಚು. ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ, ನನಗೂ ಅವನಿಂದಲೇ ಪುಸ್ತಕಗಳ ಹುಚ್ಚು. ಅವನಿಗೆ ಯಾವುದೋ ಸ್ಪರ್ಧೆಯಲ್ಲಿ ಬಹುಮಾನವಾಗಿ ಬಂದಿದ್ದು ಈ ಲೂಯಿ ಪಾಸ್ಟರ್ ಜೀವನ ಚರಿತ್ರೆ. ಇದು ಇಂಗ್ಲಿಷಿನಿಂದ ಅನುವಾದವೋ ಅಥವಾ ಪ್ರೊಫೆಸರ್ ಲಕ್ಷಣರಾವ್ ಅವರೇ ಬರೆದಿರಬಹುದೇ ನೆನಪಿಲ್ಲ. ಆದರೆ ಬಹುಶಃ ಮೂರನೇ ತರಗತಿಯಲ್ಲಿ ಇದ್ದಾಗ ಓದಿದ (ನಂತರವೂ ಹಲವು ಬಾರಿ ಓದಿರುವ) ಪುಸ್ತಕ ಇದು. ಆ ಪುಸ್ತಕದಲ್ಲಿದ್ದ ಹಲವು ವೈಜ್ಞಾನಿಕ ವಿಚಾರಗಳು ಅರ್ಥವಾಗದಿದ್ದ ಕಾಲದಿಂದಲೂ ಇದರ ಶೈಲಿ, ಕ್ಲಿಷ್ಟವಾದ ವಿಷಯಗಳನ್ನು ಬಿಡಿಸಿಹೇಳುವ ವಿಧಾನ, ಒಬ್ಬ ಮಹಾನ್ ವ್ಯಕ್ತಿಯ ಸಾರ್ವಜನಿಕ ಜೀವನ, ವೈಯಕ್ತಿಕ ಜೀವನ ಹಾಗೂ ಆದರ್ಶಗಳನ್ನು ಚೆನ್ನಾಗಿ ತೋರುತ್ತಿದ್ದಿದ್ದರಿಂದಲೋ ಏನೋ ಇದು ಬಹಳ ಹಿಡಿಸಿತ್ತು. ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲೂ ಕಾರಣವಾಯ್ತೇನೋ ಎಂದು ಎನಿಸುತ್ತದೆ.

4) ಮಹಾಭಾರತ ಆದಿಪರ್ವ - ಭಾರತದರ್ಶನದ ಅನುವಾದ - ಸಂಪುಟ ಎರಡು

ಮಹಾಭಾರತವನ್ನು ಮೂಲದಲ್ಲಿ ಪೂರ್ತಿ ಓದಿರುವವರು ಬಹಳ ಕಡಿಮೆ ಇರಬಹುದು. ಭಾರತ ದರ್ಶನ ಪ್ರಕಾಶನದವರು ಇದನ್ನು ೩೦ಕ್ಕೂ ಹೆಚ್ಚು ಸಂಪುಟಳಲ್ಲಿ ತಂದಿದ್ದಾರೆ. ನಮ್ಮ ಮನೆಯಲ್ಲಿ ಇದರ ಎರಡನೇ ಸಂಪುಟವಿತ್ತು (ಆದಿಪರ್ವದ ಕಥಾಭಾಗ). ಇದೂ ಕೂಡ ನಾನು ಚಿಕ್ಕವನಾಗಿದ್ದಾಗಲೇ ಮೊದಲಿಂದ ಕೊನೆಯವರೆಗೆ ಓದಿದ್ದ ಒಂದು ಪುಸ್ತಕ - ಸುಮಾರು ೪೦೦-೫೦೦ ಪುಟಗಳೇ ಇತ್ತೇನೋ ಎಂದು ನೆನಪು. ಬಹುಶಃ ಸಂಸ್ಕೃತ ಸಾಹಿತ್ಯದ ಬಗ್ಗೆ ಆಸಕ್ತಿ ಬರುವುದಕ್ಕೆ ಇದು ಇಂಬು ಕೊಟ್ಟಿತ್ತೇನೋ.

5) 107 Stories about Chemistry - ಮಿರ್ ಪ್ರಕಾಶನ

ಎಪ್ಪತ್ತು ಎಂಬತ್ತರ ದಶಕದಲ್ಲಿ ಸೋವಿಯತ್ ರಷ್ಯಾದ ಕಾಲ. ಆಗಾಗ ಸೋವಿಯತ್ ರಷ್ಯಾದಲ್ಲಿ ಮುದ್ರಿತವಾದ ಕನ್ನಡ, ಇಂಗ್ಲಿಷ್ ಪುಸ್ತಕಗಳು ಪುಸ್ತಕ ಮಳಿಗೆಗಳಲ್ಲಿ, ಇಲ್ಲವೇ ಪ್ರದರ್ಶನಗಳಲ್ಲಿ ಕಮ್ಮಿ ಬೆಲೆಗೇ ಸಿಗುತ್ತಿದ್ದ ಕಾಲ. ಹಾಗಾಗಿ ಪರಊರಿನಲ್ಲಿ ಓದುತ್ತಿದ್ದ ನನ್ನ ಅಣ್ಣ, ಊರಿಗೆ ಬರುವಾಗ ತನ್ನ ಕೈಲಿದ್ದ ಹಣದಲ್ಲೇ ಪುಡಿಗಾಸು ಉಳಿಸಿ, ನನಗೆ ಪುಸ್ತಕಗಳನ್ನು ತಂದುಕೊಡುತ್ತಿದ್ದ. ಆ ಪುಸ್ತಕಗಳಲ್ಲಿ ಇದೂ ಒಂದು ಎಂದು ನೆನಪು. ರಸಾಯನ ಶಾಸ್ತ್ರದ ಹಲವು ಆಸಕ್ತಿ ಮೂಡಿಸುವ ವಿಷಯಗಳು ಇದರಲ್ಲಿದ್ದವು. ಡಿಟೋ ಈ ಮೊದಲೇ ಕೆಲವು ಪುಸ್ತಕಗಳ ಬಗ್ಗೆ ಹೇಳಿದಂತೆಯೇ ಈ ಪುಸ್ತಕವೂ ಮೊದಮೊದಲು ಪೂರ್ತಿ ಅರ್ಥವಾಗದಿದ್ದರೂ ಅಂತೂ ಇಂತೂ ನಾನು ೮-೯ನೇ ತರಗತಿಗೆ ಬರುವ ಹೊತ್ತಿಗೆ ಪೂರ್ತಿ ಅರ್ಥವಾಯಿತೇನೋ ಅನ್ನಿಸುತ್ತೆ. ಈ ಪುಸ್ತಕದ ಹೆಸರು ಸ್ವಲ್ಪ ಮರೆತಿದ್ದೆ, ಹಾಗಾಗಿ ಗೂಗಲೇಶ್ವರನ ಮೊರೆ ಹೊಕ್ಕಿದ್ದಕ್ಕೆ ಸಿಕ್ಕೇಬಿಟ್ಟಿತು ನೋಡಿ -   http://sovietbooks.wordpress.com/2009/10/30/107-stories-about-chemistry/

6) ಜಗತ್ತುಗಳ ಹುಟ್ಟು-ಸಾವು: ಪ್ರೊ.ಆರ್.ಎಲ್.ನರಸಿಂಹಯ್ಯ

ಮೊದಲೇ ಹೇಳಿದಂತೆ ನಾನು ಇಂಗ್ಲಿಷ್ ಕಲಿಯಲು ತೊಡಗಿದ್ದು ಐದನೇ ತರಗತಿಯಲ್ಲಿದ್ದಾಗ. ನಮ್ಮೂರಿನ ಲೈಬ್ರರಿಗೆ ಹೋಗಿ ಕೂತು ಅಲ್ಲಿ ಸಿಕ್ಕಿದ್ದನ್ನು ಓದುವ ಅಭ್ಯಾಸ ಮೊದಲಿಂದಲೇ ಇತ್ತು. ಎಷ್ಟೋ ಬಾರಿ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾದ ಸಂಪುಟಗಳನ್ನು ತೆರೆದು ನೋಡುತ್ತಿದ್ದರೂ ಬರೀ ಚಿತ್ರಗಳನ್ನು ನೋಡಿ ಸಂತೋಷಪಟ್ಟುಕೊಳ್ಳಬೇಕಾಗುತ್ತಿತ್ತು, ಇಂಗ್ಲಿಷ್ ಓದು ಅಷ್ಟು ಸರಾಗವಾಗಿರದಿದ್ದರಿಂದ. ಆಗಲೇ ನನಗೆ ಸಿಕ್ಕಿದ್ದು ಈ ಪುಸ್ತಕ. ಗ್ರಹ ನಕ್ಷತ್ರ ತಾರಾಪುಂಜಗಳ ಬಗ್ಗೆ ಇದ್ದ ಈ ಪುಸ್ತಕ ನಾನು ಓದುವ ಕಾಲಕ್ಕೇ ಹಳತಾಗಿದ್ದರೂ, ನನಗೆ ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೆಚ್ಚಿಸಲು, ಆಕಾಶದಲ್ಲಿ ನಕ್ಷತ್ರ, ರಾಶಿ, ಗ್ರಹಗಳನ್ನು ಗುರುತಿಸಲು ಮೊದಲಾದುದಕ್ಕೆ ಈ ಪುಸ್ತಕವೇ ಕಾರಣವೆನ್ನಬಹುದು. ನಕ್ಷತ್ರಗಳ ಬೇರೆಬೇರೆ ಸ್ಪೆಕ್ಟ್ರಲ್ ಟೈಪ್ಸ್ ಗಳನ್ನು ನೆನಪಿಟ್ಟುಕೊಳ್ಳಲು ಇಂಗ್ಲಿಷ್ ನಲ್ಲಿರುವ  Oh Be A Fine Girl, Kiss Me Right Now (ಇಲ್ಲಿ O, B, A , F, G, K , M, R, N ಎಂಬುವು ಬೇರೆ ಬೇರೆ ತಾಪಮಾನದ ನಕ್ಷತ್ರಗಳನ್ನು ಸೂಚಿಸುತ್ತವೆ) - ಎನ್ನುವುದನ್ನು ಕನ್ನಡದಲ್ಲಿ "ಓ ಬನ್ನಿ ಎಲೆ ಫಿರಂಗಿ ಗೆಳತಿಯರೆ" ಎಂದೇನೋ ಅನುವಾದಿಸಿದ್ದಿದ್ದು ಮಬ್ಬು ಮಬ್ಬಾಗಿ ಇನ್ನೂ ನೆನಪಿದೆ

7) ಶಿವರಾಮ ಕಾರಂತರ "ಜೀವ-ಜೀವನ"

ಶಿವರಾಮ ಕಾರಂತರು ಕನ್ನಡದಲ್ಲಿ ನಾಲ್ಕು ಸಂಪುಟಗಳ ವಿಶ್ವಕೋಶವೊಂದನ್ನು ಹೊರತಂದಿದ್ದರು. ಇಂಗ್ಲಿಷ್ ನಲ್ಲಿ ಹೆಚ್ಚು ಪರಿಶ್ರಮವಿಲ್ಲದಿದ್ದ ಕಾಲದಲ್ಲಿ, ಈ ಪುಸ್ತಕ ಕೈಯಲ್ಲಿ ಸಿಕ್ಕಿದ್ದು ಸುಗ್ಗಿಯೇ ಆಗಿತ್ತು. ಈ ನಾಲ್ಕು ಸಂಪುಟಗಳಲ್ಲಿ ಎರಡನೆಯದು "ಜೀವ-ಜೀವನ". ಅವರದ್ದೇ ವಿಶೇಷ ಧಾಟಿಯಲ್ಲಿ ಕನ್ನಡದಲ್ಲಿ ವಿಜ್ಞಾನವನ್ನು ಬರೆಯುವ ಧಾಟಿ ಇದ್ದುದ್ದರಿಂದ ಇದು ಕೂಡ ಬಹಳ ಆಸಕ್ತಿ ತಂದಿದ್ದರಲ್ಲಿ ಅಚ್ಚರಿಯಿಲ್ಲ.

8) ಎಸ್.ವಿ. ಪರಮೇಶ್ವರ ಭಟ್ಟರ ಸುಭಾಷಿತ ಚಮತ್ಕಾರ

ನಾನು ನನಗೆ ನೆನಪಿರುವ ಸಮಯದಿಂದಲೇ, ಅಂದರೆ ಬಹುಶಃ ಐದು ವರ್ಷ ಆಗುವುದಕ್ಕೆ ಮೊದಲೇ ಸಂಸ್ಕೃತ ಶಾಲೆಗೆ ಹೋಗುತ್ತಿದ್ದೆ. ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ಪಾಠ. ಹಾಗಾಗಿ ಸುಭಾಷಿತಗಳ ಪರಿಚಯವಾಗಿತ್ತು. ಆದರೆ ಆ ಸುಭಾಷಿತಗಳನ್ನು ಎಷ್ಟು ಚೆಂದವಾಗಿ ಕನ್ನಡಕ್ಕೆ ಪದ್ಯರೂಪದಲ್ಲೇ ತರಬಹುದೆಂದು ನನಗೆ ಮೊದಲು ತಿಳಿದಿದ್ದು ಪರಮೇಶ್ವರ ಭಟ್ಟರ ಈ ಪುಸ್ತಕವನ್ನು ಓದಿದಾಗಲೇ. ಅದು ಆಗಿನ್ನೂ ಸರ್ಕ್ಯುಲೇಟಿಂಗ್ ಲೈಬ್ರರಿಗಳ ಕಾಲ. ಯಾವುದೋ ಒಂದು ಕಡೆಯಿಂದ ಇದನ್ನು ತಂದು ಓದಿದ್ದ ನೆನಪು. ಈಗ ಕಳೆದ ಆರೇಳು ವರ್ಷದಲ್ಲಿ ಒಂದು ಮೂರು ನಾಲ್ಕು ನೂರು ಪದ್ಯಗಳನ್ನು ನಾನು ಅನುವಾದ ಮಾಡಿದ್ದರೆ, ಅದರ ಸ್ಫೂರ್ತಿಯಲ್ಲಿ ಬಹುಪಾಲು ಮೂವತ್ತು ವರ್ಷದ ಹಿಂದೆ ಈ ಪುಸ್ತಕ ಓದಿದ್ದಕ್ಕೇ ಸಲ್ಲಬೇಕು! 

9) ಶೂದ್ರಕನ ಮೃಚ್ಛಕಟಿಕ - ಪರ್ವತವಾಣಿಯವರ ರೂಪಾಂತರ

ಸಂಸ್ಕೃತನಾಟಕಗಳನ್ನು ಮೊದಲಿಂದಲೂ ಓದಿದ್ದೆ. ಭಾಸನ ಹಲವು ಏಕಾಂಕಗಳನ್ನು ( ಮಧ್ಯಮ ವ್ಯಾಯೋಗ, ಕರ್ಣಭಾರ) ಮೂಲದಲ್ಲಿಯೇ, ಮತ್ತು ದೊಡ್ಡ ನಾಟಕಗಳಾದ ಚಾರುದತ್ತ,  ಪ್ರತಿಜ್ಞಾನಾಟಕ, ಪ್ರತಿಮಾ ನಾಟಕ, ಅಭಿಷೇಕನಾಟಕ, ಸ್ವಪ್ನ ನಾಟಕ (ಸ್ವಪ್ನವಾಸವದತ್ತ) - ಕಾಳಿದಾಸನ ಶಾಕುಂತಲ, ಮಾಲವಿಕಾಗ್ನಿಮಿತ್ರ ಇವುಗಳನ್ನು ಭಾಗಶಃ ಸಂಸ್ಕೃತದಲ್ಲೂ, ಪೂರ್ಣವಾಗಿ ಅನುವಾದದಲ್ಲೂ ಓದಿ ಆನಂದಿಸಿದ್ದೇನೆ (ಎಸ್.ವಿ.ಪರಮೇಶ್ವರ ಭಟ್ಟ, ಸಾ.ಶಿ.ಮರುಳಯ್ಯ ಇತ್ಯಾದಿಗಳ ಅನುವಾದ). ಆದರೆ ಮೃಚ್ಛಕಟಿಕವನ್ನು ಮಾತ್ರ ಮೂಲದಲ್ಲಿ ಓದಿಲ್ಲದಿದ್ದರೂ ಪರ್ವತವಾಣಿಯವರ ರೂಪಾಂತರವನ್ನು ೧೯೮೦ರ ಸುಮಾರಿನಲ್ಲಿ ಯಾವಾಗಲೋ ಓದಿದ್ದ ನೆನಪು. ಒಂದು ರೀತಿಯಲ್ಲಿ ಮೃಚ್ಛಕಟಿಕ ಅತಿ ಹಳೆಯ "ಮಸಾಲೆ" ನಾಟಕ ಅನ್ನಬಹುದು.  ಆದರ್ಶವಾದಿ ನಾಯಕ, ಅವನ ಪ್ರೀತಿಯ ಹೆಂಡತಿ, ಅವನಿಗೆ ಮರುಳಾದ ಮೂರನೆಯ ಹೆಣ್ಣು, ಒಂದು ಕಡೆ ಒಬ ಗೆಳೆಯ ಹಾಸ್ಯಕ್ಕೆ,  ಇನ್ನೊಂದು ಕಡೆ ಖಳನಾಯಕನ ಹಾಸ್ಯ - ಹೀಗೆ ಈಗ ಒಂದು ಸಿನೆಮಾ ಯಶಸ್ವಿಯಾಗುವಂಥ ಎಲ್ಲ ಸಾಮಗ್ರಿಯೂ ಈ ನಾಟಕದಲ್ಲಿದೆ! ಬಹುಶಃ ನನಗೂ ಕೆಲವು alternate-history ಕಥೆಗಳನ್ನು ಬರೆಯುವುದಕ್ಕೂ, ಅಥವಾ ಕೆಲವು ಪ್ರಸಿದ್ಧ ಕೃತಿಗಳ ರೂಪಾಂತರ ಮಾಡುವ ಪ್ರಯತ್ನಕ್ಕೆ ಕೈಹಾಕಲೂ ಎಲ್ಲೋ ಒಂದು ಮೂಲೆಯಲ್ಲಿ ಈ ನಾಟಕದ ಪಾಲೂ ಇರಬಹುದೇನೋ.

10) ವೀಣಾ ಲಕ್ಷಣ ವಿಮರ್ಶೆ

ನಾನು ಮದ್ರಾಸಿನಲ್ಲಿ ಓದುತ್ತಿದ್ದ ಕಾಲದಲ್ಲಿ, ಅಲ್ಲಿನ ರಾಯಪೇಟ್ಟಾ ದಲ್ಲಿರುವ ಕರ್ನಾಟಕ ಸಂಗೀತ ಪುಸ್ತಕ ಭಂಡಾರಕ್ಕೆ ಒಮ್ಮೆ ಹೋಗಿದ್ದೆ - ಅವತ್ತು ಅಲ್ಲಿರಿಸಿದ್ದ ಪುಸ್ತಕಗಳನ್ನು ನೋಡುತ್ತಿದ್ದಾಗ ನನಗೆ ಕಂಡದ್ದು ಮಹಾಮಹೋಪಾಧ್ಯಾಯ ರಾ ಸತ್ಯನಾರಾಯಣರ ವೀಣಾಲಕ್ಷಣ ವಿಮರ್ಶೆ ಎಂಬ ಪುಸ್ತಕ. ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ್ದರಿಂದ, ಮತ್ತೆ ನಾನು ಹಾಡುಗಾರಿಕೆ ಸ್ವಲ್ಪ ಕಲಿತಿದ್ದರಿಂದ, ಮತ್ತೆ ಒಳ್ಳೇ ಕೇಳುಗನಾದ್ದರಿಂದ ಇರಲಿ ನೋಡೋಣವೆಂದು ಕೊಂಡು ತಂದ ಈ ಪುಸ್ತಕ ನನಗೆ ಒಂದು ಹೊಸ ಜಗತ್ತನ್ನೇ ಪರಿಚಯ ಮಾಡಿಸಿತು. ಭಾರತೀಯ ಸಂಗೀತ ಶಾಸ್ತ್ರವನ್ನು ಬಿಡಿಸಿ ಹೇಳುವ, ಸಂಗೀತದ ಚರಿತ್ರೆಯಲ್ಲಿ ಬಹು ಮುಖ್ಯವಾದ ಹಲವು ಬೇರೆ ಪುಸ್ತಕಗಳನು ಓದಲು ಪ್ರೇರಣೆಯಾದ್ದರಿಂದ, ಮತ್ತೆ ರಾ ಸತ್ಯನಾರಾಯಣರ ಮೊದಲ ಪುಸ್ತಕ ಪರಿಚಯ ಮಾಡಿಸಿದ್ದರಿಂದ,  ಈ ವೀಣಾಲಕ್ಷಣ ವಿಮರ್ಶೆ ಎಂಬ ಪುಸ್ತಕವನ್ನು ನಾನು ಮರೆಯುವಂತೆಯೇ ಇಲ್ಲ.

ಅಂತೂ ಚಾಲೆಂಜ್ ಗೆ ಅಂತ ಹತ್ತು "ಪುಸ್ತಕ"ಗಳ ಬಗ್ಗೆ ಹೇಳಿದ್ದಾಯ್ತು.  ಒಂದಷ್ಟು ಹಳೇ ಮೆಲುಕೂ ಹಾಕಿದ್ದಾಯ್ತು.  ಸದ್ಯಕ್ಕಿಷ್ಟು ಸಾಕೇನೋ. ಅಲ್ವೇ?

-ಹಂಸಾನಂದಿ

Rating
No votes yet

Comments

Submitted by ಗಣೇಶ Mon, 09/08/2014 - 00:05

ಹಂಸಾನಂದಿಯವರೆ, ಈ ಚಾಲೆಂಜ್‌‍ನಲ್ಲಿ ನಾನು ಭಾಗವಹಿಸಲು ಸಾಧ್ಯವಾಗದು- ಹತ್ತಾದರೂ ಪುಸ್ತಕ ಓದಿರಬೇಕಲ್ಲಾ :)
ನಿಮ್ಮ ಪುಸ್ತಕಗಳ ಲಿಸ್ಟ್‌ನಲ್ಲಿ ಕಸ್ತೂರಿ, ಮಯೂರ.. ನೋಡಿ ಬಹಳ ಖುಷಿಯಾಯಿತು.

ಧನ್ಯವಾದಗಳು ಗಣೇಶರೆ - ಹೌದು. ಸುಧಾ ಮಯೂರ ತರಂಗ ತುಷಾರ ಕಸ್ತೂರಿ ಇಂತಹವುಗಳ ಪಾತ್ರ ಕನ್ನಡಿಗರ ಓದಿನಲ್ಲಿ ದೊಡ್ಡದೇ!

ಹಂಸಾನಂದಿಯವರೇ, ಮೊದಲೇ ಹೇಳ್ತೀನಿ ನಾನು ಓದಿದ ಪುಸ್ತಕಗಳ ಸಂಖ್ಯೆ ಕಡಿಮೆಯೇ
ಮಯೂರ ಬಿಟ್ಟರೆ ನೀವು ಹೇಳಿದ ಪಟ್ಟಿಯಲ್ಲಿರುವ ಯಾವುದೇ ಪುಸ್ತಕಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ಆ ಬಗ್ಗೆ ಪುಟ್ಟ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

ಚಿಕ್ಕಂದಿನಲ್ಲಿ ತರಂಗ -ಸುಧಾ -ಕರ್ಮವೀರ ನಂತರ ಮಯೂರ ,ತುಷಾರ ,ಕಸ್ತೂರಿ -ಆ ಮಧ್ಯೆ ಮಲ್ಲಿಗೆ ಇತ್ಯಾದಿ ಪುಸ್ತಕ (ವಾರ ಪತ್ರಿಕೆ -ಮಾಸ ಪತ್ರಿಕೆಗಳನ್ನು ) ಓದಿ ಅದರಲ್ಲೂ ಅವುಗಳಲ್ಲಿ ನಮ್ಮ ಲೇಖಕರು ಅನುವಾದಿಸುತ್ತಿದ್ದ ಜಗತ್ತಿನ ಪ್ರಸಿದ್ಧ ಬರ್ಹಗಾರರ ಬರ್ಹಗಳನ್ನೂ ಓದಿ ಬೆರಗಾಗಿದ್ದೆ .ಅವುಗಳ ಮೂಲ ಕೃತಿಗಳನ್ನು ಓದಿದಾಗಲೂ ಅನುವಾದವೇ ಹಿಡಿಸಿತ್ತು .. !! ಈಗಲೂ ಮಯೂರ ಕಸ್ತೂರಿ ತುಷಾರ ಓದುವೆ ..ಮಯೂರ ತುಷಾರದಲ್ಲಿ ಈಗಲೂ ಅನುವಾದಿತ ಬರಹಗಳು ಬರುವವು..ಆದರೆ ಕನ್ನಡದ ಡೈಜೆಸ್ಟ್ ಆಗಿದ್ದ ಕಸ್ತೂರಿ ಯಾಕೋ ಮಂಕಾಗಿದೆ ...:((( ಅದು ಬಿಟ್ಟರೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ -ತೇಜಸ್ವಿ ಅವರ ಕಿರಗೂರಿನ ಗಯ್ಯಾಳಿಗಳು ,ಕುಂವೀ ಅವರ ಪುಸ್ತಕಗಳು ,ಪತ್ತೆಧಾರಿ ಬರಹಗಾರರಾದ ಬಿ ವಿ ಅನಂತರಾಮ್ ಮತ್ತು ಕೌಂಡಿನ್ಯ ಅವರ ಹಲವು ಪುಸ್ತಕಗಳು ,ಇದೆಲ್ಲದಕ್ಕಿಂತ ಹೆಚ್ಚು ಇಸ್ಟ ಆಗಿರೋದು ನಮ್ಮ ರಾಮಾಯಣ -ಮಹಾಭಾರತ ಪುಸ್ತ್‌ಕಗಳು ಮತ್ತು ಫಂಡರಾಪುರದ ದತ್ತಾತ್ರೇಯ ದೇವರ ಬಗೆಗಿನ ಬೃಹತ್ ಕನ್ನಡ ಸಚಿತ್ರ ಪುಸ್ತಕ ..ಪಟ್ಟಿ ಮಾಡ ಹೊರಟರೆ ತುಂಬಾ ದೊಡ್ಡ ಪಟ್ಟಿ ಇದೆ ....!!
ನನ್ನಿ
ಶುಭವಾಗಲಿ
\|/