ನನ್ನ ಬಾಲ್ಯದ ನೆನಪುಗಳು : ಹಾವು ತುಳಿದೆನ?

ನನ್ನ ಬಾಲ್ಯದ ನೆನಪುಗಳು : ಹಾವು ತುಳಿದೆನ?

ಬರಹ


 

ನನ್ನ ಬಾಲ್ಯದ ನೆನಪುಗಳು : 


ಹಾವು ತುಳಿದೆನ?






ಅದು ೧೯೭೨-೭೩ ಸ ಸಮಯ. ನಾವು ಹಾಸನಜಿಲ್ಲೆ ಬೇಲೂರಿನಲ್ಲಿ ವಾಸವಾಗಿದ್ದ ಸಮಯ ನಾನು ಆಗಿನ್ನು ಏಳನೇ ತರಗತಿ ಮುಗಿಸಿ ಹೈಸ್ಕೂಲ್ ಸೇರಿದ್ದೆ. ಬೇಲೂರಿನ ಕೋಟೆ ರಾಮರಾಯರ ಬೀದಿಯಲ್ಲಿ ನಮ್ಮ ಮನೆ. ನಮ್ಮ ಮನೆಯ ಸಾಲಿನಲ್ಲಿ ಆರು ಮನೆಗಳಿದ್ದು , ಅದೇ ರೀತಿ ನಮ್ಮ ಮನೆಯ ಮುಂದಿನ ರಸ್ತೆಯ ಎದುರು ಬದಿಯಲ್ಲು ಅದೇ ರೀತಿ ಮನೆಗಳಿದ್ದವು. ಹಿಂಬಾಗದಲ್ಲು ಕೆಲವು ಮನೆಗಳಿದ್ದು ಓದು ರೀತಿ ವಠಾರದಂತಹ ವಾತವರಣ.ಅಷ್ಟುಮನೆಗಳಿದ್ದರು ಹಿತ್ತಲು ಗಿಡಮರಗಳು ದಾರಾಳವಾಗಿದ್ದವು . ಈಗಿನಂತೆ ಸಣ್ಣ ಸಣ್ಣ ಸೈಟಿನಲ್ಲಿ ಕಟ್ಟಿದ ಮನೆಗಳಲ್ಲ ಅವು , ವಿಶಾಲವಾದ ಜಾಗಗಳು. ವಿಶಾಲ ಮನಸ್ಸಿನ ಜನಗಳು.



ನಮ್ಮ ಮನೆಯಲ್ಲಿ ನನಗಾಗಿ ಕೆಲವು ಕೆಲಸಗಳು ನಿಗದಿಯಾಗಿದ್ದವು , ಅವುಗಳಲ್ಲಿ ಒಂದು ರಾತ್ರಿ ಮಲಗುವ ಮುಂಚೆ ನೀರಮನೆ ಒಲೆಗೆ ಮರದ ಹೊಟ್ಟು ತುಂಬಿಸಿ ಬೆಂಕಿ ಹಚ್ಚಿಸುವುದು ಬೆಳಗ್ಗೆ ಏಳುವುದರಲ್ಲಿ ಹಂಡೆ ತುಂಬಾ ನೀರು ಕಾದಿರುತ್ತಿತ್ತು. ನಮ್ಮ ಮನೆ ಎತ್ತರದ ಎರಡು ಅಂತಸ್ತಿನ ಹೆಂಚಿನ ಮನೆ , ಮನೆಯ ಒಳಗಡೆ ಮರದ ತೊಲೆ ಹಾಗು ಹಲಗೆ ಗಳಿಂದ ಮೇಲಿನ ಅಂತಸ್ತನ್ನು ನಿರ್ಮಿಸಲಾಗಿತ್ತು. ಮೇಲೆ ಹತ್ತಲು ಮನೆಯ ಮದ್ಯದ ಹಾಲಿನಲ್ಲಿ ಮರದ ಹಲಗೆಗಳಿಂದ ನಿರ್ಮಿಸಿದ ಮೆಟ್ಟಲುಗಳಿದ್ದವು. ಮೇಲೆ ಹತ್ತಿ ಹೋದರೆ ಕೆಳಗಿನ ಹಾಲಿನಷ್ಟೆ ದೊಡ್ಡ ಜಾಗ. ರಾತ್ರಿ ಕತ್ತಲೆಯಲ್ಲಿ ಒಂದೇ ಸಮಸ್ಯೆ , ಮೆಟ್ಟಲು ಹತ್ತಿ ಮೇಲೆ ಹೋದ ಮೇಲೆ ಕತ್ತಲೆಯಲ್ಲಿ ಗೋಡೆಯ ಪಕ್ಕ ಸುಮಾರು ೧೦ ಅಡಿಗಳಷ್ಟು ನಡೆದು ಹೋದ ಮೇಲೆ , ವಿಧ್ಯುತ್ ದೀಪದ ಒತ್ತುಗುಂಡಿ (switch) ಸಿಗುತ್ತಿತ್ತು. ಆ ಹತ್ತು ಅಡಿ ನಡೆಯುವಾಗ "ಭಯದ" ಕಾರಣ ನಾನು ಸಾಮನ್ಯವಾಗಿ ವೇಗವಾಗಿ ಓಡಿ ಹೋಗಿ ದೀಪ ಹಾಕಿ ಬಿಡುತ್ತಿದ್ದೆ. ಆ ಹೆದರಿಕೆಗೆ ಕಾರಣ ಅಲ್ಲಿ ವಾಸವಾಗಿದ್ದ ಒಂದು ನಾಗರಹಾವು. ಸದಾ ಎದುರುಮನೆಯ ಹಿತ್ತಲಿನಲ್ಲಿ , ಅವರ ಮನೆಯಲ್ಲಿ ಕಾಣಿಸುತ್ತಿದ್ದ ಅದನ್ನು "ಗೌರಿಯ ಹಾವು" ಅನ್ನುತ್ತಿದ್ದರು. ಅದು ಯಾರಿಗು ಕಚ್ಚುವುದಿಲ್ಲ ಅಂತ ಎಲ್ಲರ ನಂಬಿಕೆ (?) , ಅದರೆ ಆ ಹಾವಿಗೆ ಈ ವಿಷಯ ತಿಳಿದಿತ್ತೊ ಇಲ್ಲವೋ ನನಗೇನು ಗೊತ್ತು. ನಮ್ಮ ಮನೆಯ ಎದುರಿನ ನಲ್ಲಿಯ ಹನಿ ನೀರಿನ ಜೊತೆ ಆಟವಾಡುತ್ತಿದ್ದ ಗುಬ್ಬಚ್ಚಿಯನ್ನು ಅದು ಹಾರಿ ಹಿಡಿದು ಹೋಗಿದ್ದನು ನಾನು ಒಮ್ಮೆ ಕಣ್ಣಾರೆ ಕಂಡಿದ್ದೆ. ಅಲ್ಲದೆ ಅದು ಒಮ್ಮೆ ನಮ್ಮ ಮನೆಯ ಹೆಂಚಿನ ಸಂದಿನಲ್ಲಿ ಬಿಟ್ಟು ಹೋಗಿದ್ದ ಪೊರೆಯನ್ನು ನೋಡಿದ್ದೆ. ಹೀಗಾಗಿ ರಾತ್ರಿ ಕತ್ತಲೆಯಲ್ಲಿ ನನ್ನ ಹೆದರಿಕೆ ಸಹಜವಾಗಿತ್ತು.


ಆ ದಿನವು ಎಂದಿನಂತೆ ರಾತ್ರಿ ೯ ರ ಸಮಯ ಕೈಯಲ್ಲಿ ಮರ ಹಿಡಿದು ಮೆಟ್ಟಿಲು ಹತ್ತಿದೆ, ಮೇಲೆ ಹೋಗಿ ದೀಪದ ಬಳಿ ಸಾಗಲು ಬೇಗ ಬೇಗ ಕತ್ತಲೆಯಲ್ಲಿ ಹೆಜ್ಜೆ ಹಾಕುತಿದ್ದೆ , ಆಗ ನನ್ನ ಕಾಲನ್ನು ಉದ್ದಕ್ಕೆ ಮೆತ್ತಗಿದ್ದ ಯಾವುದೋ ಜೀವಿಯ ಮೇಲಿಟ್ಟಿದ್ದೆ , ಯಾವುದೇನು ಅದು ಖಂಡೀತ ಹಾವೆ , ಗಾಭರಿಯಾಗಿ ಕಾಲು ಮೇಲೆತ್ತಿದೆ , ನನ್ನ ಕಾಲಿಗೆ ಸುತ್ತಿಕೊಂಡ ಅದು ಬಿಟ್ಟು ತಕ್ಷಣ ನನ್ನ ಎದೆಯ ಮೇಲೆರಗಿತು , ಮುಗಿಯಿತು ನನ್ನ ಕಥೆ , ಹೆದರಿಕೆ ನನ್ನ ಉದ್ದಗಲಕ್ಕು ವ್ಯಾಪಿಸಿತು. ನನಗೆ ಎಷ್ಟು ಸಾದ್ಯವೋ ಅಷ್ಟು ಜೋರಾಗಿ " ಅಮ್ಮ.." ಎಂದು ಕಿರುಚಿದೆ. ಕತ್ತಲೆಯಲ್ಲಿ ಎಲ್ಲವು ಅಯೋಮಯ , ಅಮ್ಮ ಮೇಲೆ ಬರಲಿಲ್ಲ , ಆದರೆ ಊಟಕ್ಕೆ ಕುಳಿತಿದ್ದ ನಮ್ಮ ತಂದೆ ದಡ ದಡ ಎಂದು ಮೆಟ್ಟಿಲು ಹತ್ತಿ ಮೇಲೆ ಬಂದರು. "ಏನಾಯಿತೊ?" ಎಂದು ಕೇಳುತ್ತಿದ್ದಾರೆ. ಉತ್ತರ ಹೇಳಲು ನನಗೆ ಉಸಿರೇ ಇಲ್ಲ . ನಾನು ಎಷ್ಟು ಜೋರಾಗಿ ಕಿರುಚಿದ್ದೆ ಅಂದರೆ ನಮ್ಮ ಮನೆಯಿಂದ ಎರಡು ಮನೆ ದೂರವಿದ್ದ ರಂಗಸ್ವಾಮಿ ಎಂಬುವವರು ರಸ್ತೆಯಲ್ಲಿ ನಮ್ಮ ಮನೆ ಮುಂದೆ ನಿಂತು "ಪಾರ್ಥ ಏನಾಯಿತು?" ಅಂತ ಕೂಗುತ್ತಿದ್ದಾರೆ. ನನ್ನನು ದಾಟಿ ಹೋದ ನಮ್ಮ ತಂದೆ ವಿದ್ಯುತ್ ದೀಪವನ್ನು ಬೆಳಗಿದರು ಏನಾಯಿತೋ ಅನ್ನುತ್ತ ಸುತ್ತಲು ನೋಡಿದರು. ಬೆಳಕು ಬರುತ್ತಲೆ ಚದುರಿದ್ದ ನನ್ನ ದೈರ್ಯ ಸ್ವಲ್ಪ ತುಂಬಿಕೊಂಡಿತು.ಸುತ್ತಲು ಹಾವಿಗಾಗಿ ಹುಡುಕಿದೆ ಎಲ್ಲೂ ಇಲ್ಲ ! ಅರೆ ! ಎನ್ನುತ್ತ ಮೇಲೆ ಹೆಂಚಿನತ್ತ ನೋಡಿದೆ ಅಲ್ಲೂ ಇಲ್ಲ . ಮತ್ತೆಲ್ಲಿ ಹೋಯಿತು? , " ಏತಕ್ಕೆ ಕಿರುಚಿದೆಯೋ" ಈ ಸಾರಿ ನಮ್ಮ ತಂದೆಯವರ ದ್ವನಿ ಗಟ್ಟಿಯಾಗೆ ಇತ್ತು. "ಹಾವು ತುಳಿದುಬಿಟ್ಟೆ ಅದಕ್ಕೆ " ಅಂದೆ. "ಹಾವ??" ಎಂದು ಮೇಲೆ ಕೆಳಗೆ ಸುತ್ತಮುತ್ತ ಎಲ್ಲ ನೋಡಿದರು. ಯಾವ ಹಾವು ಇಲ್ಲ. "ಯಾವ ಮಾಯದಲ್ಲಿ ಮಾಯವಾಯಿತು ಇದು ಎಂದು ನನಗೆ ಆಶ್ಚರ್ಯ" . ಸುತ್ತಲು ನೋಡಿದ ತಂದೆಯವರ ದ್ರುಷ್ಟಿ ಮೇಲಿದ್ದ ಕಿಟಕಿಯತ್ತ ನಿಂತಿತು. ಅಲ್ಲಿ ಕುಳಿತ ಕಳ್ಳ ಬೆಕ್ಕು ನನ್ನತ್ತ ದುರುಗುಟ್ಟಿ ನೋಡುತ್ತಿತ್ತು , ಜೋರಾಗಿ ನಗುತ್ತಿದ್ದರು ತಂದೆ " ನಿನೆಲ್ಲೊ ಬೆಕ್ಕಿನ ಬಾಲ ತುಳಿದಿರಬೇಕು ನನ್ನನ್ನು ಸುಮ್ಮನೆ ಹೆದರಿಸಿಬಿಟ್ಟೆ" ಎಂದರು , ನನಗೇಕೊ ಅನುಮಾನ ಮತ್ತೆ ಮಾಡಿನತ್ತ ನೋಡಿದೆ ಅವರು "ಏನು ಇಲ್ಲ ನೀನು ಕೆಳಗೆ ನಡಿ ನಾನು ದೀಪ ಆರಿಸಿ ಬರುತ್ತೇನೆ " ಅಂದರು. ಬೆಕ್ಕಿಗೆ ೯ ಜೀವವಂತೆ ನನಗೆ ಎಂಟಾದರು ಇದ್ದೀತು ಅದರಲ್ಲಿ ಕನಿಷ್ಟ ನಾಲಕ್ಕು ಹಾರಿ ಹೆಂಚಿನಮೇಲೆ ಕುಳಿತ್ತಿದ್ದವು, ನಾನು ಒಂದೊಂದೆ ಮೆಟ್ಟಲು ಇಳಿಯುತ್ತಿರುವಂತೆ ಅವು ಪುನಃ ನನ್ನನ್ನು ಬಂದು ಸೇರಿದವು. ಕೆಳಗೆ ಇಳಿಯುವಾಗ ಹೆದರಿಕೆ ಹಾಗು ನಾಚಿಕೆ ಬೆರೆತ ಒಂದು ಕಣ್ಣೀರ ಹನಿ ರೆಪ್ಪೆಯ ತುದಿಯಲ್ಲಿ ಕೆಳಗೆ ಬೀಳದೆ ಉಳಿದಿತ್ತು.


-----------------------------------------------------------------------------------------------------------


ಕತ್ತಲಲ್ಲಿ ಹಗ್ಗವು ಹಾವಾಗಿ ಕಾಣುವುದೆ??



-----------------------------------------------------------------------------------------------------------



  <<ಅವಳು ಯಾರು>>                                                         ಮುಂದಿನ ಬಾಗ : ಬಿಸಿಲು ನೆರಳಿನ ಆಟ ‍