೯೦. ಶ್ರೀ ಲಲಿತಾ ಸಹಸ್ರನಾಮ ೩೩೦ರಿಂದ ೩೩೪ನೇ ನಾಮಗಳ ವಿವರಣೆ

೯೦. ಶ್ರೀ ಲಲಿತಾ ಸಹಸ್ರನಾಮ ೩೩೦ರಿಂದ ೩೩೪ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೩೦ - ೩೩೪

Kādambarī-priyā कादम्बरी-प्रिया (330)

೩೩೦. ಕಾದಂಬರೀ ಪ್ರಿಯಾ

            ಕಾದಂಬರ ಎನ್ನುವುದು ಕದಂಬ ಪುಷ್ಪಗಳಿಂದ ಭಟ್ಟಿ ಇಳಿಸಿದ ಮದ್ಯವಾಗಿದೆ. ಯಾವಾಗ ಕದಂಬ ವೃಕ್ಷದ (Nauclea Cadamba) ಹೂವುಗಳು ಸರಿಯಾಗಿ ಅರಳಿ ಅವುಗಳು ಮಕರಂದ ಭರಿತವಾಗಿರುತ್ತವೆಯೋ ಆ ಸಮಯದಲ್ಲಿ ಆ ವೃಕ್ಷದ ಖಾಲಿ ಸ್ಥಳಗಳಲ್ಲಿ ಸಂಗ್ರಹಗೊಳ್ಳುವ ಮಳೆಯ ನೀರನ್ನು ಕಾದಂಬರೀ ಎನ್ನುತ್ತಾರೆ. ಅದು ಒಂದು ವಿಧವಾದ ಮತ್ತೇರಿಸುವ ಪಾನೀಯವಾಗಿದೆ. ತಂತ್ರ ಶಾಸ್ತ್ರಗಳಲ್ಲಿ ಪ್ರಸ್ತಾಪಿಸಲಾಗಿರುವ ಐದು ’ಮ’ಕಾರಗಳಲ್ಲಿ ಇದೂ ಒಂದಾಗಿದೆ. ನವಾವರಣ ಪೂಜೆಯಲ್ಲಿ (ವಿಧಿ ಬದ್ಧ ಶ್ರೀ ಚಕ್ರದ ಪೂಜೆಯಲ್ಲಿ) ಒಂದು ವಿಶಿಷ್ಠವಾದ ಪಾನೀಯವನ್ನು (ವಿಶೇಷವಾದ ಅರ್ಘ್ಯ) ತಯಾರಿಸಿ ದೇವಿಗೆ ಅರ್ಪಿಸಲಾಗುತ್ತದೆ. ಸಾಮಾನ್ಯವಾಗಿ ಈ ವಿಶೇಷ ಅರ್ಘ್ಯವು ಐದು ಮಕಾರಗಳಾದ - ಮದ್ಯ, ಮಾಂಸ, ಮತ್ಸ, ಮೈಥುನ ಮತ್ತು ಮುದ್ರಾ (ವಸ್ತುಗಳನ್ನು ಸೂಚಿಸಲು ಬೆರಳುಗಳನ್ನು ವಿಶಿಷ್ಠ ಭಂಗಿಗಳಲ್ಲಿಡುವುದು). ಈ ವಿಧವಾದ ಪೂಜೆಯನ್ನು ವಾಮ ಹಸ್ತ ಪೂಜೆ (ಎಡಗೈಯ ಪೂಜೆ) ಎಂದು ಕರೆಯಲಾಗುತ್ತದೆ. ಇದರ ಸಾಧನೆಗೆ ಒಬ್ಬ ನುರಿತ ಗುರುವಿನ ಮಾ‌ರ್ಗದರ್ಶನವು ಅವಶ್ಯವಾಗಿ ಬೇಕು. ಸಾಮಾನ್ಯವಾಗಿ ಕೈಗೊಳ್ಳುವ ನಿಯಮಿತವಾದ ಪೂಜೆಗಳಿಗೆ ಇದು ಸಮಂಜಸವಲ್ಲವಾದ್ದರಿಂದ ಇದರ ಬಳಕೆಯನ್ನು ಉತ್ತೇಜಿಸುವುದಿಲ್ಲ. ಪರಮೋನ್ನತಳಾದ ದೇವಿಯು ಈ ವಿಧವಾದ ಮತ್ತೇರುವ ಪಾನೀಯಗಳನ್ನು ಇಷ್ಟಪಡುವುದಕ್ಕೆ ಹೆಸರುವಾಸಿಯಾಗಿದ್ದಾಳೆ. ವಾಸ್ತವವಾಗಿ ಇದು ಮತ್ತೇರಿಸುವ ಪಾನೀಯವನ್ನು ಸೂಚಿಸುವುದಿಲ್ಲ ಆದರೆ ಅದು ಕುಂಡಲಿನೀ ಶಕ್ತಿಯು ಸಹಸ್ರಾರವನ್ನು ಸೇರಿದಾಗ ಬಿಡುಗಡೆಯಾಗುವ ಅಮೃತವನ್ನು (ದೈವೀ ಮಕರಂದವನ್ನು) ಕುರಿತು ಹೇಳುತ್ತದೆ.  ಆದರೆ ಇದು ದೇವಿಯ ಭಕ್ತರು ವ್ಯಕ್ತಮಾಡುವ ಭಕ್ತಿಯ ಪರಿಯಾಗಿದ್ದು, ಆಕೆಯು ಅಂತಹ ಭಕ್ತಿಯಿಂದ ಪುಳಕಿತಳಾಗುತ್ತಾಳೆ (೧೧೮ ನಾಮವಾದ ಭಕ್ತಿಪ್ರಿಯಾವನ್ನು ನೋಡಿ). ಈ ಸಹಸ್ರನಾಮದ ಹಲವಾರು ನಾಮಗಗಳಲ್ಲಿ ದೇವಿಯ ಈ ಮದವೇರಿಸುವ ಪಾನೀಯಗಳನ್ನು ಇಷ್ಟಪಡುತ್ತಾಳೆ ಎಂದು ಹೇಳಲಾಗಿದೆಯಾದರೂ ಅವುಗಳು ಸಂದರ್ಭಾನುಸಾರ ವಿವಿಧ ಅರ್ಥಗಳನ್ನು ಕೊಡುತ್ತದೆನ್ನುವುದನ್ನು ತಿಳಿದುಕೊಳ್ಳುವುದು ಸ್ವಾರಸ್ಯಕರವಾಗಿದೆ.

Varadā वरदा (331)

೩೩೧. ವರದಾ

             ಯಾರು ವರಗಳನ್ನು ಕರುಣಿಸುತ್ತಾರೆಯೋ ಅವರು ವರದಾ. ವಿಷ್ಣು ಸಹಸ್ರನಾಮದ ೩೩೦ನೇ ನಾಮವೂ ಸಹ ವರದಃ ಆಗಿದೆ. ವರಗಳನ್ನು ದಯಪಾಲಿಸುವುದು ಎಲ್ಲಾ ದೇವ-ದೇವಿಯರ ಸಾಮಾನ್ಯವಾದ ಗುಣವಾಗಿದೆ. ಕೆಲವೊಂದು ಸ್ವರೂಪದ ದೇವ-ದೇವಿಯರಲ್ಲಿ ಅವರ ಬಲಗೈಯ ಹಸ್ತವು ವರಗಳನ್ನು ದಯಪಾಲಿಸುವ ಭಂಗಿಯಲ್ಲಿರುತ್ತದೆ. ಆದರೆ ಈ ನಾಮಕ್ಕೆ ವಿಶೇಷವಾದ ಅರ್ಥವಿದ. ದೇವಿಯು ತನ್ನ ಹಸ್ತಗಳಿಂದ ವರಗಳನ್ನು ದಯಪಾಲಿಸುವುದಿಲ್ಲ, ಆದರೆ ಅವಳ ಪವಿತ್ರ ಪಾದಗಳು ವರಗಳನ್ನು ಕೊಡುತ್ತವೆ. ಆಕೆಯು ಕಾಮದಾಯಿನಿ (ನಾಮ ೬೩) ಆಗಿದ್ದಾಳೆ. ಅದಿಲ್ಲದಿದ್ದರೆ ಆ ನಾಮಕ್ಕೆ ಯಾವುದೇ ಅರ್ಥವಿರುವುದಿಲ್ಲ. ವರದಾ ನಾಮದ ಮಹತ್ವವು ೧೧೭ನೇ ನಾಮದಿಂದ (ಭಕ್ತ-ಸೌಭಾಗ್ಯ-ದಾಯಿನೀ) ಮತ್ತಷ್ಟು ಬಲಗೊಳ್ಳುತ್ತದೆ.

         ಸೌಂದರ್ಯ ಲಹರಿಯ ನಾಲ್ಕನೇ ಸ್ತೋತ್ರವು ಈ ನಾಮವನ್ನು ಸಂಪೂರ್ಣವಾಗಿ ವರ್ಣಿಸುತ್ತದೆ. ಅದು ಹೇಳುತ್ತದೆ, "ನೀನು, ಎಲ್ಲಾ ಪ್ರಪಂಚಗಳ ಅಂತಿಮ ಆಶ್ರಯವಾಗಿದ್ದೀ! ನಿನ್ನನ್ನು ಹೊರತು ಪಡಿಸಿ ಎಲ್ಲಾ ದೇವರುಗಳು ತಮ್ಮ ಭಕ್ತರನ್ನು ಕಾಪಾಡಲು (ಅಭಯ ನೀಡಲು) ತಮ್ಮ ಹಸ್ತಗಳ ಭಂಗಿಗಳನ್ನುಪಯೋಗಿಸುತ್ತಾರೆ. ನೀನೊಬ್ಬಳೇ ವರದ ಮತ್ತು ಅಭಯ ಭಂಗಿಗಳನ್ನು ತೋರಿಸುವುದಿಲ್ಲ. ಏಕೆಂದರೆ ನಿನ್ನ ಪಾದಗಳೊಂದೇ ಭಯದಿಂದ ಪೀಡಿತರಾದವರನ್ನು ರಕ್ಷಿಸುವಷ್ಟು ಮತ್ತು ಭಕ್ತರ ಬೇಡಿಕೆಗಳನ್ನು ಪೂರೈಸುವಷ್ಟು ಶಕ್ತಿಯುತವಾಗಿವೆ. ಈ ವಿಧವಾದ ಸುಂದರ ವರ್ಣನೆಗಳು ದೇವಿಯು ಎಷ್ಟು ಸುಲಭವಾಗಿ ವರಗಳನ್ನು ದಯಪಾಲಿಸಬಲ್ಲಳೆನ್ನುವುದನ್ನು ತಿಳಿಸುತ್ತವೆ.

            ದೇವಿಯನ್ನು ಶ್ರದ್ಧೆಯಿಂದ (ಧ್ಯಾನದ ಮೂಲಕ) ನವಮಿಯ ದಿನದಂದು ಪೂಜಿಸಿದರೆ ಆಕೆಯು ಎಲ್ಲಾ ಲೋಕದವರಿಗೂ ವರಗಳನ್ನು ದಯಪಾಲಿಸುತ್ತಾಳೆಂದು ಹೇಳಲಾಗಿದೆ. 

Vāma-nayanā वाम-नयना (332)

೩೩೨. ವಾಮ-ನಯನಾ

            ವಾಮ ನಯನಾ ಎನ್ನುವುದರ ಶಬ್ದಶಃ ಅರ್ಥವು ಸುಂದರವಾದ ಕಣ್ಣುಗಳು ಎಂದಾಗಿದೆ. ವಾಮ ಎಂದರೆ ಕರ್ಮಫಲ ಮತ್ತು ನಯತ್ ಎಂದರೆ ಕರೆದೊಯ್ಯುವುದು. ಆದ್ದರಿಂದ ವಾಮ-ನಯನಾ ಎಂದರೆ, ’ಒಬ್ಬನ ಕರ್ಮಫಲಗಳು ಅವನನ್ನು ಅವಳೆಡೆಗೆ ಕೊಂಡೊಯ್ಯುತ್ತವೆ’, ಅಂದರೆ ಅಂತಿಮ ಮುಕ್ತಿಯನ್ನು ಸೂಚಿಸುತ್ತವೆ.

             ಇದನ್ನೇ ಛಾಂದೋಗ್ಯ ಉಪನಿಷತ್ತು (೪.೧೫.೨) ದೃಢೀಕರಿಸುತ್ತದೆ. ಅದು ಹೇಳುತ್ತದೆ, ’ಸಮ್ಯದ್-ವಾಮ’ (ಎಲ್ಲಾ ವಿಧವಾದ ಒಳ್ಳೆಯ ವಸ್ತುಗಳ ಸಾಂದ್ರತೆ) ಅಂದರೆ ಯಾರು ಆತ್ಮವನ್ನು ತಿಳಿದಿದ್ದಾರೋ (ಅಂದರೆ ಆಕೆಯ ಬ್ರಹ್ಮ ಸ್ವರೂಪವನ್ನು ಪರಮ ಆತ್ಮವೆಂದು ಮನಗಂಡಿದ್ದಾರೋ) ಅವನು ಎಲ್ಲಾ ಒಳ್ಳೆಯ ವಿಷಯಗಳ ಪಾತ್ರೆಯಾಗುತ್ತಾನೆ. ಒಬ್ಬನು ತಮ್ಮ ಕರ್ಮಕ್ಕನುಸಾರವಾಗಿ ಒಳ್ಳೆಯ ವಸ್ತುಗಳನ್ನು ಕೊಂಡೊಯ್ಯುವವನಾಗುತ್ತಾನೆ. ಈ ಉಪನಿಷತ್ತಿನ ಮುಂದಿನ ಶ್ಲೋಕವು, ’ಸರ್ವಾಣಿ ವಾಮಾನಿ ನಯತಿ’ ಅಂದರೆ ಬ್ರಹ್ಮವನ್ನು ಸೂಚಿಸುತ್ತಾ ಅದು ಎಲ್ಲಾ ಒಳ್ಳೆಯ ಮತ್ತು ಶುದ್ಧ ವಸ್ತುಗಳ ಮೂಲವಾಗಿದೆ’ ಎಂದು ಹೇಳುತ್ತದೆ. ವಾಮಾನಿ ಶಬ್ದವನ್ನು ಉಪನಿಷತ್ತಿನಲ್ಲಿ, ಎಲ್ಲಾ ಒಳ್ಳೆಯ ಕರ್ಮಗಳ ಫಲಗಳನ್ನು ಅವರ ಯೋಗ್ಯತೆಗೆ ಅನುಸಾರವಾಗಿ ಕೊಂಡೊಯ್ಯುವವನು ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಅವನು (ಬ್ರಹ್ಮವು) ಎಲ್ಲಾ ಒಳ್ಳೆಯ ವಿಷಯಗಳಿಗೆ ಆಧಾರವಾಗಿದ್ದಾನೆ.

Vāruṇi-mada-vihvalā  वारुणि-मद-विह्वला (333)

೩೩೩. ವಾರುಣೀ-ಮದ-ವಿಹ್ವಲಾ

             ಕರ್ಜೂರದ ಹಣ್ಣಿನ ರಸವನ್ನು ಹೆಪ್ಪಾಗುವುದಕ್ಕೆ ಬಿಟ್ಟ ನಂತರ ದೊರೆಯುವುದನ್ನು ವಾರುಣಿ ಎನ್ನುತ್ತಾರೆ ಮತ್ತು ಅದನ್ನು ಸೇವಿಸಿದಾಗ ಮದವೇರುತ್ತದೆ. ವಾರುಣಿಯನ್ನು ಸೇವಿಸುವುದರ ಮೂಲಕ ದೇವಿಯು ತನ್ನ ಸುತ್ತಲಿನ ಪರಿಸರವನ್ನು ಮರೆತು ತನ್ನ ಅಂತರಂಗದೊಳಗೆ ತಲ್ಲೀನವಾಗುತ್ತಾಳೆ (ಬಹುಶಃ ಇದು ಶಿವನನ್ನು ಸೂಚಿಸಬಹುದು) ಎನ್ನುವುದು ಈ ನಾಮದ ಶಬ್ದಶಃ ಅರ್ಥ. ಇದನ್ನು ೮೭೮ ನಾಮದ ಚರ್ಚೆಯಲ್ಲಿ ವಿಶದವಾಗಿ ಪರಿಶೀಲಿಸೋಣ.

             ವಾರುಣೀ ಎನ್ನುವ ಒಂದು ನಾಡಿಯಿದ್ದು ಅದನ್ನು ಉಸಿರಿನ ಮೂಲಕ ನಿಯಂತ್ರಿಸಬಹುದು. ಈ ನಾಡಿಯು ದೇಹದಲ್ಲಿನ ಕಲ್ಮಷಗಳನ್ನು ಹೊರಹಾಕುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ನಾಡಿಯನ್ನು ಸರಿಯಾದ ಉಸಿರಾಟದ ಕ್ರಮಗಳ ಮೂಲಕ ನಿಯಂತ್ರಣದಲ್ಲಿಟ್ಟುಕೊಂಡರೆ ಒಬ್ಬನಿಗೆ ಆಯಾಸದ ಪರಿವೆಯೇ ಉಂಟಾಗುವುದಿಲ್ಲ. ಋಷಿ ಮುನಿಗಳು ಈ ನಾಡಿಯನ್ನು ತಮ್ಮ ಹಿಡಿತಲ್ಲಿಟ್ಟುಕೊಂಡು ದೀರ್ಘ ಧ್ಯಾನವನ್ನು ಸಂಭಾಳಿಸಿಕೊಂಡು ಹೋಗಲು ಉಪಯೋಗಿಸುತ್ತಾರೆ. ದೇವಿಯು ಈ ನಾಡಿಯ ರೂಪದಲ್ಲಿದ್ದಾಳೆಂದು ಹೇಳಲಾಗುತ್ತದೆ. ಈ ನಾಮವು ಯಾವುದೇ ಮಾನವನ ಬುದ್ಧಿಯ ಪರಿಮಿತಿಯ ಕಲ್ಪನೆಯೊಳಗೆ ಬರಲು ಸಾಧ್ಯವೇ ಇಲ್ಲ ಅದೇನಿದ್ದರೂ ವಾಕ್-ದೇವಿಗಳಿಗಳಂಥಹವರಿಗೇ ಸಾಧ್ಯ.

Viśvādhikā विश्वाधिका (334)

೩೩೪. ವಿಶ್ವಾಧಿಕಾ

             ದೇವಿಯು ಎಲ್ಲಾ ತತ್ವಗಳಿಗೆ ಅತೀತಳಾಗಿದ್ದಾಳೆ. ಶಿವ ತತ್ವದಿಂದ ಮೊದಲುಗೊಂಡು ಪೃಥ್ವೀ ತತ್ವದವರೆಗೆ ಮೂವತ್ತಾರು ಪ್ರಮುಖ ತತ್ವಗಳಿವೆ. ದೇವಿಯು ಈ ಎಲ್ಲಾ ತತ್ವಗಳಲ್ಲಿ ಅಂತರ್ಯಾಮಿಯಾಗಿದ್ದಾಳೆ. ಎಲ್ಲಾ ಜೀವಿಗಳು ಕೇವಲ ಈ ತತ್ವಗಳಿಂದಾಗಿಯೇ ಅಸ್ತಿತ್ವದಲ್ಲಿದ್ದಾರೆ. ಮೂವತ್ತಾರು ತತ್ವಗಳಲ್ಲಿ, ಪಂಚ ಮಹಾಭೂತಗಳು, ಪಂಚ ಗ್ರಹಣೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ತನ್ಮಾತ್ರಗಳು, ನಾಲ್ಕು ಅಂತಃಕರಣಗಳು - ಇವುಗಳನ್ನೊಳಗೊಂಡ ೨೪ ಆತ್ಮ ತತ್ವಗಳು; ೭ ಮಾಯಾ ತತ್ವಗಳು ಮತ್ತು ೫ ಶಿವತತ್ವಗಳಿವೆ. ಹೆಚ್ಚಿನ ವಿವರಗಳಿಗೆ ನಾಮ ೨೨೯ ನೋಡಿ.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 330-334 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Tue, 08/13/2013 - 18:57

ಶ್ರೀಧರರೆ, ೯೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ ಸಾರ ಪರಿಷ್ಕರಣೆಗೆ ಸಿದ್ದ:-)

ಲಲಿತಾ ಸಹಸ್ರನಾಮ ೩೩೦ - ೩೩೪
__________________________________

೩೩೦. ಕಾದಂಬರೀ ಪ್ರಿಯಾ
ಕುಂಡಲಿನೀ ಶಕ್ತಿ ಸಹಸ್ರಾರ ಸ್ರವಿಸುತ ದೈವಿ ಮಕರಂದ
ಮತ್ತಿನಾಮೃತ ಸಂಕೇತ ಮದ್ಯಾರ್ಪಣೆ ಭಕ್ತಿ ಪರಮಾನಂದ 
ಕದಂಬಪುಷ್ಪ ಸುವಾಸಿತ ಕುಹರ ವರ್ಷಾಜಲ ಕಾದಂಬರೀ
ವಾಮಪೂಜ ಮದ್ಯಾರ್ಘ್ಯ ಭಾವಕೆ ದೇವಿ ಮುಗುಳ್ನಕ್ಕಾ ಪರಿ!

೩೩೧. ವರದಾ
ವರವ ಕೊಡದವರಾರು ದೇವ ದೇವಿಗೆ ಸಹಜ ಗುಣ
ವರದ ಹಸ್ತದ ನಿಲುವಲೆ ಬಿತ್ತರ ವರಸಿದ್ದತೆ ಕರುಣ
ಲೀಲಾಜಾಲ ವರದಾಯಿನಿ ಲಲಿತೆ ಕರುಣಿಸೆ ಸದಾ
ಪಾದಪದ್ಮಗಳಲೆ ಭಕ್ತರಾಶೆ ಈಡೇರಿಸಬಲ್ಲ ವರದಾ!

೩೩೨. ವಾಮನಯನಾ
ಕರ್ಮಫಲಿತವೆ ವಾಮ ಕರೆದೊಯ್ಯುತೆ ಪರಂಧಾಮ
ಸಮ್ಮೋಹಕನಯನ ಸೆಳೆದಪಹರಿಸುವಂತೆ ಗಮನ
ಬ್ರಹ್ಮದಪರಮಾತ್ಮಸ್ವರೂಪ ಅರಿತವ ಸದ್ಗುಣಪಾತ್ರೆ
ಮೂಲಾಧಾರ ಬ್ರಹ್ಮ ವಾಮನಯನಾ ಜತೆ ಯಾತ್ರೆ!

೩೩೩. ವಾರುಣೀ-ಮದ-ವಿಹ್ವಲಾ
ಹೆಪ್ಪಾದ ಕರ್ಜೂರದ್ಹಣ್ಣರಸ ವಾರುಣಿ,ಸೇವಿಸೆ ಮದವೇರಿಸುತ
ಅಂತರಂಗದಲಿ ತಲ್ಲೀನವಾಗಿಸುತೆ,ಪರಿಸರವನೆಲ್ಲ ಮರೆಸುತ
ಹಿಡಿತದುಸಿರಾಟ ನಿರಾಯಾಸ, ಕಲ್ಮಷವನಟ್ಟಿ ಧ್ಯಾನೋನ್ಮತ್ತ
ನಾಡಿರೂಪಿಣಿಲಲಿತ ವಾರುಣೀ ಮದ ವಿಹ್ವಲಾ ಕಲ್ಪನಾತೀತ!

೩೩೪. ವಿಶ್ವಾದಿಕಾ
ಶಿವದಿಂದ ಪೃಥ್ವಿ ಮೂವ್ವತ್ತಾರು ತತ್ವದೆ ಜೀವಿಗಳ ಅಸ್ಥಿತ್ವ
ತತ್ವಗಳಂತರ್ಯಾಮಿ ಲಲಿತಾ ಅಸ್ಥಿತ್ವದೆ ಬ್ರಹ್ಮ ಮಹತ್ವ
ಪರಬ್ರಹ್ಮಸ್ವರೂಪಿಣಿ ದೇವಿ ತತ್ವಕೆಲ್ಲ ಅತೀತವಿಹ ಬೆಳಕ
ಆತ್ಮ ಮಾಯಾ ಶಿವ ತತ್ವಗಳೆಲೆಲ್ಲ ನೆಲೆಸಿಹ ವಿಶ್ವಾಧಿಕಾ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
ಈ ಕವನವನ್ನು ಅದೇಕೋ ನೋಡಲಾಗಿರಲಿಲ್ಲ. ನೋಡಿದ ಮೇಲೆ ಎರಡು ವಿಧವಾಗಿ ಸಂತೋಷವಾಯಿತು. ಒಂದು ಅದರ ಉತ್ತಮ ರಚನೆಗೆ ಮತ್ತು ಎರಡನೆಯದು ನನಗೆ ತೋರಿಸಬಹುದಾದಂತಹ ಯಾವುದೇ ತಪ್ಪುಗಳು ಇಲ್ಲದೇ ಇರುವುದಕ್ಕೆ :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಈ ಕಂತನ್ನು ಅಂತಿಮಗೊಳಿಸುವಾಗ ಒಂದು ಸಣ್ಣ ಕಾಗುಣಿತ ದೋಷ - '೩೩೪. ವಿಶ್ವಾದಿಕಾ' ಕಣ್ಣಿಗೆ ಬಿತ್ತು. ಅದನ್ನು 'ವಿಶ್ವಾಧಿಕ' ಎಂದು ಸರಿಪಡಿಸಿ ಅಂತಿಮಗೊಳಿಸಿದ್ದೇನೆ.
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು