ಒಂದು ಸ್ವಗತ:

ಒಂದು ಸ್ವಗತ:

ನಾನು ಸುಮ್ಮನೆ ನಡೆಯುತ್ತಿದ್ದೆ. ಎಲ್ಲಿ ಹೋಗಬೇಕೆಂದು ಗೊತ್ತಿಲ್ಲದ್ದಿದ್ದರೂ ನಡೆಯುತ್ತಿದ್ದೆ. ಸುಮ್-ಸುಮ್ನೆ ನಡಕೊಂಡ್ ಎಲ್ಲೆಲ್ಲಿಗೋ ಹೋಗೋದು ನನಗೆ ಅಭ್ಯಾಸ. ಓಮ್ಮೊಮ್ಮೆ ಎಲ್ಲೆಲ್ಲೋ ಸುತ್ತಾಡಿ ಮತ್ತೆ ನಾನಿದ್ದಲ್ಲಿಗೆ ವಾಪಾಸ್ ಬರ್ತಿದ್ದೆ.
ಹೀಗೆ ಒಮ್ಮೆ ಸುಮ್-ಸುಮ್ನೆ ಹೋಗ್ತಿದ್ದಾಗ, ಒಂದು ದೊಡ್ಡ ಮರ ಕಾಣ್ತು. ಮರದ ಕೆಳಗೆ ಅವ್ಳು ನಿಂತಿದ್ಲು. ಬಹುಶ: ಯಾರಿಗೋ ಕಾಯ್ತಿದ್ಲು ಅನ್ಸುತ್ತೆ. ನನ್ನನ್ನ ಒಮ್ಮೆ ನೋಡೀದ್ರೂ ನೋಡದ-ಹಾಗೆ ಇದ್ಲು. ಸ್ವಲ್ಪ ಬೇಜಾರಾಯ್ತು, ಆದ್ರು ನಡಿಯುತ್ತೆ.(ಜನ ನನ್ನನ್ನ ಒಮ್ಮೊಮ್ಮೆ "ಮೂರು" ಬಿಟ್ಟೋನು ಅಂತಾರೆ). ನಾನು ಸುಮ್ನೆ ಅವಳ್ನೇ ನೋಡ್ತಾ ನಿಂತೆ. ಒಮ್ಮೆಗೆ, ಅವಳ್ನ ಮಾತಾಡ್ಸಾನಾ ಅನ್ನಿಸ್ತು. ಆದರೂ ಅವ್ಳು ಏನೋ ಯೋಚ್ನೆ ಮಾಡ್ತಿದಾಳೆ ಅನ್ಸಿ ಸುಮ್ನಾದೆ. ಒಮ್ಮೆಗೆ ಆಕಡೆಯಿಂದ ಬೀಸಿದ ಗಾಳಿ ಅವ್ಳ ಮೈಮೇಲಿನ ಅತ್ತರನು ನನ್ನ ಮೂಗಿಗೆ ಆನಿಸಿತು. "ವಾಹ್..!!" ಎಂಥಾ ಒಳ್ಳೆ ವಾಸ್ನೆ ಅನಿಸ್ತು. ಆ ಗಾಳಿಗೆ ಅವ್ಳ ಮುಂಗುರುಳು, ಹಿಂದೆ-ಮುಂದೆ ರಿಪಬ್ಲಿಕ್-ಡೇ ನ್ಯಾಗೆ ಹಾರಿಸೋ ಬಾವುಟದ್ ತರ ಹಾರತಿತ್ತು. ಅವಳ ಎದೆಗವಚಿದ ಬುಕ್ಕಿನ ಮೇಲೆ ಏನೋ ಬರೆದಿತ್ತು. ಬಹುಶ: ಅವ್ಳ ಹೆಸರಿರಬೇಕು......
ಅಷ್ಟರಲ್ಲೇ ಒಬ್ಬ ಯಾವ್ನೋ ಬೈಕಲ್ಲಿ ಜೋರಾಗಿ ಬಂದು, ಒಮ್ಮೆಲೆ ಅವ್ಳ ಮುಂದೆ ಬ್ರೇಕ್ ಹಾಕಿ ನಿಲ್ಸಿದ. ಇಬ್ಬರ ಕಣ್ಣುಗಳು ಕಲೆತು, ಮುಖದಲ್ಲಿ ಪರಿಚಯದ ನಗೆ ಹೊಮ್ಮಿತು. ಸ್ವಲ್ಪ ಹುಸಿ-ಕೋಪದಿಂದ ಸುಮ್ನೆ ಸಣ್ಣ-ಸುಳ್ಳೇಟು ಕೊಡುತ್ತಾ ಅವ್ನ ಹಿಂದೆ ಅವನಿಗವಚಿ ಕೂತಳು. ಎಲ್ಲಿತ್ತೋ ಹಾಳು ಸಿಟ್ಟು, ಒಮ್ಮೆಲೆ ನನ್ನ ತಲೆಯೊಳಗೆ ಬಂದು ಕೂಗುತ್ತಾ ಓಡತೊಡಗಿದೆ. ಹೆಣ ಹೊತ್ತು ಹೊರಟಾಗ ಭೋರಿಡುವದ್ದಕ್ಕಿಂತಲೂ, ಇಂದು ಜೋರಾಗಿ ಕೂಗತೊಡಗಿದೆ. ಅಷ್ಟರಲ್ಲೇ ಅವರ ಬೈಕ್ ಸ್ವಲ್ಪ ದೂರ ಹೋಗಿತ್ತು. ಛಲ ಬಿಡದೆ, ಸಾಕಷ್ಟು ಶಕ್ತಿ ಉಪಯೋಗಿಸಿ ಅವ್ರ ಹಿಂದೇನೇ ಓಡತೊಡಗಿದೆ. ಇನ್ನೇನು ಸಿಕ್ಕೇಬಿಟ್ಟರು ಅನ್ನುವಷ್ಟರಲ್ಲೇ, ಅದೆಲ್ಲಿತ್ತೋ ಒಂದು ಮಟ್ಟಸವಾದ ಕಲ್ಲು, ಸುಯ್ಯನೆ ಬಂದು, ನನ್ನ ಹಿಂಗಾಲಿನ ಎಡತೊಡೆಗೆ ಬಡಿಯಿತು. ನರಕ-ನೋವಿನಿಂದ ನಾನು ಚೀರಿದಾಗ, ಅವ್ಳು ನನ್ನನ್ನು ನೋಡಿದಳು. ಆ ನೋಟದಲ್ಲಿ "ನಗುವಿತ್ತಾ...!!!" ಅಂತನಿಸಿ, ಕೊಂಚ ಸಿಟ್ಟು, ಬೇಜಾರು, ನಾಚಿಕೆ ಎಲ್ಲಾ ಮಿಕ್ಸಾಗಿ, ನನಗರಿವಿಲ್ಲದೆ ನನ್ನ ಬಾಯಿಂದ ಸಣ್ಣಗೆ "ಬೊವ್ ಬೊವ್" ಎಂಬೆರಡು ಶಬ್ಢಗಳು ಹೊರಟವು, ನಾ ಮತ್ತೆ ಅವಳು ನಿಂತಿದ್ದ ಮರದಡಿಗೆ ಹೋಗಿ ಮುದುಡಿ ಮಲಗಿದೆ......

Rating
No votes yet

Comments