ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

e-ಕನ್ನಡದ ಹೆಮ್ಮೆ ourkarnataka.com

1999. ಆಗಿನ್ನೂ ಕನ್ನಡ ಅಂತರ್ಜಾಲ ನಿಧಾನಕ್ಕೆ ಕಣ್ಣು ತೆರೆಯುತ್ತಿತ್ತು. ಇದ್ದದ್ದು ಬಹುಶಃ ಬೆರಳೆಣಿಕೆಯ ಕನ್ನಡ ವೆಬ್‌ಸೈಟುಗಳು. ಬರಹ ವಾಸುರವರು ಬರಹ ಕನ್ನಡ ಲಿಪಿ ತಂತ್ರಾಂಶವನ್ನು ಉಚಿತವಾಗಿ ಒದಗಿಸಲು ಆರಂಭಿಸಿದ್ದ ದಿನಗಳು ಅವು. ಅ ದಿನಗಳಲ್ಲಿ ದಕ್ಷಿಣಕನ್ನಡ ಮೂಲದ, ಕೊಂಕಣಿ ಮನೆಮಾತಿನ, ಮೈಸೂರಿನ ಯುವಕನೊಬ್ಬ ಜರ್ಮನಿಗೆ ಪ್ರಾಜೆಕ್ಟ್ ಒಂದಕ್ಕೆ ನಾಲ್ಕಾರು ತಿಂಗಳ ಕಾಲ ಹೋಗುತ್ತಾನೆ. ಅಲ್ಲಿ ಬಯಸಿದ್ದಕ್ಕಿಂತ ಹೆಚ್ಚಿನ ಬಿಡುವು. ಆ ಬಿಡುವಿನಲ್ಲಿ ಕನ್ನಡದ ವೆಬ್‌ಸೈಟು ಒಂದನ್ನು ಆರಂಭಿಸುವ ಯೋಚನೆ ಬರುತ್ತದೆ. ಸರಿ, ಜರ್ಮನಿಯಿಂದಲೆ ಆ ವೆಬ್‌ಸೈಟು ಶುರುವಾಯಿತು. ಮೊದಲಿಗೆ ಕನ್ನಡ ಚಲಚಿತ್ರಗೀತೆಗಳನ್ನು ಒದಗಿಸಲಾಗುತ್ತಿತ್ತು. ಆ ಯುವಕನ ತಮ್ಮ ಮೈಸೂರಿನಲ್ಲಿ ಇನ್ನೂ ಕಾಲೇಜು ಓದುತ್ತಿದ್ದ. ಆತ ಆಗಾಗ ಕನ್ನಡದಲ್ಲಿ ಬರೆಯುತ್ತಿದ್ದ. ಆತನ ಒಂದಷ್ಟು ಲೇಖನಗಳು ಪ್ರಕಟವಾದವು. ಇತರೆ ಸ್ನೇಹಿತರದು ಮತ್ತಷ್ಟು. ವೆಬ್‌ಸೈಟಿಗೆ ಭೇಟಿ ಕೊಟ್ಟ ಓದುಗರು ಬರೆದ ಲೇಖನಗಳು ಮಗದಷ್ಟು. ಆ ಮಧ್ಯೆ ಬರಹ ವಾಸು ಸೈಟನ್ನು ಮತ್ತಷ್ಟು ಸುಧಾರಿಸಲು ಕೆಲವು ಸಲಹೆ ಕೊಟ್ಟರು. ಓದುಗರು ಫಾಂಟ್ ಅನ್ನು ಇನ್ಸ್ಟಾಲ್ ಮಾಡುವ ಅಗತ್ಯವಿಲ್ಲದೆ ಪುಟ ನೋಡಬಹುದಾದ ವ್ಯವಸ್ಥೆ ಇರುವ ಡೈನಾಮಿಕ್ ಫಾಂಟ್ಸ್‌ನ ವ್ಯವಸ್ಥೆ ಮಾಡಿಕೊಟ್ಟರು. ಹೀಗೆ ವೆಬ್‌ಸೈಟು ಬೆಳೆಯುತ್ತಾ ಹೋಯಿತು. ಇವತ್ತು ಯಾವುದಾದರೂ ಒಂದು ಕನ್ನಡ ವೆಬ್‌ಸೈಟಿನಲ್ಲಿ ಎಲ್ಲಾ ತರಹದ ವಿಷಯ ಸಾಮಗ್ರಿ ಇದೆ ಅಂದರೆ, ಅದು ಆ ಯುವಕ ಜರ್ಮನಿಯಲ್ಲಿ ಪ್ರಾರಂಭಿಸಿದ ourkarnataka.com ದಲ್ಲಿ. ಆತ ಶೇಷಗಿರಿ ಶೆಣೈ.

ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (ಕೊನೆಯ ಭಾಗ)

ಈ ಬಾರಿ ಅವಳು ವಾಪಸ್ಸು ಬರುವುದು ಕೊಂಚ ತಡವಾಯಿತು. ಅವಳು ಬಂದಾಗ ಸ್ಟೆಪಾನ್ ಅದೇ ರೀತಿಯಲ್ಲಿ ಕೂತಿದ್ದ, ಕೈಗಳನ್ನು ಮೊಳಕಾಲುಗಳ ಮೇಲೆ ಊರಿಕೊಂಡು. ಅವನ ಚೀಲ ಆಗಲೇ ಬೆನ್ನಿಗೇರಿತ್ತು. ಕೈಯಲ್ಲಿ ದೀಪವೊಂದನ್ನು ಹಿಡಿದುಕೊಂಡು ಪಾಶೆನ್ಕಾ ಬಂದಾಗ ತನ್ನ ದಣಿದ ಸುಂದರವಾದ ಕಣ್ಣುಗಳನ್ನೆತ್ತಿ ಅವಳನ್ನೇ ದಿಟ್ಟಿಸಿ ದೀರ್ಘವಾಗಿ ನಿಟ್ಟುಸಿರುಬಿಟ್ಟ.

ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (೧)

ಎಂಟು
ಪಾಶೆನ್ಕಾ ಈಗ ಪುಟ್ಟ ಪಾಶೆನ್ಕಾ ಆಗಿರಲಿಲ್ಲ. ಈಗವಳು ಪ್ರಾಸ್ಕೋವ್ಯಾ ಕಿಖಾಯ್ಲೋವ್ನಾ, ಸುಕ್ಕುಗಟ್ಟಿದ ಚರ್ಮದ, ಬಡಕಲು ಮೈಯ ಮುದುಕಿ, ನಿಷ್ಪ್ರಯೋಜಕ ಕುಡುಕ ಅಳಿಯ, ಸರ್ಕಾರೀ ಗುಮಾಸ್ತ ಮಾವ್ರಿಕ್ಯೇವ್‌ನ ಅತ್ತೆ. ಅವನು ಕೆಲಸ ಕಳೆದುಕೊಳ್ಳುವ ಮುನ್ನ ಇದ್ದ ಹಳ್ಳಿಯಲ್ಲೇ ಮಗಳು, ರೋಗಿಷ್ಟ ಅಳಿಯ, ಮತ್ತು ಐದು ಮೊಮ್ಮಕ್ಕಳ ಸಂಸಾರ ನಿಭಾಯಿಸಿಕೊಂಡು ಇದ್ದಳು. ಹಳ್ಳಿಯ ವ್ಯಾಪಾರಸ್ಥರ ಹೆಣ್ಣುಮಕ್ಕಳಿಗೆ ಸಂಗೀತಪಾಠ ಹೇಳಿ ಕಾಸು ಸಂಪಾದಿಸುತ್ತಿದ್ದಳು. ಒಬ್ಬರಿಗೆ ಒಂದು ಗಂಟೆಯಹಾಗೆ ದಿನಕ್ಕೆ ನಾಲ್ಕು, ಕೆಲವೊಮ್ಮೆ ಐದು ಪಾಠ ಹೇಳುತ್ತಾ, ಒಂದು ಪಾಠಕ್ಕೆ ಐವತ್ತು ಕೊಪೆಕ್‌ನ ಹಾಗೆ ತಿಂಗಳಿಗೆ ಅರುವತ್ತು ರೂಬಲ್ ಸಂಪಾದಿಸುತ್ತಿದ್ದಳು. ಅಳಿಯನಿಗೆ ಯಾವುದಾದರೂ ಕೆಲಸ ಸಿಗುವವರೆಗೆ ಅವಳ ಈ ಸಂಪಾದನೆಯೇ ಸಂಸಾರಕ್ಕೆ ಆಧಾರ. ತನ್ನ ಅಳಿಯನಿಗೆ ಯಾವುದಾದರೂ ಕೆಲಸ ಕೊಡಿಸಿ ಎಂದು ನಂಟರಿಗೆ, ಪರಿಚಯಸ್ಥರಿಗೆ ಕಾಗದಗಳನ್ನು ಬರೆದಿದ್ದಳು. ಸೆರ್ಗಿಯಸ್‌ನಿಗೂ ಕಾಗದ ಹಾಕಿದ್ದಳು. ಆದರೆ ಅದು ತಲುಪುವಮೊದಲೇ ಅವನು ಮಠ ಬಿಟ್ಟು ಹೊರಟುಬಿಟ್ಟಿದ್ದ.
ಅವತ್ತು ಶನಿವಾರ. ರೇಸಿನ್ ಬ್ರೆಡ್ ಮಾಡಲು ಹಿಟ್ಟು ನಾದುತ್ತಿದ್ದಳು. ಅವರಪ್ಪನ ಎಸ್ಟೇಟಿನಲ್ಲಿದ್ದ ಕೆಲಸದವನೊಬ್ಬ ಬಹಳ ಚೆನ್ನಾಗಿ ರೇಸಿನ್ ಬ್ರೆಡ್ ಮಾಡುತ್ತಿದ್ದನ್ನು ನೋಡಿ ಕಲಿತಿದ್ದಳು. ಮೊಮ್ಮಕ್ಕಳಿಗೆ ಭಾನುವಾರದ ವಿಶೇಷವೆಂದು ಈಗ ಹಿಟ್ಟು ನಾದುತ್ತಿದ್ದಳು.
ಮಗಳು ಮಾಷಾ ಪುಟ್ಟ ಮಗುವನ್ನು ಆಡಿಸಿಕೊಂಡಿದ್ದಳು. ದೊಡ್ಡ ಹುಡುಗ, ಹುಡುಗಿ ಸ್ಕೂಲಿಗೆ ಹೋಗಿದ್ದರು. ರಾತ್ರಿಯೆಲ್ಲ ನಿದ್ರೆಮಾಡಿರದ ಅಳಿಯ ಈಗ ನಿದ್ದೆ ಹೋಗಿದ್ದ. ಪಾಶೆನ್ಕಾ ಕೂಡಾ ರಾತ್ರಿ ನಿದ್ರೆಮಾಡಿರಲಿಲ್ಲ. ಗಂಡನ ಮೇಲೆ ಸಿಟ್ಟು ಮಾಡಿಕೊಂಡಿದ್ದ ಮಗಳಿಗೆ ಸಮಾಧಾನ ಹೇಳುತ್ತಾ ಕೂತಿದ್ದಳು.

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೩)

'ನಾನು ಮನೇಗೆ ಹೋಗಬೇಕು, ಅಪ್ಪನ ಹತ್ತಿರ ಹೋಗಬೇಕು' ಅಂದಳು.
'ಹೆದರಬೇಡ. ನಿನಗೇನು ತೊಂದರೆ?' ಫಾದರ್ ಸೆರ್ಗಿಯಸ್ ಕೇಳಿದ.
'ಎಲ್ಲವೂ ತೊಂದರೆಯೇ, ಮೈಯೆಲ್ಲ ನೋವು' ಅಂದಳು. ಮುಗಳು ನಗು ತಟ್ಟನೆ ಅವಳ ಮುಖವನ್ನು ಬೆಳಗಿತು.
'ವಾಸಿಯಾಗುತ್ತದೆ, ಪ್ರಾರ್ಥನೆಮಾಡು' ಅಂದ.
'ಪ್ರಾರ್ಥನೆ ಮಾಡಿದರೆ ಏನು ಉಪಯೋಗ? ಬೇಕಾದಷ್ಟು ಪ್ರಾರ್ಥನೆ ಮಾಡಿದ್ದೇನೆ. ಏನೂ ಅಗಿಲ್ಲ' ಮುಗುಳು ನಗುತ್ತಾ ಮಾತನಾಡಿದಳು. 'ನನ್ನ ಪರವಾಗಿ ನೀವು ಪ್ರಾರ್ಥನೆಮಾಡಿ. ನನ್ನ ಮೇಲೆ ಕೈ ಇಡಿ. ಕನಸಿನಲ್ಲಿ ನಿಮ್ಮನ್ನು ಕಂಡಿದ್ದೆ' ಅಂದಳು.
'ನಾನು ಹೇಗೆ ಕಂಡಿದ್ದೆ?'
'ನನ್ನ ಎದೆಯಮೇಲೆ ಕೈ ಇಟ್ಟಿದ್ದಿರಿ, ಇಲ್ಲಿ, ಹೀಗೆ' ಅನ್ನುತ್ತಾ ಅವನ ಕೈ ಹಿಡಿದೆಳೆದು ಎದೆಯಮೇಲಿಟ್ಟುಕೊಂಡಳು.

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೨)

[ಏಳನೆಯ ಅಧ್ಯಾಯ ಮುಂದುವರೆದಿದೆ.]
'ಸರಿ, ಸರಿ, ನಾನೇನೂ ಅವರನ್ನು ಓಡಿಸುತ್ತಾ ಇಲ್ಲ, ದೊಡ್ಡವರ ಹತ್ತಿರ ಹೇಗೆ ಇರಬೇಕು ಎಂದು ಹೇಳುತ್ತಿದ್ದೆ. ಈ ಜನಕ್ಕೆ ಕರುಣೆ ಅನ್ನುವುದೇ ಇಲ್ಲ, ಜೀವ ತಿಂದುಬಿಡುತ್ತಾರೆ. ತಮ್ಮ ಕೆಲಸವಾದರೆ ಸಾಕು, ಬೇರೆಯವರ ಗತಿ ಏನು ಅನ್ನುವ ಯೋಚನೆಯೇ ಇಲ್ಲ. ಏಯ್, ನೀನು, ಎಲ್ಲಿಗೆ ಹೋಗುತ್ತಿದ್ದೀ? ಇವತ್ತು ಮುಗೀತು, ನಾಳೆ ಬಾ ಹೋಗು.' ವ್ಯಾಪಾರಿಯಂತೂ ಎಲ್ಲರನ್ನೂ ಕಳಿಸಿಬಿಟ್ಟ.
ಎಲ್ಲವೂ ವ್ಯವಸ್ಥಿತವಾಗಿರಬೇಕು ಅನ್ನುವ ಆಸೆ, ಜನರಮೇಲೆ ದಬ್ಬಾಳಿಕೆ ಮಾಡುವುದರಿಂದ ಬರುವ ಖುಷಿ, ಜೊತೆಗೆ ಫಾದರ್ ಸೆರ್ಗಿಯಸ್‌ನಿಂದ ಅವನಿಗೆ ಆಗಬೇಕಾಗಿದ್ದ ಕೆಲಸ ಇವೆಲ್ಲ ಸೇರಿ ಆ ವ್ಯಾಪಾರಿ ಅಷ್ಟು ಮುತುವರ್ಜಿಯಿಂದ ಜನರನ್ನು ಚದುರಿಸಿದ್ದ. ಅವನಿಗೆ ಒಬ್ಬಳೇ ಮಗಳು. ಹೆಂಡತಿ ಸತ್ತು ಹೋಗಿದ್ದಳು. ಮಗಳಿಗೆ ಖಾಯಿಲೆ. ಮದುವೆಯಾಗಿರಲಿಲ್ಲ. ಅವಳ ಖಾಯಿಲೆ ವಾಸಿಯಾಗಲೆಂದು ಎಂಟು ನೂರು ಮೈಲು ಪ್ರಾಯಾಣಮಾಡಿಕೊಂಡು ಅವಳನ್ನೂ ಕರೆದುಕೊಂಡು ಬಂದಿದ್ದ. ಎರಡು ವರ್ಷಗಳಿಂದ ಏನೇನೋ ಪ್ರಯತ್ನಪಟ್ಟಿದ್ದರೂ ಕಾಯಿಲೆ ಮಾತ್ರ ಹಾಗೇ ಇತ್ತು. ತನ್ನ ಪ್ರಾಂತ್ಯದಲ್ಲಿದ್ದ ಯೂನಿವರ್ಸಿಟಿಯ ಆಸ್ಪತ್ರೆಗೆ ಹೋಗಿದ್ದ. ಉಪಯೋಗವಾಗಿರಲಿಲ್ಲ. ಆಮೇಲೆ ಸಮಾರಾ ಪ್ರಾಂತ್ಯದಲ್ಲಿದ್ದ ರೈತನೊಬ್ಬನ ಹತ್ತಿರ ನಾಟಿ ಔಷಧಿ ಕೊಡಿಸಿದ್ದ. ಕೊಂಚ ಗುಣವಾಯಿತೇನೋ ಅನ್ನಿಸಿತ್ತು. ಮತ್ತೆ ಮಾಸ್ಕೋದಲ್ಲಿದ್ದ ಡಾಕ್ಟರ ಹತ್ತಿರ ಹೋಗಿ ಹೇರಳವಾಗಿ ಹಣ ಖರ್ಚುಮಾಡಿದ್ದ. ಏನೇನೂ ಫಲ ದೊರೆಯಲಿಲ್ಲ. ಫಾದರ್ ಸೆರ್ಗಿಯಸ್ ರೋಗಿಗಳ ಮೇಲೆ ಕೈ ಇಟ್ಟು ಪ್ರಾರ್ಥನೆಮಾಡಿದರೆ ಸಾಕು ಕಾಯಿಲೆ ವಾಸಿಯಾಗುತ್ತದೆ ಎಂದು ಜನ ಹೇಳುವುದು ಕೇಳಿ ಈಗ ಇಲ್ಲಿಗೆ ಬಂದಿದ್ದ. ಜನರನ್ನೆಲ್ಲ ಕಳಿಸಿಬಿಟ್ಟು ಫಾದರ್ ಸೆರ್ಗಿಯಸ್‌ನ ಬಳಿಗೆ ಬಂದು ದೊಪ್ಪನೆ ಅವನ ಕಾಲ ಬಳಿ ಕುಸಿದು ಕುಳಿತು ಜೋರಾಗಿ ದನಿತೆಗೆದು ಮಾತಾಡಿದ:
'ಓ ಪವಿತ್ರಾತ್ಮಾ, ಸಂತ ಮಹಾನುಭಾವಾ! ನನ್ನ ಕರುಳಿನ ಕುಡಿ ರೋಗಪೀಡಿತಳಾಗಿ ವೇದನೆಯಿಂದ ನರಳುತ್ತಿದ್ದಾಳೆ. ನಿಮ್ಮ ಕಾಲು ಹಿಡಿದು ಬೇಡಿಕೊಳ್ಳುವ ಧೈರ್ಯಮಾಡಿದ್ದೇನೆ. ಅವಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಯವಿಟ್ಟು ನನ್ನ ಮಗಳು ಗುಣಮುಖಳಾಗುವಂತೆ ಆಶೀರ್ವದಿಸಿ' ಎಂದು ಬೊಗಸೆಗೈಯಾಗಿ ಬೇಡಿಕೊಂಡ. ಮಗಳ ಖಾಯಿಲೆ ವಾಸಿಯಾಗಬೇಕಾದರೆ ಹೀಗಲ್ಲದೆ ಬೇರೆಯ ರೀತಿಯಲ್ಲಿ ಬೇಡಬಾರದು ಎಂಬ ನಿಯಮವಿದೆಯೋ ಎಂಬಂತೆ ಮಾತನಾಡಿದ ಅವನು. ಅವನು ಎಂಥ ವಿಶ್ವಾಸದಿಂದ ಮಾತನಾಡಿದನೆಂದರೆ ಮಾತನಾಡಬೇಕಾದ್ದೇ ಹೀಗೆ, ಕೋರಿಕೊಳ್ಳಬೇಕಾದ್ದೇ ಹೀಗೆ ಎಂದು ಸ್ವತಃ ಫಾದರ್ ಸೆರ್ಗಿಯಸ್‌ನಿಗೂ ಅನ್ನಿಸಿಬಿಟ್ಟಿತು. 'ಏಳಪ್ಪಾ, ನಿನ್ನ ತಾಪತ್ರಯವೇನು ಹೇಳು' ಎಂದು ಕೇಳಿದ. ಆಗ ಆ ವ್ಯಾಪಾರಿ--ನನಗೆ ಒಬ್ಬಳೇ ಮಗಳು, ಎರಡು ವರ್ಷದ ಹಿಂದೆ ಅವಳ ತಾಯಿ ಇದ್ದಕ್ಕಿದ್ದಹಾಗೆ ತೀರಿ ಹೋದಳು, ಆವಾಗಿನಿಂದ ಸುಮ್ಮನೆ ವರಾತ (ಅದು ಅವನದೇ ಮಾತು) ಮಾಡುತ್ತಿದ್ದಾಳೆ, ಮೈಮೇಲೆ ಪರಿವೆಯೇ ಇರುವುದಿಲ್ಲ, ಬುದ್ಧಿಭ್ರಮಣೆಯಾಗಿರಬೇಕು, ಎಂಟು ನೂರು ಮೈಲು ಪ್ರಯಾಣಮಾಡಿಕೊಂಡು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ, ಇಲ್ಲೇ ವಸತಿ ಗೃಹದಲ್ಲಿದ್ದಾಳೆ, ಫಾದರ್ ಸೆರ್ಗಿಯಸ್ ಹೇಳಿಕಳಿಸುವವರೆಗೂ ಅಲ್ಲೇ ಇರುತ್ತಾಳೆ, ಹಗಲು ಹೊತ್ತಿನಲ್ಲಿ ಹೊರಗೆ ಬರುವುದಿಲ್ಲ, ಅವಳಿಗೆ ಬೆಳಕನ್ನು ಕಂಡರೆ ಭಯ, ಸೂರ್ಯಮುಳುಗಿದಮೇಲೆ ಮಾತ್ರ ಬರುತ್ತಾಳೆ ಅಂದ.

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೧)

ಏಳು
ಕೆಲವು ವಾರಗಳಿಂದ ಫಾದರ್ ಸೆರ್ಗಿಯಸ್‌ನನ್ನು ಒಂದೇ ಯೋಚನೆ ನಿರಂತರವಾಗಿ ಕಾಡುತ್ತಿತ್ತು: ನಾನು ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸರಿಯೇ? ಇದು ನನ್ನ ಇಚ್ಛೆಯಿಂದ ದೊರೆತದ್ದಲ್ಲ, ಬದಲಾಗಿ ಆರ್ಕಿಮಾಂಡ್ರೈಟ್* ಮತ್ತು ಮಠದ ಗುರುಗಳ ಇಚ್ಛೆಯಂತೆ ದೊರೆತಿರುವ ಸ್ಥಾನ ಇದು. ನಾನು ಮಾಡುತ್ತಿರುವುದು ಸರಿಯೇ ಅನ್ನುವ ಯೋಚನೆ ಅದು. ಹದಿನಾಲ್ಕು ವರ್ಷದ ಹುಡುಗನ ಕಾಯಿಲೆ ವಾಸಿಯಾದಾಗಿನಿಂದ ಅವನಿಗೆ ಈ ಸ್ಥಾನಮಾನ ದೊರೆತಿದ್ದವು. ಅಂದಿನಿಂದ ತಿಂಗಳು, ವಾರ, ದಿನ ಕಳೆದಂತೆಲ್ಲಾ ಅಂತರಂಗದ ಬದುಕು ಕ್ಷೀಣಿಸಿ ವ್ಯರ್ಥವಾಗುತ್ತಿದೆ, ಮನಸ್ಸಿನೊಳಗೆಲ್ಲ ಹೊರಗಿನ ಲೋಕವೇ ತುಂಬಿಕೊಳ್ಳುತ್ತಿದೆ ಅನ್ನಿಸುತ್ತಿತ್ತು ಅವನಿಗೆ. ಒಳಗು ಹೊರಗಾಗಿ, ಹೊರಗು ಒಳಗಾದಂತೆ ಅನ್ನಿಸುತ್ತಿತ್ತು.
ಮಠಕ್ಕೆ ಜನರನ್ನು ಆಕರ್ಷಿಸುವ, ಅವರಿಂದ ದಾನ ಧರ್ಮ ಪಡೆಯುವ ಉಪಕರಣವಾಗಿ ಬಳಕೆಯಾಗುತ್ತಿದ್ದೇನೆ ಎಂದು ಅರಿವಾಗುತ್ತಿತ್ತು. ಆದ್ದರಿಂದಲೇ ಅವನಿಂದ ಸಾಧ್ಯವಾದಷ್ಟೂ ಲಾಭ ಪಡೆಯುವುದಕ್ಕೆ ಅನುಕೂಲವಾಗುವಂತೆ ಮಠದ ಒಡೆಯರು ಅವನ ಬದುಕನ್ನು ತಿದ್ದಿಬಿಟ್ಟಿದ್ದರು. ಅಂದರೆ, ಅವನು ಒಂದಿಷ್ಟೂ ದೇಹಶ್ರಮದ ಕೆಲಸ ಮಾಡಬೇಕಾಗಿಯೇ ಇರಲಿಲ್ಲ. ಅವನಿಗೆ ಬೇಕಾದುದೆಲ್ಲ ದೊರೆಯುವಂತೆ ವ್ಯವಸ್ಥೆಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅವನ ದರ್ಶನ ಕೋರಿ ಬಂದವರಿಗೆಲ್ಲ ದರ್ಶನನೀಡಿ ಆಶೀರ್ವಾದ ಮಾಡಬೇಕು ಅನ್ನುವುದಷ್ಟೇ ಅವರ ಬಯಕೆ. ಅವನಿಗೆ ಅನುಕೂಲವಾಗಲೆಂದು ದರ್ಶನಕ್ಕೆ ವಾರದ ಕೆಲವು ದಿನ ನಿಗದಿ ಮಾಡಿದ್ದರು. ಗಂಡಸು ಭಕ್ತರು ಕಾಯುವುದಕ್ಕೆ ಒಂದು ಕೋಣೆ, ಹೆಣ್ಣು ಭಕ್ತಾದಿಗಳ ಗುಂಪು ಒಟ್ಟಾಗಿ ಮೈಮೇಲೆ ಮುಗಿಬೀಳುವುದನ್ನು ತಪ್ಪಿಸಲು ಸರಳುಗಳ ಕಟಕಟೆ, ಅದರ ಹಿಂದೆ ನಿಂತು ಫಾದರ್ ಸೆರ್ಗಿಯಸ್ ಆಶೀರ್ವಾದಮಾಡುವ ವ್ಯವಸ್ಥೆ ಎಲ್ಲವೂ ರೂಪುಗೊಂಡವು. ಜನಕ್ಕೆ ತಮ್ಮನ್ನು ಕಾಣುವ ಅಗತ್ಯವಿದೆ, ಜನರ ಬಗ್ಗೆ ಪ್ರೀತಿ ಇರಬೇಕು ಎಂದು ಸ್ವತಃ ಏಸುವೇ ವಿಧಿಸಿರುವಾಗ ತಾವು ಜನಕ್ಕೆ ದರ್ಶನ ನೀಡದೆ ಹೋದರೆ ಅದು ಕ್ರೌರ್ಯವಾಗುತ್ತದೆ ಎಂಬ ಮಠದ ವಾದಕ್ಕೆ ಶರಣಾಗದೆ ಬೇರೆ ದಾರಿಯಿರಲಿಲ್ಲ. ಈ ಬಗೆಯ ಬದುಕಿಗೆ ಒಗ್ಗಿಕೊಂಡಷ್ಟೂ ತನ್ನೊಳಗಿನ ಅಂತರಂಗವನ್ನೆಲ್ಲ ಬಹಿರಂಗದ ಲೋಕವೇ ವ್ಯಾಪಿಸಿಕೊಳ್ಳುತ್ತಿದೆ, ಒಳಗಿನ ಜೀವ ಜಲ ಬತ್ತಿಹೋಗುತ್ತಿದೆ, ಮನುಷ್ಯರಿಗಾಗಿ ಬದುಕುತ್ತಿದ್ದೇನೆಯೇ ಹೊರತು ದೇವರಿಗಾಗಿ ಅಲ್ಲ ಅನ್ನುವ ಭಾವ ಮೂಡುತ್ತಿತ್ತು.