ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಒಂಭತ್ತನೆಯ ಕಂತು
ಭಜನೆ ಮಾಡುತ್ತಿದ್ದ ಕಾಲದಲ್ಲಿ ಇತರರಲ್ಲಿ ಕಾಣುವ ಶಾಂತಿ ಸಮಾಧಾನಗಳು ನನ್ನಲ್ಲಿ ಮೂಡಲಿಲ್ಲ. ಹಾಗೆ ನೋಡಿದರೆ ಬೇಸರವೇ ಆಗತೊಡಗಿತು. ಭಜನೆ ಮಾಡುವುದರಿಂದಲೂ ತರಕಾರಿ ತಿನ್ನುವುದರಿಂದಲೂ ಸಾಧಿಸಬಹುದಾದ ವಿಶೇಷವೇನಿಲ್ಲ ಅನ್ನಿಸತೊಡಗಿತು. ನನ್ನ ಅದೃಷ್ಟಕ್ಕೆ ಸುವಾರು ಇದೇ ಸಮಯಕ್ಕೆ ಯಾರೋ ನನ್ನನ್ನು ಒಬ್ಬ ಸಂತಳ ಬಳಿ ಕರೆದೊಯ್ದರು. ಅವಳು ನದಿಯ ಹತ್ತಿರದಲ್ಲಿದ್ದ ಒಂದು ಹಳೆಯ, ಜನತುಂಬಿದ ಮನೆಯ ಮೇಲ್ಭಾಗದಲ್ಲಿದ್ದಳು. ಜನ ಅವಳನ್ನು ಸಂತಳಂತೆ ಕಾಣುತ್ತಿದ್ದರು. ಆದರೆ ನಿಜವಾಗಿ ಸಂತಳಂತಿರಲಿಲ್ಲ. ಮಾಳಿಗೆಯ ಮೇಲಿದ್ದ ತನ್ನ ಕೋಣೆಯೊಳಗಿದ್ದುಕೊಂಡು ತನ್ನನ್ನು ಕಾಣಲು ಬರುವವರೊಂದಿಗೆ ಮಾತಾಡುತ್ತಿದ್ದಳು. ಅಷ್ಟೇ! ಅವಳಿಗೆ ಕಥೆ ಹೇಳುವುದೆಂದರೆ ಇಷ್ಟ ಅವಳು ಹೇಳುತ್ತಿದ್ದುದು ಅವರೆಲ್ಲರಿಗೆ ಜೀವನದುದ್ದಕ್ಕೂ ಪರಿಚಯವಿದ್ದ ಕೃಷ್ಣ, ಪಾಂಡವರು, ರಾಮ ಸೀತೆಯರ ಅದೇ ಹಳೆಯ ಪುರಾಣದ ಕತೆಗಳಾದರೂ ಕೇಳುವವರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದಳು. ಆದರೆ ಅವುಗಳನ್ನು ಹೇಳುವಾಗ ಅತಿ ಉದ್ವೇಗದಲ್ಲಿರುತ್ತಿದ್ದಳು. ಅವು ಎಂದೋ ಲಕ್ಷಾಂತರ ವರ್ಷಗಳ ಹಿಂದೆ ನಡೆದ ಕತೆಗಳಲ್ಲ, ಇದೇ ಈಗ ನಡೆಯುತ್ತಿರುವ ನಿಜವಾದ ಸಂಗತಿ ಎನ್ನುವ ಧರ್ತಿಯಲ್ಲಿ. ಒಮ್ಮೆ ಅವಳು ಕೃಷ್ಣನ ಅಮ್ಮ ಅವನು ಬೆಣ್ಣೆ ಕದ್ದು ತಿನ್ನುತ್ತಿದ್ದಾನೋ ಇಲ್ಲವೋ ಎಂದು ತಿಳಿಯಲು ಅವನ ಬಾಯಿ ತೆರೆಸಿದ ಕತೆ ಹೇಳುತ್ತಿದ್ದಳು.
"ಅವನ ಬಾಯಲ್ಲಿ ಅವಳು ಕಂಡದ್ದೇನು?" ಉದ್ವೇಗದಿಂದ ಅರಚುತ್ತಾ ಅವಳೇ ಉತ್ತರಿಸಿದಳು. "ಲೋಕಗಳು! ಬರೀ ಈ ಲೋಕವಲ್ಲ!! ಪರ್ವತಗಳು, ನದಿಗಳು, ಸಮುದ್ರಸಹಿತವಾದ ಒಂದು ಪ್ರಪಂಚವಲ್ಲ!! ಉಹೂಂ. ಮಗುವಿನ ಬಾಯಲ್ಲಿ ಗಿರಿಗಿರಿ ಸುತ್ತುತ್ತಿದ್ದ, ಎಂದೂ ಕೊನೆಯಾಗದ ಮಹಾಸುತ್ತಾಟ, ಚಂದ್ರನ ಮೇಲೆ ಚಂದ್ರ!! ಸೂರ್ಯನ ಮೇಲೆ ಸೂರ್ಯ!! ಅವಳು ಚಪ್ಪ್ಪಾಳೆ ತಟ್ಟಿ ನಕ್ಕು ನಕ್ಕು ದಣಿದಳು. ನಂತರ ತೆಳು ಧ್ವನಿಯಿಂದ "ದೇವರು ಅದೆಂಥ ಮಹಾಮಹಿಮ! ಅವನ ಪ್ರೀತಿಪಾತ್ರಳಾದ ತಾನು ಅದೆಂಥ ಪುಣ್ಯವಂತೆ! ಎಂಬ ಭಾವದ ಯಾವುದೋ ಕೀರ್ತನೆ ಹಾಡತೊಡಗಿದಳು. ಎಲ್ಲ ಜನರೆದುರು ಸಂತೋಷದಿಂದ
ಕುಣಿಯತೊಡಗಿದಳು. ಅವಳೊಬ್ಬಳು ಮುದುಕಿ. ಕುರೂಪಿ. ಮುಖ ಸುಕ್ಕುಗಟ್ಟಿತ್ತು. ಹಲ್ಲು ಉದುರಿ ಬಾಯಿ ಬೋಳಾಗಿತ್ತು. ಗಲ್ಲದ ಮೇಲೆ ಕಾಳಿನಂಥ ಸಣ್ಣದೊಂದು ಬೆಳವಣಿಗೆ ಇತ್ತು. ಆದರೆ ಅವಳ ವರ್ತನೆ ಹೇಗಿತ್ತೆಂದರೆ- ಪ್ರಪಂಚದ ಯಾರಿಗೂ ಇಲ್ಲದ ಮೋಹಕತೆ, ಸೌಂದರ್ಯಗಳು ತನಗೊಬ್ಬಳಿಗೇ ದಕ್ಕಿದಂತೆ; ಲಕ್ಷ ಬಾರಿ ಪ್ರೇಮಿಸಿದವಳಂತೆ, ಪ್ರೇಮಾನುಭವ ಪಡೆದವಳಂತೆ! ಅವಳಲ್ಲಿದ್ದ ಆಕರ್ಷಣೆ- ಅದು ಏನೇ ಆಗಿರಲಿ- ಅದು ಪಡೆಯಲು ನಿಜಕ್ಕೂ ಲಾಯಕ್ಕಾಗಿದೆ ಅದಕ್ಕಾಗಿ ಪ್ರಯತ್ನಿಸುವುದು ಒಳ್ಳೆಯದು.