ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಕೋಲಾರದ ಸುನೀಲ್...
- ನಾವು ನೀರಿನಂತೆ ಓಡುತ್ತೇವೆ. ನೀರಿಗಾಗಿ ಓಡುತ್ತೇವೆ.
- ನಮ್ಮ ಭೂಮಿಯ ಮೇಲಿನ ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಸಮಸ್ಯೆಯ ತುರ್ತು-ಸಂದೇಶವನ್ನು ನಾವು ಸಾಗುತ್ತಿರುವ ಪ್ರತಿ ಊರಿನ ಪ್ರತಿಯೊಬ್ಬರಿಗೂ ತಲುಪಿಸಲು ನಾವು ಓಡುತ್ತಿದ್ದೇವೆ.
- ಶುದ್ಧ ಕುಡಿಯುವ ನೀರು ಇಲ್ಲದೆ ಪ್ರತಿದಿನವೂ ಸಾಯುತ್ತಿರುವ ಮಕ್ಕಳ, ಅಪ್ಪಅಮ್ಮಂದಿರ, 6000 ಮನುಷ್ಯರ ನೆನಪಿಗಾಗಿ ನಾವು ಓಡುತ್ತಿದ್ದೇವೆ.
- ನಾವು ಓಡುತ್ತಿರುವುದೇಕೆಂದರೆ, ನಮ್ಮ ಉಳಿವಿಗೆ ಅವಶ್ಯವಾದ ನೀರು, ಮತ್ತು ಸಮಯ, ನಮ್ಮ ಕೈಮೀರಿ ಹೋಗುತ್ತಿದೆ.
- ಸಂಕಷ್ಟದೊಂದಿಗೆ ಆರಂಭವಾಗಿ ಭರವಸೆಯೊಂದಿಗೆ ಮುಗಿಯುವ ಕತೆ ಹೇಳಲು ನಾವು ಓಡುತ್ತಿದ್ದೇವೆ.
- ಈ ಕತೆಯಲ್ಲಿ ನಿಮ್ಮನ್ನೂ ಸೇರಿಸಿಕೊಳ್ಳಲು ಓಡುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ನೀವೇ ಆಗಿದ್ದೀರಿ. ಬದ್ಧತೆ ಒಂದೆ ನಮಗಿರುವ ಅಡ್ಡಿ.
- ಇಪ್ಪತ್ತು ವರ್ಷಗಳ ನಂತರ ವಿಶ್ವದ ಬೇರೆಬೇರೆ ಕಡೆಯ 20 ಕೋಟಿ ಜನರಿಗೆ ನೀರು ತರಲು, ಅಂದರೆ ಜೀವ ತರಲು, ನಾವು ಒಟ್ಟಾಗಿ ಕೈಜೋಡಿಸಿದ್ದೇವೆ; ಎಂಬಂತೆ ಮುಗಿಯುವ ಕತೆಯನ್ನು ಹೇಳಲು ನಾವು ಓಡುತ್ತೇವೆ.
- ನಾವು ನಮ್ಮೊಂದಿಗೆ ಒಯ್ಯುವ ಬಟಾನ್ ಮೇಲೆ ಬರೆದಿರುವ ಧನ್ಯವಾದಪೂರ್ವಕ ಪ್ರಾರ್ಥನೆ ಹೀಗಿದೆ: "ನೀರೆ ಜೀವ;" ಅದಕ್ಕಾಗಿ ನಾವು ಓಡುತ್ತಿದ್ದೇವೆ.
- "ನಮ್ಮ ಬಾಯಾರಿಕೆಯನ್ನು ತಣಿಸುವ ಮತ್ತು ನಮಗೆ ಶಕ್ತಿ ನೀಡುವ ವಿಶ್ವದ ಎಲ್ಲಾ ನೀರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ. ಮಳೆ ಮತ್ತು ಜಲಪಾತಗಳು, ಇಬ್ಬನಿ ಮತ್ತು ತೊರೆಗಳು, ನದಿಗಳು ಮತ್ತು ಸಾಗರಗಳು; ಹೀಗೆ ಅನೇಕ ರೂಪಗಳಲ್ಲಿರುವ ನೀರಿನ ಬಲ ನಮಗೆ ಗೊತ್ತು. ನೀರಿನ ಚೈತನ್ಯಕ್ಕೆ ಒಮ್ಮನಸ್ಸಿನಿಂದ ನಮ್ಮ ಶುಭಕಾಕಾಮನೆಗಳನ್ನು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇವೆ.
- ಈಗ ನಮ್ಮ ಮನಸ್ಸುಗಳು ಒಂದಾಗಿದೆ."
ರಾತ್ರಿ ಹಗಲೆನ್ನದೆ, ಪ್ರತಿ ಒಂದೆರಡು ಗಂಟೆಗಳಿಗೆ ತಮ್ಮ ಕೈಯಲ್ಲಿಯ ಬಟಾನ್ (ರಿಲೇ ಓಟದಲ್ಲಿ ಕೊಡುವ ದಂಡ) ಅನ್ನು ಇನ್ನೊಬ್ಬರಿಗೆ ದಾಟಿಸುತ್ತ, ಜನರ ಸಮ್ಮುಖದಲ್ಲಿ ಈ ಮೇಲಿನ ಸಂದೇಶವನ್ನು ಗಟ್ಟಿಯಾಗಿ ಹೇಳಿ, ಇಪ್ಪತ್ತು ಜನ ಓಟಗಾರರು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸರದಿಯ ಪ್ರಕಾರ ಓಡುತ್ತಿದ್ದಾರೆ. ಈ ಇಪ್ಪತ್ತು ಜನ ಓಟಗಾರರಲ್ಲಿ 23 ವರ್ಷದ ಅಮೇರಿಕನ್ ಹುಡುಗಿ ಎಲ್ಲರಿಗಿಂತ ಚಿಕ್ಕವಳು. ಆಕೆಯ ಸದ್ಯದ ಕರ್ಮಭೂಮಿ ಶ್ರೀಲಂಕ. 60 ವರ್ಷದ ಅಮೇರಿಕನ್ ಒಬ್ಬರು ತಂಡದಲ್ಲಿನ ಹಿರಿಯ ಓಟಗಾರ. 57 ವರ್ಷದ ಇಬ್ಬರು ಓಡುತ್ತಿದ್ದಾರೆ: ಒಬ್ಬರು ಅಮೇರಿಕನ್ ಮಹಿಳೆ ಮತ್ತು ಇನ್ನೊಬ್ಬರು ಹಾಲೆಂಡಿನ ವ್ಯಕ್ತಿ. ಮಿಕ್ಕವರೆಲ್ಲ 30 ರ ಅಸುಪಾಸಿನವರು.