ಇ-ಲೋಕ-10(16/2/2007)
ದನ,ಕುರಿ ಸಾಕುವ ಔಷಧ ಕಂಪೆನಿಗಳು
ಅಮೆರಿಕಾದ ಔಷಧಿ ಕಂಪೆನಿಗಳೀಗ ಆಡು,ಕುರಿ ಮೊಲ ಸಾಕುತ್ತಿವೆ. ಔಷಧಿಗಳನ್ನು ಪ್ರಯೋಗಿಸಿ ನೋಡಲು ಪ್ರಯೋಗ ಪಶುವಾಗಿ ಇವನ್ನು ಬಳಸಲಾಗುತ್ತದೆ ಎಂದು ನೀವು ತಿಳಿದರೆ ಅದು ಪೂರ್ತಿ ಸರಿಯಲ್ಲ. ಈ ಪ್ರಾಣಿಗಳು ಭ್ರೂಣಾವಸ್ಥೆಯಲ್ಲಿದ್ದಾಗ ಅವುಗಳ ಜಿನೋಮ್ ಬದಲಿಸಿ,ಅವುಗಳು ಉತ್ಪಾದಿಸುವ ಹಾಲು ವಿಶೇಷ ಪ್ರೊಟೀನ್ ಉತ್ಪಾದಿಸುವಂತೆ ಮಾಡಲಾಗಿರುತ್ತದೆ. ಹಾಗಾಗಿ ಇವುಗಳ ಹಾಲಿನಿಂದ ಆ ಪ್ರೊಟೀನುಗಳನ್ನು ಪ್ರತ್ಯೇಕಿಸಿ, ಔಷಧ ತಯಾರಿಸಲು ಬರುತ್ತದೆ. ಹೃದಯದ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಆಂಟಿ ಥ್ರೋಂಬಿನ್ ಎನ್ನುವ ಪ್ರೊಟೀನ್, ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಇದರ ಕೊರತೆ ತೀವ್ರ ರಕ್ತಸ್ರಾವವಾದವರಿಗೆ ಅಥವಾ ಜನ್ಮತ: ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಇತರರ ರಕ್ತದಿಂದ ಪ್ರತ್ಯೇಕಿಸಿದ ಆಂಟಿಥ್ರೋಂಬಿನ್ ನೀಡುವುದೇ ಈಗಿದ್ದ ಪರಿಹಾರ. ಆದರೆ ಹೊಸ ಜೀನ್ ಪರಿವರ್ತಿತ ಪ್ರಾಣಿಗಳ ತಾಂತ್ರಿಕತೆಯ ಮೂಲಕ ಪ್ರಾಣಿಯ ಹಾಲಿನಲ್ಲಿ ಈ ಪ್ರೊಟೀನ್ ಇರುವಂತೆ ಮಾಡಬಹುದು. ಹಾಲಿನಿಂದ ಪ್ರತ್ಯೇಕಿಸಿದ ಪ್ರೊಟೀನ್‌ನ್ನು ಸಮಸ್ಯೆಯಿದ್ದವರಿಗೆ ಕೊಟ್ಟು ಹೃದಯದ ಸಮಸ್ಯೆಗೆ ಪರಿಹಾರ ನೀಡಬಹುದು. ಐವತ್ತು ಸಾವಿರ ಜನರ ರಕ್ತದಾನದ ಮೂಲಕ ಪಡೆಯಬಹುದಾದ ಪ್ರೊಟೀನ್‌ನ ಅಂಶವನ್ನು ಒಂದು ವಿಶೇಷ ತಳಿ ಆಡಿನಿಂದ ಒಂದು ವರ್ಷದಲ್ಲಿ ಪಡೆಯಬಹುದು.
ಹೀಮೋಫಿಲಿಯಾ,ಕ್ಯಾನ್ಸರ್ ಚಿಕಿತ್ಸೆಯಲ್ಲೂ ಹೊಸ ಪದ್ಧತಿ ಪರಿಣಾಮಕಾರಿ. ಮಸಾಚುಸೆಟ್ಸ್‌ನ ಜಿಟಿಸಿ ಬಯೋ ತೆರಪಟಿಕ್ಸ್,ಸ್ಕಾಟ್ಲೆಂಡಿನ ರೋಸ್ಲಿನ್ ಇನ್‌ಸ್ಟಿಟ್ಯೂಟ್,ಕ್ಯಾಲಿಫೊರ್ನಿಯಾದ ಒರಿಜನ್ ತೆರಪೆಟಿಕ್ಸ್ ಮುಂತಾದ ಕಂಪೆನಿಗಳು ಪ್ರಾಣಿಗಳ ಮೂಲಕ ಔಷಧಿ ಪಡೆಯುತ್ತಿವೆ. ಹಂದಿ,ದನ,ಕೋಳಿ, ಮೊಲ,ಕುರಿ ಇವುಗಳೇ ಅಲ್ಲದೆ ಇಲಿಯೂ ಔಷಧಿ ಉತ್ಪಾದಿಸಿಕೊಡಲು ಬಳಕೆಯಾಗುತ್ತವೆ.
- Read more about ಇ-ಲೋಕ-10(16/2/2007)
- Log in or register to post comments